ವಿಧ ವಿಧ ಟಿ.ವಿ.ಗಳಲ್ಲಿ ನಿಮಗ್ಯಾವುದು ಸೂಕ್ತ?

6

ವಿಧ ವಿಧ ಟಿ.ವಿ.ಗಳಲ್ಲಿ ನಿಮಗ್ಯಾವುದು ಸೂಕ್ತ?

ಯು.ಬಿ. ಪವನಜ
Published:
Updated:

 

ಟಿ.ವಿ. ಅಥವಾ ಟೆಲಿವಿಶನ್‌ಗೆ ಅತಿ ದೀರ್ಘ ಇತಿಹಾಸವಿದೆ. ಕೇವಲ ಒಂದು ಚಾನೆಲ್ ಅನ್ನು ಆಂಟೆನಾ ಮೂಲಕ ತೋರಿಸುತ್ತಿದ್ದ ಕಪ್ಪು ಬಿಳುಪು ಟಿ.ವಿ.ಯಿಂದ ಪ್ರಾರಂಭಿಸಿ ಇತ್ತೀಚಿನ ಅತ್ಯಾಧುನಿಕ ಸ್ಮಾರ್ಟ್ ಟಿ.ವಿ. ತನಕ ಅದರ ಪಯಣ ಸಾಗಿದೆ, ಸಾಗುತ್ತಿದೆ. ಭಾರತದಲ್ಲಿ ಬಹುತೇಕ ಎಲ್ಲ ಮನೆಗಳಲ್ಲೂ ಟಿ.ವಿ. ಕಾಣಸಿಗುತ್ತದೆ. ಕೊಳೆಗೇರಿಗಳಲ್ಲೂ ಟಿ.ವಿ.ಗಳಿವೆ. ಕೇವಲ ಒಂದೇ ವಿಧದ ಟಿ.ವಿ. ದೊರೆಯುತ್ತಿದ್ದ ಕಾಲ ಹೋಯಿತು. ಈಗ ಹಲವು ನಮೂನೆಯ ತಂತ್ರಜ್ಞಾನಗಳನ್ನು ಬಳಸುವ ವಿಧ ವಿಧ ಟಿ.ವಿ.ಗಳು ಮಾರುಕಟ್ಟೆಯಲ್ಲಿ ಕಂಡುಬರುತ್ತಿವೆ. ಉದಾಹರಣೆಗೆ ಎಲ್‌ಸಿಡಿ, ಎಲ್‌ಇಡಿ, ಪ್ಲಾಸ್ಮ ಹಾಗೂ ಮಾಮೂಲಿ ಹಳೆಯ ಸಿಆರ್‌ಟಿ ಟಿ.ವಿ.ಗಳು. ಟಿ.ವಿ. ಕೊಳ್ಳುವ ಮುನ್ನ ಹಲವು ವಿಧದ ಟಿ.ವಿ.ಗಳ ಬಗ್ಗೆ ಒಂದು ಪಕ್ಷಿನೋಟ.

ಸಿಆರ್‌ಟಿ ಟಿ.ವಿ..

ಹಲವು ವರ್ಷಗಳ ಹಿಂದೆ ಸಿಆರ್‌ಟಿ (Cathode Ray Tube - CRT) ಮಾದರಿಯ ಟಿ.ವಿ.ಗಳು ಮಾತ್ರವೇ ಇದ್ದವು. ಇದರಲ್ಲಿ ದೊಡ್ಡ ಪೆಟ್ಟಿಗೆ, ಅದರಲ್ಲಿ ದೊಡ್ಡ ಸಿಆರ್‌ಟಿ ಅರ್ಥಾತ್ ಪಿಕ್ಚರ್ ಟ್ಯೂಬ್ ಇರುತ್ತಿತ್ತು. ಇವು ತುಂಬ ಸ್ಥಳವನ್ನು ಆಕ್ರಮಿಸುತ್ತವೆ. ಇದನ್ನು ಇಡಲೆಂದೇ ಪ್ರತ್ಯೇಕ ಟಿ.ವಿ. ಸ್ಟ್ಯಾಂಡ್ ಇರುತ್ತಿತ್ತು. ಸಾಮಾನ್ಯವಾಗಿ ಮನೆಯ ಹಾಲ್‌ನಲ್ಲಿ ಕುಳಿತಿರುತ್ತಿದ್ದ ಈ ಟಿ.ವಿ.ಯನ್ನು ಯಾವ ಕೋನದಿಂದಲೂ ನೋಡಬಹುದು. ಇವು ಹಲವು ಗಾತ್ರದಲ್ಲಿ (12 ರಿಂದ 38 ಇಂಚು) ದೊರೆಯುತ್ತವೆ.21 ಇಂಚಿನ ಟಿ.ವಿ. ಎಂದರೆ ಟಿ.ವಿ.ಯ ಪರದೆಯ ಎಡ ಕೆಳ ಮೂಲೆಯಿಂದ ಬಲ ಮೇಲಿನ ಮೂಲೆಯ ತನಕದ ಅಳತೆ 21 ಇಂಚು ಎಂದು ಅರ್ಥ. ಈಗೀಗ ಇಂತಹ ಟಿ.ವಿ.ಗಳು ಮಾರುಕಟ್ಟೆಯಲ್ಲಿ ಕಂಡುಬರುತ್ತಿಲ್ಲ. ಆದರೂ ಈಗಿನ ಟಿ.ವಿ.ಗಳಿಗೆ ಹೋಲಿಸಿದರೆ ಅವುಗಳ ಬೆಲೆ ಸ್ವಲ್ಪ ಕಡಿಮೆ. ಹಲವು ವರ್ಷ ಬಾಳಿಕೆ ಬರುವಂತವು. ಈಗಲೂ ಹಲವು ಮನೆಗಳಲ್ಲಿ ಇವುಗಳನ್ನು ಕಾಣಬಹುದು. ಇವುಗಳ ಪರದೆ ಸಪಾಟಾಗಿರುವುದಿಲ್ಲ.ಪರದೆಯ ಉದ್ದ ಮತ್ತು ಅಗಲದ ಅನುಪಾತ 4:3 ಇರುತ್ತದೆ. ಈ ಟಿ.ವಿ.ಗಳಲ್ಲಿ ಈಗಿನ ಹೈಡೆಫಿನಿಶನ್ (16:9) ಕಾರ್ಯಕ್ರಮ ಅಥವಾ ಸಿನಿಮಾ ನೋಡುವಂತಿಲ್ಲ. ಇವು ತುಂಬ ವಿದ್ಯುತ್ ಬಳಸುತ್ತವೆ, ಬಿಸಿಯಾಗುತ್ತವೆ, ತುಂಬ ಸ್ಥಳವನ್ನು ಆಕ್ರಮಿಸುತ್ತವೆ, ವಿದ್ಯುತ್ಕಾಂತೀಯ ತರಂಗಗಳನ್ನು ಸೂಸುತ್ತವೆ, ಅತಿ ಹತ್ತಿರದಿಂದ ನೋಡಬಾರದು, ಡಿಜಿಟಲ್ ಅಲ್ಲ, ಇತ್ಯಾದಿ ಕಾರಣಗಳು ಇವುಗಳ ವಿರುದ್ಧ ಇವೆ.ಹಾಗಿದ್ದೂ ಇನ್ನೂ ಹಲವು ಮಂದಿ ತಮ್ಮ ಮನೆಗಳಲ್ಲಿರುವ ಈ ಹಳೆಯ ಟಿ.ವಿ.ಗಳನ್ನು ಎಸೆಯದೆ ಇನ್ನೂ ಇಟ್ಟುಕೊಂಡಿದ್ದಾರೆ ಮಾತ್ರವಲ್ಲ ಅವು ಕೆಲಸವನ್ನೂ ಮಾಡುತ್ತಿವೆ.

ಪ್ಲಾಸ್ಮ ಟಿ.ವಿ.

ಇವುಗಳಲ್ಲಿ ಪ್ಲಾಸ್ಮ ಪರದೆ ಇರುತ್ತದೆ. ಅವುಗಳ ಪರದೆ ಸಪಾಟಾಗಿರುತ್ತದೆ (ಫ್ಲಾಟ್ ಪಾನೆಲ್). ಸಾಮಾನ್ಯವಾಗಿ ಇವು ದುಬಾರಿಯಾಗಿದ್ದು ಪ್ಲಾಸ್ಮ ಪರದೆ ಜೊತೆ ದುಬಾರಿ ಎಲೆಕ್ಟ್ರಾನಿಕ್ಸ್ ಜೊತೆ ಸೇರಿರುತ್ತದೆ. ಪ್ಲಾಸ್ಮ ಪರದೆ ಮೂಡಿಸುವ ಚಿತ್ರಗಳ ಗುಣಮಟ್ಟ ಸಿಆರ್‌ಟಿ ಪರದೆಯವುಗಳಿಗಿಂತ ಉತ್ತಮವಾಗಿರುತ್ತದೆ. ದೊಡ್ಡ ಗಾತ್ರದ ಪರದೆಗಳಿಗೆ ಇವು ಪ್ರಖ್ಯಾತ. 32 ಇಂಚಿಗಿಂತ ಕಡಿಮೆ ಗಾತ್ರದ ಪ್ಲಾಸ್ಮ ಪರದೆ ಕಂಡುಬರುವುದಿಲ್ಲ. ಪರದೆ ಕಡು ಕಪ್ಪು ಬಣ್ಣದ್ದಾಗಿದ್ದು ಸಿನಿಮಾ ನೋಡುವ ಅನುಭವ ಚೆನ್ನಾಗಿರುತ್ತದೆ. ಇವು ಕೂಡ ಸಿಆರ್‌ಟಿ ಪರದೆಗಳಂತೆ ತುಂಬ ವಿದ್ಯುತ್ ಬಳಸುತ್ತವೆ.ಇವುಗಳ ಪರದೆಯ ದಪ್ಪ 10 ಸೆ.ಮೀ.ನ ಆಸುಪಾಸಿನಲ್ಲಿದ್ದು ಸಿಆರ್‌ಟಿ ಪರದೆಯ ಟಿ.ವಿ.ಗಳಂತೆ ತುಂಬ ದೊಡ್ಡ ಗಾತ್ರದ ಪೆಟ್ಟಿಗೆಯಾಕಾರದಲ್ಲಿರುವುದಿಲ್ಲ. ಪ್ಲಾಸ್ಮ ಪರದೆಯ ಟಿ.ವಿ.ಗಳನ್ನು ಗೋಡೆಗೂ ನೇತುಹಾಕಬಹುದು. ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ದೊಡ್ಡ ಪರದೆಯ ಅಗತ್ಯವಿರುವಲ್ಲಿ ಇವುಗಳ ಬಳಕೆ ಜಾಸ್ತಿ. ಪ್ಲಾಸ್ಮ ಪರದೆಗಳನ್ನು ಸಿಆರ್‌ಟಿ ಪರದೆಯಂತೆ ಎಲ್ಲ ಕೋನದಿಂದ ನೋಡಲಸಾಧ್ಯ. ಪ್ಲಾಸ್ಮ ಟಿ.ವಿ.ಗಳಲ್ಲಿ ಡಿಜಿಟಲ್ ವ್ಯವಸ್ಥೆ ಇರುತ್ತದೆ ಮತ್ತು ಹೈಡೆಫಿನಿಶನ್ ವೀಡಿಯೊ ಅಥವಾ ಕಾರ್ಯಕ್ರಮ ನೋಡಬಹುದು. ಇವುಗಳಲ್ಲಿ ಅನಿಲ ತುಂಬಿದ ಕೋಶಗಳಿರುತ್ತವೆ. ಈ ಅನಿಲ ಕಡಿಮೆಯಾದರೆ ಚಿತ್ರದ ಗುಣಮಟ್ಟ ಹಾಳಾಗುತ್ತದೆ. ಒಮ್ಮೆ ಅನಿಲ ಕಡಿಮೆಯಾದರೆ ಪುನಃ ತುಂಬಿಸಲು ಆಗುವುದಿಲ್ಲ. ಪ್ಲಾಸ್ಮ ಟಿ.ವಿ.ಗಳು ಸಿಆರ್‌ಟಿ ಟಿ.ವಿ.ಗಳಂತೆ ತುಂಬ ವಿದ್ಯುತ್ ಬೇಡುತ್ತವೆ.ಎಲ್‌ಸಿಡಿ ಟಿ.ವಿ..

ಎಲ್‌ಸಿಡಿ (Liquid Crystal Display - LCD) ಪರದೆಗಳು ಎಲ್ಲ ಕಡೆ ಕಾಣಸಿಗುತ್ತವೆ. ಕೈಗಡಿಯಾರ, ಫೋನ್, ವಾಶಿಂಗ್ ಮೆಶಿನ್, ಎಂಪಿ3 ಪ್ಲೇಯರ್, ಇತ್ಯಾದಿ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್ ತೆಗೆದುಕೊಂಡರೂ ಅದರಲ್ಲಿ ಎಲ್‌ಸಿಡಿ ಪರದೆ ಇರುತ್ತದೆ. ಇಂತಹುದೇ ಎಲ್‌ಸಿಡಿ ಪರದೆ ಬಳಸಿದ ಟಿ.ವಿ.ಗಳನ್ನೇ ಎಲ್‌ಸಿಡಿ ಟಿ.ವಿ. ಎನ್ನುತ್ತಾರೆ. ಅತಿ ಚಿಕ್ಕ ಅಂದರೆ 7 ಇಂಚು ಗಾತ್ರದಿಂದ ಪ್ರಾರಂಭವಾಗಿ ತುಂಬ ದೊಡ್ಡ ಗಾತ್ರದ ಎಲ್‌ಸಿಡಿ ಪರದೆಗಳು ಲಭ್ಯವಿವೆ. ಎಲ್‌ಸಿಡಿ ಟಿ.ವಿ.ಗಳು ಅತಿ ಕಡಿಮೆ ವಿದ್ಯುತ್ ಬಳಸುತ್ತವೆ. ಸಾಮಾನ್ಯವಾಗಿ ಇವು 16:9 ಅನುಪಾತದಲ್ಲಿರುತ್ತವೆ ಅಂದರೆ ಹೈಡೆಫಿನಿಶನ್ ಸಿನಿಮಾ ವೀಡಿಯೊ ನೋಡಬಹುದು. ಪರದೆ ತುಂಬ ತೆಳುವಾಗಿರುತ್ತದೆ.ಆರಾಮವಾಗಿ ಗೋಡೆಗೆ ನೇತುಹಾಕಬಹುದು. ಇವುಗಳನ್ನು ಗಣಕಕ್ಕೆ ಮಾನಿಟರ್ ಆಗಿಯೂ ಬಳಸಬಹುದು. ಕೀಳು ಗುಣಮಟ್ಟದ ಎಲ್‌ಸಿಡಿ ಪರದೆಗಳಲ್ಲಿ ಘೋಸ್ಟ್ ಎಫೆಕ್ಟ್ ಕಂಡುಬರುತ್ತದೆ. ಪರದೆಯಲ್ಲಿ ವಸ್ತುಗಳು ವೇಗವಾಗಿ ಚಲಿಸುತ್ತಿದ್ದರೆ ಅವು ಒಂದು ಸ್ಥಳದಿಂದ ಚಲಿಸಿದ ನಂತರವೂ ಅವುಗಳ ಒಂದು ರೀತಿಯ ನೆರಳು ಸ್ವಲ್ಪ ಸಮಯ ಉಳಿದು ಭೂತದಂತೆ ಕಂಡುಬರುತ್ತದೆ. ಇದೇ ಘೋಸ್ಟ್ ಇಫೆಕ್ಟ್. ಇವು ಶುದ್ಧ ಕಪ್ಪು ಬಣ್ಣದವಾಗಿರುವುದಿಲ್ಲ. ಅತಿ ಬೆಳಕಿದ್ದಲ್ಲಿ ಇವುಗಳನ್ನು ನೋಡುವುದು ಉತ್ತಮ ಅನುಭವ ನೀಡುವುದಿಲ್ಲ. ಎಲ್‌ಸಿಡಿ ಪರದೆಗಳ ಒಂದು ಬಹುಮುಖ್ಯ ತೊಂದರೆ ಎಂದರೆ ಅವುಗಳನ್ನು ನೇರವಾಗಿ ಮತ್ತು ಸ್ವಲ್ಪ ಆಚೀಚೆ ಮಾತ್ರ ನೋಡಬಹುದು. ಇದನ್ನು ವ್ಯೆವಿಂಗ್ ಆ್ಯಂಗಲ್ ಎನ್ನುತ್ತಾರೆ.

ಎಲ್‌ಇಡಿ ಟಿ.ವಿ.

ಎಲ್‌ಸಿಡಿ ಟಿ.ವಿ.ಯ ಕೊರತೆಗಳನ್ನೆಲ್ಲ ಸರಿಪಡಿಸಿಕೊಂಡ ಟಿ.ವಿ.. ಎಲ್‌ಇಡಿ ಟಿ.ವಿ. ಎಂಬ ಹೆಸರಿದ್ದರೂ ನಿಜವಾಗಿ ನೋಡಿದರೆ ಇವನ್ನು ಎಲ್‌ಸಿಡಿ/ಎಲ್‌ಇಡಿ ಟಿ.ವಿ. ಎಂದು ಕರೆಯುವುದು ಉಚಿತ. ಸಾಮಾನ್ಯವಾಗಿ ಎಲ್‌ಸಿಡಿ ಪರದೆಯ ಹಿಂದೆ ಫ್ಲೋರೊಸೆಂಟ್ ಬೆಳಕಿನ ಆಕರ ಇರುತ್ತದೆ. ಇದರಿಂದಾಗಿಯೇ ಎಲ್‌ಸಿಡಿ ಪರದೆಗೆ ವ್ಯೆವಿಂಗ್ ಆಂಗಲ್ ತೊಂದರೆ ಉಂಟಾಗುವುದು. ಎಲ್‌ಇಡಿ ಟಿ.ವಿ.ಗಳಲ್ಲಿ ಎಲ್‌ಸಿಡಿ ಪರದೆಯ ಹಿಂದೆ ಎಲ್‌ಇಡಿ ಬೆಳಕಿನ ಆಕರ ಇರುತ್ತದೆ. ಎಲ್‌ಸಿಡಿ ಪರದೆಯಲ್ಲಿ ಸಹಸ್ರಾರು ಚಿಕ್ಕ ಚಿಕ್ಕ ಎಲ್‌ಸಿಡಿ ಎಂದರೆ ದ್ರವಸ್ಪಟಿಕ ಘಟಕಗಳಿದ್ದು ಇವು ಪಿಕ್ಸೆಲ್ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಎಲ್‌ಇಡಿ ಟಿ.ವಿ.ಯಲ್ಲಿ ಈ ಪ್ರತಿ ಎಲ್‌ಸಿಡಿ ಪಿಕ್ಸೆಲ್ ಹಿಂದೆಯೂ ಒಂದು ಎಲ್‌ಇಡಿ ಬೆಳಕಿನ ಆಕರವಿರುತ್ತದೆ. ಇದರಿಂದಾಗಿ ಚಿತ್ರ ಚೆನ್ನಾಗಿ ಗೋಚರವಾಗುತ್ತದೆ. ಚಿತ್ರದ ಗುಣಮಟ್ಟ ಉತ್ತಮವಾಗಿರುತ್ತದೆ. ವ್ಯೆವಿಂಗ್ ಆ್ಯಂಗಲ್ ತೊಂದರೆಯೂ ನಿವಾರಣೆಯಾಗುತ್ತದೆ. ಹೀಗೆ ಹಲವು ರೀತಿಯಲ್ಲಿ ಬರಿಯ ಎಲ್‌ಸಿಡಿ ಟಿ.ವಿ.ಗಳಿಗಿಂತ ಎಲ್‌ಸಿಡಿ/ಎಲ್‌ಇಡಿ ಟಿ.ವಿ.ಗಳು ಉತ್ತಮವಾಗಿರುತ್ತವೆ.ಟಿ.ವಿ.ಗಳ ಬಗೆಗಿನ ಈ ಪೀಠಿಕಾ ಲೇಖನದಲ್ಲಿ ಕೆಲವು ಟಿ.ವಿ. ಮಾದರಿಗಳನ್ನು ಸ್ಥೂಲವಾಗಿ ವಿವರಿಸಲಾಗಿದೆ. ಇನ್ನೂ ಕೆಲವು ಮಾದರಿಗಳು ಬಾಕಿ ಉಳಿದಿವೆ. ಉದಾಹರಣೆಗೆ ಮೂರು ಆಯಾಮದ ಟಿ.ವಿ., ಸ್ಮಾರ್ಟ್ ಟಿ.ವಿ. ಇತ್ಯಾದಿ. ಈ ಎಲ್ಲ ನಮೂನೆಯ ಟಿ.ವಿ.ಗಳನ್ನು ಹೆಚ್ಚು ವಿವರಣಾತ್ಮಕವಾಗಿ ಮುಂದಿನ ಕಂತುಗಳಲ್ಲಿ ಪರಿಚಯಿಸಲಾಗುವುದು.ಗ್ಯಾಜೆಟ್ ಸಲಹೆ

ಆರ್. ರವಿ ಅವರ ಪ್ರಶ್ನೆ: ನಾನು ಯಾವ ಟ್ಯಾಬ್ಲೆಟ್ ಕೊಂಡರೆ ಅದರಲ್ಲಿ ನುಡಿ ತಂತ್ರಾಂಶದಲ್ಲಿ ತಯಾರಿಸಿದ ಕಡತಗಳನ್ನು ತೆರೆದು ಎಡಿಟ್ ಮಾಡಬಹುದು?

ಉ: ನುಡಿ ತಂತ್ರಾಂಶದಲ್ಲಿ ತಯಾರಿಸಿದ ಕಡತಗಳನ್ನು ಗಣಕದಲ್ಲಿ ಮಾತ್ರ ಅದರಲ್ಲೂ ವಿಂಡೋಸ್ ಆಧಾರಿತ ಗಣಕಗಳಲ್ಲಿ ಮಾತ್ರ ತೆರೆಯಬಹುದು. ಕೆಲವು ಆಂಡ್ರಾಯಿಡ್ ಟ್ಯಾಬ್ಲೆಟ್ ಮತ್ತು ಐಪ್ಯಾಡ್‌ಗಳಲ್ಲಿ ಕನ್ನಡ ಯುನಿಕೋಡ್ ಕಡತಗಳನ್ನು ಓದಬಹುದು ಮತ್ತು ಎಡಿಟ್ ಮಾಡಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry