ಬುಧವಾರ, ಸೆಪ್ಟೆಂಬರ್ 22, 2021
25 °C

ಶತಕಗಳ ಸರದಾರ ಈ ಗುರುಪಿತಾಮಹ ಕೂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಚಿನ ಎರಡು ಭಾರತ ರತ್ನಗಳನ್ನು ತುಸು ಹೋಲಿಸಿ ನೋಡೋಣ: ಸ-–ಚಿನ್ ಮತ್ತು ಚಿನ್‌ತಾಮಣಿ ರಾಮಚಂದ್ರ ಇಬ್ಬರ ಹೆಸರಲ್ಲೂ ಬಾಲ್ಯದಿಂದಲೇ ತುಸು ಚಿನ್ನ ಅಂಟಿ­ಕೊಂಡಿದೆ. ಇಬ್ಬರದೂ ಅಕಲಂಕಿತ, ಚಿನ್ನದಂಥ ವ್ಯಕ್ತಿತ್ವ. ಇಬ್ಬರೂ ಅಸ್ಖಲಿತ ಕರ್ಮಯೋಗಿಗಳು.ಒಬ್ಬರು ಈಗಿನ್ನೂ ೪೦ರ ಆರಂಭದಲ್ಲೇ ನಿವೃತ್ತಿ ಘೋಷಿಸಿಕೊಂಡು ವಿದಾಯ ಹೇಳುವ ಸಂದರ್ಭ. ಇನ್ನೊಬ್ಬರು ೮೦ನ್ನು ತಲುಪಿದರೂ ತಾನೆಂದೂ ನಿವೃತ್ತನಾಗಲಾರೆ ಎಂದು ಘೋಷಿಸಿ­ಕೊಂಡವರು. ಒಬ್ಬರು ಲಕ್ಷಾಂತರ ಪ್ರೇಕ್ಷಕರ ನಡುವೆ ಶತಕ ಬಾರಿಸಿದರೆ ಇನ್ನೊಬ್ಬರು ಸದ್ದು­ಗದ್ದಲವಿಲ್ಲದ ಲ್ಯಾಬೊರೇಟರಿಯಲ್ಲಿ ಶತಕಗಳ ಮೇಲೆ ಶತಕ ಸಾಧಿಸುತ್ತ ಹೋದವರು.ಹಿರಿಯ ವಿಜ್ಞಾನಿ ಪ್ರೊ. ಚಿಂತಾಮಣಿ ನಾಗೇಶ ರಾಮಚಂದ್ರ (ಸಿಎನ್‌ಆರ್) ರಾವ್ ಅವರ ಶತಕಗಳ ಕಿರುಪರಿಚಯ ಇಲ್ಲಿದೆ: ಬಹಳಷ್ಟು ವಿಜ್ಞಾನಿಗಳು ಪ್ರತಿಷ್ಠಿತ ಪತ್ರಿಕೆಯಲ್ಲಿ ತಮ್ಮ ಒಂದು ಸಂಶೋಧನ ಪ್ರಬಂಧ ಪ್ರಕಟವಾ­ಗುತ್ತಲೇ ಶತಕ ಹೊಡೆದಷ್ಟು ಸಂಭ್ರಮಿಸುತ್ತಾರೆ.ರಾಯರ ೧೦೦ನೆಯ ಪ್ರಬಂಧ ಪ್ರಕಟವಾದಾಗ ನಮಗೆ ಗೊತ್ತಾಗಲೇ ಇಲ್ಲ. ೫೦೦ನೆಯ ಪ್ರಬಂಧ ಪ್ರಕಟವಾದಾಗಲೂ ನಾವು ಗುರುತಿಸಲಿಲ್ಲ. ಸಾವಿರದ ಒಂದನೇ ಪ್ರಬಂಧ ಪ್ರಕಟವಾದಾಗ ಅವರಿಗಾಗಿ ಯಾವುದೇ ಸ್ಟೇಡಿಯಮ್ಮಿನಲ್ಲಿ ಹರ್ಷದ ಮೆಕ್ಸಿಕನ್ ಅಲೆಗಳು ಏಳಲಿಲ್ಲ. ಬದಲಿಗೆ  ಪ್ರಾಯಶಃ ಅದೇ ವೇಳೆಗೆ ಅವರು ಶ್ರೀಲಂಕಾದ ಕಡಲತೀರದಲ್ಲಿ ಸುನಾಮಿ ಅಲೆಗಳಿಗೆ ಸಿಕ್ಕು ಬಚಾವಾಗಲೆಂದು ಧಾವಿಸುತ್ತಿದ್ದರು. ಇದೀಗ ಅವರ ಪ್ರಬಂಧಗಳ ಸಂಖ್ಯೆ ಒಂದೂವರೆ ಸಾವಿರ ದಾಟಿದೆ. ಅದಕ್ಕೆಂದು ಚಪ್ಪಾಳೆ ತಟ್ಟಿದವರಿಲ್ಲ.ಪ್ರಬಂಧ ಬರೆದರೆ ಸಾಲದು. ಅದರಲ್ಲಿರುವ ಪ್ರಮುಖ ವೈಜ್ಞಾನಿಕ ಅಂಶಗಳನ್ನು ಬೇರೆ ಎಷ್ಟು ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಸ್ಮರಿಸಿ­ಕೊಳ್ಳುತ್ತಾರೆ ಎಂಬುದು ಕೂಡ ಆ ಸಂಶೋಧಕನ ಗುಣಮಟ್ಟದ ಸೂಚ್ಯಂಕ­ವಾಗುತ್ತದೆ. ಅದಕ್ಕೆ ‘ಸೈಟೇಶನ್ ಇಂಡೆಕ್ಸ್’ ಎನ್ನುತ್ತಾರೆ. ತನ್ನ ಪ್ರಬಂಧ­ವನ್ನು ನೂರು ವಿಜ್ಞಾನಿಗಳು ಸ್ಮರಿಸಿದ್ದೇ ಮಹಾ ಸಾಧನೆ ಎಂದು ಬೀಗುವ ವಿಜ್ಞಾನಿ­ಗಳಿರುತ್ತಾರೆ. ರಾಯರು ಸಾವಿರ ಅಲ್ಲ, ಹತ್ತು ಸಾವಿರ ಅಲ್ಲ, ಐವತ್ತೆಂಟು ಸಾವಿರ ಸೈಟೇಶನ್ ಗಳಿಸಿದ್ದಾರೆ. ಅದಂತಿರಲಿ, ವಿಜ್ಞಾನಿಗಳ ಘನತೆ­ಯನ್ನು ಅಳೆಯಲು ‘ಎಚ್–-ಇಂಡೆಕ್ಸ್’  ಎಂಬ ಇನ್ನೊ­ಂದು ಸೂಚ್ಯಂಕವಿದೆ. ಭಾರತದ ಬೆರಳೆಣಿಕೆ­ಯಷ್ಟು ವಿಜ್ಞಾನಿಗಳು ಮಾತ್ರ ೫೦ರಷ್ಟು ‘ಎಚ್ ಇಂಡೆಕ್ಸ್‌’ಗಳನ್ನು ಪೇರಿಸಿಕೊಂಡಿದ್ದಾರೆ.ರಾಯರು ಈ ಸೂಚ್ಯಂಕದಲ್ಲೂ ಶತಕ ಗಳಿಸಿದ ಏಕೈಕ ಭಾರತೀಯರೆನಿಸಿದ್ದಾರೆ. ಸಮಾಜ ಅವರಿಗೆ ಶಹಬ್ಬಾಸ್ ಎನ್ನಲಿಲ್ಲ. ತನ್ನ ಮಾರ್ಗ­ದರ್ಶನ­ದಲ್ಲಿ ಹತ್ತು ಸಂಶೋಧಕರು ಪಿಎಚ್‌ಡಿ ಗಳಿಸಿದರೆ ಅನೇಕ ವಿಜ್ಞಾನಿಗಳಿಗೆ ದೊಡ್ಡ ಸಂಗತಿ­ಯಾಗುತ್ತದೆ. ಅಷ್ಟಕ್ಕೇ ಪ್ರೊಫೆಸರ್ ಹುದ್ದೆ­ಯನ್ನೊ ಅಕಾಡೆಮಿಗಳ ಗೌರವ ಸದಸ್ಯತ್ವವನ್ನೊ ಬಯಸುವವರಿದ್ದಾರೆ. ರಾಯರ ಮಾರ್ಗ­ದರ್ಶ­ನ­ದಲ್ಲಿ ಪಿಎಚ್‌ಡಿ ಗಳಿಸಿದವರ ಸಂಖ್ಯೆ ಶತಕವನ್ನು ದಾಟಿದೆ.ಜಗತ್ತಿನ ಎಲ್ಲ ೫೦ಕ್ಕೂ ಹೆಚ್ಚು ಪ್ರತಿಷ್ಠಿತ ಅಕಾಡೆಮಿಗಳೂ ಅವರಿಗೆ ಗೌರವ ಸದಸ್ಯತ್ವ ನೀಡಿ ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ. ಅದಕ್ಕೆ ಸಂಭ್ರಮಿಸಬೇಕೆಂದು ನಮಗೆ ಗೊತ್ತಾಗಲೇ ಇಲ್ಲ. ೨೦೦೫ರಲ್ಲಿ ಅವರು ವೈಜ್ಞಾನಿಕ ಸಂಶೋಧನೆಯ ೫೦ ವರ್ಷಗಳನ್ನು ಪೂರೈಸಿದರು. ಅದು ಭಾರ­ತದ ಮಟ್ಟಿಗೆ ದಾಖಲೆಯ ‘ಅರ್ಧ ಶತಕ’­ವಾಗಿತ್ತು. ಯಾರೂ ಚಪ್ಪಾಳೆ ತಟ್ಟಲಿಲ್ಲ. ಇನ್ನು ವಿವಿಧ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇ­ಟ್‌­ಗಳೊ, ಹತ್ತಲ್ಲ, ಇಪ್ಪತ್ತಲ್ಲ, ಐವತ್ತನೇ ಡಾಕ್ಟ­ರೇಟ್ ಬಂದಾಗಲಾದರೂ ಕನ್ನಡಿಗರು ಅವರಿ­ಗೊಂದು ಪೌರ ಸಮ್ಮಾನ ನೀಡಬಹುದಿತ್ತು. ಈಗ ಅದು ೬೦ ದಾಟಿದೆ.ಪ್ರೊ. ಸಿಎನ್‌ಆರ್ ರಾವ್ ಗಳಿಸಿದ ಈ ಶತಕಗಳಿಗೆ ಇನ್ನೊಂದು ವಿಶೇಷ ಇದೆ. ಬೇರೆ ದೇಶಗಳ ಕೆಲವು ವಿಜ್ಞಾನಿಗಳು ಹಗಲುರಾತ್ರಿ ಸಂಶೋಧನೆ ಮಾಡುತ್ತ ೧೦೦ ಎಚ್ ಇಂಡೆಕ್ಸ್‌ಗಳನ್ನೂ ಸಾವಿರ ಸೈಟೇಶನ್‌ಗಳನ್ನೂ ಸಾಧಿಸಿದ್ದಾರೆ. ಇವರದು ಅಂಥ ಏಕಮುಖ ಸಾಧನೆಯಲ್ಲ.  ಕ್ರಿಕೆಟ್ಟನ್ನೇ ಹೋಲಿಸಿ ಹೇಳುವು­ದಾದರೆ ಇವರು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್, ಕ್ಯಾಪ್ಟನ್‌ಶಿಪ್ ಜತೆ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ, ಪಿಚ್ ರೂಪಿಸುವ ಉಸ್ತುವಾರಿಯನ್ನೂ ಹೊತ್ತು, ಕ್ರೀಡಾಂಗಣ ನಿರ್ಮಾಣದ ಮೇಲ್ವಿಚಾರಣೆಯನ್ನೂ ಮಾಡುತ್ತ, ಎಲ್ಲ ರಾಷ್ಟ್ರೀಯ ಕ್ರೀಡೆಗಳ ಭವಿಷ್ಯವನ್ನೂ ನಿರ್ಧರಿಸುವ ಸಮಿತಿಯ ಮುಖ್ಯಸ್ಥರಾಗಿಯೂ ಕೆಲಸ ನಿರ್ವಹಿಸುತ್ತಲೇ ಬೆಳಿಗ್ಗೆ ಎದ್ದು ಬ್ಯಾಟ್ ಹಿಡಿದು ಎಳೆಯರೊಂದಿಗೆ ಸಿಕ್ಸರ್ ಬೀಸಲು, ಹೊಸ ಟೆಕ್ನಿಕ್ ಕಲಿಯಲು ಹೋಗುವವರು. ತನ್ನ ಶಿಷ್ಯರ ಶಿಷ್ಯರ ಶಿಷ್ಯರಿಂದ ‘ಗುರುಪಿತಾಮಹ’ ಎನ್ನಿಸಿಕೊಂಡವರು.ಅದ್ಯಾವುದನ್ನೂ ಗಮನಿಸಲು ನಮಗೆ ಪುರು­ಸೊತ್ತೇ ಇರಲಿಲ್ಲ ಎಂದರೆ ತಪ್ಪಾದೀತು. ಕರ್ನಾ­ಟಕ ಸರ್ಕಾರ ತನ್ನ ಅತ್ಯುನ್ನತ ‘ಕರ್ನಾಟಕ ರತ್ನ’ ಬಿರುದಿನಿಂದ ಅವರನ್ನು ಗೌರವಿಸಿದೆ. ಮೈಸೂರು ದಸರಾ ಹಬ್ಬದ ಉದ್ಘಾಟನೆಯ ಗೌರವವನ್ನೂ ನೀಡಿದೆ. ಆದರೂ ‘ಯಾಕಿನ್ನೂ ನಿಮ್ಮ ಹೆಸರು ಮನೆಮಾತಾಗಿಲ್ಲ?’ ಎಂದು ಈ ಅಂಕಣಕಾರ ನಾಲ್ಕು ವರ್ಷಗಳ ಹಿಂದೆ ಕೇಳಿದಾಗ ಸಮೀಪ ಕರೆದು ಕಿವಿಯಲ್ಲಿ, ‘ಸತ್ತ ಮೇಲೆ ತಾನೆ ನಮ್ಮ ದೇಶದಲ್ಲಿ ಪ್ರಸಿದ್ಧಿ, ಗೌರವ ಎಲ್ಲ ಸಿಗೋದು?’ ಎಂದು ಹೇಳಿ ನಕ್ಕಿದ್ದರು.ಅವರು ಹೇಳಿದ್ದರಲ್ಲಿ ವ್ಯಂಗ್ಯ ಇದೆಯಾದರೂ ಸತ್ಯ ಬೇರೆಯೇ ಇದೆ. ಇಂದು ಪ್ರಸಿದ್ಧಿ ಬೇಕೆಂದರೆ ಕ್ಯಾಮೆರಾ ಎದುರು ಆಗಾಗ ಬರುತ್ತಿರಬೇಕು. ಅಥವಾ ಕರೆದಲ್ಲಿಗೆ ಹೋಗಿ ಮೈಕ್ ಎದುರು ನಿಲ್ಲ­ಬೇಕು. ರಾಯರಿಗೆ ಇವೆರಡಕ್ಕೂ ಪುರುಸೊ­ತ್ತಿಲ್ಲ. ಅಗೋಚರ ಸತ್ಯಗಳನ್ನು ಪ್ರಯೋಗ­ಶಾಲೆ­ಗಳಲ್ಲಿ ಸದಾ ಹುಡುಕುತ್ತಿರುವ ತಪಸ್ವಿ ಇವರು. ಹೆಚ್ಚೆಂದರೆ ತನ್ನಂಥ ಸತ್ಯಶೋಧಕರೇ ತುಂಬಿ­ರುವ ಸಭಾಂಗಣದಲ್ಲಿ ಇವರು ಮೈಕ್ ಹಿಡಿದು ತಾನು ಕಂಡ ಸತ್ಯವನ್ನು ವಿವರಿಸುತ್ತಾರೆ ವಿನಾ ಸುದ್ದಿ­ತೋ­ಳ­ಗಳು ಇವರನ್ನು ಬೆನ್ನಟ್ಟಿದ್ದು ತೀರ ಅಪರೂಪ.ಖಾರ, ನೇರ, ನಿಷ್ಠುರ ಮಾತುಗಳು ರಾಯರ ಬತ್ತಳಿಕೆಯಿಂದ ಆಗಾಗ ಹೊಮ್ಮುತ್ತಲೇ ಇರು­ತ್ತವೆ. ಅಧಿಕಾರಕ್ಕಾಗಿ ಅಥವಾ ಪ್ರಶಸ್ತಿಗಾಗಿ ಯಾರೆ­ದುರೂ ಕೈಚಾಚದ ಅವರಿಗೆ ಅಂಥ ನೈತಿಕ ಸ್ಥೈರ್ಯ ಇದೆ. ಬಯಸಿದ್ದಿದ್ದರೆ ಎಮ್‌ಜಿಕೆ ಮೆನನ್ ಅಥವಾ ರಾಜಾ ರಾಮಣ್ಣನವರ ಹಾಗೆ ಕೇಂದ್ರ ಸಂಪುಟದ ಸಚಿವರಾಗಬಹುದಿತ್ತು. ಎಪ್ಪತ್ತರ ದಶಕದಲ್ಲೇ ಪ್ರಧಾನಿ ಇಂದಿರಾ ಗಾಂಧಿ ಇವರನ್ನು ದಿಲ್ಲಿಗೆ ಕರೆಸಿ ಅಂಥದೊಂದು ಸರ್ಕಾರಿ ಹುದ್ದೆ ನೀಡಬಯಸಿದ್ದರು. ‘ಬೇಡ, ವಿಜ್ಞಾನಿ­ಯಾ­ಗಿಯೇ ಕೆಲಸ ಮಾಡಲು ನನಗೆ ಇಷ್ಟ’ ಎಂದು ರಾವ್ ಹೇಳಿದಾಗ ‘ನನಗೆ ಇದುವರೆಗೆ ಯಾರೂ ಇಂಥ ಉತ್ತರ ನೀಡಿರಲಿಲ್ಲ’ ಎಂಬ ಮೆಚ್ಚುಗೆಯ ಮಾತು ಶ್ರೀಮತಿ  ಗಾಂಧಿ­ಯವರಿಂದ ಬಂದಿತ್ತು. ವಿಜ್ಞಾನದ ವಿಷಯದಲ್ಲಿ ಯಾರಿಗೂ ಕ್ಯಾರೇ ಅನ್ನದ ‘ಈತ ‘ಬೆಂಕಿಯ ಚಂಡು’ ಎಂದು ಸರ್ ಸಿ.ವಿ.ರಾಮನ್ ಅವರಿಂದ ಹಾಗೂ ‘ಇವರೊಬ್ಬ ಡೈನಮೊ’ ಎಂದು ಸತೀಶ್ ಧವನ್ ಅವರಿಂದ ಸರ್ಟಿಫಿಕೇಟ್ ಪಡೆದವರು ಸಿಎನ್‌ಆರ್.ರಾಜಕಾರಣಿಗಳಿಗಿಂತ ಹೆಚ್ಚಾಗಿ ಆಡಳಿತ­ಶಾಹಿಯ ಬಗ್ಗೆ ಇವರಿಗೆ ಕೋಪ ಇದೆ. ದೇಶದ ಉನ್ನತಿ ಸಾಧಿಸಲು, ರಾಷ್ಟ್ರದ ಘನತೆ ಹೆಚ್ಚಿಸಲು ಇಂತಿಷ್ಟು ಹಣ, ಇಂತಿಂಥ ಸೌಲಭ್ಯ ನೀಡ­ಬೇ­ಕೆಂದು ಇವರ ಅಧ್ಯಕ್ಷತೆಯ ತಜ್ಞರ ಸಮಿತಿ ನಿರ್ಧ­ರಿ­ಸಿರುತ್ತದೆ. ಅದಕ್ಕೆ ಪ್ರಧಾನಿಯೇ ಸಮ್ಮತಿ­ಸಿ­ದರೂ ಕೂಡ ಬಜೆಟ್ ವೇಳೆಗೆ ಅದು ನೀರು­ಪಾಲಾ­ಗಿರುತ್ತದೆ. ಅಥವಾ ಸಂಶೋಧನೆಗೆ ಬದಲು ಕಟ್ಟಡಕ್ಕೊ, ಅಸಮರ್ಪಕ ಖರೀದಿಗೊ ಅಪವ್ಯಯ­ವಾಗಿರುತ್ತದೆ.ಇವರು ಏನೇ ಹೊಸ­ದನ್ನು ಸೂಚಿಸಿದರೂ ಅಧಿಕಾರಿಗಳು ಅದಕ್ಕೆ ಆಡಳಿ­­ತಾತ್ಮಕ ಕಾರಣ ನೀಡಿ ಅಡ್ಡಗಾಲು ಹಾಕಿ­ರುತ್ತಾರೆ. ಭಾರತ ದೇಶ ತನ್ನ ಒಟ್ಟೂ ನಿವ್ವಳ ಉತ್ಪನ್ನ­ದಲ್ಲಿ ಹಿಂದೆಲ್ಲ ಶೇಕಡಾ ೧.೨ ಅಥವಾ ೧.೩ರಷ್ಟನ್ನು ವಿಜ್ಞಾನಕ್ಕೆ ಮೀಸಲಿಡು­ತ್ತಿತ್ತು. ಈಗೀಗ ಇದು ಕಮ್ಮಿಯಾಗುತ್ತ ಶೇಕಡಾ ೦.೯ಕ್ಕೆ ಬಂದಿದೆ. ಅಮೆರಿಕ, ಕೆನಡಾ, ಯುರೋಪ್, ಚೀನಾ, ರಷ್ಯ, ಕೊರಿಯಾ, ಜಪಾನ್ ಎಲ್ಲ ದೇಶಗಳೂ ತಮ್ಮ ನಿವ್ವಳ ಉತ್ಪನ್ನದ ಶೇಕಡಾ ೩ಕ್ಕಿಂತ ಹೆಚ್ಚು ಭಾಗವನ್ನು ವಿಜ್ಞಾನಕ್ಕೆ ಮೀಸ­ಲಾಗಿಡುತ್ತಿವೆ.ಆ ರಾಷ್ಟ್ರಗಳ ಪ್ರತಿಷ್ಠಿತ ಪದವಿ, ಪ್ರಶಸ್ತಿ­ಗಳನ್ನು ಪಡೆದ ರಾಯರಿಗೆ ನಮ್ಮ ರಾಜಕಾರಣಿಗಳ ಬಗ್ಗೆ, ಆಡಳಿತಶಾಹಿಯ ಬಗ್ಗೆ ಕೋಪ ಬರುವುದು ಸಹಜವೇ.    ಬೇಕೆಂದಾಗ ಫೋನ್ ಎತ್ತಿ ರಾಷ್ಟ್ರದ ಸರ್ವಶಕ್ತರೊಂದಿಗೆ ಸಂಭಾಷಿ­ಸಬಲ್ಲ ಇವರು ತೀರ ಕೆಳಮಟ್ಟದ ಅಧಿಕಾರಿಯಿಂದ ಹೈರಾಣಾ­ಗುತ್ತಾರೆ. ‘ಭಾರ­ತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ­ನಾಗಿದ್ದಾಗ ನನ್ನ ಬಹಳಷ್ಟು ಸಮಯವೆಲ್ಲ ಈ ಕ್ಯಾಂಪಸ್ಸಿಗೆ ನೀರು, ವಿದ್ಯುತ್ತನ್ನು ಒದಗಿಸುವ ಹೋರಾಟ­ದಲ್ಲೇ ಹೋಯಿತು’ ಎಂದೊಮ್ಮೆ ಇವರು ವ್ಯಥಿಸಿದ್ದರು. ‘ದೇಶ ಹೆಮ್ಮೆಪಡುವಂಥ ಏನನ್ನೂ ಸಾಧಿಸಲು ಯಾರಿಗೂ ಸಾಧ್ಯವಾಗದಷ್ಟು ಬಿಗಿ­ಯಾಗಿದೆ ಈ ಕೆಂಪುಪಟ್ಟಿಯ ಕಡತ ಕುಣಿಕೆ’ ಎಂದು ಕೂಡ ಹೇಳಿದ್ದರು.ಕೋಪಕ್ಕಿಂತ ಹೆಚ್ಚಾಗಿ ಅಸಹಾಯಕತೆ ಇವರನ್ನು ಬಾಧಿಸುತ್ತದೆ. ಭೋಪಾಲ ದುರಂತಕ್ಕೆ ಎಮ್‌ಐಸಿ ಬದಲು ಹೈಡ್ರೊಜನ್ ಸೈನೈಡ್ ಎಂಬ ಘೋರ ನಾತ್ಸಿವಿಷ ಕಾರಣವೆಂದು ಈ ರಸಾಯನ ವಿಜ್ಞಾನಿಗೆ ಅನ್ನಿಸಿತ್ತು. ಇವರ ಮಿತ್ರರೇ ಆಗಿದ್ದ ವೈದ್ಯಕೀಯ ಮಂಡಳಿಯ ಮಹಾನಿರ್ದೇಶಕರು ಹಾಗೂ ರಾಷ್ಟ್ರೀಯ ಕೆಮಿಕಲ್ ಲ್ಯಾಬ್‌ಗಳ ಮುಖ್ಯಸ್ಥರು ಖಾಸಗಿಯಾಗಿ ಈ ಗುಮಾನಿ­ಯನ್ನು ಖಚಿತಪಡಿಸಿದ್ದರು ಕೂಡ. ಪ್ರಧಾನಿಯ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದ ರಾಯರು ರಾಜೀವ್ ಗಾಂಧಿಯವರ ಎದುರೇ ಅಂಥ ತಜ್ಞರೆಲ್ಲರ ಸಭೆಯನ್ನು ಕರೆಸಿದರು. ಅಂದು ಬಾಯಿ ಬಿಡಬೇಕಿದ್ದ ಮುಖ್ಯಸ್ಥರೆಲ್ಲ ಸಭೆಗೆ ಬಾರದೆ ನುಣುಚಿಕೊಂಡರು.ಸ್ವತಃ ಪ್ರಧಾನಿ­ಯೇ ಇಷ್ಟಪಟ್ಟಿದ್ದರೂ ಈ ತನಿಖೆ ನಡೆಯಲೇ ಇಲ್ಲ. ‘ನನಗೆ ತೀರ ನಾಚಿಕೆ ಯಾಯಿತು; ಅಷ್ಟೆತ್ತರಕ್ಕೇರಿದ ವಿಜ್ಞಾನಿಗಳಲ್ಲೂ ಪ್ರಾಮಾಣಿಕತೆ, ಋಜುತ್ವ ಇಲ್ಲದಿದ್ದರೆ ಹೇಗೆ?’ ಎಂದು ರಾವ್ ‘ಕರೆಂಟ್ ಸೈನ್ಸ್‌’ ಪತ್ರಿಕೆಯಲ್ಲಿ ಕೇಳಿದ್ದಾರೆ. ಹಾಗೆಯೇ ಒಮ್ಮೆ ಬಹುದೊಡ್ಡ ಸಂಸ್ಥೆಯೊಂದರ ನಿರ್ದೇಶಕ ಹುದ್ದೆಗೆ ಇವರು ಮತ್ತು ರಾಜಾರಾಮಣ್ಣರಿದ್ದ ಆಯ್ಕೆ ಸಮಿತಿ ಒಬ್ಬ ಯೋಗ್ಯ ವ್ಯಕ್ತಿಯನ್ನು ಸಚಿವರ ಸಮ್ಮುಖದಲ್ಲೇ ಆಯ್ಕೆ ಮಾಡಿತು. ಆಮೇಲೆ ನೋಡಿದರೆ ಸಚಿವ­ರಿಗೆ ಬೇಕಿದ್ದ ಬೇರೊಬ್ಬ ವ್ಯಕ್ತಿ ನಿರ್ದೇಶಕರಾದರು.ಎರಡು ಬಾರಿ ನೊಬೆಲ್ ಪ್ರಶಸ್ತಿಗಳಿಂದ ಇವರು ವಂಚಿತರಾಗಿದ್ದಾರೆ. ಮೂರು ಬಾರಿ ಶಿಷ್ಯಂದಿರು ಮಾಡಿದ ಕೃತಿಚೌರ್ಯದ ತಪ್ಪಿಗೆ ಇವರು ಕ್ಷಮೆ ಕೇಳಿದ್ದಾರೆ. (ಕೃತಿಚೌರ್ಯ ಅಂಥ ಗಂಭೀರವಾದದ್ದೇನೂ ಆಗಿರಲಿಲ್ಲ. ಸಂಶೋ­ಧನಾ ಪ್ರಬಂಧದ ಪ್ರಸ್ತಾವನೆಯ ಒಂದೆರಡು ವಾಕ್ಯಗಳನ್ನು ಬೇರೆ ಯಾರದ್ದನ್ನೋ ನಕಲು ಮಾಡಿದ್ದೇ ವಿನಾ ಸಂಶೋಧನೆಯ ಫಲಿತಾಂಶ­ವನ್ನು ಕದ್ದಿದ್ದಲ್ಲ.) ಆದರೂ ಕಳಂಕ, ವಿವಾದ ಇವರ ಹೆಸರಿಗೆ ತಗುಲಿಕೊಂಡಿದೆ.ನಮಗೆ ಸದ್ಯಕ್ಕೆ ಹೊಸ ಐಐಟಿ ಬೇಡವೆಂದು ಹೇಳಿ ಇವರೊಮ್ಮೆ ವಿವಾದಕ್ಕೆ ಸಿಲುಕಿದ್ದರು. ವಿವಾದ ಏಕೆಂದರೆ ದೇಶಕ್ಕೆ ಇನ್ನೂ ಹತ್ತಾರು ಐಐಟಿಗಳು ಬೇಕೆಂದೂ ಅದಕ್ಕೆ ಇಂತಿಂಥ ಸಿದ್ಧತೆಗಳು ಬೇಕೆಂದೂ ರಾವ್ ಮುಖ್ಯಸ್ಥರಾಗಿದ್ದ ಸಮಿತಿ ಮನಮೋಹನ್ ಸಿಂಗ್ ಎದುರೇ ನಿರ್ಧರಿಸಿತ್ತು ಕೂಡ. ಆದರೆ ಯಾವ ಪೂರ್ವಸೂಚನೆ, ಯಾವುದೇ ತಯಾರಿ ಇಲ್ಲದೇ ದಿನ ಬೆಳಗಾಗುವುದರೊಳಗಾಗಿ ಉತ್ತರದ ರಾಜ್ಯಗಳು ಅವುಗಳನ್ನೆಲ್ಲ ಲಪಟಾಯಿಸಿ ಐಐಟಿಗಳನ್ನು ಸ್ಥಾಪಿಸುವುದಾಗಿ ಘೋಷಿಸಿಯೇ­ಬಿಟ್ಟವು.‘ಐಐಟಿ ಎಂದರೆ ಅದೇನು ಪ್ರೈಮರಿ ಸ್ಕೂಲ್ ಅಂದುಕೊಂಡಿದ್ದಾರಾ? ಯೋಗ್ಯ ಶಿಕ್ಷಕರನ್ನು, ಸೌಲಭ್ಯಗಳನ್ನು ಮೊದಲು ಸೃಷ್ಟಿ ಮಾಡಿಕೊಳ್ಳಬೇಕಲ್ಲವೆ? ಎಲ್ಲಿದ್ದಾರೆ ಶಿಕ್ಷಕರು?’ ಎಂದು ಗುಡುಗಿದ್ದರು. ಇದು ಅಂದಿನ ಮುಖ್ಯ­ಮಂತ್ರಿ ಯಡಿಯೂರಪ್ಪ ಅವರಿಗೆ ಕೇಳಿಸ­ಲಿಲ್ಲವೇನೊ. ಈ ವಿವಾದದ ನೆನಪು ಮಸಕಾ­ಗುವ ಮೊದಲೇ ಅವರು ‘ಬೆಂಗಳೂರಿಗೂ ಐಐಟಿ ತರಿಸುತ್ತೇನೆ’ ಎಂತಲೇ ಘೋಷಿಸಿದರು.ಶಿಕ್ಷಕರನ್ನು, ಸಂಶೋಧಕರನ್ನು ತಯಾರಿ­ಸಲೆಂದು ಪ್ರೊ. ರಾವ್ ಈಗಲೂ ಶ್ರಮಿಸು­ತ್ತಿದ್ದಾರೆ. ಇವರದು ಗಟ್ಟಿ ಕೆಮಿಸ್ಟ್ರಿ! ಹಿಂದೊಮ್ಮೆ ಶಿಷ್ಯನೊಬ್ಬ, ‘ಸರ್ ಚಿನ್ನದ ಕನಿಷ್ಠ ಎಷ್ಟು ಪರಮಾಣುಗಳು ಒಂದಾಗಿ ಕೂಡಿದಾಗ ಚಿನ್ನದ ಗುಣ ಬರುತ್ತದೆ?’ ಎಂದು ಕೇಳಿದ್ದ. ಇವರು ತಲೆಬಿಸಿ ಮಾಡಿಕೊಂಡು ಆತನೊಂದಿಗೆ ಮೂರು ವರ್ಷ ಸೂಕ್ಷ್ಮಜಗತ್ತಿನಲ್ಲಿ ತಡಕಾಡಿ ‘೩೦೦ ಪರಮಾಣು’ ಎಂದು ಜಗತ್ತಿಗೆ ಘೋಷಿಸಿದರು. ಪ್ರತಿಭೆಯ ಒಂದೊಂದೇ ಪರಮಾಣುವನ್ನು ಹೆಕ್ಕಿ ಹೆಕ್ಕಿ ಒಟ್ಟುಗೂಡಿಸಿ ಚಿನ್ನ ತಯಾರಿಸಬಲ್ಲ ಸ್ಪರ್ಶಮಣಿ ಇವರು. ಭಾರತ ರತ್ನ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.