ಶನಿವಾರ, ಮೇ 21, 2022
26 °C

ಸಂತಸದ ಕ್ಷಣಗಳನ್ನು ಹಿಗ್ಗಿಸಿಕೊಳ್ಳುವ ಬಗೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಜಗತ್ತಿನಲ್ಲಿ ಎಲ್ಲ ತರಹದ ಜನ ಇರುತ್ತಾರೆ. ನನಗೊಬ್ಬ ಸ್ನೇಹಿತನಿದ್ದಾನೆ. ಅವನು ಅಳುಮೋರೆ ಹಾಕಿದ್ದನ್ನೇ ನೋಡಿಲ್ಲ. ಯಾವಾಗಲೂ ನಗುನಗುತ್ತಲೇ ಇರುತ್ತಾನೆ. ಅವನ ಜೊತೆಗಿದ್ದವರೂ ಅಳುಮೋರೆ ಹಾಕುವುದು ಸಾಧ್ಯವಿಲ್ಲ. ಯಾರ ಮುಖದ ಮೇಲೆ ಒಂದು ಗೆರೆ ಕಾಣಿಸಿದರೂ ಸಾಕು, `ಯಾಕೋ? ಭೂಮಿಯ ಭಾರವೆಲ್ಲ ನಿನ್ನ ತಲೆಗೇ ಬಂತೇನೋ? ನೀನು ಹೀಗೆ ಮೂತಿ ಮಾಡಿಕೊಂಡು ಕುಳಿತಿದ್ದರೆ ನಗುಬರುತ್ತದಲ್ಲೋ~ ಎಂದು ಹೇಳುತ್ತ ಅವರ ಬೆನ್ನು ತಟ್ಟಿ ಹುರಿದುಂಬಿಸಿ ಅವರು ನಕ್ಕು ಹಗುರಾಗುವವರೆಗೆ ಬಿಡುವವನಲ್ಲ.ಅವನ ಈ ನಡೆ, ಉತ್ಸಾಹ ತುಂಬ ಅಪರೂಪ ಎನ್ನಿಸಿತು. ಕೆಲವರಿಗೆ ನಗುವುದಕ್ಕೇ ಬರುವುದಿಲ್ಲ. ದಾರಿಯಲ್ಲಿ ಸಿಕ್ಕಾಗ ಸಾಂಪ್ರದಾಯಿಕವಾಗಿ,  `ಹೇಗಿದ್ದೀರಿ?~ ಎಂದು ಕೇಳಿದರೆ `ಚೆನ್ನಾಗಿದ್ದೇನೆ~ ಎಂದು ಹೇಳಲೂ ಬರುವುದಿಲ್ಲ.  `ಏನೋಪ್ಪ, ಹೀಗಿದ್ದೇನೆ~  ಎಂದು ನರಳುತ್ತಾರೆ. ಅವರು ಹೇಳುವ ರೀತಿಯನ್ನು ಕೇಳಿದರೆ ಯಾಕಾದರೂ ಇದ್ದಾರೋ ಎಂದು ಎನ್ನಿಸದೇ ಇರುವುದಿಲ್ಲ.ಹೀಗೆ ಉದ್ದ ಮೋರೆ ಹಾಕಿಕೊಂಡು ಇರುವವರೇ ಹೆಚ್ಚಾಗಿದ್ದಾಗ ನನ್ನ ಸ್ನೇಹಿತ ಅಪರೂಪ ಎನ್ನಿಸಿದ್ದು ಆಶ್ಚರ್ಯವಲ್ಲ. ಒಂದು ಬಾರಿ ಅವನನ್ನು ಕರೆದು ಮಾತನಾಡಿಸಿದೆ.  `ಅಲ್ಲಯ್ಯ ನೀನು ಯಾವಾಗಲೂ ಖುಷಿಯಾಗಿರುವುದನ್ನು ನೋಡಿದರೆ ನಿನಗೆ ಯಾವ ತೊಂದರೆಗಳೂ ಇಲ್ಲವೆನ್ನಿಸುತ್ತದೆ. ನಿನ್ನ ಸಂತೋಷದ ಗುಟ್ಟೇನು?~ ಎಂದು ಕೇಳಿದೆ.

 

ಅದಕ್ಕೂ ಆತ ಜೋರಾಗಿ ನಕ್ಕು,  `ನಾನೂ ಮನುಷ್ಯನೇ ಅಲ್ಲವೇ? ನನಗೂ ಸಮಸ್ಯೆಗಳು ಇವೆಯಪ್ಪ. ಆದರೆ ಸಮಸ್ಯೆಗಳು ಇವೆಯಂತ ಸದಾ ಅಳುತ್ತಲೇ ಕೂಡ್ರುವುದಕ್ಕಾಗುತ್ತದಯೇ? ನಮಗೆ ಇರುವುದು ಎರಡೇ ಆಯ್ಕೆಗಳು. ಕಷ್ಟದಲ್ಲೂ ನಗುತ್ತ ಬಾಳುವುದು ಇಲ್ಲವೇ ಸಂತೋಷದಲ್ಲಿಯೂ ಕೊರಗುತ್ತ ಇರುವುದು. ನಾನು ಮೊದಲನೆಯದನ್ನು ಆರಿಸಿಕೊಂಡೆ~  ಎಂದ.  `ಅದು ಹೇಗಪ್ಪ ಕಷ್ಟದಲ್ಲಿ ನಗುವುದು?~ ಎಂದು ಕೇಳಿದೆ.ಅದಕ್ಕೆ ಅವನು ಹೇಳಿದ ಮಾತು ನನಗೆ ತುಂಬ ಪ್ರಯೋಜನಕಾರಿ ಎನ್ನಿಸಿತು. `ನಮಗೆಲ್ಲ ಕಷ್ಟದ ಕ್ಷಣಗಳು ಬಂದೇ ಬರುತ್ತವೆ. ನನ್ನ ಮನೆಯ ಪರಿಸ್ಥಿತಿಯನ್ನೇ ನೋಡು. ನನ್ನ ತಂದೆ ಹೋಗಿ ಮೂರು ವರ್ಷವಾಯಿತು, ತಾಯಿಗೆ ಕ್ಯಾನ್ಸರ್ ಇದೆ.ನನ್ನಣ್ಣನ ಮದುವೆ ಕಳೆದ ವರ್ಷವಾಯಿತು. ಅದೇನು ಸಮಸ್ಯೆಯೋ ತಿಳಿಯದು, ಮದುವೆಯಾದ ಒಂದು ವಾರ ಮನೆಯಲ್ಲಿದ್ದು ನಂತರ ಹೊರಟುಹೋದ ನನ್ನ ಅತ್ತಿಗೆ ಮನೆಗೆ ಮರಳಿಯೇ ಇಲ್ಲ. ನಿನಗೇ ಗೊತ್ತು ನನಗೆ ಬಿ.ಕಾಂ ಮುಗಿಸಲೇ ಆಗಲಿಲ್ಲ. ಆದರೂ ಹ್ಯಾಗೋ ಈ ಇನ್‌ಶೂರನ್ಸ್ ಕಂಪನಿಯಲ್ಲಿ ಕೆಲಸ ಸಿಕ್ಕಿ ಜೀವನ ಮಾಡುತ್ತಿದ್ದೇನೆ. ಆದರೆ ಜೀವನ ಚೆನ್ನಾಗಿದೆ ಕಣೋ, ಸಂತೋಷವಾಗಿದ್ದೇನೆ~ ಎಂದು ಲಟಿಕೆ ಹೊಡೆದು ನಕ್ಕ.ನಂತರ ಮತ್ತೆ ಹೇಳಿದ,  `ನೋಡು ಗೆಳೆಯಾ, ಕಷ್ಟಗಳು ಜೀವನದ ಪ್ರತಿ ಕ್ಷಣಗಳೂ ಇರುವುದು ಸಾಧ್ಯವಿಲ್ಲ. ನಮ್ಮ ಮನಸ್ಸು ಆ ಕ್ಷಣಗಳನ್ನು ಹಿಗ್ಗಿಸಿ ಹಿಗ್ಗಿಸಿ ದಿನಗಳನ್ನೆಲ್ಲ ತುಂಬಿಸಿಕೊಳ್ಳುತ್ತದೆ. ಅದೇ ಸುಖದ ಕ್ಷಣಗಳನ್ನು ಬೇಗ ಮರೆತುಬಿಡುತ್ತದೆ. ನಾಲ್ಕು ವರ್ಷಗಳ ಹಿಂದೆ ನನಗೂ ಮನಸ್ಸು ಬಹಳ ಖಿನ್ನವಾಗುತ್ತಿತ್ತು. ಸುಖದ ಕ್ಷಣಗಳೇ ಇಲ್ಲವೇನೋ ಎನ್ನಿಸುತ್ತಿತ್ತು. ಆಗ ಒಂದು ದಿನ ನಾನು ಯೋಚಿಸಿದೆ.

 

ಒಂದು ಕಾಗದ ತೆಗೆದುಕೊಂಡು ಅಂದಿನ ದಿನ ನಡೆದ ಸಣ್ಣ ಸಣ್ಣ ಘಟನೆಗಳನ್ನೂ ನೆನೆಸಿಕೊಂಡೆ. ಹೌದು ಬೆಳಿಗ್ಗೆ ಕಾಫೀ ಎಷ್ಟು ಚೆನ್ನಾಗಿತ್ತಲ್ಲ! ಆ ಹತ್ತು ನಿಮಿಷ ಸುಖವಲ್ಲವೇ? ನಂತರ ಮಧ್ಯಾಹ್ನ ನನ್ನ ಹಳೆ ಗೆಳೆಯ ಫೋನ್ ಮಾಡಿ ಹಳೆಯ ಸುದ್ದಿಗಳನ್ನೆಲ್ಲ ಕೆದಕಿ ನೆನೆಸಿಕೊಂಡಾಗ ಎಷ್ಟು ಸಂತೋಷವಾಗಿತ್ತಲ್ಲ? ಹೀಗೆಯೇ ಸುಖದ ಕ್ಷಣಗಳನ್ನು ನೆನಪಿಸಿಕೊಂಡು ಬರೆಯುತ್ತ ಹೋದೆ.ಅಬ್ಬಾ! ಜೀವನ ಅಷ್ಟು ಕೆಡುಕೇನಲ್ಲ ಎನ್ನಿಸಿತು. ಸಂತೋಷದ ಕ್ಷಣಗಳನ್ನು ಹಿಗ್ಗಿಸುವ, ದು:ಖದ ಕ್ಷಣಗಳನ್ನು ಕುಗ್ಗಿಸುವ ರೀತಿಯನ್ನು ಅಭ್ಯಾಸಮಾಡಿಕೊಂಡು ಬಿಟ್ಟೆ. ಅದಕ್ಕೇ ಈಗ ಜೀವನದಲ್ಲಿ ನಾನು ಬೋರ್ ಆಗುವುದಿಲ್ಲ, ಕುಸಿದುಹೋಗುವಷ್ಟು ದು:ಖವಾಗುವುದಿಲ್ಲ.~ಎಷ್ಟು ನಿಜ ಅಲ್ಲವೇ? ನಾವೂ ಹಾಗೆ ಮಾಡಿ ನೋಡೋಣ. ಪ್ರತಿಯೊಂದು ಆಪ್ಯಾಯಮಾನವಾದ, ಸಂತೋಷದ ಕ್ಷಣಗಳನ್ನು ಹಂಚಿಕೊಂಡು, ಹಿಗ್ಗಿಸಿಕೊಳ್ಳುತ್ತ, ದುಃಖದ, ಕಷ್ಟದ ಕ್ಷಣಗಳನ್ನು ಕುಗ್ಗಿಸಿಕೊಂಡು ಆದಷ್ಟು ಬೇಗ ಮರೆಯುವ ಅಭ್ಯಾಸ ಮಾಡಿಕೊಂಡಾಗ ಬದುಕು ಹೆಚ್ಚು ಭಾರವಾಗದು ಎನ್ನಿಸುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.