ವಿಷಯ ಮಂಡನೆಯ ಕಲೆ

7

ವಿಷಯ ಮಂಡನೆಯ ಕಲೆ

ಗುರುರಾಜ ಕರ್ಜಗಿ
Published:
Updated:

 

ನಮ್ಮಲ್ಲಿ ಭಿಕ್ಷೆ ಕೇಳಲು ಬಂದವರು ಮನೆಮನೆಯ ಮುಂದೆ ನಿಂತು ಜೋರಾಗಿ,  `ಅಮ್ಮಾ, ಕವಳಾ, ಭಿಕ್ಷೆ ನೀಡಿ'  ಎಂದು ಕೂಗುತ್ತ ಹೋಗುವುದು ಸಾಮಾನ್ಯ. ರಸ್ತೆ ಪಕ್ಕದಲ್ಲಿ ಕೂಡ ಕೂಗುತ್ತ ಭಿಕ್ಷೆ ಬೇಡುತ್ತಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ತರಹ ಕಾಣುವುದು ಅಪರೂಪ. ಕೆಲವೊಮ್ಮೆ ಅವರು ಭಿಕ್ಷುಕರ ತರಹ ಕಾಣುವುದೂ ಇಲ್ಲ. ಕೆಲವರು ರಸ್ತೆ ಬದಿಯಲ್ಲಿ ಕುಳಿತು ತಮ್ಮ ಮುಂದೆ ಒಂದು ಫಲಕ ಇಟ್ಟುಕೊಂಡು ಅದರ ಮೇಲೆ ತಮ್ಮ ಕಷ್ಟವನ್ನು ನಿವೇದಿಸಿಕೊಳ್ಳುತ್ತಾರೆ. ಹೀಗೆ ಒಮ್ಮೆ ಒಬ್ಬ ಅಂಧ ಬಾಲಕ ರಸ್ತೆ ಬದಿಯಲ್ಲಿ ಕುಳಿತಿದ್ದ. ಅವನ ಮುಂದೆ ಒಂದು ಫಲಕದಲ್ಲಿ `ನಾನೊಬ್ಬ ಕುರುಡ, ದಯವಿಟ್ಟು ಸಹಾಯ ಮಾಡಿ'  ಎಂದು ಬರೆದಿತ್ತು. ಅವನು ಹೀಗೆ ಕುಳಿತು ಮೂರು-ನಾಲ್ಕು ತಾಸುಗಳಾದರೂ ಕೇವಲ ಕೆಲವೇ ಕೆಲವು ನಾಣ್ಯಗಳು ಅವನ ಮುಂದಿದ್ದ ಬುಟ್ಟಿಯಲ್ಲಿ ಬಿದ್ದಿದ್ದವು. ಆಗ ಅಲ್ಲಿಗೊಬ್ಬ ವ್ಯಕ್ತಿ ಬಂದ. ಈ ಹುಡುಗನನ್ನು ಮಾತನಾಡಿಸಿ ಕೇಳಿದ, `ಗೆಳೆಯಾ, ನೀನು ಅನುಮತಿ ನೀಡಿದರೆ ಈ ಫಲಕದ ಮೇಲಿನ ಬರಹ  ಬದಲಾಯಿಸಿ ಬರೆಯಲೇ. ಅದರಿಂದ ನಿನಗೆ ಪ್ರಯೋಜನವಾಗಬಹುದು' ಎಂದ.  ಅಂಧ ಬಾಲಕ,  `ಆಗಲಿ, ದಯವಿಟ್ಟು ಮಾಡಿ' ಎಂದ. ಈ ವ್ಯಕ್ತಿ ಫಲಕವನ್ನು ತಿರುಗಿಸಿ ಹಿಂದಿನ ಭಾಗದ ಮೇಲೆ ಏನನ್ನೋ ಬರೆದು ರಸ್ತೆಗೆ ಮುಖ ಮಾಡಿ ಇಟ್ಟು ಹುಡುಗನ ಬೆನ್ನು ತಟ್ಟಿ ಹೊರಟು ಹೋದ. ಅದೇನು ವಿಶೇಷವೋ ಅಂಧ ಬಾಲಕನ ಮುಂದೆ ಇಟ್ಟಿದ್ದ ಬುಟ್ಟಿಯಲ್ಲಿ ನಾಣ್ಯಗಳು ಹೆಚ್ಚಾಗಿ ಬೀಳತೊಡಗಿದವು.ಸಾಯಂಕಾಲದ ಹೊತ್ತಿಗೆ ಬುಟ್ಟಿ ತುಂಬುವಂತಾಗಿತ್ತು. ಆ ಹೊತ್ತಿಗೆ ಮತ್ತೆ ಅದೇ ವ್ಯಕ್ತಿ ಬಂದ. ಅವನ ಹೆಜ್ಜೆಯ ಸಪ್ಪಳದಿಂದಲೇ ಹುಡುಗ ಅವನನ್ನು ಗುರುತಿಸಿದ. ಆತ ಬಂದು ಹುಡುಗನ ಬೆನ್ನ ಮೇಲೆ ಕೈ ಇಟ್ಟು ಹೇಳಿದ, `ಸ್ನೇಹಿತ, ನಿನಗೆ ಇಂದು ಜನರ ಸಹಕಾರ ಹೆಚ್ಚು ದೊರೆತಿದೆ, ಪರವಾಗಿಲ್ಲ'  ಎಂದ. ನಂತರ ಅವನ ಪಕ್ಕದಲ್ಲೇ ಕುಳಿತು ಬುಟ್ಟಿಯಲ್ಲಿ ಬಿದ್ದಿದ್ದ ಹಣವನ್ನೆಲ್ಲ ಎಣಿಸಿ, ಅವನಿಗೆ ತಿಳಿಸಿ, ಹುಡುಗನ ಕೋಟಿನ ಜೇಬಿನಲ್ಲಿ ಹಾಕಿದ.

 

ಹುಡುಗ ಹೇಳಿದ, `ಧನ್ಯವಾದಗಳು ಗೆಳೆಯ, ನೀವಾರೆಂಬುದು ತಿಳಿಯದು. ನೀವು ಮಾಡಿದ ಉಪಕಾರಕ್ಕೆ ಕೃತಜ್ಞನಾಗಿದ್ದೇನೆ. ಆದರೆ, ನನಗೆ ಕುತೂಹಲವೆಂದರೆ ನೀವು ಆ ಬೋರ್ಡಿನ ಬರಹದಲ್ಲಿ ಏನು ಬದಲಾವಣೆ ಮಾಡಿದಿರಿ. ಬರೀ ಬರಹ ಬದಲಾಯಿಸಿದ್ದರಿಂದ ಜನ ಏಕೆ ಹೆಚ್ಚು ಹಣ ಹಾಕಿದರು' ಎಂದ. ಆ ವ್ಯಕ್ತಿ ಹೇಳಿದ. `ನಾನು ಹೊಸ ವಿಷಯವನ್ನೇನೂ ಹೇಳಲಿಲ್ಲ, ಸತ್ಯವನ್ನೇ ಹೇಳಿದೆ. ಆದರೆ ಸತ್ಯವನ್ನೇ ಮನ ತಟ್ಟುವಂತೆ ಹೇಳಿದೆ. ನೀನು ಫಲಕದ ಮೇಲೆ  ನಾನೊಬ್ಬ ಕುರುಡ, ದಯವಿಟ್ಟು ಸಹಾಯ ಮಾಡಿ  ಎಂದು ಬರೆದಿದ್ದೆ.ನಾನು ಅದನ್ನು ಬದಲಾಯಿಸಿ  ಇಂದಿನ ದಿನ ಅತ್ಯಂತ ಸುಂದರವಾದ ದಿನ. ಆದರೆ ದುರ್ದೈವದಿಂದ ನಾನು ಅದನ್ನು ನಿಮ್ಮಂತೆ ಕಾಣಲಾರೆ  ಎಂದು ಬರೆದಿದ್ದೆ. ಇದು ಜನರ ಮನಸ್ಸನ್ನು ತಟ್ಟಿದೆ, ಕಾಣಿಕೆಯನ್ನು ನೀಡುವಂತೆ ಪ್ರೇರೇಪಿಸಿದೆ' ಎಂದ. ಯಾವ ವಿಷಯವನ್ನು ಹೇಗೆ ಹೇಳಬೇಕೆಂಬುದೂ ಒಂದು ಕಲೆ. ಅದ್ಭುತವಾದ ವಿಷಯವನ್ನು ಸರಿಯಾಗಿ ತಿಳಿಸದಿದ್ದರೆ ಅದು ಯಾರ ಗಮನವನ್ನೂ ಸೆಳೆಯಲಾರದು. ಆದರೆ ನಿಮ್ಮ ಪ್ರಸ್ತುತಪಡಿಸುವ ಕಲೆ ಸೃಜನಶೀಲವಾಗಿದ್ದರೆ ಅತ್ಯಂತ ಸಾಮಾನ್ಯ ವಿಷಯ ಕೂಡ ಆಕರ್ಷಕವಾಗುತ್ತದೆ. ಆ ಕಲೆ ಕರಗತ ಮಾಡಿಕೊಳ್ಳುವುದು ಅವಶ್ಯಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry