ವಿಧಾನಸಭಾ ಚುನಾವಣೆ ಮುನ್ನ ಒಂದೆರಡು ಮಾತು

7

ವಿಧಾನಸಭಾ ಚುನಾವಣೆ ಮುನ್ನ ಒಂದೆರಡು ಮಾತು

ಟಿ.ಕೆ.ತ್ಯಾಗರಾಜ್
Published:
Updated:
ವಿಧಾನಸಭಾ ಚುನಾವಣೆ ಮುನ್ನ ಒಂದೆರಡು ಮಾತು

ಇನ್ನೆರಡು ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆಡಳಿತಾರೂಢ ಕಾಂಗ್ರೆಸ್, ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಒಂದಲ್ಲ ಒಂದು ಹೆಸರಿನಲ್ಲಿ ಮತದಾರರ ಮನ ಗೆಲ್ಲಲು ಯಾತ್ರೆ, ಸಮಾವೇಶಗಳಲ್ಲಿ ನಿರತವಾಗಿವೆ. ಬಹುತೇಕ ಎಲ್ಲ ನಾಯಕರೂ ಮುಖವಾಡ ತೊಟ್ಟು ಸ್ಪರ್ಧೋಪಾದಿಯಲ್ಲಿ ಒಂದಿಷ್ಟೂ ಎಗ್ಗಿಲ್ಲದೆ ಬೊಂಬಡಾ ಬಜಾಯಿಸುವುದರಲ್ಲಿ ನಿರತರಾಗಿದ್ದಾರೆ. ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎನ್ನುವ ಚರ್ಚೆ ಎಲ್ಲ ವರ್ಗ, ಸಮುದಾಯಗಳ ಜನರ ನಡುವೆ ಹಿಂದೆಂದಿಗಿಂತ ಜೋರಾಗಿಯೇ ನಡೆಯುತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ಮುಂಬರುವ ಚುನಾವಣೆ ಅಷ್ಟರಮಟ್ಟಿಗೆ ಮಹತ್ವ ಪಡೆದುಕೊಂಡಿರುವುದೊಂದೇ ಇದಕ್ಕೆ ಕಾರಣವಲ್ಲ, ಇತ್ತೀಚಿನ ವರ್ಷಗಳಲ್ಲಿ ಬಲಾಢ್ಯ ನಾಯಕರಾಗಿ ಬೆಳೆದಿರುವ ಸಿದ್ದರಾಮಯ್ಯ, ಅಧಿಕಾರದಲ್ಲಿದ್ದಾಗ ಆರೋಪಗಳ ಬಲೆಯಲ್ಲಿ ಸಿಕ್ಕಿಬಿದ್ದು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆರ್ಭಟದ ಆಶ್ರಯ ಪಡೆದಿರುವ ಹತಾಶ ನಾಯಕ ಬೂ.ಸಿ. (ಬೂಕನಕೆರೆ ಸಿದ್ದಲಿಂಗಪ್ಪ) ಯಡಿಯೂರಪ್ಪ ಮತ್ತು ಅವಕಾಶವಾದಿ ರಾಜಕಾರಣದ ಮೂಲಕ ಜೆಡಿಎಸ್ ಮಾಲೀಕತ್ವ ಕಬಳಿಸಿರುವ ಎಚ್‌.ಡಿ. ಕುಮಾರಸ್ವಾಮಿ ನಡುವೆ ನಿಜಕ್ಕೂ ಶಕ್ತಿಶಾಲಿಗಳು ಅಥವಾ ಜನಪ್ರಿಯರು ಯಾರು ಎನ್ನುವುದನ್ನು ಈ ಚುನಾವಣೆ ನಿರ್ಧರಿಸಲಿದೆ.

ನಾಳೆ ಮತದಾನ ಎನ್ನುವ ಹೊತ್ತಿಗೆ ಯಾವುದೇ ನಂಬಿಕೆ ಬುಡಮೇಲಾಗುವ ಪರಿಸ್ಥಿತಿ ನಿರ್ಮಿಸುವ ‘ತಾಕತ್ತು’ ಮತದಾರರಿಗಿದೆ. ಅಥವಾ ಸಾಮರಸ್ಯ ಹಾಳುಗೆಡವಿ ತನ್ನೆಡೆಗೆ ಮತ ಸೆಳೆಯುವ ಸಾಮರ್ಥ್ಯವನ್ನು ಬಿಜೆಪಿ ಅದೆಷ್ಟೋ ಚುನಾವಣೆಗಳಲ್ಲಿ ಈಗಾಗಲೇ ಸಾಬೀತುಪಡಿಸಿದೆ. ಹಣ, ಹೆಂಡ, ಸ್ನಾಯುಬಲದಿಂದ ವರ್ಷಗಳ ಕಾಲ ಅಧಿಕಾರದ ಗದ್ದುಗೆ ಹಿಡಿಯುವುದೇ ತನ್ನ ಹಕ್ಕೆಂಬಂತೆ ನಡೆದುಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ಈ ವಿಚಾರದಲ್ಲಿ ಬಿಜೆಪಿ ಹಿಂದಿಕ್ಕಿದೆ. ಹೀಗಾಗಿ ವಿವಿಧ ರಾಜಕೀಯ ಪಕ್ಷಗಳ ಸಾಮರ್ಥ್ಯ ಮತ್ತು ಸಾಧ್ಯಾಸಾಧ್ಯತೆಗಳ ಬಗ್ಗೆ ಇದೊಂದು ಮುನ್ನುಡಿ.

ಹಾಗೆ ನೋಡಿದರೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯೇನೂ ಕಾಣುತ್ತಿಲ್ಲ. ಬಿಜೆಪಿ ಪರ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ಮೋದಿ, ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ‘ಸೀದಾ ರುಪಯ್ಯಾ ಸರ್ಕಾರ್’ ಎಂದೂ ಅದಕ್ಕೂ ಮೊದಲು ‘ಹತ್ತು ಪರ್ಸೆಂಟ್ ಕಮಿಷನ್ ಪಡೆಯುವ ಸರ್ಕಾರ’ ಎಂದೂ ತೇಲಿಕೆಯ ಆರೋಪ ಮಾಡಿರುವುದು ಬಿಟ್ಟರೆ ಸಿದ್ದರಾಮಯ್ಯ ವಿರುದ್ಧ ಯಾವುದೇ ಮಹಾನ್ ಭ್ರಷ್ಟಾಚಾರದ ಆರೋಪ ಈವರೆಗೆ ಕೇಳಿಬಂದಿಲ್ಲ. ದುಬಾರಿ ಬೆಲೆಯ ಕೈಗಡಿಯಾರ ಮಾತ್ರ ಸಿದ್ದರಾಮಯ್ಯ ಅವರ ಸರಳತೆಯನ್ನೇ ಪ್ರಶ್ನಿಸುವ ಸಂಕೇತದಂತಿತ್ತು. ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರನ್ನು ಗೃಹ ಸಚಿವರ

ಸಲಹೆಗಾರರಾಗಿ ನೇಮಕ ಮಾಡಿಕೊಂಡಿದ್ದು ಸಿದ್ದರಾಮಯ್ಯ ಅವರ ಜಾತ್ಯತೀತ ನಿಲುವನ್ನು ಮತ್ತೆ ಅನುಮಾನಿಸುವಂತೆ ಮಾಡಿತ್ತು. ಶಾಮ್‌ ಭಟ್ ಎಂಬ ಭ್ರಷ್ಟಾಚಾರದ ಆರೋಪ ಇರುವ ಅಧಿಕಾರಿಯನ್ನು ಕೆಪಿಎಸ್‍ಸಿ ಅಧ್ಯಕ್ಷರನ್ನಾಗಿ ನೇಮಿಸಿದಾಗ ಸಿದ್ದರಾಮಯ್ಯ ಅವರ ಪ್ರಾಮಾಣಿಕತೆ ಬಗ್ಗೆ ಸಂಶಯ ಹುಟ್ಟಿಕೊಂಡಿತ್ತು. ಯಾವುದೇ ಅಧಿಕಾರಿಯ ಆತ್ಮಹತ್ಯೆಯನ್ನೂ ವಿಪಕ್ಷಗಳು ಸಿದ್ದರಾಮಯ್ಯ ಸರ್ಕಾರಕ್ಕೆ ತಗುಲಿಸುತ್ತಲೇ ಬಂದರೂ ಅವುಗಳ ತರ್ಕಹೀನ ನಿಲುವು

ಗಳು ಸಿದ್ದರಾಮಯ್ಯ ಪದಚ್ಯುತಿಗೆ ನೆರವಾಗಲಿಲ್ಲ. ಆದರೆ ಕಡುಬಡವರ ವಿಷಯದಲ್ಲಂತೂ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಅನ್ನಭಾಗ್ಯದಂಥ ಹಸಿವು ನೀಗಿಸುವ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಮೂಲಕ ಹಸಿವುಮುಕ್ತ ಕರ್ನಾಟಕ ಘೋಷಣೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ಬಡವರು ಮತ್ತು ಕಡುಬಡವರ ವಿಷಯದಲ್ಲಿ ಸಿದ್ದರಾಮಯ್ಯ ಕೈಗೊಂಡ ನಿರ್ಧಾರಗಳಿಗೆ ಅಪಸ್ವರಗಳು ಕೇಳಿಬಂದವಾದರೂ ಅವುಗಳಿಗೆ ತೂಕವೇ ಇಲ್ಲದ ಕಾರಣ ಗಾಳಿಯಲ್ಲಿ ಹಾಗೇ ತೂರಿ ಹೋದವು.

ಆದರೂ ರಾಜ್ಯದ ರಾಜಕೀಯ ಇತಿಹಾಸದಲ್ಲಿ ರಾಮಕೃಷ್ಣ ಹೆಗಡೆ ಅವರ ಚಾಣಾಕ್ಷತನ, ದೇವೇಗೌಡರ ಕಾರ್ಯತಂತ್ರ, ಜೆ.ಎಚ್. ಪಟೇಲರ ಕಿಲಾಡಿತನ ಮೈಗೂಡಿಸಿಕೊಳ್ಳುವ ಜತೆಗೆ ತನ್ನ ಭಂಡ ಧೈರ್ಯದ ಫಲವಾಗಿಯೇ ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ಬಲಾಢ್ಯ ನಾಯಕರಾಗಿ ರೂಪುಗೊಂಡರೇ ಹೊರತು ನಾಡಿನ ಮಹಾನ್ ನಾಯಕರಾಗಿ ದಾಖಲಾಗುವುದು ಸಾಧ್ಯವಾಗಲಿಲ್ಲ. ಅವರ ಭಜನಾ ಮಂಡಳಿ ಮಾತ್ರ ಇನ್ನೋರ್ವ ದೇವರಾಜ ಅರಸು ಎಂದು ಬಿಂಬಿಸುವ ಪ್ರಯತ್ನ ಮಾಡಿದರೂ ಅದನ್ನು ಸಮರ್ಥಿಸುವ ಗಟ್ಟಿಯಾದ ಲಕ್ಷಣಗಳು ಸಿದ್ದರಾಮಯ್ಯ ಅವರಲ್ಲಿ ಪ್ರತಿಫಲಿಸಲಿಲ್ಲ. ಅರಸು ಎಂದರೆ ಅವರೊಬ್ಬರೇ. ಆಗಸಕ್ಕೆ ಆಗಸವೇ ಉಪಮೆ, ಸಾಗರಕ್ಕೆ ಸಾಗರವೇ ಉಪಮೆ. ಹಾಗೆ ದೇವರಾಜ ಅರಸು. ಎಲ್ಲ ಜಾತಿ, ವರ್ಗಗಳ ಜನರ ಜತೆಗೂಡಿ ಮುನ್ನಡೆಸಿದ ಅರಸು ಒಂದು ಕಡೆಯಾದರೆ ತನ್ನ ಜಾತಿಗೆ ಸೇರಿದ ಪ್ರಭಾವಿಗಳಿಗೆ ಮಾತ್ರ ಕಿವಿ ತೆರೆದುಕೊಳ್ಳುವ ದೌರ್ಬಲ್ಯದ ಸಿದ್ದರಾಮಯ್ಯ ತದ್ವಿರುದ್ಧ ದಿಕ್ಕಿನಲ್ಲಿ ಸಾಗಿದವರು. ಈ ಮಾತುಗಳನ್ನು ಕೇವಲ ಆರೋಪ ಎಂಬಂತೆ ನಾನು ಹೇಳುತ್ತಿಲ್ಲ.

ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಪ್ರಬಲ ಒಕ್ಕಲಿಗ, ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕರು ತಮ್ಮ ಒಡ್ಡೋಲಗದಲ್ಲಿ ಕೇವಲ ತಮ್ಮ ಜಾತಿಗೆ ಸೇರಿದ ಅಧಿಕಾರಿಗಳನ್ನೇ ನೇಮಿಸಿಕೊಂಡಿದ್ದ ಪರಂಪರೆಯೇ ಕರ್ನಾಟಕಕ್ಕಿದೆ. ಪ್ರಬಲ ಜಾತಿಗಳು ಹೀಗೆ ಮಾಡುವುದು ಅಕ್ಷಮ್ಯ. ಪ್ರಬಲ ಸಮುದಾಯಗಳಿಗೆ ಸಾಮಾಜಿಕವಾಗಿ ಅತಂತ್ರ ಸ್ಥಿತಿಯೇನೂ ಇರುವುದಿಲ್ಲ. ಪ್ರಬಲರು ದುರ್ಬಲರನ್ನು ಪೋಷಿಸಬೇಕೇ ಹೊರತು ತಮ್ಮ ಸಮುದಾಯದವರಿಗೇ ಮಣೆ ಹಾಕುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸಮರ್ಥನೀಯವಲ್ಲ. ‘ಅಹಿಂದ’ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪನೆಯಾದ ಸಿದ್ದರಾಮಯ್ಯ ಅದೇ ತಪ್ಪನ್ನು

ಮಾಡಬಾರದಿತ್ತು. ರಾಜ್ಯದ ಮೂರನೇ ಪ್ರಬಲ ಜಾತಿಯಾಗಿರುವ ಕುರುಬ ಸಮುದಾಯ ಮೊದಲ ಬಾರಿಗೆ ತಮ್ಮ ಸಮುದಾಯದ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯಾದಾಗ ಆತನನ್ನು ಸುತ್ತುವರಿಯುವುದು ಸಹಜ. ಆದರೆ ಅದನ್ನು ಸಮರ್ಥವಾಗಿ ನಿಭಾಯಿಸುವುದು ನಿಜ ನಾಯಕನ ಜವಾಬ್ದಾರಿ. ಈ ವಿಷಯದಲ್ಲಿ ಸಿದ್ದರಾಮಯ್ಯ ಎಡವಿದ್ದಾರೆ.

ಅಲಕ್ಷಿತ ಸಮುದಾಯಗಳಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಕೆಲವು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ಶಿಫಾರಸು ಮಾಡಿದ್ದು ಬಿಟ್ಟರೆ ಎಲ್ಲ ಜಾತಿಗಳ ಜನರನ್ನು ಜತೆಗೂಡಿಸಿ ಮುನ್ನಡೆಸುವ ಬಗ್ಗೆ ಎಳ್ಳಷ್ಟೂ ಚಿಂತಿಸಿದಂತೆ ಕಾಣುತ್ತಿಲ್ಲ. ಅದೇನೇ ದೋಷವಿದ್ದರೂ ದೊಡ್ಡ ಕಳಂಕವನ್ನೇನೂ ಮೆತ್ತಿಕೊಳ್ಳದ ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕು ಎನ್ನುವ ಮಹತ್ಕಾರಣಗಳೇನೂ ಗೋಚರಿಸುತ್ತಿಲ್ಲ. ಪ್ರಬಲ ಮತ್ತು ಪ್ರಭಾವಿ ಜಾತಿಗಳನ್ನು ಹೊರತುಪಡಿಸಿ ಇನ್ಯಾರೇ ಮುಖ್ಯಮಂತ್ರಿ

ಯಾದರೂ ಸಹಿಸದ ಈ ಸಮುದಾಯಗಳ ಎಲ್ಲ ಪ್ರಯತ್ನಗಳ ನಡುವೆಯೂ ಸಿದ್ದರಾಮಯ್ಯ ಐದು ವರ್ಷಗಳ ಅಧಿಕಾರಾವಧಿ ಪೂರೈಸಿರುವುದು ರಾಜಕೀಯ ಅಚ್ಚರಿ

ಗಳ ಅಧ್ಯಾಯಗಳಲ್ಲಿ ಅತಿ ಮುಖ್ಯವಾದುದಾಗಿದೆ. ಸಿದ್ದರಾಮಯ್ಯ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಜನಾಶೀರ್ವಾದ ಬಯಸಿ ಯಾತ್ರೆ ನಡೆಸುತ್ತಿದೆ.

ಬಿಜೆಪಿಗೆ ಒಂದೊಂದೇ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿದ ಗೆಲುವಿನ ಉನ್ಮಾದವಿದೆಯೇ ಹೊರತು ತನ್ನದೇ ಆದ ಜನಪರ ಕಾರ್ಯಕ್ರಮಗಳು ಕಾಣುತ್ತಿಲ್ಲ. ರಾಮಮಂದಿರ, ಬಾಬಾಬುಡನ್‍ಗಿರಿ, ಮುಸ್ಲಿಂ ಹೀಗಳಿಕೆ, ಭಯೋತ್ಪಾದನೆ, ಪಾಕಿಸ್ತಾನ, ಚರ್ಚ್ ಮೇಲಿನ ದಾಳಿ, ಗೋಮಾಂಸ ನಿಷೇಧ ಇಂಥ ಸಲ್ಲದ ವಿಚಾರಗಳ ಮೂಲಕವೇ ತನ್ನ ರಾಜಕೀಯ ಸಂಘಟನೆ ಬಿಜೆಪಿಗೆ ಅಧಿಕಾರ ತಂದುಕೊಡುವ ಸಂಘ ಪರಿವಾರವು ಯಡಿಯೂರಪ್ಪ ಆಡಳಿತಾವಧಿಯ ಕಳಂಕಗಳನ್ನು ಅಂಟಿಸಿಕೊಂಡಿದ್ದರೂ ಮತ್ತೆ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದೆ. ಚುನಾವಣೆಗಾಗಿ ಬಿಜೆಪಿ ಪರಿವರ್ತನೆ ಹೆಸರಿನಲ್ಲಿ ಯಾತ್ರೆ ಕೈಗೊಂಡಿರುವುದನ್ನು ನೋಡಿದರೆ ನಗು ಬರುತ್ತದೆ. ಬಿಜೆಪಿಗೂ ಪರಿವರ್ತನೆಗೂ ಯಾವ ರೀತಿಯಲ್ಲಿ ಸಂಬಂಧ ಇದೆ ಎಂದು ಎಷ್ಟೇ ಯೋಚಿಸಿದರೂ ಒಂದೇ ಒಂದು ಕಾರಣ ಸಿಗುತ್ತಿಲ್ಲ. ಬಿಜೆಪಿಯ ಬಹುತೇಕ ನಾಯಕರ ಹೇಳಿಕೆಗಳು, ನಡವಳಿಕೆಗಳು ಈ ನಾಡನ್ನು ಶಿಲಾಯುಗಕ್ಕೆ ವಾಪಸ್ ಕರೆದೊಯ್ಯುವ ಛಲ ತೊಟ್ಟಂತೆ ಕಾಣುತ್ತಿರುವಾಗಲೇ ಈ ಪಕ್ಷ ರಾಜ್ಯ ವಿಧಾನಸಭಾ ಚುನಾವಣೆಗೆ ಪರಿವರ್ತನೆಯ ಹೆಸರಿಟ್ಟಿರುವುದು ಯಾಕೋ ಹೊಂದಿಕೆಯಾಗುತ್ತಿಲ್ಲ. ಪರಿವರ್ತನೆ ಎಂದರೆ ಬದಲಾವಣೆ, ಮಾರ್ಪಾಟು, ಕ್ರಾಂತಿ. ಒಂದು ವ್ಯವಸ್ಥೆ ನಿಂತ ನೀರಿನಂತಿರಬಾರದು. ಅದು ಹರಿಯಬೇಕು. ಹಾಗೆ ಹರಿಯುವುದು ಮುನ್ನಡೆ. ಅದೇ ಚಲನಶೀಲತೆ. ಅಲ್ಲೇ ನಿಂತಿದ್ದರೆ ಕೊಳೆತು ನಾರುತ್ತದೆ. ಬಿಜೆಪಿ ಚಿಂತನೆಗಳಿಗೆ ಚಲನಶೀಲ ಗುಣಲಕ್ಷಣಗಳೇ ಇಲ್ಲ.

ಅಂದಹಾಗೆ ಪರಿವರ್ತನ ಎನ್ನುವ ಪದಕ್ಕೆ ಅವ್ಯವಸ್ಥೆ ಎಂಬ ಅರ್ಥವೂ ಇದೆ. ಕೇವಲ ಪರಿವರ್ತ ಎನ್ನುವ ಹೆಸರಿಟ್ಟಿದ್ದರೆ ಇನ್ನೂ ಹೆಚ್ಚು ಸೂಕ್ತವಾಗುತ್ತಿತ್ತೇನೋ. ಯಾಕೆಂದರೆ ಅದಕ್ಕೆ ತಿರುಗುವುದು, ಅಲೆದಾಟ, ಸಂಚಾರ, ತಿರುಗಾಟ ಎನ್ನುವ ಅರ್ಥವಿದೆ. ಬಿಜೆಪಿ ಕಣ್ಣಲ್ಲಿ ಈ ದೇಶ ಕಂಡ ಮಹಾನ್ ಪ್ರಧಾನಿ ನರೇಂದ್ರ ಮೋದಿ ಬಹುತೇಕ ವಿದೇಶ ಸಂಚಾರದಲ್ಲೇ ತೊಡಗಿರುವುದರಿಂದ ಈ ಪದ ಹೆಚ್ಚು ಸಾಂಕೇತಿಕವಾಗಿರುತ್ತಿತ್ತು. ಇಂಥ ಬಿಜೆಪಿ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾದ ಯಡಿಯೂರಪ್ಪ ಪತನಕ್ಕೆ ಜತೆಗಾರರೇ ಸಂಚು ನಡೆಸಿದ್ದರೆಂಬ ಗುಸುಗುಸು ಇವತ್ತಿಗೂ ಕೇಳಿಬರುತ್ತಿದೆಯಾದರೂ ಆ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳಿಗಿಂತ ಹಗರಣಗಳು, ಸೆರೆಮನೆ ಸೇರಿದ ಕೆಲವು ಸಚಿವರಿಂದಲೇ ಹೆಚ್ಚು ಸುದ್ದಿಯಾಗಿತ್ತು. ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಅಮಿತ್ ಶಾ ಪದೇ ಪದೇ ಹೇಳುತ್ತಿದ್ದರೂ ಯಡಿಯೂರಪ್ಪ ಅವರ ಮುಖದಲ್ಲಿ ಅದಕ್ಕೆ ತಕ್ಕಂಥ ಉತ್ಸಾಹ ಕಾಣುತ್ತಿಲ್ಲ. ತೇಜಸ್ಸೂ ಮಾಯವಾಗಿದೆ. ಅವರ ಮುಖದಲ್ಲಿ ಕಾಣುತ್ತಿರುವ ಹತಾಶೆಯೇ ಮುಂದಿನ ಚುನಾವಣೆಯ ಫಲಿತಾಂಶವನ್ನು ಬಿಂಬಿಸುತ್ತಿದೆಯೇನೋ ಅನ್ನಿಸುತ್ತಿದೆ.

ಗ್ರಾಮ ವಾಸ್ತವ್ಯದ ಮೂಲಕ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಮೇಲೂ ಪ್ರಭಾವ ಬೀರಿದ್ದ ಎಚ್.ಡಿ.ಕುಮಾರಸ್ವಾಮಿ ಪ್ರಚಾರದ ವಿಷಯದಲ್ಲಿ ಉಳಿದವರಿಗಿಂತ ಭಿನ್ನ. ಅವರದೇನಿದ್ದರೂ ವಿಕಾಸ ಪರ್ವ, ಜನತಾ ಪ್ರಣಾಳಿಕೆ, ಜನಪರ ಸರ್ಕಾರ, ಮನೆಮನೆಗೆ ಕುಮಾರಣ್ಣ, ಕಾರ್ಯಕರ್ತರ ಕುಮಾರಪಡೆ… ಕೇಳುವುದಕ್ಕೆ ತುಂಬ ಹಿತವಾಗಿರುವ ಪದಗುಚ್ಛಗಳು. ಆದರೆ ಅವರ ಪ್ರಚಾರ ಸಾಮಗ್ರಿಗಳಲ್ಲಿ ಈ ಹಿಂದೆ ಜನತಾ ಪರಿವಾರ ಹೊಂದಿದ್ದ ಎಲ್ಲ ಜಾತಿಗಳ ಕ್ರಿಯಾಶೀಲ, ಸಮರ್ಥ, ದಕ್ಷ, ದಿಟ್ಟ, ಪ್ರತಿಭಾವಂತ ನಾಯಕರ ಮುಖಗಳಿಲ್ಲ. ಈಗ ಒಂದೇ ಮುಖ. ಅದು ಕುಮಾರಸ್ವಾಮಿ ಮಾತ್ರ. ಜೆಡಿಎಸ್‍ಗೆ ಅದೇ ದೊಡ್ಡ ಕೊರತೆ. ಜೆಡಿಎಸ್ ಎಂದರೆ ಕುಮಾರಣ್ಣ! ಬಹುತೇಕ ಬ್ಯಾನರ್, ಪೋಸ್ಟರ್‌ಗಳಲ್ಲಿ ಹಿರಿಯ ಸಹೋದರ ರೇವಣ್ಣ ಭಾವಚಿತ್ರಕ್ಕೂ ಅವಕಾಶವಿಲ್ಲ. ಎಂ.ಸಿ.ನಾಣಯ್ಯ ಅವರಂಥ ಸ್ವಾಭಿಮಾನಿಗಳೂ ಅಲ್ಲಿಲ್ಲ. ಅಷ್ಟರಮಟ್ಟಿಗೆ ಅದು ಏಕವ್ಯಕ್ತಿ ನಾಯಕತ್ವದ ಪಕ್ಷವಾಗಿದೆ. ದೇವೇಗೌಡರ ಹೆಸರು ಮತ್ತು ಭಾವಚಿತ್ರ ಕೈಬಿಟ್ಟರೆ ಜೆಡಿಎಸ್ ಕೇವಲ ಅಸ್ಥಿಪಂಜರವಾಗಿಬಿಡಬಹುದೆನ್ನುವ ಒಂದೇ ಒಂದು ಆತಂಕದಿಂದ ಅದು ಉಳಿದುಕೊಂಡಿದೆ. ಒಂದು ಕಾಲದಲ್ಲಿ ಎಲ್ಲ ಸಮುದಾಯಗಳ ದನಿಯಾಗಿದ್ದ ಜನತಾದಳ ಈಗ ಅದರಲ್ಲಿ ಮಹಾನ್ ನಾಯಕರ ಪಡೆ ಇಲ್ಲದಿದ್ದರೂ ಮತ್ತೆ ಅಧಿಕಾರಕ್ಕೆ ಬರುವ ಮಾತನಾಡುತ್ತಿದೆ. ಅಧಿಕಾರಕ್ಕಾಗಿ ಕುಮಾರಸ್ವಾಮಿ ಅವರ ಜೆಡಿಎಸ್‍ಗೆ ಬಿಜೆಪಿಯಾಗಲೀ ಕಾಂಗ್ರೆಸ್ ಆಗಲೀ ಎಲ್ಲವೂ ಒಂದೇ. ಅವರದು ಬದ್ಧತೆಯ ರಾಜಕಾರಣವಲ್ಲ, ಅವಕಾಶವಾದಿ ರಾಜಕಾರಣ ಎನ್ನುವುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ.

ರಾಜ್ಯದಲ್ಲಿ ಈಗಿನ ಪರಿಸ್ಥಿತಿಯಂತೆ ಹಾಸನ, ಮಂಡ್ಯ, ಕೋಲಾರ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ; ಕರಾವಳಿ ಮತ್ತು ಬೆಂಗಳೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಸಿದ್ದರಾಮಯ್ಯ ಪ್ರಾಯೋಜಿತ ಲಿಂಗಾಯತ ಧರ್ಮ ಎಂಬ ಚಿಂತನೆ ಕಾಂಗ್ರೆಸ್ ಪಕ್ಷಕ್ಕೆ ವರವಾಗುತ್ತದೋ, ಶಾಪವಾಗುತ್ತದೋ ಎನ್ನುವುದು ಈಗಲೇ ಹೇಳಲಾಗದು. ಇದು ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಉಳಿಯುವರು ಯಾರು ಎನ್ನುವುದನ್ನು ನಿರ್ಧರಿಸಲಿದೆ. ಜೆಡಿಎಸ್-ಬಿಎಸ್‍ಪಿ ಮೈತ್ರಿ ಉತ್ತರ ಕರ್ನಾಟಕದಲ್ಲಲ್ಲದೆ ಇನ್ನೂ ಕೆಲವು ಕ್ಷೇತ್ರಗಳಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಲೂಬಹುದು. ಹೀಗಿರುವಾಗ ಬಿಜೆಪಿಯ ನೂರೈವತ್ತು ಕ್ಷೇತ್ರಗಳ ಗುರಿ ನೋಡಿದರೆ ರಾಜ್ಯ ವಿಧಾನಸಭೆಯ ಕ್ಷೇತ್ರಗಳ ಸಂಖ್ಯೆ ಐನೂರಾದರೂ ಇರಬೇಕಿತ್ತು ಅನ್ನಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry