ಮಂಗಳವಾರ, ಮೇ 18, 2021
23 °C

ಶಾಲೆಯಲ್ಲೇನೋ ಕಡ್ಡಾಯ ತೇರ್ಗಡೆ; ಬದುಕಿನಲ್ಲಿ?

ಎಂ ನಾಗರಾಜ್ Updated:

ಅಕ್ಷರ ಗಾತ್ರ : | |

ಶಾಲೆಯಲ್ಲೇನೋ ಕಡ್ಡಾಯ ತೇರ್ಗಡೆ; ಬದುಕಿನಲ್ಲಿ?

ರಾಜ್ಯದಲ್ಲಿ ಸಂಪೂರ್ಣ ಸಾಕ್ಷರತೆ ಸಾಧಿಸ­ಬೇಕು ಎಂಬ ಉದ್ದೇಶದಿಂದ, ಸರ್ಕಾರ ಮಕ್ಕಳನ್ನು ಶಾಲೆಯತ್ತ ಸೆಳೆಯಲು ನಾನಾ ಕಾರ್ಯಕ್ರಮ ರೂಪಿಸಿದೆ. ಬಿಸಿಯೂಟ, ಹಾಲು, ಸೈಕಲ್, ಸಮವಸ್ತ್ರ, ಪುಸ್ತಕ ಎಲ್ಲವನ್ನೂ ಕೊಡು­ತ್ತಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ವಿನಿಯೋಗಿಸು­ತ್ತಿದೆ. ಮಕ್ಕಳ ಹಸಿದ ಹೊಟ್ಟೆ ತುಂಬಿಸುತ್ತಿರುವ ಸರ್ಕಾರಿ ಯೋಜನೆಗಳು ನೆತ್ತಿ ಹಸಿವಿಗೆ ಮಾತ್ರ ಪರಿಹಾರ ಒದಗಿಸಿಲ್ಲ ಎಂಬುದೂ ಅಷ್ಟೇ ಸತ್ಯ.ಇದರಲ್ಲಿ ಸರ್ಕಾರ, ಶಿಕ್ಷಕರು, ಸಮುದಾಯ... ಎಲ್ಲರ ಹೊಣೆಗಾರಿಕೆಯೂ ಇದೆ. ಕೇವಲ ಮಕ್ಕಳನ್ನು ಶಾಲೆಗೆ ಸೆಳೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಅಲ್ಲಿಗೆ ಬಂದು ಕಲಿತು, ಬದುಕು ರೂಪಿಸಿಕೊಳ್ಳುವ ಸಾಮರ್ಥ್ಯ ಅವರಿಗೆ ಲಭಿಸಬೇಕು. ಗುಣಮಟ್ಟವಿಲ್ಲದ ಶಿಕ್ಷಣವು ಮಕ್ಕಳ ಬದುಕಿನಲ್ಲಿ ಬೆಳಕು ಮೂಡಿ­ಸುವ ಬದಲಿಗೆ ಕತ್ತಲೆ ಆವರಿಸುವಂತೆ ಮಾಡು­ತ್ತದೆ. ಕಲಿಕೆಗೆ ಬೇಕಾದ ಪೂರಕ ವಾತಾವರಣ, ಮೂಲಸೌಕರ್ಯ, ಪರಿಕರ ಇತ್ಯಾದಿಗಳನ್ನು ಸರ್ಕಾರ ಆದ್ಯತೆ ಮೇರೆಗೆ ಒದಗಿಸಬೇಕು.ಇತ್ತೀಚೆಗೆ ಚುನಾವಣಾ ಸಮೀಕ್ಷೆ ಸಲುವಾಗಿ ನಾನು ಕಲಘಟಗಿಗೆ ಹೋಗಿದ್ದಾಗ ಸ್ನೇಹಿತ­ರೊಬ್ಬರು ಸಣ್ಣ ಪಟ್ಟಣಗಳಲ್ಲಿನ ಸರ್ಕಾರಿ ಶಾಲೆ­ಗಳು ನಡೆಯುತ್ತಿರುವ ಸ್ಥಿತಿಯನ್ನು ಬಿಚ್ಚಿಟ್ಟರು. ಜತೆಗೆ ಮಕ್ಕಳ ಗ್ರಹಿಕೆ ಮಟ್ಟವನ್ನೂ ತೆರೆದಿಟ್ಟರು. ‘ಎಂಟನೇ ತರಗತಿಯಲ್ಲಿ ತೇರ್ಗಡೆ­ಯಾಗಿ ಒಂಬ­ತ್ತನೇ ತರಗತಿಗೆ ಸೇರಿರುವ ಮಕ್ಕ­ಳಿಗೂ ಕನ್ನಡ ಓದು ಕಬ್ಬಿಣದ ಕಡಲೆಯಾಗಿದೆ. ಅಕ್ಷರಗಳನ್ನು ಕೂಡಿಸಿಕೊಂಡು, ಎರಡನೇ ಅಥವಾ ಮೂರನೇ ತರಗತಿ ಮಕ್ಕಳಂತೆ ಓದುತ್ತಾರೆ. ಒಂದು ತಾಸು ಪಾಠ ಕೇಳಿದ ನಂತರವೂ ‘ಪ್ರಾಮಾಣಿಕತೆ’, ‘ಕದಂಬ’ ಎಂಬ ಪದಗಳನ್ನು ಉಚ್ಚರಿಸಲು ಮಕ್ಕ­ಳಿಗೆ ಆಗದು’ ಎಂದು ಕಲಿಸಲು ತಾವು ಪಡುತ್ತಿ­ರುವ ಕಷ್ಟವನ್ನು ಅವರು ಹೇಳಿದಾಗ ಸರ್ಕಾರಿ ಶಾಲೆಗಳ ಬಗ್ಗೆ ಬೇಸರ ಮೂಡಿತು. ಅಂದ­ಮಾತ್ರಕ್ಕೆ ಸಾರಾಸಗಟಾಗಿ ಎಲ್ಲ ಸರ್ಕಾರಿ ಶಾಲೆ­ಗಳೂ ಇದೇ ರೀತಿ ಇವೆ ಎಂದೇನೂ ಅಲ್ಲ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿವೆ. ನೆರೆಯ ಧಾರವಾಡ ಜಿಲ್ಲೆ­ಯಲ್ಲಿ ಇದೇಕೆ ಸಾಧ್ಯವಾಗಿಲ್ಲ?ಮಕ್ಕಳ ಈ ಸ್ಥಿತಿಗೆ ಒಂದು ರೀತಿಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯೂ ಕಾರಣ. ಈ ಕಾಯ್ದೆ ಪ್ರಕಾರ ಎಂಟನೇ ತರಗತಿವರೆಗೆ ಮಕ್ಕಳನ್ನು ಅನುತ್ತೀರ್ಣ­ಗೊಳಿಸುವಂತಿಲ್ಲ.  ಕಲಿತಿರಲಿ; ಬಿಡಲಿ ಅವರನ್ನು ತೇರ್ಗಡೆ ಮಾಡಬೇಕು. ಕಡ್ಡಾಯ ಶಿಕ್ಷಣ ನಿಯ­ಮದ ಪ್ರಕಾರ 14 ವರ್ಷದವರೆಗೆ ಮಕ್ಕಳು ಶಾಲೆ­ಯಲ್ಲಿರಬೇಕು. ಹಿಂದೆಲ್ಲಾ ಪ್ರಾಥಮಿಕ ಹಂತ­ದಲ್ಲೂ ಜ್ಞಾನ ಸಂಪಾದನೆಯಲ್ಲಿ ಹಿಂದೆ ಬಿದ್ದ­ವರು ನಪಾಸು ಆಗುತ್ತಿದ್ದರು. ಈಗ ನಿಯ­ಮದ ಪ್ರಕಾರ ನಪಾಸು ಮಾಡುವಂತಿಲ್ಲ­ವಾದರೂ ಶಾಲೆ ಸೇರಿದವರಿಗೆ ಕಲಿಸಲೇಬೇಕಲ್ಲ. ಅವರಿಗೆ ತಿಳಿಯುವಂತೆ ಹೇಳಿಕೊಡಬೇಕಾದ ಜವಾಬ್ದಾರಿ­ಯಿಂದ ಶಿಕ್ಷಕರು ತಪ್ಪಿಸಿಕೊಳ್ಳಲು ಆಗದು.ಹಿಂದೆ ಶಾಲೆಗಳಿಗೆ ವಿಷಯ ಪರಿವೀಕ್ಷಕರು ಭೇಟಿ ನೀಡಿ ಪಾಠ–ಪ್ರವಚನ ಹೇಗೆ ನಡೆಯು­ತ್ತಿದೆ; ಮಕ್ಕಳಿಗೆ ಪಾಠ ಅರ್ಥವಾಗಿದೆಯೇ ಇಲ್ಲವೇ ಎಂಬುದನ್ನು ತರಗತಿಗಳಲ್ಲಿ ಪ್ರಶ್ನೆ ಕೇಳುವ ಮೂಲಕ ಪರಿಶೀಲಿಸುತ್ತಿದ್ದರು. ಪರಿವೀಕ್ಷಕರು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳು ಉತ್ತರಿಸದಿದ್ದರೆ ಏನಪ್ಪಾ ಮಾಡುವುದು ಎಂಬ ಭಯ ಶಿಕ್ಷಕರಿಗೂ ಇತ್ತು. ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂಬ ಹೆದರಿಕೆಯಿಂದ ಒಂದಿಷ್ಟು ಕಲಿಸುತ್ತಿದ್ದರು. ಅಂತಹ ವಾತಾವರಣ ಈಗಿಲ್ಲ. ಈಗಲೂ ಅಧಿಕಾರಿಗಳು ತಪಾಸಣೆಗಾಗಿ ಶಾಲೆಗಳಿಗೆ ಭೇಟಿ ಕೊಡುತ್ತಾರೆ. ಆದರೆ ಪರಿಶೀಲನಾ ಕ್ರಮ, ಮಾನದಂಡ ಬದಲಾಗಿದೆ. ಶಿಕ್ಷಕರು ಪುಸ್ತಕಗಳಲ್ಲಿ ನಮೂದಿಸುವ ಮಾಹಿತಿಯನ್ನು ಆಧರಿಸಿ, ಬಿಸಿಯೂಟ ಕಾರ್ಯಕ್ರಮ ಸರಿಯಾಗಿ ನಡೆಯು­ತ್ತಿ­ದೆಯೇ? ಸಮವಸ್ತ್ರ ವಿತರಣೆ ಆಗಿದೆಯೇ? ಸರ್ಕಾರಿ ಕಾರ್ಯಕ್ರಮಗಳು ಸರಿಯಾಗಿ ಮುಟ್ಟಿವೆಯೇ ಎಂಬುದನ್ನು ನೋಡಿಕೊಂಡು ಹಿಂತಿರುಗುವ ಮಟ್ಟಕ್ಕೆ ಈ ತಪಾಸಣೆ ಸೀಮಿತ­ವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಪಾಠ–ಪ್ರವಚನಗಳು ಸರಿಯಾಗಿ ನಡೆಯದಿದ್ದರೂ ಕೇಳುವವರು ಇಲ್ಲದಂತಾಗಿದೆ.ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸೇತುಬಂಧ ಮತ್ತು ಪರಿಹಾರ ಬೋಧನೆ ತರಗತಿಗಳನ್ನು ನಡೆಸಲಾಗುತ್ತದೆ. ಇದರಿಂದಲೂ ಹೇಳಿಕೊಳ್ಳುವಂತಹ ಉಪಯೋಗವಾಗಿಲ್ಲ. ಇದರ ಬದಲಿಗೆ ಕಲಿಕೆಯಲ್ಲಿ ಹಿಂದೆ ಉಳಿದು ಬೇರೆ ಕೌಶಲ ಹೊಂದಿರುವ ಮಕ್ಕಳನ್ನು ಗುರುತಿಸಿ ಅದೇ ವಿಷಯದಲ್ಲಿ ಶಿಕ್ಷಣ ಕೊಡಿಸುವ ವ್ಯವಸ್ಥೆ­ಯನ್ನಾದರೂ ಶಿಕ್ಷಕರು ಮಾಡಬೇಕು.ಶಿಕ್ಷಕರು ಪಾಠ ಮಾಡುವುದನ್ನು ಬಿಟ್ಟು ಉಳಿದ ಚಟುವಟಿಕೆಗೇ ಹೆಚ್ಚು ಗಮನ ಕೊಡುತ್ತಿ­ದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇರುವಷ್ಟು ರಾಜಕೀಯ ಶಕ್ತಿ ಇತರರಿಗೆ ಇಲ್ಲ. ಸ್ಥಳೀಯ ಶಾಸಕರೊಬ್ಬರಿಗೆ ಬದ್ಧರಾಗಿದ್ದರೆ ಸಾಕು ಎಂಬ ಭಾವನೆಯೂ ಹಲವು ಶಿಕ್ಷಕರಲ್ಲಿದೆ. ಈ ಚಾಳಿ ಸರಿಯಲ್ಲ. ಅವರು ತಮ್ಮ ಸ್ವಾರ್ಥ ಸಾಧನೆಗಾಗಿ ಮಕ್ಕಳ ಹಿತವನ್ನು ಬಲಿಕೊಡುತ್ತಿದ್ದಾರೆ ಎಂದರೆ ತಪ್ಪೇನೂ ಅಲ್ಲ. ಶಿಕ್ಷಕರ ಲೋಪವನ್ನು ಗುರುತಿಸಿ­ದರೂ ಅವರನ್ನು ನಿಯಂತ್ರಿಸುವ ಶಕ್ತಿ ಇಲಾಖೆಯ ಅಧಿಕಾರಿಗಳಿಗೆ ಇಲ್ಲ. ಬದಲಿಗೆ ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಶಿಕ್ಷಕರು ಅಧಿಕಾರಿಗಳನ್ನೇ  ನಿಯಂತ್ರಿಸುತ್ತಿದ್ದಾರೆ. ಜನರಿಂದ ಚುನಾಯಿತ­ರಾದ ಪ್ರತಿನಿಧಿಗಳೂ ಶಾಲಾ ಶಿಕ್ಷಕರನ್ನು ದೂರವಿಟ್ಟು, ಅವರಿಗೆ ವೃತ್ತಿಗೆ ಬದ್ಧರಾಗಿರುವಂತೆ ಬುದ್ಧಿ ಹೇಳಬೇಕು. ಈ ರಾಜಕಾರಣಿಗಳು ಅದನ್ನು ಮಾಡದೇ ತಮ್ಮ ‘ಕೆಲಸ’ಗಳಿಗೆ ಈ ಶಿಕ್ಷಕರನ್ನೇ ಅವಲಂಬಿಸಿರುವುದು ಕೂಡ ಲಜ್ಜೆಗೆಟ್ಟ ವರ್ತನೆ.ಇತ್ತೀಚೆಗೆ ರಾಜ್ಯದಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅಡಿಯಲ್ಲಿ ಹೊಸ ಪಠ್ಯಕ್ರಮವನ್ನು ಜಾರಿ ಮಾಡಲಾಗಿದೆ. ಆದರೆ ಅದಕ್ಕೆ ಅನುಗುಣ­ವಾಗಿ ಶಿಕ್ಷಕರ ನೇಮಕಾತಿಗೆ ಗಮನಕೊಟ್ಟಿಲ್ಲ. ಹೊಸ ಪಠ್ಯಕ್ರಮವನ್ನು ಕಲಿಸುವ ಸಾಮರ್ಥ್ಯ ಬಹುತೇಕ ಶಿಕ್ಷಕರಿಗೆ ಇಲ್ಲ. ತಾವು ಕಲಿತಿಲ್ಲದೇ ಇರುವ ವಿಷಯಗಳನ್ನು ಬೋಧಿಸಬೇಕಾದ ಅನಿವಾರ್ಯತೆ ಅವರಿಗಿದೆ. ಆದರೆ ತೋರಿಸಿ­ಕೊಳ್ಳದೆ ತಿಳಿದದ್ದನ್ನು ಹೇಳಿಕೊಟ್ಟು ಕೈತೊಳೆದು­ಕೊಳ್ಳುತ್ತಿದ್ದಾರೆ. ಇಂತಹ ಸನ್ನಿವೇಶಗಳಿಂದಲೇ ಶಿಕ್ಷಣಕ್ಕೆ ಒಳಪೆಟ್ಟು ಬೀಳುತ್ತಿದೆ. ಹೊಸ ಪಠ್ಯಕ್ರಮಕ್ಕೆ ಅನುಗುಣವಾಗಿ ಶಿಕ್ಷಕರಿಗೆ ಅಗತ್ಯ ತರಬೇತಿ ಕೊಡಿಸಬೇಕು. ಖಾಲಿ ಹುದ್ದೆಗಳಿಗೆ ವಿಷಯ ಪರಿಣತ ಶಿಕ್ಷಕರನ್ನೇ ನೇಮಿಸಿಕೊಳ್ಳಬೇಕು.ಅದೇ ಖಾಸಗಿ ಶಾಲೆಗಳಲ್ಲಿ ದುಡಿಯುವ ಶಿಕ್ಷಕರಿಗೆ ಸೇವಾ ಭದ್ರತೆ ಇಲ್ಲವೆ ಕೈತುಂಬ ಸಂಬಳ ಇರುವುದಿಲ್ಲ. ಆದರೂ ಬದ್ಧತೆಯಿಂದ, ಕಟ್ಟು­ನಿಟ್ಟಾಗಿ, ಉರು ಹೊಡೆಸಿಯಾದರೂ ವಿದ್ಯಾರ್ಥಿ­ಗಳಿಗೆ ಪಾಸಾಗುವಷ್ಟು ಕಲಿಸುತ್ತಾರೆ. ಹಾಗಾ­ಗಿಯೇ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಮುಗಿಬೀಳುತ್ತಾರೆ. ಸರ್ಕಾರಿ ಶಾಲಾ ಶಿಕ್ಷಕರಲ್ಲೂ ಇದೇ ಬದ್ಧತೆ ಇದ್ದಿದ್ದರೆ ಮಕ್ಕಳು ಬಹುಶಃ ಸಂತಸದಿಂದಲೇ ಕಲಿಯುತ್ತಿದ್ದರೇನೋ?ಸರ್ಕಾರಿ ಶಾಲೆಗೆ ಬರುವ ಮಕ್ಕಳಲ್ಲಿ ಹೆಚ್ಚಿ­ನವರು ಬಡಕುಟುಂಬದವರೇ ಆಗಿರುತ್ತಾರೆ. ಅವರ ಬದುಕು ಉತ್ತಮವಾಗಬೇಕು ಎಂಬ ಉದ್ದೇಶವಿಟ್ಟುಕೊಂಡೇ ಶಿಕ್ಷಕರು ಕಲಿಸಬೇಕು. ಆರ್ಥಿಕವಾಗಿ ಆ ಕುಟುಂಬದವರು ಸದೃಢ­ರಾಗಿದ್ದರೆ ಅವರೇಕೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಿದ್ದರು ಎಂಬುದು ಶಿಕ್ಷಕರ ಮನಸ್ಸಿನಲ್ಲಿ ಇರಬೇಕು. ಇಲ್ಲವಾದಲ್ಲಿ ಪೋಷ­ಕರು ಖಾಸಗಿ ಗ್ರಾಮೀಣ ಹಾಗೂ ಸಣ್ಣ ಸಣ್ಣ ಪಟ್ಟಣಗಳಲ್ಲೂ ಖಾಸಗಿ ಶಾಲೆಗಳತ್ತಲ್ಲೇ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗಾಗಲೇ ಕೆಲವೆಡೆ ಸರ್ಕಾರಿ ಶಾಲೆಗಳಿಗೆ ಮಕ್ಕಳ ಕೊರತೆಯಾಗಿ ಮುಚ್ಚುವ ಅಥವಾ ಸ್ಥಳಾಂತರ ಮಾಡುವ ಭೀತಿ ಎದುರಾಗಿದೆ. ಮುಂದೆ ಇದು ಶಿಕ್ಷಕರಿಗೇ ಸಂಚಕಾರ ಆಗಬಹುದು. ಶಿಕ್ಷಕರು ಈಗಲೇ ಎಚ್ಚರವಹಿಸಿ, ತಮ್ಮ ಜವಾಬ್ದಾರಿ ಮತ್ತು ವೃತ್ತಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು.ಬಿಸಿಯೂಟ, ಸಮವಸ್ತ್ರ, ಸೈಕಲ್‌ ವಿತರಣೆ ಜವಾಬ್ದಾರಿ ಜತೆಗೆ ಜನ–ದನ, ಆರ್ಥಿಕ ಗಣತಿ, ಅದು–ಇದು ಎಂದು ಹತ್ತು ಹಲವು ಕೆಲಸಗಳಿಗೆ ಶಿಕ್ಷಕರನ್ನು ಸರ್ಕಾರ ಬಳಸಿಕೊಳ್ಳುತ್ತಿದೆ. ಈ ಕೆಲಸಗಳಿಗೆ ಶಿಕ್ಷಕರನ್ನು ಬಳಸುವ ಬದಲಿಗೆ ಯಾವುದಾದರೂ ಏಜೆನ್ಸಿಗಳಿಗೆ ವಹಿಸುವುದು ಉತ್ತಮ. ಇಂಥ ಕೆಲಸಗಳು ಶಿಕ್ಷಕರಿಗೆ ಹೊರೆ ಆಗಿವೆ. ಅವರಿಗೆ ಇದರಿಂದ ಮುಕ್ತಿ ನೀಡಿ, ಅವರನ್ನು ಕೇವಲ ಬೋಧನಾ ಕೆಲಸಕ್ಕೆ ಸೀಮಿತಗೊಳಿಸುವತ್ತ ಸರ್ಕಾರ ಆಲೋಚಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.