ವಿ.ವಿ. ಮುಂದಿಟ್ಟಿರುವ ಹೊಸ ಪ್ರಶ್ನೆಗಳು, ಪಾಠಗಳು

7

ವಿ.ವಿ. ಮುಂದಿಟ್ಟಿರುವ ಹೊಸ ಪ್ರಶ್ನೆಗಳು, ಪಾಠಗಳು

ಆರ್‌. ಪೂರ್ಣಿಮಾ
Published:
Updated:
ವಿ.ವಿ. ಮುಂದಿಟ್ಟಿರುವ ಹೊಸ ಪ್ರಶ್ನೆಗಳು, ಪಾಠಗಳು

ದೇಶದಲ್ಲಿ ಹೊಸದೇನು ಹುಟ್ಟಿದರೂ ಅದು ಬೆಳೆಯುವುದು ವಿದ್ಯಾರ್ಥಿ ಸಮುದಾಯದೊಳಗೆ- ಯಾವುದೇ ಹೊಸ ವಿಚಾರ ಕುರಿತ ಪರ ವಿರೋಧಗಳ ಚರ್ಚೆಗೆ ಶಾಲೆ ಕಾಲೇಜು ವಿದ್ಯಾಸಂಸ್ಥೆ ವಿಶ್ವವಿದ್ಯಾಲಯಗಳೇ ದೊಡ್ಡ ವೇದಿಕೆ. ಸ್ವಾತಂತ್ರ್ಯ ಚಳವಳಿ, ನವನಿರ್ಮಾಣ ಚಳವಳಿಯಿಂದ ಹಿಡಿದು ಎಲ್ಲ ಬಗೆಯ ಹೊಸ ರಾಜಕೀಯ ಚಿಂತನೆಗಳ ಬಿತ್ತನೆಗೆ ವಿದ್ಯಾರ್ಥಿ ಸಂಕುಲವೇ ಸೂಕ್ತವಾದ ಹಸಿನೆಲ. ಎಲ್ಲ ರಾಜಕೀಯ ಪಕ್ಷಗಳಿಗೂ ಅವುಗಳ ವಿದ್ಯಾರ್ಥಿ ಸಂಘಟನೆಗಳೇ ಹೋರಾಟದ ಕಾಲಾಳು ಪಡೆಗಳು.ಹಾಗೆಯೇ ಎಲ್ಲ ರೀತಿಯ ಪ್ರತಿರೋಧಕ್ಕೂ ವಿಶ್ವವಿದ್ಯಾಲಯವೇ ಪಾಠಶಾಲೆ. ವಿದ್ಯಾರ್ಥಿಗಳಿಂದ ರಾಜಕೀಯವನ್ನು ದೂರವಿಡಬೇಕು ಅನ್ನುವ ಕಳಕಳಿಯೂ ಇವುಗಳಷ್ಟೇ ಹಳೆಯದು.ಒಟ್ಟಿನಲ್ಲಿ ಇದು ದೇಶಕಾಲಗಳನ್ನು ಮೀರಿ ಆಧುನಿಕ ಚರಿತ್ರೆಯಲ್ಲಿ ಕಂಡುಬರುವ ಅನಿವಾರ್ಯ ಅಧ್ಯಾಯ. ಆದ್ದರಿಂದಲೇ ರಾಜಕೀಯ ಪಕ್ಷಗಳು ಸರ್ಕಾರದ ಆಡಳಿತದ ಸೂತ್ರ ಹಿಡಿದ ತಕ್ಷಣವೇ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಅವುಗಳಲ್ಲಿನ ವಿದ್ಯಾರ್ಥಿ ಸಂಘಟನೆಗಳ ಮೇಲೆ ಹಿಡಿತ ಸಾಧಿಸಲು ಮತ್ತು ವಿದ್ಯಾರ್ಥಿಗಳ ಮೇಲೆ ತಮ್ಮ ವಿಚಾರಗಳನ್ನು ಹೇರಲು ಅಪಾರ ಗಮನ ಕೊಡುತ್ತವೆ. ಕೇಂದ್ರದ ಎನ್‌ಡಿಎ ಸರ್ಕಾರವೂ ಇದಕ್ಕೆ ಹೊರತಲ್ಲ ಎನ್ನುವುದು ಬಹಳ ಬೇಗ ಸಾಬೀತಾಗಿದೆ.ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯ ಜನತಾ ಪಕ್ಷದ ಮೂಲಸಿದ್ಧಾಂತವನ್ನು ತುರುಕುವ ಒರಟೊರಟು ಆತುರ ಅದೆಷ್ಟು ಸಚಿವರ ಮಾತುಗಳಲ್ಲಿ, ಪಕ್ಷದ ಪರಿವಾರದವರ ಘೋಷಣೆಗಳಲ್ಲಿ ಹೊರಬಿದ್ದು ರಾದ್ಧಾಂತವಾದದ್ದು ಎಲ್ಲರಿಗೂ ತಿಳಿದಿದೆ. ದೇಶದ ಶಿಕ್ಷಣ ಮತ್ತು ಸಂಸ್ಕೃತಿ ವಲಯದ ಉನ್ನತ ಸಂಸ್ಥೆಗಳ ಉನ್ನತ ಸ್ಥಾನಗಳಲ್ಲಿ ‘ತಮ್ಮವರನ್ನು’ ಕೂಡಿಸಲು ಸರ್ಕಾರ ತೋರಿದ ತರಾತುರಿಯ ಹಿಂದೆ ಏನೇನು ಉದ್ದೇಶಗಳು ಇದ್ದವು ಎಂಬುದನ್ನು ವಿವರಿಸಬೇಕಿಲ್ಲ. ಪಕ್ಷ ಮತ್ತು ಅದರ ಮೂಲ ಸಂಘಟನೆ ಇಂಥ ಯಾವ ಅವಕಾಶವನ್ನೂ ಬಿಟ್ಟುಕೊಡುವುದಿಲ್ಲ. ಕಳೆದ ವಾರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ’ ನಡೆಸುವ ಸುಮಾರು 13,000 ಶಾಲೆಗಳ ಪೈಕಿ, ಪ್ರೌಢಶಾಲೆಗಳನ್ನು ನೋಡಿಕೊಳ್ಳುವ ಪ್ರಾಂಶುಪಾಲರ ಸಮ್ಮೇಳನ ನಡೆಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾನವ ಸಂಪನ್ಮೂಲ ಇಲಾಖೆ ಸಚಿವರಾದ ಸ್ಮೃತಿ ಇರಾನಿ ಇದರಲ್ಲಿ ಭಾಗವಹಿಸಿ ಭಾಷಣ ಮಾಡಿದರು. ‘ತಂತ್ರಜ್ಞಾನಕ್ಕೆ ಆದ್ಯತೆ ಕೊಡಿ, ಮುಂದೆ ಹೋಗಲು ಅದು ಅತ್ಯಗತ್ಯ’ ಎಂದು ಕರೆ ನೀಡಿದ ಪ್ರಧಾನಿ, ಹೆಚ್ಚಿನದೇನನ್ನೂ ಪ್ರಸ್ತಾಪಿಸಲಿಲ್ಲ. ಆದರೆ ಈಗಾಗಲೇ ಶಾಲೆಯಿಂದ ವಿಶ್ವವಿದ್ಯಾಲಯದವರೆಗೆ ಪಠ್ಯಕ್ರಮ ಬದಲಾವಣೆಗೆ ಆದ್ಯತೆ ದೊರೆತಿದೆ ಎನ್ನುವುದರಲ್ಲಿ ಸಂಶಯವಿಲ್ಲ.‘ಪ್ರಾಂಶುಪಾಲರೆಂದರೆ ಬರೀ ಶಿಕ್ಷಣ ಕೊಡುವವರು ಮಾತ್ರ ಅಲ್ಲ, ಪ್ರಸಕ್ತ ಸಾಮಾಜಿಕ ವ್ಯವಸ್ಥೆಯಲ್ಲೂ ಅವರಿಗೆ ಪ್ರಾಮುಖ್ಯವಿದೆ. ರಾಜಕೀಯ, ಸಂಸ್ಕೃತಿ, ಆರ್ಥಿಕತೆಯಲ್ಲಿ ಅವರು ಮುಖ್ಯ ಪಾತ್ರ ವಹಿಸುತ್ತಾರೆ’ ಎಂದು ಸಮ್ಮೇಳನದ ಸಂಘಟಕರು ಮೊದಲೇ ಸಾರಿದ್ದರು. ಅಲ್ಲದೆ, ಮಾನವ ಸಂಪನ್ಮೂಲ ಇಲಾಖೆ ತರಲು ಉದ್ದೇಶಿಸಿರುವ ನೂತನ ಶಿಕ್ಷಣ ನೀತಿಗೆ ಆರ್‌ಎಸ್‌ಎಸ್ ತನ್ನ ಹಲವಾರು ಸಲಹೆಗಳನ್ನು ಈಗಾಗಲೇ ಸೂಚಿಸಿದೆ ಎಂದೂ ಹೇಳಿದರು. ಒಟ್ಟಿನಲ್ಲಿ ಆಡುವುದು ಮತ್ತು ಮಾಡುವುದು ಎರಡೂ ನಡೆಯುತ್ತಿದೆ.  ಈ ಹಿನ್ನೆಲೆಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)- ಮದ್ರಾಸ್, ಐಐಟಿ- ದೆಹಲಿ, ಫಿಲಂ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ)- ಪುಣೆ, ಹೈದರಾಬಾದ್ ವಿಶ್ವವಿದ್ಯಾಲಯ ಮತ್ತು ಇದೀಗ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಇವೆಲ್ಲವೂ ಒಂದಲ್ಲಾ ಒಂದು ಕಾರಣದಿಂದ ಕೊತಕೊತ ಕುದಿವ ತಪ್ಪಲೆಗಳಾಗಿರುವುದು ಏಕೆ ಎನ್ನುವುದು ಗೊತ್ತಾಗುತ್ತಿದೆ. ಇವುಗಳಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳೂ ಧಾವಂತ ಪಡುತ್ತಿರುವುದೂ ತಿಳಿಯುತ್ತಿದೆ.ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳಿಂದ ಎಂಥ ಪಾಠಗಳು ಹೊರಹೊಮ್ಮುತ್ತಿವೆ, ವಿಶ್ವವಿದ್ಯಾಲಯಗಳು ನಿಜವಾಗಿ ಮುಂದಿನ ರಾಜಕಾರಣಿಗಳನ್ನು ರೂಪಿಸುವ ನರ್ಸರಿ ಶಾಲೆಗಳಾಗುತ್ತಿವೆ ಎನ್ನುವುದೆಲ್ಲ ಅರ್ಥವಾಗುತ್ತಿದೆ. ಇವುಗಳಲ್ಲಿ ಜೆಎನ್‌ಯು ಬೆಳವಣಿಗೆ ನಮ್ಮೆದುರಿಗಿಡುವ ಕೆಲವು ಪ್ರಶ್ನೆಗಳು ಮತ್ತು ಅದಕ್ಕೆ ಬರುತ್ತಿರುವ ಉತ್ತರಗಳು ಮಾತ್ರ ವಿಶ್ವವಿದ್ಯಾಲಯಗಳ ಶಿಕ್ಷಣವನ್ನೇ ಪರೀಕ್ಷೆಗೆ ದೂಡುವಂತಿವೆ.ಕಾಲೇಜು ಹಂತದ ವಿದ್ಯಾರ್ಥಿ ದೆಸೆಯಲ್ಲಿ ಒಂದು ತಂಗಾಳಿ ಮತ್ತು ಒಂದು ಬಿರುಗಾಳಿಗೆ ಒಡ್ಡಿಕೊಳ್ಳದಿದ್ದರೆ ಅದು ವಿದ್ಯಾರ್ಥಿ ಜೀವನವೇ ಅಲ್ಲ ಎನ್ನುವುದು ಬಹುಶಃ ಎಲ್ಲರ ಅನುಭವ. ಪ್ರೀತಿಪ್ರೇಮವೆಂಬ ತಂಗಾಳಿ ಮತ್ತು ಯಾವುದೋ ಒಂದು ಬಗೆಯ ‘ವೈಚಾರಿಕತೆ’ಯ ಬಿರುಗಾಳಿ ವಿದ್ಯಾರ್ಥಿ ಜೀವನವನ್ನು ಆವರಿಸುವುದು ಸರ್ವೇಸಾಮಾನ್ಯ. ಇದರಲ್ಲಿ ಯಾವ ತಪ್ಪೂ ಇಲ್ಲ. ಬಹುನೆಲೆಯ ಚಿಂತನೆಗಳಿರುವ, ಹಲವು ರಾಜಕೀಯ ಸಿದ್ಧಾಂತಗಳಿರುವ ದೇಶದಲ್ಲಿ, ವಿದ್ಯಾರ್ಥಿಗಳು ತಮಗೆ ಸರಿಯೆನಿಸುವ ವೈಚಾರಿಕ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ ಅಥವಾ ಹಿರಿಯರು ತಮ್ಮ ತಲೆಗೆ ತುರುಕಿದ್ದನ್ನು ಮರುಮಾತಾಡದೆ ಒಪ್ಪಿಕೊಳ್ಳುತ್ತಾರೆ.ಅಂಥ ಚಿಂತನೆಯನ್ನು ಪ್ರತಿನಿಧಿಸುವ ವಿದ್ಯಾರ್ಥಿ ಸಂಘಟನೆಗಳ ಜೊತೆ ಗುರುತಿಸಿಕೊಂಡು ಅವುಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರಲ್ಲದೆ, ನೇರವಾಗಿ ರಾಜಕೀಯ ಪಕ್ಷಗಳ ಜೊತೆಗೂ ಗುರುತಿಸಿಕೊಳ್ಳುತ್ತಾರೆ. ಅವುಗಳ ಚಟುವಟಿಕೆ ಕಾನೂನು ವ್ಯಾಪ್ತಿ ಮೀರದಿದ್ದರೆ ಮಾತ್ರ, ವಿದ್ಯಾರ್ಥಿಗಳು ಅಂಥ ಚಟುವಟಿಕೆಗಳಲ್ಲಿ ಭಾಗವಹಿಸುವುದರಲ್ಲಿ ಯಾವ ತಪ್ಪೂ ಇಲ್ಲ. ವಿದ್ಯಾರ್ಥಿಗಳು ಬರೀ ಓದುಬರಹಕ್ಕೆ ಮಾತ್ರ ಗಮನ ಕೊಡಬೇಕು, ಬೇರೆ ವಿಚಾರಗಳತ್ತ ಕಣ್ಣು ಹಾಯಿಸಬಾರದು ಎಂದು ಹೇಳಲು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಜೆಎನ್‌ಯು ಮೊದಲಿನಿಂದಲೂ ಎಡಪಂಥೀಯ ವಿಚಾರಧಾರೆಯ ತೊಟ್ಟಿಲಾಗಿದೆ, ಅದರಿಂದ ಪ್ರಭಾವಿತರಾಗಿ ವಿದ್ಯಾರ್ಥಿಗಳು ಚಳವಳಿ ನಡೆಸುತ್ತಾರೆ ಎಂದೆಲ್ಲ ಗುರುತಿಸುವುದಾದರೆ- ನಿಜವಾಗಿ ಒಂದು ವಿಶ್ವವಿದ್ಯಾಲಯ ಹಾಗಿರುವುದರಲ್ಲಿ ತಪ್ಪೇನಿದೆ? ಆದರೆ ಜೆಎನ್‌ಯು ಆವರಣದಲ್ಲಿ ಫೆ. 9ರ ಮಂಗಳವಾರ ಏರ್ಪಟ್ಟಿದ್ದ ಸಭೆ ಮತ್ತು ಅದರ ನಂತರದ ಘಟನಾವಳಿಗಳ ವಿವರಗಳನ್ನು ಗಮನಿಸಿದರೆ ಅದನ್ನು ಕೇವಲ ಒಂದು ‘ವಿದ್ಯಾರ್ಥಿ ಚಟುವಟಿಕೆ’ ಎಂದು ಭಾವಿಸಲು ಆಗುವುದೇ ಇಲ್ಲ. ಇಂಥದ್ದೊಂದು ಸಭೆಯ ಏರ್ಪಾಡಿನ ಹಿಂದಿರುವ ಮುಖ್ಯ ಉದ್ದೇಶ, ವೇದಿಕೆಯಲ್ಲಿ ಕೇಳಿಬಂದ ಮಾತುಗಳು, ಸಭೆಯಲ್ಲಿ ಕೂಗಲಾದ ಘೋಷಣೆಗಳು ಇವೆಲ್ಲವೂ ವಿಶ್ವವಿದ್ಯಾಲಯದ ಆವರಣಕ್ಕೆ ಪೊಲೀಸರ ಪ್ರವೇಶಕ್ಕೆ ದಾರಿ ಮಾಡುವುದು ಅನಿವಾರ್ಯ. ಹಾಗಾಗಿ, ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಇನ್ನೂ ಕೆಲವು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.ಕಾಂಗ್ರೆಸ್, ಎಡಪಕ್ಷಗಳು, ಜೆಡಿಯು ಎಲ್ಲವೂ  ಕ್ಷಣಮಾತ್ರದಲ್ಲಿ ಇದನ್ನು ಕೈಗೆತ್ತಿಕೊಂಡದ್ದರಿಂದ ಅವುಗಳ ಉನ್ನತ ನಾಯಕರು ವಿಶ್ವವಿದ್ಯಾಲಯದ ಆವರಣದಲ್ಲೇ ರಾಜಕೀಯ ಖಂಡನಾ ಸಭೆಗಳನ್ನು ನಡೆಸಿದ್ದಾರೆ. ಜೆಎನ್‌ಯು ವಿದ್ಯಾರ್ಥಿಗಳಿಗೆ ದೇಶದ ನಲವತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ದೇಶದ ಎಲ್ಲ ನಗರಗಳಲ್ಲಿ, ಅಕಾಡೆಮಿಕ್ ವಲಯಗಳಲ್ಲಿ, ಕನ್ಹಯ್ಯಾ ಮತ್ತು ಇತರರ ಬಂಧನಕ್ಕೆ ವಿರೋಧ, ಬಿಡುಗಡೆಗೆ ಒತ್ತಾಯ ಮಾಡಲಾಗುತ್ತಿದೆ. ಪ್ರಸ್ತುತ ದೇಶದ ದೊಡ್ಡ ರಾಜಕೀಯ ವಿವಾದವೂ ಆಗಿಬಿಟ್ಟಿರುವ ಇದು ಜಗತ್ತಿನ ಗಮನವನ್ನೂ ಸೆಳೆಯುತ್ತಿದೆ. ಆದರೆ ಸಭೆಯ ಮೂಲ ಉದ್ದೇಶಗಳನ್ನು ಮೀರಿ ಘಟನೆಯ ಪರಿಣಾಮ ರಭಸವಾಗಿ ಬೆಳೆಯುತ್ತಿದೆ.ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಮೇಲೆ ಶೈಕ್ಷಣಿಕ ವಲಯವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸರ್ವಪ್ರಯತ್ನ ಮಾಡುತ್ತಿದೆ, ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ತನಗಾಗದ ರಾಜಕೀಯ ಚಟುವಟಿಕೆಗಳ ದಮನಕ್ಕೆ ತನ್ನ ಅಧಿಕಾರವನ್ನು ಬಳಸುತ್ತಿದೆ, ಭಾರತೀಯತೆಯ ಹೆಸರಿನಲ್ಲಿ ಶಿಕ್ಷಣದ ‘ಕೇಸರೀಕರಣ’ವೇ ಅದರ ಗುರಿಯಾಗಿದೆ- ಈ ಎಲ್ಲ ಆತಂಕದ ಮಾತುಗಳೂ ಸತ್ಯಸ್ಯ ಸತ್ಯ. ಈಗಾಗಲೇ ದೇಶದ ಹಲವು ಸಂಸ್ಥೆಗಳಲ್ಲಿ ಕಾಣುತ್ತಿರುವ ಬೆಳವಣಿಗೆಗಳು ಈ ಆತಂಕ ನಿಜವೆಂದು ಕೂಗಿಕೂಗಿ ಹೇಳುತ್ತಿವೆ.ಜೆಎನ್‌ಯು ವಿದ್ಯಾರ್ಥಿ ಸಂಘವನ್ನು ತೆಕ್ಕೆಗೆ ತೆಗೆದುಕೊಳ್ಳುವುದು ಬಿಜೆಪಿ, ಎಬಿವಿಪಿ ಪರಿವಾರಕ್ಕೆ ಪ್ರತಿಷ್ಠೆಯ ಪ್ರಶ್ನೆ ಮತ್ತು ಕಷ್ಟದ ಸವಾಲು ಎನ್ನುವುದೂ ಖಂಡಿತಾ ನಿಜ. ಆದರೆ ಈ ಎಲ್ಲ ಸತ್ಯಗಳು, ಜೆಎನ್‌ಯು ಘಟನೆಯ ಹಿಂದಿನ ಉದ್ದೇಶಗಳನ್ನು ಮರೆಮಾಚಬಾರದು. ವಿಶ್ವವಿದ್ಯಾಲಯದ ಆವರಣಕ್ಕೆ ನುಗ್ಗಲು ಅವಕಾಶಕ್ಕೆ ಕಾಯುತ್ತಿದ್ದ ಕೇಂದ್ರ ಸರ್ಕಾರಕ್ಕೆ ಅದನ್ನು ಉದಾರವಾಗಿ ಕೊಟ್ಟ ಒಂದು ಚಟುವಟಿಕೆಯನ್ನು ಕೇವಲ ಮಕ್ಕಳಾಟವೆಂದು ಯಾರೂ ಭಾವಿಸಲಾಗದು. ಜೆಎನ್‌ಯು ಆವರಣದಲ್ಲಿ ಫೆ. 9ರಂದು ನಡೆದ ವಿದ್ಯಾರ್ಥಿ ಸಂಘದ ಕಾರ್ಯಕ್ರಮ, ದೇಶದ ಸಂಸತ್ ಭವನದ ಮೇಲೆ ನಡೆದ ದಾಳಿ ಪ್ರಕರಣದ ಪ್ರಮುಖ ಆರೋಪಿ ಅಫ್ಜಲ್ ಗುರು ಸ್ಮರಣಾ ಕಾರ್ಯಕ್ರಮವಾಗಿತ್ತು ಎನ್ನುವುದೇ ಇಲ್ಲಿ ಬಹಳ ಮುಖ್ಯ. ಇದೇ ಈ ವಿದ್ಯಾರ್ಥಿ ಚಟುವಟಿಕೆಯ ಮೂಲ ಪಾಠ- ಮುಂದಿನ ಬೆಳವಣಿಗೆಯೆಲ್ಲಾ ಬರೀ ಅಡಿಟಿಪ್ಪಣಿ. ಭಾರತ ಸ್ವತಂತ್ರಗೊಂಡ ನಂತರ ನಡೆದಿರುವ ಅನೇಕ ಭಯೋತ್ಪಾದನಾ ಕೃತ್ಯಗಳಲ್ಲಿ, ಸಂಸತ್ ಭವನದ ಮೇಲಿನ ದಾಳಿಯಂತೂ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೇ ನಡೆದ ದಾಳಿ ಎಂಬ ರೂಪಕವಾಗಿದೆ.ಅಫ್ಜಲ್ ಗುರು ಈ ಪ್ರಕರಣದ ಪ್ರಮುಖ ರೂವಾರಿ ಎಂದು ನಿರ್ಧರಿಸಿದ್ದು, ಅದಕ್ಕಾಗಿ ಗಲ್ಲು ಶಿಕ್ಷೆ ವಿಧಿಸಿದ್ದು ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯುಚ್ಚ ಅಂಗವಾದ ಸುಪ್ರೀಂ ಕೋರ್ಟ್. ಅಫ್ಜಲ್ ಗುರುವನ್ನು ನೇಣುಗಂಬಕ್ಕೇರಿಸಿದ್ದು ಯಾವುದೇ ಸರ್ಕಾರ ಅಥವಾ ರಾಜಕೀಯ ಪಕ್ಷ ಅಲ್ಲ. ಹಾಗೆಯೇ ನೇಣುಶಿಕ್ಷೆಗೊಳಗಾದ ಮಕ್ಬೂಲ್ ಬಟ್ ನೇತೃತ್ವದ ‘ಜಮ್ಮು ಕಾಶ್ಮೀರ ವಿಮೋಚನಾ ರಂಗ’ದ ಮುಖ್ಯ ಉದ್ದೇಶ, ಜಮ್ಮು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ ಸ್ವತಂತ್ರ ದೇಶವನ್ನಾಗಿ ಮಾಡುವುದು.ಇವರದು ಎಂಥ ‘ಬಲಿದಾನ’, ಇವರು ಎಂಥ ‘ಹುತಾತ್ಮ’ರು ಎಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಒಂದು ವಿದ್ಯಾರ್ಥಿ ಸಂಘಟನೆ ವಿಶ್ವವಿದ್ಯಾಲಯದ ಆವರಣದಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸಿದ್ದನ್ನು ಯಾರಾದರೂ ಹೇಗೆ ಒಪ್ಪಬೇಕು? ಇಂಥವರನ್ನು ನೆನಪಿಸಿಕೊಳ್ಳುವ ಸಭೆಯ ಸಂಯೋಜನೆಯೇ ಅಂಥ ಯೋಚನೆಯೇ ಯಾವ ದೃಷ್ಟಿಯಲ್ಲಿ ಸರಿ ಎಂದು ಸಮರ್ಥಿಸಿಕೊಳ್ಳಬೇಕು? ಈ ‘ಹುತಾತ್ಮ’ರಿಗೆ ಜಯಕಾರ, ಅವರನ್ನು ‘ಹತ್ಯೆ’ ಮಾಡಿದ ನ್ಯಾಯಾಂಗಕ್ಕೆ ಹಿಡಿಶಾಪ, ಭಾರತ ದೇಶಕ್ಕೆ ಧಿಕ್ಕಾರ ಇವುಗಳೆಲ್ಲ ವಿದ್ಯಾರ್ಥಿ ಸಭೆಯಲ್ಲಿ ಕೇಳಿಬಂದರೆ ಯಾವ ಪಕ್ಷದ ಸರ್ಕಾರವಾದರೂ ಆಗಲಿ ಏನು ಮಾಡಬೇಕು? ಸಭೆಯಲ್ಲಿ ಇಂಥ ಘೋಷಣೆಗಳು, ಕರಪತ್ರಗಳು ಇದ್ದರೂ ಅವುಗಳನ್ನು ಬೇಕೆಂದೇ ತೇಲಿಸಿ ಖಂಡಿಸಿ, ಬಂಧನದಂಥ ಕಾನೂನು ಕ್ರಮಗಳನ್ನು ಮಾತ್ರ ಹೈಲೈಟ್ ಮಾಡಿ ವಿರೋಧಿಸುತ್ತ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದ ವಿರೋಧ ಪಕ್ಷಗಳಿಗೆ ಏನು ಹೆಸರಿಡಬೇಕು?ಇಂಥ ಸಭೆಗಳ ಹಿಂದೆ ಯಾರ್‍ಯಾರು ಇದ್ದಾರೆ, ಏನೇನು ಉದ್ದೇಶಗಳಿವೆ ಎನ್ನುವುದನ್ನು ಯಾರಾದರೂ ಏಕೆ ಮರೆಮಾಚಬೇಕು? ‘ಈ ಸಭೆ ಮಾಡಿದ ವಿದ್ಯಾರ್ಥಿ ನಾಯಕರನ್ನು ಬಿಡುಗಡೆ ಮಾಡದಿದ್ದರೆ ಕಾಶ್ಮೀರ ಕಣಿವೆಯಲ್ಲಿ ಸರಿಯಾಗಿ ಪ್ರತೀಕಾರ ತೆಗೆದುಕೊಳ್ಳುತ್ತೇವೆ’ ಎಂಬ ಹೇಳಿಕೆಯನ್ನು ಹೇಗೆ ವ್ಯಾಖ್ಯಾನಿಸಬೇಕು? ಬಂಧನಗಳು ಸರಿಯೋ ತಪ್ಪೋ ಅವರು ನಿರಪರಾಧಿಗಳೋ ಅಲ್ಲವೋ ಎಂಬುದನ್ನೆಲ್ಲ ನಿರ್ಧರಿಸಲು ನ್ಯಾಯಾಲಯಗಳು ಇರುವುದನ್ನು ಪ್ರತಿಪಕ್ಷಗಳು ಏಕೆ ಮರೆಯಬೇಕು? ಕಾಶ್ಮೀರದ ಸಮಸ್ಯೆ ಬಗೆಹರಿಸಲು ನಿಜವಾಗಿ ಬೇಕಾದದ್ದು ಖಚಿತ ರಾಜಕೀಯ ನಿರ್ಧಾರ ಎನ್ನುವುದನ್ನು ಹೇಗೆ ಅರ್ಥಮಾಡಿಸಬೇಕು?ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಚಟುವಟಿಕೆ ದೇಶಕ್ಕಿಂತ ದೊಡ್ಡದು ಎನ್ನುವುದನ್ನು ಹೇಗೆ ಒಪ್ಪಬೇಕು? ದೇಶಕ್ಕೆ ಧಿಕ್ಕಾರ ಕೂಗುವುದೂ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ, ಅದು ಭಿನ್ನ ವಿಚಾರದ ಅಭಿವ್ಯಕ್ತಿ, ಅದು ಅವರ ಪ್ರಜಾಸತ್ತಾತ್ಮಕ ನಿಲುವು ಎನ್ನುವ ವಾದಗಳನ್ನು ಹೇಗೆ ನಂಬಿ ಒಪ್ಪಬೇಕು? ಕೇಂದ್ರ ಸರ್ಕಾರ, ದೆಹಲಿ ಸರ್ಕಾರ, ಎಎಪಿ, ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ಇತ್ಯಾದಿಗಳು ಬಿಡಿ, ನಮ್ಮ ನಿಮ್ಮಂಥ ಸಾಮಾನ್ಯ ಪ್ರಜೆಗಳು ಕೂಡ ಇಂಥವನ್ನೆಲ್ಲ ಏಕೆ ಮತ್ತು ಹೇಗೆ ಒಪ್ಪಬೇಕು?ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಯು ದೇಶಕ್ಕೆ, ಕೇಂದ್ರ ಸರ್ಕಾರಕ್ಕೆ, ರಾಜಕೀಯ ಪಕ್ಷಗಳಿಗೆ ಕೊಟ್ಟಿರುವ ಈ ಪ್ರಶ್ನೆಪತ್ರಿಕೆ ಬಹಳ ಉದ್ದವಿದೆ. ಇವು ಯಾವುದಕ್ಕೂ ಸಿದ್ಧ ಉತ್ತರಗಳಿಲ್ಲ. ಜೆಎನ್‌ಯು ಪ್ರಕರಣ ಕಲಿಸುವ ಪಾಠಗಳೂ ಬಹಳ ಇವೆ. ಎಡಬಲ ಸಿದ್ಧಾಂತಗಳ ಸಂಘರ್ಷವನ್ನು ಮೀರಿದ ವಿಶ್ಲೇಷಣೆಯನ್ನು ಇದು ಬಯಸುತ್ತದೆ. ಕುಸಿದು ಬಿದ್ದಿರುವ ಪ್ರತಿಪಕ್ಷಗಳು ಎದ್ದುನಿಲ್ಲಲು ಗಟ್ಟಿ ಊರುಗೋಲುಗಳನ್ನು ಆಯ್ದುಕೊಳ್ಳಲಿ ಎಂದು ಜನಸಮೂಹ ಆಶಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry