ಸಂಕೀರ್ಣ ಸಮಸ್ಯೆಗೆ ಸರಳ ಪರಿಹಾರ ಬಯಸುವವರು...

7

ಸಂಕೀರ್ಣ ಸಮಸ್ಯೆಗೆ ಸರಳ ಪರಿಹಾರ ಬಯಸುವವರು...

Published:
Updated:

ಕಠುವಾ ಮತ್ತು ಉನ್ನಾವ್‌ನಲ್ಲಿ ನಡೆದಿರುವಂತಹ ಘಟನೆಗಳು ವರದಿಯಾದಾಗ ನಾವು ಒಂದು ಸಮಾಜವಾಗಿ ಹೇಗೆ ಪ್ರತಿಕ್ರಿಯಿಸಬೇಕು? ಮಹಿಳೆಯರು ಮತ್ತು ಮಕ್ಕಳಿಗೆ ಲೈಂಗಿಕ ದೌರ್ಜನ್ಯಗಳಿಂದ ರಕ್ಷಣೆ ಇಲ್ಲದಿರುವ ದೇಶ ಎಂಬ ಕುಖ್ಯಾತಿ ಭಾರತಕ್ಕೆ ವಿಶ್ವದ ಎಲ್ಲೆಡೆ ದೊರೆತಿದೆ. ರಕ್ಷಣೆ ಇಲ್ಲ ಎಂಬುದು ವಾಸ್ತವ ಅಲ್ಲದಿದ್ದರೂ ಭಾರತವನ್ನು ಗ್ರಹಿಸುತ್ತಿರುವ ರೀತಿ ಹೀಗಿದೆ. ನಾವು ನಮ್ಮತ್ತ ಪ್ರಾಮಾಣಿಕವಾಗಿ ನೋಡಿಕೊಂಡು, ನಾವು ಹೇಗೆ ಬದಲಾಗಬಹುದು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲು ವಿದೇಶಿ ಮಾಧ್ಯಮಗಳು ನಮಗೆ ಹೇಳುವವರೆಗೆ ಕಾಯಬೇಕಾಗಿಲ್ಲ.

ಇಂತಹ ಘಟನೆಗಳು ನಡೆಯದಂತೆ ತಡೆಯಲು ನಮಗೆ ಏಕೆ ಆಗುತ್ತಿಲ್ಲ? ಅದಕ್ಕೆ ಕಾರಣಗಳು ಏನು? ಇಂತಹ ಘಟನೆಗಳು ಕಡಿಮೆಯಾಗುವಂತೆ ಮಾಡಲು ಏನು ಕ್ರಮ ಕೈಗೊಳ್ಳಬೇಕು? ಇದನ್ನು ತಡೆಯುವುದು ನ್ಯಾಯದಾನ ವ್ಯವಸ್ಥೆ ಹಾಗೂ ಪೊಲೀಸ್‌ ವ್ಯವಸ್ಥೆಯ ಮೇಲೆ ಮಾತ್ರ ಇರುವ ಹೊಣೆಗಾರಿಕೆ ಅಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಿರುವುದು ಮೊದಲ ಹೆಜ್ಜೆ. ಮೌಲ್ಯಗಳು ಕುಸಿಯುತ್ತಿವೆ. ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ಗೌರವಿಸುವೆಡೆ ಮೃಗೀಯ ವರ್ತನೆಗಳಿಗೆ ಉತ್ತೇಜನ ಇರುವುದಿಲ್ಲ. ನಾವು ಇಂತಹ ವಾತಾವರಣದಲ್ಲಿ ಬದುಕುತ್ತಿದ್ದೇವೆಯೇ? ಈ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ಏನು ಎಂಬುದು ಸ್ಪಷ್ಟವಾಗಿಯೇ ಇದೆ. ಇಂತಹ ಹಿಂಸಾಕೃತ್ಯಗಳು ನಡೆಯದಂತೆ ಸರ್ಕಾರ ಏನಾದರೂ ಮಾಡಬೇಕು ಎಂದು ಹೇಳುವುದು ನಮ್ಮ ಮೇಲಿರುವ ಜವಾಬ್ದಾರಿಗಳನ್ನು ನಿರ್ಲಕ್ಷಿಸುವುದಕ್ಕೆ ಸಮ. ಇಷ್ಟನ್ನು ಅರ್ಥ ಮಾಡಿಕೊಂಡು, ‘ನೀವು ಈ ಎಲ್ಲ ಕೆಲಸಗಳನ್ನು ಮಾಡಬೇಕು’ ಎಂದು ಯಾವೆಲ್ಲ ಕೆಲಸಗಳ ಬಗ್ಗೆ ಸರ್ಕಾರದವರನ್ನು ಒಪ್ಪಿಸಬಹುದು ಎಂಬುದನ್ನು ಪರಿಶೀಲಿಸೋಣ.

ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರವನ್ನು ತಡೆಯಲು ಪ್ರಮುಖವಾಗಿ ಎರಡು ಮಾರ್ಗಗಳಿವೆ. ಅವುಗಳಲ್ಲಿ ಒಂದು ಕಾನೂನಿನ ಮಾರ್ಗ. ಮತ್ತೆ ಮತ್ತೆ ಕೇಳಿಬರುವ ಒಂದು ಜನಪ್ರಿಯ ಆಗ್ರಹ ‘ಅತ್ಯಾಚಾರಿಗಳನ್ನು ನೇಣುಗಂಬಕ್ಕೆ ಏರಿಸಬೇಕು’ ಎನ್ನುವುದು. ಕಠಿಣ ಶಿಕ್ಷೆಯು ಜನರಲ್ಲಿ ಭಯ ಸೃಷ್ಟಿಸುತ್ತದೆ, ಅತ್ಯಾಚಾರ ಎಸಗಬಹುದಾದ ವ್ಯಕ್ತಿಯು ಅದರ ಪರಿಣಾಮಗಳ ಬಗ್ಗೆ ಯೋಚಿಸಿ, ಆ ಕೃತ್ಯ ಎಸಗುವುದಿಲ್ಲ ಎಂಬುದು ಈ ಬೇಡಿಕೆಯ ಹಿಂದಿರುವ ಆಲೋಚನೆ. ಈ ಆಲೋಚನೆಗೆ ಹಲವು ಬಗೆಯ ಪ್ರತಿವಾದಗಳೂ ಇವೆ. ಅತ್ಯಾಚಾರ ಮತ್ತು ಕೊಲೆಗೆ ಒಂದೇ ಪ್ರಮಾಣದ ಶಿಕ್ಷೆ ನಿಗದಿ ಮಾಡಿದರೆ, ಸಾಕ್ಷಿ ನಾಶಮಾಡುವ ಉದ್ದೇಶದಿಂದ ಅತ್ಯಾಚಾರಿಯು, ಅತ್ಯಾಚಾರಕ್ಕೆ ಒಳಗಾದವರನ್ನು ಕೊಲೆ ಮಾಡಲು ಉತ್ತೇಜಿಸಿದಂತೆ ಆಗುತ್ತದೆ ಎಂಬುದು ಆ ಪ್ರತಿವಾದಗಳಲ್ಲಿ ಒಂದು. ಆದರೆ ನಾವು ಅದನ್ನು ಈಗ ಒಮ್ಮೆ ಅಲಕ್ಷಿಸೋಣ. ಕಠಿಣ ಶಿಕ್ಷೆಯ ಮೂಲಕ ಪರಿಹಾರ ಕಂಡುಕೊಳ್ಳುವುದನ್ನು ರಾಜಕಾರಣಿಗಳು ಸಾಮಾನ್ಯವಾಗಿ ಬೆಂಬಲಿಸುತ್ತಾರೆ. ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕು ಎಂಬ ವಿಚಾರದಲ್ಲಿ ಹಲವರು ಸಹಮತ ವ್ಯಕ್ತಪಡಿಸಿರುವುದು ಈಚಿನ ದಿನಗಳ ದಿನಪತ್ರಿಕೆಗಳನ್ನು ಓದಿದರೆ ಗೊತ್ತಾಗುತ್ತದೆ.

ಕೊಲೆ ಮಾಡಿದವರಿಗೆ ಮರಣ ದಂಡನೆ ವಿಧಿಸುವುದು ಭಾರತದಲ್ಲಿ ಇದೆ. ಈ ಶಿಕ್ಷೆಯು ಕೊಲೆಗಾರರಲ್ಲಿ ಭೀತಿ ಹುಟ್ಟಿಸಿದೆಯೇ, ಕೊಲೆ ಪ್ರಕರಣಗಳು ಇನ್ನಿಲ್ಲವಾಗುವಂತೆ ಮಾಡಿತೇ? ಅಂಕಿ–ಅಂಶಗಳನ್ನು ಒಮ್ಮೆ ಪರಿಶೀಲಿಸೋಣ. ಭಾರತದ ನ್ಯಾಯಾಲಯಗಳು 2016ರಲ್ಲಿ 136 ಜನರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದವು. ಆದರೆ ಆ ವರ್ಷ ದೇಶದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಕೊಲೆಗಳು ಆದವು. ಮರಣ ದಂಡನೆ ವಿಧಿಸುವುದರಿಂದ ಕೊಲೆಗಾರರನ್ನು ಹದ್ದುಬಸ್ತಿನಲ್ಲಿ ಇರಿಸಲು ಆಗುವುದಿಲ್ಲ. ಒಂದು ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು, ಆದೇಶವನ್ನು ರದ್ದು ಮಾಡಲು ನಮ್ಮ ಕಾನೂನಿನಲ್ಲಿ ಅವಕಾಶ ಇದೆ. ಹಾಗಾಗಿ, 2016ರಲ್ಲಿ ನೇಣುಗಂಬವನ್ನು ಏರಿದ ಅಪರಾಧಿಗಳ ಸಂಖ್ಯೆ ಸೊನ್ನೆ. ಸಂಕೀರ್ಣ ಸಮಸ್ಯೆಗಳಿಗೆ ಸರಳ ಪರಿಹಾರಗಳನ್ನು ಬಯಸುವಾಗ, ‘ಅತ್ಯಾಚಾರಿಗಳನ್ನು ನೇಣಿಗೆ ಏರಿಸಿ’ ಎಂದು ಹೇಳುವಾಗ ನಾವು ಈ ಅಂಶವನ್ನು ಅರ್ಥ ಮಾಡಿಕೊಳ್ಳಬೇಕು.

ನಾವು ಈಗ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದ ಅಂಕಿ–ಅಂಶಗಳನ್ನು ಪರಿಶೀಲಿಸೋಣ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 38,947. ಮಕ್ಕಳ ಮೇಲೆ 1.06 ಲಕ್ಷಕ್ಕೂ ಹೆಚ್ಚಿನ ದೌರ್ಜನ್ಯಗಳು ನಡೆದಿವೆ. ಅತ್ಯಾಚಾರಕ್ಕೆ ಸಂಬಂಧಿಸಿದ ಅಂಕಿ–ಅಂಶಗಳಲ್ಲಿ ಒಂದು ಸಮಸ್ಯೆ ಇದೆ. ಭಾರತದಲ್ಲಿ ಲೈಂಗಿಕ ದೌರ್ಜನ್ಯಗಳಿಗೆ ಗುರಿಯಾದವರ ಪೈಕಿ ಶೇಕಡ 99ರಷ್ಟು ಜನ ಅದರ ಬಗ್ಗೆ ಪೊಲೀಸರಲ್ಲಿ ದೂರು ನೀಡುವುದಿಲ್ಲ ಎಂಬುದನ್ನು ಸರ್ಕಾರದ ದಾಖಲೆಗಳು ಹೇಳುತ್ತವೆ.

ಅಮೆರಿಕದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರತಿ 1,000 ಪ್ರಕರಣಗಳಲ್ಲಿ 310 ಪ್ರಕರಣಗಳು (ಅಂದರೆ ಶೇಕಡ 31ರಷ್ಟು) ಮಾತ್ರ ಪೊಲೀಸರ ಬಳಿ ಬರುತ್ತಿವೆ, ಆರು ಜನ ಮಾತ್ರ ಜೈಲು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಅಂದರೆ ಜೈಲು ಶಿಕ್ಷೆ ಅನುಭವಿಸುವವರ ಪ್ರಮಾಣ ಶೇಕಡ 1ರಷ್ಟೂ ಇಲ್ಲ. ಅಂದರೆ, ನ್ಯಾಯ ದೊರಕಿಸಿಕೊಡಲು ಸಾಧ್ಯವಾಗದಿರುವುದು ನಮ್ಮಲ್ಲಿ ಮಾತ್ರವೇ ಅಲ್ಲ. ಇದೊಂದು ತೀರಾ ಸಂಕೀರ್ಣ ವಿಚಾರ. ಇದರ ಬಗ್ಗೆ ಸಾಕಷ್ಟು ಆಲೋಚನೆ ನಡೆಸಬೇಕು, ಸಮಸ್ಯೆ ಪರಿಹರಿಸಲು ಇನ್ನಷ್ಟು ಕೆಲಸ ಮಾಡಬೇಕು.

ಇಲ್ಲಿ ಹಲವು ಸಂಗತಿಗಳು ಹೆಣೆದುಕೊಂಡಿವೆ. ಅವುಗಳಲ್ಲಿ ಕೆಲವು ಸಾಮಾಜಿಕ ವಿಚಾರಗಳಾದರೆ, ಇನ್ನು ಕೆಲವನ್ನು ಪ್ರಭುತ್ವವೇ ಸರಿಪಡಿಸಲು ಸಾಧ್ಯವಿದೆ. ಭಾರತ ಮತ್ತು ಇತರ ದೇಶಗಳಲ್ಲಿನ ಅತ್ಯಾಚಾರ ಸಂತ್ರಸ್ತರ ನಡುವೆ ಇರುವ ಸಾಮಾನ್ಯ ಅಂಶವೆಂದರೆ, ಅತ್ಯಾಚಾರ ಎಂಬುದು ತೀರಾ ವೈಯಕ್ತಿಕ ಮಟ್ಟದಲ್ಲಿ ನಡೆಯುವ ಅಪರಾಧ, ಅದನ್ನು ಇನ್ನೊಬ್ಬರಿಗೆ ತಿಳಿಸುವುದು ಸುಲಭದ ಸಂಗತಿಯಲ್ಲ. ಭಾರತದಲ್ಲಿನ ಸಾಮಾಜಿಕ ಸಮಸ್ಯೆಗಳು ಹಲವು. ನಮ್ಮ ಸಮಾಜದಲ್ಲಿ ಹೆಣ್ಣಿನ ಸ್ಥಾನ ಮತ್ತು ಆಕೆಯನ್ನು ನಾವು ಕಾಣುವ ರೀತಿ ಪ್ರಮುಖವಾದದ್ದು. ಕುಟುಂಬದ ‘ಗೌರವ’ವು ಹೆಣ್ಣಿನ ದೇಹದಲ್ಲಿ ಇರುತ್ತದೆ, ಆಕೆಯ ಮೇಲೆ ಹಲ್ಲೆ ನಡೆದಾಗ ಆ ಗೌರವ ಹೊರಟುಹೋಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಈ ಕಾರಣದಿಂದಾಗಿ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ವಿವರಗಳನ್ನು ಕುಟುಂಬದ ಸದಸ್ಯರ ಜೊತೆ ಹೇಳಿಕೊಳ್ಳುವುದು ಕೂಡ ಕಷ್ಟವಾಗುತ್ತದೆ – ಹೀಗಿರುವಾಗ ಪೊಲೀಸ್ ಠಾಣೆಯಲ್ಲಿರುವ ಅಪರಿಚಿತರ ಜೊತೆ ಅದನ್ನು ಹೇಳಿಕೊಳ್ಳುವ ಬಗ್ಗೆ ಆಲೋಚಿಸುವುದೂ ಬೇಡ.

ಪೊಲೀಸರು ಮಾಡಬಹುದಾದ ಕೆಲಸಗಳು ಕೆಲವಿವೆ. ಕಾನೂನು ಪಾಲನೆ ಅವುಗಳಲ್ಲಿ ಒಂದು. ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದವರು ಅದರ ಬಗ್ಗೆ ತಮಗೆ ಸರಿ ಅನಿಸಿದ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು ಎಂದು ದೇಶದ ಕಾನೂನು ಹೇಳುತ್ತದೆ (ಅತ್ಯಾಚಾರ ನಡೆದ ಪ್ರದೇಶದ ಪೊಲೀಸ್ ಠಾಣೆಯಲ್ಲೇ ದೂರು ನೀಡಬೇಕು ಎಂದೇನೂ ಇಲ್ಲ). ಎರಡನೆಯದಾಗಿ, ಸಂತ್ರಸ್ತೆಯು ತನ್ನಿಷ್ಟದ ಭಾಷೆಯಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಬಹುದು. ಇದನ್ನು ಅನುಷ್ಠಾನಕ್ಕೆ ತರುವುದು ಕಷ್ಟ. ಏಕೆಂದರೆ, ಬಹುತೇಕ ಪೊಲೀಸ್ ಠಾಣೆಗಳಲ್ಲಿ ಸರಿಯಾಗಿ ಇಂಗ್ಲಿಷ್‌ ಮಾತನಾಡಲು ಬರುವ ಸಿಬ್ಬಂದಿಯೂ ಇಲ್ಲ. ಠಾಣೆಗಳಲ್ಲಿ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್‌) ಸ್ಥಳೀಯ ಭಾಷೆಯಲ್ಲಿ ಬರೆಯುವುದಕ್ಕೇ ಆದ್ಯತೆ ನೀಡಲಾಗುತ್ತದೆ. ಸಂತ್ರಸ್ತೆಯ ಹೇಳಿಕೆಯನ್ನು ಮಹಿಳಾ ಪೊಲೀಸ್‌ ಅಧಿಕಾರಿಯೇ ದಾಖಲಿಸಿಕೊಳ್ಳಬೇಕು ಎಂಬ ನಿಯಮವಿದೆ. ಇದನ್ನು ಕೂಡ ಪಾಲಿಸಲು ಆಗುತ್ತಿಲ್ಲ. ಏಕೆಂದರೆ, ಮಹಿಳಾ ಪೊಲೀಸ್‌ ಅಧಿಕಾರಿಗಳ ಕೊರತೆಯೂ ಇದೆ, ಒಟ್ಟಾರೆಯಾಗಿ ಪೊಲೀಸ್‌ ಸಿಬ್ಬಂದಿಯ ಕೊರತೆಯೂ ಇದೆ. 'ಚಿಕ್ಕ ಸರ್ಕಾರ, ಗರಿಷ್ಠ ಆಡಳಿತ' ಎಂಬುದು ಒಂದು ಜನಪ್ರಿಯ ಘೋಷವಾಕ್ಯ. ಆದರೆ, ದೇಶದ ಸರ್ಕಾರಗಳ ಗಾತ್ರವನ್ನು ಪೊಲೀಸರು, ವೈದ್ಯರು, ದಾದಿಯರ ಸಂಖ್ಯೆಯ ಆಧಾರದಲ್ಲಿ ಅಳೆದರೆ ಈ ಘೋಷವಾಕ್ಯಗಳು ಅರ್ಥಹೀನ ಅನಿಸುತ್ತವೆ. ವಿಶ್ವದ ಇತರ ದೇಶಗಳ ಜೊತೆ ಹೋಲಿಕೆ ಮಾಡಿದರೆ ನಮ್ಮಲ್ಲಿರುವ ಪೊಲೀಸರು, ವೈದ್ಯರು, ದಾದಿಯರ ತಲಾವಾರು ಪ್ರಮಾಣ ತೀರಾ ಕಡಿಮೆ.

ಲೈಂಗಿಕ ಅಪರಾಧಗಳನ್ನು ತಡೆಯಲು ನಾವು ನಮ್ಮ ಸಮಾಜದಲ್ಲಿ ದೊಡ್ಡ ಮಟ್ಟಿನ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಕೌಟುಂಬಿಕ ಮಟ್ಟದಲ್ಲಿ ಮಹಿಳೆಯರನ್ನು ನಾವು ನೋಡುವ ಬಗೆಯಲ್ಲೂ ಬದಲಾವಣೆ ತಂದುಕೊಳ್ಳಬೇಕಾಗುತ್ತದೆ. ಲೈಂಗಿಕ ಕಿರುಕುಳಗಳಿಗೆ ಸಂಬಂಧಿಸಿದ ಪ್ರಕರಣಗಳ ದೂರು ನೀಡುವ ವಿಚಾರದಲ್ಲಿ ಈಗಿರುವ ಕಾನೂನುಗಳು ದೇಶದ ಪ್ರತಿ ಪೊಲೀಸ್ ಠಾಣೆಯ ಹಂತದಲ್ಲಿಯೂ ಸರಿಯಾಗಿ ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಇದು ಬಹಳ ಕಷ್ಟದ ಕೆಲಸ. ಆದರೆ, ದೂರು ದಾಖಲಾಗುವ ಪ್ರಮಾಣವು ಬೇರೆ ದೇಶಗಳಲ್ಲಿ ಇರುವಷ್ಟರಮಟ್ಟಿಗಾದರೂ ಹೆಚ್ಚಾಗುತ್ತದೆ. ದೂರು ದಾಖಲಾಗುವ ಪ್ರಮಾಣ ಹೆಚ್ಚಿದ ನಂತರ ಸರ್ಕಾರವು ಸೂಕ್ತ ತನಿಖೆ ಆಗುವಂತೆ ನೋಡಿಕೊಳ್ಳಬೇಕಾಗುತ್ತದೆ (ಇದಕ್ಕೆ ದೊಡ್ಡ ಮಟ್ಟಿನ ಸಂಪನ್ಮೂಲಗಳು ಬೇಕು. ಇದೇ ಮಟ್ಟದ ಮಾನವ ಸಂಪನ್ಮೂಲ ಮತ್ತು ಹಣಕಾಸಿನ ಅನುದಾನ ಇದ್ದರೆ ಆಗದು). ಸೂಕ್ತ ತನಿಖೆ ಸಾಧ್ಯವಾದರೆ ಅಪರಾಧಿಗಳಿಗೆ ಶಿಕ್ಷೆ ಆಗುವ ಪ್ರಮಾಣ ಹೆಚ್ಚಾಗುತ್ತದೆ.

ಇವೆಲ್ಲವೂ ಕಷ್ಟದ ಕೆಲಸಗಳು. ಇವೆಲ್ಲವೂ 'ಸಾಧ್ಯವೇ ಇಲ್ಲ' ಎಂಬ ಸ್ಥಿತಿಯಲ್ಲಿವೆ ಎಂಬುದು ಬಹುತೇಕ ರಾಜಕಾರಣಿಗಳಿಗೆ ಗೊತ್ತಿದೆ. ಹಾಗಾಗಿಯೇ ಸುಲಭದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. 'ಅತ್ಯಾಚಾರಿಗಳನ್ನು ನೇಣಿಗೆ ಹಾಕಿ' ಎಂಬ ಬೇಡಿಕೆ ಇಡುವುದು ಆ ಸುಲಭದ ಮಾರ್ಗ. ಕೊಲೆಗಾರರನ್ನು ಕೂಡ ನೇಣಿಗೆ ಹಾಕಲಾಗುತ್ತದೆ. ಹೀಗಿದ್ದರೂ, ಕೊಲೆಗಳ ಸಂಖ್ಯೆಯ ಮೇಲೆ ಅದು ಪರಿಣಾಮ ಬೀರಿಲ್ಲ ಎನ್ನುವುದು ನಮ್ಮ ತಲೆಗೆ ಹೊಕ್ಕಿರುವಂತೆ ಕಾಣಿಸುತ್ತಿಲ್ಲ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry