ಶುಕ್ರವಾರ, ನವೆಂಬರ್ 15, 2019
22 °C

ವರ್ಣತಂತುಗಳ ಕಿತಾಪತಿ

ಡಾ. ಆಶಾ ಬೆನಕಪ್ಪ
Published:
Updated:
ವರ್ಣತಂತುಗಳ ಕಿತಾಪತಿ

ಮರಣ ಹೊಂದಿದ ನಮ್ಮ ಸ್ನಾತಕೋತ್ತರ ವಿದ್ಯಾರ್ಥಿನಿಯ ಅಗಲಿಕೆಯಿಂದ ನಿಧಾನವಾಗಿ ಸುಧಾರಿಸಿಕೊಳ್ಳತೊಡಗಿದ್ದೇವೆ ಮತ್ತು ಆ ಅವಳಿಗಳಲ್ಲಿ ಬದುಕಿರುವ `ಡಾ. ಬಿ' ಅವರಿಗಾಗಿ ಕೆಲವು ದಿನಗಳನ್ನು ಕೊಳ್ಳುವ ಸಲುವಾಗಿ ನಿಧಿ ಸಂಗ್ರಹಿಸಲು ನಮ್ಮ ಪ್ರಯತ್ನದ ಹೆಜ್ಜೆಗಳನ್ನು ಮುಂದೆ ಇಡುತ್ತಿದ್ದೇವೆ.

ಬದುಕು ಮುಂದೆ ಸಾಗಲೇಬೇಕು...



ಶಬ್ದತಜ್ಞ ಡಾ. ಪಿ ತಮ್ಮ ಗರ್ಭಿಣಿ ಪತ್ನಿಯನ್ನು ಸ್ವತಃ ಸ್ಕ್ಯಾನ್‌ಗೆ ಒಳಪಡಿಸಲು ನಿರ್ಧರಿಸಿದರು. ದುರದೃಷ್ಟವಶಾತ್, ಗರ್ಭಾವಸ್ಥೆಯ ಮೊದಲ ಮೂರುತಿಂಗಳಲ್ಲಿ ಅತ್ಯಗತ್ಯವಾಗಿದ್ದ ಅಲ್ಟ್ರಾಸೌಂಡ್ ಉಪಕರಣ `ನ್ಯೂಕಲ್ ಟ್ರಾನ್ಸ್‌ಲ್ಯುಸೆನ್ಸಿ' (ಭ್ರೂಣದ ಕತ್ತಿನ ಭಾಗದ ಸ್ಕ್ಯಾನ್) ಅನ್ನು ತೆಗೆದುಕೊಳ್ಳುವುದನ್ನು ಅವರು ಮರೆತಿದ್ದರು. ಆ ಪ್ರಮಾದಕ್ಕೆ ಡೌನ್ ಸಿಂಡ್ರೋಮ್‌ಗೆ ತುತ್ತಾದ, ಅವರ 26 ವರ್ಷದ ಮಾನಸಿಕ ಅಪ್ರಬುದ್ಧ ಮಗಳು ಸಾಕ್ಷಿ.



ಆ ದಿನಗಳಲ್ಲಿ ನನಗೆ ಲಾಲ್‌ಬಾಗ್‌ನಲ್ಲಿ ವಿಹರಿಸುವ ಅಭ್ಯಾಸ ಇತ್ತು. ಒಂದು ದಿನ (22 ವರ್ಷದ ಹಿಂದೆ) ನನ್ನ ನಡಿಗೆಯ ಸಹವರ್ತಿ ಸುಶೀಲಾ ಮಲ್ಲೇಶ್ ಉದರ ಊತದಿಂದ ಬಳಲುತ್ತಿದ್ದ ತಮ್ಮ ಸಂಬಂಧಿಕರ ನವಜಾತ ಮಗಳನ್ನು ಒಮ್ಮೆ ನೋಡುವಂತೆ ಕೋರಿದರು. ಆ ಮಗುವನ್ನು ನೋಡಿದ ಕೂಡಲೇ ಅದರ ರೋಗನಿರ್ಣಯ ಮಾಡಿದೆ.



ಅದು ಡೌನ್ ಸಿಂಡ್ರೋಮ್ ಪ್ರಕರಣ. ಸಣ್ಣ ಕರುಳಿನ ದ್ವಾರಬಂಧವಾಗಿತ್ತು (ಹೊಟ್ಟೆಯಿಂದ ಕರುಳಿನ ಸಂಪರ್ಕ ಮುಚ್ಚಿಹೋಗಿತ್ತು). ಆಕೆಗೆ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಕೇವಲ ಎರಡು ದಿನದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲು ನನ್ನ ಮನಸ್ಸು ಒಪ್ಪದ ಕಾರಣ, ನನ್ನ ಬದಲು ಒಂದು ಒಳ್ಳೆಯ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಿದರು.



ಬದುಕುಳಿದ ಆಕೆಗೆ ಈಗ 22 ವರ್ಷ. ಸಾಕಷ್ಟು ಸ್ಥಿತಿವಂತರಾಗಿದ್ದ ಆಕೆಯ ಪೋಷಕರು 10ನೇ ತರಗತಿವರೆಗೂ ಸೋಫಿಯಾ ಅಪಾರ್ಚುಬಿಟಿ ಶಾಲೆಯಲ್ಲಿ ಓದಿಸಿದರು. ಮಾನಸಿಕ ನ್ಯೂನತೆಯುಳ್ಳವರಾದ ಈ ಮಕ್ಕಳು ಓದು ಬರಹದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ.



ಸಾರ್ವಜನಿಕ ಸಮಾರಂಭಗಳಲ್ಲಿ ತಮ್ಮ ಒಬ್ಬಳೇ ಮಗಳೊಂದಿಗೆ ಪೋಷಕರು ಭಾಗವಹಿಸುವಾಗ ಆಕೆ ಜನರನ್ನು ನೋಡಿ ಕೂಗುತ್ತಾ ನಗುತ್ತಿದ್ದಳು. ವಿಶಿಷ್ಟ ಮುಖ ಲಕ್ಷಣ ಜನರನ್ನು ಆಕೆಯತ್ತ ಸೆಳೆಯುತ್ತಿದ್ದರೆ, ಪೋಷಕರನ್ನು ಮುಜುಗರಕ್ಕೀಡುಮಾಡುತ್ತಿತ್ತು. ಇಂದು ಆ ಪೋಷಕರು ನಾವು ಡಾ. ಆಶಾ ಅವರ ಮಾತುಗಳನ್ನು ಕೇಳಬೇಕಿತ್ತು ಎಂದು ದುಃಖದಿಂದ ಹೇಳುತ್ತಿದ್ದಾರೆ (ಆ ದಿನಗಳಲ್ಲಿ ನಾನು ಅನನುಭವಿ ವೈದ್ಯೆ ಎಂದು ನಿರಾಕರಿಸಿದ್ದರು).



ಐದು ವರ್ಷದ ಇಶಾ ಪುಣೆ ಮೂಲತಃ ಶ್ರೀಮಂತ ಕುಟುಂಬದ ಕಣ್ಮಣಿ. ಆಕೆ ನನ್ನ ಕಾಯಂ ರೋಗಿ. ಡೌನ್ ಹೊಂದಿರುವ ಮಕ್ಕಳು ಆಗಾಗ್ಗೆ ಕಾಯಿಲೆ ಬೀಳುತ್ತಿರುತ್ತಾರೆ. ಅದರಲ್ಲೂ ನಿರಂತರ ಮೂಗು ಸೋರುವಿಕೆ, ಉಸಿರಾಟದಲ್ಲಿ ತೊಂದರೆ ಮತ್ತು ನಿದ್ದೆಯಲ್ಲಿ ಗೊರಕೆ ಹೊಡೆಯುವುದು ಹೆಚ್ಚು. ಪದೇ ಪದೇ ದೃಷ್ಟಿ ಸಮಸ್ಯೆ ಮತ್ತು ಇತರೆ ಹಲವಾರು ತೊಂದರೆಗಳನ್ನು ಎದುರಿಸುತ್ತಿರುತ್ತಾರೆ.



ಈ ಸಿರಿವಂತ ಪೋಷಕರು ತಮ್ಮ ಮಗಳನ್ನು ವಿಶೇಷ ಶಾಲೆಗೆ ದಾಖಲಿಸಿದ್ದು ಮಾತ್ರವಲ್ಲ, ಆಕೆಗೆ ಯಾವ ಸಮಸ್ಯೆ ಉಂಟಾದರೂ ತಜ್ಞರ ಬಳಿ ಹೋಗುತ್ತಿದ್ದರು. ಡೌನ್ ತಗುಲಿದ ಮಗುವಿಗೆ ಲಭ್ಯವಿರುವ ಎಲ್ಲಾ ಸೇವೆಗಳನ್ನೂ ಒಂದೇ ಸಮನೆ ಮುಗಿಸಿದ್ದರು. ಗೂಗಲ್ ಸರ್ಚ್ ಮೂಲಕ ಈ ಕಾಯಿಲೆಯ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದರೂ ಒಂದು ದಿನ ಪವಾಡವೊಂದು ಜರುಗುತ್ತದೆ ಎಂಬ ನಂಬಿಕೆಯಿಂದ ಪ್ರಾರ್ಥಿಸುತ್ತಿದ್ದರು.



ಇಶಾಳ ತಾಯಿ ಸ್ವಯಂಪ್ರೇರಣೆಯಿಂದ ಒಮ್ಮೆ ನನ್ನ ಕ್ಲಿನಿಕ್‌ಗೆ ಬಂದಿದ್ದರು. ಆಗ ಅವರ ಬಳಲಿಹೋದ ಮುಖದಲ್ಲಿ ಅಳು ತುಂಬಿಕೊಂಡಿರುತ್ತಿತ್ತು. ಅವರೊಂದಿಗೆ ಮಾತನಾಡುತ್ತಾ ನಾನು ಶಕ್ತಿಯೆಲ್ಲಾ ಉಡುಗಿದಂತಾದೆ. ನಾವು ಒಂದೇ ವಿಷಯದ ಬಗ್ಗೆ ಮತ್ತೆ ಮತ್ತೆ ಮಾತನಾಡುವುದನ್ನು ಮುಂದುವರಿಸಿದೆವು. ಆ ತಾಯಿಯಲ್ಲಿದ್ದದ್ದು ಒಂದೇ ಕಳವಳ- ಒಂದು ವೇಳೆ ಇಶಾ ದೀರ್ಘಕಾಲ ಬದುಕಿದರೆ ಏನು ಮಾಡುವುದು? ನನ್ನ ಮಗಳನ್ನು ಯಾರು ನೋಡಿಕೊಳ್ಳುತ್ತಾರೆ ಡಾಕ್ಟರ್? ಇಂಥ ಮಕ್ಕಳನ್ನು ಸಂಭಾಳಿಸುವುದು ಸುಲಭವಲ್ಲ.



ಚಂದ್ರನ ಮೇಲೆ ಚಿಕಿತ್ಸೆ ಲಭ್ಯವಿದ್ದಿದ್ದರೆ ಅಲ್ಲಿಗೂ ತೆರಳಲು ಈ ಪೋಷಕರು ಸಿದ್ಧರಿದ್ದರು.



ಮಗುವಿನ ಬೆಳವಣಿಗೆಯೊಂದಿಗೆ ಕಾಯಿಲೆಯ ಗುಣಲಕ್ಷಣಗಳು ಸಂಕೀರ್ಣವಾಗುತ್ತಾ ಹೋಗುವಂತೆ ಡೌನ್‌ನಿಂದ ಬಳಲುತ್ತಿರುವ ಮಕ್ಕಳನ್ನು ತಿಂಗಳು/ವರ್ಷದ ಆಧಾರದಲ್ಲಿ ನಿರಂತರ ಪರೀಕ್ಷೆಗೆ ಒಳಪಡಿಸುತ್ತಿರಬೇಕಾಗುತ್ತದೆ.



ಆಗಾಗ್ಗೆ ಕಣ್ಣಿನ ಸೋಂಕು ಮತ್ತು ದೃಷ್ಟಿ ಸಮಸ್ಯೆಗಳನ್ನು ಎದುರಿಸಬೇಕಾಗುವುದರಿಂದ ಅವರನ್ನು ನಿರಂತರವಾಗಿ ನೇತ್ರ ತಜ್ಞರ ಬಳಿ ಕರೆದುಕೊಂಡು ಹೋಗುತ್ತಿರಬೇಕು. ಅವರಲ್ಲಿ ಶ್ರವಣ ಸಮಸ್ಯೆಯೂ ಎದುರಾಗುವುದರಿಂದ ವರ್ಷಕ್ಕೊಮ್ಮೆ ಕಿವಿ ಪರೀಕ್ಷೆ ನಡೆಸಬೇಕು. ಇಶಾ ಉಸಿರಾಟದ ತೊಂದರೆಯಿಂದಾಗಿ ನಿದ್ರೆ ವೇಳೆ ತುಂಬಾ ಗೊರಕೆ ಹೊಡೆಯುತ್ತಿದ್ದಳು. ಅದು ಆಕೆಗೆ ಮರಣವನ್ನೂ ತರಬಹುದಾದ ಸಮಸ್ಯೆ.



ಇದಕ್ಕೆ ಪಾಲಿ ಸೊಮ್ನಾಗ್ರಫಿ ಎಂಬ ವಿಶೇಷ ಪರೀಕ್ಷೆಯನ್ನು 3-4 ವರ್ಷದಲ್ಲಿ ಒಮ್ಮೆ ನಡೆಸಬೇಕು. ಆಕೆಯ ಹಲ್ಲು ಮತ್ತು ವಸಡುಗಳು ಹಾಳಾಗಿದ್ದವು. ಇದಕ್ಕಾಗಿ ದಂತವೈದ್ಯರ ಭೇಟಿ ಕಡ್ಡಾಯವಾಗಿತ್ತು. ಮಲವಿಸರ್ಜನೆಯ ಕಷ್ಟದಿಂದಾಗಿ ಇಶಾ ಆಗಾಗ್ಗೆ ಜೋರಾಗಿ ಕೂಗುತ್ತಿದ್ದಳು. ಈ ಸಮಸ್ಯೆಗೆ ಚಿಕಿತ್ಸೆ ನೀಡುವುದು ಸುಲಭದ ಕೆಲಸವಲ್ಲ.



ಇಷ್ಟೆಲ್ಲಾ ಸಾಲದಂತೆ ಇಂಥ ರೋಗಿಗಳು ಥೈರಾಯ್ಡ, ಕ್ಯಾನ್ಸರ್ ಮತ್ತು ಮೂಳೆ ಸಮಸ್ಯೆಗಳಿಗೆ ತುತ್ತಾಗುವ ಸಂಭವ ಹೆಚ್ಚು. ಹೆಚ್ಚಿನ ಡೌನ್ ಪೀಡಿತ ಮಕ್ಕಳ ಬೆನ್ನುಹುರಿಯ ಮೇಲ್ಭಾಗವು ಸ್ಥಾನಪಲ್ಲಟಗೊಳ್ಳುವ ಸಾಧ್ಯತೆ ಇರುವುದರಿಂದ ಹೊರಾಂಗಣ ಆಟಗಳಿಂದ ತಾವಾಗಿಯೇ ದೂರವುಳಿದಿರುತ್ತಾರೆ. ಅದು ಅವರನ್ನು ಹಂತಹಂತವಾಗಿ ಕೊಲ್ಲಬಲ್ಲದು.



ಅವರ ಜೀವನದಲ್ಲಿ ಹಲವಾರು ಕಾಯಿಲೆಗಳನ್ನು ಎದುರುಗೊಳ್ಳುತ್ತಾರೆ. ಅಕಾಲಿಕ ನರೆಗೂದಲು ಮತ್ತು ಅಲ್ಜೈಮೆರ್ ಒಂದೆಡೆಯಾದರೆ, ಸೋಂಕುಗಳಿಗೆ ಮತ್ತು ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಇನ್ನೊಂದೆಡೆ. ಇಶಾಳ ಪೋಷಕರು ಆಕೆಯ ಸೊಂಟದ ಕೀಲು ಮೊಣಕಾಲು ಸಂದು (ಮಂಡಿಚಿಪ್ಪು) ದುರ್ಬಲವಾಗಿ ನಡೆದಾಡುವುದು ಕಷ್ಟವಾಗಿದ್ದರಿಂದ ಆಕೆಯನ್ನು ತಜ್ಞರ ಬಳಿ ಕರೆದುಕೊಂಡು ಹೋಗಿದ್ದರು. ಅದೃಷ್ಟವಶಾತ್ ಇಶಾಳಿಗೆ ಹೃದಯ ಸಮಸ್ಯೆ ಇರಲಿಲ್ಲ.



ನಿರಂತರ ಹೃದಯ ಕಾಯಿಲೆಗಳು ಡೌನ್ ಸಿಂಡ್ರೋಮ್‌ನ ಒಂದು ಭಾಗ ಎನ್ನಬಹುದು. ಅದು ಕಿಡ್ನಿ ಕಾಯಿಲೆಗೂ ಎಡೆಮಾಡಿಕೊಡಬಹುದು. ಅದಕ್ಕೆ ಹುಟ್ಟಿನಿಂದಲೇ ಉದರ ಸಮಸ್ಯೆಗಳನ್ನು (ಡ್ಯುಯೊಡೆನಿಯಲ್ ಅಟ್ರೆಸಿಯಾ) ಮತ್ತು ಮೂತ್ರಪಿಂಡದ ಅಸಹಜತೆಗಳನ್ನು ತಿಳಿದುಕೊಳ್ಳಲು ಉದರ ಭಾಗದ ಅಲ್ಟ್ರಾಸೌಂಡ್ ಮಾಡುವುದು ಅಗತ್ಯ.

ಕವಿತಾ ತಮ್ಮ ಸೆಲ್‌ಫೋನ್‌ನಲ್ಲಿ ಈ ಎಲ್ಲಾ ನಿರಂತರ ಪರೀಕ್ಷೆಗಳು ಮತ್ತು ಭೇಟಿಗಳ ಬಗ್ಗೆ ನಮೂದಿಸಿಕೊಂಡಿದ್ದರು.



ತಮ್ಮ ಮಗಳ ಆರೈಕೆ ಮಾಡುವವರಿಗಾಗಿ ಹುಡುಕಾಡಿದ ಈ ದಂಪತಿ ನಿರಾಶೆಗೊಂಡಿದ್ದರು. ದೊಡ್ಡ ಮೊತ್ತದ ಸಂಬಳ ನೀಡುತ್ತಿದ್ದರೂ ಅವರು ಮಗುವನ್ನು ನಿರ್ಲಕ್ಷಿಸುತ್ತಿದ್ದರು ಮತ್ತು ಕೆಲವೊಮ್ಮೆ ನಿಂದಿಸುತ್ತಿದ್ದರು. ಕವಿತಾ ಈ ಎಲ್ಲಾ ಒತ್ತಡಗಳಿಂದ ಬಳಲಿಹೋಗಿ ನಿದ್ರಾಹೀನರಾಗಿದ್ದರು. ಈ ತಾಯಿ ಮತ್ತು ಮಗುವಿನ ಕುರಿತು ನನಗೆ ತುಂಬಾ ಬೇಸರವಾಗುತ್ತದೆ. ಹೆಚ್ಚೂಕಡಿಮೆ ತನ್ನ ಮಗಳ ಪರಿಸ್ಥಿತಿಯನ್ನು ಒಪ್ಪಿಕೊಂಡಿದ್ದ ತಂದೆ ತನ್ನ ಸೂಕ್ಷ್ಮ ಮನಸ್ಸಿನ ಪತ್ನಿಗೆ ಭಾವನಾತ್ಮಕ ಬೆಂಬಲ ನೀಡುತ್ತಿರಲಿಲ್ಲ.



ಡೌನ್‌ಗೆ ಒಳಗಾಗಿರುವ ಮಕ್ಕಳ ನಡತೆಯಲ್ಲಿ ಸಮಸ್ಯೆಗಳು ಕಂಡುಬರಬಹುದು. ವಿಶೇಷವಾಗಿ ತಾರುಣ್ಯದಲ್ಲಿ ಬೊಜ್ಜು ಬರುವ ಸಾಧ್ಯತೆಯೂ ಹೆಚ್ಚು.



ಕಳೆದ ವಾರ ನಾನು ನವಜಾತ ಶಿಶುಗಳಲ್ಲಿ ಡೌನ್ ಸಿಂಡ್ರೋಮ್‌ನ ರೋಗನಿರ್ಣಯದ `ಹಾಲ್ ಪ್ರತಿಪಾದನೆ' ಬಗ್ಗೆ ಹೇಳಿದ್ದೆ. ಪ್ರತಿ 700 ಜನನಗಳಲ್ಲಿ ಒಂದು ಮಗು ಡೌನ್ ಸಿಂಡ್ರೋಮ್ (ನಮ್ಮ ಪುಸ್ತಕದ ಪ್ರಕಾರ) ಹೊಂದಿರುತ್ತದೆ. ವಾಣಿ ವಿಲಾಸ ಆಸ್ಪತ್ರೆಯ ನವಜಾತ ಶಿಶುವಿಭಾಗದ ಡಾ.ಶಿವಕುಮಾರ್, `ಹಾಲ್ ಪ್ರತಿಪಾದನೆ'ಯ ಆಧಾರದಲ್ಲಿ ಈ ಅಮೂಲ್ಯ ಮಗುವಿನ ಡೌನ್ ಸಿಂಡ್ರೋಮ್ ಡಯಾಗ್ನೊಸ್ ಮಾಡಿದ್ದರು.



ಹದಿನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ 33 ವರ್ಷದ `ಎಲ್' ನಾಲ್ಕು ಬಾರಿ ಗರ್ಭವತಿಯಾಗಿದ್ದರು. ಆಕೆ ತನ್ನ ಹಿಂದಿನ ಎಲ್ಲಾ ನಾಲ್ಕು ಮಕ್ಕಳನ್ನು ಕಳೆದುಕೊಂಡಿದ್ದರು. ಈ ಬಾರಿ ಆಕೆ ತನ್ನ ಗರ್ಭಾವಸ್ಥೆಯುದ್ದಕ್ಕೂ ಹೆಚ್ಚಿನ ಎಚ್ಚರಿಕೆ ತೆಗೆದುಕೊಂಡಿದ್ದರು. ಆಕೆಯ ಪ್ರಸೂತಿ ವೈದ್ಯರು ಪ್ರತಿಷ್ಠಿತ ಲ್ಯಾಬ್‌ವೊಂದರಲ್ಲಿ `ಚತುರ್ಭಾಗ ಪರೀಕ್ಷೆ' ನಡೆಸಿ ಡೌನ್ ಸಿಂಡ್ರೋಮ್ ಇಲ್ಲವೆಂದು ಹೇಳಿದ್ದರು. ವರದಿ ಸಹಜ ಎಂದು ಬಂದಾಗ ಪೋಷಕರು ನೆಮ್ಮದಿಯ ನಿಟ್ಟುಸಿರುಬಿಟ್ಟರು.



ಆದರೆ ಮಗು ಜನಿಸಿದಾಗ ಅದು ಡೌನ್‌ಗೆ ತುತ್ತಾಗಿರುವುದನ್ನು ಒಪ್ಪಿಕೊಳ್ಳಲು ಅವರು ನಿರಾಕರಿಸಿದರು. ಇಶಾಳ ಪೋಷಕರಂತೆ ಆಕೆಯ ಎಲ್ಲಾ ಆರೋಗ್ಯ ಉಪಚಾರಗಳನ್ನು ನೋಡಿಕೊಳ್ಳಲು ಆರ್ಥಿಕವಾಗಿಯೂ ಸಬಲರಲ್ಲದ ಹಾಗೂ ಆ ವೇಳೆಗಾಗಲೇ ಎರಡು ಬಾರಿ ಸಿಸೇರಿಯನ್‌ಗೆ ಒಳಗಾಗಿದ್ದರಿಂದ ಆ ತಾಯಿ ಮತ್ತೊಮ್ಮೆ ಗರ್ಭಿಣಿಯಾಗುವ ಅವಕಾಶವೂ ಇಲ್ಲದೆ ಪೋಷಕರು ಕಂಗೆಟ್ಟರು.



ಡೌನ್ಸ್ ಸಿಂಡ್ರೋಮ್ ಕ್ರೋಮೊಸೋಮ್ 21ರ (ವರ್ಣತಂತು) ಹೆಚ್ಚುವರಿ ಪ್ರತಿ ಹೊಂದಿರುವ ಕಾರಣದಿಂದ ಸಂಭವಿಸುತ್ತದೆ. ಸಾಮಾನ್ಯ ಮಾನವ ಶರೀರವು 23 ಕ್ರೋಮೊಸೋಮ್‌ಗಳ ಜೋಡಿ ಹೊಂದಿರುತ್ತದೆ. ಅದರಲ್ಲಿ ಒಂದು ಜೋಡಿ ಲೈಂಗಿಕ ಕ್ರೋಮೊಸೋಮ್. ಜಾನ್ ಲಾಂಗ್ಡಾನ್ ಡೌನ್ ಈ ಡೌನ್ ಸಿಂಡ್ರೋಮ್ ಕುರಿತು ವಿವರಣೆ ನೀಡಿದ ವ್ಯಕ್ತಿ.



ಅವರು ತಮ್ಮ ಇಡೀ ಜೀವನವನ್ನು ಈ ಪರಿಸ್ಥಿತಿಯೊಳಗೇ ಸಾಗಿಸಿದವರು. ಇಂಗ್ಲೆಂಡಿನ ಟರ್ಪೈಂಟ್‌ನಲ್ಲಿರುವ ಅವರ ಖಾಸಗಿ ಮನೆ ಅಸಹಜ ಮಾನಸಿಕ ಸ್ಥಿತಿಯಲ್ಲಿರುವವರಿಗೆ ನಿರ್ಮಿಸಿದ್ದು. ಆ ಮನೆ ಈಗ ಲಾಂಗ್ಡಾನ್ ಡೌನ್ ಕೇಂದ್ರವಾಗಿ ಹೆಸರಾಗಿದೆ ಮತ್ತು ಡೌನ್ ಸಿಂಡ್ರೋಮ್ ಸಂಸ್ಥೆಯ ಪ್ರಧಾನ ಕಚೇರಿಯೂ ಇಲ್ಲಿದೆ. ಡೌನ್ ಸಿಂಡ್ರೋಮ್ ಬಗ್ಗೆ ವಿವರಣೆ ನೀಡಿದ ವ್ಯಕ್ತಿಯ ಮೊಮ್ಮಗನೂ ಆತನದೇ ಹೆಸರುಳ್ಳ ಸಿಂಡ್ರೋಮ್‌ಗೆ ತುತ್ತಾದದ್ದು ವಿಪರ್ಯಾಸ. ಅವರ ಮೊಮ್ಮಗ 65 ವರ್ಷದವರೆಗೆ ಬದುಕಿದ್ದರು.



ಡೌನ್ ಸಿಂಡ್ರೋಮ್ ಹೊಂದಿರುವವರು ಉತ್ತಮ ಮಕ್ಕಳಾಗಿರುತ್ತಾರೆ, ಸ್ನೇಹಪರರಾಗಿರುತ್ತಾರೆ, ಸಂಗೀತವನ್ನು ಪ್ರೀತಿಸುತ್ತಾರೆ. ಆದರೆ ಅವರಲ್ಲಿ ಬಹುತೇಕ ಎಲ್ಲರೂ ಮಾನಸಿಕವಾಗಿ ಬೆಳವಣಿಗೆ ಹೊಂದಿರುವುದಿಲ್ಲ. ಅವರು ಮದುವೆಯಾಗಲು ಸಾಧ್ಯವಿಲ್ಲ. ಆದರೂ ಅವರು ತೀರಾ ಅಪರೂಪವಾಗಿ ಮಕ್ಕಳನ್ನು ಪಡೆಯಲು ಸಾಧ್ಯ.



ಶಿವಶಂಕರ್ `ಅವರಿಗೆ ದಯವಿಟ್ಟು ಸಹಾಯ ಮಾಡಿ ಮೇಡಂ' ಎಂದು ಕೇಳಿಕೊಂಡರು. ನಾನೇನು ಮಾಡಲು ಸಾಧ್ಯ? ಕೇವಲ ಆ ಒಂದು ಹೆಚ್ಚುವರಿ ಜೈವಿಕ ವಸ್ತು ಹೊಂದಿರುವ ಕಾರಣದಿಂದಾಗಿ ಈ ಮಕ್ಕಳು ವಿಲಕ್ಷಣ ಮುಖ ಲಕ್ಷಣಗಳನ್ನು ಹೊಂದುತ್ತಾರೆ ಮತ್ತು ಹೆಚ್ಚೂ ಕಡಿಮೆ ತಮ್ಮ ದೇಹದ ಪ್ರತಿ ಅಂಗದಲ್ಲಿಯೂ ಅಸಾಮಾನ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಭಿನ್ನ ಡೌನ್ ಸಿಂಡ್ರೋಮ್ ಹೊಂದಿರುವವರು ತಮ್ಮ ಅಂಗಾಂಗಗಳ ಕಡಿಮೆ ಪಾಲ್ಗೊಳ್ಳುವಿಕೆಯಿದ್ದರೂ ಭಾಗಶಃ ಸಹಜ ಜೀವನ ಸಾಗಿಸಬಹುದು.



`ಡಾ. ಪಿ.' ತಮ್ಮ ಮಗಳ ಸ್ಥೂಲಕಾಯದ ಬಗ್ಗೆ ಚಿಂತೆಗೊಳಗಾಗಿರುವಾಗ, ಸುಶೀಲಾ ಮಲ್ಲೇಶ್ ಅವರ ಸಂಬಂಧಿ ತಮ್ಮ 22 ವರ್ಷದ ಮಗಳನ್ನು ಯಾರಾದರೂ ಮದುವೆಯಾಗುತ್ತಾರೆಯೇ ಎಂದು ಎದುರು ನೋಡುತ್ತಿದ್ದಾರೆ.



ಮೊದಲ ಮೂರು ತಿಂಗಳ ಗರ್ಭಾವಸ್ಥೆಯ ಸ್ಕ್ಯಾನ್‌ನಲ್ಲಿ ಆರಂಭದಲ್ಲೇ ಪತ್ತೆಯಾಗುವ ಮತ್ತು ಎರಡನೇ ಟ್ರೈಮೆಸ್ಟರ್‌ನಲ್ಲಿ ತಾಯಿಯ ರಕ್ತದ ಪರೀಕ್ಷೆ (ಚತುರ್ಭಾಗ ಪರೀಕ್ಷೆ)ಯಲ್ಲಿ ದೃಢಪಟ್ಟರೆ ಕ್ರೋಮೊಸೋಮ್‌ನ ಹೆಚ್ಚುವರಿ ಅಂಶವನ್ನು ತೆಗೆದುಹಾಕುವ ಜೆನೆಟಿಕ್ ತಂತ್ರಜ್ಞಾನ ಆವಿಷ್ಕಾರ ಆಗುವವರೆಗೂ ಗರ್ಭಪಾತವೊಂದೇ ಈಗಿರುವ ಏಕೈಕ ಪರಿಹಾರ. ಈ ಪರೀಕ್ಷೆಗಳು ಅಧಿಕ ವೆಚ್ಚದಲ್ಲಿ ಲಭ್ಯವಿದೆ. ಗರ್ಭಾವಸ್ಥೆಯ ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿ, ಅದರಲ್ಲೂ ಮೂವತ್ತು ವರ್ಷ ಮೀರಿದ ಗರ್ಭಿಣಿಯರಲ್ಲಿ ಎಚ್ಚರಿಕೆಯಿಂದ ಈ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ.



ನಮ್ಮ ಸಂಖ್ಯೆಗಳು (ಕ್ರೋಮೊಸೋಮ್) ಸಮಸ್ಯೆಯಿಲ್ಲದೆ ಸರಿಯಾಗಿ ಇರುವುದಕ್ಕೆ ನಾವು ಅದೃಷ್ಟಶಾಲಿಗಳಲ್ಲವೇ? ನಾವು ಆ 700 ನವಜಾತ ಮಕ್ಕಳಲ್ಲಿ ಒಬ್ಬರಾಗದೆ ಇರುವುದಕ್ಕೆ ದೇವರಿಗೆ ಧನ್ಯವಾದಗಳು!

 

ಪ್ರತಿಕ್ರಿಯಿಸಿ (+)