ವೃದ್ಧರ ಸಹಾಯಕ್ಕೆ ಬರುತ್ತಿರುವ ಹೊಸ ಕಾನೂನು

7

ವೃದ್ಧರ ಸಹಾಯಕ್ಕೆ ಬರುತ್ತಿರುವ ಹೊಸ ಕಾನೂನು

ಎಸ್.ಆರ್. ರಾಮಕೃಷ್ಣ
Published:
Updated:

 


ಹಿರಿಯರ ಕ್ಷೇಮ ಕಾಯಲು 2007ರಲ್ಲಿ ಕೇಂದ್ರ ಸರ್ಕಾರ ಒಂದು ಕಾನೂನನ್ನು ಮಾಡಿತು.ಕರ್ನಾಟಕದಲ್ಲಿ 2009ರಲ್ಲಿ ಜಾರಿಗೆ ಬಂದ ಈ ಕಾನೂನು 60 ವರ್ಷಕ್ಕೂ ಮೇಲ್ಪಟ್ಟವರು ಮಕ್ಕಳಿಂದ ತಿಂಗಳಿಗೆ ರೂ. 10,000ದ ವರೆಗೂ ಧನಸಹಾಯ ಪಡೆಯಲು ನೆರವಾಗುತ್ತದೆ. ಸಿವಿಲ್ ಕೇಸ್‌ಗಳು ವರ್ಷಗಟ್ಟಲೆ ನಡೆಯುತ್ತವೆ. ಆದರೆ ಈ ಕಾನೂನಿನ ಅಡಿಯಲ್ಲಿ ಹಾಕಿದ ಕೇಸ್‌ಗಳು 90 ದಿನಗಳ ಒಳಗೆ ನಿರ್ಧಾರವಾಗುತ್ತವೆ.

 

ಹಿರಿಯರ ಪರವಾದ ಈ ಕಾನೂನು ಹೇಗೆ ಅನುಷ್ಠಾನವಾಗುತ್ತಿದೆ ಎಂದು ವರದಿ ಮಾಡಲು ಹೋರಟ ಪತ್ರಕರ್ತೆ ಮಾರ್ಗೋ ಕೋಹೆನ್ ಹಲವು ಆಶ್ಚರ್ಯದ ವಿಷಯಗಳನ್ನು ಹೆಕ್ಕಿ ತೆಗೆದಿದ್ದಾರೆ.ವಾಲ್ ಸ್ಟ್ರೀಟ್ ಜರ್ನಲ್ ನಂಥ ದೊಡ್ಡ ವಿದೇಶಿ ಪತ್ರಿಕೆಗಳಿಗೆ ಭಾರತದಿಂದ ವರದಿ ಮಾಡಿ ಅನುಭವವಿರುವ ಮಾರ್ಗೋ ಈ ವಿಷಯದ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಕೊಡಗು, ಮೈಸೂರು ಮತ್ತು ಬೆಂಗಳೂರಿನ ಹಲವೆಡೆ ಸುತ್ತಾಡಿ ಬಂದಿದ್ದಾರೆ.

 

ಅವರು ಕಂಡದ್ದು: ಮೂರು ವರ್ಷದಲ್ಲಿ ಕರ್ನಾಟಕದಲ್ಲಿ ದಾಖಲಾಗಿರುವ ಕೇಸ್‌ಗಳ ಸಂಖ್ಯೆ 80. ಅಂದರೆ ಸರಾಸರಿ ವರ್ಷಕ್ಕೆ 30ಕ್ಕಿಂತ ಕಡಿಮೆ. ಇವುಗಳಲ್ಲಿ 26 ಪ್ರಕರಣಗಳು ಇತ್ಯರ್ಥವಾಗಿವೆ.ಮಿಕ್ಕ ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿವೆ. ಈ ಕಾನೂನಿನಡಿ ಕೇಸ್ ದಾಖಲಿಸಲು ವಕೀಲರು ಬೇಕಾಗಿಲ್ಲ. ವಕೀಲರಿಲ್ಲದೆಯೇ ಇಂಥ ವಿವಾದಗಳು ತೀರ್ಮಾನವಾಗಬೇಕು ಎಂಬುದು ಕಾನೂನಿನ ಒತ್ತಾಸೆ. ಕೊಡಗಿನ ಒಬ್ಬರು ನಾಲ್ಕು ಗಂಡು ಮಕ್ಕಳಿಗೆ ತಮ್ಮ ಎಸ್ಟೇಟ್ ಬರೆದು ಕೊಟ್ಟ ಮೇಲೆ ಎಲ್ಲರೂ ಇವರನ್ನು ಕಡೆಗಣಿಸಿ ಬೇರೆ ಊರುಗಳಿಗೆ ಹೋಗಿ ನೆಲೆಸಿಬಿಟ್ಟರಂತೆ. ತಾಯಿಗೆ 86 ವರ್ಷ. ಆರ್ಥ್ರೈಟಿಸ್ ಮತ್ತು ಇತರ ಆರೋಗ್ಯದ ತೊಂದರೆಗಳಿಂದ ಬಳಲುತ್ತಿರುವ ಇವರು ಈ ಹೊಸ ಕಾನೂನಿನ ಸಹಾಯದಿಂದ ಬರುತ್ತಿರುವ ದುಡ್ಡಿನಲ್ಲಿ ಈಗ ಜೀವನ ಸಾಗಿಸುತ್ತಿದ್ದಾರೆ. ಅನುಕೂಲಸ್ಥ ಮಕ್ಕಳಿಂದ ಹಣ ಪಡೆಯುವುದು ಇಷ್ಟು ಕಷ್ಟ ಎಂದು ಅವರು ಊಹಿಸಿಯೇ ಇರಲಿಲ್ಲವಂತೆ.

 

ಆದರೆ ಎಲ್ಲ ಪ್ರಕರಣಗಳೂ ಹೀಗಿರುವುದಿಲ್ಲ. ಬೆಂಗಳೂರಿನಲ್ಲಿ ವಾಸವಾಗಿರುವ 53 ವರ್ಷದವರೊಬ್ಬರು ತಮ್ಮ ತಂದೆ ಹಾಕಿರುವ ಕೇಸ್ ಬಗ್ಗೆ ಜಿಗುಪ್ಸೆ ಪಟ್ಟುಕೊಳ್ಳುತ್ತಾರೆ. ತಮಗೆ ಎರಡು ವರ್ಷವಾಗಿದ್ದಾಗಿನಿಂದ ಕಿರುಕುಳ ಕೊಟ್ಟ ತಂದೆ ಈಗ ದುಡ್ಡು ಕೇಳಬಹುದೇ ಎಂದು ಪ್ರಶ್ನಿಸುತ್ತಾರೆ. ಕೋರ್ಟಿಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಇದ್ದ ಭೂಮಿಯನ್ನೆಲ್ಲಾ ಕುಡಿಯುವುದಕ್ಕೆ ಮಾರಿದ ತಂದೆ ಇವರನ್ನು ಮತ್ತು ಇವರ ತಾಯಿಯನ್ನು ಕೆಟ್ಟದಾಗಿ ನಡೆಸಿಕೊಂಡರಂತೆ. ಹಿಂಸೆ ತಡೆಯಲಾರದೆ ಹೆಂಡತಿ ಮಕ್ಕಳ ಜೊತೆ ಗಂಟು ಮೂಟೆ ಕಟ್ಟಿಕೊಂಡು ಊರು ಬಿಟ್ಟು ಇವರು ಬಂದು ಬಿಟ್ಟಿದ್ದಾರೆ. ಎಂದೂ ಮನೆಯವರ ಬಗ್ಗೆ ಕಾಳಜಿ ತೋರದ, ಅವಕಾಶ ಸಿಕ್ಕಾಗಲೆಲ್ಲ ಹೊಡೆಯುತ್ತಿದ್ದ ತಂದೆ ಇಂದು ಧನ ಸಹಾಯ ನಿರೀಕ್ಷೆ ಮಾಡುತ್ತಿದ್ದಾರೆ. ಕೇಸ್ ಹಾಕಿದ್ದಾರೆ. ಅತ್ತೆ-ಸೊಸೆ, ಸೋದರ-ಸೋದರಿಯರ ಜಗಳಗಳೂ ಇಂಥ ಪ್ರಕರಣಗಳ ಮುಖಾಂತರ ನ್ಯಾಯಾಲಗಳ ಗಮನಕ್ಕೆ ಬರುತ್ತವೆ. 

 

ಮಾರ್ಗೋ ಹೇಳುವಂತೆ, ಕೊಡಗಿನಲ್ಲಿ ಈ ಹೊಸ ಕಾನೂನಿನಡಿ ಪ್ರಕರಣಗಳು ಹೆಚ್ಚಾಗಿ ದಾಖಲಾಗಲು ಕಾರಣ ಅಲ್ಲಿನ ಸೀನಿಯರ್ ಸಿಟಿಜನ್ಸ್ ಫೋರಮ್ ಮತ್ತು ಹಿರಿಯರ ಬಗ್ಗೆ ಸಹಾನುಭೂತಿ ಇರುವ ಅಧಿಕಾರಿ. ಈ ಸಂಸ್ಥೆ ಕಾರ್ಯಾಗಾರವೊಂದನ್ನು ನಡೆಸಿ ಹಿರಿಯರಲ್ಲಿ ಅರಿವು ಮೂಡಿಸಿದ ಮೇಲೆ ಅಸಿಸ್ಟೆಂಟ್ ಕಮಿಷನರ್ ಡಾ. ಎಂ.ಆರ್. ರವಿ. ಇವರು ಈಗ ಮೈಸೂರಿನಲ್ಲಿದ್ದಾರೆ. ಕೊಡಗಿನಲ್ಲಿ ಮಕ್ಕಳು ಎಸ್ಟೇಟ್ ಪಡೆದ ಮೇಲೆ ಬೆಂಗಳೂರು, ಮೈಸೂರು, ಮಂಗಳೂರಿಗೆ ಹೋಗಿ ಹಿರಿಯರನ್ನು ನಿರ್ಲಕ್ಷಿಸುವುದು ಸಾಮಾನ್ಯವಾಗಿರುವುದನ್ನು ಕಂಡ ಅವರು ಹಲವರಿಗೆ ನೆರವಾಗಿದ್ದಾರೆ. ಆ ಜಿಲ್ಲೆಯಲ್ಲಿ 27 ಪ್ರಕರಣಗಳು ದಾಖಲಾಗಿವೆ. ಆದರೆ ಕೇಸ್ ಹಾಕುವುದೊಂದೇ ದಾರಿಯಲ್ಲ. ಪಂಚಾಯ್ತಿ ಮಾಡಿಯೂ ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಕಾನೂನು ಹೇಳುತ್ತದೆ. 

 

ಎಷ್ಟೇ ಕೊಪವಿದ್ದರೂ ಮಕ್ಕಳ ಮೇಲೆ ಕೇಸ್ ಹಾಕುವುದು ವೃದ್ಧರನೇಕರಿಗೆ ವಿಷಾದದ, ಇರುಸು ಮುರುಸಿನ ವಿಷಯ. ಬಂಧು ಬಳಗ ಏನಂದುಕೊಳ್ಳುತ್ತಾರೋ ಎಂಬ ಆತಂಕ ಬೇರೆ. ಮಕ್ಕಳನ್ನು ತಾವೇ ಸರಿಯಾಗಿ ಬೆಳೆಸಿಲ್ಲ ಎಂಬ ಮಾತಿಗೆ ಗುರಿಯಾಗಬಹುದು ಎಂಬ ದಿಗಿಲು. ಇಂಥ ಕಾರಣಗಳಿಗೆ ಹೆದರಿ ಬೆಂಗಳೂರಿನ ಹಲವರು ಕೋರ್ಟ್ ಮೆಟ್ಟಿಲೇರಲು ಹಿಂಜರಿಯುತ್ತಾರೆ. ಆಹಾರ ಔಷಧಿಯ ಬೆಲೆ ಹೆಚ್ಚಾದಂತೆ ಅಸಹಾಯಕರಾಗುತ್ತಾರೆ, ಮೌನವಾಗುತ್ತಾರೆ. ಹಕ್ಕಿನ ಬಗ್ಗೆ ಅರಿವು ಹೆಚ್ಚಾದರೆ ಈ ಧೋರಣೆ ಬದಲಾಗುತ್ತದೆ ಎಂಬುದು ಹಿರಿಯರ ಸಂಸ್ಥೆಗಳನ್ನು ನಡೆಸುವವರ ಅಭಿಪ್ರಾಯ. 

 

ಈ ಕಾನೂನಿನ (Maintenance of Parents and Senior Citizens Act) ಸಹಾಯ ಪಡೆಯಲು ಇಚ್ಚಿಸುವವರು ಕೆಂಪೇ ಗೌಡ ರಸ್ತೆಯಲ್ಲಿರುವ ಕಂದಾಯ ಭವನದಲ್ಲಿ ಸಂಪರ್ಕಿಸಬಹುದು.ಬೆಂಗಳೂರು ದಕ್ಷಿಣ: acbloresouth@gmail.com ಬೆಂಗಳೂರು ಉತ್ತರ: acnorthblr@gmail.com  ದೂರವಾಣಿ: 2210 0056. 

 

ಅದಲು ಬದಲಾದ ರವಿ ಶಂಕರ್ ಚಿತ್ರ 

ಪಂಡಿತ್ ರವಿ ಶಂಕರ್ ನಿಧನರಾದಾಗ ಎಂ ಟಿವಿ ಮತ್ತು ಫಾಕ್ಸ್ ನ್ಯೂಸ್ ನಂಥ ಎಷ್ಟೋ ಮಾಧ್ಯಮ ಸಂಸ್ಥೆಗಳು ಶ್ರೀ ಶ್ರೀ ರವಿ ಶಂಕರ್ ಚಿತ್ರವನ್ನು ಪ್ರಕಟಿಸಿದ್ದು ನೀವು ಗಮನಿಸಿರಬಹುದು. ಇದೇನಿದು?ಪ್ರಪಂಚದ ಅತಿ ದೊಡ್ಡ ಸಂಗೀತಗಾರರಲ್ಲಿ ಒಬ್ಬರಾದ ಪಂಡಿತ್ ರವಿ ಶಂಕರ್ ಅವರ ಮುಖವೇ ಮಾಧ್ಯಮದ ಎಷ್ಟೋ ಮಂದಿಗೆ ಗೊತ್ತಿಲ್ಲವೇ ಎಂದು ಬೇಸರ ಪಟ್ಟುಕೊಂಡವರಲ್ಲಿ ನಾನೂ ಒಬ್ಬ.ಆದರೆ ಆಶಾವಾದದ ಪಾಠವೊಂದನ್ನು ನೀವು ಕೇಳಿರಬಹುದು. ಗ್ಲಾಸ್ ಅರ್ಧ ಖಾಲಿ ಇದೆ ಎಂದು ನೋಡುವುದಕ್ಕಿಂತ ಅರ್ಧ ತುಂಬಿದೆ ಎಂದು ನೋಡಬೇಕಂತೆ. ಭಾರತೀಯ ಸಂಗೀತವನ್ನು ಪ್ರಪಂಚಕ್ಕೆ ಪರಿಚಯಿಸಿದ ಮೇರು ಕಲಾವಿದ ರವಿ ಶಂಕರ್ ಬಗ್ಗೆ ಜನರಿಗೆ ಗೊತ್ತಿಲ್ಲ ಎಂದು ತಲೆ ಕೆಡಿಸಿಕೊಳ್ಳುವುದರ ಬದಲು, ದೊಡ್ಡ ಭಿತ್ತಿಗಳಲ್ಲಿ ಆಗಾಗ ಕಾಣಿಸಿಕೊಳ್ಳುವ, ಪಿ.ಆರ್. ಪ್ರೇಮಿ ಬಾಬಾಗಳನ್ನೂ ಎಷ್ಟೋ ಮಂದಿ ಗುರುತಿಸುತ್ತಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳಿ. ಸಂಸ್ಕೃತಿಯ ಬಗ್ಗೆ ಅಸಡ್ಡೆ ಹೆಚ್ಚಾಗಿದೆ ಎಂದು ಭಾಷಣ ಬಿಗಿಯುವ ಮೊದಲು ಕಲೆಯ ಬಗೆಗಿನ ಅಸಡ್ಡೆ ಸುದ್ದಿ ಮಾಧ್ಯಮಗಳಲ್ಲಿ ಎಷ್ಟು ಸಾಮಾನ್ಯ ಮತ್ತು ಫ್ಯಾಷನಬಲ್ ಎಂದು ಮೊದಲು ಅರಿಯೋಣ. ಎಷ್ಟೋ ದೊಡ್ಡ ಪತ್ರಿಕೆಗಳಲ್ಲಿ ಇಂದು ಸಂಗೀತ ವಿಮರ್ಶೆಗೆ ಸ್ಥಳಾವಕಾಶವಿಲ್ಲ. ನಾನು ಕೆಲಸ ಮಾಡುತ್ತಿದ್ದ ಪತ್ರಿಕೆಯೊಂದರಲ್ಲಿ ಒಮ್ಮೆ ಸಂತೂರ್ ವಾದಕ ಶಿವಕುಮಾರ್ ಶರ್ಮ ಅವರ ಭಾವಚಿತ್ರ ಬೇಕು ಎಂದು ಅಲ್ಲಿನ ಗ್ರಂಥಾಲಯ ವಿಭಾಗದ ಅನುಭವಸ್ಥರೊಬ್ಬರನ್ನು ಕೇಳಿದೆ. ಅವರು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರ ಚಿತ್ರವನ್ನು ತಂದು ಟೇಬಲ್ ಮೇಲೆ ಇಟ್ಟು ಮನೆಗೆ ಹೊರಟುಹೋದರು. ಮುದ್ರಣಕ್ಕೆ ಕಳಿಸುವ ಸಮಯ ಆಗಿಹೋಗಿತ್ತು. ಇದೇನು ಸಂತೂರ್ ವಾದಕರ ಚಿತ್ರ ಕೇಳಿದರೆ ರಾಜಕೀಯದವರ ಚಿತ್ರ ಕೊಟ್ಟಿದ್ದಾರೆ ಎಂದು ನಾನು ಗಾಬರಿಯಾಗಿ ಕೇಳಿದಾಗ ಸಹ ಪತ್ರಕರ್ತರು ಸಮಾಧಾನ ಹೇಳಿದರು: `ನೀವು ಸಂತೂರ್ ಕೇಳಿದಿರಿ, ಅವರು ಸಾತನೂರ್ ಕೊಟ್ಟರು ಅಷ್ಟೇ.' ಎಂದಾದರೂ, ಯಾವುದಾದರೂ ಪತ್ರಿಕೆಯಲ್ಲಿ `ಹೆಸರಾಂತ ಸಂತೂರ್ ವಾದಕ' ಎಂಬ ಬರಹದಡಿ ರಿಯಲ್ ಎಸ್ಟೇಟ್ ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರ ಫೋಟೋ ಪ್ರಕಟವಾದರೆ ಅಂಥ ಪ್ರಮಾದ ಹೇಗಾಗುತ್ತದೆ ಎಂದು ನಿಮಗೆ ಗೊತ್ತಿರಲಿ! 

 

್ಢ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry