ವಿರೋಧಿಗಳನ್ನು ಇಂದ್ರಜಾಲದಲ್ಲಿ ಕೆಡವಿ...

7

ವಿರೋಧಿಗಳನ್ನು ಇಂದ್ರಜಾಲದಲ್ಲಿ ಕೆಡವಿ...

ಶೇಖರ್‌ ಗುಪ್ತ
Published:
Updated:

ಸಾಮಾನ್ಯ ಮನುಷ್ಯನ ಮಿದುಳಿನಲ್ಲಿ ಎರಡು ವಿಭಾಗಗಳು ಇರುತ್ತವೆ. ಪ್ರತಿ ವಿಭಾಗವೂ ತನ್ನದೇ ಆದ ಸಂಕೀರ್ಣ ಕೆಲಸಗಳನ್ನು ಮಾಡುತ್ತದೆ. ಅಧಿಕಾರದಲ್ಲಿ ಇರುವ ನಾಯಕನ ಮಿದುಳಿನ ಎರಡು ವಿಭಾಗಗಳಲ್ಲಿ ಒಂದು ರಾಜಕೀಯ ಕೆಲಸಗಳನ್ನು, ಇನ್ನೊಂದು ಆಡಳಿತದ ಕೆಲಸಗಳನ್ನು ನೋಡಿಕೊಳ್ಳುತ್ತಿರುತ್ತದೆ ಎನ್ನಬಹುದು.ಒಂದು ವಿಭಾಗ ಆ ನಾಯಕ ಅಧಿಕಾರಕ್ಕೆ ಏರುವ ಮಾರ್ಗ ಏನಿರಬೇಕು ಎಂಬುದನ್ನು ಆಲೋಚಿಸಿದರೆ, ಇನ್ನೊಂದು ವಿಭಾಗ ಅಧಿಕಾರವನ್ನು ಚಲಾಯಿಸುವುದು ಹೇಗೆ ಎಂಬ ಬಗ್ಗೆ ಆಲೋಚಿಸುತ್ತದೆ. ಹಾಗಾದರೆ, ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಇದು ಹೇಗೆ ಕೆಲಸ ಮಾಡುತ್ತಿರಬಹುದು?

ನೋಟು ಚಲಾವಣೆ ರದ್ದು ತೀರ್ಮಾನದ (ಆ ತೀರ್ಮಾನವನ್ನು ನೀವು ಭಂಡತನದ್ದು, ನಿರ್ದಿಷ್ಟ ದಾಳಿ ಅಥವಾ ನೋಟು ಬದಲಾವಣೆ... ಹೀಗೆ, ಏನು ಬೇಕಿದ್ದರೂ ಕರೆದುಕೊಳ್ಳಿ) ನಂತರ ಅವರ ಮಿದುಳು ಹೇಗೆ ಕೆಲಸ ಮಾಡುತ್ತಿರಬಹುದು?ಅವರ ಮಿದುಳಿನ ರಾಜಕೀಯ ವಿಭಾಗದ ಬಗ್ಗೆ ನಮಗೆ ಅವರು ಪ್ರಧಾನಿ ಹುದ್ದೆಗೆ ಏರುವ ಮುನ್ನವೇ ಸಾಕಷ್ಟು ಗೊತ್ತಿತ್ತು. ದಶಕಗಳಲ್ಲಿ ನಾವು ಕಂಡ ರಾಜಕೀಯ ನಾಯಕರ ಪೈಕಿ ಅತಿ ಹೆಚ್ಚಿನ ‘ರಾಜಕೀಯ’ದ ವ್ಯಕ್ತಿ ಮೋದಿ. ನಾಡಿ ವೈದ್ಯರು ನಾಡಿಮಿಡಿತ ನೋಡಿ ರೋಗಿಯ ಸ್ಥಿತಿ ಅರಿಯುವಂತೆ, ಸಾರ್ವಜನಿಕರಲ್ಲಿನ ಅಭಿಪ್ರಾಯ ಏನು ಎಂಬುದನ್ನು ತಿಳಿಯುವ ತಾಕತ್ತು ಮೋದಿ ಅವರಿಗಿದೆ. ಮೋದಿ ಕುರಿತ ರೂಪಕಗಳು 2002ರಿಂದ 2007ರ ನಡುವೆ, ಅಲ್ಲಿಂದ 2012ರ ನಡುವೆ ಬದಲಾಗಿದ್ದನ್ನು ನಾವು ಕಂಡಿದ್ದೇವೆ.2014ರಲ್ಲಿ ಅವರು ಅತಿಸೂಕ್ಷ್ಮವಾದ ಚುನಾವಣಾ ಗುಂಡಿ ಅದುಮಿ, ರಾಷ್ಟ್ರ ರಾಜಕಾರಣದ ವೇದಿಕೆಗೆ ಬಂದರು. ಇವೆಲ್ಲದರ ನೆಲೆಯಲ್ಲಿ ಹೇಳುವುದಾದರೆ, ಮೋದಿ ಅವರು ಈಗಿನ ತೀರ್ಮಾನದ ನಂತರ ಇದುವರೆಗೆ ಜಯ ಸಾಧಿಸಿದ್ದಾರೆ.ಮೋದಿ ಅವರ ರಾಜಕೀಯ (ಚುನಾವಣೆಗೆ ಸಂಬಂಧಿಸಿದ್ದು ಎಂದು ಓದಿಕೊಳ್ಳಿ) ಹೇಳಿಕೆಗಳು ನೇರವಾಗಿವೆ: ‘ತೆರಿಗೆ ತಪ್ಪಿಸಿ ಅಥವಾ ಭ್ರಷ್ಟಾಚಾರದ ಮೂಲಕ ಸಂಪಾದಿಸಿದ ಕಪ್ಪುಹಣ ದೊಡ್ಡ ಪ್ರಮಾಣದಲ್ಲಿ ಇದೆ ಎಂದು ನೀವು ಒಪ್ಪುತ್ತೀರಾ?’ ಈ ಪ್ರಶ್ನೆಗೆ ‘ಹೌದು’ ಎಂಬುದೇ ಉತ್ತರ. ನಂತರ ಇನ್ನಷ್ಟು ಪ್ರಶ್ನೆಗಳು ಬರುತ್ತವೆ: ‘ಹಾಗಾದರೆ, ಕೋಟ್ಯಂತರ ರೂಪಾಯಿಗಳಷ್ಟಿರುವ ಈ ಹಣವನ್ನು ವ್ಯವಸ್ಥೆಯೊಳಕ್ಕೆ ತಾರದೆ ಭಾರತ ಅಭಿವೃದ್ಧಿ ಸಾಧಿಸುತ್ತದೆಯೇ, ಜಾಗತಿಕ ಶಕ್ತಿ ಆಗುತ್ತದೆಯೇ?’ ಈ ಪ್ರಶ್ನೆಗೆ ‘ಇಲ್ಲ’ ಎಂಬ ಗಟ್ಟಿ ದನಿಯ ಉತ್ತರ ಬರುತ್ತದೆ.ಮುಂದಿನ ಪ್ರಶ್ನೆ: ‘ಸ್ವಿಸ್‌ ಬ್ಯಾಂಕುಗಳಿಂದ, ವಿಶ್ವದಲ್ಲಿನ ಇತರ ತೆರಿಗೆ ಕಳ್ಳರ ಸ್ವರ್ಗಗಳಿಂದ ಈ ಹಣ ವಾಪಸ್ ತರಲು ನಾವು ಸಾಕಷ್ಟು ಯತ್ನ ನಡೆಸಿಲ್ಲವೇ, ನಂತರ ಆದಾಯ ಸ್ವಯಂ ಘೋಷಣೆಯ ಯೋಜನೆ ರೂಪಿಸಿಲ್ಲವೇ?’ ಈ ಪ್ರಶ್ನೆಗೆ ಮಿಶ್ರ ಉತ್ತರ ಸಿಗುತ್ತದೆ. ಅಭಿಮಾನಿಗಳು ‘ಹೌದು’ ಎಂದರೆ, ಟೀಕಾಕಾರರು ‘ಇಲ್ಲ’ ಎನ್ನುತ್ತಾರೆ.ಬಹುಸಂಖ್ಯೆಯ ಜನ ಖಚಿತ ಉತ್ತರ ಹೇಳುವುದಿಲ್ಲ. ಮೋದಿ ಅವರಲ್ಲಿ ನಂಬಿಕೆ ಇಟ್ಟವರಾಗಿರಿ, ಇಲ್ಲದವರಾಗಿರಿ ಪ್ರತಿ ನಾಗರಿಕನಿಗೆ ₹ 15 ಲಕ್ಷ ಸಿಗುತ್ತದೆ ಎಂಬ ಮಾತು ಬಹುಬೇಗ ಮರೆಯುವುದಿಲ್ಲ. ಹಾಗಾಗಿ, ಹೊಸ ಪ್ರಶ್ನೆ ಇನ್ನೊಂದು ಆಯಾಮದಲ್ಲಿ ಬರುತ್ತದೆ: ‘ಎಲ್ಲ ಪ್ರಯತ್ನಗಳು ಸಮಸ್ಯೆ ಪರಿಹರಿಸಲು ವಿಫಲವಾಗಿರುವಾಗ, ಕೊನೆಯ ಪ್ರಯತ್ನವಾಗಿ ಆರ್ಥಿಕ ಅಣ್ವಸ್ತ್ರ ಪ್ರಯೋಗಿಸಬಾರದೇಕೆ? ಇದು ಅಪಾಯಕಾರಿ, ಗಟ್ಟಿ ತೀರ್ಮಾನ ಎಂಬುದು ಗೊತ್ತು. ಆದರೆ ನೀವು ನನ್ನನ್ನು ಚುನಾಯಿಸಿದ್ದು ಇದಕ್ಕೇ ಅಲ್ಲವೇ? ಯಾವುದೇ ತೀರ್ಮಾನ ಕೈಗೊಳ್ಳದ, ಏನೂ ಮಾತನಾಡದ, ಕೆಲಸ ಮಾಡದ ಯುಪಿಎ–2 ಸರ್ಕಾರದ ಮನಮೋಹನ್ ಸಿಂಗ್ ನಿಮಗೆ ಬೇಕಾ?’ಈ ನೆಲೆಯ ವಾದದಲ್ಲಿ ಮೋದಿ ಅವರು ಈವರೆಗೆ ಗೆಲ್ಲುತ್ತಿದ್ದಾರೆ. ಆಧುನಿಕ ಇತಿಹಾಸದಲ್ಲಿನ ಅತಿದೊಡ್ಡದಾದ ನೋಟುಗಳ ನಾಶ ಕಾರ್ಯಕ್ರಮದಿಂದ ತಾತ್ಕಾಲಿಕವಾಗಿಯಾದರೂ ಅತ್ಯಂತ ತೊಂದರೆಗೆ ಒಳಗಾದವರ ಬಲದ ಆಧಾರದಲ್ಲೇ ಮೋದಿ ಅವರು ಈ ಗೆಲುವು ಕಾಣುತ್ತಿದ್ದಾರೆ ಎಂಬುದು ಗಮನಾರ್ಹ.‘ನನಗೆ ಐವತ್ತು ದಿನ ಸಮಯಾವಕಾಶ ನೀಡಿ, ಅಷ್ಟು ದಿನ ಅಡಚಣೆಯನ್ನು ನನಗಾಗಿ, ನಿಮ್ಮ ದೇಶಕ್ಕಾಗಿ ಸಹಿಸಿಕೊಳ್ಳಿ’ ಎಂದು ಮೋದಿ ಹೇಳುತ್ತಿದ್ದಾರೆ. ನಾನು ನಿಮಗೆ ಉಜ್ವಲವಾದ ಭಾರತವನ್ನು, ಪರಿಪೂರ್ಣವಾದ ಜಗತ್ತನ್ನು ನೀಡುತ್ತೇನೆ ಎನ್ನುತ್ತಿದ್ದಾರೆ. ಕಪ್ಪುಹಣ ಹೊಂದಿರದ ಬಹುಸಂಖ್ಯೆಯ ಜನ ಇದರಿಂದ ಪ್ರಭಾವಿತರಾಗುತ್ತಿದ್ದಾರೆ.‘ಚಕ್‌ ದೇ ಇಂಡಿಯಾ’ ಸಿನಿಮಾದಲ್ಲಿ, ಭಾರತ ಹಾಕಿ ತಂಡದ ಕೋಚ್‌ ಶಾರುಖ್‌ ಖಾನ್‌ ‘ಗೆಲ್ಲುವುದಕ್ಕೆ ನಿಮಗೆ ಉಳಿದಿರುವುದು 70 ನಿಮಿಷ ಮಾತ್ರ’ ಎಂದು ಹೇಳಿದ ಬುದ್ಧಿಮಾತಿನಂತೆ ಇದೆ ಇದು. ಹಾಕಿ ತಂಡದ ಕೋಚ್‌ ಆಡುವ ಬುದ್ಧಿಮಾತು 70 ನಿಮಿಷಗಳಲ್ಲಿ ನಿಕಷಕ್ಕೆ ಒಳಗಾಗುತ್ತದೆ. ಆದರೆ ರಾಜಕಾರಣಿಗೆ ಹೆಚ್ಚಿನ ಸಮಯ ಇದೆ.50 ದಿನ ಪೂರ್ಣಗೊಂಡಾಗ, ಈಗ ಎದುರಾಗಿರುವ ಸಮಸ್ಯೆಗಳು ಮಾತ್ರ ಕೊನೆಗೊಂಡಿರುತ್ತವೆ. ಈ ತೀರ್ಮಾನ ತರುವ ನಿರ್ದಿಷ್ಟ ಲಾಭಗಳೇನು, ಒಟ್ಟು ಪ್ರಯೋಜನ ಏನು ಎಂಬುದು ನಮಗೆ ತಿಂಗಳುಗಳ ಕಾಲ ಗೊತ್ತಾಗುವುದಿಲ್ಲ. ಪರಿಣಾಮಗಳನ್ನು ಸರಿಯಾಗಿ ಯೋಚಿಸಿರಲಿಲ್ಲ ಎಂದು ಈ ಸರ್ಕಾರವನ್ನು, ಅದರ ಅರ್ಥಶಾಸ್ತ್ರಜ್ಞರ ತಂಡವನ್ನು ದೂಷಿಸಲು ಆಗುವುದಿಲ್ಲ.ಇತಿಹಾಸದಲ್ಲಿ ಹಿಂದೆಂದೂ ಕೈಗೊಂಡಿರದ ಕ್ರಮವೊಂದರ ಪರಿಣಾಮಗಳನ್ನು ಸರಿಯಾಗಿ ಊಹಿಸುವುದು ಹೇಗೆ ಸಾಧ್ಯ? ಇಂಥದ್ದೊಂದು ಕ್ರಮ ಕೈಗೊಂಡ ನಿದರ್ಶನ ಇಲ್ಲ, ಕೈಗೊಂಡರೆ ಏನಾಗುತ್ತದೆ ಎಂಬ ಮಾಹಿತಿ ಇಲ್ಲ. ನಮ್ಮ ಮುಂದೆ ಇದ್ದಿದ್ದು ಹಳೆಯ, ಯಥಾಸ್ಥಿತಿಯನ್ನು ಬಯಸುವ ಅರ್ಥಶಾಸ್ತ್ರಜ್ಞರ ಪ್ರಶ್ನೆ, ಅನುಮಾನಗಳು ಮಾತ್ರ. ಜನರಿಗೆ ಒಪ್ಪಿಗೆಯಾಗುವ ಆಲೋಚನೆಯನ್ನು ಕಂಡುಕೊಳ್ಳುವುದು ರಾಜಕೀಯದಲ್ಲಿ ಅತಿಮುಖ್ಯ.  ತಾನು ಈಡೇರಿಸಬಲ್ಲೆ ಎಂಬ ಭರವಸೆಗಳನ್ನು ಮಾತ್ರ ನೀಡುವ ನಾಯಕ ಎಲ್ಲೂ ಇಲ್ಲ.ಸಾಂಪ್ರದಾಯಿಕ ಪತ್ರಿಕೋದ್ಯಮದಲ್ಲಿ ಉಳಿದುಕೊಂಡಿರುವುದು ‘ಮೂರು ಉದಾಹರಣೆಗಳ ನಿಯಮ’ ಮಾತ್ರ. ಹಾಗಾಗಿ, ಇಲ್ಲಿ ಒಂದು ಪಟ್ಟಿ ಮಾಡೋಣ. ಇದರಲ್ಲಿ ಒಂದು ಹಳೆಯ, ಎರಡು ಹೊಸ ಉದಾಹರಣೆಗಳು ಇವೆ. 1969ರಲ್ಲಿ ಕಾಂಗ್ರೆಸ್ಸನ್ನು ವಿಭಜಿಸಿದ ಇಂದಿರಾ ಗಾಂಧಿ, ಬ್ಯಾಂಕ್‌ಗಳನ್ನು ರಾಷ್ಟ್ರೀಕರಿಸಿದರು. ರಾಜ ಕುಟುಂಬಗಳಿಗೆ ನೀಡುತ್ತಿದ್ದ ಗೌರವಧನ ರದ್ದುಪಡಿಸಿದರು. ಆ ಮೂಲಕ, ಶ್ರೀಮಂತರಿಗೆ ನೋವು ಉಂಟುಮಾಡಿ ಆ ಕ್ರಮದ ಬಗ್ಗೆ ಬಡವರಲ್ಲಿ ಆಸಕ್ತಿ ಮೂಡಿಸಿದರು.‘ಗರೀಬಿ ಹಟಾವೊ’ ಎಂಬ ಘೋಷಣೆ ಚಲಾವಣೆಗೆ ತಂದರು. ವಿರೋಧ ಪಕ್ಷಗಳೆಲ್ಲವೂ ಇಂದಿರಾ ವಿರುದ್ಧ ಒಟ್ಟಾದವು. ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ಪತ್ರಿಕೆಯ ಮಹಾನ್ ಸಂಪಾದಕ ಫ್ರಾಂಕ್ ಮೊರಾಸ್ ಅವರು ಇಂದಿರಾ ಅವರನ್ನು ಪ್ರಶ್ನಿಸಲು ದಿನನಿತ್ಯ ಮುಖಪುಟದಲ್ಲಿ ಅಂಕಣ ಬರೆದರು. ಆದರೂ, ಇಂದಿರಾ ಚುನಾವಣೆಯಲ್ಲಿ ಗೆದ್ದರು.ಇಂದಿರಾ ಅವರ ಪೋಸ್ಟರ್‌, ಬ್ಯಾನರ್‌ಗಳಲ್ಲಿ ಈ ಮಾತುಗಳು ಇರುತ್ತಿದ್ದವು: ‘ಅವರು ಇಂದಿರಾರನ್ನು ಕಿತ್ತೆಸೆಯಿರಿ ಎನ್ನುತ್ತಾರೆ. ಆದರೆ ಬಡತನವನ್ನು ಕಿತ್ತೊಗೆಯಿರಿ ಎಂದು ಇಂದಿರಾ ಹೇಳುತ್ತಾರೆ. ಈಗ ತೀರ್ಮಾನ ನಿಮ್ಮದು.’ ಇಂದಿರಾ ಅವರಲ್ಲಿ ನಿಶ್ಚಿತವಾಗಿಯೂ ಯಾವುದೇ ಯೋಜನೆ ಇರಲಿಲ್ಲ. ಬಡತನವನ್ನು ತೊಲಗಿಸುವ ಇರಾದೆಯೂ ಇರಲಿಲ್ಲ. ಜನರಿಗೆ ಇಷ್ಟವಾಗುವ ಭರವಸೆಯೊಂದನ್ನು ಅವರು ಕಂಡುಕೊಂಡಿದ್ದರು. ಆ ಭರವಸೆ ಎಷ್ಟು ನಿಜ ಎಂಬುದರ ಪರೀಕ್ಷೆ ಕಿರು ಅವಧಿಯಲ್ಲಿ ಆಗುವಂತೆ ಇರಲಿಲ್ಲ.ವಿರೋಧ ಪಕ್ಷಗಳಲ್ಲಿಯೂ ದೊಡ್ಡ ಆಲೋಚನೆಗಳು ಇರಲಿಲ್ಲ. ‘ನೀವು ಇಂದಿರಾ ಅವರನ್ನು ನಂಬುತ್ತೀರಿ. ಆದರೆ ಬಡತನ ತೊಲಗಿಸಲು ಅವರಿಂದ ಸಾಧ್ಯವೇ? ನೀವು ಅವರನ್ನು ಹೇಗೆ ನಂಬುತ್ತೀರಿ?’ ಎಂಬ ಪ್ರಶ್ನೆಗಳನ್ನು ಹೊರತುಪಡಿಸಿದರೆ ವಿಪಕ್ಷಗಳಲ್ಲಿ ಬೇರೇನೂ ಇರಲಿಲ್ಲ. ನಂತರದ ದಿನಗಳಲ್ಲಿ ಮತದಾರರು ಯಾರನ್ನು ನಂಬಿದರು ಎಂಬುದು ನಮಗೆ ಗೊತ್ತಿದೆ.ಒತ್ತಡದಿಂದ ನಲುಗುತ್ತಿದ್ದ, ಯುದ್ಧೋತ್ತರ ಅರ್ಥವ್ಯವಸ್ಥೆಯನ್ನು ಇಂದಿರಾ ಅವರ ನೀತಿಗಳು ಇನ್ನಷ್ಟು ಬಡವಾಗಿಸಿದ ನಂತರ, ಹಣದುಬ್ಬರ ಶೇಕಡ 25ನ್ನು ದಾಟಿದ ನಂತರ ತಾವು ಮೋಸಹೋಗಿದ್ದು ಬಡವರಿಗೆ ಗೊತ್ತಾಯಿತು. ಇದು ಆಗಿದ್ದು ಬಹಳ ಕಾಲದ ನಂತರ.ತೀರಾ ಈಚೆಗಿನ ಎರಡು ಉದಾಹರಣೆಗಳು ‘ಬ್ರೆಕ್ಸಿಟ್‌’ ಮತ್ತು ಡೊನಾಲ್ಡ್ ಟ್ರಂಪ್ ಅವರ ಗೆಲುವು. ಬ್ರೆಕ್ಸಿಟ್‌ ಪರ ನಾಯಕರಾದ ನೈಜೆಲ್ ಫೆರಾಜ್ ಮತ್ತು ಬೋರಿಸ್ ಜಾನ್ಸನ್‌  ಜನರ ಭಾವನೆಗಳನ್ನು ಬಳಸಿಕೊಳ್ಳುವ ಪುಢಾರಿಗಳು.ಬ್ರಿಟನ್ ದೇಶವನ್ನು ಮತ್ತೆ ಮಹಾನ್‌ ಮಾಡುವುದು ಅವರು ನೀಡಿದ್ದ ಭರವಸೆ. ಜನಮತ ಗಣನೆಯಲ್ಲಿ ಗೆಲುವು ಸಾಧಿಸುವುದು, ಆ ಮೂಲಕ ಯುರೋಪ್‌ನ ಸಮತೋಲನಕ್ಕೆ ಅಡ್ಡಿಪಡಿಸುವುದು ಆಗಿದೆ. ಆದರೆ ಈಗ ಇವರು ತಮ್ಮ ಭರವಸೆಗಳನ್ನು ಪರೀಕ್ಷೆಗೆ ಒಡ್ಡಿಕೊಳ್ಳಲು ತಯಾರಿಲ್ಲ. ಇದೇ ರೀತಿ, ಟ್ರಂಪ್‌ ಕೂಡ ಅಮೆರಿಕವನ್ನು ಮತ್ತೆ ಮಹಾನ್‌ ಮಾಡುವ ಭರವಸೆ ನೀಡಿದರು. ಆದರೆ, ವಿವೇಕಿಗಳ ಬಳಿ ಕೇಳಿದರೆ, ‘ಅಮೆರಿಕ ಹಿಂದೆಂದಿಗಿಂತಲೂ ಈಗ ಮಹಾನ್ ಆಗಿದೆ’ ಎನ್ನುತ್ತಾರೆ.ಅಮೆರಿಕವನ್ನು ಟ್ರಂಪ್‌ ಇನ್ನೆಷ್ಟು ಮಹಾನ್‌ ಮಾಡುತ್ತಾರೆ, ಹೇಗೆ ಮಾಡುತ್ತಾರೆ, ಯಾವಾಗ ಮಾಡುತ್ತಾರೆ ಎಂಬ ಪ್ರಶ್ನೆಗಳನ್ನು ಏಕೆ ಕೇಳಬೇಕು? ಅವರು ಚುನಾಯಿತರಾಗಿ ಆಗಿದೆ. ರಾಜಕೀಯ ಕಲೆ ಎಂದರೆ ಬಹುಸಂಖ್ಯೆಯ ಮತಗಳನ್ನು ಪಡೆದುಕೊಳ್ಳುವುದು ಮಾತ್ರ – ಅದು ಹೇಗಾದರೂ ಆಗಲಿ.ತಕ್ಷಣದ ಯುದ್ಧವನ್ನು ಮೋದಿ ಅವರು ಗೆಲ್ಲುತ್ತಿರುವುದು ಹೀಗೇ. ಮೋದಿ ಅವರ ವಿರೋಧಿಗಳಿಗೆ ಈ ಅನುಕೂಲ ಇಲ್ಲ. 70ರ ದಶಕದ ಆರಂಭದಲ್ಲಿ ಇಂದಿರಾ ಅವರು ತಮ್ಮ ವಿರೋಧಿಗಳನ್ನು ‘ಬಡತನ ನಿರ್ಮೂಲನೆ ಪರವೋ, ವಿರುದ್ಧವೋ’ ಎಂಬ ಖೆಡ್ಡಾದಲ್ಲಿ ಕೆಡವಿದಂತೆ, ಮೋದಿ ಅವರು ತಮ್ಮ ವಿರೋಧಿಗಳನ್ನು ‘ಕಪ್ಪುಹಣದ ಪರವೋ, ವಿರುದ್ಧವೋ’ ಎಂಬ ಇಂದ್ರಜಾಲದಲ್ಲಿ ಕೆಡವುತ್ತಿದ್ದಾರೆ. ಮೋದಿ ಅವರ ಅಭಿಯಾನದ ನಿಜ ಪ್ರಯೋಜನಗಳು ತಿಂಗಳುಗಳ ಕಾಲ ಗೊತ್ತಾಗುವುದಿಲ್ಲ. ಸ್ವಲ್ಪ ಅಡಚಣೆಗಳನ್ನು ಸಹಿಸಿಕೊಳ್ಳಿ ಎಂದಷ್ಟೇ ಮೋದಿ ಅವರು ಕೋರಿದರೆ, ಬಡವರು ಅದಕ್ಕೆ ಸಿದ್ಧರಾಗುತ್ತಾರೆ.ಈ ಅವಧಿಯಲ್ಲಿ ಶ್ರೀಮಂತರು, ತಾವು ಗಳಿಸಿದ್ದನ್ನು ಬಿಳಿ ಮಾಡುವುದು ಹೇಗೆ ಎಂಬುದನ್ನು ಕಂಡುಕೊಳ್ಳಬಹುದು, ಕಷ್ಟ ಅನುಭವಿಸುತ್ತಿರುವ ಜನರ ಹರ್ಷದ ನಡುವೆಯೇ ಲಾಭ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನೋಡಬಹುದು. ಇದರಿಂದಾಗಿ, ಮೋದಿ ಸರ್ಕಾರದ ಮಿದುಳಿನ ರಾಜಕೀಯ ವಿಭಾಗ ಅತ್ಯದ್ಭುತವಾಗಿ ಕೆಲಸ ಮಾಡುತ್ತಿದೆ ಎನ್ನಬಹುದು.ಮಿದುಳಿನ ಇನ್ನೊಂದು ವಿಭಾಗವನ್ನು ಗಮನಿಸಿದಾಗ ಅಷ್ಟೇನೂ ಖಚಿತವಲ್ಲದ ಚಿತ್ರಣ ಕಾಣಿಸುತ್ತದೆ. ಆಡಳಿತದ ವಿಚಾರದಲ್ಲಿ ಮೋದಿ ಸರ್ಕಾರದ ಹೊಸ ನಡೆ ನೋಟು ಚಲಾವಣೆ ರದ್ದತಿ. ಇದು ಜಾಣ್ಮೆಯ, ಧೈರ್ಯದ, ಸವಾಲುಗಳನ್ನು ಒಳಗೊಂಡಿರುವ ಹಾಗೂ ರಭಸದ ತೀರ್ಮಾನವೂ ಹೌದು. ಆಲೋಚನೆಯೇ ಇಲ್ಲದೆ ಕೈಗೊಂಡ ಕ್ರಮ ಇದು ಎಂದು ನಾವು ಈಗ ಹೇಳುವುದು ಬೇಡ. ಆದರೆ ಕಪ್ಪುಹಣಕ್ಕೆ ಸಂಬಂಧಿಸಿದ ಅಂಕಿ–ಅಂಶಗಳು, ಅವುಗಳ ವಿಶ್ಲೇಷಣೆ ಕೂಡ ಬೇಸರ ತರಿಸುತ್ತಿವೆ.ಅಧಿಕಾರಶಾಹಿಗಳ ಪಾಲಿನ ವಿಶ್ಲೇಷಣೆ ಬಗ್ಗೆ ಮಾತು ಬೇಡ. ಕಪ್ಪುಹಣದ ಅಂಕಿ–ಅಂಶಗಳ ಬಗ್ಗೆಯೂ ಅಸಹನೆ ಇದೆ. ಕಪ್ಪುಹಣದ ಮೊತ್ತ ಎಷ್ಟು, ಅದು ಎಲ್ಲಿದೆ, ಯಾರು ಅದನ್ನು ಇಟ್ಟುಕೊಂಡಿದ್ದಾರೆ, ಅದರಲ್ಲಿ ಎಷ್ಟನ್ನು ಪತ್ತೆ ಮಾಡುವ ಗುರಿ ಇದೆ ಎಂಬ ಬಗ್ಗೆ ನಮ್ಮಲ್ಲಿ ನಿಖರ ಮಾಹಿತಿ ಇಲ್ಲ. ಹಾಗಾಗಿ, ಅಷ್ಟೂ ಹಣವನ್ನು ಹೊರತೆಗೆದು, ನ್ಯಾಯೋಚಿತ ಎನ್ನಬಹುದಾದ ಹಣವನ್ನು ಅದರ ಮಾಲೀಕರಿಗೆ ಕೊಟ್ಟು, ಉಳಿದಿದ್ದನ್ನು ಕಪ್ಪುಹಣ ಎನ್ನುವುದು ಈ ಸಮಸ್ಯೆಗೆ ‘ಪರಿಹಾರ’ ಎಂಬಂತೆ ಕಾಣಲಾಗುತ್ತಿದೆ.ಅಂದಾಜು 130 ಕೋಟಿ ಜನರ ಮೇಲೆ ನಿಂತಿರುವ, ಅದರಲ್ಲಿ ಬಹುಪಾಲು ಬಡವರೇ ಇರುವ, ಪ್ರಪಂಚದ ಏಳನೆಯ ಅತಿದೊಡ್ಡ ಅರ್ಥವ್ಯವಸ್ಥೆಗೆ ಈ ಕ್ರಮ ತೀರಾ ಅಪಾಯಕಾರಿ. ಅಸಂಘಟಿತ ಆರ್ಥಿಕ ಚಟುವಟಿಕೆಗಳಿಗೆ ತುಸು ತೊಂದರೆ ತಂದು, ತೆರಿಗೆ ನೆಲೆಯನ್ನು ವಿಸ್ತರಿಸಿಕೊಳ್ಳುವ ಈ ಕ್ರಮದಿಂದ ಪ್ರಯೋಜನ ಸಿಗಬಹುದು. ಆದರೆ ಅದನ್ನು ಖಚಿತವಾಗಿ ಹೇಳಲಾಗದು.ಗಡಿ ನಿಯಂತ್ರಣ ರೇಖೆ ದಾಟಿ ನಡೆಸಿದ ನಿರ್ದಿಷ್ಟ ದಾಳಿಯನ್ನು ಬಹಿರಂಗಪಡಿಸುವುದರ, ಅಣ್ವಸ್ತ್ರಗಳ ಬಗ್ಗೆ ದೇಶ ಹೊಂದಿರುವ ನೀತಿಯ ಕುರಿತು ವೈಯಕ್ತಿಕ ಅಭಿಪ್ರಾಯವನ್ನು ರಕ್ಷಣಾ ಸಚಿವರು ಹೇಳುವುದರ ಪರಿಣಾಮಗಳನ್ನು ಯಾರು ಊಹಿಸಿದ್ದರು? ಇದೂ ಹಾಗೇ. ನೀವು ಈ ಸರ್ಕಾರದ ಅಭಿಮಾನಿ ಆಗಿದ್ದರೆ, ಹೊಸ ತೀರ್ಮಾನವನ್ನು ವೀರೇಂದ್ರ ಸೆಹ್ವಾಗ್ ಅವರಿಗೆ ಹೋಲಿಸಬಹುದು.‘ಚೆಂಡನ್ನು ನೋಡು, ಅದನ್ನು ಹೊಡಿ’ ಎನ್ನಬಹುದು. ನೀವು ಅಭಿಮಾನಿ ಅಲ್ಲದಿದ್ದರೆ, ಇದು ಊಹಾಪೋಹಗಳನ್ನು, ವಾಟ್ಸ್‌ಆ್ಯಪ್‌ನಲ್ಲಿ ಬರುವ ಸಂದೇಶಗಳನ್ನು ನಂಬುವವರ ಆಡಳಿತ ಎನ್ನಬಹುದು. ಏನೇ ಇರಲಿ, ನಮ್ಮ ಆಸನಗಳ ಬೆಲ್ಟ್‌ ಭದ್ರಪಡಿಸಿಕೊಳ್ಳಬೇಕಾದ ಸಂದರ್ಭ ಇದು.(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry