ವಾಸ್ತವಿಕ ನೆಲೆಯ ಕಾದಂಬರಿ ರಚನೆಯ ಸವಾಲು

7

ವಾಸ್ತವಿಕ ನೆಲೆಯ ಕಾದಂಬರಿ ರಚನೆಯ ಸವಾಲು

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:
ವಾಸ್ತವಿಕ ನೆಲೆಯ ಕಾದಂಬರಿ ರಚನೆಯ ಸವಾಲು

‘ಉತ್ತರಕಾಂಡ’ ಕಾದಂಬರಿಯು ವಾಲ್ಮೀಕಿ ರಾಮಾಯಣಕ್ಕೆ ತಮ್ಮ ಸೃಜನಶೀಲ ಪ್ರತಿಕ್ರಿಯೆಯೆಂದು ಎಸ್‌.ಎಲ್‌. ಭೈರಪ್ಪನವರು ಪ್ರಾರಂಭದಲ್ಲಿಯೇ ಹೇಳುತ್ತಾರೆ. ವಾಲ್ಮೀಕಿಯ ಕಾವ್ಯಕ್ಕೆ ಬೇರೆ ಬೇರೆ ದೇಶಗಳಲ್ಲಿ ಮತ್ತು ಭಾಷೆಗಳಲ್ಲಿ ಕಳೆದ ಎರಡು ಸಾವಿರ ವರ್ಷಗಳಲ್ಲಿ ಬಂದಿರುವ ಇಂತಹ ಸಹಸ್ರಾರು ಪ್ರತಿಕ್ರಿಯೆಗಳಲ್ಲಿ ಕೆಲವು ತಮಗೆ ಸ್ಥೂಲವಾಗಿ ತಿಳಿದಿದ್ದರೂ ತಾವು ಯಾವುದನ್ನೂ ಅಭ್ಯಾಸ ಮಾಡಿಲ್ಲ ಎಂದೂ ಅವರು ಸ್ಪಷ್ಟಪಡಿಸುತ್ತಾರೆ. ಭೈರಪ್ಪನವರ ಕಥನವು ರಾಮಾಯಣದಂತೆ ರೇಖಾತ್ಮಕವಾದ (ಲೀನಿಯರ್) ಕಥನಶೈಲಿಯನ್ನು ಅನುಸರಿಸಿಲ್ಲ. ವಾಲ್ಮೀಕಿ ಆಶ್ರಮದಲ್ಲಿ ಮಕ್ಕಳನ್ನು ಹಡೆದಿರುವ ಪರಿತ್ಯಕ್ತ ಸೀತೆ ತನ್ನ ದನಿಯಲ್ಲಿಯೇ ರಾಮಾಯಣದ ಕಥೆಯನ್ನು ಹೇಳುತ್ತಾಳೆ. ಇಲ್ಲಿನ ಕಥೆ ಅವಳ ಬದುಕಿಗೆ ಸಂಬಂಧಿಸಿದಂತೆ ಸಾಗುತ್ತ ನಡೆಯುತ್ತದೆ. ಸೀತೆಯು ತನಗೆ ತಾನೆ ಮಾತನಾಡಿಕೊಳ್ಳುತ್ತ ವಿವರಿಸಿಕೊಳ್ಳುವ ‘ಉತ್ತರಕಾಂಡ’ದ ಸ್ವಗತಧಾಟಿಯ ಕಥನಶೈಲಿ ಭೈರಪ್ಪನವರಿಗೆ ಹೊಸದೇನಲ್ಲ. ಇಂದಿಗೆ ಸರಿಯಾಗಿ ನಾಲ್ಕು ದಶಕಗಳ ಹಿಂದೆ ಅವರು ಬರೆದಿದ್ದ ಮಹಾಭಾರತ ಆಧಾರಿತ ‘ಪರ್ವ’ ಕಾದಂಬರಿಯೂ ಇದೇ ಮಾದರಿಯನ್ನು ಅನುಸರಿಸುತ್ತದೆ. ಮಹಾಭಾರತದ ಕಥನದ ವ್ಯಾಪ್ತಿ ದೊಡ್ಡದು ಮತ್ತು ಸಂಕೀರ್ಣವಾದುದು. ಹಾಗಾಗಿ ಅಲ್ಲಿನ ಕಥೆಯನ್ನು ‘ಉತ್ತರಕಾಂಡ’ದಂತೆ ಒಂದು ಕೇಂದ್ರ ಪಾತ್ರದ ಮೂಲಕ ಮಾತ್ರ ಹಿಡಿಯುವ ಪ್ರಯತವನ್ನು ಭೈರಪ್ಪನವರು ಮಾಡಿಲ್ಲ. ಬದಲಿಗೆ ದ್ರೌಪದಿ, ಸುಭದ್ರೆ, ಭೀಮ, ಅರ್ಜುನ, ಭೀಷ್ಮ, ಸಾತ್ಯಕಿ ಹೀಗೆ ಹಲವಾರು ಪಾತ್ರಗಳನ್ನು ವಿವಿಧ ಅಧ್ಯಾಯಗಳ ಕೇಂದ್ರದಲ್ಲಿಟ್ಟು ಅವರುಗಳ ಅನುಭವ, ಬದುಕಿನ ಕಥೆಗಳ ಮೂಲಕ ಕಥನವನ್ನು ಮುಂದೆ ಸಾಗಿಸುತ್ತಾರೆ.

ಹೀಗೆ ‘ಪರ್ವ’ದಲ್ಲಿ ಹಲವಾರು ಕಥನಕೇಂದ್ರಗಳಿವೆ, ನಿಜ. ಆದರೆ ಆ ಕಾದಂಬರಿಯ ಎಲ್ಲ ಪಾತ್ರಗಳ ಚಿಂತನೆಯ ಕ್ರಮ, ಬದುಕನ್ನು ಅರಿಯುವ ರೀತಿ, ತಾರ್ಕಿಕತೆ ಎಲ್ಲವೂ ಒಂದೇ ಬಗೆಯದು. ವಯಸ್ಸು, ಲಿಂಗ ಹಾಗೂ ಅನುಭವಗಳ ನೆಲೆಯಲ್ಲಿ ಇರುವ ಭಿನ್ನತೆಗಳು ಅಲ್ಲಿನ ಪಾತ್ರಗಳಿಗೆ ವಿಭಿನ್ನ ದೃಷ್ಟಿಕೋನಗಳನ್ನು ನೀಡುವುದಿಲ್ಲ. ಉದಾಹರಣೆಗೆ ದ್ರೌಪದಿ ಮತ್ತು ಸಾತ್ಯಕಿಯರಿಬ್ಬರೂ ಒಂದೇ ರೀತಿಯಲ್ಲಿ ಯೋಚನೆ ಮಾಡುತ್ತಾರೆ, ತಾವು ಎದುರಿಸುವ ಸನ್ನಿವೇಶಗಳಿಗೆ ಪ್ರತಿಕ್ರಿಯಿಸುತ್ತಾರೆ. ಈ ಬಗೆಯ ತಾರ್ಕಿಕ ಏಕತಾನತೆ, ಹಲವು ನಾವೀನ್ಯಗಳ ನಡುವೆಯೂ, ‘ಪರ್ವ’ದಲ್ಲಿ ನಾವು ಕಾಣುವ ದೌರ್ಬಲ್ಯ. ಇದಕ್ಕೆ ಕಾರಣ ಭೈರಪ್ಪನವರು ಮನುಷ್ಯ ಸ್ವಭಾವವನ್ನು ಅರ್ಥಮಾಡಿಕೊಳ್ಳುವ ರೀತಿಯೇ ಇರಬಹುದು. ಅವರ ಸೃಜನಶೀಲತೆಯ ಕೇಂದ್ರದಲ್ಲಿರುವ ಒಂದು ಪ್ರಮುಖ ಅಂಶವೆಂದರೆ ಸ್ವಹಿತಾಸಕ್ತಿ ಕೇಂದ್ರಿತ ತಾರ್ಕಿಕತೆ. ಅವರು ಮನುಷ್ಯರನ್ನು ಎಲ್ಲ ಕಾಲದಲ್ಲಿಯೂ ತಮ್ಮ ಹಿತಾಸಕ್ತಿಗಳ ಬಗ್ಗೆ ಮಾತ್ರ ಆಸಕ್ತರಾಗಿರುವವರು ಎಂದೇ ಗ್ರಹಿಸಿರುವಂತೆ ನನಗೆ ತೋರುತ್ತದೆ.

ಗಾತ್ರದಲ್ಲಿ ‘ಪರ್ವ’ದ ಅರ್ಧದಷ್ಟಿರುವ ‘ಉತ್ತರಕಾಂಡ’ದಲ್ಲಿ ಸೀತೆಯೊಬ್ಬಳೇ ಕಥನವನ್ನು ನಿರೂಪಿಸುತ್ತಾಳೆ. ಸ್ತ್ರೀ ಪಾತ್ರವೊಂದನ್ನು ಭೈರಪ್ಪನವರು ಕಥನದ ಕೇಂದ್ರದಲ್ಲಿರಿಸಿಕೊಂಡಿದ್ದಾರೆ. ಸೀತೆಯನ್ನು ‘ಕರ್ತೆ’ (ಏಜೆಂಟ್) ಆಗಿ ನೋಡುವ ಪ್ರಯತ್ನವನ್ನು ಸಹ ಅವರು ಮಾಡುತ್ತಾರೆ. ಸ್ತ್ರೀವಾದಿಯೆಂಬ ಹಣೆಪಟ್ಟಿಯನ್ನು ಭೈರಪ್ಪನವರಿಗೆ ಯಾರೂ ಕೊಡದಿರಬಹುದು. ಆದರೆ ಸೀತೆಯನ್ನು ಸ್ವಾಯತ್ತ, ಸದೃಢ ಮತ್ತು ಸ್ವತಂತ್ರ ಯೋಚನೆಯನ್ನು ಮಾಡುವ ಶಕ್ತಿಯಿರುವ ರಕ್ತ, ಮಾಂಸಗಳಿಂದ ಕೂಡಿದ ಮನುಷ್ಯೆಯಾಗಿ ಓದುಗನ ಮುಂದಿಡುವ ಪ್ರಯತ್ನವನ್ನು ಅವರು ಮಾಡುತ್ತಾರೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಹಾಗಾದರೆ ಭೈರಪ್ಪನವರು ಸೃಷ್ಟಿಸುವ ಸೀತೆ ಯಾರು? ಕಾದಂಬರಿಯ ಪ್ರಾರಂಭದಲ್ಲಿಯೇ ನಮಗೆ ತಿಳಿಯುವಂತೆ ತನ್ನ ಇಬ್ಬರು ಶಿಶುಮಕ್ಕಳಿಗೆ ಅಗತ್ಯವಿರುವ ಎದೆಹಾಲನ್ನು ಉತ್ಪಾದಿಸಲು ಹೆಣಗುತ್ತಿರುವ ಹೆಣ್ಣುಮಗಳು. ಗಂಡ ರಾಜ ರಾಮನಿಂದ ಪರಿತ್ಯಕ್ತಳಾಗಿ ವಾಲ್ಮೀಕಿಯ ಆಶ್ರಮದಲ್ಲಿ ವಾಸವಾಗಿದ್ದಾಳೆ. ಅವಳ ಜೊತೆಗೆ ಸುಕೇಶಿಯೆಂಬ ಸಖಿಯಿದ್ದಾಳೆ. ಸುಕೇಶಿ ಮಿಥಿಲೆಯವಳು ಮತ್ತು ಸೀತೆಯ ವಿವಾಹದ ನಂತರ ಅಯೋಧ್ಯೆಗೆ ಅವಳೊಡನೆ ಬಂದವಳು. ಅಯೋಧ್ಯೆಯಲ್ಲಿಯೇ ಮದುವೆಯಾಗಿ, ಸೀತೆಯ ವನವಾಸದ ಸಮಯದಲ್ಲಿ ಸುಕೇಶಿ ಅಲ್ಲಿಯೇ ತನ್ನ ಗಂಡ ಮಕ್ಕಳೊಡನೆ ಇದ್ದಳು. ಈಗ ಸೀತೆಗೆ ಮಕ್ಕಳಾದ ಸುದ್ದಿ ಕೇಳಿ ಅವಳನ್ನು ನೋಡಿಕೊಳ್ಳಲು ವಾಲ್ಮೀಕಿಯ ಆಶ್ರಮಕ್ಕೆ ಬಂದಿದ್ದಾಳೆ. ಆಶ್ರಮದಲ್ಲಿದ್ದರೂ ಸುಕೇಶಿ ಮತ್ತು ಅವಳ ಸಂಸಾರದ ಸದಸ್ಯರನ್ನು ಒಳಗೊಂಡ ಪ್ರತ್ಯೇಕ ಬದುಕು ಸೀತೆಗಿದೆ. ತಂಗಿ ಊರ್ಮಿಳೆ ಆಗಾಗ ಬಂದುಹೋಗುತ್ತಾಳೆ ಮತ್ತು ಒಂದಷ್ಟು ದವಸಧಾನ್ಯಗಳನ್ನು ತರುತ್ತಾಳೆ. 

ಭೈರಪ್ಪನವರ ಸೀತೆ ಎಲ್ಲ ಮಾನವಸಹಜ ಶಕ್ತಿ-ದೌರ್ಬಲ್ಯಗಳನ್ನು ಹೊಂದಿರುವ, ಕ್ಲೇಶಗಳನ್ನು ಅನುಭವಿಸುವ ಪಾತ್ರ. ಹಾಗಾಗಿಯೇ ತವರುಮನೆಯ ಹಿನ್ನೆಲೆಯ ಹೆಣ್ಣುಮಗಳೊಬ್ಬಳ ಸಖ್ಯ, ಮಾರ್ಗದರ್ಶನ ಹೊಸತಾಯಿಗೆ ಅಗತ್ಯವಿದೆ. ಹೀಗೆ ನಮಗೆ ಪರಿಚಿತಳಾಗುವ ಸೀತೆಯ ಬದುಕಿನ ಕಥನ ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾದುದೇನಲ್ಲ. ಜನಕರಾಜನ ಔರಸಪುತ್ರಿಯಾದ ಸೀತೆಯು ಶಿವಧನುಸ್ಸನ್ನು ಮುರಿದ ರಾಮನನ್ನು ಮದುವೆಯಾದಳು. ರಾಮ-ಲಕ್ಷ್ಮಣರೊಡನೆ ವನವಾಸದಲ್ಲಿದ್ದಾಗ ರಾವಣನಿಂದ ಅಪಹೃತಳಾದಳು. ರಾವಣನನ್ನು ರಾಮ ಯುದ್ಧದಲ್ಲಿ ಸೋಲಿಸಿ, ಕೊಂದ ನಂತರ ಅವನಿಂದ ಮೊದಲ ಬಾರಿಗೆ ಪರಿತ್ಯಕ್ತಳಾಗಿ, ಅಗ್ನಿಪ್ರವೇಶ ಮಾಡಿದಳು. ಆಯೋಧ್ಯೆಗೆ ವಾಪಸಾದ ಬಳಿಕ, ಪ್ರಜಾನಿಂದನೆಯ ಕಾರಣದಿಂದ ರಾಮನಿಂದ ಎರಡನೆಯ ಬಾರಿಗೆ ಪರಿತ್ಯಕ್ತಳಾಗಿ ವಾಲ್ಮೀಕಿಯ ಆಶ್ರಮದಲ್ಲಿ ಆಶ್ರಯ ಪಡೆದಳು. ಅಲ್ಲಿಯೇ ಲವ-ಕುಶರಿಗೆ ಜನ್ಮ ನೀಡಿದಳು. ಆದರೆ ರಾಮಾಯಣದ ಸೀತೆಯನ್ನು ಹಸಿವು-ನೀರಡಿಕೆಯಾಗುವ, ಸುಕೇಶಿಯಂತಹ ತವರಿನಿಂದ ಬಂದ ಸೇವಕಿಯ ಅಗತ್ಯವಿರುವ ಮನುಷ್ಯೆಯಾಗಿ ನಾವು ನೋಡುವುದಿಲ್ಲ. ರಾಮಾಯಣ ಮತ್ತು ಮಹಾಭಾರತದಂತಹ ಕಥನಗಳಿಗೆ ನಮ್ಮ ವಾಸ್ತವವನ್ನು ಮರೆಯುವಂತೆ ಮಾಡುವ ಮಾಂತ್ರಿಕ ಗುಣವಿರುತ್ತದೆ. ‘ಉತ್ತರಕಾಂಡ’ವು ಸಾಹಿತ್ಯ, ಕಲೆಗಳಿಗಿರುವ ಇಂತಹ ಸಾಧ್ಯತೆಯನ್ನು ಕಿತ್ತುಹಾಕುವುದರಲ್ಲಿ ಉತ್ಸುಕವಾಗಿದೆ. ಅದಕ್ಕಾಗಿಯೇ ಇಲ್ಲಿ ಪುಷ್ಪಕವಿಮಾನವಿಲ್ಲ. ಸೀತೆಯನ್ನು ಹೊತ್ತ ರಾಕ್ಷಸರು ಲಂಕೆಯ ತನಕ ಓಡುತ್ತಾರೆ.

ವಾಲ್ಮೀಕಿಯ ರಾಮಾಯಣವನ್ನು ಭೈರಪ್ಪನವರು ಹಟ ಹಿಡಿದಂತೆ ವಾಸ್ತವದ ಸಂಭವನೀಯತೆಯ ನೆಲೆಯಲ್ಲಿ ತಾರ್ಕಿಕ ವಿಶ್ಲೇಷಣೆಗೆ ಒಡ್ಡುತ್ತಾರೆ. ಸೀತೆಯ ಕಥನವನ್ನು ಮುನ್ನಡೆಸುವುದು ಇಂತಹ ವಿಶ್ಲೇಷಣೆಯೇ. ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ. ಮಕ್ಕಳನ್ನು ಆಗತಾನೆ ಹೆತ್ತ ಸೀತೆಗೆ ವಾಲ್ಮೀಕಿ ಆಶ್ರಮದಲ್ಲಿ ದೊರಕುವ ಮಮತೆ, ಆರೈಕೆಗಳೇ ಸಾಕೆ ಇಲ್ಲವೆ ತವರುಮನೆಯವರಿಂದ ಮಾತ್ರ ದೊರಕುವ ಹೆಚ್ಚಿನ ಪ್ರೀತಿ, ನೆಮ್ಮದಿಗಳು ಬೇಕೆ? ಸುಕೇಶಿಯ ಪಾತ್ರ ಸೃಷ್ಟಿಯಾಗುವುದು ಇಂತಹ ತಾರ್ಕಿಕತೆಯ ಕಾರಣದಿಂದಲೇ. ಸೀತೆಯ ಬದುಕಿನ ಇತರ ಘಟ್ಟಗಳನ್ನು ಸಹ ಇಂತಹ ವಿಶ್ಲೇಷಣೆಗೆ ಭೈರಪ್ಪನವರು ಒಡ್ಡುತ್ತಾರೆ. ಯಾಗ ಮಾಡಲೋಸುಗ ಭೂಮಿಯನ್ನು ಉಳುತ್ತಿದ್ದ ಜನಕರಾಜನಿಗೆ ದೊರಕಿದ ಸೀತೆಯ ಹುಟ್ಟಿನ ಬಗ್ಗೆ ಯಾರೂ ಪ್ರಶ್ನೆಗಳನ್ನು ಕೇಳಲಿಲ್ಲವೇ? ಈ ಪ್ರಶ್ನೆ ದಶರಥನ ಮನಸ್ಸಿನಲ್ಲಿಯೇ ಮೂಡಿತು. ಹಾಗಾಗಿ ಅವನು ಸೀತೆಯನ್ನು ತನ್ನ ಸೊಸೆಯನ್ನಾಗಿಸಿಕೊಳ್ಳಲು ನಿರಾಕರಿಸಿದಾಗ, ಸ್ವತಃ ರಾಮನೇ ಮಧ್ಯಪ್ರವೇಶಿಸುತ್ತಾನೆ: ವಿಶ್ವಾಮಿತ್ರರ ಸೂಚನೆಯಂತೆ ತಾನು ಶಿವಧನುಸ್ಸನ್ನು ಮುರಿದ ನಂತರ ಸೀತೆಯನ್ನು ವರಿಸಿದಂತಾಯಿತು. ಏಕಪತ್ನಿವ್ರತಸ್ಥನಾದ ತಾನು ಬೇರೆಯ ಹುಡುಗಿಯನ್ನು ಮದುವೆಯಾಗುವ ಪ್ರಶ್ನೆಯೇ ಇಲ್ಲ ಎಂದು ವಾದಿಸಿ, ದಶರಥನನ್ನು ಒಪ್ಪಿಸುತ್ತಾನೆ. ಭೈರಪ್ಪನವರ ಕಥನದಲ್ಲಿ ಕರ್ತವ್ಯ ಮತ್ತು ಧರ್ಮಪ್ರಜ್ಞೆಗಳು ರಾಮನನ್ನು ಕೇವಲ ಸೀತೆಯನ್ನು ತ್ಯಜಿಸುವಂತೆ ಮಾಡಲಿಲ್ಲ. ಅದಕ್ಕೂ ಮೊದಲು ರಾಮ-ಸೀತೆಯರ ಮದುವೆಗೂ ದಾರಿ ಮಾಡಿಕೊಡುತ್ತವೆ. ಕುತೂಹಲದ ವಿಷಯವೆಂದರೆ ರಾಮನ ಮೇಲೆ ಸೀತೆಗೆ ಪ್ರೀತಿ ಹುಟ್ಟುವುದು ಸಹ ಈ ಕಾರಣದಿಂದಲೇ. 

ಇಂತಹ ವಿಶ್ಲೇಷಣೆಯೇ ಕಾದಂಬರಿಗೊಂದು ಆಂತರ್ಯವನ್ನು, ಮಾನಸಿಕ (ಸೈಕಲಾಜಿಕಲ್) ಅಂತರಾಳವನ್ನು ಕಟ್ಟಿಕೊಡುವ ಕೆಲಸವನ್ನು ಮಾಡುತ್ತದೆ. ಸೀತೆ ರಾಮನನ್ನು ಪ್ರೀತಿಸಿದ್ದಳೆ? ಯಾಕೆ, ಯಾವಾಗ? ಅವಳನ್ನು ಎರಡನೆಯ ಬಾರಿಗೆ ತ್ಯಜಿಸಿದ ಮೇಲೆ ಅವಳು ಹೊಸಬದುಕನ್ನು ಕಟ್ಟಿಕೊಳ್ಳಲು ಯಾವ ಆಯ್ಕೆಯನ್ನು ಮಾಡಿದಳು? ಸೀತೆಯ ಸಂಬಂಧ ಲಕ್ಷ್ಮಣ, ಊರ್ಮಿಳೆ, ಕೌಸಲ್ಯೆ ಇತ್ಯಾದಿ ಪಾತ್ರಗಳೊಡನೆ ಹೇಗಿತ್ತು? ಹೀಗೆ ಸೀತೆಯನ್ನು ವ್ಯಕ್ತಿಯಾಗಿ ನೋಡುವ ಇಂತಹ ಪ್ರಶ್ನೆಗಳು ವಾಲ್ಮೀಕಿಯನ್ನು ಕಾಡಿದ್ದವೊ ಇಲ್ಲವೊ. ಆದರೆ ಆಧುನಿಕ ಕಥನಗಳಲ್ಲಿ, ಅದರಲ್ಲೂ ಕಾದಂಬರಿ ಪ್ರಕಾರದಲ್ಲಿ, ಇಂತಹ ಪ್ರಶ್ನೆಗಳು ವಾಸ್ತವಿಕ ನೆಲೆಯ ನಿರ್ದಿಷ್ಟ ಉತ್ತರಗಳನ್ನು ಬೇಡುತ್ತವೆ.

‘ಉತ್ತರಕಾಂಡ’ದಲ್ಲಿ ಸೀತೆ ಕೃಷಿಕಳಾಗಲು ನಿರ್ಧರಿಸುತ್ತಾಳೆ. ತನ್ನ ಚಾರಿತ್ರ್ಯವನ್ನು ಸೀತೆ ಮಾಯಾಮೃಗ ಪ್ರಸಂಗದಲ್ಲಿ ಶಂಕಿಸಿದ ನಂತರ ಲಕ್ಷ್ಮಣ ಜೀವನಪರ್ಯಂತ ಅವಳೊಡನೆ ಮಾತು ಬಿಡುತ್ತಾನೆ.  ವಾಸ್ತವಿಕ ನೆಲೆಯ ಕಾದಂಬರಿಯನ್ನು ರಚಿಸುವಾಗಿನ ಸವಾಲುಗಳನ್ನು ಭೈರಪ್ಪನವರು ಎದುರಿಸುವ ರೀತಿಯನ್ನು ಗಮನಿಸಲು ‘ಉತ್ತರಕಾಂಡ’ದ ಮತ್ತೊಂದು ಉದಾಹರಣೆಯನ್ನು ಪರಿಗಣಿಸಿ. ಮೊದಲಿಗೆ, ಕೈಕೇಯಿ ಮತ್ತು ದಶರಥರ ಸಂಬಂಧ. ಮಕ್ಕಳು ಬೇಕೆಂದು ಹಂಬಲಿಸುತ್ತಿದ್ದ ದಶರಥ ಕೈಕೇಯಿಯನ್ನು ಮದುವೆಯಾಗುವಾಗ, ಅವಳ ಮಗನನ್ನೇ ತನ್ನ ಉತ್ತರಾಧಿಕಾರಿಯಾಗಿ ಮಾಡುವುದಾಗಿ ವಚನ ನೀಡಿರುತ್ತಾನೆ. ಮಕ್ಕಳಾದ ಮೇಲಂತೂ, ಕೌಸಲ್ಯ ಮತ್ತು ಸುಮಿತ್ರೆಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಅವರಿಗೆ ಜೀವನಕ್ಕೆ ಅಗತ್ಯವಾದ ವಸ್ತುಗಳನ್ನೂ ನೀಡುವುದಿಲ್ಲ. ಕೌಸಲ್ಯೆಯ ತವರುಮನೆಯವರು ಉಡುಗೊರೆಯಾಗಿ ನೀಡಿದ್ದ 50 ಹಳ್ಳಿಗಳ ಉತ್ಪನ್ನದಿಂದ ಅವರಿಬ್ಬರ (ಹಾಗೂ ರಾಮ-ಲಕ್ಷ್ಮಣರ ಬಾಲ್ಯದ) ಬದುಕು ಸಾಗುತ್ತದೆ. ತನಗಿಂತ ತುಂಬ ಕಿರಿಯಳಾದ, ತುಂಬ ಸುಂದರಿಯಾದ ಹೆಂಡತಿಯ ಪ್ರಭಾವ ದಶರಥನ ಮೇಲೆ ಹೇಗಾಗಬಹುದು ಎನ್ನುವ ಪ್ರಶ್ನೆಯು ಇಂತಹ ವಿವರಣೆಗೆ ದಾರಿ ಮಾಡಿಕೊಡುತ್ತದೆ.

ಮಹಾಕಾವ್ಯ-ಪುರಾಣಗಳನ್ನು ಹೀಗೆ ವಾಸ್ತವವಾದಿ ಸಾಹಿತ್ಯಿಕ ಕಲ್ಪನೆಗೆ ಗುರಿಪಡಿಸುವುದು ಹಾಗೂ ಅಲ್ಲಿನ ಪಾತ್ರಗಳಿಗೆ ಒಂದು ಅಂತರಂಗದ ಕಥನವನ್ನು ಒದಗಿಸುವುದು ಓದುಗನಿಗೆ ವಿನೂತನ ಅನುಭವವನ್ನು ನೀಡುತ್ತದೆ ಎನ್ನುವುದು ನಿಜ. ಆದರೆ ವಾಸ್ತವಿಕತೆಯ ಭಾರ ರಾಮಾಯಣದ ಮಾಂತ್ರಿಕತೆಯನ್ನೂ, ನೈತಿಕ ಸಾಧ್ಯತೆಗಳನ್ನೂ ಹೊಸಕಿಬಿಡುತ್ತದೆ. ‘ಉತ್ತರಕಾಂಡ’ದ ಎಲ್ಲ ಪಾತ್ರಗಳು ಸ್ವಹಿತಾಸಕ್ತಿಯ ಕೇಂದ್ರದಿಂದ, ಸಂಕುಚಿತ ನೆಲೆಯಿಂದ ಮಾತ್ರ ಯೋಚಿಸುವಂತೆ ತೋರುತ್ತದೆ. ಹಾಗಾಗಿ ಅಲ್ಲಿನ ಪಾತ್ರಗಳು ಹಾಗೂ ಸನ್ನಿವೇಶಗಳಿಗಿರುವ ಉದಾತ್ತತೆಯ ಸಾಧ್ಯತೆಗಳು ಕಡಿಮೆಯಾಗುತ್ತ ಹೋಗುತ್ತವೆ. ನನ್ನ ಮೇಲಿನ ಮಾತಿಗೆ ಅಪವಾದವೆಂದು ಧರ್ಮವನ್ನು ಪರಿಪಾಲಿಸುವ ರಾಮನನ್ನೇ ಉದಾಹರಣೆಯಾಗಿ ಕೊಡಬಹುದು. ಆದರೆ ರಾಮ-ಲಕ್ಷ್ಮಣರೂ ಸೇರಿದಂತೆ ಇಲ್ಲಿನ ಎಲ್ಲ ಪಾತ್ರಗಳು ಸಹ ದುರ್ಬಲವಾಗಿವೆಯೇ ಚಿತ್ರಿತವಾಗಿವೆ. ಮನುಷ್ಯನ ವಾಸ್ತವ ಇದೇನೆ ಎಂದು ಅವರ ಸಮರ್ಥಕರು ವಾದಿಸಬಹುದು. ಅಂತಹ ವಾಸ್ತವವಾದಿ ನೆಲೆಯಿಂದಲೇ ಭೈರಪ್ಪನವರ ಸೃಜನಶೀಲತೆ ಹುಟ್ಟುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry