ಶುಕ್ರವಾರ, ನವೆಂಬರ್ 15, 2019
26 °C

ವಿಧಾನಸಭಾ ಚುನಾವಣೆ: ಮಹಿಳೆಯರು ಮತ್ತೆ ಅಂಚಿಗೆ

ಆರ್. ಇಂದಿರಾ
Published:
Updated:
ವಿಧಾನಸಭಾ ಚುನಾವಣೆ: ಮಹಿಳೆಯರು ಮತ್ತೆ ಅಂಚಿಗೆ

ರ್ನಾಟಕದ ರಾಜಕೀಯ ರಣಭೂಮಿ ಮತ್ತೊಮ್ಮೆ ಕದನಕ್ಕೆ ಸಜ್ಜಾಗಿದೆ. ಹಿಂದೆಂದಿಗಿಂತ ಈ ಬಾರಿಯೂ ಪ್ರಜಾಸತ್ತೆಯ ಸೋಗಿನಲ್ಲಿ ನಡೆಯುತ್ತಿರುವ ಅಧಿಕಾರದ ಬೇಟೆಯಲ್ಲಿ ಬಳಸುತ್ತಿರುವ ಅಸ್ತ್ರಗಳಲ್ಲಾಗಲಿ ಚುನಾವಣಾ ಕಣಕ್ಕಿಳಿದಿರುವ ಕದನ ಕಲಿಗಳ ರಾಜಕೀಯ ಲೆಕ್ಕಾಚಾರಗಳಲ್ಲಾಗಲಿ ಹೊಸತೇನೂ ಕಾಣುತ್ತಿಲ್ಲ. ಕೆಲ ಹೊಸ ಪಕ್ಷಗಳು ಹಾಗೂ ಹೊಸ ಮುಖಗಳನ್ನು ಬಿಟ್ಟರೆ, ಈ ಬಾರಿಯ ವಿಧಾನಸಭಾ ಚುನಾವಣೆಗಳಲ್ಲಿಯೂ ಕಂಡು ಬರುತ್ತಿರುವುದು ಮತ್ತದೇ ಪಕ್ಷಗಳ ಅಥವಾ ವ್ಯಕ್ತಿಗಳ ಬಲಾಬಲ ಪ್ರದರ್ಶನ. ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ತೆರೆದ ಅಥವಾ ಮುಚ್ಚಿದ ಹೊಂದಾಣಿಕೆಗಳು, ಅಧಿಕಾರ ಲಾಲಸೆಗಾಗಿ ಪಕ್ಷದಿಂದ ಪಕ್ಷಕ್ಕೆ ನಿಷ್ಠೆಯನ್ನು ಬದಲಾಯಿಸುತ್ತಿರುವ ಅಥವಾ ಮುನಿಸಿಕೊಂಡು ತೆರೆಮೆರೆಯಲ್ಲಿ ಗುದ್ದಾಟದಲ್ಲಿ ತೊಡಗಿರುವ ಅನೇಕ ಜನ ನಾಯಕರು ಮತ್ತು ಮತದಾರರ ಓಲೈಕೆಗಾಗಿ ಈಗಾಗಲೇ ಕಾನೂನುಬಾಹಿರ ಕ್ರಮಗಳನ್ನು ಅನುಸರಿಸಲಾರಂಭಿಸಿರುವ ಕೆಲ ಅಭ್ಯರ್ಥಿಗಳು.ಹೆಚ್ಚು ಕಡಿಮೆ ಪುರುಷಕೇಂದ್ರಿತವಾಗಿರುವ ರಾಜ್ಯ ರಾಜಕಾರಣದಲ್ಲಿ ಈ ಬಾರಿಯಾದರೂ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಬಹುದೇನೋ ಎನ್ನುವ ಆಶಯವೊಂದಿತ್ತು. ಆದರೆ ಮತ್ತೊಮ್ಮೆ ಈ ನಂಬಿಕೆ ಹುಸಿಯಾಗಿದೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಯಾವ ಪಕ್ಷವೂ ಮಹಿಳೆಯರಿಗೆ ಮುಕ್ತ ಸ್ಪರ್ಧೆಗೆ ಅವಕಾಶ ನೀಡುವ ವಿಚಾರ ಹಾಗಿರಲಿ, ಸೂಕ್ತ ಎನಿಸುವಷ್ಟು ಪ್ರಾತಿನಿಧ್ಯವನ್ನು ನೀಡಿಲ್ಲ. ಹಾಲಿ ಪರಿಸ್ಥಿತಿಯನ್ನು ನೋಡಿದರೆ ಎಲ್ಲ ಪಕ್ಷಗಳಿಂದ ಸೇರಿ ಶೇಕಡ 10 ರಷ್ಟು ಸ್ಥಾನಗಳಲ್ಲಿಯೂ ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶವನ್ನು ನೀಡುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.ದಕ್ಷಿಣ ಭಾರತದ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಇತಿಹಾಸದಲ್ಲೇ ಮಹಿಳೆಯರಿಗೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ರಾಜಕೀಯ ಪ್ರಾತಿನಿಧ್ಯ ದೊರೆತಿರುವುದು ಕರ್ನಾಟಕದಲ್ಲಿ. ಕಳೆದ ಮೂರು ಚುನಾವಣೆಗಳ ವಿಷಯದಲ್ಲಂತೂ ಈ ಅಂಶ ತೀರಾ ಎದ್ದು ಕಾಣುವಂತಹುದು. ಚುನಾವಣಾ ಆಯೋಗದಿಂದ ಲಭ್ಯವಾಗಿರುವ ಮಾಹಿತಿಯ ಅನ್ವಯ ಕರ್ನಾಟಕದಲ್ಲಿ ಕಳೆದ ಮೂರು ವಿಧಾನಸಭೆಗಳಲ್ಲಿ ಮಹಿಳೆಯರ ಪಾಲು ಶೇಕಡ 2.67 ಮಾತ್ರ. ಅದೇ ಅವಧಿಯಲ್ಲಿ ಮಹಿಳಾ ಪ್ರಾತಿನಿಧ್ಯ ಆಂಧ್ರಪ್ರದೇಶದಲ್ಲಿ ಶೇಕಡ 9.97, ತಮಿಳುನಾಡಿನಲ್ಲಿ ಶೇಕಡ 9.11 ಮತ್ತು ಕೇರಳದಲ್ಲಿ ಶೇಕಡ 5.23 ಇತ್ತು. ನಮ್ಮ ರಾಜ್ಯದಲ್ಲಿ 1957 ಮತ್ತು 1962ರಲ್ಲಿ ಶೇಕಡ 8 ರಷ್ಟಿದ್ದ ಮಹಿಳೆಯರ ಪ್ರಮಾಣ ಕಾಲ ಕಳೆದಂತೆ ಇಳಿಮುಖವಾಗುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಮಹಿಳೆಯರು ಸಂಪೂರ್ಣವಾಗಿ ಅಂಚಿಗೆ ತಳ್ಳಲ್ಪಟ್ಟಿರುವ ಒಂದು ಗುಂಪು ಎನ್ನುವುದಕ್ಕೆ ಸಾಕ್ಷಿಯಾಗಿದೆ.ಈ ಬಾರಿಯಂತೂ ರಾಜಕೀಯ ಪಕ್ಷಗಳು ಟಿಕೆಟ್ ಹಂಚಿಕೆ ವಿಚಾರದಲ್ಲಿ ಮಹಿಳಾ ಸದಸ್ಯರನ್ನು ಅಲಕ್ಷಿಸುತ್ತಿರುವುದನ್ನು ಪ್ರತಿಭಟಿಸಿ ಅಲ್ಲಲ್ಲಿ ಅಸಮಾಧಾನದ ಧ್ವನಿಗಳು ಹೊರಹೊಮ್ಮಿದ್ದವು. ಆದರೆ ಯಾವುದೇ ಪಕ್ಷದಿಂದ ಪ್ರತಿಭಟನೆಗೆ ನಿರೀಕ್ಷಿತ ಪ್ರತಿಸ್ಪಂದನವೂ ದೊರೆಯಲಿಲ್ಲ, ಅಥವಾ ಗೋಚರವಾಗುವಂಥ ಪ್ರಮಾಣದಲ್ಲಿ ಮಹಿಳೆಯರಿಗೆ ಟಿಕೆಟ್ಟುಗಳೂ ಸಿಗಲಿಲ್ಲ. ಮಹಿಳೆಯನ್ನು ಪಕ್ಷದ ಅಧ್ಯಕ್ಷೆಯನ್ನಾಗಿ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿಯೂ ಮಹಿಳಾ ಪರವಾದ ಅಲೆ ಇಷ್ಟು ವರ್ಷಗಳಾದರೂ ಏಳದಿರುವುದನ್ನು ನೋಡಿದಾಗ ನಮ್ಮ ರಾಜ್ಯ-ರಾಷ್ಟ್ರ ರಾಜಕಾರಣಗಳ ಮೇಲೆ ಪುರುಷಪ್ರಧಾನ ವ್ಯವಸ್ಥೆ ಹೊಂದಿರುವ ಹಿಡಿತ ಎಷ್ಟು ಗಟ್ಟಿಯಾದುದು ಎಂಬುದರ ಬಗ್ಗೆ ಸ್ಪಷ್ಪ ಕಲ್ಪನೆ ದೊರೆಯುತ್ತದೆ.ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಟಿಕೆಟ್ ಹಂಚಿಕೆಯ ಪ್ರಕ್ರಿಯೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅನೇಕ ಮಹಿಳಾ ಸದಸ್ಯರು ದೆಹಲಿಯ ಪಕ್ಷದ ಕಛೇರಿಯ ಮುಂದೆ ಪ್ರತಿಭಟನೆಗೆ ಇಳಿದು, ಈ ಬಾರಿಯಾದರೂ ತಮಗೆ ಸೂಕ್ತ ಅವಕಾಶವನ್ನು ನೀಡಬೇಕೆಂಬ ಬೇಡಿಕೆಯಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಕನಿಷ್ಠ ಪಕ್ಷ 28 ಸ್ಥಾನಗಳಲ್ಲಾದರೂ ಮಹಿಳೆಯರಿಗೆ ಸ್ಪರ್ಧಿಸುವ ಅವಕಾಶವನ್ನು ನೀಡಬೇಕೆಂಬುದು ಅವರ ಒತ್ತಾಯವಾಗಿತ್ತು. ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಘಟನೆ ಸೃಷ್ಟಿಸಿದ  ಮಹಿಳಾ ಅಲೆ  ತಮ್ಮ ಪರವಾಗಿ ಕೆಲಸ ಮಾಡಬಹುದು ಎಂಬ ಭ್ರಮೆಯಲ್ಲಿದ್ದ ಪಕ್ಷದ ಮಹಿಳಾ ಸದಸ್ಯರಿಗೆ ತೀವ್ರ ನಿರಾಶೆಯುಂಟಾದದ್ದು ಕೇವಲ 8 ಸ್ಥಾನಗಳಲ್ಲಿ ಮಾತ್ರ ಅವರಿಗೆ ಅವಕಾಶಗಳು ದೊರೆತಾಗ.ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಮಹಿಳೆಯರಿಗೆ ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಆಂತರಿಕ ಮೀಸಲಾತಿ ನೀಡುವುದಕ್ಕೆ ತನ್ನ ಬದ್ಧತೆಯನ್ನು ಕಾಂಗ್ರೆಸ್ ಪಕ್ಷ ವ್ಯಕ್ತಪಡಿಸುತ್ತಲೇ ಬಂದಿದೆ. ಆದರೆ ಇದು ಆಶಯದ ಮಟ್ಟದಲ್ಲಿ ಮಾತ್ರ ಉಳಿದಿದೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಕಳೆದ ಚುನಾವಣೆಗಳಲ್ಲಿ ಈ ಪಕ್ಷದಿಂದ ಸ್ಪರ್ಧಿಸಿದ್ದ ಹನ್ನೊಂದು ಮಹಿಳೆಯರಲ್ಲಿ ಒಬ್ಬರೂ ಗೆಲುವನ್ನು ಸಾಧಿಸಲಾಗಲಿಲ್ಲ ಎಂಬುದನ್ನು ಮುಂದಿಟ್ಟುಕೊಂಡು ಈ ಬಾರಿ ಅವರಿಗೆ ಸ್ಪರ್ಧಾವಕಾಶವನ್ನು ನೀಡಲು ಪಕ್ಷ ಹೆಚ್ಚೆನೂ ಆಸಕ್ತಿಯನ್ನು ತೋರಲಿಲ್ಲ ಎಂದು ಹೇಳಲಾಗುತ್ತಿದೆ.ಮಹಿಳೆಯರನ್ನು  `ಸೋಲುವ ಅಭ್ಯರ್ಥಿ'ಗಳು ಎಂದು ಬಿಂಬಿಸುವ ಧೋರಣೆ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಅವರಿಗೆ ಟಿಕೆಟ್ಟನ್ನು ನೀಡಿದರೂ ಚುನಾವಣೆಗಳನ್ನು ಗೆಲ್ಲುವುದು ಅಷ್ಟು ಸುಲಭವಲ್ಲ ಎಂಬುದು ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಿಲುವು. ಇದು ನಿಜವೇ ಆಗಿದ್ದಲ್ಲಿ  `ಏಕೆ ಹೀಗಾಗುತ್ತದೆ' ಎಂಬ ಪ್ರಶ್ನೆಯನ್ನೆತ್ತಿ ಅದಕ್ಕೆ ಉತ್ತರವನ್ನು ಹುಡುಕುವುದರ ಜೊತೆಗೆ, ಪರಿಸ್ಥಿತಿಯನ್ನು ಸರಿಪಡಿಸಲು ಇನ್ನು ಮುಂದಾದರೂ ರಾಜಕೀಯ ಪಕ್ಷಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿಶ್ಲೇಷಣೆಯನ್ನು ಕೈಗೊಳ್ಳುವ ಅಗತ್ಯವಿದೆ.ಮೊದಲಿಗೆ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಮಹಿಳೆಯರಿಗೆ ಅಡ್ಡಿಯಾಗುವಂಥ ಅಂಶಗಳಾವುವು ಎಂಬ ವಿಷಯವನ್ನು ಭಾವನೆಗಳ ಪ್ರಪಂಚದಿಂದ ಹೊರಬಂದು ವಾಸ್ತವಗಳ ಹಿನ್ನೆಲೆಯಲ್ಲಿ ಚರ್ಚಿಸುವುದು ಮುಖ್ಯ. ದೇಶದಾದ್ಯಂತ ಅತ್ಯಧಿಕ ಸಂಖ್ಯೆಯ ಚುನಾವಣಾ ಕ್ಷೇತ್ರಗಳಲ್ಲಿ ಪುರುಷರೇ ಬಹು ಕಾಲದಿಂದ ಅಧಿಕಾರದಲ್ಲಿದ್ದು ಅವರ ವ್ಯಕ್ತಿ ಪರಿಚಯ ಮತದಾರರಿಗಿರುವುದು ಸಹಜವೇ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈ ರಾಜಕಾರಣಿಗಳು ಅನುಯಾಯಿಗಳ ಒಂದು ಗುಂಪನ್ನು ಕೂಡ ಕಟ್ಟಿಕೊಂಡಿರುತ್ತಾರೆ. ಅವರು ಅಧಿಕಾರದಲ್ಲಿ ಉಳಿಯುವುದು ಈ ನಾಯಕರಿಗೆ ಎಷ್ಟು ಮುಖ್ಯವೋ ಅವರ ಅನುಯಾಯಿಗಳಿಗೂ ಅಷ್ಟೇ ಮುಖ್ಯವಾಗಿರುತ್ತದೆ. ಚುನಾವಣೆಗಳು ಸಮೀಪಿಸಿದ ಕೂಡಲೇ ಈ ಇಡೀ ಬೆಂಬಲಿಗ ಗುಂಪು ಸಕ್ರಿಯವಾಗುತ್ತದೆ. ನಾನಾ ಬಗೆಯ ತಂತ್ರಗಳನ್ನುಪಯೋಗಿಸಿ ತಮ್ಮ ನಾಯಕರನ್ನುಳಿಸಿಕೊಳ್ಳಲು ಶ್ರಮಿಸುತ್ತದೆ.ತೀರಾ ಬೆರಳೆಣಿಸುವಷ್ಟು ಮಹಿಳಾ ಅಭ್ಯರ್ಥಿಗಳನ್ನು ಬಿಟ್ಟರೆ, ಉಳಿದ ಅಧಿಕಾರಾಕಾಂಕ್ಷಿಗಳಿಗೆ ರಾಜಕೀಯ ಅನುಭವ ಹೊಸದು. ಪುರುಷರಿಗೆ ಹೋಲಿಸಿದರೆ ಅನೇಕ ಮಹಿಳೆಯರ ರಾಜಕೀಯ ಪ್ರವೇಶವಾಗುವುದು ಅವರ ಬದುಕಿನ ಮಧ್ಯ ಭಾಗದಲ್ಲಿ. ಏಕೆಂದರೆ ಇಂದಿಗೂ ಮಹಿಳೆಯರಿಗೆ ರಾಜಕೀಯಕ್ಕಿಂತ ಸಾಂಸಾರಿಕ ಜೀವನ ಮುಖ್ಯ ಎನ್ನುವ ಮನೋಭಾವವೇ ಈ ಸಮಾಜದಲ್ಲಿ ಅತ್ಯಂತ ಪ್ರಚಲಿತವಾಗಿರುವಂತಹುದು. ರಾಜಕೀಯವನ್ನು ಪ್ರವೇಶಿಸಿದ ನಂತರವೂ ಅವರಿಗೆ ಕುಟುಂಬದ ಬೆಂಬಲ ಅತ್ಯಗತ್ಯವಾಗಿರುತ್ತದೆ. ಕುಟುಂಬ ಮೂಲಗಳಿಂದ ರಾಜಕೀಯ ಪ್ರವೇಶಕ್ಕೆ ಉತ್ತೇಜನವನ್ನು ಪಡೆಯುವಂಥ ಮಹಿಳೆಯರ ಸಂಖ್ಯೆ ಇಂದಿಗೂ ಕಡಿಮೆಯೇ. ಅದರಲ್ಲೂ ರಾಜಕೀಯವನ್ನು ಸುತ್ತುವರೆದಿರುವ ಅಪಾಯಕಾರಿ ಹಾಗೂ ಅಪರಾಧಿ ಪ್ರವೃತ್ತಿಗಳ ಬಗ್ಗೆ ಕೇಳಿರುವ ಅಥವಾ ಕಂಡಿರುವ ಎಷ್ಟು ಕುಟುಂಬಗಳು ತಮ್ಮ ಹೆಣ್ಣುಮಕ್ಕಳನ್ನು ಈ ಬದುಕನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುತ್ತವೆ?ಇಂದಿಗೂ ಬಹುತೇಕ ಮಹಿಳೆಯರು ಪುರುಷ ಅಭ್ಯರ್ಥಿಗಳಿಗಿಂತ ತಮ್ಮ ರಾಜಕೀಯ ಪ್ರವೇಶ ಹಾಗೂ ಅಧಿಕಾರವನ್ನು ಪಡೆಯುವ ಪ್ರಕ್ರಿಯೆಯಲ್ಲಿ ಪಕ್ಷದ ಪ್ರಭಾವಿ ವಲಯದ ಬೆಂಬಲವನ್ನು ಪಡೆಯಲೇಬೇಕೆನ್ನುವ ಸ್ಥಿತಿಯಲ್ಲೇ ಇದ್ದಾರೆ. ಚುನಾವಣಾ ಕ್ಷೇತ್ರವೊಂದರಲ್ಲಿ ಮಹಿಳೆಯೋರ್ವರು ಪ್ರಶ್ನಾತೀತವಾದ ಅಭ್ಯರ್ಥಿ ಎನ್ನುವಷ್ಟು ಪ್ರಬಲರಾಗಿದ್ದರೆ, ಅವರ ಆಯ್ಕೆಯ ಸುತ್ತ ಯಾವುದೇ ವಿವಾದಗಳು ಸುಳಿಯಲಾರವು. ಆದರೆ ಈ ದೇಶದಲ್ಲಿ ಇಂಥ ಸ್ಥಿತಿಯಲ್ಲಿರುವವರು ಬೆರಳೆಣಿಕೆಯಷ್ಟು ಸಂಖ್ಯೆಯ ಮಹಿಳೆಯರು ಮಾತ್ರ. ಇನ್ನುಳಿದ ಮಹಿಳೆಯರಲ್ಲಿ ಅನಿವಾರ್ಯ ಪರಿಸ್ಥಿತಿಗಳು ತಂದೊಡ್ಡಿದ ಸಂದಿಗ್ಧಗಳಿಂದಲೋ, ಪತಿ,ತಂದೆ, ಸಹೋದರ ಮರಣ ಹೊಂದಿದಾಗ ಹೊರಹೊಮ್ಮುವ ಅನುಕಂಪದ ಅಲೆಯನ್ನೇರಿ ರಾಜಕೀಯಕ್ಕೆ ತಳ್ಳಲ್ಪಡುವ ಅಥವಾ ಹೊಂದಾಣಿಕೆಯ ಅಭ್ಯರ್ಥಿಗಳಾಗಿ ಚುನಾವಣಾ ಕಣಕ್ಕಿಳಿಯುವಂಥವರೇ ಹೆಚ್ಚಿನ ಸಂಖ್ಯೆಯಲ್ಲಿರುವುದು. ಇಂಥವರಿಗೆ ರಾಜಕೀಯ ಪಕ್ಷಗಳು ಅನಿವಾರ್ಯವಾಗಿ ಬೆಂಬಲ ಸೂಚಿಸುತ್ತವೆ. ಆದರೆ ಪಕ್ಷಗಳ ಒಳಗೇ ಇಂಥ ಅನೇಕ ಮಹಿಳೆಯರು ಉಸಿರು ಕಟ್ಟಿಸುವ ವಾತಾವರಣವನ್ನು ಎದುರಿಸುವಂಥ ಪರಿಸ್ಥಿತಿಗಳು ನಿರ್ಮಾಣವಾಗಿ ಸ್ವಇಚ್ಛೆಯಿಂದಲೋ, ಬಲವಂತದಿಂದಲೋ ಅವರು ಹೊರ ನಡೆದಿರುವಂಥ ನಿದರ್ಶನಗಳೂ ಇವೆ.ಒಂದೆಡೆ ಈಗಾಗಲೇ ರಾಜಕೀಯ ಅನುಭವವನ್ನು ಪಡೆದುಕೊಂಡಿರುವ ಪುರುಷ ರಾಜಕಾರಣಿಗಳು ತಮ್ಮ ಕ್ಷೇತ್ರ ಪೋಷಣೆಯಿಂದ ಸೃಷ್ಟಿ ಮಾಡಿಕೊಂಡಿರುವ ವಲಯವನ್ನು ಭೇದಿಸಲು ಪಡಬೇಕಾದ ಕಷ್ಟ. ಮತ್ತೊಂದೆಡೆ ಕೌಟುಂಬಿಕ ಹಾಗೂ ಸಾಂಸ್ಕೃತಿಕ ಕಟ್ಟುಪಾಡುಗಳು ತಂದೊಡ್ಡುವ ಅಡ್ಡಿ,ಆತಂಕಗಳನ್ನು ಎದುರಿಸಿ ರಾಜಕೀಯ ಬದುಕನ್ನು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ. ಇವೆರಡರ ನಡುವೆ ಸಿಲುಕಿರುವ ಮಹಿಳೆಯರಿಗೆ ರಾಜಕೀಯ ಪ್ರವೇಶ ಮತ್ತು ಸುಸ್ಥಿರ ರಾಜಕೀಯ ಜೀವನಗಳೆರಡೂ ಸುಲಭದಲ್ಲಿ ದಕ್ಕುವಂಥ ಅನುಭವಗಳಲ್ಲ.ಮಹಿಳೆಯರನ್ನು ಸೋಲುವ ಅಭ್ಯರ್ಥಿಗಳೆಂದು ಬಿಂಬಿಸಿ, ಅವರನ್ನು ಅವಕಾಶ ವಂಚಿತರನ್ನಾಗಿಸುತ್ತಿರುವ ಪಕ್ಷಗಳು ಸೋಲು ಅಥವಾ ಗೆಲುವಿನ ಹೊಣೆಯನ್ನು ಸಂಪೂರ್ಣವಾಗಿ ಅವರ ಮೇಲೆಯೇ ತಳ್ಳುತ್ತಿರುವ ಹಾಗಿದೆ. ಆದರೆ ಚುನಾವಣೆಯೆಂದರೆ ಕೇವಲ ಟಿಕೆಟ್ ನೀಡುವುದಕ್ಕಷ್ಟೇ ಸೀಮಿತವಾಗಿಲ್ಲ. ಚುನಾವಣೆಗಳಲ್ಲಿ ಸೋಲು, ಗೆಲುವಿನ ಪ್ರಶ್ನೆಗಳನ್ನು ಸುತ್ತುವರೆದಿರುವುದು ಸಂಪನ್ಮೂಲಗಳ ಲಭ್ಯತೆ ಮತ್ತು ವಿನಿಮಯ. ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಪ್ರಚಾರ, ಪ್ರಯಾಣ, ಊಟೋಪಚಾರ, ಪರ ಸ್ಥಳಗಲ್ಲಿ ವಾಸ್ತವ್ಯ ಮುಂತಾದವುಗಳಿಗೆ ಅಪಾರ ಹಣ ವೆಚ್ಚವಾಗುತ್ತದೆ. ಇವು ಗೋಚರ ಖರ್ಚುಗಳಾದರೆ ಅಗೋಚರವಾಗಿ ಅಥವಾ ಅಕ್ರಮವಾಗಿ ಎಷ್ಟು ಹಣ ಪೋಲಾಗುತ್ತದೆಂಬ ವಿಚಾರ ಇಂದು ಬಹಿರಂಗವಾಗಿಯೇ ಚರ್ಚೆಗೆ ಗ್ರಾಸವಾಗಿರುವಂತಹುದು. ಈ ವ್ಯವಸ್ಥೆಯಲ್ಲಿ ಎಷ್ಟು ಜನ ಮಹಿಳೆಯರು ರಾಜಕೀಯವನ್ನು ಪ್ರವೇಶಿಸಲಾಗಲಿ, ಪ್ರವೇಶಿಸಿದರೂ ಅದರಲ್ಲಿ ಉಳಿಯಲಾಗಲಿ ಸಾಧ್ಯ?ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಂದರ್ಭದಲ್ಲೇ ಕೋಟಿಗಳ ಮಾತು ಕೇಳಿ ಬಂದಿತ್ತು. ಇನ್ನು ರಾಜ್ಯ, ರಾಷ್ಟ್ರ ಮಟ್ಟದ ಚುನಾವಣೆಗಳ ಬಗ್ಗೆ ಕೇಳಬೇಕೆ? ಬಹುತೇಕ ಮಹಿಳೆಯರಿಗೆ ಇಂಥ ಹಣಕಾಸು ಸಂಪನ್ಮೂಲ ಎಲ್ಲಿಂದ ಒದಗಿ ಬರಬೇಕು? ಕುಟುಂಬ ಮೂಲದಿಂದಲೋ ಅಥವಾ ಪಕ್ಷದ ಮೂಲದಿಂದಲೋ ಚುನಾವಣಾ ವೆಚ್ಚವನ್ನು ಭರಿಸುವಂಥ ವ್ಯವಸ್ಥೆಯಿದ್ದರೆ ಸರಿ, ಇಲ್ಲದಿದ್ದಲ್ಲಿ ಅವರಿಗೆ ಧನ ಬೆಂಬಲ ದೊರೆಯುವ ಸಾಧ್ಯತೆ ಕಡಿಮೆಯೇ. ಪುರುಷರಿಗೆ ಕುಟುಂಬದ ಆಸ್ತಿಯ ಮೇಲೂ ಅಧಿಕಾರವಿರುವುದರಿಂದ ಅವರು ಅದನ್ನು ಆಧಾರವನ್ನಾಗಿಟ್ಟುಕೊಂಡು ಚುನಾವಣಾ ಕಣಕ್ಕೆ ಧುಮುಕಬಹುದು. ಆದರೆ ಮಹಿಳೆಯರು ತಮ್ಮ ಕೌಟುಂಬಿಕ ಸಂಪನ್ಮೂಲಗಳನ್ನು ಒತ್ತೆಯಿಟ್ಟು ಚುನಾವಣೆಗಳಲ್ಲಿ ಸ್ಪರ್ಧಿಸುವಂಥ ಸಾಧ್ಯತೆ ಹೆಚ್ಚು-ಕಡಿಮೆ ಇಲ್ಲವೆಂದು ಹೇಳಿದರೂ ಉತ್ಪ್ರೇಕ್ಷೆಯಾಗಲಾರದು. ಇಂದಿಗೂ ಬಹುತೇಕ ಮಹಿಳೆಯರಿಗೆ ಆಸ್ತಿಯ ಮೇಲೆ ಅಪರಿಮಿತ ಹಕ್ಕಿಲ್ಲ. ಇದ್ದರೂ ಅದನ್ನು ರಾಜಕೀಯ ಪ್ರವೇಶಕ್ಕೆ ಆಧಾರವಾಗಿ ಬಳಸಲು ಅಗತ್ಯವಾದ ಕೌಟುಂಬಿಕ ಒತ್ತಾಸೆ ಇರುವುದಿಲ್ಲ. ಆದ್ದರಿಂದ ಮಹಿಳೆಯರ ಸಕ್ರಿಯ ರಾಜಕೀಯ ಪ್ರವೇಶಕ್ಕೆ ಅಡ್ಡಿ ಬರುವ ಕಾರಣಗಳಲ್ಲಿ ಸಂಪನ್ಮೂಲದ ಅಭಾವ ಅತ್ಯಂತ ಪ್ರಬಲವಾದ ಒಂದು ಅಂಶ.ಗ್ರಾಮ ಪಂಚಾಯಿತಿಯಿಂದ ಹಿಡಿದು ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಇದ್ದಾಗ್ಯೂ ರಾಜಕೀಯ ಪಕ್ಷಗಳ ಬೆಂಬಲವಿಲ್ಲದಿದ್ದರೆ ಮಹಿಳೆಯರು ರಾಜಕೀಯ ಪ್ರವೇಶ ಮಾಡುವುದು ಅಸಾಧ್ಯ ಎನ್ನುವಷ್ಟು ಮಟ್ಟಿಗೆ ಅವರ ರಾಜಕೀಯ ಭಾಗವಹಿಸುವಿಕೆ ಪಕ್ಷಗಳ ಪೋಷಣೆಯನ್ನು ಅವಲಂಬಿಸಿದೆ. ಒಂದು ಸೈದ್ಧಾಂತಿಕ ಮಟ್ಟದಲ್ಲಿ ಮುಕ್ತ ಸ್ಧಾನಗಳಲ್ಲಿ ಚುನಾವಣೆಯನ್ನು ಎದುರಿಸಬಹುದಾದ ಸಮಾನ ಅವಕಾಶ ಮಹಿಳೆಯರಿಗಿದ್ದರೂ ವಾಸ್ತವದಲ್ಲಿ ಬಹುಪಾಲು ಮುಕ್ತ ಸ್ಥಾನಗಳು ಹೋಗುತ್ತಿರುವುದೇ ಪುರುಷರ ಪಾಲಿಗೆ. ತಾವು ಪ್ರಗತಿಪರ, ಜಾತ್ಯತೀತ, ಜನಪರ ಎಂದು ಹೇಳಿಕೊಳ್ಳುವ ಪಕ್ಷಗಳೂ ಈ ಪ್ರವೃತ್ತಿಯಿಂದ ಹೊರತಾಗಿಲ್ಲ. ರಾಜ್ಯ-ರಾಷ್ಟ್ರ ರಾಜಕಾರಣದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂಬ ಮಸೂದೆ ಕೂಡ ಸಂಸತ್ತಿನಲ್ಲಿ ಪ್ರತಿಭಟನೆಗಳನ್ನು ಎದುರಿಸುತ್ತಲೇ ಬಂದಿದ್ದು, ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯವನ್ನು ಸಂವಿಧಾನಾತ್ಮಕ ಹಕ್ಕಾಗಿ ಪರಿವರ್ತಿಸುವ ವಿಚಾರ ಬಂದಾಗ ಮಾತ್ರ ಎಲ್ಲ ಪಕ್ಷಗಳೂ ಒಂದಾಗುತ್ತಿರುವುದು ನಮ್ಮ ಪ್ರಜಾಸತ್ತಾತ್ಮಕ ರಾಜಕಾರಣದ ಅತ್ಯಂತ ದೊಡ್ಡ ವಿಪರ್ಯಾಸಗಳಲ್ಲಿ ಒಂದಾಗಿದೆ.ಪರಿಸ್ಥಿತಿ ಹೀಗಿರುವಾಗ ಮಹಿಳೆಯರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣವನ್ನು ಪ್ರವೇಶಿಸಬೇಕಾದರೆ ಪ್ರತಿ ಪಕ್ಷದಲ್ಲಿಯೂ ಆಂತರಿಕ ಮಹಿಳಾ ಮೀಸಲಾತಿಯನ್ನು ಕಡ್ಡಾಯ ಮಾಡುವಂಥ ಸಂವಿಧಾನಾತ್ಮಕ ಬದ್ಧತೆಗೆ ಪಕ್ಷಗಳನ್ನು ಒಳಪಡಿಸಬೇಕು. ಸ್ವೀಡನ್, ನಾರ್ವೆ, ಡೆನ್‌ಮಾರ್ಕ್, ಐರ್ಲೆಂಡ್ ದೇಶಗಳಲ್ಲಿ ಪ್ರತಿ ಪಕ್ಷದಲ್ಲಿಯೂ ಇಂತಿಷ್ಟು ಸೀಟುಗಳನ್ನು ಮಹಿಳೆಯರಿಗೆ ನೀಡಲೇಬೇಕೆಂಬ ನಿಯಮಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಸ್ವಇಚ್ಛೆಯಿಂದಲೇ ಬದ್ಧವಾಗಿರುವಂಥ ವ್ಯವಸ್ಥೆಯನ್ನು ಸೃಷ್ಟಿ ಮಾಡಲಾಗಿದೆ. ಆದ್ದರಿಂದಲೇ ಈ ರಾಷ್ಟ್ರಗಳ ಸಂಸತ್ತುಗಳಲ್ಲಿ, ಮಂತ್ರಿ ಮಂಡಲಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇಕಡ 40ರಿಂದ 50ರಷ್ಟು ಪ್ರಮಾಣವನ್ನು ತಲುಪುತ್ತಿದೆ.ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ಮಹಿಳೆಯರಿಗೆ ರಾಷ್ಟ್ರ ರಾಜಕಾರಣದಲ್ಲಿ ಮೀಸಲಾತಿಯನ್ನು ನೀಡಬೇಕೆನ್ನುವ ಧ್ವನಿಗಳು ಗಟ್ಟಿಯಾಗುತ್ತಿವೆ. ಭಾರತ ಇನ್ನೂ ಈ ರಾಷ್ಟ್ರಗಳ ಸಾಲಿಗೆ ಸೇರದಿರುವುದು ವಿಷಾದನೀಯ. ನಮ್ಮ ದೇಶದ ರಾಜಕಾರಣದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯಬೇಕೆಂದರೆ ಪ್ರತಿ ರಾಜಕೀಯ ಪಕ್ಷದಲ್ಲೂ ಮಹಿಳಾ ಮೀಸಲಾತಿ ಜಾರಿಗೆ ಬರಬೇಕು ಹಾಗೂ ಈ ತತ್ವಕ್ಕೆ ಪ್ರತಿ ಪಕ್ಷವೂ ಬದ್ಧವಾಗಿರಬೇಕು. ಮಹಿಳಾ ಮೀಸಲಾತಿ ಮಸೂದೆ ಇಂದಿಗೂ ಮರೀಚಿಕೆಯಾಗಿ ಉಳಿದಿರುವುದರಿಂದ ಸದ್ಯಕ್ಕಿರುವುದೊಂದೇ ದಾರಿ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರತಿಕ್ರಿಯಿಸಿ (+)