ಭಾನುವಾರ, ಡಿಸೆಂಬರ್ 8, 2019
21 °C

ವಿರೋಧ ಪಕ್ಷಗಳಿಗೆ ಇದೆಯೇ ಪ್ರತಿವಾದ ಕಟ್ಟುವ ಶಕ್ತಿ?

Published:
Updated:
ವಿರೋಧ ಪಕ್ಷಗಳಿಗೆ ಇದೆಯೇ ಪ್ರತಿವಾದ ಕಟ್ಟುವ ಶಕ್ತಿ?

ಭಾರತದ ವಿರೋಧ ಪಕ್ಷಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆಯೊಂದನ್ನು ಬಿಹಾರದ ಬಿಕ್ಕಟ್ಟು ತೆರೆದಿಟ್ಟಿದೆ. ಈ ಸಮಸ್ಯೆಯನ್ನು ಅವು ಮುಂದೆಯೂ ಎದುರಿಸಲಿವೆ, ಇದು 2019ರ ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷಗಳನ್ನು ಬಾಧಿಸಲಿದೆ. ಸಮಸ್ಯೆ ಇರುವುದು ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ- ಆ ಬಗ್ಗೆ ನಾನು ಕೆಲವು ಸಾಲುಗಳ ನಂತರ ಮಾತನಾಡುವೆ.

ಬಿಹಾರದಲ್ಲಿನ ವಿದ್ಯಮಾನ ಸರಳವಾಗಿದೆ: ಅಲ್ಲಿನ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳವು (ಸಿಬಿಐ) ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿದೆ. ಯಾದವ್ ಹಾಗೂ ಅವರ ಕುಟುಂಬ ಹೊಂದಿರುವ ಕೆಲವು ಆಸ್ತಿಗಳ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಿದೆ ಅಥವಾ ಸೋರಿಕೆ ಮಾಡಿದೆ. ಆರೋಪಗಳು ಗಂಭೀರವಾಗಿವೆ. ಅದರಲ್ಲೂ ಮುಖ್ಯವಾಗಿ, ಆಸ್ತಿಯ ಪ್ರಮಾಣಕ್ಕೆ ಸಂಬಂಧಿಸಿದ ಆರೋಪಗಳು ಗಂಭೀರವಾಗಿವೆ. ಉಪ ಮುಖ್ಯಮಂತ್ರಿಯವರನ್ನು ಸಮರ್ಥಿಸಿಕೊಳ್ಳುವ ಯಾವುದೇ ವರದಿ ಮಾಧ್ಯಮಗಳಲ್ಲಿ ಬರುತ್ತಿಲ್ಲವೆಂದೇ ಹೇಳಬೇಕು. ಇವರ ಕುಟುಂಬದ ಮುಖ್ಯಸ್ಥ ಲಾಲು ಪ್ರಸಾದ್. ಬಿಜೆಪಿಯ ವಿರುದ್ಧ ರಾಜಕೀಯ ಒಕ್ಕೂಟವೊಂದು  ಬೇಕು ಎನ್ನುವ ಉತ್ಸಾಹಿಗಳಲ್ಲಿ ಲಾಲು ಕೂಡ ಒಬ್ಬರು.

ಲಾಲು ಅವರ ರಾಷ್ಟ್ರೀಯ ಜನತಾದಳ ಹಾಗೂ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳದ (ಜೆಡಿಯು) ಮೈತ್ರಿಕೂಟ ಬಿಹಾರದಲ್ಲಿ ಸರ್ಕಾರ ರಚಿಸಿದೆ. ಈ ಎರಡೂ ಪಕ್ಷಗಳನ್ನು ಹಿಂದೆ ಸಮಾನ ಸಿದ್ಧಾಂತವೊಂದು ಬೆಸೆದಿತ್ತು. ಆ ಸಿದ್ಧಾಂತವನ್ನು ಲೋಹಿಯಾ ಪ್ರಣೀತ ಸಮಾಜವಾದ ಎನ್ನಬಹುದು (ದೇಶದ ರಾಜಕೀಯ ರಂಗದ ಅತ್ಯಂತ ಆಕರ್ಷಕ ವ್ಯಕ್ತಿಗಳಲ್ಲಿ ಒಬ್ಬರಾದ ರಾಮಮನೋಹರ ಲೋಹಿಯಾ ಅವರಿಂದಾಗಿ ಈ ಹೆಸರು ಬಂದಿದೆ. ಲೋಹಿಯಾ ಅವರನ್ನು ಈಗ ಬಹುತೇಕ ಮರೆಯಲಾಗಿದೆ). ಎಲ್ಲ ಸಮಾಜವಾದಿಗಳು ಮೊದಲು ಕಾಂಗ್ರೆಸ್ಸನ್ನು ವಿರೋಧಿಸಿದ್ದವರು.

ಆದರೆ ಭಾರತೀಯ ಜನತಾ ಪಕ್ಷ ಪ್ರವರ್ಧಮಾನಕ್ಕೆ ಬಂದ ನಂತರ, ಬಾಬರಿ ಮಸೀದಿ ವಿರುದ್ಧ ಈ ಪಕ್ಷ ಸಂಘಟಿಸಿದ ಚಳವಳಿ ಯಶಸ್ಸು ಕಂಡ ನಂತರ, ಲೋಹಿಯಾವಾದಿ ರಾಜಕಾರಣಿಗಳು ಹಿಂದುತ್ವ ವಿರೋಧಿಗಳಾದರು. ಕಾಂಗ್ರೆಸ್ ಜೊತೆ ಮೈತ್ರಿಗೆ ತೆರೆದುಕೊಂಡರು. ಈ ರಾಜಕಾರಣಿಗಳ ಪೈಕಿ ಕೆಲವರು ಕಾಂಗ್ರೆಸ್ ವಿರೋಧಿ ನಿಲುವಿಗೆ ಅಂಟಿಕೊಂಡರು. ಜಾರ್ಜ್ ಫರ್ನಾಂಡಿಸ್ ಹಾಗೂ ಒಂದು ಹಂತದವರೆಗೆ ನಿತೀಶ್ ಕುಮಾರ್ ಇಂಥ ರಾಜಕಾರಣಿಗಳು. ಇನ್ನುಳಿದ ಬಹುತೇಕ ರಾಜಕಾರಣಿಗಳು ಬಿಜೆಪಿ ವಿರೋಧಿ ನಿಲುವು ತಾಳಿದರು.

ಈಗ ಇಂಥವರ ಮೇಲೆ ಸಿದ್ಧಾಂತವನ್ನು ಕೈಬಿಟ್ಟ, ಸೋಗಲಾಡಿತನ ತೋರಿದ ಆರೋಪ ಇದೆ. ಬಹುಪಾಲು ಜನ ಬಡವರಾಗಿರುವ ರಾಜ್ಯದಲ್ಲಿ ರಾಜಕೀಯ ವ್ಯಕ್ತಿಗಳು ಹಾಗೂ ಅವರ ಕುಟುಂಬದ ಸದಸ್ಯರು ಕೋಟ್ಯಂತರ ರೂಪಾಯಿ ಹಣ ಸಂಪಾದಿಸುವುದು ಯಾವ ಮಾದರಿಯ ಸಮಾಜವಾದ?  ಯಾದವ್ ಕುಟುಂಬದ ಕುರಿತ ವರದಿಗಳು ಒಂದು ಸಾವಿರ ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಬೇನಾಮಿ ವಹಿವಾಟುಗಳ ಬಗ್ಗೆ ಉಲ್ಲೇಖಿಸಿವೆ. ಇವು ಆರೋಪಗಳು ಮಾತ್ರ, ಇವುಗಳು ನ್ಯಾಯಾಲಯದಲ್ಲಿ ಸಾಬೀತಾಗಬೇಕು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಈ ಆರೋಪಗಳಿಗೆ ಕೊಡುತ್ತಿರುವ ಸಮಜಾಯಿಷಿಗಳು ವಾಸ್ತವವನ್ನು ಹೇಳುತ್ತಿಲ್ಲ. ‘ನಾವು ಬಿಜೆಪಿಗೆ ಹೆದರುವುದಿಲ್ಲ, ಕೋಮುವಾದಿ ಶಕ್ತಿಗಳನ್ನು ಎದುರಿಸುತ್ತೇವೆ’ ಎಂಬಂತಹ ಹೇಳಿಕೆಗಳನ್ನು ಯಾದವ್ ಕುಟುಂಬದವರು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷವು ಕುಟುಂಬ ರಾಜಕಾರಣವನ್ನು ಬೆಳೆಸುತ್ತಿದೆ ಎಂದು ಸಮಾಜವಾದಿಗಳು ಆರೋಪಿಸುತ್ತಿದ್ದರು. ಇದು ಸತ್ಯವೂ ಹೌದು. ನೆಹರೂ ಅವರು ಇಂದಿರಾರನ್ನು ಮುನ್ನೆಲೆಗೆ ತಂದರು, ರಾಜೀವ್ ಅವರ ನಂತರ ಕಾಂಗ್ರೆಸ್ ಮುಖ್ಯಸ್ಥರಾಗಿ ಸೋನಿಯಾ ಅಧಿಕಾರ ಹಿಡಿದರು ಎಂಬುದನ್ನು ನಿರಾಕರಿಸಲು ಯಾರಿಂದ ಸಾಧ್ಯ? ಆದರೆ ಸಮಾಜವಾದಿಗಳೂ ಕುಟುಂಬ ರಾಜಕಾರಣ ಮಾಡುವುದನ್ನು ನಾವು ಬಯಸುವುದಿಲ್ಲ. ಉತ್ತರ ಪ್ರದೇಶದ ಯಾದವ್ ಕುಟುಂಬ ಸಮಾಜವಾದಿ ಪಕ್ಷವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಈ ಪಕ್ಷ ಹೆಸರಿನಲ್ಲಿ ಮಾತ್ರ ಸಮಾಜವಾದಿ ಆಗಿದೆ. ಕುಟುಂಬದ ಸದಸ್ಯರ ಪೈಕಿ ಅಂತೂಇಂತೂ ಮೂರರಲ್ಲಿ ಒಬ್ಬರಿಗೆ ವಿಧಾನಸಭೆ ಅಥವಾ ಲೋಕಸಭೆಯ ಟಿಕೆಟ್ ಕೊಟ್ಟಿಲ್ಲ, ಸರ್ಕಾರ ರಚನೆಯಾದಾಗ ಸಚಿವ ಸ್ಥಾನ ನೀಡಿಲ್ಲ ಎನ್ನಬಹುದು.

ಭಾರತದಲ್ಲಿನ ಕೋಮುವಾದಿ ಹಾಗೂ ವಿಭಜನಕಾರಿ ರಾಜಕೀಯದ ವಿರುದ್ಧ ಹೋರಾಟ ನಡೆಸುತ್ತಿರುವುದಾಗಿ ಹೇಳುವ ಸಮಾಜವಾದಿಗಳ ಹಿನ್ನೆಲೆ ಹೀಗಿದೆ. ಅಲ್ಪಸಂಖ್ಯಾತರ ವಿಚಾರದಲ್ಲಿ ಹಾಗೂ ಎಲ್ಲರನ್ನೂ ಒಳಗೊಳ್ಳುವ ವಿಚಾರದಲ್ಲಿ ಇವರಿಗೆ ಬದ್ಧತೆ ಇದೆ ಎಂಬುದು ನಿಜ. ಆದರೆ, ರಾಜಕೀಯದಲ್ಲಿ ಧರ್ಮಕ್ಕೆ ಸಂಬಂಧಿಸದ ವಿಚಾರಗಳಲ್ಲಿ ಇವರು ವಿಶ್ವಾಸಾರ್ಹತೆ ಬೆಳೆಸಿಕೊಂಡಿಲ್ಲ. ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಹಾಗೂ ಅದರ ಬೆಂಬಲಿಗರು ಮಾಡುವ ಆರೋಪಗಳಿಗೆ ಉತ್ತರ ಕೊಡುವುದು ಉತ್ತರ ಪ್ರದೇಶ ಅಥವಾ ಬಿಹಾರದಲ್ಲಿ ಯಾದವ್ ಕುಟುಂಬಗಳಿಗೆ ಕಷ್ಟ.

ವಿಶ್ವಾಸಾರ್ಹತೆಯ ಕೊರತೆಯು ಇವರಿಗೆ ದೊಡ್ಡ ಪೆಟ್ಟು ನೀಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕೋಮುವಾದವು ಪ್ರಮುಖ ವಿಚಾರವಾಗುವ ಸಾಧ್ಯತೆ ತೀರಾ ಕಡಿಮೆ. ಜಾನುವಾರು ಹತ್ಯೆಗಳ ವಿಚಾರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳನ್ನು ಬಿಜೆಪಿಯು ತೀರಾ ಸಹಜಗೊಳಿಸಿರುವುದು ಇದಕ್ಕೆ ಕಾರಣ. ಮುಸ್ಲಿಮರನ್ನು ಆಗಾಗ ಹೊಡೆದು ಸಾಯಿಸುವ ವಿದ್ಯಮಾನಗಳನ್ನು ದೇಶ ಬಹಳ ಸಹಜವಾಗಿ ಜೀರ್ಣಿಸಿಕೊಳ್ಳುತ್ತದೆ. ಇಂಥವನ್ನು ದೊಡ್ಡ ಘಟನೆಗಳಾಗಿ ನೋಡಲು ಸಾಧ್ಯವಾಗುತ್ತಿಲ್ಲ. ಹೀಗೆ ಹೊಡೆದು ಸಾಯಿಸುವುದನ್ನು ದೊಡ್ಡ ಘಟನೆಗಳಾಗಿ ಕಂಡಿದ್ದಿದ್ದರೆ ಅವುಗಳಿಗೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದವು. ಆದರೆ ಅಂಥವೇನೂ ಕಾಣುತ್ತಿಲ್ಲ. ಇದು ನಾಚಿಕೆಗೇಡಿನ ವಿಚಾರವಾದರೂ ಸತ್ಯ. ಇವುಗಳನ್ನೆಲ್ಲ ಸಣ್ಣ ವಿಚಾರಗಳನ್ನಾಗಿ ಕಾಣಲಾಗುತ್ತಿದೆ.

2014ರ ಚುನಾವಣೆಯಲ್ಲಿ ಪ್ರಸ್ತಾಪವಾದ ವಿಚಾರಗಳೇ 2019ರಲ್ಲೂ ಕೇಳಿಬರಲಿವೆ. ಭ್ರಷ್ಟ ನಾಯಕರು, ಭಯೋತ್ಪಾದನೆಯ ಬಗ್ಗೆ ಮೃದು ಧೋರಣೆ ಹೊಂದಿರುವವರು ದೇಶದ ಬೆಳವಣಿಗೆಗೆ ಅಡ್ಡಿಯಾಗಿದ್ದಾರೆ, ಇಂಥವರು ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವಲ್ಲಿ ಹಾಗೂ ತಮ್ಮ ಕುಟುಂಬಗಳನ್ನು ಶ್ರೀಮಂತಗೊಳಿಸುವಲ್ಲಿ ಮಾತ್ರ ಆಸಕ್ತಿ ಹೊಂದಿದ್ದಾರೆ ಎಂದು ಮೋದಿ ಅವರು ಹೇಳುತ್ತಾರೆ.

ಇದು ತೀರಾ ಸರಳೀಕೃತ ವಾದ. ಇದು ಸರಿಯಾಗಿದೆ ಎಂದು ನಾನು ಹೇಳುವುದಿಲ್ಲ. ಆದರೆ, ಇಂಥ ವಾದಗಳಿಗೆ ಪ್ರತಿವಾದ ಕಟ್ಟುವ ಹೊಣೆ ವಿರೋಧ ಪಕ್ಷಗಳ ಮೇಲಿದೆ. ಕೋಮುವಾದಕ್ಕೆ ಸಂಬಂಧಿಸಿದ ಪ್ರತಿಕ್ರಿಯೆಗಳನ್ನು ಮಾತ್ರ ಅವರು ನೀಡುವುದು ಸಾಕಾಗದು. ಭ್ರಷ್ಟಾಚಾರ ಇಲ್ಲದ ಆಡಳಿತವನ್ನು ತಾವು ನೀಡುತ್ತೇವೆ ಎಂಬ ವಿಶ್ವಾಸವನ್ನು ವಿರೋಧ ಪಕ್ಷಗಳು ದೇಶದ ಬಹುಪಾಲು ಜನರಲ್ಲಿ ಮೂಡಿಸಬೇಕು. ಮನಮೋಹನ್ ಸಿಂಗ್ ಅವರು ಇದ್ದಂತೆ, ನರೇಂದ್ರ ಮೋದಿ ಅವರು ಇರುವಂತೆ ತಮ್ಮನ್ನು ವೈಯಕ್ತಿಕವಾಗಿ ಅನುಮಾನಿಸಲು ಸಾಧ್ಯವಿಲ್ಲ ಎಂಬ ನಂಬಿಕೆಯನ್ನು ವಿರೋಧ ಪಕ್ಷಗಳ ನಾಯಕರು ಜನರಲ್ಲಿ ಮೂಡಿಸಬೇಕು.

ಬಿಹಾರ, ಉತ್ತರ ಪ್ರದೇಶ ಹಾಗೂ ಇತರ ಹಲವು ರಾಜ್ಯಗಳನ್ನು ಗಮನಿಸಿದರೆ, ವರ್ಷಗಳಿಂದ ಕಳಂಕ ಹೊತ್ತುಕೊಂಡವರನ್ನು ಮುಂದಿಟ್ಟುಕೊಂಡು ಇವನ್ನೆಲ್ಲ ಮಾಡಲು ಸಾಧ್ಯವೇ ಎಂಬ ಅನುಮಾನ ಬರುತ್ತದೆ. 2019ರಲ್ಲಿ ವಿರೋಧ ಪಕ್ಷಗಳ ಮೇಲಿರುವ ಹೊರೆ ಇವೇ ಆಗಿರುತ್ತವೆ. ಇವುಗಳನ್ನು ಒಪ್ಪಿಕೊಂಡು, ಪರಿಸ್ಥಿತಿ ಬದಲಾಯಿಸಲು ಶಕ್ತಿ ವ್ಯಯಿಸದಿದ್ದರೆ ವಿರೋಧ ಪಕ್ಷಗಳಿಗೆ 2014ರಲ್ಲಿ ಆಗಿದ್ದೇ 2019ರಲ್ಲೂ ಆಗಲಿದೆ. 

( ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಪ್ರತಿಕ್ರಿಯಿಸಿ (+)