ಶುಕ್ರವಾರ, ನವೆಂಬರ್ 22, 2019
22 °C

ವೈದ್ಯರೂ ಮನುಷ್ಯರೇ...

ಡಾ. ಆಶಾ ಬೆನಕಪ್ಪ
Published:
Updated:
ವೈದ್ಯರೂ ಮನುಷ್ಯರೇ...

ಮೂವತ್ತು ವರ್ಷದ `ಡಾ. ಎ' ಮತ್ತು `ಡಾ.ಬಿ' ಅವಳಿ ಮಕ್ಕಳು. ಶಿಶುವೈದ್ಯರಾಗಿರುವ ಈ ಸೋದರಿಯರು ನನ್ನ ಹಳೆಯ ಸ್ನಾತಕೋತ್ತರ ವಿದ್ಯಾರ್ಥಿಗಳು ಕೂಡ.ತದ್ರೂಪಿ ಹೆಣ್ಣುಮಕ್ಕಳ ಜನನವನ್ನು ಆ ಕುಟುಂಬ ಅದ್ದೂರಿಯಾಗಿ ಸಂಭ್ರಮಿಸಿತ್ತು. ಮೂವತ್ತು ವರ್ಷದ ಹಿಂದೆ ಅವಳಿ ಮಕ್ಕಳ ಜನನ ಸಾಮಾನ್ಯ ಸಂಗತಿಯಾಗಿರಲಿಲ್ಲ. ಕಳೆದ 25 ವರ್ಷದಿಂದ ಬಂಜೆತನ ಚಿಕಿತ್ಸೆಗೆ ಒಳಗಾಗುತ್ತಿರುವ ಮಹಿಳೆಯರು ಹೆಚ್ಚುತ್ತಿರುವುದರಿಂದಾಗಿ, ಇತ್ತೀಚಿನ ದಿನಗಳಲ್ಲಿ ಅವಳಿ ಮಕ್ಕಳ ಜನನ ಪ್ರಮಾಣ ಅಂದಾಜು ಶೇ 67ರಷ್ಟು ಹೆಚ್ಚಾಗಿದೆ. ಆಧುನಿಕ ಯುಗದ ಒತ್ತಡ ಮತ್ತು ಆಯಾಸದ ಬದುಕು ಸಹಜ ಗರ್ಭಧಾರಣೆಯನ್ನು ಕಷ್ಟವಾಗಿಸಿದೆ.ಮೊದಲ ಗಂಡು ಮಗುವಿನ ಬಳಿಕ ಈ ಅವಳಿ ಮಕ್ಕಳ ಜನನದಿಂದ ಕುಟುಂಬ ತುಂಬಿಕೊಂಡಿತು. ಪೋಷಕರು ಮತ್ತು ಅವರ ಅಣ್ಣ ಈ ಮುದ್ದಾದ ಹೆಣ್ಣುಮಕ್ಕಳನ್ನು ಚೆನ್ನಾಗಿ ಬೆಳೆಸುವುದರಲ್ಲಿ ಸಂತೋಷ ಕಂಡಿದ್ದರು. ಈ ಹೆಣ್ಣುಮಕ್ಕಳು ಬುದ್ಧಿವಂತರು. ಅವರು 15 ವರ್ಷದವರಿದ್ದಾಗ ಅವರ ತಂದೆ ನಿದ್ದೆಯಲ್ಲಿಯೇ ತೀರಿಕೊಂಡರು.ರಾತ್ರಿ ತಮ್ಮಂದಿಗೆ ಕೂತು ಊಟ ಮಾಡಿದ ಅಪ್ಪನ ಆಕಸ್ಮಿಕ ಸಾವು ಮಕ್ಕಳಿಗೆ ಆಘಾತ ತಂದಿತು. ಮಧ್ಯರಾತ್ರಿ ವೇಳೆಗೆ ಅವರ ದೇಹ ಮಂಜಿನಂತೆ ತಣ್ಣಗಾಗಿದ್ದನ್ನು ನೋಡಿ ಆಘಾತಕ್ಕೊಳಗಾದ ತಾಯಿ ಮಕ್ಕಳನ್ನು ಕೂಗಿಕೊಂಡರು. ಈ ಅಂತ್ಯವನ್ನು ಅರಗಿಸಿಕೊಳ್ಳಲು ಕುಟುಂಬಕ್ಕೆ ಬಹುಕಾಲ ಬೇಕಾಯಿತು. ಆಗ 10ನೇ ತರಗತಿ ಓದುತ್ತಿದ್ದ ಈ ಅವಳಿ ಮಕ್ಕಳು ಮತ್ತಷ್ಟು ಕಷ್ಟಪಟ್ಟು ಓದಿ ವೈದ್ಯರಾಗಬೇಕೆಂದು ನಿರ್ಧರಿಸಿದರು. ತಮ್ಮ ಕುಟುಂಬದಲ್ಲಿ ಯರಾದರೂ ವೈದ್ಯರಿದ್ದರೆ ತಂದೆ ಬದುಕುಳಿಯುತ್ತಿದ್ದರು ಎಂಬ ಭಾವನೆ ಅವರಲ್ಲಿ ಮೂಡಿತ್ತು.ಉನ್ನತ ಶ್ರೇಣಿ ಪಡೆದ ಇಬ್ಬರೂ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯನ್ನು ಸೇರಿಕೊಂಡರು. ಕರ್ನಾಟಕದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿರುವ ಈ ಕಾಲೇಜಿನಲ್ಲಿ ಮೊದಲ ನೂರು ರ‍್ಯಾಂಕ್ ಪಡೆದವರು ಮಾತ್ರ ಸೀಟು ಗಿಟ್ಟಿಸಿಕೊಳ್ಳುತ್ತಾರೆ. ಒಟ್ಟಿಗೆ ಓದುವ ಅವಕಾಶ ಪಡೆದ ಈ ಹೆಣ್ಣುಮಕ್ಕಳು ತಮ್ಮ ವೈದ್ಯಕೀಯ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರೈಸಿದರು.ವೈದ್ಯಕೀಯ ಕೋರ್ಸ್ ತುಂಬಾ ಕಠಿಣ ಪರಿಶ್ರಮ ಬೇಡುವ ಕಷ್ಟಕರ ಕೋರ್ಸ್‌ಗಳಲ್ಲಿ ಒಂದು. ಆಂತರಿಕ ಪರೀಕ್ಷೆ, ಥಿಯರಿ/ಪ್ರಾಕ್ಟಿಕಲ್ ಮೌಲ್ಯಮಾಪನ, ಮುಖ್ಯ ಪರೀಕ್ಷೆಗಳು, ಮತ್ತೆ ಥಿಯರಿ/ಪ್ರಾಕ್ಟಿಕಲ್ ಮತ್ತು ಈ ವರ್ಷಗಳಲ್ಲಿ ಔಷಧೀಯ, ಒಬಿಜಿ, ಶಿಶುವೈದ್ಯ ಶಸ್ತ್ರಚಿಕಿತ್ಸೆ ಮತ್ತು ಮೂಳೆಚಿಕಿತ್ಸೆಯಂಥ ನಾಲ್ಕು ಪ್ರಮುಖ ಮತ್ತು ನಾಲ್ಕು ಲಘು ವಿಷಯಗಳನ್ನು ಅಭ್ಯಸಿಸಬೇಕಾಗುತ್ತದೆ. ಬಹು ವಿಶಾಲವಾದ ಈ ವಿಷಯಗಳನ್ನು ಸ್ವತಃ ಓದಿನ ಮೂಲಕವೇ ಸಂಪೂರ್ಣಗೊಳಿಸಬೇಕಾಗುತ್ತದೆ. ಪ್ರತಿ ಪುಸ್ತಕವೂ 2ರಿಂದ 5 ಕೆ.ಜಿ.ಯಷ್ಟು ತೂಕವಿರುತ್ತದೆ.ಪುಟ ಸಂಖ್ಯೆ ಕುರಿತು ಹೇಳದಿರುವುದೇ ಒಳಿತು. ಎಂಬಿಬಿಎಸ್ ಓದುವ ಮಕ್ಕಳಿಗೆ ನಿಜಕ್ಕೂ ಯಾವ ಮೋಜೂ ಇರುವುದಿಲ್ಲ. ಬೇರೆ ಕೋರ್ಸ್ ಓದುವ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸಂಭ್ರಮಿಸುತ್ತಿದ್ದರೆ ಈ ಮಕ್ಕಳು ಯೌವನದ ಅಮೂಲ್ಯ ಕ್ಷಣಗಳನ್ನು ತ್ಯಾಗಮಾಡುತ್ತಾರೆ.ನಮ್ಮ ಆ ದಿನಗಳನ್ನು ಪುಸ್ತಕಗಳ ಹಿಂದೆ, ಆಸ್ಪತ್ರೆ, ಚೇತರಿಸಿಕೊಳ್ಳುತ್ತಿರುವ, ಆರೋಗ್ಯ ಮತ್ತಷ್ಟು ಕೆಡುತ್ತಿರುವ ಅಥವಾ ಸಾಯುತ್ತಿರುವ ರೋಗಿಗಳ ನಡುವೆ ನಾವು ಕಳೆದಿದ್ದೆವು. ಬದುಕಿನ ವಾಸ್ತವಗಳ ಈ ನಿತ್ಯದ ಪಂದ್ಯವನ್ನು ಎದುರಿಸಲು ನಮ್ಮ ಭಾವನೆಗಳು ಮತ್ತು ಮನಸ್ಸು ತುಂಬಾ ಗಟ್ಟಿಯಾಗಿರಬೇಕು. ಹೆಚ್ಚಿನವರು ಹೇಗೋ ನಡೆಸಿಕೊಂಡು ಹೋದರೆ, ಕೆಲವರು ಬದ್ಧರಾಗಿ ಅಂಟಿಕೊಳ್ಳುತ್ತಾರೆ. ಇನ್ನು ಹಲವರು ಮಧ್ಯದಲ್ಲೇ  ಕೋರ್ಸ್ ತ್ಯಜಿಸುತ್ತಾರೆ.`ಎ' ಮತ್ತು `ಬಿ' ಇಬ್ಬರೂ ತಂದೆಯ ಸಾವಿನ ಕಾರಣದಿಂದ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿ ಸಮುದಾಯದ ಸೇವೆಯ ಒಂದೇ ಗುರಿಯನ್ನು ಹೊತ್ತುಕೊಂಡು ಕೋರ್ಸ್ ಮುಂದುವರಿಸಿದರು. ಇಂಟರ್ನ್‌ಶಿಪ್‌ನ ಅವಧಿಯುದ್ದಕ್ಕೂ ಕಠಿಣ ಓದಿನ ನಿರ್ಧಾರ ಮಾಡಿಕೊಂಡಿದ್ದ ಈ ಹೆಣ್ಣುಮಕ್ಕಳು ಸ್ನಾತಕೋತ್ತರ ಪದವಿ ಪ್ರವೇಶವನ್ನೂ ಪಡೆದುಕೊಂಡರು. ಫಲಿತಾಂಶ ಪ್ರಕಟಿಸಿದಾಗ ಅದನ್ನವರು ನಂಬದಾದರು. ಏಕೆಂದರೆ ಇಬ್ಬರೂ ಒಂದೇ ಕಾಲೇಜಿನಲ್ಲಿ (ಬಿಎಂಸಿಆರ್‌ಐ) ಶಿಶುವೈದ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಸೀಟು ಪಡೆದಿದ್ದರು.

ಪ್ರತ್ಯೇಕಿಸಲಾಗದಷ್ಟು ಈ ಅವಳಿ ಮಕ್ಕಳು ಪರಸ್ಪರ ಹಚ್ಚಿಕೊಂಡಿದ್ದರು.ಸದಾ ಒಟ್ಟಿಗೆ ಇರುತ್ತಿದ್ದರು. ಬೇರ್ಪಡಿಸುವಿಕೆ ಎಂದರೆ ದುರ್ಘಟನೆಯೇ ಸರಿ. ಪಿಜಿ ಕೋರ್ಸ್‌ಗೆ ದಾಖಲಾಗುವ ಕೆಲವೇ ಹೊತ್ತಿಗೆ ಮುನ್ನ ಅವರಲ್ಲಿ ತುಸು ಹಿರಿಯಳಾದ `ಎ' ಇದ್ದಕ್ಕಿದ್ದಂತೆ ಅಶಕ್ತಳಾದಳು. ಪರೀಕ್ಷೆಗಾಗಿ ನಡೆಸಿದ ಅಭ್ಯಾಸದ ಕಾರಣದಿಂದ ಉಂಟಾದ ಆಯಾಸದಿಂದ ಬಸವಳಿದು ಮೂರ್ಛೆ ಹೋದಂತಾದಳು. ಕೆಲವು ದಿನಗಳ ಬಳಿಕ ಬಿಗಿ ಉಸಿರು, ಎದೆ ನೋವು ಮತ್ತು ಕಿಬ್ಬೊಟ್ಟೆ ನೋವುಗಳೊಂದಿಗೆ ಈ ಸಮಸ್ಯೆ ಪುನರಾವರ್ತಿಸಿತು.ಆಕೆಗೆ ಸಾವಿನ ಸನಿಹದಲ್ಲಿರುವ ಕಾರ್ಡಿಯೊಮಯೊಪಥಿ ಎಂಬ ಹೃದಯ ಕಾಯಿಲೆ ಇರುವುದು ಪತ್ತೆಯಾಯಿತು. ಆಗ ಆಕೆಗೆ 25 ವರ್ಷ. ಒಂದು ತಿಂಗಳ ಬಳಿಕ `ಬಿ'ನಲ್ಲಿಯೂ ಇದೇ ಲಕ್ಷಣಗಳು ಕಾಣಿಸತೊಡಗಿತು. ಆಕೆಯಲ್ಲಿಯೂ ಇದೇ ರೋಗ ಪತ್ತೆಯಾಯಿತು. ಈ ಅವಳಿಗಳು ಸದಾ ಒಬ್ಬರನ್ನೊಬ್ಬರು ಅನುಸರಿಸುತ್ತಿದ್ದವರು. ಕುಟುಂಬ ಅವಲಂಬಿತವಾಗಿದ್ದ ಈ ಪ್ರತಿಭಾವಂತ ಹೆಣ್ಣುಮಕ್ಕಳು ಕಾರ್ಡಿಯೊಮಯೊಪಥಿ ಎಂಬ ಕಾಯಿಲೆಯ ಹೆಚ್ಚೂಕಡಿಮೆ ನಿರ್ಣಾಯಕ ಪರಿಸ್ಥಿತಿಯಲ್ಲಿ ಸಿಲುಕಿದಾಗ ಆ ಕುಟುಂಬದ ಸ್ಥಿತಿ ಹೇಗಿರಬಹುದು ಊಹಿಸಿಕೊಳ್ಳಿ.ಶಿಶುವೈದ್ಯ ಸ್ನಾತಕೋತ್ತರ ಕೋರ್ಸ್ ಅವಧಿ ತುಂಬಾ ಕಠಿಣ. ವಾರಕ್ಕೆ 2-3 ರಾತ್ರಿ ಪಾಳಿ, ಅಂದರೆ 36 ಗಂಟೆಗೂ ಅಧಿಕ ಕಾಲ ಎಚ್ಚರದಿಂದ ಇರಬೇಕಾಗುತ್ತದೆ. ಶಿಶುವೈದ್ಯಕೀಯದ ತುರ್ತುಪರಿಸ್ಥಿತಿ ಸನ್ನಿವೇಶಗಳು ಕಾರಣ ತಿಳಿಯದಿದ್ದರೂ ರಾತ್ರಿ ವೇಳೆಯೇ ಉದ್ಭವಿಸುವುದು. ಇದರಿಂದಲೇ ಸಾವುಗಳು ಸಹ ಹೆಚ್ಚು ಸಂಭವಿಸುವುದು (ಮುಖ್ಯವಾಗಿ ಕಾಯಿಲೆ ಅಂತಿಮ ಹಂತದಲ್ಲಿದ್ದಾಗ ಆಸ್ಪತ್ರೆಗೆ ಬರುವ ಬಡವರಲ್ಲಿ ಇದು ಹೆಚ್ಚು). ಹೆಚ್ಚೂ ಕಡಿಮೆ ನಮ್ಮ ಜೈವಿಕ ಗಡಿಯಾರ ಮತ್ತೆ ಮತ್ತೆ ಸಂಯೋಜನೆಯಾಗುತ್ತಲೇ ಇರಬೇಕಾಗುತ್ತದೆ.ಜೈವಿಕ ಗಡಿಯಾರ ಅಥವಾ ಆಂತರಿಕ ಗಡಿಯಾರ ನಮ್ಮ ದೇಹದೊಳಗಿನ ಗಡಿಯಾರ. ನನ್ನ ಸ್ನಾತಕೋತ್ತರ ವಿದ್ಯಾರ್ಥಿ ದೆಸೆಯಲ್ಲಿ ರಾತ್ರಿ 10ರಿಂದ 2 ಗಂಟೆವರೆಗೆ ಅಧ್ಯಯನಕ್ಕೆ ವಿನಿಯೋಗಿಸುತ್ತಿದ್ದೆ. ಇಂದಿಗೂ ನನ್ನ ದೇಹ ಆ ವೇಳೆಗಿಂತ ಮೊದಲು ಮಲಗುವುದಕ್ಕೆ ನಿರಾಕರಿಸುತ್ತದೆ. ವಯಸ್ಸಾದಂತೆ ನಾನು ನನ್ನ ಗಡಿಯಾರವನ್ನು ಪುನರ್ ಸಂಯೋಜನೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ನಮ್ಮನ್ನು ಗೂಬೆಗಳೆಂದು ಮತ್ತು ಬೆಳಿಗ್ಗೆ ಬೇಗನೆ ಏಳುವ ಜನರನ್ನು ಬಾನಾಡಿಗಳೆಂದೂ ಕರೆಯುತ್ತಾರೆ.ಶಿಶುವಿಭಾಗದ ತೀವ್ರ ನಿಗಾ ಘಟಕಕ್ಕೆ ನಿಯೋಜನೆಗೊಂಡಿದ್ದ ದಿನ `ಡಾ. ಎ' ಅಲ್ಲಿನ ವಿದ್ಯುತ್ ಗ್ಯಾಜೆಟ್‌ಗಳೊಂದಿಗೆ ಕೆಲಸಮಾಡುವಾಗ  ತಲೆತಿರುಗಿ ಮೂರ್ಛೆ ಹೋಗಿದ್ದಳು. ತಕ್ಷಣವೇ ಆಕೆಯನ್ನು ನನ್ನ ವಿದ್ಯಾರ್ಥಿ ಡಾ. ವಾಸೀಮುದ್ದಿನ್ ಕಾರ್ಪೊರೇಟ್ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು.`ಡಾ. ಬಿ' ಆಕೆಯನ್ನು ಹಿಂಬಾಲಿಸಿದಳು. ಇದಾದ ಬಳಿಕವಷ್ಟೇ ಈ ಅವಳಿ ಸಹೋದರಿಯರಿಗೆ ಆಗಲೇ ತೀವ್ರವಾಗಿರುವ ಕಾರ್ಡಿಯೊಮಯೊಪಥಿ (ಹೃದಯ ಸ್ನಾಯು ಕಾಯಿಲೆ) ಎಂಬ ಸಮಸ್ಯೆ ಇದೆ ಎನ್ನುವುದು ನಮಗೆಲ್ಲರಿಗೂ ತಿಳಿದದ್ದು. `ಡಾ. ಎ'ಗೆ ಪೇಸ್‌ಮೇಕರ್ (ಹೃದಯದ ಕೆಲಸ ಮಾಡುವ ಕೃತಕ ವಿದ್ಯುತ್ ಉಪಕರಣ) ಅಳವಡಿಸಲಾಗಿತ್ತು. ಪಿಐಸಿಯುನಲ್ಲಿ ಅನೇಕ ವಿದ್ಯುತ್ ಪಾಯಿಂಟ್‌ಗಳಿದ್ದುದರಿಂದ ಅದಕ್ಕೆ ಬಳಸಿದ್ದ ತಂತಿಗಳು ಅಡ್ಡಾದಿಡ್ಡಿ ಹರಡಿದ್ದವು.ಕಳೆದ ವರ್ಷ ಅಪ್ಪಾಜಿಗೆ ಇದ್ದಕ್ಕಿದ್ದಂತೆ ತಲೆಸುತ್ತು ಬಂದಿತ್ತು. ಅವರ ಹೃದಯ ಬಡಿತ ಕ್ಷೀಣಿಸುತ್ತಿತ್ತು. ತನ್ನ ಕಾಯಿಲೆಯನ್ನು ತಾವೇ ತಿಳಿದುಕೊಂಡ ಅವರು ತಕ್ಷಣ ಬೆಂಗಳೂರು ಆಸ್ಪತ್ರೆಗೆ ದೌಡಾಯಿಸಿದರು. ಕೂಡಲೇ ಪೇಸ್‌ಮೇಕರ್ ಅಳವಡಿಸಲಾಯಿತು.ವೈದ್ಯರಾಗಿ ಇದ್ದ ಅನುಭವ ಮತ್ತು ತಿಳಿವಳಿಕೆ ಅವರ ಜೀವ ಉಳಿಸಿತು.ಹಿಂದಿನ ದಿನಗಳನ್ನು ನೆನೆದಾಗ ನನಗೆ ದುಃಖ ಮತ್ತು ಬೇಸರ ಮೂಡುತ್ತದೆ. ವಿವಿಧ ವಾರ್ಡ್ ಮತ್ತು ಕಾರ್ಯಗಳಿಗೆ ನಿಯೋಜಿಸುವಾಗ ಅವರನ್ನು ಒಟ್ಟಿಗೆ ಇರುವಂತೆ ನಮ್ಮ ಆಡಳಿತಗಾರರು ಮಾಡಬಹುದಾಗಿತ್ತು. ಇಂಥ ಮಾರಣಾಂತಿಕ ಹೃದ್ರೋಗವಿದೆಯೆಂದು ಈ ಸಹೋದರಿಯರು ಒಮ್ಮೆಯೂ ಹೇಳಿಕೊಂಡಿರಲಿಲ್ಲ. ಅವರಿಗೆ ಕರುಣೆಯಾಗಲೀ, ಅನುಕಂಪವಾಗಲೀ ಅಥವಾ ವಿನಾಯತಿಗಳಾಗಲೀ ಬೇಕಿರಲಿಲ್ಲ. ಅದು ಅವರ ಹಿರಿಮೆ.ಇಡೀ ವಿಭಾಗ ಸಂಭ್ರಮಾಚರಣೆಗೆ ತೊಡಗಲು ಸಿಗುವ ಒಂದೇ ಅವಕಾಶವೆಂದರೆ ಹೊಸಬರ ಕೂಟ. ಈ ಮುದ್ದಾದ ಹುಡುಗಿಯರು ನಮ್ಮೆಲ್ಲರಿಗೂ ಮನಸ್ಸನ್ನು ಹಗುರಾಗಿಸುವ ವಿಶಿಷ್ಟ ಆಟವೊಂದನ್ನು ಆಯೋಜಿಸಿದ್ದರು. ಅದು ಈಗಲೂ ಕಣ್ಣಮುಂದಿದೆ. ಒಮ್ಮೆ ಡಾ. ಎ ನವಜಾತ ಶಿಶುವಿಭಾಗಕ್ಕೆ ನಿಯೋಜಿತರಾಗಿದ್ದಾಗ ತಪ್ಪೊಂದನ್ನು ಮಾಡಿದ್ದಳು. ಆಗ ಆಕೆಗೆ ಬೈಯ್ದಿದ್ದ ನಾನು ಬಳಿಕ ಪಶ್ಚಾತ್ತಾಪ ಪಟ್ಟೆ. ಆದರೆ ಆ ಪಾಪದ ಮಗು ನನ್ನನ್ನು ಸಮಾಧಾನಪಡಿಸುವುದನ್ನು ಮುಂದುವರಿಸಿತ್ತು.`ಮೇಡಂ, ಕೇವಲ ನನ್ನ ಕಾಯಿಲೆಯ ಕಾರಣಕ್ಕಾಗಿ ನೀವು ನನ್ನನ್ನು ವಿಭಿನ್ನವಾಗಿ ನಡೆಸಿಕೊಳ್ಳಲು ಸಾಧ್ಯವಿಲ್ಲ. ತಪ್ಪು ತಪ್ಪೇ'. ಈ ಯುವ ಮುದ್ದಾದ ಹೆಣ್ಣುಮಕ್ಕಳ ಹೃದಯ ಔನ್ನತ್ಯ ಈ ರೀತಿಯದ್ದಾಗಿತ್ತು.ಆ ಪರಿಸ್ಥಿತಿಯಲ್ಲಿಯೂ ಅವರು 2010ರಲ್ಲಿ ಪರೀಕ್ಷೆಯನ್ನೆದುರಿಸಿ ಉತ್ತೀರ್ಣರಾದರು. ಕೇರಳದಿಂದ ಆಗಮಿಸಿದ್ದ ಪರೀಕ್ಷಕ ಡಾ. ಲುಲು ಮ್ಯಾಥ್ಯೂಸ್ ವಿಶೇಷವಾಗಿ ಈ ಅವಳಿ ಸಹೋದರಿಯರು ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆಂದೂ, ಮುಂದೆ ಉತ್ತಮ ಭವಿಷ್ಯ ಹೊಂದಿದ್ದಾರೆಂದೂ ನನ್ನ ಬಳಿ ಹೇಳಿದ್ದರು. ಆಗ ನನ್ನ ಹೃದಯ ಬಡಿತದ ಸದ್ದನ್ನು ನಾನೊಬ್ಬಳೇ ಅರಿತುಕೊಳ್ಳಲು ಸಾಧ್ಯವಿತ್ತು.ತಮ್ಮ ಕೋರ್ಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಹೆಚ್ಚಿನ ತರಬೇತಿ ಅನುಭವಕ್ಕಾಗಿ ಅವರು ಕಾರ್ಪೊರೇಟ್ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಕೆಲಸದ ವೇಳಾಪಟ್ಟಿ ಅವರಿಗೆ ತುಂಬಾ ಹೊರೆಯಾಗುತ್ತಿತ್ತು. ಆಗಾಗ್ಗೆ ಹೃದಯ ಸಮಸ್ಯೆ/ಕೆಲಸಕ್ಕೆ ಗೈರು ಮತ್ತು ಆಸ್ಪತ್ರೆಗೆ ದಾಖಲಾಗುವುದು ಮುಂತಾದ ಕಾರಣಗಳಿಂದ ಅವರನ್ನು ಮನೆಗೆ ಕಳುಹಿಸಲಾಯಿತು.ನನ್ನ ಬಡ ವಿದ್ಯಾರ್ಥಿನಿಯೊಬ್ಬರ ತಂದೆಯನ್ನು ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಭಾರಿ ಪ್ರಮಾಣದ ಆಸ್ಪತ್ರೆ ವೆಚ್ಚವನ್ನು ಕಡಿಮೆ ಮಾಡಲು ಅಲ್ಲಿನ ಅಧಿಕಾರಿಗಳೊಂದಿಗೆ ಮಾತನಾಡುವಂತೆ ನನ್ನ ಬಳಿ ಮನವಿ ಮಾಡಿದರು. ನಾನು ಅದರ ಸಿಇಓ ಅವರನ್ನು ಭೇಟಿ ಮಾಡಿದಾಗ ಅವರು ಹೇಳಿದ್ದಿಷ್ಟು- `ಮೇಡಂ, ಬಿಲ್ ಹಣವನ್ನು ಕಡಿಮೆ ಮಾಡುವುದಕ್ಕೆ ನಮ್ಮದು ಧರ್ಮ ಸಂಸ್ಥೆಯಲ್ಲ, ಸರ್ಕಾರಿ ಆಸ್ಪತ್ರೆಯೂ ಅಲ್ಲ. ನಮ್ಮದು ವ್ಯಾವಹಾರಿಕ ಸಂಸ್ಥೆ.ತಾರಾ ಆಸ್ಪತ್ರೆಯೊಂದಕ್ಕೆ ತಂದೆಯನ್ನು ದಾಖಲಿಸುವಾಗ ನಿಮ್ಮ ವಿದ್ಯಾರ್ಥಿನಿ ಇವುಗಳ ಕುರಿತು ಯೋಚಿಸಬೇಕಿತ್ತು!'. ನಂಬಿ, ಈ ಕಹಿ ಅನುಭವದ ನಂತರ ಇಂಥ ಆಸ್ಪತ್ರೆಗಳಲ್ಲಿ ವಿನಾಯಿತಿ ನೀಡುವಂತೆ ಕೇಳಲು ಮತ್ತೆಂದೂ ಮುಂದಾಗಿಲ್ಲ.ತಮ್ಮ ಬುದ್ಧಿಮತ್ತೆಯಂತೆಯೇ ಈ ಅವಳಿ ಸಹೋದರಿಯರು ನೋಡಲೂ ಆಕರ್ಷಕವಾಗಿದ್ದರು ಎಂಬುದನ್ನು ನಾನು ಹೇಳಿದೆನೆ? ನಿಜ. ಅವರು ಎಷ್ಟು ಸುಂದರಿಯಾಗಿದ್ದರೆಂದರೆ, ಅವರ ಎಂಬಿಬಿಎಸ್ ದಿನಗಳಿಂದಲೂ ಅನೇಕ ಕನ್ಯಾರ್ಥಿಗಳು ಅವರಿಗೆ ಕಾದಿದ್ದರು. ಯಾವಾಗ ಇಬ್ಬರಿಗೂ ಗುಣಪಡಿಸಲಾಗದ ಹೃದಯ ಕಾಯಿಲೆ ಇರುವುದು ತಿಳಿಯಿತೋ ಕನ್ಯಾರ್ಥಿಗಳಿಗೆ ಅಸಮ್ಮತಿ ಸೂಚಿಸತೊಡಗಿದರು.ಅಂದಹಾಗೆ, ಹಿಗ್ಗಿದ ಕಾರ್ಡಿಯೊಮಯೊಪಥಿ ಎಂದರೆ ಏನು?ಹಿಗ್ಗಿದ ಕಾರ್ಡಿಯೊಮಯೊಪಥಿಗೆ ನಿಖರ ಕಾರಣಗಳು ಇನ್ನೂ ತಿಳಿಯದಿದ್ದರೂ ಆನುವಂಶಿಕವಾಗಿ ಬರುವ ಸಾಧ್ಯತೆ ಇರುವ, ಎರಡೂ ಗೂಡುಗಳು (ಎಡ ಮತ್ತು ಬಲ) ಹಿಗ್ಗಿಕೊಂಡಿದ್ದರೂ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಹರಿಸುವ ಸಾಮರ್ಥ್ಯ ಕ್ಷೀಣಿಸುವ ಪರಿಸ್ಥಿತಿ. ಈ ಅವಳಿ ಮಕ್ಕಳ ತಂದೆ ಸಾವಿನಲ್ಲೇ ಅಸುನೀಗಿದ್ದು ನೆನಪಿಸಿಕೊಳ್ಳಿ. ಅದು ಪತ್ತೆಹಚ್ಚದಿದ್ದ ಕಾರ್ಡಿಯೊಮಯೊಪಥಿ ಇರಬಹುದಲ್ಲವೆ?ಅದಕ್ಕೆ ಚಿಕಿತ್ಸೆ ಏನಾದರೂ ಇದೆಯೇ? ಇದೆ ಮತ್ತು ಇಲ್ಲ.ಕಾಯಿಲೆ ಪೀಡಿತ ಹೃದಯವನ್ನು ಹೇಗೆ ನಿರ್ವಹಣೆ ಮಾಡಬೇಕು? ಇದಕ್ಕೆ ಎರಡು ವಿಧಾನಗಳಿವೆ. ಒಂದು `ಯಾಂತ್ರಿಕ ಹೃದಯ', ಮತ್ತೊಂದು `ಹೃದಯ ಕಸಿ'.ಇವುಗಳನ್ನೆಲ್ಲಾ ತಿಳಿದುಕೊಳ್ಳಲು ಮತ್ತು ಸಹಾಯ ಯಾಚಿಸಲು ನಾನು ನನ್ನ ದೀರ್ಘಕಾಲದ ಸ್ನೇಹಿತ ಜಯದೇವ ಹೃದ್ರೋಗ ಸಂಸ್ಥೆಯ ಹೃದಯ ಮಿಡಿತ ತಜ್ಞ ಡಾ. ಜಯಪ್ರಕಾಶ್ ಅವರನ್ನು ಭೇಟಿ ಮಾಡಿದೆ. ಅವರ ಮೊದಲ ವಾಕ್ಯವೇ ನನ್ನನ್ನು ತೀವ್ರ ವಿಷಾದಕ್ಕೆ ನೂಕಿತು. `ಆಶಾ ಆ ಅವಳಿಗಳ ಬಗ್ಗೆ ನನಗೆ ತಿಳಿದಿದೆ. ಯಾವ ಭರವಸೆಯೂ ಉಳಿದಿಲ್ಲ'. ಅವರು ಯಾಂತ್ರಿಕ ಹೃದಯಗಳ ಬಗ್ಗೆ ವಿವರಿಸುವಾಗ ಹೇಳಿದ್ದು ಅದು ಬಲು ದುಬಾರಿ ಎಂದು. ಅಲ್ಲದೆ ಅದು ಶಾಶ್ವತ ಪರಿಹಾರವನ್ನೂ ನೀಡಲಾರದು. ಇವುಗಳನ್ನು ಹೃದಯಕ್ಕೆ ನೆರವಾಗುವ ಉಪಕರಣಗಳೆಂದು ಗುರುತಿಸಲಾಗುತ್ತದೆ:ಬ್ರಿಡ್ಜ್ ಟು ರಿಕವರಿ- ಇದನ್ನು ಬೈಪಾಸ್‌ಗೆ ಒಳಗಾದ ರೋಗಿಗಳಲ್ಲಿ ಒಂದು ತಿಂಗಳಿಗಿಂತ ಕಡಿಮೆ ಕಾಲ ಬಳಸಬಹುದು.

ಬ್ರಿಡ್ಜ್ ಟು ಟ್ರಾನ್ಸ್‌ಪ್ಲಾಂಟೇಷನ್ (ವಾರಗಳು ಅಥವಾ ತಿಂಗಳುಗಳು)

ಡೆಸ್ಟಿನೇಷನ್ ಹಾರ್ಟ್ (2 ವರ್ಷಗಳವರೆಗೆ)ಈ ಉಪಕರಣಗಳಿಂದ ಹರಿಯುವ ರಕ್ತವು ನೈಸರ್ಗಿಕ ಹೃದಯದಂತೆ ಮಿಡಿತ ನೀಡಲಾರವು. ಮತ್ತು ಇದಕ್ಕೆ ವಿದ್ಯುಚ್ಛಕ್ತಿ ಪೂರೈಸುವ ಬ್ಯಾಟರಿಗಳು ದೊಡ್ಡದಾಗಿದ್ದು, ಎಲ್ಲಾ ವೇಳೆಯೂ ಕೊಂಡೊಯ್ಯಬೇಕಾಗುತ್ತದೆ. ಅವುಗಳನ್ನು ಆಗಾಗ್ಗೆ ಕ್ರಮಬದ್ಧವಾಗಿ ಬದಲಾಯಿಸುವುದೂ ಅಗತ್ಯ.ನಂತರದ್ದು ಮೃತರೋಗಿಯ ದೇಹದಿಂದ `ಹೃದಯ ಕಸಿ'.ಡಾ. ಜಯಪ್ರಕಾಶ್ ಮಾತು ಮುಂದುವರಿಸಿದರು: `ಆಶಾ ಈ ಚಿಕಿತ್ಸೆಗಳು ಕೆಲವೇ ಕೆಲವು ಕೇಂದ್ರಗಳಲ್ಲಿ ಮಾತ್ರ ಭಾರಿ ಬೆಲೆಗೆ ಲಭ್ಯ. ಆ ಬೆಲೆ ಕೋಟಿಗಳಲ್ಲಿರುತ್ತದೆ ಮತ್ತು ಅಲ್ಲಿಯೂ ಸಾವು ನಿಶ್ಚಿತ. ಕೆಲವು ತಿಂಗಳಿಂದ ವರ್ಷದವರೆಗೆ ಕಾಲವನ್ನು ಕೊಂಡುಕೊಳ್ಳಬಹುದಷ್ಟೆ'. ನಾನು ನಿಸ್ತೇಜಳಾಗಿ, ಅಳುತ್ತಾ ಕುಳಿತುಕೊಂಡೆ.

ಅವರಿಬ್ಬರೂ ಎಷ್ಟು ಬುದ್ಧಿವಂತ ಹುಡುಗಿಯರೆಂದರೆ ಎಂಆರ್‌ಸಿಪಿಯಲ್ಲಿ (ಮ್ಯಾಗ್ನೆಟಿಕ್ ರೆಸೊನಾನ್ಸ್ ಕೊಲಾಂಗಿಯೊ ಪಾಂಕ್ರಿಟೊಗ್ರಫಿ) ಕೂಡ ಉತ್ತೀರ್ಣರಾಗಿದ್ದರು.ಮದುವೆಯಾಗಿ 11 ವರ್ಷದ ಬಳಿಕ ಜನಿಸಿದ ಎರಡೂವರೆ ವರ್ಷದ ಮಹೇಶ್ವರಿ ಎಂಬ ಹೆಣ್ಣುಮಗು ಕಾರ್ಡಿಯೊಮಯೊಪಥಿಯಿಂದ ಮರಣಹೊಂದಿದ ಕಥೆ ನೆನಪಿಸಿಕೊಳ್ಳಿ (ಈ ಲೇಖನದೊಂದಿಗೆ ಆಕೆಯ ಚಿತ್ರಗಳನ್ನು ನಾನು ಬಳಸಿದ್ದೇನೆ).ತಮ್ಮ ಕಾಯಿಲೆಯ ಕುರಿತು, ಅದರ ಸಂಕೀರ್ಣತೆ ಮತ್ತು ಕಾರ್ಡಿಯೊಮಯೊಪಥಿ ಚಿಕಿತ್ಸೆಯ ಆಯ್ಕೆಗಳ ನಿಷ್ಫಲತೆಯನ್ನು ವೈದ್ಯರಾಗಿದ್ದ ಈ ಅವಳಿಗಳು ಚೆನ್ನಾಗಿ ಅರಿತಿದ್ದಾರೆ. ತಮ್ಮ ಮೇಲೆ ಯಾರೂ ಹಣ ವೆಚ್ಚ ಮಾಡುವುದು ಅವರಿಗೆ ಇಷ್ಟವಿಲ್ಲ. ನಾನೂ ಅವರಿಗೆ ಹೇಳಿದ್ದು `ಧೈರ್ಯವಾಗಿರಿ' ಎಂದಷ್ಟೆ.ವೈದ್ಯರುಗಳೂ ಸಹ ಮನುಷ್ಯರೇ! ಅವರಿಗೂ ಆಸ್ಪತ್ರೆಗೆ ದಾಖಲಿಸುವಂಥ ಕಾಯಿಲೆಗಳು ಬರುತ್ತವೆ ಮತ್ತು ಅವರೂ ತಮ್ಮ ಬಿಲ್ ಪಾವತಿಸಬೇಕಾಗುತ್ತದೆ.ಕೆಲವು ತಿಂಗಳಿನಿಂದ ಒಂದು ವರ್ಷದವರೆಗಿನ ಜೀವಿತ ಅವಧಿಯನ್ನು ಪಡೆದುಕೊಳ್ಳಲೋಸುಗ ಈ ಅವಳಿಗಳಿಗೆ ಕೋಟಿಗಳು ಬೇಕಾಗಿವೆ. ನಾನು ಮತ್ತು ನನ್ನ ಸ್ನಾತಕೋತ್ತರ ವಿದ್ಯಾರ್ಥಿಗಳು ಇದಕ್ಕಾಗಿ ಸಲ್ಲಿಸಿರುವ ವಿನಮ್ರದ ಕಾಣಿಕೆಗೆ ಕೋಟಿಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ.ಈ ಲೇಖನ ಬರೆದು ಮುಗಿಸುವಾಗ (ಸೋಮವಾರ; ಏ.1) `ಡಾ.ಎ' ಮೃತಪಟ್ಟ ಸುದ್ದಿ ಬಂತು.

ಈಗ `ಡಾ.ಬಿ'ಗಾಗಿ ನನ್ನ ಪ್ರಾರ್ಥನೆ ಮುಂದುವರಿದಿದೆ. ನನ್ನ ಪ್ರಾರ್ಥನೆಯನ್ನು ಯಾರು ಆಲಿಸುತ್ತಾರೆ!

 

ಪ್ರತಿಕ್ರಿಯಿಸಿ (+)