ವಿದಾಯ ಗೀತೆ

7

ವಿದಾಯ ಗೀತೆ

Published:
Updated:
ವಿದಾಯ ಗೀತೆ

ಅವತ್ತು ಒಂದು ಸುದ್ದಿ ಕೇಳಿ ಅಲ್ಲೇ ಜಗಲಿಯಲ್ಲಿ ಕುಳಿತೇ ಇದ್ದೆ. ಅಷ್ಟೊತ್ತಿಗೆ ಆತ ಬಂದ. ಮಂಕುಮನಸ್ಸಿಗೆ ಮೊದಲು ಯಾರೆಂದೇ ತಿಳಿಯದೆ, ಆಮೇಲೆ ಪಕ್ಕನೆ ಒಮ್ಮೆಗೆ ಗುರುತು ಸಿಕ್ಕಿ ಆಕಸ್ಮಿಕವಾಗಿ ಕಂಡ ಸಂತೋಷದಿಂದ `ಅಯ್ಯ! ನೀವ! ಬನ್ನಿ, ಬನ್ನಿ~ ಎಂದೆ. `ಬನ್ನಿ, ಇಲ್ಲೇ ಕುಳಿತುಕೊಳ್ಳಿ~. ತಳಮಳದಿಂದಾಗಿ ಮನೆಯ ಒಳಗಿಗಿಂತ ಸಂಜೆಯ ಆಕಾಶಕ್ಕೆ ತೆರೆದುಕೊಂಡ ಜಗಲಿಯೇ ಹಿತವಾದ ಸಂದರ್ಭ ಅದು. ಆತ ಕುಳಿತುಕೊಂಡ.ಆತ ಯಾರೆಂದರೆ ಬಹಳ ಬಹಳ ಹಿಂದೆ ನಮ್ಮೂರ ಹುಡುಗಿಯನ್ನು ಮದುವೆಯಾದವ. ಆ ಮದುವೆ ನಡೆದಾಗ ನಾವೆಲ್ಲ ಚಿಕ್ಕವರು. ಚಿಕ್ಕವರಾದರೂ ರಾಪಿಗೇನು ಕಡಿಮೆಯಿರಲಿಲ್ಲ. ಅವಳು ಅವನನ್ನು ಮದುವೆಯಾಗಿ ನೌಕಾಪಡೆಯ ಜೀವನಕ್ಕೆ ಹೊರಟು ಹೋದವಳು ವರ್ಷ ಎರಡು ವರ್ಷಕ್ಕೊಮ್ಮೆ ಊರಿಗೆ ಬರುತಿದ್ದಳು.ಬಂದಾಗೆಲ್ಲ ಮನೆಗೆ ಬಂದೇ ಬರುತಿದ್ದಳು. ಮಾತಾಡುತ್ತ ನಡುನಡುವೆ `ಅಚ್ಚಾ ಅಚ್ಚಾ~  ಎನ್ನುತಿದ್ದಳು. ಆಗ ನಾವು ಅಲ್ಲೇ ಎಲ್ಲಾದರೂ ಮರೆಯಲ್ಲಿ ಕುಸುಕುಸು ನಗುತಿದ್ದೆವು. ಆಕೆ ಇಂಗ್ಲೀಷು ಹುಡಿಹಾರಿಸುವಾಗಂತೂ ಅಡ್ಡದಲ್ಲಿ ಬಾಯಿ ವಾರೆ ಮಾಡಿ ಅವಳಂತೆಯೇ ಮಾತಾಡುತ್ತ ಅಣಕಿಸುತ್ತಿದ್ದೆವೂ ಸ್ವಲ್ಪವಲ್ಲ. ಇಂಗ್ಲೀಷು ಎಂದರೆ `ಝಾಪು~ ತೋರಿಸುವ ಭಾಷೆಯಾಗಿ, ಹುಡುಗಿ ಅದನ್ನಾಡಿದರಂತೂ, ಗಂಡಸರು ಬಿಡಿ, ಹುಡುಗಿಯರೇ ಒಟ್ಟಾಗಿ ಚಾಳಿಸುವ ಕಾಲ ಅದು.ಅವಳಾದರೂ ಇದೆಲ್ಲ ತಿಳಿಯದವಳಲ್ಲ. ಆದರೂ ತನ್ನ ವಾತಾವರಣವನ್ನು ಹೀರಿಕೊಂಡು ಬದುಕುತಿದ್ದ ಆಕೆಗೆ ಅವೆಲ್ಲ ತಂತಾನೇ ಬರುವ ಶಬ್ದಗಳಾದ್ದರಿಂದ ವಿಚಿತ್ರವೆನಿಸಿರಲಿಕ್ಕಿಲ್ಲ. ನಮ್ಮನ್ನಂತೂ ಆಕೆ ಲೆಕ್ಕಕ್ಕೇ ಇಟ್ಟಿರಲಿಲ್ಲವಾಗಿ ನಮ್ಮ ನಗು ತಿಳಿದೂ ಒಮ್ಮೆಯೂ ಗದರಿರಲಿಲ್ಲ. ಇನ್ನೂ ಬೆಳೆಯಬೇಕ್ದ್ದಾದು ಎಷ್ಟಿದೆ ಇವಕ್ಕೆ ಪಾಪ ಎಂಬಂತೆ ನಮ್ಮನ್ನು ನೋಡುತಿದ್ದಳು.ಬಂದವ, ಅವಳ ಗಂಡ, ಆಗ ನೋಡಲು ಒಳ್ಳೆ ಯುರೋಪಿಯನ್ (ಇದೂ ನಾವು ಮಕ್ಕಳದೇ ವರ್ಣನೆ. ಗಂಡನೆಂಬವ ಇರಬೇಕಾದ್ದು ಹೀಗೆ ಎಂಬ ಮೆಚ್ಚುಗೆಯಲ್ಲಿ) ತರಹ ಇದ್ದ. ಈಗ ನೋಡಿದರೆ, ಸಾಕಷ್ಟು ಕುಸಿದಿದ್ದ, ನೆಟ್ಟಗಿನ ಬೆನ್ನು ತುಸು ಬಾಗಿತ್ತು. ಆ ಯುರೋಪಿಯನ್  ಬಣ್ಣವೂ ಕಂದಿತ್ತು. ನಡಿಗೆ ನಿಧಾನವಿತ್ತು, ಆದರೂ ಅದರಲ್ಲಿನ ಮಿಲಿಟರಿ ಗತ್ತು ಪೂರ್ತಿ ಮರೆಯಾಗಿರಲಿಲ್ಲ. ಬಂದು ಆತ ಜಗಲಿಯ ಇನ್ನೊಂದು ತುದಿಯಲ್ಲಿ ಕುಳಿತ. ಈಗ ನಾನಿರುವ ಊರಿಗೆ ಏನೋ ಕೆಲಸದ ಮೇಲೆ ಹೊರಟವನಿಗೆ ನಮ್ಮ ಮನೆಗೆ ಹೋಗಿ ಬರಲೇಬೇಕೆಂದು ಹೆಂಡತಿ ಅಷ್ಟಲ್ಲದೆ ಹೇಳಿಕಳಿಸಿದ್ದಳಂತೆ; ಹಳೆಯ ಪರಿಚಯದ ವಾಂಛೆ ಬದುಕಿನ ನಡುವೊಮ್ಮೆ ಎಲ್ಲೋ ಮಾಸಿ, ವಯಸ್ಸಾದ ಮೇಲೆ ಮತ್ತೆ ಉದಯಿಸಿ ಮೆಲುಕು ಹಾಕಿಸುತ್ತದೆಯಲ್ಲ. ಹಾಗೆ ಅವಳಿಗೀಗ ನಮ್ಮ ನೆನಪೆಲ್ಲ ಮೇಲಿಂದ ಮೇಲೆ ಆಗುತ್ತಿದೆಯಂತೆ. ಕಾಫಿತಿಂಡಿಯ ನಡುನಡುವೆ `ಅವರನ್ನು ನೋಡದೆ ಎಷ್ಟೋ ಸಮಯವಾಯಿತು, ಹೇಗಿದ್ದಾರೆ ಅವರು~ ಮುಂತಾಗಿ ಇರುತ್ತವಲ್ಲ ಆಸಕ್ತಿ ಮತ್ತು ಕಾಳಜಿಯ ಪ್ರಶ್ನೆಗಳು, ಅವೆಲ್ಲ ಮುಗಿದುವು. ಈಗ ನಿವೃತ್ತಿ ಜೀವನದಲ್ಲಿರುವ ಆತನ ವೃತ್ತಿ ಅನುಭವಗಳ ಬಗ್ಗೆ ಮೆಲ್ಲ ಕೇಳತೊಡಗಿದೆ. ಒಂದೊಂದೇ ಪ್ರಶ್ನೆ ಹಾಕುತ್ತ ಇದ್ದಂತೆ ಉಮೇದಿನಿಂದ ಆತ ಹೇಳತೊಡಗಿದ. ಅವುಗಳಲ್ಲಿ ಒಂದನ್ನು ಮಾತ್ರ, ಅಂದಿನ ನನ್ನ ಮನಸ್ಥಿತಿಗೆ ರಪ್ಪನೆ ಅಂಟಿಕೊಂಡದ್ದರಿಂದ ಇಲ್ಲಿ ಹೇಳಹೊರಟಿರುವೆ.

ಅದು ದಶಕಗಳ ಕಾಲ ಸೇವೆ ಕೊಟ್ಟ, ಹಳೆಯ ನೌಕೆಯನ್ನು ಕಳಿಸಿಕೊಡುವ ಅವರ ಆಚರಣೆ. ಫೇರ್‌ವೆಲ್ ಸಮಾರಂಭ. ವಿದಾಯ, ಅಥವಾ ಧಾರ್ಮಿಕ ಭಾಷೆಯಲ್ಲಿ ಹೇಳಬೇಕೆಂದರೆ ವಿಸರ್ಜನೋತ್ಸವ.`ವಿಸರ್ಜನೆ ಬಿಡಿ, ನಮ್ಮಲ್ಲಿ ಹೊಸತಲ್ಲ. ಆರಾಧಿಸಿ ಕೊನೆಗೆ ವಿಸರ್ಜನೆ ಮಾಡಿ ನೀರಿಗೆಸೆಯುವುದರಲ್ಲಿ, ಮತ್ತೆ ಪುನಃ ಪೀಠಕ್ಕೆ ಕರೆತಂದು ಪೂಜಿಸುವುದರಲ್ಲಿ ಪ್ರವೀಣರು ನಾವು. ನಮ್ಮ ಪೂಜೆಯ ರೀತಿಯೇ ಹಾಗೆ ಅಲ್ಲವೆ? ಮೊದಲು ಆವಾಹನೆ, ಆರಾಧನೆ, ಪೂಜೆ. ಕೊನೆಗೆ ವಿಸರ್ಜನೆ. ಕಲಶವೋ ಅದು ಮೂರ್ತಿಯೋ, ಒಟ್ಟಾರೆ ಶಾಸ್ತ್ರೋಕ್ತ ವಿಸರ್ಜನೆ ಮಾಡದೆ...~ `ಹೂಂ, ಇದು ಎಂದಿನಿಂದಲೂ ನಮ್ಮಲ್ಲಿ ಇದ್ದ ಕ್ರಮವೇ. ಮೀನುಗಾರರು ಹೊಸದೋಣಿಗೆ ತೆಂಗಿನಕಾಯಿ ಒಡೆದು, ಪೂಜೆ ಮಾಡಿ, ನೀರಿಗಿಳಿಸುವಷ್ಟೇ ಕ್ರಮವತ್ತಾಗಿ ತಮ್ಮ ಹಳೆಯ ದೋಣಿಗಳನ್ನು ಬೀಳ್ಕೊಡುತ್ತಾರೆ. ನೀರಿಗಿಳಿಸುವಾಗ ಸಂಭ್ರಮವಿದ್ದರೆ ಬೀಳ್ಕೊಡುವಾಗ ಅದೇ ಜಾಗದಲ್ಲಿ ಆಯಾ ದೋಣಿಯೊಂದಿಗೆ ಕಾಲಾನುಕ್ರಮದಲ್ಲಿ ಅವರು ಬೆಸೆದುಕೊಂಡ ಆತ್ಮಕ ಸಂಬಂಧಕ್ಕೆ ತಕ್ಕಂತೆ ವಿಷಾದ, ದುಃಖ ಇರುತ್ತದೆ. ಹಡಗನ್ನು ನೀರಿಗಿಳಿಸುವ ಮತ್ತು ಬೀಳ್ಕೊಡುವ ಸಮಾರಂಭಗಳೂ ಅಂತೆಯೇ; ಒಂದು ಸಡಗರ ಇನ್ನೊಂದು ಅಷ್ಟೇ ವೇದನೆಯದು. ಆದರೆ ನಮ್ಮ ಸೇನಾಪಡೆಗಳ ಆಚರಣೆಯ ವಿನ್ಯಾಸದ ಹಿಂದಿರುವುದು ಬ್ರಿಟಿಷ್ ಕ್ರಮ. ಅದನ್ನೇ ನಾವು ಭಾರತೀಯ ಶೈಲಿಯನ್ನೂ ತುಸು ಬೆರೆಸಿ ಮಾಡುವವರು.(ಆತ ಡೀಕಮಿಶನಿಂಗ್ ಆದ ವಿದೇಶಿ ಹಡಗುಗಳ ಕುರಿತೂ ದೀರ್ಘವಾಗಿ ವಿವರಿಸಿದ. ಆ ವಿವರಗಳಲ್ಲಿ ತಂಗಿದ ಒಂದು ನೆನಪು- ಬ್ರಿಟಿಷ್ ವೀರನೊಬ್ಬನ ಹೆಸರಿನ ಒಂದು ಹಡಗಿನ ವಿದಾಯ. ಆ ಸಮಾರಂಭದಲ್ಲಿ ಹಾಜರಿರಲು ಬಂದ ಆತನ ಮಗಳು. ಇದು, ನನ್ನ ತಂದೆಯ ನೆನಪು. ಆತನಿಗೆ ಸಲುವ ಗೌರವ. ಎಂತಲೇ ನಾನು ಬಲುದೂರದಿಂದ ಈ ಸಮಾರಂಭವನ್ನು ಕಣ್ಣಾರೆ ನೋಡಲು ಬಂದೆ ಎಂದು ವ್ಯಥೆ ಮತ್ತು ಧನ್ಯತೆಯಿಂದ ಬಿಕ್ಕುತ್ತ ಹೇಳಿದ ಮಾತು. ವಿವರಗಳನ್ನು ಬಿಡುವೆ.)ಹಡಗು, ವಿಮಾನ, ಹೆಲಿಕಾಪ್ಟರ್‌ನಲ್ಲಿ ಒಮ್ಮೆ ಹೊರಟವೆಂದರೆ ನಾವು ಹಿಂದೆ ನೋಡುವ ಕ್ರಮವೇ ಇಲ್ಲ. ಸವಾಲನ್ನು ಎದುರಿಸಲು ದೃಢಮನಸ್ಸಿನಿಂದ ಹೊರಡುವ ರೀತಿ ಅದು. ಹಿಂತಿರುಗಿ ನೋಡುವುದು ಚಂಚಲತೆ ಎಂಬಂತೆ. ವಾಯುಮಾರ್ಗದಲ್ಲಿ ಹೊರಡುವವರನ್ನಂತೂ ಕಳಿಸುವವರು ಅಗತ್ಯವಾಗಿ `ಎಲ್ಲ ಸರಿಯಾಗಿದೆ~ ಅಂತ ನುಡಿದು `ಹೋಗಿ ಬನ್ನಿ~ ಎಂಬಂತೆ ಸೆಲ್ಯೂಟ್ ಹೊಡೆದೇ ಕಳಿಸುವರು. ಆ ಸೆಲ್ಯೂಟಿಗೆ ಬಹು ಅರ್ಥವಿದೆ. ಮೂರು ಆಯಾಮದ ವಾತಾವರಣವನ್ನು ಪ್ರವೇಶಿಸುವವರು ಅವರು. ಅಪಾಯದ ಗರ್ಭವನ್ನೇ ಹೊಕ್ಕು ಹೊರಡುವವರು. ಹಾಗಾಗಿ `ಹ್ಯಾಪಿಲ್ಯಾಂಡಿಂಗ್~ ಎಂದು ಹಾರೈಕೆ ಕೂಡ ಅದರಲ್ಲಿ ಸೇರಿದೆ. `ಅದು ಅಂತಿರಲಿ, ವಿದಾಯದ ಕತೆ ಹೇಳಿ~ ಎಂದೆ. ಹೇಳಲು ತುಂಬ ಇರುವ ಅನುಭವೀ ವ್ಯಕ್ತಿಗಳಿಗೆ ಆಗಾಗ ವಿಷಯಕ್ಕೆ ಮರಳಲು ನೆನಪಿಸುತ್ತಲೇ ಇರಬೇಕಷ್ಟೆ...

“ಹೊಸ ಹಡಗನ್ನು ಕಾರ್ಯಕ್ಕಿಳಿಸುವ ಸಮಾರಂಭದಲ್ಲಿ ಸಣ್ಣದೊಂದು ಪೆನೇಂಟ್ (ನಿರ್ದಿಷ್ಟ ಆಕಾರದ ಬಟ್ಟೆ) ಅನ್ನು ಹಡಗಿನ ತುದಿಗಂಬಕ್ಕೆ ಏರಿಸುತ್ತಾರೆ. ಅದು ಹಳತಾದರೆ ಹೊಸತನ್ನು ಏರಿಸಿ ಆಮೇಲೆಯೇ ಹಳತನ್ನು ಕೆಳಗಿಳಿಸುತ್ತ ನಿರಂತರವಾಗಿ ಅದು ಆ ಕಂಬದಲ್ಲಿ ರಾರಾಜಿಸುವಂತೆ ನೋಡಿಕೊಳ್ಳುತ್ತಾರೆ.ಶಾಶ್ವತವಾಗಿ ಅದು ಕೆಳಗಿಳಿಯುವುದು ವಿದಾಯದಲ್ಲಿ ಮಾತ್ರ. ಪೆನೇಂಟ್ ಅಂತಿಮವಾಗಿ ಇಳಿಯುವ ಆ ಕ್ಷಣ ಬಹಳ ನೋವಿನದು. ಇಳಿಸಿದ ನಂತರವೂ ಅದಕ್ಕೆಷ್ಟು ಗೌರವವಿದೆಯೆಂದರೆ ಅದನ್ನು ಸಾವಧಾನತೆಯಿಂದ ಮೃದುವಾಗಿ ಮಡಚಿ ಆರ್ಖೈವ್‌ನಲ್ಲಿ ಇಡುತ್ತಾರೆ.ಹಡಗಿಗೆ ವಿದಾಯ ಹೇಳುವುದು, ಅಂದರೆ ಹಡಗಿನ ಡೀಕಮಿಶನಿಂಗ್, ನಮ್ಮಲ್ಲಿ ಒಂದು ಬಹುಮುಖ್ಯ ಸೆರಮನಿ. ಶಾಸ್ತ್ರೀಯ ಸಮಾರಂಭ. ಅದು ನಡೆಯುವುದು, ಇಂತಹದೇ ಒಂದು ಸಂಜೆ, ಸೂರ್ಯಾಸ್ತದ ಹೊತ್ತಿನಲ್ಲೇ.ಸಮಾರಂಭಕ್ಕೆ ಅದುವರೆಗೆ ಆ ಹಡಗಿನಲ್ಲಿ ಹಿಂದೆ ಕೆಲಸ ಮಾಡಿದವರೂ ಬಂದು ನೆರೆಯುತ್ತಾರೆ. ಹಡಗಿನ ಎಲ್ಲ ಅಧಿಕಾರಿಗಳೂ ನಾವಿಕರೂ ಇಂಜಿನಿಯರರೂ ವಿಜ್ಞಾನಿಗಳೂ ಎಲ್ಲ ಸ್ತರದ ಕೆಲಸಗಾರರೂ ತಪ್ಪದೆ ತಮ್ಮ ಕರ್ತವ್ಯವೆಂಬಂತೆ ಹಾಜರಿರುತ್ತಾರೆ. ಮುಖ್ಯಾಧಿಕಾರಿಗಳು  ಒಂದು ದಿನ ನಮ್ಮಂತೆ ನಮ್ಮ ಯಂತ್ರಗಳೂ ಮುದಿಯಾಗಿಯೇ ಆಗುತ್ತವೆ. ಆದ್ದರಿಂದ ನಾವು ಇದನ್ನು ಒಪ್ಪಿಕೊಂಡು ಇದುವರೆಗೆ ನಮ್ಮನ್ನು ಸಲಹಿದ ಕಾಪಾಡಿದ, ಧೈರ್ಯ ತುಂಬಿದ ಇವಳಿಗೀಗ ವಿಶ್ರಾಂತಿ ನೀಡುವುದು ನಮ್ಮ ಧರ್ಮ -ಮುಂತಾಗಿ ಅವರವರಿಗೆ ಕಂಡಂತೆ `ವಿದಾಯ ಭಾಷಣ~ ಮಾಡುತ್ತಾರೆ. ರಾಷ್ಟ್ರಧ್ವಜ, ಆಮೇಲೆ ವಿದಾಯಸಂಕೇತದ ಡೀಕಮಿಶನಿಂಗ್ ಪತಾಕೆ, ಆಮೇಲೆ ಆಯಾ ಪಡೆಯ- ಉದಾ: ನೌಕಾ ಎನ್‌ಸೈನ್ ಅಥವಾ ತಟರಕ್ಷಕ ಎನ್‌ಸೈನ್ ಇಳಿಸುತ್ತಾರೆ. ಡೀಕಮಿಶನಿಂಗ್ ಧ್ವಜವನ್ನೂ ಸಮಾರಂಭ ಮುಗಿದ ಮೇಲೆ ಗೌರವಪೂರ್ವಕವಾಗಿ ಮಡಚಿ ಆರ್ಖೈವ್‌ನಲ್ಲಿ ಇಡುತ್ತಾರೆ.ಬ್ಯಾಂಡ್ ಸಂಗೀತ, ದೇಶಭಕ್ತಿ ಗೀತೆಯೊಂದಿಗೆ ಇದೆಲ್ಲ ನಡೆಯುವಾಗ ಮನಸಿನಲ್ಲಾಗುವ ಕೋಲಾಹಲ ಹೇಗೆ ಹೇಳಲಿ! ನಾವು ವಾಸಿಸಿದ ಮನೆಯನ್ನು ಬೀಳಿಸಿದ ಅಥವಾ ನಮ್ಮ ತಾಯಿಯನ್ನು ಬೀಳ್ಕೊಡುವ ಸಂಕಟ ಅದು...

 ಗೊತ್ತಲ್ಲವೆ, ಮಾಮೂಲಿಯಾಗಿ ಸೇನಾಪಡೆಗಳಲ್ಲಿ ಮಹಿಳೆಯರಿಗೆ ಅತ್ಯಂತ ಗೌರವದ ಸ್ಥಾನ. ನೌಕಾಸೇನಾಪಡೆಗಳ ಹಡಗಿನ ಕ್ಯಾಪ್ಟನ್, ಆಫೀಸರ್, ಯಾರೇ ಇರಲಿ, ಹಡಗಿನೊಳಗೆ ಮಹಿಳೆ (ಆಕೆ ಅದನ್ನು ಸುಮ್ಮನೆ ನೋಡಿ ಹೋಗಲು ಬಂದ ಮಹಿಳೆಯೇ ಇರಬಹುದು) ಬಂದಳೆಂದರೆ ಅಂತಸ್ತುಗಿಂತಸ್ತು ಏನೊಂದನೂ ಗಣಿಸದೆ ತಕ್ಷಣ ಸೆಲ್ಯೂಟ್ ಹೊಡೆದು ಸ್ವಾಗತಿಸುವುದು ಅಲ್ಲಿನ ಒಂದು ಪರಂಪರೆ.ಹಡಗು ಎಂದರೆ ಸ್ತ್ರೀಸಮಾನ. ಸಮುದ್ರದಲ್ಲಿ ಉದ್ಛವಿಸುವ ನಾನಾ ಆತಂಕಗಳಿಂದ ನಮ್ಮನ್ನು ಕಾಪಾಡುವ ಮಾತೆ ಅವಳು ಎಂದೇ ನಾವು ಪರಿಗಣಿಸುವವರು. ಎಂತಲೇ ಹಡಗಿಗೆ ವಿದಾಯ ಹೇಳುವ ಸಂದರ್ಭದಲ್ಲಿ ಅದು ನೀರಿಗಿಳಿದ ದಿನದಿಂದ ಹಾದುಬಂದ ನಾನಾ ಸಾಹಸಗಾಥೆಗಳನ್ನು ನೆನೆದು ಹಾಡಿ ಹೊಗಳುವ ಕ್ರಮವಿದೆ. ಅದನ್ನು ಕೃತಜ್ಞತೆಯಿಂದ ನೆನೆಯುವುದಿದೆ. ಅದರೊಡನೆ ವರ್ಷಗಟ್ಟಲೆ ಕಳೆದ ಸಿಬ್ಬಂದಿಗಂತೂ ಅದು ಅತ್ಯಂತ ಸಂಕಟದ ಗಳಿಗೆ.ತಮ್ಮ ಅತ್ಯಂತ ಆಪ್ತರೊಬ್ಬರನ್ನು ಕಳಿಸಿಕೊಟ್ಟೆವೆಂಬಂತೆ, ತಮ್ಮ ತಾಯಿಯನ್ನೇ ಕಳೆದುಕೊಂಡಂತೆ ಅವರು ಗಳಗಳನೆ ಅತ್ತ ಪ್ರಸಂಗಗಳೂ ಇವೆ. ಒಬ್ಬೊಬ್ಬರೂ ಅವರವರು ಆ ಹಡಗಿನಲ್ಲಿ ಕಳೆದ ತಮ್ಮ ದಿನಗಳನ್ನು ಆತಂಕಗಳನ್ನು ಒಂದೊಂದಾಗಿ ನೆನೆಯುತ್ತ ತಮ್ಮನ್ನು ಆಕೆ ತನ್ನ ಮಡಿಲಲ್ಲಿ ಎಷ್ಟು ಮುಚ್ಚಟೆಯಾಗಿ ಜೋಪಾನ ಮಾಡಿದಳು. ಇಲ್ಲವಾದರೆ ಇವತ್ತು ತಾವಿಲ್ಲಿ ಇರಲುಂಟೆ? ಅಂತೆಲ್ಲ ಮಾತಾಡಿಕೊಳ್ಳುತ್ತಿರುತ್ತಾರೆ. ಆ ಹಡಗಿಗೆ ನಿಜವಾಗಿಯೂ ಜೀವ ಇದೆಯೆಂಬ ಅವಳೂ ತಮ್ಮ ಮಾತುಗಳನ್ನು ಆಲಿಸುತ್ತ ತಾನೂ ಇವರನ್ನೆಲ್ಲ ಬಿಟ್ಟು ಹೋಗಲು ಸಂಕಟಪಡುತ್ತಿರುವಳೆಂಬ ಖಡಾಖಂಡಿತ ನಂಬಿಕೆಯಲ್ಲಿ ನಡೆಯುವ ನೆನವರಿಕೆಗಳು ಇವೆಲ್ಲ.ಆ ನಂಬಿಕೆ ಹುಸಿ ಎನ್ನಬೇಡಿ. ಜಡವಸ್ತುಗಳೆಂದು ನಾವು ಭಾವಿಸುವುದಷ್ಟೆ. ಅವುಗಳೊಡನೆ ಒಮ್ಮೆ ಬಾಂಧವ್ಯ ಸಂಭವಿಸಿತೆಂದರೆ, ಅವು ಜಡವಲ್ಲ, ನಮ್ಮನ್ನು ಪೋಷಿಸುವ ಸ್ನೇಹಜೀವಗಳೇ ಆಗಿಬಿಡುತ್ತವೆ. ಪ್ರತಿಯೊಂದು ಹಡಗೂ ಪ್ರತಿಯೊಂದು ವಿಮಾನವೂ, ಅದಿರಲಿ ಪ್ರತಿಯೊಂದು ರೈಫಲ್ ಕೂಡ ಅದರದೇ ಒಂದು ವ್ಯಕ್ತಿತ್ವ ಹೊಂದಿರುತ್ತದೆ. ಅದನ್ನು ಬಳಸುವವರೊಡನೆ ಅದು ಸಂವಾದಿಸುತ್ತದೆ.ಮುಂದೇನಾಗಬಹುದೆಂದು ಭವಿಷ್ಯವನ್ನು ಕೂಡ ಅದರದೇ ಭಾಷೆಯಲ್ಲಿ ಉಸುರುತ್ತದೆ. ಹೀಗೆ ಮಾಡೆನ್ನುತ್ತದೆ, ಸಂಕಷ್ಟ ಸಮಯದಲ್ಲಿ ದಾರಿ ಸೂಚಿಸುತ್ತದೆ. ಅದೊಂದು ಅನುಭವವೇ ಬೇರೆ. (ಸಂಗೀತ ಸಂಯೋಜಕ ಭಾಸ್ಕರ್ ಚಂದಾವರ್ಕರ್ ಸಂಗೀತವಾದ್ಯಗಳ ತಯಾರಕರ ಕುರಿತು ತಮ್ಮ ನೆನಪು ಹೇಳುತ್ತ... “ತಯಾರಕರು ತಮಗೆ ಸಿಕ್ಕ ಆರ್ಡರ್‌ನಂತೆ  ವಾದ್ಯವನ್ನು ಸಿದ್ಧಪಡಿಸಿ ಅದು ತಯಾರಾದ ದಿನವೇ ಅದೊಂದು ಜೀವಂತವ್ಯಕ್ತಿಯೋ ಎಂಬಂತೆ ಅಂಶಕುಂಡಲಿ ಬರೆಯುತಿದ್ದರು.ಆಮೇಲೆಯೇ ಅದನ್ನು ಖರೀದಿಗಾರರಿಗೆ ಹಸ್ತಾಂತರಿಸುತಿದ್ದುದು. `ನನ್ನ ಮಗುವಿದು, ನಿಮಗೊಪ್ಪಿಸುತಿದ್ದೇನೆ. ಜೋಪಾನ ನೋಡಿಕೊಳ್ಳಿ~. ಈ ರೀತಿಯ ಭಾವನಾತ್ಮಕ ಸಂಬಂಧವಿಟ್ಟುಕೊಳ್ಳುತಿದ್ದ ತಯಾರಕ ಕಲಾವಿದರು ಅಂದಿನವರು. ಒಮ್ಮೆ ನನ್ನ ಸಿತಾರನ್ನು ಹಿರೇನ್‌ರಾಯ್ ಅವರಲ್ಲಿಗೆ ಒಯ್ದಾಗ ಆತ  ನನ್ನ ಮಗಳು ತವರಿಗೆ ಬಂದಂತಾಯಿತು. ಹಾಂ, ಹೇಗಿದ್ದಾಳೆ ಇವಳೂ?... ಎಂದು ಕರಕೊಂಡಿದ್ದರು”- `ಸಂಗೀತ ಸಂವಾದ~ ಕೃತಿ)ನಮಗೂ ಕೂಡ ಹಡಗಿನಲ್ಲಿ ದಿನಗಟ್ಟಲೆ ಸಮುದ್ರದ ಮೇಲಿರುತ್ತ ಆ ನಿರ್ದಿಷ್ಟ ಹಡಗಿನ ದೌರ್ಬಲ್ಯಗಳು, ಸಾಮರ್ಥ್ಯ, ಅದು ಎಲ್ಲಿ ಹೇಗೆ ಮುನಿಯುತ್ತದೆ, ಹೇಗೆ ಇದ್ದರೆ ಸಮಾಧಾನದಲ್ಲಿರುತ್ತದೆ. ಎಲ್ಲವನ್ನು ಮನುಷ್ಯರ ಜೊತೆ ಇದ್ದರೆ ಹೇಗೆ ಹಾಗೆಯೇ ಅರಿವಿಗೆ ಬಂದಿರುತ್ತದೆ. ಹೀಗೆ ನಾವು ಪರಸ್ಪರ ರಹಸ್ಯಗಳನೆಲ್ಲ ತಿಳಿದಿರುತ್ತೇವೆ.ವಿಚಿತ್ರ ಕಂಡಿತೆ? ಸಹಜವಾದ್ದನ್ನೇ ಹೇಳುತಿದ್ದೇನೆ ನಾನು. ಯಾವುದೇ ಯಂತ್ರವನ್ನು ಬಳಸುತ್ತ ಬಳಸುತ್ತ ಅದರೊಡನೆ ತಂತಾನೇ ಬೆಳೆಯುವ ಜೀವಂತ ನಂಟು ಅದು. ಎಂತಲೇ ಒಂದೊಂದು ಹಡಗಿನ ವಿದಾಯವೆಂದರೆ ಅದರೊಡನೆ ನೌಕಾಪಡೆಯೊಂದು ಹಲವರ್ಷಗಳಿಂದ ಬೆಸೆದುಕೊಂಡ ಸುದೀರ್ಘ ಬಾಂಧವ್ಯಕ್ಕೆ ವಿದಾಯ ಹೇಳಿದಂತೆ. ಅವೆಲ್ಲ ಇನ್ನು ನೆನಪು ಮಾತ್ರವಾಗುವಂತೆ... ಸುಲಭವೆ ಇದು? ಕರುಳು ಕಿತ್ತು ಬರುವಂತಹ ಅನುಭವ”. ಆತ ತುಸು ಹೊತ್ತು ಸುಮ್ಮನೆ ಕುಳಿತರು. ತಡೆದು-

 

“ಎಂಥ ವೇದನೆ ಅಮ್ಮ, ನಿನ್ನ ಕಳಿಸುವ ಗಳಿಗೆ

ಪೋಷಿಸಿದೆ ಜೀವಕ್ಕೆ ಜೀವ ಊದಿದೆ

ಕೊಟ್ಟೆ ದೀರ್ಘಾಯುಷ್ಯ ಹರಸಿ ಏಳಿಗೆಯನೆ

ದಣಿದೆಯಾ ತಾಯೀ, ಗಮನಿಸಲೆ ಇಲ್ಲ ನಾ, ಕ್ಷಮಿಸು

ಇನ್ನಾದರೂ ನಿನಗಿರಲಿ ಶಾಂತಿ ವಿಶ್ರಾಂತಿ

ವಿದಾಯ ತಾಯೀ ವಿದಾಯ ನಿನಗೆ”

ಎಂದು ಒಬ್ಬ ನಾವಿಕ ಆ ಸಂದರ್ಭದಲ್ಲಿ ಕಟ್ಟಿ ಹಾಡಿದ ಪದ್ಯವನ್ನು ರಾಗವಾಗಿ ಕಣ್ತುಂಬಿ ನೆನೆದರು.`ಏನೋ ಯೋಚನೆ ಮಾಡುತ್ತಾ ಇದ್ದಿರಿ, ನಾನು ಬಂದೆ, ನನ್ನ ಹರಿಕತೆ ಬಿಚ್ಚಿಕೊಂಡೆ...~

`ಇಲ್ಲ ಇಲ್ಲ ಏನಿಲ್ಲ~ಅಂತಂದರೂ ಮೆಲ್ಲಗೆ `ಒಂದು ಗಂಟೆ ಮುಂಚಷ್ಟೆ, ಜನಬಲ ಧನಬಲ ಎಲ್ಲವೂ ಇದ್ದು ತುಂಬು ಬದುಕನ್ನು ಬಾಳಿದ ದೊಡ್ಡ ಮನೆತನದ ಪರಿಚಿತ ಮಹಿಳೆಯೊಬ್ಬರು ನಿನ್ನೆ ರಾತ್ರಿ ವೃದ್ಧಾಶ್ರಮದಲ್ಲಿ ತೀರಿಕೊಂಡರೆಂಬ ಸುದ್ದಿ ಹೇಳಿದೆ. ಏನೂ ಇಲ್ಲದವರ ಕತೆ ಹೇಗೂ ಆಯಿತು. ಇದು ಕೇಳಿ! ಎಕ್ರೆಗಟ್ಟಲೆ ಆಸ್ತಿ ಹಣ ಎಲ್ಲ ಇದ್ದೂ! ಮನುಷ್ಯನ ಒಳಗೆ ಜಾಗವೇ ಸಣ್ಣದಾಗುತ್ತ ಹೋಗುತ್ತಿದೆಯೆ ಹಾಗಾದರೆ? ನೀವು ಒಂದು ಹಡಗಿಗೆ ಹೇಳುವ ವಿದಾಯ ಸಮಾರಂಭ ಕೇಳುತಿದ್ದರೆ...ಮಾತು ಕತ್ತರಿಸಿ ಅವರೆಂದರು- “ಅದೆಲ್ಲ ಅದೃಷ್ಟ ವಿಚಾರ ಇವರೆ. ಇನ್ನಿನ್ನು ಅದು ಒಫೀಶಿಯಲ್ಲೇ ಆದೀತು ಎಂಬ ಭಯ ನನಗೆ. ಹೆಚ್ಚಾಗಿ ಕೆಳಮಟ್ಟದ ಕೆಲಸದವರು ರಜೆ ಕೇಳುವುದು ಜಾಸ್ತಿಯಷ್ಟೆ? ಅವರು ನೀಡುವ ಕಾರಣಗಳಲ್ಲಿ ಯಾವಾಗಲೂ ಅಪ್ಪನಿಗೆ ಅಥವಾ ಅಮ್ಮನಿಗೆ ಹುಶಾರಿಲ್ಲ ಎಂಬುದೇ. ಊರಿಂದ ದೂರ ಬಂದಿರುತ್ತಾರಲ್ಲ.ಹಾಗಾಗಿ ಅವರಿಗೆ ರಜೆ ಬೇಕೇ ಬೇಕಾಗುತ್ತದೆ. ಅಂಥಲ್ಲಿ ಒಬ್ಬ ಅಧಿಕಾರಿ, ತಮಾಷೆಗೆ ಅಲ್ಲ, ಗಂಭೀರವಾಗಿಯೇ `ನಿಮ್ಮ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿಬಿಡಿ. ಈ ರಜೆ ಕೇಳುವ ಅಥವಾ ಕೊಡುವ ಕರಕರೆಯೇ ಇರುವುದಿಲ್ಲ~ ಎಂದನಂತೆ. ಹೇಗಿದೆ”.***

ಇಷ್ಟಕ್ಕೂ ಈತ ತಮ್ಮ ಮಕ್ಕಳ ಬಗ್ಗೆ ಒಂದೂ ಶಬ್ದ ಹೇಳಲಿಲ್ಲ, ಯಾಕೆ? ನಾನಾದರೂ ಕೇಳೇ ಇಲ್ಲ. ಮಕ್ಕಳು ಏನು ಮಾಡುತ್ತಾರೆ, ಎಲ್ಲಿದ್ದಾರೆ ಕೇಳಬೇಕು. ಆದರೆ ಅಲ್ಲಿ ಅವರ ಕಣ್ಣಂಚಲ್ಲಿ ಮಾತಿನುದ್ದಕೂ ಹೊಳೆಯುತಿದ್ದ ಹನಿಗೆರೆ... ಅದು ಕೇವಲ, ಯಾವತ್ತೋ ವಿದಾಯ ಹೇಳಿದ ತಮ್ಮ ಹಡಗಿನ ನೆನಪಿನ ಸೆಳವು ಮಾತ್ರವೆ ಅಥವಾ ಆ ನೆಪದಲ್ಲಿ ಸೂಸುತ್ತಿರುವ ಒಳಗಣ ಯಾವುದೋ ಬೇರೆಯೇ ಒಂದು ನೋವೆ?

ಏನೋ ಇದೆ... ಮಕ್ಕಳಿಂದ ಅಂತಲೇ ಯಾಕೆ ಎಣಿಸುತಿದ್ದೇನೆ ನಾನು? ಇರಬಹುದೆ, ಮಗನಾಗಿ ತಾಯಿತಂದೆಯನ್ನು ಇವರು...

ಅಯ್ಯೋ ಬೇಡ, ಪ್ರಶ್ನೆಯೇ ಬೇಡ.

***

ಕಡುಮೌನದಲ್ಲಿ ಕುಳಿತೇ ಇದ್ದೆವು. ಸೂರ್ಯ ಇಲ್ಲಿನ ಕೆಲಸ ಮುಗಿಸಿ ಪಶ್ಚಿಮಕ್ಕಿಳಿದು ಇನ್ನೊಂದು ಮನೆಗೆಲಸಕ್ಕೆ ತೆರಳುವ ಮುನ್ನ `ನಾಳೆ ಬರುವೆ~ ಎನ್ನುತ್ತ ಇಂದಿಗೆ ವಿದಾಯ ಹೇಳಿದ್ದೂ ತಿಳಿಯಲಿಲ್ಲ.ಎಚ್ಚರಾದಂತೆ ಎದ್ದು ಹೊರಟರು ಅವರು.

ನಾನು ಎದ್ದು ನಿಂತೆ.

ಮತ್ತೆ, ನಿ..ಧಾ..ನ ಅಲ್ಲಿಯೇ ಕುಳಿತೆ.

ಮದುವೆ ಮಕ್ಕಳು, ಬದುಕು, ವಾಂಛೆ, ವಿಸರ್ಜನೆ, ವಿದಾಯ ಎಲ್ಲ ಇದ್ದದ್ದೇ.

ಆದರೆ ಈ ವೃದ್ಧಾಶ್ರಮ... ನೆನಪುಗಳನ್ನು ಬೇಕೆಂದೇ ತಟ್ಟಿ ಹಾರಿಸಿ ಬಿಸುಡುವ ಈ ಬಗೆಯ ನಿರ್ಜೀವ ವಿದಾಯ...

ಇದನ್ನು ಜೀರ್ಣಿಸಿಕೊಳ್ಳುವುದು...

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry