ವಿಮಾನ ಪ್ರಯಾಣಿಕರ ಬವಣೆ ತಪ್ಪಲಿ...

7

ವಿಮಾನ ಪ್ರಯಾಣಿಕರ ಬವಣೆ ತಪ್ಪಲಿ...

ಡಿ. ಮರಳೀಧರ
Published:
Updated:
ವಿಮಾನ ಪ್ರಯಾಣಿಕರ ಬವಣೆ ತಪ್ಪಲಿ...

ಇತ್ತೀಚೆಗೆ ಹದಿನೈದು ದಿನಗಳ ಅವಧಿಯಲ್ಲಿ ನಾನು ಹಲವು ದೇಶಿ ಮತ್ತು ವಿದೇಶಿ ವಿಮಾನಗಳಲ್ಲಿ ಪ್ರಯಾಣಿಸುವ ಸಂದರ್ಭ ಒದಗಿ ಬಂದಿತ್ತು. ಈ ಸಂದರ್ಭದಲ್ಲಿ  ವಿಮಾನ ಪ್ರಯಾಣಿಕರು ವಿವಿಧ ವಿಮಾನ ನಿಲ್ದಾಣಗಳಲ್ಲಿ ಎದುರಿಸುವ ಸಮಸ್ಯೆಗಳ ಅಗಾಧತೆಯೂ ನನ್ನ ಅನುಭವಕ್ಕೆ ಬಂದಿತು. ನನಗಾದ ಅನುಭವಗಳನ್ನೆಲ್ಲ ಇಲ್ಲಿ ಹಂಚಿಕೊಳ್ಳಲು ಉದ್ದೇಶಿಸಿದ್ದೇನೆ.ದಿನನಿತ್ಯದ ಕೆಲಸ ಕಾರ್ಯಗಳಲ್ಲಿಯೇ ಬಳಕೆದಾರರಿಗೆ ತೀವ್ರ ಕಿರಿಕಿರಿ ಉಂಟು ಮಾಡುವ ಮತ್ತು ಸೌಲಭ್ಯಗಳನ್ನೆಲ್ಲ ವಿನಾಕಾರಣ ಸಂಕೀರ್ಣಗೊಳಿಸಿ ಅವ್ಯವಸ್ಥೆಗೊಳಿಸುವುದರಲ್ಲಿ ಭಾರತೀಯರಿಗೆ ವಿಶ್ವದಲ್ಲಿಯೇ ಯಾರೂ ಸರಿಸಾಟಿ ಇರಲಿಕ್ಕಿಲ್ಲ ಎನ್ನುವ ಭಾವನೆಯು ಈ ಸಂಚಾರ ಅವಧಿಯಲ್ಲಿ ನನ್ನಲ್ಲಿ ಮೂಡಿ ಮರೆಯಾಯಿತು.ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನಗತ್ಯ ತೊಂದರೆ ಕೊಡುವುದರಲ್ಲಿ ಮೊದಲ ಬಹುಮಾನ ಕೋಲ್ಕತ್ತಕ್ಕೆ ನೀಡಬೇಕು. ಹೋದ ಭಾನುವಾರ ನಾನು ಅಲ್ಲಿಂದ ಬೆಂಗಳೂರಿಗೆ ಬರಬೇಕಾಗಿತ್ತು. ಕೋಲ್ಕತ್ತ ವಿಮಾನ ನಿಲ್ದಾಣ ತಲುಪುವ ಮುನ್ನವೇ ನನ್ನ ಸಹನೆ ಪರೀಕ್ಷೆ ಆರಂಭಗೊಂಡಿತ್ತು.ನಿಲ್ದಾಣದಲ್ಲಿ ಉದ್ದನೇಯ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿಕೊಳ್ಳಲು 2 ಗಂಟೆ ಮುಂಚಿತವಾಗಿಯೇ ನಿಲ್ದಾಣ ತಲುಪಿ ಎನ್ನುವ `ಎಸ್‌ಎಂಎಸ್' ಸಂದೇಶವೊಂದು ಬಂದಿತ್ತು. ಪೂರ್ವನಿಗದಿಯಂತೆ ವಿಮಾನ ಹೊರಡುವುದಕ್ಕೆ ಸರಿಯಾಗಿ ಎರಡು ಗಂಟೆ ಮುಂಚಿತವಾಗಿಯಷ್ಟೇ ಈ ಸಂದೇಶ ಬಂದಿತ್ತು. ಹೀಗಾಗಿ ನಾನು ಆದಷ್ಟು ಬೇಗ ನಿಲ್ದಾಣದತ್ತ ಹೊರಡಲು ಸಾಧ್ಯವಾಗಲಿಲ್ಲ.ವಿಮಾನ ನಿಲ್ದಾಣ ತಲುಪಲು ನಾನು ನಿಜವಾಗಿಯೂ ಹರಸಾಹಸ ಪಡಬೇಕಾಯಿತು. ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನಗಳ ಸಂಚಾರವು ತುಂಬ ಗೋಜಲಾಗಿತ್ತು. ಮಹಾಭಾರತದಲ್ಲಿ ಚಕ್ರವ್ಯೆಹ ಭೇದಿಸಿದ ಅಭಿಮನ್ಯುವಿಗೂ ಈ ಸಂಚಾರ ದಟ್ಟಣೆಯ ಅವ್ಯವಸ್ಥೆ ಭೇದಿಸುವುದು ಕಷ್ಟ ಎಂದೇ ನನಗೆ  ಆ ಕ್ಷಣಕ್ಕೆ ಭಾಸವಾಗಿತ್ತು.ವಾಹನದಿಂದ ಇಳಿದು ಪ್ರವೇಶದ್ವಾರದತ್ತ ಧಾವಿಸಲು ಮುಂದಾದರೆ, ಅಲ್ಲೆಲ್ಲೂ ಹತ್ತಿರದಲ್ಲಿ ಲಗೇಜ್ ಸಾಗಿಸುವ ಟ್ರಾಲಿಗಳೇ ಕಣ್ಣಿಗೆ ಬೀಳಲಿಲ್ಲ.  ಟರ್ಮಿನಲ್ ಕಟ್ಟಡದ ಒಳಗೆ ಹೋಗಲು ಹಲವು ಪ್ರವೇಶ ದ್ವಾರಗಳು ಇದ್ದಿದ್ದರೂ ಎರಡು ದ್ವಾರಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಪ್ರಯಾಣಿಕರ ಉದ್ದನೇಯ  ಸಾಲೇ ಅಲ್ಲಿತ್ತು. ಇಂಚಿಂಚೆ ಜರುಗುತ್ತಿದ್ದ ಸಾಲಿನಲ್ಲಿದ್ದ ಪ್ರಯಾಣಿಕರ  ದಾಖಲೆಗಳನ್ನು ಬಾಗಿಲಲ್ಲಿ ನಿಂತಿದ್ದ ಭದ್ರತಾ ಸಿಬ್ಬಂದಿ  ಪರೀಕ್ಷಿಸಿ ಒಳ ಬಿಟ್ಟ ನಂತರ ಮೊದಲ ಕಂಟಕವೇನೊ ದೂರವಾಗಿತ್ತು.ಸಮಾಧಾನದ ನಿಟ್ಟುಸಿರು ಬಿಟ್ಟು ಒಳ ಹೋಗುತ್ತಿದ್ದಂತೆ ಎರಡು ಪ್ರವೇಶ ದ್ವಾರಗಳಿಂದ ಬರುತ್ತಿದ್ದ ಪ್ರಯಾಣಿಕರನ್ನು ಇನ್ನೊಂದು ಬಾರಿ ಪರೀಕ್ಷಿಸುವ ವ್ಯವಸ್ಥೆ ಎದುರಾಗಿತ್ತು. ಒಂದೇ ಚೆಕ್ ಪಾಯಿಂಟ್‌ನಲ್ಲಿ ಪ್ರಯಾಣಿಕರು ತಮ್ಮೆಲ್ಲ ಸರಕು - ಸರಂಜಾಮುಗಳ ಜತೆ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಹೀಗಾಗಿ ಅಲ್ಲಿಯೂ ದೊಡ್ಡ  ಸಾಲು ಇತ್ತು. ಅಲ್ಲಿಯೂ ಮತ್ತೊಮ್ಮೆ ಪ್ರಯಾಣಿಕರ ದಾಖಲೆಗಳನ್ನೆಲ್ಲ ಪರೀಕ್ಷಿಸಲು ಸಾಕಷ್ಟು ಸಮಯ ಸರಿದು ಹೋಯಿತು.ಮುಂದಿನ ಹಂತದಲ್ಲಿ ಬ್ಯಾಗುಗಳನ್ನು ತಪಾಸಣೆ ನಡೆಸುವುದು ಎದುರಾಯಿತು. ಬ್ಯಾಗುಗಳನ್ನು ತಪಾಸಣೆಗೆ ಒಳಪಡಿಸಿ ಮತ್ತೊಮ್ಮೆ ಅವುಗಳನ್ನು ಟ್ರಾಲಿಗೆ ಸೇರಿಸಿದೆ. ವಯೋವೃದ್ಧ ಪ್ರಯಾಣಿಕರು ಈ ಕಸರತ್ತು ಮಾಡಲು ಸಾಕಷ್ಟು ಪ್ರಯಾಸ ಪಡುತ್ತಿರುವುದನ್ನು ಅಸಹಾಯಕತೆಯಿಂದಲೇ ನೋಡುತ್ತ ಇರಬೇಕಾಯಿತು. `ಚೆಕ್ ಇನ್'ಗೆ ಮೊದಲೇ ವಿಳಂಬವಾಗಿದ್ದ ಪ್ರಯಾಣಿಕರು ಈ ಎಲ್ಲ ಪ್ರಕ್ರಿಯೆಗಳಿಂದ ಸಾಕಷ್ಟು ರೋಸಿ ಹೋಗಿದ್ದರು.ಈ ಮೊದಲಿನ ಮೂರು ಪರೀಕ್ಷಾ ಹಂತಗಳನ್ನು ದಾಟಿ ಬಂದಿದ್ದ ಪ್ರಯಾಣಿಕರು ಇಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರಿಂದ ಸರತಿ ಸಾಲು ಕುಂಟುತ್ತಲೇ ಸಾಗಿತ್ತು. `ಬೋರ್ಡಿಂಗ್ ಪಾಸ್' ಕೈಸೇರುತ್ತಿದ್ದಂತೆ  ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೆ. ಕೊನೆಗೂ `ಚೆಕ್ ಇನ್' ಸಮರ ಗೆದ್ದ ಸಮಾಧಾನ ನನ್ನಲ್ಲಿ ಮೂಡಿತ್ತು.ಆದರೆ, ನನ್ನ ಸಂತಸ ಅಲ್ಪಾವಧಿಯಾಗಿತ್ತು. ಮುಂದೆ ಭದ್ರತಾ ತಪಾಸಣೆ ಕಾದಿತ್ತು. ಅಲ್ಲಿಯೂ  ಗೊಂದಲದ ವಾತಾವರಣ ಇತ್ತು. ಸ್ತ್ರೀ - ಪುರುಷರಿಗೆ ಪ್ರತ್ಯೇಕ ಸಾಲು ಇದೆ ಎನ್ನುವ ಕನಿಷ್ಠ ಪ್ರಾಥಮಿಕ ಮಾಹಿತಿಯೂ ಅಲ್ಲಿ ಇದ್ದಿರಲಿಲ್ಲ. ಕೆಲ ಮಹಿಳೆಯರು ಅತ್ತಿಂದಿತ್ತ ಸಾಲು ಬದಲಾಯಿಸುತ್ತ ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದರು. ವಿದೇಶಿ ಪ್ರಯಾಣಿಕರೂ ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದರು. ಭದ್ರತಾ ತಪಾಸಣೆ ಪೂರ್ಣಗೊಳಿಸಿ ಮುಂದುವರಿದಾಗ ಅಲ್ಲಿ ವಿಮಾನ ಏರಲು ಕಾದಿದ್ದ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಾಕಷ್ಟು ಸ್ಥಳಾವಕಾಶವೂ ಇದ್ದಿರಲಿಲ್ಲ. ಅನೇಕ ಹಿರಿಯ ಪ್ರಯಾಣಿಕರೂ  ಕುರ್ಚಿಗಳಿಲ್ಲದೇ ನಿಂತುಕೊಂಡೇ ಇದ್ದರು.ನಿಲ್ದಾಣದ ಒಳಗಿನ ಶೌಚಾಲಯ ದುರವಸ್ಥೆ ಬಗ್ಗೆ ಹೇಳದಿರುವುದೇ ಒಳಿತು.  ಬೀಡಾ ಜಗಿಯುವ ವಿಮಾನ ನಿಲ್ದಾಣದ ಸಿಬ್ಬಂದಿ ಅದೆಲ್ಲ ತಮಗಾಗಿಯೇ ಇರುವ ಸೌಲಭ್ಯ ಎಂಬಂತೆ ಬಳಸಿ ಗಬ್ಬೆಬ್ಬಿಸಿದ್ದರು. ಸ್ವಚ್ಛ ಪರಿಸರ ಹುಡುಕಿದರೂ ಸಿಗಲಾರದ ಕೆಟ್ಟ ವ್ಯವಸ್ಥೆ ಅಲ್ಲಿ ಮನೆ ಮಾಡಿತ್ತು. ವಿಮಾನ ಏರಿ ನನ್ನ ಸೀಟಿನಲ್ಲಿ ಕುಳಿತಾಗಲೇ ನನ್ನ ಅಂದಿನ ಬವಣೆಗಳು ದೂರವಾಗಿದ್ದವು.ದೇಶದಲ್ಲಿನ ಕೆಲವು ವಿಮಾನ ನಿಲ್ದಾಣಗಳು ಇಂತಹ ಸಮಸ್ಯೆಗಳನ್ನು ಸಮರ್ಪಕವಾಗಿ ಬಗೆಹರಿಸಿದ್ದರೂ, ದೇಶಿ ವಿಮಾನ ಪ್ರಯಾಣಿಕರಿಗೆ ಅನೇಕ ನಿಲ್ದಾಣಗಳಲ್ಲಿ ಒದಗಿಸಲಾಗುತ್ತಿರುವ ಸೌಲಭ್ಯಗಳು ತೀರ ಕಳಪೆ ಮಟ್ಟದಲ್ಲಿಯೇ ಇವೆ. ಪ್ರಯಾಣಿಕರಿಗೆ ಸೂಕ್ತ ಸೌಲಭ್ಯ ಒದಗಿಸಿರುವ ಕೆಲವೇ ಕೆಲ ವಿಮಾನ ನಿಲ್ದಾಣಗಳನ್ನು `ಸರ್ಕಾರಿ, ಖಾಸಗಿ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು  ನಿರ್ವಹಿಸಲಾಗುತ್ತಿದೆ ಎನ್ನುವುದನ್ನು ಮರೆಯಬಾರದು.ವಿಮಾನ ನಿಲ್ದಾಣಗಳಲ್ಲಿ ಸುರಕ್ಷತಾ ಕ್ರಮಗಳ ಜತೆ ರಾಜಿಯಾಗದೇ ಈ ಮುಂದೆ ಸೂಚಿಸಿರುವ ಹಲವಾರು ವಲಯಗಳಲ್ಲಿ ಸುಧಾರಣೆ ತಂದು ಪ್ರಯಾಣವನ್ನು ಇನ್ನಷ್ಟು ಸಹ್ಯಗೊಳಿಸಬೇಕಾಗಿದೆ.* ನಿಲ್ದಾಣ ಪ್ರವೇಶಿಸಲು ಅಗತ್ಯವಾದ ಮುದ್ರಿತ ಟಿಕೆಟ್‌ಗಳ ಬಳಕೆ  ಸಂಪೂರ್ಣವಾಗಿ ಕೈಬಿಡಬೇಕು. ಇಂತಹ ವೆಚ್ಚ ಉಳಿತಾಯದ ಕ್ರಮಗಳಿಂದ ಕೋಟ್ಯಂತರ ರೂಪಾಯಿಗಳನ್ನು ಉಳಿಸಬಹುದು. ಹೊಸ ಮಾರ್ಗೋಪಾಯಗಳ ಅಳವಡಿಕೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದರೂ ಅವುಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.* ನಿಲ್ದಾಣದ ಒಳ ಹೋಗಲು ಪ್ರವೇಶ ದ್ವಾರಗಳ ಸಂಖ್ಯೆ ಹೆಚ್ಚಿಸಬೇಕು.* ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಕಳೆಯುವ ಸಮಯವನ್ನು ಒಂದೂವರೆ ಗಂಟೆಯಿಂದ ಒಂದು ಗಂಟೆಗೆ ಇಳಿಸಬೇಕು.* ಭದ್ರತಾ ತಪಾಸಣೆ ಸೌಲಭ್ಯ ಹೆಚ್ಚಿಸಬೇಕು.* ಪ್ರಯಾಣಿಕರ ಬಳಕೆಗೆಂದೇ ಪ್ರತ್ಯೇಕ ಶೌಚಾಲಯ ಸೌಲಭ್ಯ ಒದಗಿಸಬೇಕು. ವಿಮಾನ ನಿಲ್ದಾಣದ ಸಿಬ್ಬಂದಿಗೆ ಬೇರೆ ಕಡೆ ಸೌಲಭ್ಯ ಒದಗಿಸಬೇಕು.* ಅಗ್ಗದ  ವಿಮಾನಗಳಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥಗಳು ಹಳಸಿರುವುದು ಮತ್ತು ದುಬಾರಿಯಾಗಿರುವುದರಿಂದ  ಸೂಕ್ತ ಆಹಾರ ಮಳಿಗೆ ತೆರೆಯಬೇಕು.* ಪ್ರಯಾಣಿಕರ ಸರಕು ಸರಂಜಾಮುಗಳ (ಲಗೇಜ್) ನಿರ್ವಹಣಾ ವ್ಯವಸ್ಥೆ ಸುಧಾರಿಸಬೇಕು.* ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಬಳಿ ಲಗೇಜ್ ಸಾಗಿಸುವ ಕೈಗಾಡಿಗಳ ಲಭ್ಯತೆ ಹೆಚ್ಚಿಸಬೇಕು. ಇಂತಹ ಒಂದು ಸರಳ ಸೌಲಭ್ಯವು ಪ್ರಯಾಣಿಕರಿಗೆ ಗಮನಾರ್ಹ ಅನುಕೂಲತೆ ಒದಗಿಸುತ್ತದೆ.  (ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿದೇಶ ಪ್ರಯಾಣ ಟರ್ಮಿನಲ್‌ನಲ್ಲಿ  ಟ್ರಾಲಿಗಾಗಿ ನಾನು 200 ಮೀಟರ್‌ಗಳಷ್ಟು ದೂರ ಕ್ರಮಿಸಬೇಕಾಯಿತು)* ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನಗಳ  ಸಂಚಾರವನ್ನು ಸಮರ್ಪಕವಾಗಿ ನಿರ್ವಹಿಸಬೇಕು.* ಪ್ರಯಾಣಿಕರನ್ನು ಕುರಿಮಂದೆಯಂತೆ ನಡೆಸಿಕೊಳ್ಳುವ ಸಿಬ್ಬಂದಿ ವರ್ತನೆಗೆ ಕಡಿವಾಣ ವಿಧಿಸಬೇಕು.ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲತೆ ಕಲ್ಪಿಸುವ ಕನಿಷ್ಠ ಸೌಲಭ್ಯಗಳ ಪಟ್ಟಿಗೆ ಕೊನೆ ಮೊದಲಿಲ್ಲ. ಇಲ್ಲಿ ಸೂಚಿಸಿರುವ ಕೆಲ ಕ್ರಮಗಳನ್ನಾದರೂ ಆದ್ಯತೆ ಮೇರೆಗೆ ಕೈಗೆತ್ತಿಕೊಂಡರೆ ಪ್ರಯಾಣಿಕರ ಬವಣೆ ಕೆಲ ಮಟ್ಟಿಗಾದರೂ ಕಡಿಮೆಯಾಗಬಹುದು.

ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಪ್ರಾಧಿಕಾರವು ತನ್ನ ಉದಾಸೀನ ಧೋರಣೆಯಿಂದ ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.ವಿಮಾನ ಪ್ರಯಾಣವು ಈಗ ವಿಲಾಸಿ ಸೌಲಭ್ಯವಾಗಿ ಉಳಿದಿಲ್ಲ. ಪ್ರಯಾಣಿಕರಿಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸದಿರುವುದು ಸ್ವೀಕಾರಾರ್ಹವೂ ಅಲ್ಲ. ನಿಲ್ದಾಣದಲ್ಲಿನ `ವಿಘ್ನ ಸಂತೋಷಿ'ಗಳು ತಮ್ಮ ಹಳೆ ಚಾಳಿ ಮುಂದುವರಿಸದೇ ಬದಲಾಗಿ `ಪ್ರಯಾಣಿಕರ ಸ್ನೇಹಿ' ಪ್ರವೃತ್ತಿ  ರೂಢಿಸಿಕೊಳ್ಳಬೇಕಾಗಿದೆ. ವಿವಿಧ ಪ್ರಾಧಿಕಾರಗಳೂ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡರೆ,  ಮುಂಬರುವ ದಿನಗಳಲ್ಲಿ ಪ್ರಯಾಣಿಕರ ಸಂಕಷ್ಟಗಳು ಕಡಿಮೆಯಾಗಬಹುದು ಎಂದೂ ಆಶಿಸಬಹುದು.  ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry