ವಿದಾಯ

7

ವಿದಾಯ

Published:
Updated:
ವಿದಾಯ

ನಮ್ಮನ್ನು ಬಹಳಕಾಲ ಆವರಿಸಿಕೊಂಡ, ತೀವ್ರವಾಗಿ ಕಾಡಿದ, ಅಸಾಮಾನ್ಯ ಕಾಡುನಾಯಿಗಳಲ್ಲಿ ಸೋಲೊ ಸಹ ಒಂದು. ಮೂರು ವರ್ಷ ತುಂಬುವ ಹೊತ್ತಿಗಾಗಲೆ ಸೋಲೊ ಅನೇಕ ಕಠಿಣ ಸವಾಲು ಗಳನ್ನೆದುರಿಸಿ, ಪವಾಡಸದೃಶವಾಗಿ ಬದುಕು ಳಿದಿತ್ತು. ಸೋಲೊ ಮರಿಯಾಗಿದ್ದಾಗ ಅದರ ಗುಂಪು ಬೇಟೆಯಾಡಿ ಸಂಪಾದಿಸುತ್ತಿದ್ದ ಆಹಾರ ವನ್ನು ಮನುಷ್ಯರು ಕದ್ದೊಯ್ಯುವ ಪರಿಪಾಠ ಅವ್ಯಾಹತವಾಗಿತ್ತು. ಹಾಗಾಗಿ ಅದು ತನ್ನ ಜೀವಮಾನವಿಡೀ ಮನುಷ್ಯಕುಲವನ್ನು ಸಂಶಯದಿಂದಲೇ ನೋಡುತ್ತಿತ್ತು. ಅಲ್ಲದೆ, ಅದು ಬಾಲ್ಯ ದಲ್ಲಿ ಬಹಳ ಕಠಿಣ ಬದುಕನ್ನು ಎದುರಿಸಿದ್ದರಿಂದ, ನಂಬಲಾಗದಷ್ಟು ಚತುರನಾಗಿ ಬೆಳೆದಿತ್ತು.

ಸೋಲೊ ಹುಟ್ಟಿದ್ದು ಅತ್ಯಂತ ಪ್ರಬಲ ಕಾಡುನಾಯಿಗಳ ತಂಡದಲ್ಲಿ. ಸುಮಾರು ನೂರು ಚದರ ಕಿಲೋಮೀಟರ್ ವಿಸ್ತೀರ್ಣದ ಸಂಪದ್ಭರಿತ ಕಾಡನ್ನು ಆ ತಂಡ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿತ್ತು. ಆದರೆ ಆ ಗುಂಪು ಕೆಲವು ಅಪಾಯಕಾರಿ ಅಭ್ಯಾಸಗಳನ್ನು ಮೈಗೂಡಿಸಿಕೊಂಡಿತ್ತು. ಮುಂದೊಮ್ಮೆ ಆ ಸಾಮ್ರಾಜ್ಯ ಪತನಕ್ಕೆ ಕೂಡ ಈ ಅಭ್ಯಾಸಗಳೇ ಕಾರಣವಾದವು.

ಕಾಡಂಚಿನ ಗುಡ್ಡದ ನೆತ್ತಿಯಲ್ಲಿದ್ದ ಒಂದು ಹಾಸುಗಲ್ಲು, ಆ ಗುಂಪಿನ ನೆಚ್ಚಿನ ತಾಣಗಳಲ್ಲೊಂದಾ ಗಿತ್ತು. ಆ ಗುಡ್ಡದ ಮುಂದಿನ ಕಣಿವೆಯಲ್ಲಿದ್ದ ವಿಸ್ತಾರವಾದ ಹುಲ್ಲಿನ ಮೈದಾನದಲ್ಲಿ ಹಳ್ಳಿಯ ದನಕರುಗಳು ಮೇಯಲು ಬರುತ್ತಿದ್ದವು. ಬಹುಶಃ ಗುಡ್ಡದ ಮೇಲಿನಿಂದ ಗಮನಿಸುತ್ತಿದ್ದ ಸೋಲೊನ ಪೂರ್ವಜನೊಬ್ಬನಿಗೆ, ಕೆಳಗಿನ ಮೈದಾನದಲ್ಲಿ ಅಲೆದಾಡುತ್ತಿದ್ದ ಆ ದನಕರುಗಳು ಸುಲಭದ ತುತ್ತಿನಂತೆ ಕಂಡಿರಬಹುದು. ಕ್ರಮೇಣ ಇದೇ ಚಿಂತನೆ ಅವುಗಳ ಆಹಾರ ಸಂಸ್ಕೃತಿಯ ಭಾಗವಾಗಿ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಾಗಿ ಬಂದಿರಬಹುದು. ನಾವು ಅಧ್ಯಯನ ನಡೆಸುತ್ತಿದ್ದ ಬೇರೆ ಗುಂಪಿನ ಕಾಡುನಾಯಿಗಳಲ್ಲಿ ಇಂತಹ ಅಭ್ಯಾಸವಿರಲಿಲ್ಲ. ಕಾಡಿನಲ್ಲಿ ಆಕಸ್ಮಿಕವಾಗಿ ದನಕರು, ಮೇಕೆಗಳು ಎದುರಾದಾಗ ಕೂಡ ಅವು ಬದಿಗೆ ಸರಿದು ತಮ್ಮ ದಾರಿ ಹಿಡಿದುಹೋಗುತ್ತಿದ್ದವು.

ಸೋಲೊ ತಂಡ ಆಗೊಮ್ಮೆ ಈಗೊಮ್ಮೆ ಕರುಗಳನ್ನು ಬೇಟೆಯಾಡುತ್ತಿದ್ದುದು, ಹಳ್ಳಿಗರೊಂದಿಗೆ ಸಂಘರ್ಷಕ್ಕೆ ಕಾರಣವಾಗಿತ್ತು. ಯಾವುದು ಸ್ವಾಭಾವಿಕ ಆಹಾರ, ಯಾವುದು ಅಸ್ವಾಭಾ ವಿಕ, ಯಾವುದು ಕಳ್ಳತನ, ಯಾವುದು ಅಲ್ಲ ಎಂಬುದರ ಮಧ್ಯೆ ಇರುವುದು ಒಂದು ತೆಳುವಾದ ಗೆರೆಮಾತ್ರ. ಈ ನಿಷ್ಕಪಟ ಬೇಟೆಗಾರರಿಗೆ ಕಾಡುಜೀವಿ ಮತ್ತು ಸಾಕುಜೀವಿಗಳ ನಡುವಣ ವ್ಯತ್ಯಾಸ ಅರಿಯದೆ ಹೋಯಿತು. ಜಿಂಕೆ ಅಥವಾ ಸಾಕುಪ್ರಾಣಿ, ಯಾವುದನ್ನು ಹಿಡಿದರೂ ಜನರು ಬೆನ್ನಟ್ಟಿ, ಓಡಿಸಿ ಅವುಗಳ ಬೇಟೆಯನ್ನು ಕದ್ದೊಯ್ಯುತ್ತಿದ್ದುದು ಸಹ ಇವುಗಳಿಗೆ ಗೊಂದಲವನ್ನುಂಟು ಮಾಡುತ್ತಿತ್ತು.

ಮುಂದೊಂದು ದಿನ, ಯಾರೋ ಅವುಗಳ ಬೇಟೆಗೆ ವಿಷ ಸೇರಿಸಿ ಇಡೀ ಗುಂಪನ್ನು ಹತ್ಯೆಗೈದಿದ್ದರು. ಅದೃಷ್ಟವೋ ಕಾಕತಾಳಿಯವೋ ಸೋಲೊ ಮಾತ್ರ ಆ ದುರ್ಘಟನೆಯಲ್ಲಿ ಬದುಕುಳಿದಿತ್ತು.

ಸೋಲೊಗೆ ಮೂರು ವರ್ಷ ತುಂಬುವಷ್ಟರಲ್ಲಿ ತನ್ನ ಸಂಗಾತಿಯೊಂದಿಗೆ ಐದು ತಿಂಗಳು ಪ್ರಾಯದ ಎಂಟು ಮರಿಗಳನ್ನು ಕಟ್ಟಿಕೊಂಡು ಓಡಾಡುತ್ತಿತ್ತು. ಜಾಣ್ಮೆಯಿಂದ ತನ್ನ ಕುಟುಂಬವನ್ನು ಸುರಕ್ಷಿತವಾಗಿ ಮುಂದಿನ ವರ್ಷಕ್ಕೂ ಮುನ್ನಡೆಸಿತ್ತು. ಹೀಗೆ ಎರಡೇ ಕಾಡುನಾಯಿಗಳು ಬೇಟೆಯಾಡಿ ಮರಿಗಳನ್ನು ರಕ್ಷಿಸಿ ಪೋಷಿಸಿಕೊಂಡು ಹೋಗುವುದು ಅಸಾಧಾರಣ ಸಾಧನೆಯೇ ಸರಿ.

ದಿನದಿಂದ ದಿನಕ್ಕೆ ಪ್ರಬುದ್ಧತೆಯನ್ನು ತೋರುತ್ತಿದ್ದ ಸೋಲೊ, ಹೊಸಹೊಸ ತಂತ್ರಗಳನ್ನು, ಕೌಶಲ್ಯಗಳನ್ನು ಕರಗತಮಾಡಿಕೊಂಡಿತ್ತು. ಅದು ಪ್ರದರ್ಶಿಸಿಸುತ್ತಿದ್ದ ಎಷ್ಟೋ ವಿಶೇಷಗಳನ್ನು ನಾವು ಬೇರೆ ಕಾಡುನಾಯಿಗಳಲ್ಲಿ ಗಮನಿಸಿರಲಿಲ್ಲ. ಈ ಹೊಸವಿದ್ಯೆಗಳನ್ನೆಲ್ಲ ಅದು ತಾನಾಗಿಯೇ ಕಲಿತಿತ್ತೋ ಅಥವ ಸಣ್ಣ ವಯಸ್ಸಿನಲ್ಲೇ ಬೇರಾವುದೋ ಕಾಡುನಾಯಿಯಿಂದ ಕಲಿತಿತ್ತೋ ನಮಗೆ ತಿಳಿಯಲಿಲ್ಲ. ಕೆಲವೊಮ್ಮೆ, ಬೀಸುತ್ತಿದ್ದ ಗಾಳಿಯ ಜೊತೆಗೇ ಶಿಕಾರಿ ಮಾಡಬೇಕಾದ ಸಂದರ್ಭ ಬಂದಲ್ಲಿ, ಸೋಲೊ ಬರುತ್ತಿರುವುದು ಜಿಂಕೆಗಳಿಗೆಲ್ಲಾ ತಿಳಿದು ಮೊದಲೇ ಪಲಾಯನ ಮಾಡಿರುತ್ತಿದ್ದವು. ಆದರೆ, ಹಲವು ಅನುಭವಿ ಜಿಂಕೆಗಳು ಸ್ವಲ್ಪ ದೂರದ ಪೊದೆಗಳ ಹಿಂದೆ ಕಾಡುನಾಯಿಗಳ ಕಣ್ಣಿಗೆ ಬೀಳದಂತೆ ಅಡಗಿ ನಿಲ್ಲುತ್ತಿದ್ದವು. ಆಗ, ಬೇಟೆಯಲ್ಲಿ ತನಗೆ ಆಸಕ್ತಿಯೇ ಇಲ್ಲವೆಂಬಂತೆ ನಟಿಸುತ್ತಾ ಸೋಲೊ ಅವುಗಳನ್ನು ದಾಟಿ ಬಹುದೂರ ಸಾಗಿ ವಿಶ್ರಮಿಸುತ್ತಿತ್ತು. ಸುಮಾರು ಅರ್ಧ ಗಂಟೆಯ ನಂತರ ಗಾಳಿಗೆ ವಿರುದ್ಧ ದಿಕ್ಕಿನಿಂದ ಹಿಂದಿರುಗಿ, ಜಿಂಕೆಗಳಿಗೆ ಯಾವುದೇ ಸುಳಿವೂ ಸಿಗದಂತೆ ದಾಳಿ ನಡೆಸುತ್ತಿತ್ತು. ಕಾಣದ ಬೇಟೆಗೆ, ಸೋಲೊ ಹೆಣೆಯುತ್ತಿದ್ದ ಇಂತಹ ಅನೇಕ ತಂತ್ರ ಮತ್ತು ಲೆಕ್ಕಾಚಾರಗಳು ನಮ್ಮನ್ನು ಚಕಿತಗೊಳಿಸುತ್ತಿದ್ದವು.

ಮರುವರ್ಷ ಕಾಡುನಾಯಿಗಳು ಮರಿಮಾಡುವ ಸಮಯ ಸಮೀಪಿಸಿದಾಗ ಸೋಲೊ ದೈಹಿಕವಾಗಿ ಉತ್ತುಂಗಸ್ಥಿತಿಯಲ್ಲಿತ್ತು. ಕಳೆದವರ್ಷದ ಮೂರು ಮರಿಗಳು ಉಳಿದುಕೊಂಡಿದ್ದವು. ಅವು ಅನನುಭವಿ ಗಳಾಗಿದ್ದರೂ ಸಹ, ಸೋಲೊ ತನ್ನ ಬುದ್ಧಿವಂತಿಕೆಯಿಂದ ಅವುಗಳ ಉಪಸ್ಥಿತಿಯನ್ನೇ ಬಂಡವಾಳವನ್ನಾಗಿಸಿಕೊಂಡು ತನ್ನ ಮುಂದಿನ ಸಂತತಿ ಬೆಳೆಸಲು, ಪೋಷಿಸಲು ಯಶಸ್ವಿಯಾ ಯಿತು. ನಂತರದ ಎರಡು ವರ್ಷಗಳಲ್ಲಿ ಸೋಲೊನ ಗುಂಪು ಬಹಳ ಬಲಶಾಲಿಯಾದ ತಂಡವಾಗಿ ರೂಪು ಗೊಂಡಿತು. ಅವುಗಳ ಸಂಖ್ಯೆ ಹನ್ನೆರಡ ರಿಂದ ಹದಿನಾರರ ಮಧ್ಯೆ ಏರಿಳಿಕೆಯಾಗುತ್ತಿತ್ತು.

ಇದೇ ಸಮಯದಲ್ಲಿ ನಗರದ ಹಲವಾರು ಸ್ಥಿತಿವಂತರು ಕಾಡಂಚಿನಲ್ಲಿ ಬಂದು ನೆಲೆಸುವ ಸಂಸ್ಕೃತಿ ಆರಂಭವಾಗಿತ್ತು. ಅವರು ಅತಿಥಿ ಗೃಹಗಳನ್ನು, ರೆಸಾರ್ಟ್‌ಗಳನ್ನು ನಿರ್ಮಿಸತೊಡಗಿದ್ದರು. ಅಥವ ಪ್ರಕೃತಿಯೊಡನೆ ಒಂದಾಗಲೆಂದು ಬಂದವರು, ಕಾಡುಪ್ರಾಣಿಗಳಿಗೆ ಹೆದರಿ ತಮ್ಮ ಸುತ್ತಲೂ ಗೋಡೆ ಕಟ್ಟಿಕೊಳ್ಳುತ್ತಿದ್ದರು. ಬರುವವರು ತಮ್ಮ ಭ್ರಮೆ, ಖಯಾಲಿ, ಪೂರ್ವಗ್ರಹಗಳಲ್ಲದೆ ತಮ್ಮ ಮುದ್ದಿನ ಸಾಕುಪ್ರಾಣಿಗಳನ್ನು ಕೂಡ ಜೊತೆಯಲ್ಲಿ ಕರೆತರುತ್ತಿದ್ದರು. ಈ ಬೆಳವಣಿಗೆಯಿಂದಾಗಿ, ಕಾಡಿನ ಅಕ್ಕಪಕ್ಕದ ರಸ್ತೆಗಳಲ್ಲಿ, ಸಾಗುವಳಿ ಭೂಮಿಗಳಲ್ಲಿ ಇದ್ದಕ್ಕಿದ್ದಂತೆ ಕುದುರೆ, ಲ್ಯಾಬ್ರಡಾರ್, ಡಾಬರ್‌ಮನ್, ಗ್ರೇಟ್ ಡೆನ್‌ ಗಳೆಲ್ಲಾ ಕಾಣತೊಡಗಿದವು. ಇವುಗಳೆಲ್ಲಾ ಅನ್ಯ ಗ್ರಹದ ವಿಚಿತ್ರ ಜೀವಿಗಳಂತೆ ಕಾಣುತ್ತಿದ್ದವೇನೊ, ಹಾಗಾಗಿ ಅವುಗಳ ಬಗ್ಗೆ ಕಾಡುಪ್ರಾಣಿಗಳಿಗೆ ಅದಮ್ಯ ಕುತೂಹಲವಿತ್ತು.

ಒಂದು ದಿನ ಮುಂಜಾನೆ, ಸೋಲೊನ ಗುಂಪು ಕಾಡಿನ ಮತ್ತೊಂದು ಭಾಗವನ್ನು ಸೇರಲು ಅಡ್ಡದಾರಿ ಹಿಡಿದು ಸಾಗುವಳಿ ಭೂಮಿಯಲ್ಲಿ ಸಾಗಿತ್ತು. ಪಾಳು ಬಿದ್ದಿದ್ದ ಆ ಭೂಮಿಯ ಮಧ್ಯಭಾಗದಲ್ಲಿ ದೈತ್ಯಾಕಾರದ ಡಾಬರ್‌ಮನ್ ನಾಯಿಯೊಂದು ಹಳ್ಳಿಯ ನಾಯಿಗಳೊಡನೆ ಆಟ ವಾಡು ತ್ತಿತ್ತು. ಸ್ವಲ್ಪ ದೂರದಿಂದಲೇ ಇವುಗಳನ್ನು ನೋಡಿದ ಸೋಲೊ ತಂಡ, ಒಂದು ಕ್ಷಣ ಅಲ್ಲೇ ನಿಂತು ಎಲ್ಲವನ್ನೂ ಗಮನಿಸಿ ಮುಂದೆ ಸಾಗಿತು. ಬಳಿಕ ಗುಂಪಿನಿಂದ ಸ್ವಲ್ಪ ಹಿಂದೆ ಉಳಿದು ಆಟವಾಡುತ್ತಾ ಬರುತ್ತಿದ್ದ ಮರಿಗಳು ಅಲ್ಲಿಗೆ ಬಂದವು. ಡಾಬರ್‌ಮನ್ ಮತ್ತು ಬೀದಿನಾಯಿಗಳನ್ನು ಕಂಡಾಗ ಅವುಗಳಿಗೆ ಕುತೂಹಲ ತಡೆಯಲಾಗಲಿಲ್ಲ. ಒಮ್ಮೆಲೆ, ಈ ಏಳೂ ಮರಿಗಳು ಇಳಿಜಾರಿನಲ್ಲಿ ಡಾಬರ್‌ಮನ್ ಕಡೆಗೆ ಓಡಿಬರಲಾರಂಭಿಸಿದವು.

ಆಗ ನಮಗೆ ದಿಗಿಲಾಯಿತು. ಮಿತ್ರರನೇಕರು ತಾವು ಸಾಕಿದ್ದ ಡಾಬರ್‌ಮನ್‌ಗಳ ಪೌರುಷಗಳ ಬಗ್ಗೆ ಹೇಳುತ್ತಿದ್ದೆಲ್ಲ ನೆನಪಿಗೆ ಬಂತು. ‘ಅವು ಕಾಂಪೌಂಡ್ ಒಳಗೆ ಆಕಸ್ಮಿಕವಾಗಿ ಯಾರೇ ಬಂದರೂ – ಮೊದಲಿಗೆ ಅವರನ್ನು ಚೆನ್ನಾಗಿ ಕಡಿದು, ಬಳಿಕ ಅವರು ಅತಿಥಿಗಳೆ, ಮಿತ್ರರೆ, ಅಥವ ಕಳ್ಳರೆ ಎಂದು ನಿರ್ಧರಿಸುತ್ತವೆ’ ಎಂದು ಹೇಳುತ್ತಿದ್ದರು. ಜೊತೆಗೆ ಸಾಕಿದ ಯಜಮಾನನ ಹೊರತಾಗಿ ಮತ್ಯಾರಿಗೂ ರಿಯಾಯಿತಿ ನೀಡದೆ ದಾಳಿ ನಡೆಸುವುದಾಗಿಯೂ ಹೇಳಿದ್ದರು. ಸೋಲೊ ದೀರ್ಘ ಪರಿಶ್ರಮದಿಂದ ಬೆಳೆಸಿದ ಮರಿಗಳನ್ನು, ಹಳ್ಳಿ ನಾಯಿಗಳ ನೆರವಿನಿಂದ, ಕ್ಷಣಾರ್ಧದಲ್ಲಿ ಕೊಂದು ಮುಗಿಸಿಬಿಡಬಹುದೆಂದು ನಾವು ಆತಂಕಕ್ಕೊಳಗಾದೆವು. ಆದರೆ ಅಂತಹ ಅನಾಹುತ ವೇನೂ ಸಂಭವಿಸಲಿಲ್ಲ. ಕಾಡುನಾಯಿಗಳ ವಾಸನೆಯನ್ನು ಮುಂಚಿತವಾಗಿಯೇ ಗ್ರಹಿಸಿದ ಹಳ್ಳಿಯ ನಾಯಿಗಳು ಒಂದು ಕ್ಷಣ ದಿಙ್ಮೂಢಗೊಂಡು, ಮರುಕ್ಷಣದಲ್ಲಿ ಮೈಲು ದೂರದಲ್ಲಿದ್ದ ಹಳ್ಳಿಯತ್ತ ಮಿಂಚಿನಂತೆ ಓಡಿ ಮಾಯವಾದವು. ಹಿಂದೆ ಏನಾಗುತ್ತಿದೆ ಎಂದು ಕುತೂಹಲಕ್ಕಾದರೂ ಒಮ್ಮೆಯೂ ತಿರುಗಿ ನೋಡಲಿಲ್ಲ. ಅಲ್ಲಿಯೇ ಬೆಳೆದ ಅವುಗಳಿಗೆ ಬೇಟೆಗಾರ ಪ್ರಾಣಿಗಳ ವಾಸನೆ ಮತ್ತು ಅದನ್ನು ಹಿಂಬಾಲಿಸಿ ಬರುವ ಅಪಾಯದ ಅರಿವು ಹುಟ್ಟಿನಿಂದಲೇ ಬಂದಿತ್ತು.

ಒಮ್ಮೆಲೆ ಆಟ ನಿಂತು ಸ್ನೇಹಿತರು ಕ್ಷಣಾರ್ಧದಲ್ಲಿ ಕಣ್ಮರೆಯಾದ ಕಾರಣವೇನೆಂದು ಡಾಬರ್‌ಮನ್‌ಗೆ ತಿಳಿಯದೆ ಹಾಗೆ ನಿಂತಿತ್ತು. ಕಾಡುನಾಯಿಮರಿಗಳಿಗೆ ತಮಗಿಂತ ಎರಡು ಪಟ್ಟು ಎತ್ತರವಿದ್ದ ಡಾಬರ್‌ಮನ್ ತಮಾಷೆಯಾಗಿ ಕಂಡಿತ್ತೇನೊ? ಕೌತುಕದಿಂದ ಡಾಬರ್‌ಮನ್ ಸುತ್ತಲೂ ಸುತ್ತತೊಡ ಗಿದ ಅವು ಆಟದ ಗುಂಗಿನಲ್ಲಿದ್ದವು. ಆದರೆ ಕಾಡುನಾಯಿಗಳು ದೊಡ್ಡ ಬೇಟೆ ಪ್ರಾಣಿಗಳನ್ನು ಸುತ್ತುವರಿದಾಗ ಕೂಡ ಇದೇ ರೀತಿ ವರ್ತಿಸುತ್ತವೆ. ಆಟ ಬೇಟೆಯ ರೂಪಪಡೆಯುತ್ತಿದ್ದಂತೆ ಅವುಗಳ ಬಾಲದ ಬಿಗಿತದಲ್ಲಿ ವ್ಯತ್ಯಾಸವಾಗುತ್ತದೆ, ಅಷ್ಟೆ.

ಸ್ವಲ್ಪ ಹೊತ್ತಿನ ಬಳಿಕ ತನ್ನ ಆತ್ಮೀಯ ಸ್ನೇಹಿತರು ಕೈಕೊಟ್ಟು ಪಲಾಯನಮಾಡಿರುವ ಹಾಗೂ ತಾನು ಮಾತ್ರ ಅಪರಿಚಿತ ಜೀವಿಗಳ ನಡುವೆ ಸಿಕ್ಕಿಬಿದ್ದಿರುವ ವಿಷಯ ಡಾಬರ್‌ಮನ್‌ಗೆ ಮನದಟ್ಟಾಯಿತು. ಆಗ ತಾನು ಸೋಲೊಪ್ಪಿಕೊಂಡು ಶರಣಾಗುವುದೇ ಸರಿ ಎಂದು ಅದು ಯೋಚಿಸುತ್ತಿತ್ತೇನೊ? ಆದರೆ ಈ ತೀರ್ಮಾನವನ್ನು ಶತ್ರುಗಳಿಗೆ ತಿಳಿಸುವ ಪರಿಸ್ಥಿತಿಯಲ್ಲಿ ಅದಿರಲಿಲ್ಲ. ಅದಕ್ಕೆ ಕಷ್ಟವಾಗಿತ್ತು. ಏಕೆಂದರೆ ಅದಕ್ಕೆ ಬಾಲವೇ ಇರಲಿಲ್ಲ. ಶರಣಾಗುವುದನ್ನು ವ್ಯಕ್ತಪಡಿಸಲು ಬಾಲವನ್ನು ಮುದುರಿ ಹಿಂಭಾಗದ ಕಾಲುಗಳ ನಡುವೆ ಅಡಗಿಸಿಟ್ಟಿಕೊಳ್ಳುವುದು ನಾಯಿಜಾತಿಯ ಜೀವಿಗಳ ಸಹಜ ಸ್ವಭಾವ. ಆದರೆ, ತಮ್ಮ ಹಿರಿಮೆಯನ್ನು ಪ್ರದರ್ಶಿಸಲೋ ಅಥವ ತಮ್ಮ ನಾಯಿಯ ವಿಶೇಷತೆಯನ್ನು ಹೆಚ್ಚಿಸಲೋ ಮಾಲೀಕರು ಅದರ ಬಾಲಕ್ಕೆ ಕತ್ತರಿ ಹಾಕಿದ್ದರು. ತನ್ನ ಶರಣಾಗತಿಯನ್ನು ಹೇಗೆ ತಿಳಿಸಬೇಕೆಂದು ಗೊಂದಲ ಕ್ಕೀಡಾದ ಡಾಬರ್‌ಮನ್ ತನ್ನ ತಲೆ ಯನ್ನು ಭೂಮಿಗೆ ಮುಟ್ಟುವಂತೆ ಬಗ್ಗಿಸಿ, ಮೂತ್ರ ವಿಸರ್ಜಿಸಿಕೊಂಡಿತು. ಬಾಲವಿದ್ದಿದ್ದರೆ, ಕನಿಷ್ಠ ಬೀದಿಯಲ್ಲಿ ಹರಾಜಾಗುತ್ತಿದ್ದ ಮರ್ಯಾದೆಯನ್ನು, ಅದು ಸ್ವಲ್ಪಮಟ್ಟಿಗೆ ಉಳಿಸಿಕೊಳ್ಳಬಹುದಿತ್ತೇನೊ.

ಸ್ವಲ್ಪ ಹೊತ್ತಿನ ಬಳಿಕ ಬಾರದ ಮರಿಗಳನ್ನು ಗಮನಿಸಿದ ತಾಯಿ ಏನೋ ಹೇಳಿತ್ತು. ಮರಿಗಳು ಇದ್ದಕ್ಕಿದ್ದಂತೆ ಡಾಬರ್‌ಮನ್‌ನನ್ನು ಬಿಟ್ಟು ಗುಂಪಿನ ಕಡೆಗೆ ಓಡಿಹೋದವು. ತಲೆತಗ್ಗಿಸಿ ನಿಂತಿದ್ದ ಡಾಬರ್‌ಮನ್‌ಗೆ ಮರಣದಂಡನೆಯಿಂದ ಕ್ಷಮಾದಾನ ದೊರೆತು ಬಿಡುಗಡೆ ಹೊಂದಿದ್ದು ತಡವಾಗಿ ಮನವರಿಕೆಯಾಯಿತು. ಸ್ವಲ್ಪ ಹೊತ್ತು ಹಾಗೇ ನಿಂತಿದ್ದ ಅದು, ಏನೋ ಹೊಳೆದಂತಾಗಿ, ತನ್ನ ಮನೆ ಯಿದ್ದ ಹಳ್ಳಿಯ ದಿಕ್ಕಿಗೆ ಓಡುವ ಬದಲು, ಚಿರತೆ ಗಳಿದ್ದ ಕಾಡಿನಕಡೆಗೆ ಓಡಿಹೋಯಿತು. ಯಜ ಮಾನನ ಆಜ್ಞೆಗಳೊಂದಿಗೆ ಪಟ್ಟಣದಲ್ಲಿ ಬೆಳೆದಿದ್ದ ಅದು, ಸ್ವಂತ ತೀರ್ಮಾನ ತೆಗೆದುಕೊಳ್ಳುವ ಸಂದರ್ಭ ಎದುರಾದಾಗ ದಿಕ್ಕು ತೋಚದೆ ನಿಂತಿತ್ತು.

ಸೆಪ್ಟೆಂಬರ್ ಆಗಮಿಸಿತ್ತು. ಅದು ಕಾಡುನಾಯಿಗಳು ಕೂಡುವ ಕಾಲ. ಅದೇ ಸಮಯದಲ್ಲಿ ಸೋಲೊ ಗಂಭೀರವಾಗಿ ಗಾಯಗೊಂಡಿತ್ತು. ಬೇಟೆಯಲ್ಲಿ ಗಾಯಗೊಳ್ಳುವುದು, ಮತ್ತು ಗುಣಮುಖಗೊಳ್ಳುವುದೆಲ್ಲಾ ಕಾಡುನಾಯಿಗಳಲ್ಲಿ ಸಾಮಾನ್ಯ. ಆದರೆ ಈ ಬಾರಿ ಸೋಲೊನ ಹಿಂಬದಿಯ ಕಾಲುಗಳು ಸಂಪೂರ್ಣ ದುರ್ಬಲಗೊಂಡಂತೆ ಕಾಣುತ್ತಿದ್ದವು. ಇದಾದ ಕೆಲವು ದಿನಗಳಲ್ಲಿ, ಗುಂಪಿನಲ್ಲಿ ಬಹಳ ಪ್ರಕ್ಷುಬ್ಧ ವಾತಾವರಣವಿದ್ದಂತೆ ಕಂಡುಬಂದಿತ್ತು. ಆನಂತರ ನಮಗೆ ಗುಂಪನ್ನು ಪತ್ತೆ ಹಚ್ಚುವುದು ಅಸಾಧ್ಯವಾಯಿತು. ಆವುಗಳ ಚಲನವಲನಗಳು ಯಾವ ತರ್ಕಕ್ಕೂ ಎಟುಕಲಿಲ್ಲ. ಎರಡು ವಾರಗಳ ಬಳಿಕ ಸೋಲೊನ ಗುಂಪನ್ನು ಮತ್ತೆ ಕಂಡಾಗ ಪರಿಸ್ಥಿತಿ ಆತಂಕಕಾರಿಯಾಗಿತ್ತು. ಆ ತಂಡ, ತಂಡವಾಗಿ ಉಳಿದಿರಲಿಲ್ಲ. ಹಲವಾರು ಪ್ರಮುಖ ನಾಯಿಗಳು ಗುಂಪಿನಲ್ಲಿ ಕಾಣಲಿಲ್ಲ. ಗುಂಪಲ್ಲಿ ಉಳಿದವರಾರು, ಹೊರನಡೆದವರಾರು ಎಂದು ಅರಿಯಲು ಮತ್ತು ಈ ತುಮಲಕ್ಕೆ ಕಾರಣವೇನೆಂದು ತಿಳಿಯಲು ದೀರ್ಘ ಸಮಯವೇ ಹಿಡಿಯಿತು.

ಹದಿನಾರು ಸದಸ್ಯರಿದ್ದ ಆ ಗುಂಪಿನಲ್ಲಿ ಆರು ಕಾಡುನಾಯಿಗಳು ಮಾತ್ರ ಉಳಿದಿದ್ದವು. ಸಣ್ಣ ವಯಸ್ಸಿನ ಮೂರು ಹೆಣ್ಣು ನಾಯಿಗಳೊಂದಿಗೆ ಸೋಲೊನ ಸಂಗಾತಿ ಸಹ ಗುಂಪಿನಲ್ಲೇ ಉಳಿದಿತ್ತು. ಆಶ್ಚರ್ಯವೆಂದರೆ ನಮಗೆ ಪರಿಚಯ ವಿಲ್ಲದ ಗಂಡು ನಾಯಿಯೊಂದು ಗುಂಪಿನಲ್ಲಿತ್ತು. ಗುರುತೇ ಸಿಗದಂತೆ ಸೊರಗಿದ್ದ ಸೋಲೊ ಆ ಗುಂಪನ್ನು ದೂರದಿಂದ ಹಿಂಬಾಲಿಸಿತ್ತು. ಅದರ ಬಾಲ ತುಂಡಾಗಿತ್ತು. ಅದಕ್ಕೆ ಕಾರಣವೇನೆಂದು ತಿಳಿಯಲಿಲ್ಲ. ದೈಹಿಕವಾಗಿ ಕುಗ್ಗಿದ್ದ ಅದರ ದೇಹದಲ್ಲಿ ಎಲುಬುಗಳು ಎದ್ದು ಕಾಣುತ್ತಿದ್ದವು. ಹೊಸದಾಗಿ ಆಗಮಿಸಿದ್ದ ಆ ಗಂಡುನಾಯಿ ನಾಯಕಪಟ್ಟಕ್ಕೇರಿತ್ತು. ಸಮಾಧಾನಕರ ವಿಷಯವೆಂದರೆ ಆ ಗಂಡು ನಾಯಿ ಸೋಲೊನ ಮೇಲೆ ಆಕ್ರಮಣಶೀಲತೆಯನ್ನೇನೂ ಪ್ರದರ್ಶಿಸುತ್ತಿರಲಿಲ್ಲ. ಬಹುಶಃ ಗುಂಪಿನಲ್ಲಿ ಮುಂದುವರಿಯಲು ಅದು ಸೋಲೊಗೆ ಅನುವು ಮಾಡಿಕೊಟ್ಟಿದ್ದಂತೆ ಕಂಡಿತು.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ... ತನ್ನ ಬಾಲದೊಂದಿಗೆ ಸೋಲೊ ಎಲ್ಲವನ್ನೂ ಕಳೆದುಕೊಂಡಿತ್ತು. ಆ ವರ್ಷದ ಮರಿಗಳು ಕೂಡ ಸೋಲೊಗೆ ಬೆದರಿಕೆ ಹಾಕುತ್ತಿದ್ದವು. ಗುಂಪು ಹಿಡಿದ ಬೇಟೆಯ ಬಳಿಗೆ ಸೋಲೊ ಕುಂಟುತ್ತಾ ಬಂದು ಸೇರುವ ವೇಳೆಗೆ ಅಲ್ಲೇನೂ ಉಳಿದಿರುತ್ತಿರಲಿಲ್ಲ. ಸೋಲೊ ಹೇಗೊ ಜೀವ ಉಳಿಸಿಕೊಂಡು ಬದುಕು ಸಾಗಿಸಿತ್ತು.

ಒಂದುದಿನ ಸೋಲೊನ ಗುಂಪು, ಕಡವೆಯನ್ನು ಅಟ್ಟಿಸಿಕೊಂಡು ಹೋಗುತ್ತಿದ್ದವು. ಒಂದು ಕಿಲೋಮೀಟರ್ ದೂರದಲ್ಲಿದ್ದ ಕೆರೆಗೆ ಓಡಿದ ಕಡವೆ ನೀರಿಗಿಳಿದು ನಿಂತಿತು. ಕಾಡುನಾಯಿಗಳಿಂದ ತಪ್ಪಿಸಿಕೊಳ್ಳಲು ಮಂಡಿಯವರೆಗೆ ನೀರಿನಲ್ಲಿ ಹೋಗಿ ನಿಲ್ಲುವುದು ಕಡವೆಗಳ ರಕ್ಷಣಾತ್ಮಕ ಕ್ರಮಗಳಲ್ಲೊಂದು. ಹಾಗಾದಾಗ ಕಡವೆಯನ್ನು ಸಮೀಪಿಸಲು ಕಾಡುನಾಯಿಗಳು ಈಜಬೇಕಾಗುತ್ತದೆ. ಆದರೆ ಕಡವೆ ತನ್ನ ಕಾಲುಗಳ ಮೇಲೆ ನಿಂತಿರುವುದರಿಂದ ಸ್ವಲ್ಪ ಮೇಲ್ಗೈಪಡೆಯುತ್ತದೆ.

ಸೋಲೊ ಯಾವುದೇ ಕಾರಣಕ್ಕೂ ಮನುಷ್ಯರ ಮುಂದೆ ಶಿಕಾರಿ ಮಾಡುತ್ತಿರಲಿಲ್ಲ, ನಮ್ಮ ಮುಂದೆಯೂ ಕೂಡ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಕಾಡುನಾಯಿಗಳಿಗೆ ಕಾಣದಂತೆ ಅಡಗಿ ಕುಳಿತುಕೊಳ್ಳುವುದು ನಮಗೆ ಅಭ್ಯಾಸವಾಗಿ ಹೋಗಿತ್ತು. ಅಂದು ಬಿದಿರಿನ ಮೆಳೆಯಲ್ಲಿ ಅಡಗಿದ್ದೆವು. ಆಗ, ಸಂಪೂರ್ಣ ಅನಿರೀಕ್ಷಿತ ದಿಕ್ಕಿನಿಂದ ತಡವಾಗಿ ಬಂದ ಸೋಲೊ ನಮ್ಮನ್ನು ಹಿಂದಿನಿಂದ ಗಮನಿಸಿತ್ತು. ತಕ್ಷಣ ಅಪಾಯದ ಕೂಗು ಹಾಕಿ ಶಿಕಾರಿಯನ್ನು ನಿಲ್ಲಿಸಲು ಸೂಚನೆ ಕೊಟ್ಟಿತು. ಸೋಲೊ ಅಧಿಕಾರದಲ್ಲಿದ್ದಾಗ, ಅದರ ಆಜ್ಞೆಯನ್ನು ಮೀರಿ ಶಿಕಾರಿ ಮುಂದುವರೆಯುವುದು, ಯೋಚಿಸಲಸಾಧ್ಯವಾಗದ ವಿಚಾರವಾಗಿತ್ತು. ಆದರೆ ಅಂದು, ಗುಂಪಿನ ಹೊಸ ನಾಯಕನ ಪ್ರತಿಕ್ರಿಯೆ ವ್ಯತಿರಿಕ್ತವಾಗಿತ್ತು. ಶಿಕಾರಿಯ ಮಧ್ಯದಲ್ಲಿದ್ದ ಅದು, ಸೋಲೊನನ್ನು ನೋಡಿಕೊಂಡು ಸ್ವಲ್ಪ ದೂರ ಓಡಿಬಂದು ನಿಂತುಕೊಂಡಿತು. ನಂತರ ಅಡಗಿ ಕುಳಿತಿದ್ದ ನಮ್ಮತ್ತ ದೃಷ್ಟಿ ಹಾಯಿಸಿತು. ಒಂದು ಕ್ಷಣ ವಿಚಲಿತನಾದಂತೆ ಕಂಡ ಅದು ಮರುಕ್ಷಣ ಹಿಂದಿರುಗಿ ಕಡವೆಯ ಕಡೆಗೆ ಓಡಿತು. ಅಲ್ಲಿಗೆ ಶಿಕಾರಿ ಮುಕ್ತಾಯವಾಯಿತೆಂದು ನಾವೆಣಿಸಿದೆವು. ಆದರೆ ಅದು ಉಳಿದ ಕಾಡುನಾಯಿಗಳಿಗೆ ಯಾವುದೇ ಸೂಚನೆ ನೀಡಲಿಲ್ಲ. ಶಿಕಾರಿ ಮುಂದುವರೆಯಿತು. ನಮಗೆ ಆಶ್ಚರ್ಯ, ಸಂತೋಷಗಳೆಲ್ಲ ಒಮ್ಮೆಗೆ ಉಕ್ಕಿಬಂದಿತ್ತು. ಆದರೆ ಒಂದೆಡೆ, ಸೋಲೊನ ಪತನಕ್ಕೆ ವಿಷಾದವಾಗಿತ್ತು ಕೂಡ. ಅಂದಿಗೆ ಸೋಲೊ ನಿರ್ಮಿಸಿದ್ದ ಕಟ್ಟಳೆ ಮುರಿದುಬಿದ್ದಿತ್ತು. ನಾವು ಕಾಡುನಾಯಿಗಳ ಹಿಂದೆ ಬಿದ್ದು ಆಗಾಗಲೇ ಹತ್ತುವರ್ಷಗಳಾಗಿತ್ತು. ಮೊದಲ ಬಾರಿಗೆ ಅವು ನಮ್ಮ ಇರುವನ್ನು ಅಲಕ್ಷಿಸಿ ನಮ್ಮ ಮುಂದೆಯೇ ಬೇಟೆಯಾಡಿದ್ದವು. ಸೋಲೊ ಮಾತ್ರ ನಮ್ಮೆಡೆಗೆ ತಿರುಗಿ ತಿರುಗಿ ನೋಡುತ್ತಾ ಶಿಕಾರಿಯಲ್ಲಿ ಭಾಗವಹಿಸದೆ ನಿಂತಿತ್ತು.

ನಂತರ ಸೋಲೊ ಕುಂಟುತ್ತಾ, ಶಿಕಾರಿಯಾಗಿದ್ದ ಕಡವೆಯತ್ತ ಸಾಗಿತು. ಅದರ ಹಿಂದಿನ ಕಾಲುಗಳು ನಿಶ್ಯಕ್ತವಾಗಿಯೇ ಉಳಿದಿದ್ದವು. ತಿನ್ನುವ ಗದ್ದಲ, ಸಂಭ್ರಮದಿಂದ ಆಚೆ ಬಂದ ಎಳೆ ಪ್ರಾಯದ ಗಂಡುನಾಯಿಯೊಂದು ಸೋಲೊಗೆ ಗದರಿಸಿ ವಾಪಾಸ್ಸಾಯಿತು. ಸೋಲೊ ತಾನೇ ಕಷ್ಟಪಟ್ಟು ಕಟ್ಟಿ ಮುನ್ನಡೆಸಿದ್ದ ಗುಂಪಿನಲ್ಲಿ ಈಗ ಕಟ್ಟಕಡೆಯ ಸ್ಥಾನಕ್ಕಿಳಿದಿತ್ತು. ಹೀಗೆ ಸಣ್ಣವಯಸ್ಸಿನ ಕಾಡುನಾಯಿಯೊಂದು, ಸೋಲೊಗೆ ತಿರುಗಿ ನಿಲ್ಲುವುದನ್ನು ಕೆಲವು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ.

ಅದೇ ಸಮಯದಲ್ಲಿ ಆನೆಯ ಗುಂಪೊಂದು ನೀರಿಗೆ ಬಂದಿತು. ಬೇಟೆಗಾರ ಪ್ರಾಣಿಗಳ ವಾಸನೆಯಿಂದ ಕ್ಷೋಭೆಗೊಳಗಾದ ಅವು, ಭಯಂಕರವಾಗಿ ಕಿರುಚಾಡುತ್ತಾ, ಕಾಡುನಾಯಿಗಳನ್ನು ಅಟ್ಟಾಡತೊಡಗಿದವು. ಟನ್‌ಗಟ್ಟಲೆ ತೂಗುವ ಈ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವುದು ಕಾಡುನಾಯಿಗಳಿಗೆ ಕಷ್ಟದ ವಿಷಯವಲ್ಲ. ಆದರೆ, ಹತ್ತಾರು ಬೃಹತ್ ಗಾತ್ರದ ಕಾಲುಗಳು ನೇರವಾಗಿ ಕಡವೆ ಬಿದ್ದಿದ್ದ ದಿಕ್ಕಿಗೆ ಆಕ್ರಮಣ ನಡೆಸುತ್ತಿದ್ದುದರಿಂದ ಕಾಡುನಾಯಿಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಿದವು. ಇದೇ ಸಮಯಕ್ಕಾಗಿ ಕಾಯುತ್ತಿದ್ದಂತೆ, ಆ ಗಲಿಬಿಲಿಯಲ್ಲಿ ಮೆಲ್ಲನೆ ನುಸುಳಿದ ಸೋಲೊ, ಮಾಂಸದ ದೊಡ್ಡ ತುಂಡೊಂದನ್ನು ಎಳೆದುಕೊಂಡು ಪಕ್ಕದ ಬಿದಿರಿನ ಮೆಳೆಯಲ್ಲಿ ತೂರಿಕೊಂಡಿತು. ಅಪಾರ ಅನುಭವದಿಂದಾಗಿ ಎಂತಹ ಪರಿಸ್ಥಿತಿಯನ್ನೂ ತನ್ನ ಅನುಕೂಲಕ್ಕೆ ಪರಿವರ್ತಿಸಿಕೊಳ್ಳುವ ಸಾಮರ್ಥ್ಯ ಮತ್ತು ಮನಸ್ಥಿತಿ ಅದಕ್ಕೆ ಸಿದ್ಧಿಸಿತ್ತು.

ಆ ದಿನ, ಗುಂಪು ತನ್ನ ಶಿಕಾರಿಯನ್ನು ಖಾಲಿ ಮಾಡಿ ಹೊರಟಾಗಲು ಸೋಲೊ ದೊಡ್ಡ ಮೂಳೆಯೊಂದನ್ನು ಕಡಿಯುತ್ತಾ ಮೆಳೆಯೊಳಗೇ ಕುಳಿತಿತ್ತು. ಬಹಳ ದಿನಗಳ ನಂತರ ಅದಕ್ಕೆ ಒಳ್ಳೆಯ ಊಟ ಸಿಕ್ಕಿತ್ತು. ಆಗ ಆ ಗುಂಪಿನಲ್ಲಿ ಹದಿನೈದು ಕಾಡುನಾಯಿಗಳಿದ್ದುದರಿಂದ, ಸೋಲೊಗೆ ಸಾಮಾನ್ಯವಾಗಿ ಸಿಗುತ್ತಿದ್ದುದು ಅಲ್ಪಸ್ವಲ್ಪ ಮಾತ್ರ.

ನಂತರ, ಕಾಡು ದಾರಿ ಹಿಡಿದ ಗುಂಪು ಒಂದೇ ಸಾಲಿನಲ್ಲಿ ಸಾಗಿತ್ತು. ಗಟ್ಟಿಮುಟ್ಟಾಗಿದ್ದ ಯುವ ನಾಯಕ ಮುನ್ನಡೆದಿತ್ತು. ಅದರ ಹಿಂದೆ ಉಳಿದ ಕಾಡುನಾಯಿಗಳು, ಅವುಗಳಿಗೆ ಸ್ವಲ್ಪ ಹಿಂದೆ ಸಣ್ಣ ವಯಸ್ಸಿನ ನಾಯಿಗಳು ಆಟವಾಡುತ್ತಾ ಹಿಂಬಾಲಿಸಿ ಬರುತ್ತಿದ್ದವು. ಒಮ್ಮೆಲೆ, ಮುಂದಿದ್ದ ನಾಯಕ ಏನೋ ವಾಸನೆ ಹಿಡಿಯುತ್ತಾ ನಿಂತಿತು. ಗಾಳಿ ಅದರ ಒಂದು ಪಕ್ಕದಿಂದ ಬೀಸುತ್ತಿದ್ದರಿಂದ, ಬಹುಶಃ ಅದಕ್ಕೆ ಸ್ಪಷ್ಟ ಸುಳಿವು ಸಿಕ್ಕಿರಲಿಲ್ಲ. ಏನು ಮಾಡುವುದೆಂದು ಯೋಚಿಸುತ್ತಿದ್ದಂತೆ ಕಂಡಿತು. ನಂತರ ಕೆಲವು ಹೆಜ್ಜೆಗಳನ್ನು ಮುಂದಿಟ್ಟು ಮತ್ತೆ ನಿಂತು ಹಿಂದಿರುಗಿ ನೋಡಿತು. ಅದು ಸ್ವಲ್ಪ ಗೊಂದಲಕ್ಕೊಳಗಾದಂತಿತ್ತು. ನಾಯಕ ಹಿಂದಿರುಗಿ ನೋಡಿದಾಗ, ಅದರ ಹಿಂದಿದ್ದ ಕಾಡುನಾಯಿ ತನ್ನ ಹಿಂದಿನವರನ್ನು ನೋಡಿತು. ಇದೇ ರೀತಿ ಪ್ರತಿ ನಾಯಿಯೂ ಒಂದರ ನಂತರ ಒಂದು ತಮ್ಮ ಭುಜದ ಮೇಲಿಂದ ಏನನ್ನೋ ನಿರೀಕ್ಷಿಸುವಂತೆ ಹಿಂದಿರುಗಿ ನೋಡತೊಡಗಿದವು. ಕಡೆಯಲ್ಲಿ ಬರುತ್ತಿದ್ದ ಮರಿಗಳು ಕೂಡ ಆಟ ನಿಲ್ಲಿಸಿ ಹಿಂದಿರುಗಿ ನೋಡಿದವು. ಅವುಗಳೇ ಕಡೆಯಲ್ಲಿದ್ದುದರಿಂದ ಅವು ಹಿಂದೆ ತಿರುಗಿ ನೋಡುತ್ತಿದ್ದುದು ನಮಗೆ ತಮಾಷೆಯಾಗಿ ಕಂಡಿತ್ತು. ಆದರೆ ಸ್ವಲ್ಪ ಸಮಯದ ಬಳಿಕ, ದೂರದಲ್ಲಿ ಕುಂಟುತ್ತಾ ಹೊರಲಾರದ ಹೊಟ್ಟೆಯೊಂದಿಗೆ ಬರುತ್ತಿದ್ದ ಸೋಲೊ ಕಂಡುಬಂತು. ಮೆಲ್ಲನೆ ಗುಂಪಿನ ಬಳಿ ಬಂದ ಅದು ತಲೆ ಎತ್ತಿ ವಾಸನೆ ಹಿಡಿಯಲೆತ್ನಿಸಿತು. ನಂತರ ಕೆಲವು ಮೀಟರ್ ಪಕ್ಕಕ್ಕೆ ಸರಿದು ಮತ್ತೆ ವಾಸನೆ ನೋಡಿತು. ಕೆಲವೇ ಕ್ಷಣಗಳಲ್ಲಿ ಅದು ಹಿಂದಿರುಗಿ, ತಾನು ಬಂದ ದಾರಿಯಲ್ಲೆ ವಾಪಾಸ್ಸಾಗತೊಡಗಿತು. ಸಾಲು ಈಗ ಹಿಂದುಮುಂದಾಗಿತ್ತು. ಗುಂಪಿನಲ್ಲಿ ಕಟ್ಟಕಡೆಯದಾಗಿದ್ದ ಸೋಲೊ ಮತ್ತೆ ಮುಂದೆ ನಡೆದಿತ್ತು... ಹಾಗೇ ನಡೆದ ಗುಂಪು ಕಾಡಿನೊಳಗೆ ಕಣ್ಮರೆಯಾಯಿತು.

ಅಲ್ಲಿ ಏನೋ ಬರುತ್ತಿರಬಹುದೆಂದು ನಾವು ಭಾವಿಸಿದೆವು. ಹುಲಿ ಇರಬಹುದೆಂಬ ಗ್ರಹಿಕೆಯಿಂದ ಮೆಲ್ಲನೆ ತೆವಳಿ ಬಿದಿರು ಮೆಳೆಯಲ್ಲಿ ಮರೆಯಾದೆವು. ಹತ್ತು ದೀರ್ಘ ನಿಮಿಷಗಳಾದ ಮೇಲೆ, ಮನುಷ್ಯರು ಮಾತನಾಡುವ ಸದ್ದು ಕೇಳಿದಂತಾಯ್ತು. ಅದಾಗಿ ಸುಮಾರು ಐದು ನಿಮಿಷಗಳು ಕಳೆದನಂತರ, ಕಲ್ಲುಹೂ ಸಂಗ್ರಹಿಸಲು ಹೊರಟಿದ್ದ ಜೇನು ಕುರುಬರ ದೊಡ್ಡ ತಂಡವೊಂದು ಕಾಡು ದಾರಿಯಲ್ಲಿ ಗೋಚರಿಸಿತು. ಅಲ್ಲಿ ಕಾಡುನಾಯಿಗಳ ಜಾಡು ಕಂಡ ಅವರು ಉತ್ಸುಕರಾದರು. ಅಲ್ಲಿಂದ ಕಡವೆಯನ್ನು, ಕಾಡುನಾಯಿಗಳು ಹಿಡಿದು ತಿಂದಿದ್ದ ಸ್ಥಳದವರೆಗೆ ಹೆಚ್ಚು ಕಡಿಮೆ ಓಡಿದ ಅವರ ಉತ್ಸಾಹ ಎಲ್ಲೆಮೀರಿತ್ತು. ‘ಕಡಮೆ ಕಾಣೈ...’ ಎಂದೊಬ್ಬ ಹೇಳಿದ್ದು ಕೇಳಿಬಂತು. ಸೋಲೊ ಊಟದ ತಟ್ಟೆಯನ್ನು ಬಳಿದು ನೆಕ್ಕಿತ್ತು. ಅಲ್ಲೇನೂ ಉಳಿದಿರಲಿಲ್ಲ.

ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರಲಿಲ್ಲ. ಸೋಲೊ ಸಂಪೂರ್ಣವಾಗಿ ಚೇತರಿಸಿಕೊಳ್ಳಲೇ ಇಲ್ಲ. ಬಹುಶಃ ಅದರ ಬೆನ್ನುಮೂಳೆಗೆ ಪೆಟ್ಟಾಗಿದ್ದಿರಬಹುದು. ಆದರೆ ಗುಂಪಿನಲ್ಲಿದ್ದುದರಿಂದ ಹೇಗೋ ಜೀವ ಉಳಿಸಿಕೊಂಡಿತ್ತು. ವಯಸ್ಸಾಗುತ್ತಾ ಬಂದಿದ್ದರಿಂದ, ಕೆಲವೊಮ್ಮೆ ಗುಂಪು ಹೊರಟಾಗಲು ಕೂಡ ಸೋಲೊ ಮಲಗೇ ಇರುತ್ತಿತ್ತು. ಗುಂಪಿನ ನಾಯಕಿ, ಸೋಲೊನ ಹಳೆಯ ಸಂಗಾತಿ ಮಾತ್ರ, ಹಿಂದಿರುಗಿ ಬಂದು ಸೋಲೊನನ್ನು ನೆಕ್ಕಿ, ಮಾತನಾಡಿಸಿ ಕರೆದುಕೊಂಡು ಹೋಗುತ್ತಿತ್ತು. ಎಷ್ಟೇ ವಸ್ತುನಿಷ್ಠತೆಯಿಂದ, ನಿರ್ಭಾವದಿಂದ ಅಧ್ಯಯನ ನಡೆಸುತ್ತಿದ್ದರೂ ಸಹ ಈ ಸಂಘಜೀವಿಗಳ ಭಾವನಾತ್ಮಕ ಪ್ರಪಂಚ ಒಮ್ಮೊಮ್ಮೆ ನಮ್ಮನ್ನು ಅಲುಗಾಡಿಸುತ್ತಿದ್ದುದು ನಿಜ.

ಮತ್ತೊಂದು ವರ್ಷ ಕಳೆದಿತ್ತು. ಆಗ ‘ಕೆನ್ನಾಯಿ’ ಎಂಬ ಹೆಣ್ಣು ಕಾಡುನಾಯಿಯ ಗುಂಪನ್ನು ಹಿಂಬಾಲಿಸಲು ಆರಂಭಿಸಿದ್ದೆವು. ಹಾಗಾಗಿ ಹಲವು ತಿಂಗಳ ಕಾಲ ನಾವು ಸೋಲೊನ ಗುಂಪಿನಿಂದ ದೂರ ಉಳಿದಿದ್ದೆವು.

ನಾವು ಕೆನ್ನಾಯಿಯ ಬಗ್ಗೆ ನಿರ್ಮಿಸುತ್ತಿದ್ದ ಚಲನಚಿತ್ರ ಬಹಳ ಕುತೂಹಲಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿತ್ತು. ಆಕೆ ತನ್ನ ಮೂಲ ಪೋಷಕರ ಗುಂಪನ್ನು ಒಬ್ಬೊಂಟಿಯಾಗಿ ಬಿಟ್ಟುಬಂದು, ತನ್ನದೇ ಸಂಸಾರ ಹೂಡಿ ಸಾಮ್ರಾಜ್ಯ ಕಟ್ಟುವುದರಲ್ಲಿ ಸಫಲಳಾಗಿದ್ದಳು. ನಾವು ಕಾಡುನಾಯಿಗಳನ್ನು ಹಿಂಬಾಲಿಸಿದ್ದ ಹದಿನೈದು ವರ್ಷಗಳಲ್ಲಿ, ಇಂತಹ ಸಾಹಸಕ್ಕೆ ಕೈ ಹಾಕಿದ ಹಲವಾರು ಕಾಡುನಾಯಿಗಳಲ್ಲಿ ಬದುಕುಳಿದು ಯಶಸ್ವಿಯಾಗಿದ್ದು ಕೇವಲ ‘ಸೋಲೊ’ ಮತ್ತು ‘ಕೆನ್ನಾಯಿ’ ಮಾತ್ರ.

ಈ ನಡುವೆ ಸೋಲೊನ ಗುಂಪಿನಲ್ಲಿ ಹಲವಾರು ಕಾಡುನಾಯಿಗಳು ಸಾಂಕ್ರಾಮಿಕ ರೋಗಕ್ಕೆ ಬಲಿಯಾದವು. ಜಾನುವಾರುಗಳೊಂದಿಗೆ ಕಾಡಿಗೆ ಬರುತ್ತಿದ್ದ ಸಾಕುನಾಯಿಗಳು ಕಾಡಂಚಿನ ಕೆರೆಕಟ್ಟೆಗಳಲ್ಲಿ ನೀರು ಕುಡಿಯುತ್ತಿದ್ದವು. ಅದೇ ನೀರನ್ನು ಕೆಲವೊಮ್ಮೆ ಕಾಡುನಾಯಿಗಳು ಬಳಸುತ್ತಿದ್ದವು. ಇದು ಈ ದುರಂತಕ್ಕೆ ಕಾರಣವಾಗಿತ್ತು. ಇಷ್ಟೆಲ್ಲಾ ಆದರೈ, ವಯಸ್ಸಾಗಿ ನಿಶ್ಯಕ್ತಗೊಂಡಿದ್ದ ಸೋಲೊ ಪವಾಡವೆಂಬಂತೆ ಬದುಕುಳಿದಿತ್ತು. ಅದರೊಂದಿಗೆ ಒಂದು ವರ್ಷಕೂಡ ತುಂಬದ ನಾಲ್ಕು ಕಾಡುನಾಯಿಗಳು ಕೂಡ ಉಳಿದುಕೊಂಡಿದ್ದವು.

ವಿಚಿತ್ರ ಸನ್ನಿವೇಶವೊಂದು ಈಗ ಸೃಷ್ಟಿಯಾಗಿತ್ತು. ಸೋಲೊಗೆ ಶಿಕಾರಿ ಮಾಡುವ ಶಕ್ತಿ ಇರಲಿಲ್ಲ. ಅದರ ಜೊತೆಯಲ್ಲಿದ್ದ ನಾಲ್ಕು ಮರಿಗಳಿಗೆ ಸಂಘಟಿತರಾಗಿ ಶಿಕಾರಿ ಮಾಡುವ, ಬದುಕುಳಿಯುವ ಜ್ಞಾನ ಇನ್ನೂ ಸಿದ್ಧಿಸಿರಲಿಲ್ಲ. ಹಾಗಾಗಿ ಸೋಲೊ ಮತ್ತೆ ಚುಕ್ಕಾಣಿ ಹಿಡಿದಿತ್ತು. ತನ್ನ ಇಡೀ ಜೀವಮಾನದಲ್ಲಿ ಕಲಿತಿದ್ದ ಶಿಕಾರಿಯ ಕೌಶಲ್ಯ, ತಂತ್ರಗಳನ್ನೆಲ್ಲ ಅವುಗಳಿಗೆ ಧಾರೆ ಎರೆಯುತ್ತಿತ್ತು. ಬದುಕುಳಿಯುವ ಪಾಠಗಳನ್ನು ಹೇಳಿಕೊಡಲು ಅದಕ್ಕಿಂತ ಉತ್ತಮ ಕಾಡುನಾಯಿಯನ್ನು ನಾವು ಕಂಡಿರಲಿಲ್ಲ. ಆ ನಾಲ್ಕು ಮರಿಗಳು ಎಲ್ಲವನ್ನೂ ನಿಧಾನವಾಗಿ ಕಲಿಯತೊಡಗಿದವು. ಕೌಶಲ್ಯಗಳ ಜೊತೆಜೊತೆಗೆ ಕುಟಿಲತೆಗಳನ್ನು ಕೂಡ. ಒಟ್ಟಾರೆ ಅವುಗಳು ಬೆಳೆಯುತ್ತಿದ್ದ ವಾತಾವರಣ ವಿಭಿನ್ನವಾಗಿತ್ತು, ವಿಚಿತ್ರವಾಗಿತ್ತು. ಬರುಬರುತ್ತಾ ನಮಗೆ ಸೋಲೊ ‘ಫೀನಿಕ್ಸ್’ ಹಕ್ಕಿಯಂತೆ ಕಾಣತೊಡಗಿತು.

ಮುಂದೊಂದು ದಿನ, ವಯೋಸಹಜ ಕಾರಣಗಳಿಂದ ಸೋಲೊ ಕಣ್ಮುಚ್ಚಿತು. ನಮ್ಮ ಅನುಭವದಲ್ಲಿ ಅತ್ಯಂತ ದೀರ್ಘ ಕಾಲ ಬದುಕಿದ ಕಾಡುನಾಯಿ ಸೋಲೊ. ಸದಾ ಪುಟಿದೇಳುತ್ತಿದ್ದ ಅದರ ಚೈತನ್ಯ ನೂರಾರು ನೆನಪುಗಳೊಂದಿಗೆ ನಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದಿದೆ.

ಅದಾಗಿ ಕೆಲವು ತಿಂಗಳ ಬಳಿಕ ಕೆನ್ನಾಯಿಯ ಜೊತೆಗಾರ ಹುಲಿಯಿಂದ ಗಾಯಗೊಂಡು ಸಾವನ್ನಪ್ಪಿತ್ತು. ನೇರ ರಕ್ತಸಂಬಂಧದಲ್ಲಿ ಕಾಡುನಾಯಿಗಳು ಕೂಡುವುದಿಲ್ಲ. ಹಾಗಾಗಿ ಕೆನ್ನಾಯಿ ದಿನಗಟ್ಟಲೆ ಅಲೆದು ಎರಡು ವರ್ಷದ ಗಂಡು ನಾಯಿಯೊಂದನ್ನು ಹುಡುಕಿ ಕರೆತಂದಿತು.

ಅದು ಕೆನ್ನಾಯಿಯ ತಂಡದ ನಾಯಕನಾಯಿತು. ಹಲವಾರು ದಿನಗಳ ತುಮುಲದ ನಂತರ, ಆ ಗುಂಪಿನ ವಲಯ ವಿಸ್ತರಿಸಿದಂತೆ ಕಂಡಿತು. ಕ್ರಮೇಣ, ಅವುಗಳ ಜಾಡು ಹಿಡಿಯುವುದು ನಮಗೆ ಹೆಚ್ಚು ಹೆಚ್ಚು ಕಷ್ಟವಾಗತೊಡಗಿತು. ಅವುಗಳ ಶಿಕಾರಿಯ ನಮೂನೆ, ಮಾದರಿಗಳೆಲ್ಲ ಬದಲಾಗಿತ್ತು. ಅವುಗಳ ಗುಟ್ಟನ್ನು ಭೇದಿಸಲಾಗದೆ ನಾವು ಬಹಳ ಕಾಲ ಪರದಾಡುತ್ತಿದ್ದೆವು. ನಮ್ಮ ಚಲನಚಿತ್ರ ನಿರ್ಣಾಯಕ ಹಂತದಲ್ಲಿದ್ದು, ಹೇಗಾದರೂ ಜಾಡು ಹಿಡಿದು ಅವುಗಳನ್ನು ಹೆಚ್ಚು ವೇಳೆ ಹಿಂಬಾಲಿಸಬೇಕಾದ ಅನಿವಾರ್ಯತೆ ನಮಗಿತ್ತು.

ನಮ್ಮ ಎಲ್ಲಾ ಹಳೆಯ ದಾಖಲೆಗಳನ್ನು ತಿರುವಿಹಾಕಿ ಕೆನ್ನಾಯಿಯ ತಂದೆ–ತಾಯಿಗಳು ಹೂಡುತ್ತಿದ್ದ ಕಾರ್ಯತಂತ್ರಗಳನ್ನೆಲ್ಲ ಮತ್ತೊಮ್ಮೆ ಪರಿಶೀಲಿಸಿದೆವು. ಕೆನ್ನಾಯಿ ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ಋತುಮಾನಗಳಲ್ಲಿ ಬಳಸುತ್ತಿದ್ದ ಜಾಗ, ತಂತ್ರಗಾರಿಕೆಗಳನ್ನೆಲ್ಲ ಮತ್ತೊಮ್ಮೆ ಅವಲೋಕಿಸಿದೆವು. ಏನೂ ಪ್ರಯೋಜನವಾಗಲಿಲ್ಲ. ಹೊಸದಾಗಿ ಬಂದಿದ್ದ ಈ ಗಂಡುನಾಯಿಯ ಹಿನ್ನೆಲೆ ಕೆದಕಿ ನೋಡಿದರೆ, ಪರಿಹಾರ ದೊರಕಬಹುದೆಂಬ ಆಶಯದಿಂದ ನಮ್ಮ ಹಳೆಯ ಚಿತ್ರಗಳನ್ನೆಲ್ಲ ಜಾಲಾಡಿದೆವು. ಆಗ ಸೋಲೊನೊಡನೆ ನಿಂತಿದ್ದ ಒಂದು ಎಳೆಯ ಪ್ರಾಯದ ಕಾಡುನಾಯಿಯ ಚಿತ್ರ ನಮ್ಮ ಗಮನ ಸೆಳೆಯಿತು. ಹೌದು, ಅದು ಸೋಲೊನೊಡನೆ ಬೆಳೆದ ಆ ನಾಲ್ಕು ಕಾಡುನಾಯಿಗಳಲ್ಲೊಂದಾಗಿತ್ತು. ತಕ್ಷಣ ಸೋಲೊ ಹೆಚ್ಚಾಗಿ ಬಳಸುತ್ತಿದ್ದ ಕಾಲುದಾರಿಗಳು ಹಾಗು ಶಿಕಾರಿ ತಂತ್ರಗಳನ್ನು ನಮ್ಮ ದಾಖಲೆಯಿಂದ ಹೆಕ್ಕಿ ತೆಗೆದು ಪಟ್ಟಿ ಮಾಡಿದೆವು. ಇದ್ದಕ್ಕಿದ್ದಂತೆ ಎಲ್ಲವೂ ಸ್ಪಷ್ಟವಾಗತೊಡಗಿತು. ಕೆನ್ನಾಯಿ ಗುಂಪಿನ ಈ ಹೊಸ ನಾಯಕ, ಸೋಲೊನ ರೀತಿಯೇ ವರ್ತಿಸುತ್ತಿತ್ತು ಮತ್ತು ಶಿಕಾರಿ ತಂತ್ರಗಳನ್ನು ಸೋಲೊನಂತೆಯೇ ಹೆಣೆಯುತ್ತಿತ್ತು. ಅಕ್ಷರಶಃ... ಅದು ಕೂಡ ಮನುಷ್ಯರನ್ನು ಯಾವುದೇ ಕಾರಣಕ್ಕೂ ನಂಬುತ್ತಿರಲಿಲ್ಲ. ಇಡೀ ಕೆನ್ನಾಯಿಯ ಗುಂಪು ನಮ್ಮ ಇರುವನ್ನು ಸಹಿಸಿಕೊಳ್ಳುತ್ತಿದ್ದರೂ ಕೂಡ, ಅದಕ್ಕೆ ಮಾತ್ರ ಇಷ್ಟವಾಗುತ್ತಿರಲಿಲ್ಲ. ಮುಂದೆ ಕೆನ್ನಾಯಿಯ ಬದುಕು ಮತ್ತು ನಮ್ಮ ಚಿತ್ರೀಕರಣ ಹೆಚ್ಚಿನ ಅಡ್ಡಿ ಆತಂಕಗಳಿಲ್ಲದೆ ಸಾಗಿ ಅಂತಿಮ ಹಂತ ತಲುಪಿತ್ತು. ಸಂಕಲನದ ಕೆಲಸ ಶುರುವಾಗಿತ್ತು. ಕಡೆಯ ಬಾರಿಗೆ ಕೆನ್ನಾಯಿಯ ಗುಂಪನ್ನು ಕಾಣುವ ತವಕದಿಂದ ಕಾಡಿಗೆ ಹೋದೆವು.

ಅದೊಂದು ಅದ್ಭುತ ಮುಂಜಾನೆ... ಕೆನ್ನಾಯಿಯ ಗುಂಪನ್ನು ಬೆಳಗ್ಗಿನ ಜಾವ ಆರು ಗಂಟೆಗೆ ಹುಡುಕಿ ಹಿಂಬಾಲಿಸಲು ಯಶಸ್ವಿಯಾಗಿದ್ದೆವು. ಅಂದು ಇಬ್ಬನಿಯಲ್ಲಿ ಒದ್ದೆಯಾಗಿದ್ದ ಗುಂಪು, ಹುಲ್ಲಿನೊಳಗೆ ಹಾರಿ ಓಡುತ್ತಿದ್ದ ಆ ದೃಶ್ಯ, ಅಷ್ಟು ವರ್ಷಗಳ ಬಳಿಕವೂ ನಮಗೆ ರೋಮಾಂಚನವನ್ನು ಉಂಟುಮಾಡಿತ್ತು.

ಸುಮಾರು ಒಂಬತ್ತು ಗಂಟೆಯ ಹೊತ್ತಿಗೆ ಅವು ಬಿದಿರುಮೆಳೆಗಳ ನೆರಳಲ್ಲಿ ಮಲಗಿ ವಿಶ್ರಮಿಸುತ್ತಿದ್ದವು. ನಾವು ಜೀಪಿನಲ್ಲಿದ್ದೆವು. ಸ್ವಲ್ಪ ವಿಶ್ರಾಂತಿಯ ಬಳಿಕ ಅವು ಎದ್ದು ಮುಂದೆ ಹೊರಟವು. ನಾವು ಸ್ವಲ್ಪ ದೂರ ನಡೆದು ಹಿಂಬಾಲಿಸಿದೆವು. ನಮ್ಮಿಂದ ಸುಮಾರು ನೂರು ಮೀಟರ್‌ಗಳಷ್ಟು ಮುಂದೆ ಸಾಗಿದ್ದ ಗುಂಪು ಒಂದು ತಿರುವಿನಲ್ಲಿ ಕಣ್ಮರೆಯಾಗುವುದನ್ನು ಸ್ವಲ್ಪ ಸಮಯ ನೋಡುತ್ತಾ ನಿಂತಿದ್ದು, ಹಿಂದಿರುಗಿದೆವು.

ನಾವಾಗಲೇ ಈ ಅಸಾಮಾನ್ಯ ಬೇಟೆಗಾರರ ಹಿಂದೆ ಹದಿನೈದು ವರ್ಷಗಳನ್ನೇ ಕಳೆದಿದ್ದೆವು. ಅವುಗಳ ಸುಖ–ದುಃಖ, ಹುಟ್ಟು–ಸಾವು, ಯಾತನೆ–ಸಂಭ್ರಮಗಳೊಂದಿಗೆ ನಾವೂ ಸಾಗಿ ಬಂದಿದ್ದೆವು. ಈ ದೀರ್ಘ ಒಡನಾಟ, ಜೀವವಿಜ್ಞಾನದ ನಮ್ಮ ಒಳನೋಟಗಳನ್ನು ವಿಸ್ತರಿಸಲು ನೆರವಾಗಿತ್ತು.

ಜೀಪಿಗೆ ಹಿಂದಿರುಗಿ ನಮ್ಮ ಚಲನಚಿತ್ರ ಕ್ಯಾಮೆರಾ ಉಪಕರಣಗಳನ್ನು ಜೋಡಿಸಿಟ್ಟೆವು. ನಂತರ ಜೀಪಿನಲ್ಲಿ ಕುಳಿತು ಕಾಡುನಾಯಿಗಳೊಂದಿಗಿನ ನಮ್ಮ ನೆನಪುಗಳನ್ನು ಮಾತಿಲ್ಲದೆ ಮೆಲಕು ಹಾಕುತ್ತಿದ್ದೆವು. ಬಹುಶಃ ಇಪ್ಪತ್ತು ನಿಮಿಷ ಕಳೆದಿರಬಹುದು. ‘ಶಾಮ’ ಹಕ್ಕಿಯೊಂದು ಹಾಡುತ್ತಿತ್ತು. ಇದ್ದಕ್ಕಿದ್ದಂತೆ ಅದು ಹಾಡುವುದನ್ನು ನಿಲ್ಲಿಸಿತು... ಅದು ನೋಡುತ್ತಿದ್ದೆಡೆಗೆ ದೃಷ್ಟಿ ಹಾಯಿಸಿದೆವು. ಒಂದಾದ ಮೇಲೆ ಒಂದರಂತೆ, ಸಾಲಿನಲ್ಲಿ, ಇಡೀ ಕೆನ್ನಾಯಿಯ ಗುಂಪು, ಒಟ್ಟು ಇಪ್ಪತ್ತೊಂದು ಕಾಡುನಾಯಿಗಳು, ನಮ್ಮ ಕಡೆಗೇ ನಡೆದು ಬಂದು, ಜೀಪಿನ ಸುತ್ತಾ ಅರ್ಧಚಂದ್ರಾಕಾರದಲ್ಲಿ ಕುಳಿತುಕೊಂಡವು. ಕೆನ್ನಾಯಿ ಎಲ್ಲರಿಗಿಂತ ಮುಂದೆ ಬಂದು ಜೀಪಿಗೆ ಹತ್ತಿರದಲ್ಲಿ ಮಲಗಿಕೊಂಡಿತು.

ನಮ್ಮನ್ನೆಂದೂ ನಂಬದ, ಸೋಲೊನ ಶಿಷ್ಯ, ಕೆನ್ನಾಯಿ ಗುಂಪಿನ ನಾಯಕ, ಆ ಗಂಡು ಕಾಡುನಾಯಿ ಎಲ್ಲರಿಗಿಂತ ಕಡೆಯಲ್ಲಿ ಬಂದು ನಮ್ಮೆಡೆಗೆ ದೃಷ್ಟಿಸಿ, ಕೆನ್ನಾಯಿಯ ಕಡೆಗೆ ಒಮ್ಮೆ ನೋಡಿ... ಅದಕ್ಕೂ ಜೀಪಿಗೂ ಮಧ್ಯದಲ್ಲಿ, ಅಂದರೆ ನಮ್ಮಿಂದ ಕೇವಲ ಏಳು–ಎಂಟು ಮೀಟರ್‌ಗಳಷ್ಟು ದೂರದಲ್ಲಿ ನಿರಾತಂಕವಾಗಿ ಕುಳಿತು, ನಂತರ ಉರುಳಿ ಹೊರಳಾಡಿ ನಿದ್ರೆಗೆ ಜಾರಿತು. ಅಲ್ಲಿಂದ ಜೀಪ್ ತೆಗೆದು ಹೊರಡಲು ನಮಗೆ ಆಸ್ಪದವಿರಲಿಲ್ಲ...

ಇದು ಕಾಕತಾಳಿಯವಾಗಿ ಸೃಷ್ಟಿಯಾದ ಸನ್ನಿವೇಶವೆಂದು ನಮಗೆ ತಿಳಿದಿದೆ. ಆದರೂ, ಜೀವಜಗತ್ತಿನೊಂದಿಗಿನ ನಮ್ಮ ಕೆಲವು ಸಂವಾದಗಳು ಇದೇ ರೀತಿ ವಿಶಿಷ್ಟವಾಗಿದ್ದವು, ವಿಭಿನ್ನವಾಗಿದ್ದವು. ಅವುಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ ನೋಡುವ ಗೋಜಿಗೆ ಹೋಗುವ ಬದಲು ಸುಮ್ಮನೆ ತುಸು ಕಾಲ ಸಂತೋಷಪಡುವುದರಲ್ಲಿ ತಪ್ಪಿಲ್ಲವೆಂದೆನಿಸುತ್ತದೆ.

(ಈ ಬರಹದೊಂದಿಗೆ ಕೃಪಾಕರ ಸೇನಾನಿ ಅವರ ‘ಅವ್ಯಕ್ತ ಭಾರತ’ ಅಂಕಣ ಕೊನೆಗೊಳ್ಳುತ್ತಿದೆ.  –ಸಂ)

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry