ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ

ಬುಧವಾರ, ಮೇ 22, 2019
33 °C

ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ

ಡಾ.ಆರ್.ಬಾಲಸುಬ್ರಹ್ಮಣ್ಯಂ
Published:
Updated:
ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ

ಇದು ನಡೆದದ್ದು ಸುಮಾರು 24 ವರ್ಷಗಳ ಹಿಂದೆ. ಆಗ ಬ್ರಹ್ಮಗಿರಿಯ ಬುಡಕಟ್ಟು ಹಾಡಿಯಲ್ಲಿ ವಾಸವಾಗಿದ್ದ ನಾನು, ಅಲ್ಲಿನ ಜನರ ಜೊತೆ ಸೇರಿ ಕೆಲಸ ಮಾಡುತ್ತಿದ್ದೆ. ಸಮೀಪದ ಹೊಸಹಳ್ಳಿಯಲ್ಲಿ ನಾವು ನಿರ್ಮಿಸುತ್ತಿದ್ದ ಶಾಲಾ ಕಟ್ಟಡದ ಮೇಲ್ವಿಚಾರಣೆಗಾಗಿ ಸಾಮಾನ್ಯವಾಗಿ ಪ್ರತಿ ದಿನ ಇಲ್ಲಿಂದ ಅಲ್ಲಿಗೆ ನಡೆದುಕೊಂಡು ಹೋಗಿ ಬರುತ್ತಿದ್ದೆ.ಹೀಗೆ ನಾನು ಹೋಗುವ ದಾರಿಯಲ್ಲಿ ಆದಿವಾಸಿಗಳಲ್ಲದ ಹಿರಿಯ ದಂಪತಿಯ ಮನೆಯನ್ನು ಹಾದು ಹೋಗಬೇಕಿತ್ತು. ಆಗೆಲ್ಲಾ ನನ್ನೊಂದಿಗೆ ಮಾತಿಗಿಳಿಯುತ್ತಿದ್ದ ಅವರು, ಕಾಫಿ ಕುಡಿದು ಹೋಗುವಂತೆ ಆಹ್ವಾನಿಸುತ್ತಿದ್ದರು. ಆದರೆ ನಾನು ಅವರ ಆಹ್ವಾನವನ್ನು ನಯವಾಗಿಯೇ ತಳ್ಳಿಹಾಕುತ್ತಿದ್ದೆ. ಕೆಲ ವಾರ ಹೀಗೇ ಕಳೆದ ನಂತರ, ಸದಾ ನಾನು ಹೀಗೆ ಅವರ ಆಹ್ವಾನವನ್ನು ತಿರಸ್ಕರಿಸುವುದು ಸರಿಯಲ್ಲ ಎಂದು ನನಗೆ ಅನ್ನಿಸತೊಡಗಿತು.

 

ಅದರಂತೆ ಒಂದು ದಿನ ಅವರ ಆಹ್ವಾನವನ್ನು ಮನ್ನಿಸಿ ನಾನು ಇನ್ನೇನು ಅವರ ಮನೆಯ ಒಳಗೆ ಅಡಿ ಇಡಬೇಕು ಎಂಬಷ್ಟರಲ್ಲೇ ಉದ್ವೇಗಕ್ಕೊಳಗಾದ ಆ ಮನೆಯೊಡತಿ, ಒಳಗೆ ಬಾರದಂತೆ ನನ್ನನ್ನು ತಡೆದರು. ತಾವು ಬಾಯಿ ಮಾತಿಗೆ ಕಾಫಿಗೆ ಕರೆಯುತ್ತಿದ್ದೆವೆಯೇ ಹೊರತು ನಿಜವಾಗಲೂ ಅಲ್ಲ, ಆದ್ದರಿಂದ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ಅವರು ನನಗೆ ತಿಳಿ ಹೇಳಿದರು!ಬಾಯಿ ಮಾತಿನ ಉಪಚಾರವನ್ನು ನಾನು ನಿಜವಾಗಲೂ ಒಪ್ಪಿಕೊಂಡು ಅವರ ಮನೆಯ ಒಳಹೊಕ್ಕು ಅದನ್ನು `ಮೈಲಿಗೆ~ ಮಾಡಿದ್ದು ಆಕೆಯನ್ನು ದಿಗ್ಭ್ರವೆುಗೆ ಈಡು ಮಾಡಿತ್ತು. ತಮ್ಮ ಈ ನಡವಳಿಕೆಗೆ ಅವರು ಸರಳವಾಗಿಯೇ ನನಗೆ ಸ್ಪಷ್ಟನೆಯನ್ನು ಕೊಟ್ಟರು. ಇಲ್ಲಿ ನನ್ನ ಜಾತಿ ಯಾವುದೆಂಬುದು ಅವರಿಗೆ ಮುಖ್ಯವಾಗಿರಲಿಲ್ಲ.ಆದರೆ ಆದಿವಾಸಿಗಳೊಂದಿಗೆ ವಾಸಿಸುತ್ತಾ ಅವರ ಆಹಾರ ತಿನ್ನುತ್ತಿರುವುದಷ್ಟೇ ಸಾಕಿತ್ತು ನಾನು `ಮೈಲಿಗೆ~ ಆಗಲು. ತಾನು ಸಿದ್ಧಪಡಿಸಿದ ಆಹಾರವನ್ನು ಕೆಳ ಜಾತಿಯವರೊಟ್ಟಿಗೆ ಬದುಕುವ ಒಬ್ಬ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದನ್ನು ಕಲ್ಪಿಸಿಕೊಳ್ಳುವುದೂ ಆ ಮಹಿಳೆಗೆ ಸಾಧ್ಯವಿರಲಿಲ್ಲ. ದೇಶದ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವಾಗ ನಾನು ಅನುಭವಿಸಿದ ಇಂತಹ ಅವೆಷ್ಟೋ ಪ್ರಕರಣಗಳಲ್ಲಿ ಇದೂ ಒಂದು.ದೇಶದ ಕಡುಬಡವರು ಸಾಮಾಜಿಕವಾಗಿ ತಾರತಮ್ಯಕ್ಕೆ ಒಳಗಾದ ವರ್ಗಗಳಿಗೇ ಸೇರಿರುವುದು ಮತ್ತು ಜಾತಿ ವ್ಯವಸ್ಥೆಯಲ್ಲಿ ಅತ್ಯಂತ ಕೆಳಸ್ತರದಲ್ಲಿರುವುದು ಕೇವಲ ಕಾಕತಾಳೀಯವೇನೂ ಅಲ್ಲ. ಅಭಿವೃದ್ಧಿ ಎಂಬುದು ಮಾನವನ ಸಾಮರ್ಥ್ಯದ ವಿಸ್ತರಣೆ ಮತ್ತು ಬಡತನ ಎಂಬುದು ಅವಕಾಶಗಳ ನಿರಾಕರಣೆಯೇ ಹೊರತು ಬೇರೇನೂ ಅಲ್ಲ ಎಂಬ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ.

 

ಜಾತಿ ವ್ಯವಸ್ಥೆ ಸೃಷ್ಟಿಸಿರುವ ತಾರತಮ್ಯ ಹಾಗೂ ಅವಕಾಶಗಳ ನಿರಾಕರಣೆಯನ್ನು ಕಂಡು ವೈಯಕ್ತಿಕವಾಗಿಯೂ ನಾನು ರೋಸಿಹೋಗಿದ್ದೇನೆ. ಸಮಾನತೆಯಿಂದ ಒಡಗೂಡಿದ ಜಾತಿ ಮುಕ್ತ ಸಮಾಜ ನಮ್ಮದಾಗಬೇಕು, ಅಲ್ಲಿ ಪ್ರತಿ ಭಾರತೀಯನಿಗೂ ನಿರ್ಭೀತಿಯಿಂದ ತನ್ನ ಬದುಕನ್ನು ರೂಪಿಸಿಕೊಳ್ಳುವ, ಅವನ ಎಲ್ಲ ಮೂಲಭೂತ ಅಗತ್ಯಗಳಿಗೂ ಸ್ಪಂದಿಸುವಂತಹ ಸಮಾನ ಅವಕಾಶಗಳು ದೊರೆಯುವ ವ್ಯವಸ್ಥೆ ಇರಬೇಕು; ಸುರಕ್ಷಾ ವಲಯದಿಂದ ಕೆಳಗಿರುವವರು ವಿಷಣ್ಣರಾಗಿ ಮತ್ತು ಹೀನಾಯವಾಗಿ ಬದುಕುವಂತಾಗದೆ ಅವರಿಗೆ ಅಗತ್ಯ ನೆರವು ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂಬ ಕನಸನ್ನು ಭಾರತದ ಬಗ್ಗೆ ನಾನು ಹೊಂದಿದ್ದೇನೆ.ಆದರೆ ಇಂತಹ ಸ್ಥಿತಿ ಎಂದಾದರೂ ನಿರ್ಮಾಣವಾಗಲು ಸಾಧ್ಯವೇ? ಜಾತಿಯ ಸಂಕೋಲೆಯಲ್ಲಿ ಬಂಧಿಯಾಗಿರುವ ಸಾಮಾಜಿಕ ಚೌಕಟ್ಟು ಈ ವ್ಯವಸ್ಥೆ ಕಾರ್ಯರೂಪಕ್ಕೆ ಬರಲು ಬಿಡುವುದೇ? ದುಡಿವೆು ಆಧರಿಸಿ ರಚಿಸಲಾಗಿದ್ದ ವ್ಯವಸ್ಥೆಯೊಂದು (ಭಗವದ್ಗೀತೆ ಪ್ರತಿಪಾದಿಸಿರುವಂತೆ) ವರ್ಷಗಳು ಉರುಳಿದಂತೆಲ್ಲಾ ಅವನತಿ ಹೊಂದುತ್ತಾ ಸಾಗಿ ಇಂದಿನ ದುಃಸ್ಥಿತಿಗೆ ಹೇಗೆ ಬಂದು ತಲುಪಿತು?ಅನಿವಾರ್ಯ ಸೃಷ್ಟಿ: ಪ್ರಮುಖವಾಗಿ ಬೇಟೆಗಾರರಾಗಿದ್ದ ನಮ್ಮ ಪೂರ್ವಜರು ತಮ್ಮ ಜೀವನೋಪಾಯ ಮತ್ತು ಆರ್ಥಿಕತೆಗಾಗಿ ಕಚ್ಚಾ ಶಸ್ತ್ರಾಸ್ತ್ರಗಳನ್ನು ಅವಲಂಬಿಸಿದ್ದರು. ಕಾಲಕ್ರಮೇಣ ಪ್ರಗತಿ ಹೊಂದುತ್ತಿದ್ದಂತೆಯೇ ಒಂದು ಸ್ಥಳದಲ್ಲಿ ನೆಲೆ ನಿಲ್ಲುವ ಪರಿಕಲ್ಪನೆ ಮೂಡಿ, ಇದು ಮುಂದೆ ಅವರು ಭೂಮಿಯ ಒಡೆತನ ಹೊಂದಲು, ಕೃಷಿ ಚಟುವಟಿಕೆ ಕೈಗೆತ್ತಿಕೊಳ್ಳಲು, ಆಹಾರ ಧಾನ್ಯ ಸಂಗ್ರಹಿಸಿ ಇಟ್ಟುಕೊಳ್ಳಲು ದಾರಿ ಮಾಡಿಕೊಟ್ಟಿತು.ಹೀಗೆ ಸಾಮಾಜಿಕ ಒತ್ತಡ ಸೃಷ್ಟಿಯಾಗುತ್ತಿದ್ದಂತೆಯೇ ಲೋಹ ವಿದ್ಯೆಯ ರಹಸ್ಯಗಳನ್ನು ಅವರು ಕರಗತ ಮಾಡಿಕೊಂಡರು, ಉತ್ತಮ ಶಸ್ತ್ರಾಸ್ತ್ರಗಳನ್ನು ತಯಾರಿಸಿಕೊಂಡರು, ಗಳಿಸುವ ಮತ್ತು ಗಳಿಸಿದ್ದನ್ನು ಉಳಿಸಿಕೊಳ್ಳುವ ಚಾಲಾಕಿತನ ಬೆಳೆಸಿಕೊಂಡರು. ಅವರು ನಾಳೆಯ ಬಗ್ಗೆ ಮಾತ್ರ ಯೋಚನೆ ಮಾಡಲು ಆರಂಭಿಸಲಿಲ್ಲ, ತಮ್ಮಲ್ಲಿರುವುದನ್ನು ಸಂರಕ್ಷಿಸಿ ಇಟ್ಟುಕೊಳ್ಳಲು, ಕೆಲ ಸಾಮಾಜಿಕ ಕಟ್ಟಳೆಗಳಿಗೆ ಒಳಗಾಗಿ ಬದುಕಲು ಸಹ ಮುಂದಾದರು. ವಿಶೇಷ ಕೌಶಲ ಅಭಿವೃದ್ಧಿಯು ತಮ್ಮ ಉತ್ಪನ್ನಗಳನ್ನು ಪರಸ್ಪರ ಬದಲಾವಣೆ ಮಾಡಿಕೊಳ್ಳುವುದನ್ನೂ ಅವರಿಗೆ ಕಲಿಸಿಕೊಟ್ಟಿತು.ಜೊತೆಗೆ ವ್ಯಾಪಾರದ ಓನಾಮವೂ ಆರಂಭವಾಯಿತು. ಬಳಿಕ ಇನ್ನಷ್ಟು ಕಾನೂನುಗಳು ಅಸ್ತಿತ್ವಕ್ಕೆ ಬಂದವು. ವಿಶೇಷ ಮತ್ತು ವಿಭಿನ್ನ ಕೌಶಲ ಹೊಂದಿದ ವ್ಯಕ್ತಿಗಳ ಅಗತ್ಯ ಸಮಾಜಕ್ಕೆ ಅನಿವಾರ್ಯವಾಯಿತು.ಜನ ತಾವು ಬದುಕತೊಡಗಿದ ರೀತಿಯಲ್ಲಿ, ತಮ್ಮ ವರ್ತನೆಗೆ ಅನುಗುಣವಾಗಿ, ಪರಸ್ಪರ ಸಂವಹಿಸುತ್ತಿದ್ದ ಮಾದರಿಯಲ್ಲಿ, ಗಳಿಸಿದ ಅಧಿಕಾರ ಮತ್ತು ಹೊಂದಿದ ಭೌಗೋಳಿಕ ಗಡಿಗೆ ತಕ್ಕಂತೆ ಯೋಚಿಸಲು ಆರಂಭಿಸಿದರು. ಇದು ಚಿಂತಕರು, ಸಮಾಜ ಹಾಗೂ ಆಡಳಿತದ ಬಗ್ಗೆ ಜ್ಞಾನ ಹೊಂದಿದ ಯೋಜಕರು,  ರಾಜನೀತಿಜ್ಞರ ಉದಯಕ್ಕೆ ಕಾರಣವಾಯಿತು. ಯಾವಾಗ ಕಾನೂನುಗಳು ಜಾರಿಗೆ ಬಂದು ಸಾಮಾಜಿಕ ವ್ಯವಸ್ಥೆಯ ನಿರ್ವಹಣೆ ಆರಂಭವಾಯಿತೋ ಆಗ ಇವುಗಳನ್ನೆಲ್ಲಾ ಜಾರಿಗೆ ತರುವ ಕುಶಲಿಗರನ್ನು ಒಳಗೊಂಡ ಮತ್ತೊಂದು ವರ್ಗವೂ ಅಸ್ತಿತ್ವಕ್ಕೆ ಬಂದಿತು.ನಾಗರಿಕತೆಯ ಬೆಳವಣಿಗೆಯು ಸಮಾಜದ ಪ್ರಗತಿಗೆ ಕಾರಣವಾಯಿತು. ಹೀಗೆ ವಿಕಸನ ಸಾಧ್ಯವಾಗುತ್ತಿದ್ದಂತೆಯೇ ನಾಲ್ಕು ಪ್ರಮುಖ ವರ್ಗಗಳು ಅದಕ್ಕಾಗಿ ಕೆಲಸ ಮಾಡುವಂತಹ ಅನಿವಾರ್ಯ ಸೃಷ್ಟಿಯಾಯಿತು.ಇವುಗಳಲ್ಲಿ ಒಂದು ದುಡಿಯುವ ವರ್ಗವಾಗಿದ್ದು, ಭೂಮಿ ಉತ್ತಿ ಆಹಾರ ಭದ್ರತೆ ಕಾಯ್ದುಕೊಳ್ಳುವುದು ಅದರ ಕಾರ್ಯವಾಗಿತ್ತು. ಮುಂದೆ ಇವರನ್ನೇ `ಶೂದ್ರ~ರೆಂದು ಕರೆಯಲಾಯಿತು. ವಾಣಿಜ್ಯ ಮತ್ತು ಆರ್ಥಿಕ ಪ್ರಗತಿಯಲ್ಲಿ ಗುರುತಿಸಿಕೊಂಡವರು `ವೈಶ್ಯ~ರಾದರು. ಜ್ಞಾನದ ಸೃಷ್ಟಿಗೆ ಬ್ರಾಹ್ಮಣರು ಮುಂದಾದರೆ, ಆಡಳಿತ ಮತ್ತು ಕಾನೂನು ಸುವ್ಯವಸ್ಥೆ ಪಾಲನೆಯತ್ತ ಕ್ಷತ್ರಿಯರು ಗಮನಹರಿಸಿದರು.

 

ತಾವು ಗಳಿಸಿದ ಕೌಶಲಗಳನ್ನು ಆಧರಿಸಿ ಪ್ರತಿಯೊಬ್ಬರೂ ನಿರ್ದಿಷ್ಟ ಪಾತ್ರವನ್ನು ನಿಭಾಯಿಸುತ್ತಿದ್ದರು. ಹೀಗೆ ಕಾರ್ಮಿಕ ವಲಯ, ಜ್ಞಾನ, ವಾಣಿಜ್ಯ, ರಾಜಕೀಯ, ರಕ್ಷಣಾ ವಲಯದಲ್ಲಿ ಏಕಾಗ್ರಮುಖತೆ ಹಾಗೂ  ಸಾಮುದಾಯಿಕ ಪಾಲ್ಗೊಳ್ಳುವಿಕೆಯಿಂದ `ಸಾಮಾಜಿಕ ಪ್ರಗತಿ~ ಎಂಬ ಪರಿಕಲ್ಪನೆ ಗರಿಗೆದರಲಾರಂಭಿಸಿತು.ಇದರಿಂದ ಬೆಳವಣಿಗೆ ಮತ್ತು ಅಭಿವೃದ್ಧಿಯಷ್ಟೇ ಅಲ್ಲ, ಈ ವರ್ಗಗಳ ನಡುವೆ ಪರಸ್ಪರ ಕೊಡು ಕೊಳ್ಳುವಿಕೆ ಹಾಗೂ ಅನ್ಯೋನ್ಯ ಆಶ್ರಯಕ್ಕೂ ದಾರಿಯಾಯಿತು.ಇಷ್ಟೇ ಅಲ್ಲದೆ ಕಠಿಣವಾಗಿ ಇರದಿದ್ದ ಈ ವರ್ಗಗಳು ಪರಸ್ಪರ ಬದಲಾವಣೆಗೆ ಹೇಗೆ ಅವಕಾಶ ಕಲ್ಪಿಸಿದ್ದವು ಎಂಬುದನ್ನು ಚರಿತ್ರೆ ಹಾಗೂ ಜನಪದ ಕಥಾನಕಗಳು ನಮಗೆ ತಿಳಿಸಿಕೊಡುತ್ತವೆ. ಒಬ್ಬ ಬ್ರಾಹ್ಮಣ ಶಸ್ತ್ರಾಸ್ತ್ರ ವಿದ್ಯಾ ಪಾರಂಗತನಾಗಿ ಕ್ಷತ್ರಿಯ ಆಗಬಹುದಿತ್ತು.ದ್ರೋಣಾಚಾರ್ಯ ಮತ್ತು ಪರಶುರಾಮರೇ ಇದಕ್ಕೆ ಉದಾಹರಣೆ. ಕ್ಷತ್ರಿಯರು ಸಹ ಜ್ಞಾನ ಸಂಪಾದನೆ ಮಾಡಬಹುದಿತ್ತು ಎಂಬುದಕ್ಕೆ, ಮೊದಲು ರಾಜನಾಗಿದ್ದು ನಂತರ ಋಷಿಯಾಗಿ ಬದಲಾದ ವಿಶ್ವಾಮಿತ್ರರೇ ಮಾದರಿಯಾಗಿ ನಿಲ್ಲುತ್ತಾರೆ. `ದುಡಿಯುವ ವರ್ಗ~ವನ್ನು ಪ್ರತಿನಿಧಿಸುತ್ತಿದ್ದ ಕರ್ಣ ರಾಜಪದವಿಗೆ ಏರುತ್ತಾನೆ.ಆದರೆ ಬಳಿಕ ಈ ವರ್ಗಗಳ ನಡುವೆಯೂ ಸ್ಥಳಾಂತರ ಅಷ್ಟೊಂದು ಸುಲಭವಾಗಿರಲಿಲ್ಲ, ಸಾಕಷ್ಟು ಅಡೆತಡೆಯನ್ನು ಹೊಂದಿದ್ದ ಅದು ತಕ್ಕ ಬೆಲೆ ತೆರುವಂತೆಯೂ ಮಾಡುತ್ತಿತ್ತು ಎಂಬುದನ್ನು ಸಹ ಅದೇ ಇತಿಹಾಸ ನಮಗೆ ತಿಳಿಸುತ್ತದೆ. ಇದಕ್ಕೆ, ಕ್ಷತ್ರಿಯನ ಕೌಶಲ ಸಂಪಾದಿಸಲು ಹೊರಟ ಏಕಲವ್ಯ ಹೆಬ್ಬೆಟ್ಟನ್ನೇ ಕಳೆದುಕೊಂಡ ನಿದರ್ಶನ ನಮ್ಮ ಮುಂದಿದೆ.ಆಯ್ದ ಕೆಲವರು ದುರಾಸೆಯ ಫಲವಾಗಿ ಅಧಿಕಾರ ಮತ್ತು ಸಾಮಾಜಿಕ ಸ್ಥಾನಮಾನವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಹವಣಿಸಿದರು. ಮಾಹಿತಿ ಹೊಂದುವುದೇ ಅಧಿಕಾರಕ್ಕೆ ದಾರಿ ಎಂಬುದನ್ನು ಕಂಡುಕೊಂಡ ಅವರು ಅದರ ರಕ್ಷಕರಾಗಲು ಉತ್ಸುಕರಾದರು. ಇದರಿಂದ ಗಡಿಗಳ ಬೇಲಿ ಇನ್ನಷ್ಟು ಭದ್ರವಾಗಿ ಮತ್ತಷ್ಟು ನಿಷ್ಠುರವಾದಿಗಳಾದರು.ಪರಸ್ಪರ ಬದಲಾವಣೆಗೆ ಇದ್ದ ಅಡೆತಡೆಗಳು, ಜಯಿಸಿ ಬರಲು ಅಸಾಧ್ಯ ಎಂಬಂತಾದವು. ಕಾಲಕ್ರಮೇಣ ಭಾರತೀಯ ಸಮಾಜವು ಶ್ರೇಣಿ ಮತ್ತು ಹುಟ್ಟನ್ನು ಆಧರಿಸಿದ ವರ್ಗೀಕೃತ ವ್ಯವಸ್ಥೆಯಾಗಿ ವಿಭಜನೆಗೊಂಡಿತು.ಹಕ್ಕುಗಳನ್ನು ಅನುಭವಿಸುವ ಸಲುವಾಗಿ ಕೆಲವು ಪ್ರಮುಖರು ಹೊಸ ಹೊಸ ಕಾನೂನುಗಳನ್ನು ನಿರಂತರವಾಗಿ ಜಾರಿಗೆ ತರುತ್ತಾ ತಾರತಮ್ಯ ಮತ್ತು ನಿರಾಕರಣೆಯ ಮೂಲಕ ಅವುಗಳನ್ನು ನಿರ್ವಹಿಸುತ್ತಾ ಬಂದರು. ಅವಕಾಶಗಳು ಕ್ರಮೇಣ ಅದೃಶ್ಯವಾದವು. ಕಾಲದ ಬದಲಾವಣೆ ಹಾಗೂ ಇಂತಹ ವ್ಯವಸ್ಥೆಯ ದುರ್ಲಾಭ ಪಡೆದುಕೊಂಡ ಬ್ರಿಟಿಷರಂತಹ ಹೊರಗಿನ ಶಕ್ತಿಗಳಿಂದ ಬದಲಾವಣೆಗೆ ಹೆಚ್ಚು ಅವಕಾಶ ಇಲ್ಲದಂತಾಯಿತು. ಈ ಸಾಮಾಜಿಕ ರಚನೆಯ ಬದಲಾವಣೆಗೆ ಸುಧಾರಕರು ಯತ್ನಿಸಿದರಾದರೂ ಸಮಾಜವನ್ನು ಆರ್ಥಿಕ ಚೌಕಟ್ಟಿನ ಮೂಲಕ ಮುಖ್ಯವಾಹಿನಿಗೆ ತರಲಾಗದ ಬದಲಾವಣೆ ಅರ್ಥಹೀನ ಎಂಬುದನ್ನು ಕೆಲವರಷ್ಟೇ ಅರ್ಥ ಮಾಡಿಕೊಂಡರು.ಶುಭ ಸೂಚಕವಲ್ಲ: ದೇಶ ಈಗ ಅಸಾಧಾರಣವಾದ ಆರ್ಥಿಕ ಅಭಿವೃದ್ಧಿಯ ಅಂಚಿನಲ್ಲಿದೆ. ಒಂದೆಡೆ ಶೇ 8 ಮತ್ತು 9ರ ನಡುವೆ ನಾವು ಪ್ರಗತಿ ಸಾಧಿಸುತ್ತಿದ್ದರೆ, ಇನ್ನೊಂದೆಡೆ ಬಡತನದ ಮಟ್ಟ ಆತಂಕಕಾರಿ ಎನಿಸುವಷ್ಟರ ಮಟ್ಟಿಗೆ ಹೆಚ್ಚುತ್ತಿದೆ. ಸರ್ಕಾರ ಹೇಳುತ್ತಿರುವ ರೀತಿಯಲ್ಲಿ ಸಮಗ್ರ ಬೆಳವಣಿಗೆ ಎಲ್ಲಿದೆ? ಸಮಗ್ರ ಬೆಳವಣಿಗೆ ಎಂದರೆ ಕೇವಲ ಆರ್ಥಿಕ ಚೌಕಟ್ಟಿನೊಳಗೆ ಸೇರಿಕೊಳ್ಳುವುದು ಎಂದರ್ಥವೇ?

 

ಜ್ಞಾನ, ಆಡಳಿತ, ರಕ್ಷಣೆ, ವಾಣಿಜ್ಯ ಚೌಕಟ್ಟನ್ನು ಅದು ಒಳಗೊಳ್ಳುವುದು ಬೇಡವೇ? ಗ್ರಾಮ ಅಥವಾ ನಗರ ಎಲ್ಲೇ ವಾಸಿಸಲಿ ನಮ್ಮ ಎಲ್ಲ ನಾಗರಿಕರಿಗೂ ಅವಕಾಶಗಳನ್ನು ಸೃಷ್ಟಿಸಿದಾಗ, ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ಯಾವುದೇ ಅಡೆತಡೆಯಿಲ್ಲದೇ ಮುಕ್ತವಾಗಿ ಪರಿವರ್ತನೆಗೊಳ್ಳಲು ಸಾಧ್ಯವಾದಾಗ ಮಾತ್ರ ನಿಜವಾದ ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತದೆ.ಇದು ಆರ್ಥಿಕ ನೆರವಿನ ಮೂಲಕವಾಗಲೀ ಅಥವಾ ವಿಶೇಷ ಮೀಸಲಾತಿ ರೂಪದಲ್ಲಿ ಸಕಾರಾತ್ಮಕ ತಾರತಮ್ಯದ ಮೂಲಕವಾಗಲೀ ಜಾರಿಗೆ ಬರುವಂತೆ ಮಾಡಬೇಕಾದ ಹೊಣೆ ಸರ್ಕಾರದ್ದು. ಈ ವರ್ಗಗಳನ್ನು ಇನ್ನೂ ಹೊರಗಿಟ್ಟು ಅವಕಾಶಗಳನ್ನು ನಿರಾಕರಿಸುತ್ತಾ ಹೋಗುವುದು ಶುಭ ಸೂಚಕವಲ್ಲ ಎಂಬುದನ್ನು ಸಮಾಜದ ಇತರರೆಲ್ಲರೂ ಅರ್ಥ ಮಾಡಿಕೊಳ್ಳಬೇಕು.ಕೊಡು ಕೊಳ್ಳುವಿಕೆಯ ತತ್ವಗಳು ಮತ್ತು ಪರಸ್ಪರ ಅವಲಂಬನೆ ಕೇವಲ ಪಾರಿಭಾಷಿಕ ಪದಗಳಷ್ಟೇ ಅಲ್ಲ, ದೇಶದ ಬೆಳವಣಿಗೆಗೆ ಆಧಾರವಾಗಿರುವ ಮೂಲಭೂತ ಆಧಾರಸ್ತಂಭಗಳು. ಈ ಬಗೆಯ ಅವಕಾಶಗಳನ್ನು ಸೃಷ್ಟಿಸಿದಾಗ ಮತ್ತು ನಮ್ಮ ಕೌಶಲ ಯಾವ ವರ್ಗಕ್ಕೆ ಸರಿಹೊಂದುತ್ತದೆ ಎಂಬುದನ್ನು ನಾವೇ ನಿರ್ಧರಿಸುವಂತಾದಾಗ ಮಾತ್ರ ನಿಜವಾದ ಸಮಾನತೆ ಸಾಧ್ಯವಾಗುತ್ತದೆ.ಜಾತಿ ವ್ಯವಸ್ಥೆ ಕ್ರಮೇಣ ನಶಿಸಿ, ಜನ ತಾವೇನಾಗಬೇಕೆಂದು ಬಯಸುವರೋ ಅದಕ್ಕಾಗಿ ಸರ್ಕಾರದ ಇನಾಮು ಅಥವಾ ಬೆಂಬಲಕ್ಕೆ ಕಾಯದೆ ತಮ್ಮ ಘನತೆ, ಆತ್ಮಾಭಿಮಾನಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅದನ್ನು ಸಾಧಿಸಲು ಹಂಬಲಿಸುತ್ತಾರೆ. ಇದರಿಂದ `ಕೆಲವು ಶ್ರೇಷ್ಠರ~ ಮರ್ಜಿಗೆ ಒಳಗಾದ ಅಥವಾ ಅವರ ಮೇಲೆ ಅವಲಂಬಿತರಾದ ಭಾವನೆ ಅವರಲ್ಲಿ ಮೂಡುವುದಿಲ್ಲ.ಜ್ಞಾನ ಸಂಪಾದನೆ, ವ್ಯವಹಾರ, ರಾಜಕೀಯ, ಉದ್ದಿಮೆ ಎಲ್ಲ ವಿಷಯಗಳಲ್ಲೂ ಅವರು ಮುಕ್ತವಾಗಿ,ಸಂಪೂರ್ಣವಾಗಿ ತೊಡಗಿಕೊಳ್ಳಬಹುದು.ಇಂತಹ ಬೆಳವಣಿಗೆಯ ಅಗತ್ಯ ದೇಶಕ್ಕೆ ತೀವ್ರವಾಗಿ ಇದೆ. ಆಗಷ್ಟೇ ನಿಷ್ಠುರ ಜಾತಿ ವ್ಯವಸ್ಥೆ ತಂದೊಡ್ಡಿರುವ ದುರ್ಗತಿಯಿಂದ ಪಾರಾಗಿ ಸಮಂಜಸ, ಪಕ್ಷಪಾತ ರಹಿತ, ದಯಾಪರ ಮತ್ತು ಸಮಗ್ರವಾದ ಬೆಳವಣಿಗೆಗೆ ನಾವು ತೆರೆದುಕೊಳ್ಳಬಹುದು.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry