ಮಂಗಳವಾರ, ಮೇ 11, 2021
24 °C

ವಿಶ್ವದ ದೊಡ್ಡಣ್ಣನಿಗೆ ಬ್ರಿಕ್ಸ್ ದೇಶಗಳ ಸವಾಲು...

ಡಿ. ಮರಳೀಧರ Updated:

ಅಕ್ಷರ ಗಾತ್ರ : | |

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡ `ಬ್ರಿಕ್ಸ್~ ಗುಂಪು, ಹೊಸ  ಆರ್ಥಿಕ ವ್ಯವಸ್ಥೆಯ ರೂಪದಲ್ಲಿ ವಿಶ್ವದ ಗಮನ ಸೆಳೆಯುತ್ತಿದೆ.ವಿಶ್ವದ ಅತಿದೊಡ್ಡ ಹಣಕಾಸು ಸೇವಾ ಸಂಸ್ಥೆ ಗೋಲ್ಡ್‌ಮನ್ಸ್ ಸ್ಯಾಕ್ಸ್ ಸಿದ್ಧಪಡಿಸಿರುವ ವರದಿಯಲ್ಲಿ,  ಈ ಸಮೂಹವು ಜಾಗತಿಕ ಮಹತ್ವ ಪಡೆಯುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.ದಕ್ಷಿಣ ಆಫ್ರಿಕಾ ದೇಶವು ಈ ಗುಂಪಿಗೆ ಇತ್ತೀಚೆಗೆ ಹೊಸದಾಗಿ ಸೇರ್ಪಡೆ ಆಗಿದ್ದು,  ಪ್ರವರ್ಧಮಾನಕ್ಕೆ ಬರುತ್ತಿರುವ ಈ ಐದೂ ದೇಶಗಳು ಪಾಶ್ಚಿಮಾತ್ಯ ದೇಶಗಳ ಆರ್ಥಿಕ ಪ್ರಭುತ್ವಕ್ಕೆ ಸವಾಲೊಡ್ಡುವ ರೀತಿಯಲ್ಲಿ ಬೆಳೆಯುತ್ತಿವೆ.ದ್ವಿತೀಯ ಮಹಾಯುದ್ಧದ ನಂತರ, ಪಾಶ್ಚಿಮಾತ್ಯ ದೇಶಗಳು ವಿಶ್ವದ `ದೊಡ್ಡಣ್ಣ~ ಅಮೆರಿಕದ ನೇತೃತ್ವದಲ್ಲಿ ಇಡೀ ವಿಶ್ವದ ಅರ್ಥ ವ್ಯವಸ್ಥೆ ನಿಯಂತ್ರಿಸುತ್ತಿವೆ. ಆರ್ಥಿಕವಾಗಿ ತುಂಬ ಬಲಿಷ್ಠವಾಗಿರುವ ಈ ದೇಶಗಳು ವಿಶ್ವದ ಅರ್ಥವ್ಯವಸ್ಥೆಯನ್ನೇ ತಮ್ಮ ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿವೆ.

 

ಜತೆಗೆ ಜಾಗತಿಕ ಮಟ್ಟದ ಪ್ರತಿಯೊಂದು ವಿದ್ಯಮಾನಗಳಲ್ಲಿ ತಮ್ಮದೇ ಮಾತು ನಡೆಯಬೇಕು ಎಂದೂ ಹಟ ಹಿಡಿಯುತ್ತಿವೆ. ಅನೇಕ ದೇಶಗಳ ಜುಟ್ಟು, ಈ ಕೆಲವೇ ಕೆಲ ದೇಶಗಳ ಕೈಯಲ್ಲಿ ಇದೆ. ವಿಶ್ವ ಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವ್ಯವಹಾರ ಮತ್ತು ನಿರ್ಧಾರಗಳಲ್ಲಿ ಇವುಗಳ ಮಾತೇ ಅಂತಿಮವಾಗಿದೆ.2011ರ ನಂತರ ವಿಶ್ವದ ಆರ್ಥಿಕ ಸಮೀಕರಣದಲ್ಲಿ ನಿಧಾನವಾಗಿ ಹೊಸ ಪರಿವರ್ತನೆ ಕಂಡುಬರುತ್ತಿರುವುದಕ್ಕೆ ನಾವೆಲ್ಲ ಸಾಕ್ಷಿಯಾಗುತ್ತಿದ್ದೇವೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ `ಬ್ರಿಕ್ಸ್~ ದೇಶಗಳ ಶೃಂಗಸಭೆಯ ನಡಾವಳಿಗಳನ್ನು ಸೂಕ್ಷ್ಮವಾಗಿ ಪರಾಮರ್ಶಿಸಿದರೆ, ಹೊಸ ಬದಲಾವಣೆಗೆ ಶ್ರೀಕಾರ ಹಾಕಿರುವುದು ಮತ್ತು ಜಾಗತಿಕ ವಿದ್ಯಮಾನಗಳಲ್ಲಿ ಪ್ರಭಾವ ಬೀರುವ ಹೊಸ ಗುಂಪು ರೂಪುಗೊಳ್ಳುತ್ತಿರುವುದು ನಮ್ಮೆಲ್ಲರ ಅನುಭವಕ್ಕೆ ಬರುತ್ತಿದೆ.ಈ ಐದು ದೇಶಗಳ ಅರ್ಥ ವ್ಯವಸ್ಥೆಯು ಗಮನಾರ್ಹ ಪ್ರಮಾಣದಲ್ಲಿ  ವಿಸ್ತರಣೆಗೊಳ್ಳುತ್ತಿರುವುದರಿಂದಲೂ ವಿಶ್ವದ ಗಮನ ಸೆಳೆಯುತ್ತಿವೆ. ಜಾಗತಿಕ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಈ ಐದೂ ದೇಶಗಳ ಸಾಮಾನ್ಯ ಕೊಡುಗೆ ಶೇ 22ರಷ್ಟಿದ್ದರೆ, ಸರ್ಕಾರಿ ಖಾಸಗಿ ಪಾಲುದಾರಿಕೆಯಡಿಯ (ಪಿಪಿಪಿ) ಕೊಡುಗೆ ಶೇ 35ರಷ್ಟಿದೆ.ಈ ದೇಶಗಳ ಒಟ್ಟು ಜನಸಂಖ್ಯೆ ವಿಶ್ವದ ಜನಸಂಖ್ಯೆಯಲ್ಲಿ ಶೇ 43ರಷ್ಟಿದೆ. ಎಲ್ಲ ಆರು ಖಂಡಗಳಲ್ಲಿ ವ್ಯಾಪಿಸಿರುವುದು ಈ ಗುಂಪಿನ ಇನ್ನೊಂದು ವೈಶಿಷ್ಟ್ಯವಾಗಿದೆ. ಹೀಗಾಗಿ ಈ ಗುಂಪು ಖಂಡಾಂತರದ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡಂತಾಗಿದೆ. ಇತರ ಇಂತಹ ಗುಂಪುಗಳು ಈ ವಿಶೇಷ ವ್ಯಾಪಕತೆಯ ಸ್ವರೂಪ  ಹೊಂದಿಲ್ಲ.2040ರ ಹೊತ್ತಿಗೆ ಐದು ದೇಶಗಳ ಪೈಕಿ ನಾಲ್ಕು ದೇಶಗಳು ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ), ವಿಶ್ವದ 6 ಮುಂಚೂಣಿ ದೇಶಗಳಲ್ಲಿ ಸ್ಥಾನ ಗಿಟ್ಟಿಸಿರುತ್ತವೆ ಎಂದೂ `ಗೋಲ್ಡ್‌ಮನ್~ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯದ ಎಣಿಕೆಗಳ ಪ್ರಕಾರ, 2040ಕ್ಕಿಂತ ಮೊದಲೇ ಈ ದೇಶಗಳು ಆರ್ಥಿಕವಾಗಿ ಸಾಕಷ್ಟು ಬಲಿಷ್ಠವಾಗಿ ಬೆಳೆಯುವ ನಿರೀಕ್ಷೆ ಇದೆ.ರಷ್ಯಾದ ಎಕಟೇರಿಯನ್‌ಬರ್ಗ್‌ನಲ್ಲಿ 2009ರಲ್ಲಿ `ಬ್ರಿಕ್ಸ್~ ದೇಶಗಳ ಮೊದಲ ಶೃಂಗಸಭೆ ನಡೆದಿತ್ತು. ಸಮಾನ, ಪ್ರಜಾಸತ್ತಾತ್ಮಕ ಮತ್ತು ಬಹು ಉದ್ದೇಶದ ಜಾಗತಿಕ ವ್ಯವಸ್ಥೆಯಾಗಿ ಈ ಗುಂಪು ರೂಪು ತಳೆದು, ಬೆಳೆಯಬೇಕು ಎಂದು ಮೊದಲ ಸಭೆಯಲ್ಲಿಯೇ ನಿರ್ಧರಿಸಲಾಗಿತ್ತು.ಅಲ್ಲಿಂದಾಚೆಗೆ ಐದೂ ದೇಶಗಳ ಮುಖ್ಯಸ್ಥರು ನಿಯಮಿತವಾಗಿ ಭೇಟಿಯಾಗಿ, ಎಲ್ಲ ಐದೂ ದೇಶಗಳೂ ಒಪ್ಪಿಕೊಂಡ ತತ್ವಗಳನ್ನು ಪಾಲಿಸಲು ಮತ್ತು ಮುಂದಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ. ಇದೇ ಕಾರಣಕ್ಕೆ ಇತ್ತೀಚೆಗೆ ನವದೆಹಲಿಯಲ್ಲಿ ಗುಂಪಿನ ಸದಸ್ಯ ದೇಶಗಳ ಪ್ರಮುಖರು ಒಂದೆಡೆ ಸೇರಿ ದ್ವಿಪಕ್ಷೀಯ ಮತ್ತು ಜಾಗತಿಕ ವಿದ್ಯಮಾನಗಳನ್ನು ಪರಾಮರ್ಶಿಸಿದರು.ಶೃಂಗಸಭೆಯಲ್ಲಿ ಚರ್ಚೆಗೆ ಬಂದ ಹಲವಾರು ರಾಜಕೀಯ - ಆರ್ಥಿಕ ವಿಚಾರ ಮತ್ತು ಕ್ರಮಗಳ ಪೈಕಿ, ನಾನು ಇಲ್ಲಿ ಕೇವಲ ಆರ್ಥಿಕ ವಿಚಾರಗಳನ್ನಷ್ಟೇ ಚರ್ಚಿಸಲು ಬಯಸುತ್ತೇನೆ. ಸಭೆಯಲ್ಲಿ ಚರ್ಚಿಸಿ ತೆಗೆದುಕೊಂಡ ನಿರ್ಧಾರಗಳು ಜಾಗತಿಕ ಅರ್ಥ ವ್ಯವಸ್ಥೆ ಮತ್ತು ಪ್ರತಿಯೊಂದು ಸದಸ್ಯ ದೇಶಗಳ ಆರ್ಥಿಕತೆ ಮೇಲೆ ದೂರಗಾಮಿ ಪ್ರಭಾವ ಬೀರಲಿವೆ.`ಬ್ರಿಕ್ಸ್ ಬ್ಯಾಂಕ್~ ಹೆಸರಿನ ಅಂತರರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ್ ಸ್ಥಾಪಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಬ್ಯಾಂಕ್, ತನ್ನ ಸದಸ್ಯ ದೇಶಗಳ ಹಣಕಾಸು ಅಗತ್ಯಗಳನ್ನು ಈಡೇರಿಸಲು ನೆರವಾಗಬೇಕು ಎಂದು ಆಶಿಸಲಾಗಿದೆ. ಈ ಬ್ಯಾಂಕ್ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ. ಇದಕ್ಕೆ ಚೀನಾ ಸಾಕಷ್ಟು ಪ್ರಮಾಣದಲ್ಲಿ ವಿದೇಶಿ ವಿನಿಮಯ ಮೀಸಲು ಹೊಂದಿರುವುದರಿಂದ ಇಂತಹ ನಿರೀಕ್ಷೆ ಮೂಡಿದೆ.ಇಂತಹ ಆಲೋಚನೆ ಕಾರ್ಯರೂಪಕ್ಕೆ ಬರಲು ಕೆಲವು ಸಮಯ ಬೇಕಾಗುತ್ತದೆ ಎಂದರೂ, ಒಟ್ಟಾರೆ ಈ ಆಲೋಚನೆಯೇ ಸಾಕಷ್ಟು ಆಶಾವಾದ ಮೂಡಿಸುತ್ತದೆ. ಇತರ ಹಲವಾರು ಸಣ್ಣ ದೇಶಗಳೂ ಈ `ಅಭಿವೃದ್ಧಿ ಬ್ಯಾಂಕ್~ನಿಂದ ಆರ್ಥಿಕ ಸಹಾಯ ನಿರೀಕ್ಷಿಸಬಹುದು. ಇದರಿಂದ ಪ್ರವರ್ತಕರ ಗುಂಪಿನ (ಬ್ರಿಕ್ಸ್ ದೇಶಗಳಿಗೆ) ವಾಣಿಜ್ಯ ವಹಿವಾಟು ಬೆಳವಣಿಗೆ ಅವಕಾಶಗಳು ಇನ್ನಷ್ಟು ಹೆಚ್ಚಳಗೊಳ್ಳಲಿವೆ.ಇರಾನ್ ವಿರುದ್ಧ ಅಮೆರಿಕ ವಿಧಿಸಿರುವ ಆರ್ಥಿಕ ದಿಗ್ಬಂಧನದ ವಿರುದ್ಧ ಕೈಗೊಂಡ ನಿರ್ಧಾರಕ್ಕೂ ಸಾಕಷ್ಟು ಮಹತ್ವ ಇದೆ. `ವಿಶ್ವದ ದೊಡ್ಡಣ್ಣ~ನ ಒತ್ತಡ ತಂತ್ರಗಳಿಗೆ  ಸಣ್ಣ ಪುಟ್ಟ ದೇಶಗಳು ವಿರೋಧ ಸೂಚಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವೇ ಇಲ್ಲ ಎನ್ನುವ ಅಸಹಾಯಕ ಪರಿಸ್ಥಿತಿ ಇದೆ.ಭಾರತ ಮತ್ತು ಚೀನಾಗಳೆರಡೂ ಇರಾನ್ ಪೂರೈಸುವ ಕಚ್ಚಾ ತೈಲವನ್ನು ಬಹುವಾಗಿ ನೆಚ್ಚಿಕೊಂಡಿವೆ. ಎರಡೂ ದೇಶಗಳು ತಮ್ಮ  ಅಗತ್ಯದ ಐದನೇ ಒಂದು ಭಾಗದಷ್ಟು (ಶೇ 20ರಷ್ಟು) ಪ್ರಮಾಣದ ತೈಲವನ್ನು ಇರಾನ್‌ನಿಂದಲೇ ಆಮದು ಮಾಡಿಕೊಳ್ಳುತ್ತವೆ.ಇಂತಹ ಸಂದರ್ಭದಲ್ಲಿ ಇರಾನ್‌ನಿಂದ ತೈಲ ಆಮದು ಸ್ಥಗಿತಗೊಳಿಸುವುದು ಎಂದರೆ, ಅದೊಂದು `ಆತ್ಮಹತ್ಯಾ~ ಕ್ರಮವಾದೀತು. ಇನ್ನೊಂದೆಡೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರುಗತಿಯಲ್ಲಿ ಓಡುತ್ತಲೇ ಇರುವಾಗ, ಇರಾನಿನ ತೈಲ ಪೂರೈಕೆ  ನಿಂತು ಹೋದರೆ ಅದರಿಂದ ಬೆಲೆ ಇನ್ನಷ್ಟು ದುಬಾರಿಗೊಳ್ಳಲಿದೆ.ಭಾರತದ ಚಾಲ್ತಿ ಖಾತೆ ಪರಿಸ್ಥಿತಿಯು ಮೊದಲೇ ತೃಪ್ತಿದಾಯಕವಾಗಿಲ್ಲ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ತೈಲದ ಬೆಲೆ ಕಡಿಮೆಯಾದರೆ ಮಾತ್ರ ಭಾರತಕ್ಕೆ ಪ್ರಯೋಜನ ದೊರೆಯಲಿದೆ. ಇಲ್ಲದಿದ್ದರೆ ಚಾಲ್ತಿ ಖಾತೆ ಇನ್ನಷ್ಟು ವಿಷಮಗೊಳ್ಳಲಿದೆ.ಪರಸ್ಪರ ವಾಣಿಜ್ಯ - ವಹಿವಾಟಿನಲ್ಲಿ ಅಂತರರಾಷ್ಟ್ರೀಯ ಪರಿವರ್ತನೀಯ ಕರೆನ್ಸಿ ಬದಲಿಗೆ ಸ್ಥಳೀಯ ಕರೆನ್ಸಿಯನ್ನೇ ಬಳಸುವುದಕ್ಕೆ ಸಂಬಂಧಿಸಿದ ಒಪ್ಪಂದಕ್ಕೂ ಸಾಕಷ್ಟು ಮಹತ್ವ ಇದೆ. ಇದರಿಂದ ಸದಸ್ಯ ದೇಶಗಳ ಮಧ್ಯೆ ಇರುವ `ಪಾವತಿ ಸಮತೋಲನ~ದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗಲಾರದು. ಇದರಿಂದ ದ್ವಿಪಕ್ಷೀಯ ವ್ಯಾಪಾರಕ್ಕೂ ಸಾಕಷ್ಟು ಉತ್ತೇಜನ ದೊರೆಯಲಿದೆ.ಚೀನಾದ ಬಳಿ ಇರುವ ಪರಿವರ್ತನೀಯ ವಿದೇಶಿ ಕರೆನ್ಸಿಯು ಈ ಕ್ರಮಕ್ಕೆ ಅಗತ್ಯವಾದ ಬಲ ತುಂಬಲಿದೆ. ಸದ್ಯಕ್ಕೆ ವಿಶ್ವದಾದ್ಯಂತ ಮನ್ನಣೆಗೆ ಪಾತ್ರವಾಗಿರುವ ಅಮೆರಿಕದ  ಪ್ರಬಲ ಡಾಲರ್‌ಗೆ ಪರ್ಯಾಯ ಕರೆನ್ಸಿಯ ಹುಡುಕಾಟದ ಪ್ರಯತ್ನಗಳಿಗೂ ಇದರಿಂದ ಸಮರ್ಪಕ ಉತ್ತರ ಸಿಗಲಿದೆ.ಸಭೆಯಲ್ಲಿ ಚರ್ಚಿಸಲಾದ ಕೆಲ ರಾಜಕೀಯ ವಿಷಯಗಳು ಕೂಡ ದೂರಗಾಮಿ ಪರಿಣಾಮ ಬೀರಲಿವೆ. ಇರಾನಿನ ಅಣ್ವಸ್ತ್ರ ಅಭಿವೃದ್ಧಿಪಡಿಸುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಮೆರಿಕ ನಿರ್ವಹಿಸುತ್ತಿರುವ ಪಾತ್ರವನ್ನು ವಿವರವಾಗಿ ಚರ್ಚಿಸಲಾಗಿದೆ.

ಈ ವಿವಾದಕ್ಕೆ ಸಂಧಾನ ಸೂತ್ರಗಳ ಮೂಲಕ ಪರಿಹಾರ ಕಂಡುಕೊಳ್ಳುವುದೇ ಸೂಕ್ತ ಎನ್ನುವ ನಿಲುವಿಗೆ `ಬ್ರಿಕ್ಸ್~ ದೇಶಗಳು ಬಂದಿವೆ. ಸಿರಿಯಾ ಬಿಕ್ಕಟ್ಟಿನ ಕುರಿತೂ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದ್ದು, ಈ ವಿಷಯದಲ್ಲಿ `ಬ್ರಿಕ್ಸ್~ ದೇಶಗಳನ್ನು ನಿರ್ಲಕ್ಷಿಸುವಂತಿಲ್ಲ ಎಂದು ವಿಶ್ವ ಸಮುದಾಯಕ್ಕೆ ಸೂಚಿಸಲಾಗಿದೆ.ಈ ಎಲ್ಲ ಮಹತ್ವದ ನಿರ್ಧಾರಗಳ ಹೊರತಾಗಿಯೂ, `ಬ್ರಿಕ್ಸ್~ ದೇಶಗಳ ಯಶಸ್ಸು ಹಲವಾರು ಸಂಗತಿಗಳನ್ನು ಆಧರಿಸಿದೆ. ಸದಸ್ಯ ದೇಶಗಳು ಅಮೆರಿಕದ ಜತೆ ಹೊಂದಿರುವ ಬಾಂಧವ್ಯ, ಸದಸ್ಯ ದೇಶಗಳ ಮಧ್ಯೆಯೇ ಇರುವ ಗಡಿ ತಂಟೆಗಳು (ಉದಾ: ಭಾರತ - ಚೀನಾ) ಮುಂತಾದವು `ಬ್ರಿಕ್ಸ್~ ದೇಶಗಳ ಮುನ್ನಡೆಗೆ ಅಡ್ಡಿ ಒಡ್ಡಬಹುದು.ಆದಾಗ್ಯೂ, ಈ ವಿವಾದಗಳು `ಬ್ರಿಕ್ಸ್~ ದೇಶಗಳ ಪರಸ್ಪರ ಬಾಂಧವ್ಯ, ಜಾಗತಿಕ ವಿದ್ಯಮಾನಗಳಲ್ಲಿ ಬೀರುವ ಪ್ರಭಾವದ ಮೇಲೆ ಪ್ರತಿಕೂಲ ಪರಿಣಾಮ ಬೀರಲಾರವು.ಸದ್ಯಕ್ಕಂತೂ ಆಶಾವಾದದಿಂದಲೇ ಮುನ್ನಡೆಯೋಣ. ಬಂದೂಕಿನಿಂದ ಅಧಿಕಾರ ಹರಿದು ಬರುತ್ತದೆ. ಬ್ಯಾಂಕ್ ಬ್ಯಾಲೆ ನ್ಸ್‌ನಿಂದ ಇನ್ನೂ ಹೆಚ್ಚು ಅಧಿಕಾರ ಕೈವಶವಾಗುತ್ತದೆ. ಬ್ಯಾಂಕ್ ಸಂಪತ್ತಿನಿಂದ ಕೈವಶವಾಗುವ ಅಧಿಕಾರವೇ ನಿಜವಾಗಲಿ ಎಂದು ಆಶಿಸೋಣ.(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.