ಮಂಗಳವಾರ, ಆಗಸ್ಟ್ 20, 2019
27 °C

ವೀರೇಂದ್ರ ಪಾಟೀಲರು ಕ್ಷಮೆ ಕೇಳಿದ್ದರು ; ಸಿದ್ದರಾಮಯ್ಯನವರೂ ಕೇಳುವಂತೆ ಆಗಬಾರದು!

Published:
Updated:

ದೆಲ್ಲ ಇಷ್ಟು ಬೇಗ ಶುರುವಾಗುತ್ತದೆ ಎಂದು ಅನಿಸಿರಲಿಲ್ಲ. ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಬಹಳ ದಿನಗಳೇನೂ ಆಗಿಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಎರಡೋ ಮೂರೋ ಶಾಸಕಾಂಗ ಸಭೆಗಳಲ್ಲಿ ಒಂದೇ ಸಂಗತಿ ಚರ್ಚೆಯಾಗಿದೆ. ಅಥವಾ ಅದೊಂದೇ ಸಂಗತಿ ಪ್ರಮುಖವಾಗಿ ಚರ್ಚೆಯಾಗಿದೆ. ಅಥವಾ ಅದೊಂದೇ ಪ್ರಮುಖವಾಗಿ ಚರ್ಚೆಯಾಗಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ!

ಶಾಸಕರು ಅಲ್ಲಿ ಹಾಡಿದ್ದು ಅದೇ ಹಳೆ ರಾಗ ಅದೇ ಹಳೆ ಹಾಡು: “ಸಚಿವರು ನಮ್ಮ ಜತೆ ಮುಖಕೊಟ್ಟು ಮಾತನಾಡುತ್ತಿಲ್ಲ ಮತ್ತು ನಾವು ಹೇಳಿದ ವರ್ಗಾವಣೆ ಮಾಡಿಕೊಡುತ್ತಿಲ್ಲ.” ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಯಾವುದು ಆದ್ಯತೆಯ ಪಟ್ಟಿಯಲ್ಲಿ ಇರಬೇಕು? ಶಾಸಕರು ಮೊದಲು ಅಧಿಕಾರಿಗಳನ್ನು ವರ್ಗ ಮಾಡುವ ಕಡೆಗೇ ಗಮನ ಕೊಡಬೇಕೇ ಅಥವಾ ಅವರು ನಿರ್ವಹಿಸಬೇಕಾದ ಇತರ ಆದ್ಯತೆಗಳು ಬೇರೆ ಇವೆಯೇ? ಅಧಿಕಾರಿಗಳ ವರ್ಗಾವಣೆ ಖಂಡಿತ ಮೊದಲ ಆದ್ಯತೆಯಲ್ಲ ಮತ್ತು ಅದು ಆಗಿರಬೇಕಿಲ್ಲ.

ಶಾಸಕರು ಮೊದಲು ಕಂಡುಕೊಳ್ಳಬೇಕಾದುದು ತಮ್ಮ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳು ಏನು, ಯಾವುದಕ್ಕೆ ಎಷ್ಟು ಕಾಲಾವಕಾಶ ಬೇಕು ಹಾಗೂ ಎಷ್ಟು ಅನುದಾನ ಬೇಕು ಎಂಬುದು. ಶಾಸಕಾಂಗ ಪಕ್ಷದ ಸಭೆಯಲ್ಲಿ ಅಂಥ ಚರ್ಚೆ ನಡೆದಂತೆ ಕಾಣುವುದಿಲ್ಲ. ಹೊಸದಾಗಿ ಆಯ್ಕೆಯಾಗಿ ಬಂದ ಶಾಸಕರು ತಮ್ಮ ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಹಿಡಿದುಕೊಂಡು ಮುಖ್ಯಮಂತ್ರಿಗಳ, ಸಚಿವರ ಬಳಿಗೆ ಹೋಗಬೇಕೇ ಹೊರತು ಆ ಅಧಿಕಾರಿಯನ್ನು ಇಲ್ಲಿ ಹಾಕಿ, ಈ ಅಧಿಕಾರಿಯನ್ನು ಅಲ್ಲಿಗೆ ಹಾಕಿ ಎಂದು ಕೇಳಲು ಅಲ್ಲ.ನಿಜ, ಒಂದು ಪಕ್ಷದ ಸರ್ಕಾರ ಒಂಬತ್ತು ವರ್ಷಗಳ ನಂತರ ಅಧಿಕಾರಕ್ಕೆ ಬಂದ ನಂತರ ತಮಗೆ ಬೇಕಾದ ಅಧಿಕಾರಿಗಳನ್ನು ತಮಗೆ ಬೇಕಾದ ಸ್ಥಳಗಳಿಗೆ ನಿಯೋಜಿಸಿಕೊಳ್ಳಲು ಶಾಸಕರು, ಸಚಿವರು ಬಯಸುವುದು ಸಹಜ. ಕಾರ್ಯಾಂಗ ಒಂದು ಸ್ವತಂತ್ರ ಅಸ್ತಿತ್ವವಾಗಿ ಉಳಿಯದಿರುವ ಕಾರಣ ಇಂಥ ಬಯಕೆಗಳು ಹುಟ್ಟಿಕೊಳ್ಳುವುದೂ ಸಹಜ. `ಇದುವರೆಗೆ ಬೇರೆ ಬೇರೆ ಪಕ್ಷಗಳ ಸರ್ಕಾರಗಳು ಇದ್ದ ಕಾರಣ ಅಧಿಕಾರಿಗಳು ಆಯಾ ಶಾಸಕರ ಮತ್ತು ಕಾರ್ಯಕರ್ತರ ಮಾತು ಮಾತ್ರ ಕೇಳುತ್ತ ಇರುತ್ತಿದ್ದರು.

ನಾವು ವಿರೋಧ ಪಕ್ಷದಲ್ಲಿ ಇದ್ದುದರಿಂದ ನಮ್ಮ ಮಾತು ಕೇಳುತ್ತಿರಲಿಲ್ಲ. ನಮ್ಮ ಕಾರ್ಯಕರ್ತರ ಕೆಲಸ ಆಗುತ್ತಿರಲಿಲ್ಲ' ಎಂದು ಕಾಂಗ್ರೆಸ್ ಶಾಸಕರು ಅಂದುಕೊಳ್ಳುವುದರಲ್ಲಿಯೂ ಅರ್ಥ ಇರಬಹುದು. ಕಾರ್ಯಾಂಗ ಹಾಗೆಯೇ ನಡೆದುಕೊಳ್ಳುತ್ತದೆ. ಅದಕ್ಕೆ ಅಧಿಕಾರದಲ್ಲಿ ಇದ್ದವರನ್ನು ಓಲೈಸುವ ಗುಣ ಅಂಟಿಕೊಂಡಿದೆ. ಆದರೆ, ಅಧಿಕಾರಿಗಳ ವರ್ಗಾವಣೆಯ ಒತ್ತಾಯಕ್ಕೆ ಅದು ಒಂದೇ ಕಾರಣವೇ? ನಿಜವಾದ ಕಾರಣ ಅದಲ್ಲ. ಈಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕರು ಕೋಟಿಗಟ್ಟಲೇ ಹಣ ಖರ್ಚು ಮಾಡಿದ್ದಾರೆ.

ಅವರ ಜತೆಗೆ ಓಡಾಡಿದ ಕಾರ್ಯಕರ್ತರನ್ನು ಸಮಾಧಾನ ಮಾಡಬೇಕಾಗಿದೆ. ಸರ್ಕಾರದ ಒಂದೊಂದು ಹುದ್ದೆಗೂ ಈಗ ಒಂದೊಂದು ಬೆಲೆ ಇದೆ. ದೊಡ್ಡ ಹುದ್ದೆಗೆ ದೊಡ್ಡ ಬೆಲೆ, ಚಿಕ್ಕ ಹುದ್ದೆಗೆ ಚಿಕ್ಕ ಬೆಲೆ. ದೊಡ್ಡ ಹುದ್ದೆಗಳನ್ನು ಸಚಿವರು, ಶಾಸಕರು ಇಟ್ಟುಕೊಂಡರೆ ಚಿಕ್ಕ ಹುದ್ದೆಗಳನ್ನು ಅವರ ಕೈ ಕೆಳಗೆ ಓಡಾಡುವ ಪುಡಾರಿಗಳು, ಮರಿ ಪುಡಾರಿಗಳು ಇಟ್ಟುಕೊಳ್ಳುತ್ತಾರೆ. ಒಬ್ಬ ಹಿರಿಯ ಸಚಿವರ ಸಹಾಯಕರಾಗಿ ಕೆಲಸ ಮಾಡುವ ಒಬ್ಬ ಅಧಿಕಾರಿಯ ಪಕ್ಕದಲ್ಲಿ ಕಳೆದ ವಾರ ಕುಳಿತುಕೊಂಡಿದ್ದೆ.

ಅವರಿಗೆ ಸಾರ್ವಜನಿಕರಿಂದ, ಕಾಂಗ್ರೆಸ್ ಕಾರ್ಯಕರ್ತರಿಂದ ಬಂದ ಬಹುಪಾಲು ಮನವಿಗಳು ಅಧಿಕಾರಿಗಳ, ಸಿಬ್ಬಂದಿಯ ವರ್ಗಾವಣೆಯ ಕೋರಿಕೆಗಳು ಆಗಿದ್ದುವೇ ಹೊರತು, `ನಮ್ಮ ಊರಿಗೆ ನೀರು ಇಲ್ಲ, ಚರಂಡಿ ಇಲ್ಲ, ಬೀದಿ ದೀಪ ಇಲ್ಲ, ಅದನ್ನು ಸರಿ ಮಾಡಿಕೊಡಿ' ಎಂಬಂಥ ಮನವಿಗಳು ಇರಲಿಲ್ಲ. ಇದು ವರ್ಗಾವಣೆಯ ಹಂಗಾಮು. ಇದುವರೆಗೆ ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಒಂದು ನೀತಿಯನ್ನು ಯಾವ ಸರ್ಕಾರವೂ ಮಾಡಿಲ್ಲ; ಮಾಡಿದ್ದರೂ ಅದನ್ನು ಪಾಲಿಸಿಲ್ಲ.1983ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರ ಅಧಿಕಾರಕ್ಕೆ ಬಂದಾಗ ಅಧಿಕಾರಿಗಳ, ಸಿಬ್ಬಂದಿಯ ವರ್ಗಾವಣೆಯಲ್ಲಿ ಶಾಸಕರ ಹಸ್ತಕ್ಷೇಪಕ್ಕೆ ಮೊದಲ ಬಾರಿ ಅವಕಾಶ ಸಿಕ್ಕಿತು. ವರ್ಗಾವರ್ಗಿಯಲ್ಲಿ ಹಣ ಮಾಡಬಹುದು ಎಂದು ಶಾಸಕರಿಗೆ ಗೊತ್ತಾದುದೇ ಆಗ. ಆದರೆ, ಈಗ ವರ್ಗಾವಣೆಯಲ್ಲಿ ಇರುವಷ್ಟು ಹಣ ಆಗ ಇರಲಿಲ್ಲ ಎಂಬುದು ಬೇರೆ ಮಾತು. ಗುಂಡೂರಾವ್ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರು ಎಂದೂ ಅಧಿಕಾರಿಗಳ ವರ್ಗಾವಣೆಯಲ್ಲಿ ಶಾಸಕರ ಹಸ್ತಕ್ಷೇಪಕ್ಕೆ ಅವಕಾಶ ಕೊಟ್ಟಿರಲಿಲ್ಲ.

ಅವರಿಗೆ ಹೈಕಮಾಂಡ್‌ನ ಸಂಪೂರ್ಣ ಆಶೀರ್ವಾದ ಇದ್ದುದು ಅವರು ಅಷ್ಟು ಕಟ್ಟುನಿಟ್ಟಾಗಿ ವರ್ತಿಸುತ್ತಿದ್ದುದಕ್ಕೆ ಕಾರಣ ಇರಬಹುದು. ರಾಮಕೃಷ್ಣ ಹೆಗಡೆ ಅವರದು ಅಲ್ಪಬಹುಮತದ ಸರ್ಕಾರವಾಗಿತ್ತು. ಅವರಿಗೆ ಬಿಜೆಪಿಯ 18 ಮಂದಿ ಶಾಸಕರು ಬಾಹ್ಯ ಬೆಂಬಲ ಕೊಟ್ಟಿದ್ದರು. ಬರೀ ಬಿಜೆಪಿ ಮಾತ್ರವಲ್ಲ ಎಲ್ಲ ಶಾಸಕರನ್ನು ಸಂತುಷ್ಟರಾಗಿ ಇಡುವ ಅನಿವಾರ್ಯತೆ ಹೆಗಡೆಯವರಿಗೆ ಇತ್ತು. ಆದರೆ, ಆಗ ಹೆಗಡೆಯವರ ಮೇಲೆ ಬಿಜೆಪಿ ಶಾಸಕರೇ ವರ್ಗಾವರ್ಗಿಗೆ ಹೆಚ್ಚು ಒತ್ತಡ ಹಾಕಿದರು ಎಂಬ ಆರೋಪ ಕೇಳಿಬಂದಿತ್ತು. ಕೆಲವರು ದುಡ್ಡು ಮಾಡಿಕೊಂಡರು ಎಂಬ ದೂರೂ ಕೇಳಿ ಬಂದಿತ್ತು.

ಆಗ ತೆರೆದುಕೊಂಡ ಪೆಂಡೋರಾಸ್ ಪೆಟ್ಟಿಗೆ ಇದುವರೆಗೆ ತೆರೆದುಕೊಂಡೇ ಇದೆ. ನಂತರ ಬಂದ ಪ್ರತಿಯೊಬ್ಬ ಮುಖ್ಯಮಂತ್ರಿ ಅದರಿಂದ ಗಾಸಿಗೊಂಡಿದ್ದಾರೆ. 1989ರಲ್ಲಿ ಭಾರಿ ಬಹುಮತದಿಂದ ಅಧಿಕಾರಕ್ಕೆ ಬಂದ ವೀರೇಂದ್ರ ಪಾಟೀಲರ ಸರ್ಕಾರ ವರ್ಗಾವರ್ಗಿಯಲ್ಲಿ ಶಾಸಕರಿಗೆ ಅವಕಾಶ ಕೊಟ್ಟು ಕೈ ಸುಟ್ಟುಕೊಂಡಿತು. ಆಗ ವರ್ಗಾವಣೆ  ವರ್ಷವಿಡೀ ಮುಗಿಯಲೇ ಇಲ್ಲ. ವೀರೇಂದ್ರ ಪಾಟೀಲರು ವಿಧಾನಸಭೆಯ ಅಧಿವೇಶನದಲ್ಲಿಯೇ ರಾಜ್ಯದ ಜನರ ಕ್ಷಮೆ ಕೇಳಿದರು.

ತಾವು ವರ್ಗಾವಣೆಯಲ್ಲಿ ಶಾಸಕರ ಹಸ್ತಕ್ಷೇಪಕ್ಕೆ ಅವಕಾಶ ಕೊಟ್ಟುದು ತಪ್ಪಾಯಿತು ಎಂದು ಒಪ್ಪಿಕೊಂಡರು. ಪಾಟೀಲರು ಒಬ್ಬ ಶ್ರೇಷ್ಠ ಆಡಳಿತಗಾರರಾಗಿದ್ದರು. ಅತ್ಯಂತ ಸೂಕ್ಷ್ಮಮತಿಯಾಗಿದ್ದರು. ಯಾವುದೇ ನಿಯಮ ಅಥವಾ ಚೌಕಟ್ಟು ಹಾಕಿಕೊಳ್ಳದೇ ವರ್ಗಾವಣೆ ಮಾಡಿದರೆ ಎಂಥ ಅನಾಹುತ ಆಗಬಹುದು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದರು. ಅರ್ಥ ಮಾಡಿಕೊಂಡರು ಎಂದೇ ವಿಧಾನಸಭೆಯಲ್ಲಿ ರಾಜ್ಯದ ಜನರ ಕ್ಷಮೆ ಕೇಳಿದ್ದರು.  ಸಿದ್ದರಾಮಯ್ಯ ಕೂಡ ಒಳ್ಳೆಯ ಆಡಳಿತಗಾರ. ಎಪ್ಪತ್ತು ವಯಸ್ಸು ದಾಟಿರುವ ಕಾರಣ ಮಾಗಿರುವ ಮನುಷ್ಯ. ಅವರು ತಮ್ಮ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯೊಬ್ಬರನ್ನು ಬಿಟ್ಟು ಹೆಚ್ಚಿನ ವರ್ಗಾವಣೆ ಮಾಡಿದಂತೆ ಕಾಣುವುದಿಲ್ಲ. ಅಲ್ಲಿ ಹಿಂದೆ ಇದ್ದವರಿಂದಲೇ ಕೆಲಸ ಮಾಡಿಸಲು ಸಾಧ್ಯವಿಲ್ಲವೇ ಎಂಬ ಅಭಿಪ್ರಾಯದಲ್ಲಿ ಅವರು ಇದ್ದಂತೆ ಕಾಣುತ್ತದೆ. ಕಳೆದ ಐದು ವರ್ಷಗಳಲ್ಲಿ ಆಡಳಿತ ವ್ಯವಸ್ಥೆಗೆ ಆಗಿರುವ ಗಾಯದ ಅರಿವೂ ಅವರಿಗೆ ಇದೆ. ಒಂದು ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಹುದ್ದೆಯಲ್ಲಿ ಒಂದು ವರ್ಷ ಇರಲು ಹನ್ನೊಂದು ಕೋಟಿ ರೂಪಾಯಿ ಕೊಟ್ಟ ಸುದ್ದಿ ಕಳೆದ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿತ್ತು.ಈಗ ರಾಜ್ಯದ ಆಡಳಿತ ವ್ಯವಸ್ಥೆಗೆ ಎರಡು ಪಿಡುಗುಗಳು ತಗುಲಿವೆ : ಒಂದು, ಅಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ. ಎರಡು, ಅಲ್ಲಿ ಜಾತೀಯತೆ ತಾಂಡವ ಆಡುತ್ತಿದೆ. ಎಲ್ಲ ಜಾತಿಗಳ ರಾಜಕಾರಣಿಗಳು ತಿಳಿದೋ ತಿಳಿಯದೆಯೋ ಆಡಳಿತ ವ್ಯವಸ್ಥೆಗೆ ಜಾತೀಯತೆಯ ಲೇಪವನ್ನು ದಟ್ಟವಾಗಿಯೇ ಹಚ್ಚುತ್ತಿದ್ದಾರೆ. `ಒಕ್ಕಲಿಗ ಅಧಿಕಾರಿಗಳನ್ನು ಮುಟ್ಟೀರಿ ಜೋಕೆ' ಎಂದು ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಯಾವುದೇ ಮುಚ್ಚುಮರೆ ಇಲ್ಲದೇ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ನಾಳೆ ಇದೇ ಮಾತನ್ನು ಯಡಿಯೂರಪ್ಪ ಅಥವಾ ಜಗದೀಶ ಶೆಟ್ಟರ್ ಲಿಂಗಾಯತ ಅಧಿಕಾರಿಗಳ ಪರವಾಗಿ ಹೇಳಿಯಾರು.ಈ ಸಾರಿಯ ಚುನಾವಣೆಯಲ್ಲಿ ಕುಮಾರಸ್ವಾಮಿಯವರ ಪಕ್ಷವೇ ಬಹುಮತ ಗಳಿಸಿ ಅಧಿಕಾರ ಹಿಡಿದಿದ್ದರೂ ಆಡಳಿತಶಾಹಿಯನ್ನು ಸರಿದಾರಿಗೆ ತರುವ ಹೊಣೆ ಅವರ ಮೇಲೆಯೂ ಇರುತ್ತಿತ್ತು. ಈಗ ಸಿದ್ದರಾಮಯ್ಯ ಆ ಕೆಲಸವನ್ನು ಮಾಡಬೇಕಾಗಿದೆ. ಆಡಳಿತಶಾಹಿಗೆ ನಿಯಂತ್ರಣ ಮತ್ತು ಸ್ವಾತಂತ್ರ್ಯ ಎರಡೂ ಬೇಕಾಗುತ್ತವೆ. ಅದು ಜನಪರವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಲು ಸ್ವಾತಂತ್ರ್ಯ ಬೇಕಾಗುತ್ತದೆ. ಕಾನೂನು ಪ್ರಕಾರವೇ ನಡೆದುಕೊಳ್ಳಲು ಅದಕ್ಕೆ ನಿಯಂತ್ರಣವೂ ಬೇಕಾಗುತ್ತದೆ. ಜತೆಗೆ ಆಡಳಿತಶಾಹಿಗೆ ಶಿಕ್ಷೆಯ ಭಯವೂ ಇರಬೇಕಾಗುತ್ತದೆ.

ಆದರೆ, ರಾಜಕೀಕರಣಗೊಂಡಿರುವ ಈಗಿನ ಅಧಿಕಾರ ವ್ಯವಸ್ಥೆಯಲ್ಲಿ ಯಾರಿಗೂ ಶಿಕ್ಷೆಯ ಭಯವಿಲ್ಲ. ಶಿಕ್ಷೆಯಿಂದ ತಪ್ಪಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿಯೇ ಅಧಿಕಾರಿಗಳು, ಶಾಸಕರ ಅಥವಾ ಸಚಿವರ ಶ್ರೀರಕ್ಷೆಯಲ್ಲಿ ಇರಲು ಬಯಸುತ್ತಾರೆ. ಒಂದು ಹುದ್ದೆಗೆ ಬರುವುದಕ್ಕಿಂತ ಮೊದಲೇ ಇಂತಿಷ್ಟು ದುಡ್ಡು ಕೊಟ್ಟ ಮೇಲೆ ಶ್ರೀರಕ್ಷೆಯನ್ನು ಪಡೆದಂತೆಯೇ ಆಯಿತಲ್ಲ? ಕರ್ನಾಟಕ ಒಂದು ಕಾಲದಲ್ಲಿ ಅತ್ಯಂತ ಶ್ರೇಷ್ಠ ಆಡಳಿತಗಾರರಿಗೆ ಹೆಸರಾಗಿತ್ತು. ಆಗ ಅಭಿವೃದ್ಧಿ ಪಥದಲ್ಲಿ ಕರ್ನಾಟಕ ಬಹಳ ಮುಂದೆಯೂ ಇತ್ತು.

ಈಗಿನ ಸಂಪುಟದಲ್ಲಿ ಮುಖ್ಯಮಂತ್ರಿಯೂ ಸೇರಿದಂತೆ ಅಂಥ ಅನೇಕ ಒಳ್ಳೆಯ ಆಡಳಿತಗಾರರು ಇದ್ದಾರೆ. ಆದರೆ, ಆಡಳಿತ ಪಕ್ಷದ ಶಾಸಕರಿಗೆ ಆಡಳಿತವನ್ನು ಸರಿಮಾಡುವ ಕಡೆಗೆ ಗಮನ ಇದ್ದಂತೆ ಇಲ್ಲ. ಇದ್ದಿದ್ದರೆ, `ಈ ವರ್ಷ ವರ್ಗಾವಣೆ ಮಾಡುವುದು ಬೇಡ, ಹಾಲಿ ಹುದ್ದೆಗಳಲ್ಲಿ ಇದ್ದವರ ಕಡೆಯಿಂದಲೇ ಕೆಲಸ ಮಾಡಿಸಿಕೊಳ್ಳೋಣ' ಎಂದು ಅವರೆಲ್ಲ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಬಹುದಿತ್ತು. ಈಗ ಆಡಳಿತ ಪಕ್ಷದ ಶಾಸಕರು ಮತ್ತು ಕೆಲವರಾದರೂ ಸಚಿವರು ನಡೆದುಕೊಳ್ಳುವ ರೀತಿ ನೋಡಿದರೆ ಹಿಂದಿನ ಸರ್ಕಾರಕ್ಕೂ ಈಗಿನ ಸರ್ಕಾರಕ್ಕೂ ವ್ಯತ್ಯಾಸ ಹುಡುಕುವುದು ಈಗಲೇ ಅಲ್ಲದಿದ್ದರೂ ಮುಂದೆ ಬಹಳ ಕಷ್ಟವಾಗುತ್ತದೆ.

ಈ ಸಾರಿಯ ಬಜೆಟ್ ಅಧಿವೇಶನದಲ್ಲಿ ಅದರ ಲಕ್ಷಣಗಳು ಮತ್ತೆ ಗೋಚರಿಸಿವೆ. ಒಂಬತ್ತು ವರ್ಷಗಳ ನಂತರ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದ ಒಂದು ರೋಮಾಂಚನ ಪಕ್ಷದ ಅನೇಕ ಶಾಸಕರಲ್ಲಿ, ಸಚಿವರಲ್ಲಿ ಕಾಣುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ 125 ವರ್ಷಗಳೇ ಆಗಿರಬಹುದು. ಹಾಗೆಂದು ಆ ಪಕ್ಷದಲ್ಲಿ ಇದ್ದವರೆಲ್ಲ 125 ವರ್ಷದ ಮುದುಕರ ಹಾಗೆಯೇ ನಡೆದುಕೊಂಡರೆ ಹೇಗೆ? ಅವರಲ್ಲಿ ಒಂದಿಷ್ಟು ಯೌವನ, ಉತ್ಸಾಹ, ಹೊಸ ಕನಸುಗಳು, ಹೊಸ ಆಲೋಚನೆಗಳು ಇರಬೇಕಲ್ಲ? ಏನಾದರೂ ಒಳ್ಳೆಯದು ಮಾಡಬೇಕು ಎಂಬ ತಹತಹ ಬೇಕಲ್ಲ?ಯಡಿಯೂರಪ್ಪನವರು ಮಾಡಿದ ತಪ್ಪನ್ನು ಸಿದ್ದರಾಮಯ್ಯನವರೂ ಮಾಡಬಾರದು. ಸರ್ಕಾರ ಒಂದು ತಂಡವಾಗಿ ಕೆಲಸ ಮಾಡುವಂತೆ ಮೊದಲು ಅವರು ನೋಡಿಕೊಳ್ಳಬೇಕು. ಪಕ್ಷದ ಅಧ್ಯಕ್ಷರೂ ಜತೆಗೆ ಇರುವಂತೆ ಇನ್ನಷ್ಟು ಕಾಳಜಿ ವಹಿಸಬೇಕು. ನಿರ್ದಿಷ್ಟವಾದ ಕಲಾಪ ಪಟ್ಟಿಯನ್ನು ಇಟ್ಟುಕೊಂಡು ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಬೇಕು. ರಾಜ್ಯದ ಅಭಿವೃದ್ಧಿಗೆ ಒಂದು ನೀಲನಕ್ಷೆಯನ್ನು ಈಗಲೇ ರೂಪಿಸಬೇಕು. ಮುಂದಿನ ಐದು ವರ್ಷಗಳಲ್ಲಿ ಆ ದಾರಿಯಲ್ಲಿ ಹೇಗೆ ಕ್ರಮಿಸಬೇಕು ಎಂದು  ಗೊತ್ತುಪಡಿಸಿಕೊಳ್ಳಬೇಕು. ಒಳ್ಳೆಯ ಉದ್ದೇಶಗಳನ್ನು ಅನುಮಾನ ಪಡುವುದು ಮತ್ತು ಅದಕ್ಕೆ ಅಡ್ಡಿ ಮಾಡುವುದು ಕಷ್ಟವಾಗುತ್ತದೆ.

ಅಂಥ ಒಳ್ಳೆಯ ಉದ್ದೇಶಗಳು ತಮಗೆ ಇವೆ ಎಂದು ಮುಖ್ಯಮಂತ್ರಿಗಳು ಮತ್ತು ಅವರ ಸಂಪುಟದಲ್ಲಿ ಇರುವ ಸಮರ್ಥ ಆಡಳಿತಗಾರರು ಎನಿಸಿರುವ ಸಚಿವರು ತೋರಿಸಿಕೊಡಬೇಕು. ಈಗ ನಡೆದಿರುವ ಬೇಕಾಬಿಟ್ಟಿ ವರ್ಗಾವಣೆಗೆ ಅವರು ಕಡಿವಾಣ ಹಾಕಬೇಕು. ನಾವೆಲ್ಲ ಸಜ್ಜನರು ಎಂದು ತಿಳಿದುಕೊಂಡಿರುವ ಸಚಿವರು ಕೂಡ ವರ್ಗಾವಣೆಯಲ್ಲಿ ದುಡ್ಡು ಮಾಡುತ್ತಿರುವುದು ಸಿದ್ದರಾಮಯ್ಯ ಅವರ ಗಮನಕ್ಕೂ ಬಂದಿರಬೇಕು. ಒಂದು ವೇಳೆ ಗಮನಿಸದೇ ಇದ್ದರೆ ವೀರೇಂದ್ರ ಪಾಟೀಲರು ಕ್ಷಮೆ ಕೇಳಿದ ಹಾಗೆಯೇ ಸಿದ್ದರಾಮಯ್ಯನವರೂ ಕೇಳುವ ಪ್ರಸಂಗ ಬಂದರೆ ಆಶ್ಚರ್ಯ ಪಡಬೇಕಿಲ್ಲ.ಮುಖ್ಯಮಂತ್ರಿಗಳು ಬಜೆಟ್ ಮೇಲಿನ ಚರ್ಚೆಗೆ ಉತ್ತರ ಕೊಡುವಾಗ ತಮ್ಮ ಕನಸಿನ ಕರ್ನಾಟಕದ ಕುರಿತು ಮಾತನಾಡಬೇಕಿತ್ತು. ಅವರು ದಾರಿ ತಪ್ಪಿದರು ಎನಿಸುತ್ತದೆ. ರಾಜಕೀಯದಲ್ಲಿ ಟಾಂಗು ಕೊಡುವ ಮಾತುಗಳು ಇರಲೇಬೇಕು. ಇದ್ದರೆ ಮಾತ್ರ ಅದಕ್ಕೆ ಒಂದಿಷ್ಟು ರುಚಿ ಇರುತ್ತದೆ. ಆದರೆ, ಅಂಥ ಮಾತುಗಳ ಬಾಣಗಳನ್ನು ಗಾಳಿಯಲ್ಲಿ ಬಿಟ್ಟು ಬಿಡಬೇಕು. ಯಾರಿಗೆ ಅವರು ಯಾವಾಗ ಹೋಗಿ ತಾಗಬೇಕೋ ಆಗ ತಾಗುತ್ತವೆ. ಎದುರು ಎದುರೇ ಅಂಥ ಬಾಣಗಳನ್ನು ಬಿಟ್ಟರೆ ಅವರು ತಕ್ಷಣ ತಿರುಗಿ ಬಂದು ನಮ್ಮನ್ನೇ ಗಾಸಿಗೊಳಿಸಿಬಿಡಬಹುದು.

ರಾಜಕೀಯದಲ್ಲಿ ಅಷ್ಟು ಅನುಭವಿಯಾಗಿರುವ ಸಿದ್ದರಾಮಯ್ಯ ಮೊನ್ನೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೊಬ್ಬರನ್ನೇ ಗುರಿಯಾಗಿ ಇಟ್ಟುಕೊಂಡು ಮಾತನಾಡಿದರು. ಅವರು ಯಡಿಯೂರಪ್ಪ ಅವರಿಗೆ ಬುದ್ಧಿ ಮಾತು ಹೇಳುವಾಗಲೂ ಅವರ ಗುರಿ ಕುಮಾರಸ್ವಾಮಿ ಮತ್ತು ದೇವೇಗೌಡರೇ ಆಗಿದ್ದರು. ಸಿದ್ದರಾಮಯ್ಯ ಬಿಟ್ಟ ಬಾಣ ಕೆಲವೇ ನಿಮಿಷಗಳಲ್ಲಿ ವಾಪಸು ಬಂತು. ಅದು ಆಗುವುದೇ ಹಾಗೆ. ಹೌದು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕಿತ್ತು. ಈಗ ಆಗಿದ್ದಾರೆ. ಹಿಂದೆ ಆಗಿದ್ದು ಆಗಿ ಹೋಯಿತು.

ಆಯಾ ಸಂದರ್ಭದಲ್ಲಿ ಏನೇನು ಆಗಬೇಕೋ ಅದು ಆಗುತ್ತದೆ. ಅದನ್ನು ತಡೆಯುವುದು ಕಷ್ಟ. ಹಳೆಯ ಗಾಯಗಳನ್ನು ಕೆದಕುತ್ತ ಹೋದರೆ ರಕ್ತ ಮತ್ತು ಕೀವು ಮಾತ್ರ ಹೊರಗೆ ಬರುತ್ತದೆಯೇ ಹೊರತು ಅಮೃತ ಅಲ್ಲ. ವೈಯಕ್ತಿಕ ಬಾಕಿಗಳನ್ನು ಚುಕ್ತಾ ಮಾಡಲು ನಿಂತರೆ ನಾವು ಒಂಟಿಯಾಗುತ್ತೇವೆ. ಮೊನ್ನೆ ಆಗಿದ್ದೂ ಅದೇ. ಇದನ್ನು ಕುಮಾರಸ್ವಾಮಿ ಅವರಿಗಿಂತ ಸಿದ್ದರಾಮಯ್ಯನವರೇ ಬೇಗ ತಿಳಿದುಕೊಳ್ಳಬೇಕು. ಏಕೆಂದರೆ ಜನರು ನಾಳೆ ಸಿದ್ದರಾಮಯ್ಯ ಅವರನ್ನೇ ಹೊಣೆಗಾರ ಎಂದು ಭಾವಿಸುತ್ತಾರೆ; ಕುಮಾರಸ್ವಾಮಿಯವರನ್ನು ಅಲ್ಲ.

Post Comments (+)