ಷೇರು ವಹಿವಾಟು ಜೂಜಾಟವಲ್ಲ..!

7

ಷೇರು ವಹಿವಾಟು ಜೂಜಾಟವಲ್ಲ..!

ಕೆ. ಜಿ. ಕೃಪಾಲ್
Published:
Updated:

ಷೇರುಪೇಟೆ ಎಂಬುದು ಜೂಜಾಟ ಎಂಬ ಭಾವನೆ ಹೆಚ್ಚಿನವರ ಮನದಲ್ಲಿದೆ. ಜೂಜಿನಲ್ಲಿ ಗೆದ್ದರೆ ಹಣ ಹೆಚ್ಚಾಗುವುದು. ಸೋತರೆ ಪೂರ್ಣವಾಗಿ ನಶಿಸಿಹೋಗುವುದು. ಹಣವನ್ನು ಹಿಂಪಡೆಯಲಾಗುವುದಿಲ್ಲ. ಆದರೆ ಷೇರುಗಳಲ್ಲಿ ಹೂಡಿದ ಹಣ ಒಮ್ಮಮ್ಮೆ ನಶಿಸಿ ಹೋದರೂ, ಹೂಡಿಕೆ ಮುಂದುವರೆಸಿದರೆ ಮತ್ತೆ ಮರಳಿ ಬರುತ್ತದೆ. ಷೇರುಗಳ ದರಗಳು ಪುನಶ್ಚೇತನಗೊಂಡು ಲಾಭ ತರುತ್ತವೆ.  ಹಿಂದೊಮ್ಮೆ ಅಂದರೆ 1998ರಲ್ಲಿ ಅಮಾನತುಗೊಂಡು ನಿಶ್ಚೇಷ್ಠಿತಗೊಂಡಿದ್ದ ಲ್ಯಾಮಿಸನ್ ಗ್ರಾನೈಟ್ಸ್ ಲಿ., ಮಿನೋಲ್ಟಿ ಫೈನಾನ್ಸ್ ಲಿ. ಕಂಪೆನಿಗಳು ಈಗ ಹೂಡಿಕೆದಾರರಿಗೆ ಲಾಭ ತರುತ್ತಿವೆ. 2000ರಿಂದ ನಿಶ್ಚೇಷ್ಠಿತಗೊಂಡಿದ್ದ ಇ.ಆರ್.ಪಿ. ಸಿಸ್ಟಂಸ್‌ನಂತಹ ಕಂಪೆನಿಗಳೂ ಈ ಸಾಲಿಗೆ ಸೇರುತ್ತವೆ. ಕಳೆದ ವಾರ 1997ರಿಂದ ಅಮಾನತುಗೊಂಡಿದ್ದ ಶ್ರಿಸರ್ ಗೋವಿಂದ ಟ್ರೇಡ್ ಲಿಂಕ್ಸ್ ಲಿ; 1998ರಿಂದ ಅಮಾನತುಗೊಂಡಿದ್ದ ರಿಂಗ್ ಇನ್‌ಫ್ರಾ ವೆಂಚರ್ಸ್ ಲಿ. ಕಂಪೆನಿಗಳು ಪುನಶ್ಚೇತನಗೊಳ್ಳುತ್ತಿರುವುದು ಷೇರುಪೇಟೆ ಜೂಜಾಟ ಅಲ್ಲ ಎಂಬುದನ್ನು ದೃಢಪಡಿಸುತ್ತವೆ. ಆದರೆ ಇಲ್ಲಿ, ಪೂರ್ವ ಕಲ್ಪಿತ ವಿಧಾನದಲ್ಲಿ ಚಲಿಸದೆ ಅವಕಾಶ ಲಭಿಸುವವರೆಗೂ ಕಾಯಬೇಕಾದದ್ದು ಅನಿವಾರ್ಯ.ಕಳೆದ ವಾರದಲ್ಲಿ ಅನೇಕ ಪ್ರಮುಖ ಕಂಪೆನಿಗಳು ತಮ್ಮ ತ್ರೈಮಾಸಿಕ ಹಣಕಾಸು ಸಾಧನೆ ಪ್ರಕಟಿಸಿವೆ. ಅನೇಕ ಕಂಪೆನಿಗಳು ಆಕರ್ಷಕ ಲಾಭಾಂಶ ಘೋಷಿಸಿವೆ. 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್  122 ಪರವಾನಗಿಗಳನ್ನು ರದ್ದುಗೊಳಿಸಿದ ಕಾರಣ ಭಾರ್ತಿ ಏರ್‌ಟೆಲ್ ಧಿಡೀರ್ ಏರಿಕೆ ಕಂಡಿತ್ತು. ಆದರೆ, ಈ ವಾರ ಕಳಪೆ ಸಾಧನೆ ಕಾರಣ ಮತ್ತೆ ಕುಸಿತ ಕಂಡಿದೆ.

 

ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತ್ರೈಮಾಸಿಕ ಸಾಧನೆ ಇಳಿಕೆ ಕಂಡ ಹಿನ್ನೆಲೆಯಲ್ಲಿ, ಟಾಟಾ ಸ್ಟೀಲ್ ರೂ. 432ಕ್ಕೆ ಕುಸಿದು ನಂತರ 477 ರವರೆಗೂ 477 ರವರೆಗೂ ಏರಿಕೆ ಪಡೆದದ್ದು ಅನೇಕರನ್ನು ಚಕಿತಗೊಳಿಸಿದೆ. ಕಂಪೆನಿಯು ಸಾಧನೆಗೂ ಪೇಟೆಯ ದರಗಳ ಏರಿಳಿತಕ್ಕೂ ಸಂಬಂಧವಿಲ್ಲ ಎನ್ನುವುದಕ್ಕೆ ಇದು ಸಾಕ್ಷಿ.ಕಳೆದವಾರ ಸೂಚ್ಯಂಕ 143 ಅಂಶಗಳಷ್ಟು ಮುನ್ನಡೆ ಪಡೆಯಿತು. ಸದ್ಯ ಕಳೆದ ವರ್ಷಕ್ಕಿಂತಲೂ 285 ಅಂಶಗಳಷ್ಟು ಹೆಚ್ಚಳದಿಂದ 17,748 ಅಂಶಗಳಲ್ಲಿದೆ.  ಮಧ್ಯಮಶ್ರೇಣಿ ಸೂಚ್ಯಂಕವು 2000 ಅಂಶಗಳಷ್ಟು ಕೆಳಮಧ್ಯಮ ಶ್ರೇಣಿ ಸೂಚ್ಯಂಕ 204 ಅಂಶಗಳಷ್ಟು ಏರಿಕೆ ಕಂಡಿವೆ. ವಿದೇಶೀ ವಿತ್ತೀಯ ಸಂಸ್ಥ ರೂ.3,397 ಕೋಟಿ ಹೂಡಿಕೆ ಮಾಡಿವೆ.

 

ಸ್ವದೇಶಿ ವಿತ್ತೀಯ ಸಂಸ್ಥೆಗಳು ರೂ. 2,549 ಕೋಟಿ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳೀಕರಣ ಮೌಲ್ಯ ರೂ. 62 ಲಕ್ಷ ಕೋಟಿಯಿಂದ ರೂ.63 ಲಕ್ಷ ಕೋಟಿಗೆ ಜಿಗಿದಿದೆ.ಬೋನಸ್ ಷೇರಿನ ವಿಚಾರ

*ಮಹರಾಜ್ ಶ್ರಿ ಉಮೇಡ್ ಮಿಲ್ಸ್ ಲಿ. ಕಂಪೆನಿ ವಿತರಿಸಲಿರುವ 2:1ರ ಅನುಪಾತದ ಬೋನಸ್‌ಗೆ 15ನೇ ಫೆಬ್ರುವರಿ ನಿಗದಿತ ದಿನವಾಗಿದೆ.*ಆಪ್ಟೋ ಸರ್ಕ್ಯೂಟ್ಸ್ ಕಂಪೆನಿಯು ಪ್ರತಿ 10 ಷೇರಿಗೆ 3 ರಂತೆ ಬೋನಸ್ ಷೇರು ಪ್ರಕಟಿಸಿದೆ.ಲಾಭಾಂಶ ವಿಚಾರ: ಕಂಪೆನಿಗಳಾದ ಎಸ್‌ಆರ್‌ಎಫ್ 13ರಂದು ಝೊಡಿಯಾಕ್ ಕ್ಲಾತಿಂಗ್ 14ರಂದು, ಥಾಮಸ್ ಕುಕ್ 16ರಂದು, ಫುಲ್‌ಪೋರ್ಡ್ ಇಂಡಿಯಾ 17ರಂದು, ರೇನ್ ಕಮಾಡಿಟೀಸ್ 21ರಂದು, ಕೆಎಸ್‌ಬಿ ಪಂಪ್ಸ್ 22 ರಂದು, ಅವೆಂಟಿಸ್ ಫಾರ್ಮ 23 ರಂದು ಲಾಭಾಂಶ ಪ್ರಕಟಿಸಲಿವೆ.ಪ್ರಕಟಿಸಿರುವ ಕಂಪೆನಿಗಳು: ಅದಾನಿ ಪೋರ್ಟ್ಸ್ ಶೇ 15 (ಮು.ಬೆ. ರೂ.2), ಎ.ಸಿ.ಸಿ. ಶೇ 170, ಬಜಾಜ್ ಕಾರ್ಪ್ ಶೇ 400 (ಮು.ಬೆ. ರೂ.1), ಅಂಬುಜಾ ಸೀಮೆಂಟ್ಸ್ ಶೇ 18, ಕಮ್ಮಿನ್ಸ್ ಶೇ 250 (ಮು.ಬೆ. ರೂ.2), ಬಿ.ಓ.ಸಿ. ಶೇ 15 ಫ್ಯಾಗ್ ಬೋರಿಂಗ್ಸ್ ಶೇ 100, ಗುಜರಾತ್ ಅಂಬುಜಾ ಎಕ್ಸ್‌ಪೋರ್ಟ್ಸ್ ಶೇ 30 (ಮು.ಬೆ. ರೂ.2), ಗ್ಲಾಸ್ಕೊ ಸ್ಮಿತ್ ಕ್ಲೈನ್ ಕನ್ಸೂಮರ್ಸ್ ಶೇ 350, ಹನಿವೆಲ್ ಆಟೊಮೆಷನ್ ಶೇ 100, ಕೆ.ಪಿ.ಸಿ. ಲಿ. ಶೇ 25 (ಮು.ಬೆ. ರೂ.1), ಜಿ.ಇ. ಶಿಪ್ಪಿಂಗ್ ಶೇ 60, ಮೊಯಿಲ್ ಶೇ 20, ನ್ಯಾಟ್ಕೊ ಫಾರ್ಮ ಶೇ 30 (ನಿ.ದಿ. 23.2.12), ಪೇಜ್ ಇಂಡಸ್ಟ್ರೀಸ್ ಶೇ 100, ಪ್ರಿಸಿಷನ್ ವೈರ್ಸ್‌ ಶೇ 18 (ನಿಗದಿತ ದಿನ 24 ಫೆಬ್ರುವರಿ), ರಾಣಿ ಹೋಲ್ಡಿಂಗ್ಸ್ ಶೇ 60 (ನಿ.ದಿ. 17.2.12), ಆರ್. ಸಿಸ್ಟಂಸ್ ಶೇ 36, ಸರಸ್ವತಿ ಇಂಡಸ್ಟ್ರಿಯಲ್ ಸಿಂಡಿಕೇಟ್ ಶೇ 100 (ನಿ.ದಿ. 16.2.12), ಸನ್ ಟಿವಿ ಶೇ 50 (ಮು.ಬೆ. ರೂ.5), ವಿಐಪಿ ಇಂಡಸ್ಟ್ರೀಸ್ ಶೇ 30 (ಮು.ಬೆ. ರೂ.2).ಮುಖಬೆಲೆ ಸೀಳಿಕೆ ವಿಚಾರ

*ಕ್ಯಾಮ್ಲಿನ್ ಫೈನ್ ಸೈನ್ಸಸ್ ಕಂಪೆನಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2ಕ್ಕೆ ಸೀಳಲು 17ನೇ ಫೆಬ್ರುವರಿ ನಿಗದಿತ ದಿನವಾಗಿದೆ.*ಎಸ್ಸಾರ್ (ಇಂಡಿಯಾ)ಲಿ. ಷೇರಿನ ಮುಖಬೆಲೆಯನ್ನು ರೂ.10ರಿಂದ ರೂ. 1ಕ್ಕೆ ಸೀಳಲು 22 ಫೆಬ್ರುವರಿ ನಿಗದಿತ ದಿನವಾಗಿದೆ.*ಪ್ಲಾಸ್ಟಿಬ್ಲೆಂಡ್ಸ್ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.5ಕ್ಕೆ ಸೀಳಲು ಮಾರ್ಚ್ 1 ನಿಗದಿತ ದಿನವಾಗಿದೆ.*ಇಂಡಿಯಾ ನಿವೇಶ್ ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.1ಕ್ಕೆ ಸೀಳುವಿಕೆಯನ್ನು 14 ರಂದು ಪರಿಶೀಲಿಸಲಿದೆ.ವಹಿವಾಟಿಗೆ ಬಿಡುಗಡೆ

*ಜಾಲಿ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಕಂಪೆನಿಯ ಮೇಲೆ ಫೆಬ್ರುವರಿ 2003 ರಿಂದಲೂ ವಿಧಿಸಿದ್ದ ಅಮಾನತು ತೆರವುಗೊಳಿಸಿದ ಕಾರಣ ಫೆಬ್ರುವರಿ 13 ರಿಂದ `ಟಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.*ಜನವರಿ 2002ರಿಂದ ವಿಧಿಸಿದ್ದ ಅಮಾನತನ್ನು ತೆರವುಗೊಳಿಸಿಕೊಂಡು ಎಸ್.ಆರ್.ಕೆ. ಇಂಡಸ್ಟ್ರೀಸ್ ಕಂಪೆನಿಯು 13 ರಿಂದ ಟಿ ಗುಂಪಿನಲ್ಲಿ ವಹಿವಾಟಾಗಲಿದೆ.*ಜನವರಿ 2002ರಿಂದ ವಿಧಿಸಿದ್ದ ಅಮಾನತ್ತನ್ನು ತೆರವುಗೊಳಿಸಿಕೊಂಡು ಹೀರಾ ಇಸ್‌ಪಾಟ್ ಲಿ. ಕಂಪೆನಿಯು 14 ರಿಂದ ಟಿ. ಗುಂಪಿನಲ್ಲಿ ವಹಿವಾಟಾಗಲಿದೆ.*ಮೇ 2002ರಿಂದ ಅಮಾನತನಲ್ಲಿದ್ದ ಸ್ಟಾಂಡರ್ಡ್ ಕ್ಯಾಪಿಟಲ್ ಮಾರ್ಕೆಟ್ಸ್ ಲಿ. ಮೇಲಿನ ಅಮಾನತು ತೆರವುಗೊಳಿಸಿದ ಕಾರಣ 14 ರಿಂದ `ಟಿ~ ಗುಂಪಿನಲ್ಲಿ ವಹಿವಾಟಾಗಲಿದೆ.*ಕಾರ್ಪೊರೇಟ್ ಕೊರಿಯರ್ ಅಂಡ್ ಕಾರ್ಗೊ ಲಿ. ಮೇಲಿನ 2003ರ ಏಪ್ರಿಲ್‌ನಲ್ಲಿ ವಿಧಿಸಿದ್ದ ಅಮಾನತು ತೆರವುಗೊಳಿಸಿದ ಕಾರಣ 14 ರಿಂದ `ಟಿ~ ಗುಂಪಿನಲ್ಲಿ ವಹಿವಾಟಾಗಲಿದೆ.*ಜಗ್‌ಸನ್‌ಪಾಲ್ ಫೈನಾನ್ಸ್ ಅಂಡ್ ಲೀಸಿಂಗ್ ಕಂಪೆನಿಯ ಮೇಲಿನ ಡಿಸೆಂಬರ್ 2004 ರಲ್ಲಿ ವಿಧಿಸಿದ್ದ ಅಮಾನತು ತೆರವುಗೊಳಿಸಿದ ಕಾರಣ 15 ರಿಂದ ಟಿ ಗುಂಪಿನಲ್ಲಿ ವಹಿವಾಟಾಗಲಿದೆ.*ಕಿಂಗ್ಸ್ ಇನ್‌ಫ್ರಾ ವೆಂಚರ್ಸ್ ಲಿ. ಕಂಪೆನಿಯು ಜನವರಿ 1998 ರಿಂದ ವಿಧಿಸಿದ್ದ ಅಮಾನತು ತೆರವುಗೊಳಿಸಿದ ಕಾರಣ 15 ರಿಂದ ಟಿ ಗುಂಪಿನಲ್ಲಿ ವಹಿವಾಟಾಗಲಿದೆ.*ಸಬೂ ಬ್ರದರ್ಸ್ ಲಿ. ಕಂಪೆನಿಯು ಜನವರಿ 2002ರಿಂದ ವಿಧಿಸಿದ್ದ ಅಮಾನತು ತೆರವುಗೊಳಿಸಿಕೊಂಡು 16 ರಿಂದ `ಟಿ~ ಗುಂಪಿನಲ್ಲಿ ವಹಿವಾಟಾಗಲಿದೆ.*ಶ್ರಿ ಸರ್ ಗೋವಿಂದ ಟ್ರೇಡ್ ಲಿಂಕ್ಸ್ ಕಂಪೆನಿ ಮೇಲೆ ಜನವರಿ 1997 ರಲ್ಲಿ ವಿಧಿಸಿದ್ದ ಅಮಾನತನ್ನು ತೆರವುಗೊಳಿಸಿದ ಕಾರಣ 16 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.ವಾರದ ಪ್ರಶ್ನೆ

ನಾನು ಟಾಟಾ ಪವರ್ ಷೇರನ್ನು ಸದ್ಯದ ರೂ.110-12 ರಲ್ಲಿ ಕೊಳ್ಳಬೇಕೆಂದಿದ್ದೇನೆ. ಈ ಕಂಪೆನಿಯ ಷೇರು ಕಳೆದ ಮೇ ತಿಂಗಳಲ್ಲಿ ರೂ. 1,350ರ ಸುಮಾರಿನಲ್ಲಿದ್ದು ಈಗ ಭಾರಿ ಕುಸಿತ ಕಂಡಿದೆ. ಇದು ಸೂಕ್ತವೇ ದಯವಿಟ್ಟು ತಿಳಿಸಿರಿ.
ಉತ್ತರ: ಈ ಕಂಪೆನಿಯು ಪ್ರತಿಷ್ಠಿತ ಟಾಟಾ ಸಮೂಹದ, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಸಂವೇದಿ ಸೂಚ್ಯಂಕದಲ್ಲಿ ಸ್ಥಾನ ಪಡೆದಿರುವ ಉತ್ತಮ ಕಂಪೆನಿ. ಈ ಕಂಪೆನಿಯು ಹೂಡಿಕೆದಾರರಿಗೆ ಆಕರ್ಷಕ ಲಾಭಾಂಶ ನೀಡುತ್ತಿದೆ. 80ರ ದಶಕದಲ್ಲಿ ಇದರ ಮುಖಬೆಲೆ ರೂ.100 ಇದ್ದು ಪೇಟೆಯ ದರವು ರೂ.90-95 ರಲ್ಲಿತ್ತು. ನಂತರದ ದಿನಗಳಲ್ಲಿ ಷೇರಿನ ಮುಖಬೆಲೆಯನ್ನು ರೂ.10ಕ್ಕೆ ಸೀಳಲಾಗಿತ್ತು.ತಾವು ತಿಳಿದಂತೆ ಕಳೆದ ಮೇ ತಿಂಗಳಲ್ಲಿ ಈ ಕಂಪೆನಿಯ ಷೇರಿನ ಮುಖಬೆಲೆಯು ರೂ.10 ಇದ್ದು ರೂ.1,354ನ್ನು ತಲುಪಿತ್ತು. ಸೆಪ್ಟೆಂಬರ್ 2011ರಲ್ಲಿ ಈ ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.1ಕ್ಕೆ ಸೀಳಲಾದ ಕಾರಣ ಷೇರಿನ ಬೆಲೆಯು ಸಹ ರೂ.100ರ ಸಮೀಪಕ್ಕೆ ಇಳಿಯಿತು.ಕಳೆದ ಡಿಸೆಂಬರ್ 20ರಂದು ಸಂವೇದಿ ಸೂಚ್ಯಂಕವು 15,135ಕ್ಕೆ ಕುಸಿದು ವಾರ್ಷಿಕ ಕನಿಷ್ಠ ಮಟ್ಟದಲ್ಲಿತ್ತು ಟಾಟಾ ಪವರ್ ಕಂಪೆನಿಯ ಷೇರು ರೂ.80.65ಕ್ಕೆ ಡಿಸೆಂಬರ್ 20 ರಂದು ವಾರ್ಷಿಕ ಕನಿಷ್ಠ ಬೆಲೆಗೆ ಕುಸಿದು, ಜನವರಿಯಲ್ಲಿ ಚೇತರಿಕೆ ಕಂಡು ಕಳೆದ ಒಂದು ತಿಂಗಳಲ್ಲಿ ರೂ.92ರ ಸಮೀಪದಿಂದ ರೂ.115ರ ಗರಿಷ್ಠಮಟ್ಟದ ಏರಿಳಿತ ಕಂಡಿದೆ. ಈಗ ರೂ.110ರ ಸಮೀಪ ವಹಿವಾಟಾಗುತ್ತಿದೆ. ಈ ಕಂಪೆನಿಯು ಪ್ರತಿ ಷೇರಿಗೆ ರೂ.12 ರಂತೆ ಲಾಭಾಂಶ ವಿತರಿಸಿದೆ ಎಂಬ ದಾಖಲೆ ಇದೆ.ಈ ಸಂದರ್ಭದಲ್ಲಿ ಗಮನಿಸಬೇಕಾದ್ದು ಕಂಪೆನಿಯ ಷೇರಿನ ಮುಖಬೆಲೆ ಆ ಸಂದರ್ಭದಲ್ಲಿ ರೂ.10 ಇದ್ದು ಈಗ ಷೇರಿನ ಮುಖಬೆಲೆ ರೂ.1 ಆಗಿರುವುದು. ಅದೇ ರೀತಿಯ ಲಾಭಾಂಶ ಪ್ರಕಟಿಸಿದರೆ ಅದು ಪ್ರತಿ ಷೇರಿಗೆ ರೂ. 1.20 ಆಗುತ್ತದೆ. ಕೇವಲ ಪೇಟೆಯ ದರವನ್ನಾಧರಿಸಿ ಷೇರು ಖರೀದಿಸುವಿಕೆ ನಡೆಸುವುದು ಸರಿಯಲ್ಲ. ಅದರೊಂದಿಗೆ ಷೇರಿನ ಮುಖಬೆಲೆ ಅರಿತು ಲಾಭಾಂಶದ ಇಳುವರಿ ಆಧರಿಸಿ ನಿರ್ಧರಿಸಿರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry