ಬುಧವಾರ, ಮೇ 12, 2021
18 °C

ಶಾಲೆ ಕಲಿಸಿದ ಬದುಕಿನ ಪಾಠಗಳು

ಶಂಕರ ಬಿದರಿ Updated:

ಅಕ್ಷರ ಗಾತ್ರ : | |

ಬನಹಟ್ಟಿಯ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ನಾನು ಒಂದರಿಂದ ಏಳನೇ ತರಗತಿವರೆಗೆ ಕಲಿತದ್ದು. ಅಲ್ಲಿ ಪಾಠ ಕಲಿಸುತ್ತಿದ್ದ ರೀತಿಯ ಕುರಿತು ನನಗೆ ಹೆಮ್ಮೆ.ಇಂದಿನ ಯಾವ ಕಾನ್ವೆಂಟ್, ಸಿಬಿಎಸ್‌ಸಿ ಶಾಲೆಗಳಿಗಿಂತ ಏನೂ ಕಡಿಮೆ ಇಲ್ಲದಂತೆ ಇದ್ದಂಥ ಶಾಲೆ ಅದು. ಶಿಕ್ಷಕರು ಶಿಸ್ತಿನ ವಿಷಯದಲ್ಲಿ ಎಂದೂ ರಾಜಿಯಾಗುತ್ತಿರಲಿಲ್ಲ. ಐದು ನಿಮಿಷ ತಡವಾಗಿ ಬರುವ ವಿದ್ಯಾರ್ಥಿಗೂ ಶಿಕ್ಷೆ ಕಟ್ಟಿಟ್ಟಬುತ್ತಿ. ವಾರಕ್ಕೊಮ್ಮೆ ಶ್ರಮದಾನ. ನಿತ್ಯವೂ ಸಂಜೆ ಒಂದು ತಾಸು ಎಲ್ಲರೂ ತಪ್ಪದೇ ಆಟ ಆಡಲೇಬೇಕಾದ ವಾತಾವರಣ. ಆಗ ನಾವು ಪಾಟಿ, ಬಳಪ ಬಳಸುತ್ತಿದ್ದೆವು. ಕಲಿಕೆಯಲ್ಲಿ, ಅಕ್ಷರ ಬರೆಯುವುದರಲ್ಲಿ ಹಿಂದೆ ಇದ್ದ ವಿದ್ಯಾರ್ಥಿಗಳಿಗೆ ಶಾಲೆಯ ಅವಧಿ ಮುಗಿದ ನಂತರವೂ ಒಂದು ತಾಸು ವಿಶೇಷ ಪಾಠ ಹೇಳಿಕೊಡುವ ಪದ್ಧತಿ ಇತ್ತು.ನಿತ್ಯ ಬೆಳಿಗ್ಗೆ ಪ್ರಾರ್ಥನೆ ಮುಗಿದ ಮೇಲೆ ಪತ್ರಿಕೆಯ ತಲೆಬರಹಗಳನ್ನು ಓದಿಸುವ ರೂಢಿ. ಮಾಸ್ತರು ಯಾವಯಾವ ತಲೆಬರಹಗಳನ್ನು ಓದಬೇಕು ಎಂಬುದನ್ನು ಗುರುತು ಹಾಕಿ ಕೊಡುತ್ತಿದ್ದರು. ನಿತ್ಯವೂ ಆಯ್ದ ವಿದ್ಯಾರ್ಥಿ ಅವನ್ನು ಗಟ್ಟಿ ದನಿಯಲ್ಲಿ ಓದಬೇಕಿತ್ತು. ಆಗ ಎಲ್ಲರ ಮನೆಯಲ್ಲೂ ರೇಡಿಯೊ ಇರಲಿಲ್ಲ. ಟಿ.ವಿ.ಗಳಂತೂ ದೂರದ ಮಾತು. ಹಾಗಾಗಿ ದಿನಪತ್ರಿಕೆಯ ಈ ರೀತಿಯ ಓದು ಮಕ್ಕಳ ಕಿವಿಗೆ ಪ್ರಮುಖ ಸುದ್ದಿ ದಾಟಿಸಲಿ ಎಂಬುದು ಉದ್ದೇಶ.ಒಮ್ಮೆ ಸಹಪಾಠಿಯೊಬ್ಬ ತಲೆಬರಹಗಳ ಜೊತೆಗೆ ಜಾಹೀರಾತೊಂದನ್ನೂ ಓದಿಬಿಟ್ಟ. ಆಗೆಲ್ಲಾ ಎಮ್ಮೆ ಕಳೆದುಹೋದರೆ ಅದರ ಚಹರೆಯ ಪಟ್ಟಿ ಬರೆದು, ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನಿಗದಿಪಡಿಸಿ ಜಾಹೀರಾತು ಕೊಡುವುದು ಸಹಜವಾಗಿತ್ತು. ಆ ಸಹಪಾಠಿ ತಲೆಬರಹಗಳ ಜೊತೆಗೆ ಅಂಥದೊಂದು ಜಾಹೀರಾತನ್ನು ಓದಿದ. ಎಲ್ಲರೂ ಗೊಳ್ಳನೆ ನಕ್ಕೆವು. ಆಗ ಅಲ್ಲಿದ್ದ ಹೆಡ್ ಮಾಸ್ತರು ನಗುನಗುತ್ತಾ, `ಆ ಎಮ್ಮೆ ಇಲ್ಲಿಗೇ ಬಂದಿದೆ... ನೋಡಿ' ಎಂದು ಅವನತ್ತ ನೋಟ ಬೀರಿ ಹೇಳಿದಾಗ ನಗುವಿನ ಅಲೆ ಇನ್ನೂ ದೊಡ್ಡದಾಯಿತು.ಸಹಾಯಕ ಶಿಕ್ಷಣಾಧಿಕಾರಿ, ಶಿಕ್ಷಣಾಧಿಕಾರಿ ಪ್ರತಿ ಆರು ತಿಂಗಳಿಗೊಮ್ಮೆ ಚಾಚೂ ತಪ್ಪದೆ ಶಾಲೆಗೆ ಭೇಟಿ ನೀಡುತ್ತಿದ್ದರು. ಅವರು ಬಸ್‌ನಲ್ಲಿ ಬಂದು, ಅಲ್ಲಿಂದ ಶಾಲೆಯನ್ನು ನಡೆದೇ ಸೇರುತ್ತಿದ್ದರು. ಅಲ್ಲಿ ಶಿಕ್ಷಕರನ್ನು ಕಾಳಜಿಯಿಂದ ಮಾತನಾಡಿಸಿ ಪಠ್ಯಕ್ರಮ, ಮಕ್ಕಳ ಕಲಿಕೆಯ ಮಟ್ಟದ ಬಗೆಗೆ ಕೇಳುತ್ತಿದ್ದರು. ಮಕ್ಕಳಿಗೂ ಕೆಲವು ಪ್ರಶ್ನೆಗಳನ್ನು ಕೇಳಿ, ಅವರು ಸರಿಯಾಗಿ ಕಲಿಯುತ್ತಿದ್ದಾರಷ್ಟೆ ಎಂಬುದನ್ನು ಖಾತರಿ ಪಡಿಸಿಕೊಳ್ಳುತ್ತಿದ್ದರು.ಕಲಿಯಲು ಕಷ್ಟ ಪಡುತ್ತಿದ್ದ ವಿದ್ಯಾರ್ಥಿಗಳು ಯಾರಾದರೂ ಕಂಡುಬಂದರೆ, ಅವರಲ್ಲಿ ಸುಧಾರಣೆ ತರಲು ಏನು ಮಾಡಬೇಕು ಎಂದು ಕಿವಿಮಾತು ಹೇಳುತ್ತಿದ್ದರು. ಮುಂದೆ ನನ್ನ ಸಹೋದ್ಯೋಗಿಯಾದ ಒಬ್ಬನ ತಂದೆ ಗಾಂವ್ಕರ್. ಅವರು ಕೂಡ ಶಿಕ್ಷಣಾಧಿಕಾರಿ ಆಗಿದ್ದರು. ಅವರು ನಮ್ಮ ಶಾಲೆಗೆ ಬಂದು ಪರಿಶೀಲನೆ ನಡೆಸಿ ಹೋಗುತ್ತಿದ್ದ ದಿನಗಳು ಸ್ಮೃತಿಪಟಲದಲ್ಲಿ ಹಾಗೆಯೇ ಉಳಿದಿವೆ.1961ರಲ್ಲಿ ಗೋವಾ ವಿಮೋಚನೆಯಾಯಿತು. ಮಿಲಿಟರಿ ಗಾಡಿಗಳು, ಜೀಪ್‌ಗಳು, ಬೈಕ್‌ಗಳು ನಮ್ಮ ಊರನ್ನು ಹಾದು ಹೋಗತೊಡಗಿದವು. ಹದಿನೈದು ದಿನ ಹಾಗೆ ಹೊರಟ ಸೇನೆಯವರ ಗಾಡಿಗಳನ್ನು ನೋಡುವುದೇ ನಮ್ಮ ಕಣ್ಣಿಗೆ ಹಬ್ಬ. ಶಾಲೆ ಬಿಟ್ಟ ಮೇಲೆ ಒಂದೆರಡು ತಾಸು ನಿಂತು ಆ ಗಾಡಿಗಳನ್ನು ನೋಡುತ್ತಿದ್ದ ನಮ್ಮಲ್ಲಿ ವಿಚಿತ್ರ ಆನಂದ.ಅದಾದ ಒಂದು ವರ್ಷಕ್ಕೆ ಚೀನಾ ವಿರುದ್ಧ ಯುದ್ಧ ಶುರುವಾಗುವ ವಾತಾವರಣ. ಎಲ್ಲೆಡೆ ಆತಂಕ. ರಾಷ್ಟ್ರೀಯ ರಕ್ಷಣಾ ನಿಧಿಗೆ ಹಣ ಹೊಂದಿಸುವ ಪ್ರಕ್ರಿಯೆ ಚುರುಕಾಯಿತು. ಇಂದಿರಾಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರ ತೂಕಕ್ಕೂ ಸಮ ಪ್ರಮಾಣದ ಬಂಗಾರವನ್ನು ಹೊಂದಿಸಿಕೊಡಬೇಕು ಎಂದು ವಿಜಾಪುರದ ಆಗಿನ ಜಿಲ್ಲಾಧಿಕಾರಿ ತೀರ್ಮಾನಿಸಿದ್ದು ವರ್ತಮಾನ ಪತ್ರಿಕೆಗಳಲ್ಲಿ ವರದಿಯಾಗಿತ್ತು.ನಾನು ಒಂದು ದಿನ ಶಾಲೆಯಿಂದ ಮರಳುವಾಗ ಡಬ್ಬ ಹಿಡಿದು ಕೆಲವರು ರಾಷ್ಟ್ರೀಯ ರಕ್ಷಣಾ ನಿಧಿಗೆ ಹಣ ಇತ್ಯಾದಿ ಸಂಗ್ರಹಿಸುತ್ತಿದ್ದರು. ನನ್ನ ಬಳಿ ಚಿಕ್ಕಾಸೂ ಇರಲಿಲ್ಲ. ಹಿಂದಿನ ವರ್ಷ ನನ್ನ ತಾಯಿಯ ತಂದೆಯವರ ಮನೆಗೆ ಹೋಗಿದ್ದಾಗ ನಾಲ್ಕೈದು ಗ್ರಾಮ್‌ನ ಬಂಗಾರದ ಉಂಗುರ ಮಾಡಿಸಿ ಕೊಟ್ಟಿದ್ದರು. ಬೆರಳಲ್ಲಿ ಇದ್ದ ಆ ಉಂಗುರವನ್ನೇ ತೆಗೆದು ಡಬ್ಬಕ್ಕೆ ಹಾಕಿದೆ. ಮನೆಗೆ ಹೋಗಿ ತಾಯಿಗೆ ಹೇಳುವ ಧೈರ್ಯ ಇರಲಿಲ್ಲ. ಉಂಗುರ ಎಲ್ಲಿ ಎಂದು ಕೇಳಿದಾಗ, ಎಲ್ಲೋ ಬಿದ್ದಿರಬೇಕು ಎಂದು ಜಾರಿಕೊಂಡೆ. ಸ್ನಾನದ ಮನೆ, ಪಾಟಿ ಚೀಲ, ಮನೆಯ ಮೂಲೆಮೂಲೆ ಎಲ್ಲೆಡೆಯೂ ತಾಯಿ ಹುಡುಕಿದರು. ಪಕ್ಕದ ಮನೆಯಲ್ಲಿ ನನ್ನ ಸಹಪಾಠಿ ಒಬ್ಬನಿದ್ದ. ಅವನ ಬಳಿಗೆ ಹೋಗಿ, `ಶಾಲೆ ಬಳಿ ಬೀಳಿಸಿಕೊಂಡು ಬಂದಿರಬೇಕು, ಹುಡುಕಿಕೊಂಡು ಬಾ' ಎಂದು ಕೇಳಿದರು. ಆಗ ಅವನು ಸತ್ಯ ಹೇಳಿಬಿಟ್ಟ. ತಾಯಿಗೆ ಎಲ್ಲಿಲ್ಲದ ಸಿಟ್ಟು ಬಂತು. ಸುಳ್ಳು ಹೇಳಿದ್ದನ್ನು ಸಹಿಸದ ಆಕೆ ಚೆನ್ನಾಗಿ ಥಳಿಸಿದಳು.1964ರಲ್ಲಿ ಜವಾಹರ ಲಾಲ್ ನೆಹರೂ ನಿಧನರಾದರು. ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿ ಆದರು. `ಜೈ ಜವಾನ್ ಜೈ ಕಿಸಾನ್' ಎಂಬ ಘೋಷಣೆಯನ್ನು ಅವರು ಆಗಲೇ ಮಾಡಿದ್ದು. ಆಗ ಆಹಾರದ ಸಮಸ್ಯೆ ಉಲ್ಬಣಗೊಂಡಿತ್ತು. ಸೋಮವಾರ ಎಲ್ಲರೂ ಒಪ್ಪೊತ್ತು ಊಟ ಮಾಡಬೇಕು ಎಂದು ಅವರು ಆದೇಶಿಸಿದ್ದರು. ಅದನ್ನು ನಮ್ಮ ಶಾಲೆಯಲ್ಲೂ ಎಲ್ಲ ಮಕ್ಕಳಿಗೂ ಮಾಸ್ತರು ಪ್ರಾರ್ಥನೆ ವೇಳೆ ತಿಳಿಸಿ ಹೇಳುತ್ತಿದ್ದರು. ಸೋಮವಾರ ರಾತ್ರಿ ಎಲ್ಲರೂ ಊಟ ಮಾಡದೆ ಮಲಗುತ್ತಿದ್ದೆವು. ದೆಹಲಿಯಲ್ಲಿ ಇದ್ದ ಪ್ರಧಾನಿ ಮಾಡಿದ ಘೋಷಣೆ ನಮ್ಮ ದೂರದ ಹಳ್ಳಿಯಲ್ಲೂ ಎಷ್ಟು ಅನೂಚಾನವಾಗಿ ಪಾಲನೆಯಾಗುತ್ತಿತ್ತು ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ.ನಾಲ್ಕನೇ ತರಗತಿಯಿಂದ ನಮಗೆ ಕನ್ನಡ ವ್ಯಾಕರಣ ಕಲಿಸುತ್ತಿದ್ದರು. ಪಠ್ಯಕ್ರಮದ ಭಾಗವಾಗದೇ ಇದ್ದರೂ ಕನ್ನಡ ಭಾಷಾಂತರ ಪಾಠಮಾಲೆಯ ಮೂರು ಪುಸ್ತಕಗಳನ್ನು ನಾವೆಲ್ಲಾ ಅಭ್ಯಾಸ ಮಾಡಿದೆವು. ಮಾಸ್ತರು ಅದರ ಪ್ರಾಮುಖ್ಯವನ್ನು ಆಗಲೇ ಅರಿತು, ನಮಗೆ ಹೇಳಿಕೊಟ್ಟಿದ್ದರು.ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವ ಬೆಳೆಯಲು ಭಾಷಾಂತರ ಮಾಲೆಯ ಪುಸ್ತಕಗಳ ಕಲಿಕೆಯೇ ಕಾರಣ. ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರ ಮಾಡುವ ಬಗೆಯನ್ನು ಆ ಪುಸ್ತಕ ಮಾಲೆಯಲ್ಲಿ ಅಚ್ಚುಕಟ್ಟಾಗಿ ತಿಳಿಸಲಾಗಿತ್ತು. ಪಿಯುಸಿವರೆಗೆ ಮಾತ್ರ ಔಪಚಾರಿಕ ಶಿಕ್ಷಣ ಪಡೆದರೂ ಕೆ.ಎ.ಎಸ್, ಐ.ಪಿ.ಎಸ್ ಹೊರತಾಗಿಯೂ ನಾನು ಬ್ಯಾಂಕ್ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದೆ. ಹದಿಮೂರು ಹದಿನಾಲ್ಕು ಉತ್ತಮ ದರ್ಜೆಯ ಉದ್ಯೋಗಗಳು ನನಗೆ ಸಿಕ್ಕಿದ್ದವು. ಅದಕ್ಕೆಲ್ಲಾ ಮೂಲ ಕಾರಣ ಬಾಲ್ಯದಲ್ಲಿ ನನಗೆ ಸಿಕ್ಕ ಪಾಠ. ಅಂಥ ಪಾಠ ಕಲಿಸಿದ ಶಿಕ್ಷಕರೆಲ್ಲರನ್ನು ಸ್ಮರಿಸಲೇಬೇಕು.ಸ್ನೇಹಿತನೊಬ್ಬ ಒಮ್ಮೆ ಶಾಲೆಯಿಂದ ಮರಳುವಾಗ, ಮನೆಯ ಕಡೆಗೆ ಹೆಜ್ಜೆ ಹಾಕದೆ ಪಕ್ಕದೂರಿಗೆ ಹೊರಟ. ಯಾಕೆ ಎಂದು ಕೇಳಿದಾಗ, ನಮ್ಮೂರಿನಲ್ಲಿ ಅವನ ಜಾತಿಯವರಿಗೆ ಕೂದಲು ಕತ್ತರಿಸುವುದಿಲ್ಲ ಎಂಬುದು ತಿಳಿಯಿತು. ಹೇರ್ ಕಟ್ ಮಾಡಿಸಿಕೊಳ್ಳಲು ಅನಿವಾರ್ಯವಾಗಿ ಅವನು ಪಕ್ಕದೂರಿಗೆ ಹೊರಟಿದ್ದ. ಆಗಲೇ ನನಗೆ ಮೊದಲಿಗೆ ಅಸ್ಪೃಶ್ಯತೆ ಅರಿವಿಗೆ ಬಂದದ್ದು. ಆ ಸಹಪಾಠಿ ಇಂದಿಗೂ ನನ್ನ ಸ್ನೇಹಿತ.

ಆಗ ನಮ್ಮೂರಿನಲ್ಲಿ ಪಾನನಿರೋಧ ಜಾರಿಗೆ ಬಂದಿತ್ತು. ಯಾರಾದರೂ ಕುಡಿದು ಗಲಾಟೆ ಮಾಡಿದರೆ, ಪೊಲೀಸರು ಬಂದು ವಿಚಾರಿಸಿಕೊಳ್ಳುತ್ತಿದ್ದರು. ನಮ್ಮ ಮನೆ ಬಳಿ ಒಬ್ಬ ಹಾಗೆ ಗಲಾಟೆ ಮಾಡುವಾಗ ಪೊಲೀಸರು ಬಂದರು. ತಲೆ ಮೇಲೆ ಪೇಟ, ಹಾಫ್‌ಪ್ಯಾಂಟ್, ಶರ್ಟ್ ಆಗ ಪೊಲೀಸರ ದಿರಿಸು. ಮೊದಲಿಗೆ ನಾನು ಪೊಲೀಸರನ್ನು ಕಂಡದ್ದೇ ಆಗ.ಆ ಕಾಲದಲ್ಲೇ ಶಾಲೆಯಿಂದ ನಮ್ಮನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಗದಗ, ವಿಜಾಪುರದ ಅನೇಕ ಸ್ಥಳಗಳನ್ನು ನೋಡಿದ್ದಲ್ಲದೆ ಜಮಖಂಡಿಯ ಪಟವರ್ಧನ್ ಅರಮನೆಯನ್ನೂ ನೋಡಲು ಹೋದೆವು. ಆ ಅರಮನೆಯ ಮುಂದೆಯೇ ನಮ್ಮ ಶಾಲೆಯ ಹುಡುಗರು ಮೊದಲ ಗ್ರೂಪ್ ಫೋಟೊ ತೆಗೆಸಿಕೊಂಡದ್ದು.ನಾಲ್ಕನೇ ತರಗತಿವರೆಗೆ ನಾನು ಸಾಮಾನ್ಯ ವಿದ್ಯಾರ್ಥಿಯಾಗಿದ್ದೆ. ಆಮೇಲೆ ಪ್ರತಿಭಾವಂತ ಎನಿಸಿಕೊಂಡೆ. ಪರೀಕ್ಷೆಗಳಲ್ಲಿ ಮಾಸ್ತರು ಮೊದಲು ನನ್ನ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿ, ಸೂಚನೆಗಳನ್ನು ನೀಡಿ, ಉಳಿದ ವಿದ್ಯಾರ್ಥಿಗಳ ಪತ್ರಿಕೆಗಳನ್ನು ನನ್ನಿಂದಲೇ ಮೌಲ್ಯಮಾಪನ ಮಾಡಿಸುತ್ತಿದ್ದರು. ಅಷ್ಟರ ಮಟ್ಟಿಗೆ ನಾನು ಹೆಸರು ಗಳಿಸಿದೆ. ಏಳನೇ ತರಗತಿಯಲ್ಲಿ ನಮ್ಮ ಕೇಂದ್ರಕ್ಕೇ ಮೊದಲನೇ ಸ್ಥಾನ ಪಡೆದೆ. ಎಸ್ಸೆಸ್ಸೆಲ್ಸಿಯಲ್ಲಿ ನಾನು 87ಕ್ಕೂ ಹೆಚ್ಚು ಪ್ರತಿಶತ ಅಂಕ ಗಳಿಸಿ ತಾಲ್ಲೂಕಿಗೇ ಮೊದಲಿಗನಾದೆ. ಎರಡು ವಿಷಯಗಳಲ್ಲಿ ರಾಜ್ಯಕ್ಕೇ ನಾನು ಮೊದಲನೆಯವನಾಗಿದ್ದೆ. ಹಾಗಾಗಿ ಪಿಯೂಸಿಗೆ ಸೇರಿಸಲು ಮನೆಯಲ್ಲಿ ಒಪ್ಪಿದರು. ಮುಂದಿನ ವಾರ: ಕಾಲೇಜು ಓದು, ಉದ್ಯೋಗದ ಜಾಡು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.