ಭಾನುವಾರ, ಫೆಬ್ರವರಿ 28, 2021
31 °C

ಶ್ರೀಸಾಮಾನ್ಯನ ಖರೀದಿ ಯಾವಾಗ?

ಜಿಎಮ್ಮಾರ್ Updated:

ಅಕ್ಷರ ಗಾತ್ರ : | |

ಶ್ರೀಸಾಮಾನ್ಯನ ಖರೀದಿ ಯಾವಾಗ?

ಪೆ‌ಕರ ಕುಳಿತಿದ್ದ ವಿಧಾನ ನೋಡಿ ಅವನ ‌ಅಭಿಮಾನಿಗಳ ಬಳಗ ಬೆಚ್ಚಿಬಿದ್ದಿತ್ತು. ತಲೆ ತುಂಬಾ ಯಲ್ಲೋಕಲರ್ ಮಫ್ಲರನ್ನು ಟೈಟಾಗಿ ಸುತ್ತಿಕೊಂಡಿದ್ದ. ಶಿವನ ಕುತ್ತಿಗೆಯಲ್ಲಿ ಹಾವು ಸುತ್ತಿ­ಕೊಂಡಂತೆ ಪೆಕರನ ಕುತ್ತಿಗೆಯನ್ನು ಶಾಲೊಂದು ಸುತ್ತಿಕೊಂಡಿತ್ತು. ಕೋಟೊಂದನ್ನು ಹಾಕಿಕೊಂಡು ಬಾಲ್ಕನಿಯಲ್ಲಿ ಕುಳಿತು, ಆಕಾಶ­ವನ್ನು ನಿಟ್ಟಿಸುತ್ತಿದ್ದುದನ್ನು ಕಂಡರೆ ನೋಡುಗರಿಗೆ ಆಕಾಶವೇ ಕಳಚಿಬಿದ್ದಿರಬೇಕು, ಅದಕ್ಕೆ ಹೀಗೆ ನಿಟ್ಟಿಸಿನೋಡುತ್ತಿದ್ದಾನೆ ಎನಿಸುತ್ತಿತ್ತು.‘ಸ್ವಾಮಿ ಪೆಕರ ಅವರೇ, ಇದೇಕೆ ಹೀಗೆ ೪೯ ದಿನಗಳಲ್ಲಿ ಪತನವಾದವರ ರೀತಿಯಲ್ಲಿ ಕುಳಿತಿ­ದ್ದೀರಾ? ಕೇಜ್ರಿವಾಲರ ಕತೆ ಬಿಡಿ ಸಾ, ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದಂಗಾಯ್ತು, ನೀವೇಕೆ ಅದಕ್ಕೆ ಇಷ್ಟೊಂದು ತಲೆ ಕೆಡಿಸಿಕೊಂಡಿದ್ದೀರಾ’ ಎಂದು ಸ್ನೇಹಿತರು ಪೆಕರನನ್ನು ಸಮಾಧಾನ ಮಾಡಲು ಮುಂದಾದರು.‘ಛೆ, ಈ ಜಗತ್ತೇ ಹೀಗೆ. ನಮಗೆ ಬೆಲೆಯಿಲ್ಲ­ವಾಯಿತು’ ಎಂದು ಪೆಕರ ಬೇಸರದಿಂದ ಹೇಳಿ, ಮತ್ತೆ ಆಕಾಶ ನೋಡತೊಡಗಿದ.

‘ಅಯ್ಯೋ ಬಿಡಿ ಸಾರ್, ಕಾಂಗ್ರೆಸ್ ಕೈ ಹಿಡಿದು­ಕೊಂಡು ಬದುಕುಳಿದವರುಂಟಾ?ಅಣ್ಣಾ ಮಾತು ಕೇಳದೆ ತಮ್ಮಾ ಮಾಡಿದ್ದು ಸರೀನಾ ಸಾರ್? ತಾನೇ ಯಜಮಾನನಾಗಿದ್ದು, ತಾನೇ ಧರಣಿ ಹೂಡಿ­ದಾಗಲೇ ಇದು ಕಾಲೆತ್ತಿಕೊಳ್ಳುವ ಸರ್ಕಾರ ಅಂತ ಗೊತ್ತಾಗಿಬಿಟ್ಟಿತು. ನೀವು ಇಷ್ಟು ದೊಡ್ಡ ಜರ್ನಲಿಸ್ಟ್ ಆಗಿ ಇದೂ ಗೊತ್ತಾಗ­ಲಿಲ್ವ?’ ಸ್ನೇಹಿತರು ಮತ್ತೆ ಪೆಕರನನ್ನು ಕಿಚಾಯಿಸಿದರು.‘ಥೂ ಅದೆಲ್ಲಾ ಮಾತಾಡಬೇಡಿ ಬಿಡ್ರಿ, ಶ್ರೀಮಂತರ ಹತ್ರ ಎಷ್ಟೊಂದು ದುಡ್ಡು ಇರುತ್ತೆ ಅವರು ಮನುಷ್ಯರನ್ನೇ ಅದ್ರಲ್ಲಿ ಪರ್ಚೇಸ್ ಮಾಡಿಬಿಡ್ತಾರೆ. ಅದಕ್ಕೆ ನೋವಾಯ್ತು’ ಎಂದು ಪೆಕರ ತನ್ನ ಬೇಸರ ತೋಡಿಕೊಂಡ.‘ಅದಲ್ಲ ಸಾರ್ ವಿಷಯ. ಅಂಬಾನಿಯವರು ದೇಶಾನೇ ಪರ್ಚೇಸ್ ಮಾಡಿಬಿಟ್ಟಿದ್ದಾರಂತೆ.  ಹತ್ತು ವರ್ಷದಿಂದ ಅಂಬಾನಿ ಅಂಗಡಿಯಲ್ಲೇ ಏನು ಬೇಕೋ ಅದನ್ನು ‘ಕೈ’ಗಳೆಲ್ಲಾ ಖರೀದಿಸು­ತ್ತಿದ್ದಾರಂತೆ. ನಮೋನಮೋಜಿ­ಯವರೂ ಅದೇ ಅಂಗಡಿಯಿಂದಲೇ ಹೆಲಿ­ಕಾಪ್ಟರ್ ಪರ್ಚೇಸ್ ಮಾಡಿದ್ದಾರಂತೆ. ದೊಡ್ಡದೊಡ್ಡ ಕಮಲ ರ್‍ಯಾಲಿ ಮಾಡಲು ಆ ಅಂಗಡಿಯಿಂದಲೇ ಎಲ್ಲವೂ ಸಪ್ಲೇ ಆಗ್ತಾ ಇದೆಯಂತೆ. ವಾಟ್ ಈಸ್ ದಿಸ್ ನಾನ್ಸೆನ್ಸ್ ಸಾರ್, ದೇಶದ ಎಲ್ಲ ರಾಜ­ಕೀಯ ಪಕ್ಷಗಳೂ ಅಂಬಾನಿ ಅಂಗಡಿ ಮುಂದೆ ಕ್ಯೂ ನಿಂತಿವೆಯಂತಲ್ಲಾ?’

-ಸ್ನೇಹಿತರು ರಹಸ್ಯ ಸಂಗತಿಯನ್ನು ಅರುಹಿ­ದರು.‘ಛೆ, ಬಿಡಯ್ಯ ನಾನೇನೋ ಹೇಳ್ತಾ ಇದ್ದೀನಿ, ನೀನು ಮಾತ್ರ ಸ್ವತಂತ್ರ ಹೋಗಿ ಅತಂತ್ರ ಆಯ್ತು ಅಂತ ಕತೆ ಹೇಳ್ತಾ ಇದ್ದೀಯಾ. ನಾನು ಹೇಳಿದ್ದು ಮನುಷ್ಯನಿಗೆ ಬೆಲೆ ಹೋಯ್ತು ಅಂತ’ ಎಂದು ಪೆಕರ ರೇಗಿದ.‘ಅಯ್ಯೋ ಬಿಡಿ ಸಾರ್, ಲವ್ ಅಂತಾರೆ, ಆಸಿಡ್ ಹಾಕ್ತಾರೆ. ಕಾನೂನು ಮಾಡುವವರೇ ಕಾನೂನು ಮುರೀತಾರೆ. ಭೂವಂಚನೆ ಮಾಡಿದ ಡಿಕುಶಿಮಾರರು ಸಂಪುಟ ಸೇರ್ತಾರೆ. ಮುಖ್ಯ­ಮಂತ್ರಿ­ಗಳೇ ಧರಣಿ ಕೂರ್ತಾರೆ. ಶಾಸಕರು ಮೈಕ್ ಮುರೀತಾರೆ. ಸಂಸದರು ಪಾರ್ಲಿಮೆಂಟ್‌­ನಲ್ಲೇ ಪೆಪ್ಪರ್‌ಸ್ಪ್ರೇ ಚಿಮುಕಿಸುತ್ತಾರೆ. ನಮ್ಮ ರಾಜ­ಕಾರಣಿಗಳು ಕಮ್ಮಿ ಹುಡುಗಾಟದವರೇ? ಅವರ ರಾಜಕೀಯ ಆಟ ಅಂದ್ರೆ ಸಾಮಾನ್ಯವಾ? ಬಿಡಿ­ಸಾರ್ ಅದೇನ್ ಕತೆ ಹೇಳ್ತೀರಾ’ ಎಂದು ಪೆಕರನ ಸ್ನೇಹಿತರು ಇಂದಿನ ರಾಜಕೀಯ ಪರಿಸ್ಥಿತಿಗೆ ಕನ್ನಡಿ ಹಿಡಿದರು.ಸದನದಲ್ಲಿ ಕಿರಾತಕರ ದಾಂದಲೆ

ಮೈಕು, ಕುರ್ಚಿ ಹಾರಾಡಿದವು ಅಲ್ಲಲ್ಲೇ

ಪೆಪ್ಪರ್‌ಸ್ಪ್ರೇ ಬಳಕೆ ಬಲು ಜೋರು

ದೇಶದ ಪ್ರಜಾಸತ್ತೆ ಹಾಕಿತು ಕಣ್ಣೀರು‘ಇರ್ಲಿ ಬಿಡಪ್ಪ, ನಾನು ಅವರ ಬಗ್ಗೆ ಹೇಳಿಲ್ಲ. ದೇಶಭಕ್ತಿಯೇ ಇಲ್ಲದ ಜನರಿಂದ ಗೂಂಡಾ­ವರ್ತನೆ ಸಹಜವೇ. ಇದೇನೂ ಹೊಸತಲ್ಲ. ಇದು ಇಡೀ ಸಂಸತ್ತಿಗೆ  ಕಪ್ಪುಚುಕ್ಕೆ’ ಎಂದು ಪೆಕರ ಎರಡೂ ಕೈಗಳಿಂದ ಹಣೆಹಣೆಚಚ್ಚಿಕೊಂಡ.ಸ್ನೇಹಿತರು ಒಮ್ಮೆಲೆ ಏಕಕಂಠದಿಂದ ‘ಯುರೇಕಾ, ಯುರೇಕಾ’ ಎಂದು ಕೂಗಿ­ಕೊಂಡರು. ‘ಸಾರ್, ಬೆಳಿಗ್ಗೆಯಿಂದ ನೀವು ಮ್ಲಾನ­ವದನರಾಗಿರುವುದು ಯಾಕೆ ಎಂದು ತಲೆ ಕೆಡಿಸಿ­ಕೊಂಡಿದ್ದೆವು. ನೀವು ಎರಡೂ ಕೈಗಳಿಂದ ಹಣೆ­ಚಚ್ಚಿ­ಕೊಂಡದ್ದನ್ನು ನೋಡಿದ ಮೇಲೆ ಫ್ಲ್ಯಾಷ್ ಆಯಿತು. ನೀವು ಮಾಜಿ ಸಚಿವ ‘ಪ್ರೇಮದಾಸ’ ಅವರ ಘಟನೆಯಿಂದ ನೊಂದಿದ್ದೀರಾ ಅಂತ ಆಯ್ತು’ ಎಂದು ಸ್ನೇಹಿತರು ಪೆಕರನ ಬೇಸರಕ್ಕೆ ಕಾರಣ ಕಂಡುಹಿಡಿದ ಖುಷಿಯಲ್ಲಿ ಹೇಳಿದರು.ಮಾಜಿಮಂತ್ರಿಗೆ ಉದಯಿಸಿತಂತೆ ‘ಪ್ರೇಮ’

ಆಗ ಮರೆತೇ ಹೋದನಂತೆ ರಾಮ

ಯಾರಂತಾರೆ ಬ್ರಹ್ಮಚಾರಿ ಲೈಫು ಆರಾಮ

ಇಂಥ ಕಳ್ಳಾಟಗಳಿಗೆ ಇಲ್ಲವೇ ಇಲ್ಲ ವಿರಾಮನನ್ನ ಚಿಂತೆ ನನಗೆ, ನಿಮಗೆ ಊರಿನಲ್ಲಿರೋ ಎಲ್ಲಾರದೂ ಚಿಂತೆ. ‘ಪ್ರೇಮದಾಸ’ ಕತೆಗೆ ಆದಿ ಅಂತ್ಯ ಇದೆಯೇ? ಆಲಪ್ಪಾಯಣ ಆಯ್ತು, ಸದನದಲ್ಲಿ ಬ್ಲೂಫಿಲಮಾಯಣ ಆಯ್ತು, ಚಿಕ್ಕಮಗಳೂರಿನಲ್ಲಿ ಜೀವರಾಜಾಯಣ ಆಯ್ತು, ಮಡಿ, ಮಡಿ ಅಂತಿದ್ದ ಕಮಲ ಪಕ್ಷ ಈಗ ಕೆಸರಿನ ಕಮಲ ಆಗೋಯ್ತು. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅನ್ನೋವಂತೆ ನಮಗ್ಯಾಕೆ ಬಿಡಪ್ಪ ಇದೆಲ್ಲಾ ಕತೆ, ನನ್ನ ಚಿಂತೆ ನನಗೆ. ಮನುಷ್ಯ ಹರಾಜಾಗ್ತಾ ಇದಾನೆ ನಮಗೆಲ್ಲಿದೆ ಬೆಲೆ ಅನ್ನೋದೇ ನನ್ನ ದುಃಖ’ ಎಂದು ಹೇಳಿ ಪೆಕರ ಮತ್ತೆ ಡಲ್ಲಾದ.‘ಸಾರ್, ನೀವು ಐಪಿಎಲ್ ಆಟಗಾರರ ಖರೀದಿ ವ್ಯವಹಾರದ ಬಗ್ಗೆ ತಲೆಕೆಡಿಸಿಕೊಂಡಿದ್ದೀರಿ, ಬಿಡಿ ಸಾರ್, ಅದೆಲ್ಲಾ ದುಡ್ಡಿದ್ದವರ ದೊಡ್ಡಾಟ. ಹೆಂಗಾದ್ರೂ ಹಾಳಾಗೋಗ್ಲಿ, ಸುಮ್ನಿದ್ ಬಿಡಿ ಸಾರ್’ ಎಂದು ಸ್ನೇಹಿತರು ಪೆಕರನ ದುಃಖಕ್ಕೆ ಸಮಾಧಾನ ಹೇಳಲಾರಂಭಿಸಿದರು.ಯುವರಾಜನಿಗೆ ೪ ಕೋಟಿ ಎಕ್ಸ್‌ಟ್ರಾ

ಕಾರ್ತಿಕ್, ಕೆವಿನ್, ರಾಬಿನ್ ಎಕ್ಸೆಟ್ರಾ

ಆಟಗಾರರ ಮಾರಾಟದಲ್ಲೂ ಫಿಕ್ಸಿಂಗಾ

ಬೆಲೆ ಕಳೆದುಕೊಂಡನು ಸೆಹ್ವಾಗಪೆಕರನ ದುಃಖದ ಕಟ್ಟೆ ಕಿತ್ತುಕೊಂಡು ಕೋಡಿಯಾಯಿತು. ಯುವರಾಜನಿಗೆ ಮಲ್ಲಯ್ಯ ೧೪ ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡ್ತಾನೆ. ಕಾರ್ತಿಕ್‌ಗೆ ಹನ್ನೆರಡೂವರೆ ಕೋಟಿ, ಕೆವಿನ್‌ಗೆ ೯ ಕೋಟಿ...ಏನಿದು ವ್ಯಾಪಾರ? ನಾನೂ ಮಾರಾಟಕ್ಕಿದ್ದೇ ಮಾರಾಯ.ನನ್ನನ್ನು ಕೇಳುವವರೇ ಇಲ್ಲವಲ್ಲಾ. ನನಗೆ ಒಂದು ಬಿಲ್ಲೆಯನ್ನೂ ಕೊಡುವವರು ಇಲ್ವೇ. ದೇಶದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದಿರೋದೇ ನಾನು. ೨೪ ಗಂಟೆ ದುಡಿದರೇ ನನಗೆ ಎರಡು ತುತ್ತು ಊಟ. ಔಷಧಿಗೆ ದುಡ್ಡಿಲ್ಲ. ಸ್ವಂತಸೂರಿಲ್ಲ. ಬ್ಯಾಂಕಿನಲ್ಲಿ ಸಾಲ ತೀರಿಲ್ಲ. ನಾನೂ ಮನುಷ್ಯ, ಯುವರಾಜನೂ ಮನುಷ್ಯ. ‘ಮನುಷ್ಯ ಕಾಂಚಾಣಂ ಒಂದೇ ವಲಂ ‘ನೋಡಿಲ್ಲವೇ?! ಪೆಕರ ಒಂದೇ ಸಮನೆ ತನ್ನ ಆಕ್ರೋಶವನ್ನು ರಾಜೀನಾಮೆ ಕೊಟ್ಟ ಕ್ರೇಜಿವಾಲನ ತರಹ ವ್ಯಕ್ತಪಡಿಸಲಾರಂಭಿಸಿದ.‘ಹೋಲ್ಡಾನ್, ಹೋಲ್ಡಾನ್, ಭವ್ಯ ಭಾರತದ ಶ್ರೀಸಾಮಾನ್ಯನೇ ನಿನಗೂ ಬೆಲೆ ಇದೆ. ಇನ್ನೇನು ಎಲೆಕ್ಷನ್ ಬರ್ತಾ ಇದೆ. ಒಂದು ಓಟಿಗೆ ೫೦೦ ರೂಪಾಯಿ ಕೊಟ್ಟು ನಿನ್ನನ್ನು ಖರೀದಿ ಮಾಡ್ತಾರೆ ಕಾಯ್ತಾ ಇರು ಮಾರಾಯ’ ಎಂದು ಸ್ನೇಹಿತರು ಹಾಸ್ಯ ಚಟಾಕಿ ಹಾರಿಸಿ ಪೆಕರನ ಮಫ್ಲರ್ ಕಿತ್ತೆಸೆದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.