ಸಂಪನ್ಮೂಲ ದುರ್ಬಳಕೆ ಅಧಿಕ

7

ಸಂಪನ್ಮೂಲ ದುರ್ಬಳಕೆ ಅಧಿಕ

Published:
Updated:
ಸಂಪನ್ಮೂಲ ದುರ್ಬಳಕೆ ಅಧಿಕ

ದೇಶದ ಒಟ್ಟು ಆಂತರಿಕ ಉತ್ಪನ್ನವನ್ನು ಗಮನಿಸಿದಾಗ ಕೃಷಿ ಮತ್ತು ಕೈಗಾರಿಕೆಯಿಂದ ತಲಾ ಶೇ 20ರಷ್ಟು ಕೊಡುಗೆ ಸಿಗುತ್ತಿದೆ, ಉಳಿದ ಭಾಗವನ್ನು ಸೇವಾ ಕ್ಷೇತ್ರ ತುಂಬುತ್ತದೆ. 1980ರಿಂದೀಚೆಗೆ ಸಾಗುವಳಿ ಮಾಡಬಹುದಾದ ಸ್ಥಳದಲ್ಲಿ ರೈತರು ಬೆಳೆಯುವ ಗೋಧಿ, ಅಕ್ಕಿಯಂತಹ ಧಾನ್ಯಗಳ ಬೆಳೆಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರಲ್ಲಿ ಬಹುತೇಕ ಪಾಲು ನಗರವಾಸಿಗಳ ಹೊಟ್ಟೆ ಹೊರೆಯುವುದಕ್ಕೇ ಬೇಕಾಗುತ್ತದೆ. ಹಣ್ಣು ಮತ್ತು ತರಕಾರಿಯ ಇಳುವರಿಯೂ ಶೇ 45ರಷ್ಟು ಹೆಚ್ಚಾಗಿದೆ.

ಯುಪಿಎ ಸರ್ಕಾರದ ಸಾಧನೆ ಬಗ್ಗೆ ಯಾರಾದರೂ ಕೇಳಿದರೆ ನಾವು ತಕ್ಷಣ ಬೆಟ್ಟುಮಾಡಿ ತೋರಿಸುವುದು ಅದರ ಆರ್ಥಿಕ ಕಾರ್ಯಸೂಚಿಯತ್ತ. ಅದರ ಜತೆಗೆ ಆರೋಗ್ಯ ಮತ್ತು ಶಿಕ್ಷಣವೂ ಸೇರಿಕೊಳ್ಳುತ್ತದೆ. ಕಳೆದ ಒಂದು ದಶಕದಲ್ಲಿ ನೀರು ಮತ್ತು ಇಂಧನ ಪ್ರಮುಖ ಭಾಗವನ್ನು ಆಕ್ರಮಿಸಿಕೊಂಡಿದೆ. ಆದರೆ, ಸರ್ಕಾರ ಮಾತ್ರ ಎಚ್ಚೆತ್ತುಕೊಂಡಿಲ್ಲ. ನಾವು ಇದೇ ಸ್ಥಿತಿಯಲ್ಲಿ 21ನೇ ಶತಮಾನದ 2ನೇ ದಶಕಕ್ಕೆ ಶೀಘ್ರದಲ್ಲಿಯೇ ಕಾಲಿಡಲಿದ್ದೇವೆ.

1991ರಲ್ಲಿ ಮನಮೋಹನ್ ಸಿಂಗ್ ಅವರು ನಮ್ಮನ್ನು ಪಾವತಿ ಬಿಕ್ಕಟ್ಟಿನ ದುಃಸ್ವಪ್ನದಿಂದ ಪಾರುಮಾಡಿದ ನಂತರ ಎಲ್ಲಾ ಪ್ರಧಾನಿಗಳೂ ಯಾವುದೇ ಕ್ಷಣದಲ್ಲಿ ಸಂಭವಿಸಬಹುದಾದ ಇಂತಹ ಸ್ಥಿತಿಯ ಮೇಲೆ ಕಣ್ಣಿಟ್ಟೇ ಇದ್ದರು. ಭಾರಿ ಪ್ರಮಾಣದಲ್ಲಿ ಎದುರಾದ ಜಾಗತಿಕ ಆರ್ಥಿಕ ಹಿಂಜರಿತವನ್ನು ಚೀನಾಕ್ಕಿಂತಲೂ ಸಮರ್ಥವಾಗಿ ಎದುರಿಸಿದ್ದು ಭಾರತ.

1990ರಿಂದೀಚೆಗೆ ನಮ್ಮನ್ನು ಆಳುವವರು ನೆಹರೂ ನೀತಿಯನ್ನು ಸಮರ್ಪಕವಾಗಿ ಅಳವಡಿಸಿಕೊಂಡು ಬಂದಿದ್ದೇ ಈ ಧಾರಣಾ ಶಕ್ತಿಗೆ ಕಾರಣವಾಗಿತ್ತು. ಸ್ವಾತಂತ್ರ್ಯ ಗಳಿಸಿದಾಗಿನಿಂದ ನಾವು ಅನುಸರಿಸಿಕೊಂಡು ಬಂದ ಆರ್ಥಿಕ ನೀತಿಗಳಿಂದ ಅದಕ್ಕೆ ಭದ್ರ ಬುನಾದಿ ಸಿಕ್ಕಿತ್ತು. ಅದಕ್ಕಾಗಿ ನಾಲ್ಕು ದಶಕಗಳ ಕಾಲ ನಮ್ಮವರ ಬದುಕು ಬಹಳ ದುಃಸ್ಥಿತಿಯಲ್ಲಿತ್ತು ಎಂಬುದನ್ನು ಸಹ ನಾವು ಮರೆಯಬಾರದು.

1990ರಿಂದೀಚೆಗೆ ಜಿಡಿಪಿ ಬಗ್ಗೆ ಸರ್ಕಾರಗಳು ವಹಿಸುತ್ತಿರುವ ಎಚ್ಚರದ ನಡುವೆಯೂ ನಮ್ಮ ಒಟ್ಟಾರೆ ವಾರ್ಷಿಕ ಪ್ರಗತಿ ದರ (ಸಿಎಜಿಆರ್) ಶೇ 7.8ಕ್ಕಿಂತ ಅಧಿಕಗೊಂಡಿರಲಿಲ್ಲ. 2010-11ರಲ್ಲಿ ಮಾತ್ರ ಚೀನಾಕ್ಕೆ ಹರಿದುಬಂದ 7 ಶತಕೋಟಿ ಡಾಲರ್ ಹೂಡಿಕೆಗೆ ಬದಲಾಗಿ ಭಾರತಕ್ಕೆ 20 ಶತಕೋಟಿ ಡಾಲರ್‌ನಷ್ಟು ಹೂಡಿಕೆ ಹರಿದುಬಂದಿತ್ತು.ಭಾರತವು ರಾಜಕೀಯವಾಗಿ ಮಾತ್ರವಲ್ಲ, ಆರ್ಥಿಕವಾಗಿಯೂ ಸ್ಥಿರವಾದ ದೇಶ ಎಂಬ ಸಂದೇಶ ಜಗತ್ತಿಗೆ ತಲುಪಿದ್ದರಿಂದಲೇ ಈ ಬೆಳವಣಿಗೆ ಆಗಿದೆ. ದೇಶದಲ್ಲಿ ಶೇ 94ರಷ್ಟು ಸಂಪತ್ತನ್ನು ಸಂಗ್ರಹಿಸುವವರು ಅನಕ್ಷರಸ್ಥರು. ಉಳಿದವರು ಅದನ್ನು ನಿಭಾಯಿಸುವುದು ಮಾತ್ರ.

ದೇಶದ ಈ ರೀತಿಯ ಪ್ರಗತಿ ನಮ್ಮ ನೈಸರ್ಗಿಕ ಸಂಪನ್ಮೂಲದ ಮೇಲೆ ದುಷ್ಪರಿಣಾಮ ಬೀರಿದೆ. ಛತ್ತೀಸ್‌ಗಡ, ಜಾರ್ಖಂಡ್ ಬೆಟ್ಟಗಳಲ್ಲಿನ ನಮ್ಮ ಸಂಪದ್ಭರಿತ ಗಣಿಗಳನ್ನು ಅಡವು ಇಡಲಾಗುತ್ತಿದೆ. ಹಿಮಾಲಯ ಭಾಗದಲ್ಲಿ ಹುಟ್ಟುವ ಜೀವನದಿಗಳು ಹಲವು ಯೋಜನೆಗಳಿಂದಾಗಿ ಅವಸಾನಗೊಳ್ಳುತ್ತಿವೆ. ಲವಣಾಂಶ ಇರುವ ಮಣ್ಣಿನಲ್ಲಿ ಅಧಿಕ ಫಸಲು ಪಡೆಯಬೇಕೆಂದು ಸಿಂಥೆಟಿಕ್ ರಸಗೊಬ್ಬರವನ್ನು ಭೂಮಿಗೆ ಸುರಿಯುತ್ತಿರುವುದರಿಂದ ಭೂಮಿ ವಿಷಮಯವಾಗುತ್ತಿದೆ.

ದೇಶದ ಕೇವಲ ಶೇ 5ರಷ್ಟು ಭೂಭಾಗದ ಮಂದಿಯೇ ದೇಶದ ಉಳಿದ ಭಾಗದ ಜನರು ಉತ್ಪಾದಿಸಿದ ಅಷ್ಟೂ ಉತ್ಪನ್ನವನ್ನು ಅನುಭೋಗಿಸುತ್ತಿದ್ದಾರೆ.

ನಮ್ಮಲ್ಲಿ ಇಂದು ಪರಿಸರಕ್ಕೆ ಹೊಂದಿಕೊಳ್ಳುವ ಜನರಿಗಿಂತ ನಿರಾಶ್ರಿತರ ಸಂಖ್ಯೆಯೇ ಅಧಿಕವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಾದರೂ ನಮ್ಮ ಜನರ ಜೀವನ ಕ್ರಮವನ್ನು ಸುಧಾರಿಸಲು ನಾವು ಯತ್ನಿಸುತ್ತಿಲ್ಲ. ಅಂತಹ ಪ್ರಯತ್ನ ನಮ್ಮ ಶಾಲೆಗಳಲ್ಲಿ ಆಗಬೇಕು. 40 ಕೋಟಿಯಷ್ಟು ಮಕ್ಕಳು ತಮ್ಮ ಸಂಸ್ಕೃತಿಯ ಬಗ್ಗೆ ಆಳವಾದ ಗೌರವದೊಂದಿಗೆ ಬೆಳೆಯುವಂತೆ ಮಾಡುವ ಅಗತ್ಯ ಇದೆ.

ಜನರ ಘನತೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಎತ್ತಿ ಹಿಡಿಯುತ್ತಲೇ ಉದ್ಯೋಗ ಖಾತರಿ, ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು (ಐಆರ್‌ಡಿಪಿ) ಜಾರಿಗೆ ತರುವುದು ಯುಪಿಎ ಸರ್ಕಾರಕ್ಕೆ ಸಾಧ್ಯವಿದ್ದರೆ ಇಲ್ಲೂ ಅದನ್ನು ಸಾಧಿಸುವುದು ಸಾಧ್ಯವಿದೆ. ಸರ್ಕಾರಕ್ಕೆ ಈಗಿನದಕ್ಕಿಂತ ಉತ್ತಮ ಸಂದರ್ಭ ಒದಗಿಬರುವುದು ಸಾಧ್ಯವಿಲ್ಲ, ದೇಶದಲ್ಲಿ ಸಮಾನ ರೀತಿಯ ಅಭಿವೃದ್ಧಿ ಸಾಧ್ಯವಾಗಬೇಕಾದರೆ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು.

ನಮ್ಮ ಪರಿಸರಕ್ಕೆ ಹಾನಿ ತರುವಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎಂಬ ನಿರ್ಧಾರವನ್ನು ಗೋಡೆಯಲ್ಲಿ ಬರೆದಷ್ಟು ಸ್ಪಷ್ಟವಾಗಿ ಕೈಗೊಳ್ಳಬೇಕು. ನಮ್ಮ ನಗರಗಳು ಶೇ 50ರಷ್ಟು ಕಡಿಮೆ ಇಂಧನ ಮತ್ತು ಶೇ 70ರಷ್ಟು ಕಡಿಮೆ ನೀರು ಬಳಸುವಂತೆ ಮಾಡಬೇಕು. ನೀರಿನ ಮರುಬಳಕೆಯಿಂದಲೇ ಇದನ್ನು ಸಾಧಿಸುವುದು ಸಾಧ್ಯವಿದೆ. ಇಂಧನ, ನೀರು ಮತ್ತು ತ್ಯಾಜ್ಯಗಳ ಸಮರ್ಥ ನಿರ್ವಹಣೆಯಲ್ಲಿ ತೊಡಗುವವರಿಗೆ ರಿಯಾಯಿತಿ, ಉತ್ತೇಜನ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು.

ಪರಿಸರಕ್ಕೆ ಪೂರಕವಾದ ಉದ್ಯಮಗಳೊಂದಿಗೆ ದೇಶವು ತೀವ್ರಗತಿಯ ಆರ್ಥಿಕ ಪ್ರಗತಿ ಸಾಧಿಸಬೇಕು. ಹವಾಮಾನ ಬದಲಾವಣೆಯ ಕಳಕಳಿಗೆ ಸ್ಪಂದಿಸುತ್ತಿರುವ ಭಾರತ, ಪರಿಸರ ಸಂರಕ್ಷಣೆಗೆ ಬಹಳ ಶ್ರಮ ವಹಿಸುತ್ತಿದೆ ಎಂಬ ಸಂದೇಶವನ್ನು ಸಾರಿದ್ದೇ ಆದರೆ ಜಾಗತಿಕ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ದೇಶ ಜಗತ್ತಿಗೆ ಉತ್ತಮ ಮಾದರಿಯಾಗಬಹುದು.

(ಲೇಖಕರನ್ನು 99010 54321 ಕರೆ ಮಾಡಿಸಂಪರ್ಕಿಸಬಹುದು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry