ಸಂವಿಧಾನದ ಕೇಂದ್ರದಲ್ಲಿರುವುದು ವ್ಯಕ್ತಿ ಸ್ವಾತಂತ್ರ್ಯ

7

ಸಂವಿಧಾನದ ಕೇಂದ್ರದಲ್ಲಿರುವುದು ವ್ಯಕ್ತಿ ಸ್ವಾತಂತ್ರ್ಯ

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:
ಸಂವಿಧಾನದ ಕೇಂದ್ರದಲ್ಲಿರುವುದು ವ್ಯಕ್ತಿ ಸ್ವಾತಂತ್ರ್ಯ

ಇಂದು ದೇಶದಾದ್ಯಂತ ಗಣತಂತ್ರ ದಿನಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ಒಂದು ವಿಚಿತ್ರ ವಿರೋಧಾಭಾಸದ ಕಡೆಗೆ ಓದುಗರ ಗಮನ ಸೆಳೆಯಲು ಬಯಸುತ್ತೇನೆ.

ನಾವು ಬದುಕುತ್ತಿರುವ ಇಂದಿನ ಭಾರತವನ್ನು 1950ರ ಜನವರಿ 26ರಂದು ಅಧಿಕೃತವಾಗಿ ಜಾರಿಗೊಳಿಸಲಾದ ಭಾರತೀಯ ಸಂವಿಧಾನವು ಬಹುಮಟ್ಟಿಗೆ ರೂಪಿಸಿತು ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬ ವ್ಯಕ್ತಿಯನ್ನೂ ನಾಗರಿಕನನ್ನಾಗಿ, ಹಕ್ಕುಗಳ ಧಾರಕನನ್ನಾಗಿ ಸಂವಿಧಾನವು ಪರಿಗಣಿಸಿತು. ಇದು ಹಿಂದೆ ವಸಾಹತುಶಾಹಿ ಪೂರ್ವದ ಕಾಲಘಟ್ಟದಲ್ಲಿ ಅಥವಾ ವಸಾಹತುಶಾಹಿ ಕಾಲದಲ್ಲಿ ಭಾರತದಲ್ಲಿ ವ್ಯಕ್ತಿಗಳನ್ನು ಮತ್ತು ಸಮುದಾಯಗಳನ್ನು ನೋಡಿದ ರೀತಿಗಿಂತ ಬಹು ಭಿನ್ನವಾಗಿತ್ತು ಎನ್ನುವುದನ್ನು ಒತ್ತಿ ಹೇಳಬೇಕು. ಅಂದರೆ ಈ ಹೊಸ ಸಾಂವಿಧಾನಿಕ ವ್ಯವಸ್ಥೆಯ ಅಡಿಯಲ್ಲಿ ವ್ಯಕ್ತಿಗೆ ದೊರೆತ ಹಕ್ಕುಗಳು ಲಿಂಗ, ಜಾತಿ, ಧರ್ಮ, ಸಂಪತ್ತು ಇಂತಹ ಯಾವ ಸ್ಥಾನಮಾನಗಳು ಅಥವಾ ಸಾಮುದಾಯಿಕ ನೆಲೆಗಳ ಆಧಾರದ ಮೇಲೆ ನಿರ್ಧಾರವಾಗಿರಲಿಲ್ಲ. ಒಬ್ಬ ವ್ಯಕ್ತಿ ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೇರಿರಲಿ, ಆತನ ವಿದ್ಯಾರ್ಹತೆ ಮತ್ತು ಆರ್ಥಿಕ ಸ್ಥಿತಿಗತಿಗಳು ಏನೇ ಇರಲಿ, ಆತನಿಗೆ ದೊರಕಿದ ಹಕ್ಕುಗಳಲ್ಲಿ, ಆತನ ಮೇಲಿದ್ದ ಜವಾಬ್ದಾರಿಗಳಲ್ಲಿ ಬದಲಾವಣೆಗಳಾಗುತ್ತಿರಲಿಲ್ಲ. ಇದೊಂದು ಭಾರತೀಯ ಸಮಾಜಕ್ಕೆ (ಅಥವಾ ಜಗತ್ತಿನ ಬೇರಾವುದೇ ಸಮಾಜದಲ್ಲಿಯೂ) ಆಧುನಿಕತೆಯ ಮೂಲಕ ದೊರಕಿದ ರ‍್ಯಾಡಿಕಲ್ ಆದ ಹೊಸ ಪರಿಕಲ್ಪನೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಹಾಗಾಗಿ ಏಳು ದಶಕಗಳಲ್ಲಿ ಭಾರತೀಯ ಪ್ರಜಾಸತ್ತೆ ವಿಸ್ತಾರಗೊಂಡಿದ್ದರೆ, ಬೇರೆ ಬೇರೆ ಹಿನ್ನೆಲೆಯ ಭಾರತೀಯರು ಸಾರ್ವಜನಿಕ ಜೀವನದ, ಅದರಲ್ಲಿಯೂ ಪ್ರಭುತ್ವದ ಅಧಿಕಾರದ ಕೇಂದ್ರದಲ್ಲಿ ಅವಕಾಶಗಳನ್ನು ಪಡೆಯಲು ಸಾಧ್ಯವಾಗಿದ್ದರೆ, ಅದರ ಶ್ರೇಯಸ್ಸು ಭಾರತೀಯ ಸಂವಿಧಾನಕ್ಕೆ ಸೇರಬೇಕು.

ಸ್ವತಂತ್ರ, ಸಮಾನ ಮತ್ತು ಸ್ವಾಯತ್ತ ವ್ಯಕ್ತಿಯೊಬ್ಬ ಕೇಂದ್ರದಲ್ಲಿರುವ ನಾಗರಿಕ ಮತ್ತು ರಾಜಕೀಯ ಸಮಾಜಗಳನ್ನು ರಚಿಸುವುದು ಭಾರತೀಯ ಸಂವಿಧಾನದ ಗುರಿಯಾಗಿತ್ತು. ಇಂತಹದೊಂದು ಸಮಾಜವು ಭಾರತೀಯ ಸಮಾಜದ ಇತರ ಸಾಂಪ್ರದಾಯಿಕ ಸಂಸ್ಥೆಗಳಾದ ಜಾತಿ, ಧರ್ಮ ಇತ್ಯಾದಿಗಳು ಪ್ರಬಲವಾಗಿದ್ದ ಮತ್ತೊಂದು ಸಮಾಜದ ಜೊತೆಗೆ ಏಕಕಾಲದಲ್ಲಿ ಅಸ್ತಿತ್ವದಲ್ಲಿರಬೇಕಿತ್ತು. ಸಂವಿಧಾನದ ಆಶಯಗಳು 1950ರಲ್ಲಿ ಅಂಗೀಕಾರವಾಗುತ್ತಿದ್ದಂತೆ ಅನುಷ್ಠಾನಗೊಳ್ಳಲಿಲ್ಲ. ನಿಧಾನವಾಗಿ ಹಲವಾರು ದಶಕಗಳಲ್ಲಿ ಬದಲಾವಣೆಯ ಪ್ರಕ್ರಿಯೆಯು ಬಲಗೊಳ್ಳಲಾರಂಭಿಸಿತು. ವಿಪರ್ಯಾಸವೆಂದರೆ ಪ್ರಜಾಸತ್ತೆಯು ದೇಶದಲ್ಲಿ ಆಳವಾಗಿ ಬೇರೂರುತ್ತಿರುವ ಮತ್ತು ವ್ಯಕ್ತಿ ಕೇಂದ್ರಿತ ಸಮಾಜವು ಬಲಗೊಳ್ಳುತ್ತಿರುವ ಸಂದರ್ಭದಲ್ಲಿಯೇ ಸಂವಿಧಾನವಿರೋಧಿ ಮಾತುಗಳು, ಚಟುವಟಿಕೆಗಳು ಹೆಚ್ಚಾಗುತ್ತಿರುವುದು ಕಾಣಬರುತ್ತಿದೆ. ಇದನ್ನೇ ನಾನು ಮೇಲೆ ‘ವಿಚಿತ್ರ ವಿರೋಧಾಭಾಸ’ ಎಂದು ಕರೆದದ್ದು. ಬಹುಶಃ ಸಂವಿಧಾನಕ್ಕೆ ದೊರಕಿರುವ ಯಶಸ್ಸೇ ಅದರ ವಿರುದ್ಧದ ದನಿಗಳನ್ನು ಆತಂಕಗೊಳಿಸುತ್ತಿದೆಯೇ? ಹಾಗೇನಾದರೂ ಇದ್ದರೆ, ಸಂವಿಧಾನದ ಬಗ್ಗೆ ನಂಬಿಕೆಯಿರುವವರು ಏನು ಮಾಡಬೇಕು? ಈ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ಕಂಡುಕೊಳ್ಳಬೇಕಿದೆ.

1946 ರಿಂದ 1950ರವರೆಗಿನ ಸಂವಿಧಾನ ರಚನೆಯ ಸಂದರ್ಭ ಮತ್ತು ಪ್ರಕ್ರಿಯೆಗಳೆರಡೂ ಸಾಕಷ್ಟು ಸಂಕೀರ್ಣವಾಗಿದ್ದವು. 1946ರಲ್ಲಿ ಸಂವಿಧಾನ ರಚನಾ ಸಭೆಯನ್ನು ರೂಪಿಸಿದಾಗ ದೇಶ ವಿಭಜನೆಯ ಪ್ರಸ್ತಾವ ಇನ್ನೂ ಅಧಿಕೃತಗೊಂಡಿರಲಿಲ್ಲ. ಹಾಗಾಗಿ ಈ ಸಭೆಯಲ್ಲಿ ಮುಸ್ಲಿಂ ಲೀಗ್‌ನ ಸದಸ್ಯರೂ ಇದ್ದರು. 1947ರ ನಂತರ ಭಾರತಕ್ಕೆ ಮಾತ್ರ ಸಂವಿಧಾನ ರಚಿಸಬೇಕು ಎಂದಾದಾಗ, ಮುಂದೆ ಭಾರತಕ್ಕೆ ಸೇರಿದ ಪ್ರದೇಶಗಳ ಪ್ರತಿನಿಧಿಗಳು ಮಾತ್ರ ಉಳಿದರು. ಆದರೂ ಆ ಸಭೆಯ ಮುಂದಿದ್ದ ಸಂಕೀರ್ಣತೆಗಳೇನೂ ಕಡಿಮೆಯಾಗಲಿಲ್ಲ. ಅದರ ಸದಸ್ಯರಾಗಿ ಬ್ರಿಟಿಷ್ ಇಂಡಿಯಾದಿಂದ ಮತ್ತು ದೇಶಿ ಸಂಸ್ಥಾನಗಳಿಂದ ಆಯ್ಕೆಯಾಗಿದ್ದ ಸುಮಾರು 300 ಪ್ರತಿನಿಧಿಗಳು ದೇಶದ ಜನರಿಂದ ನೇರವಾಗಿ ಚುನಾಯಿತರಾದವರಲ್ಲ. ಬದಲಿಗೆ 1946ರಲ್ಲಿ ನಡೆದ ಪ್ರಾದೇಶಿಕ ಶಾಸನಸಭೆಗಳ ಚುನಾವಣೆಗಳಲ್ಲಿ ಆಯ್ಕೆಯಾಗಿದ್ದ ಸದಸ್ಯರು ಸಂವಿಧಾನ ರಚನಾಸಭೆಯ ಸದಸ್ಯರನ್ನು ಚುನಾಯಿಸಿದರು.

ಮಿಗಿಲಾಗಿ, ಸಂವಿಧಾನ ರಚನಾಸಭೆಯ ಸದಸ್ಯರು ಬಹುಮಟ್ಟಿಗೆ ಪಾಶ್ಚಿಮಾತ್ಯ ಶಿಕ್ಷಣ ಪಡೆದಿದ್ದ ಆಧುನಿಕ ಮನೋಭಾವದ ವಿದ್ಯಾವಂತ ವೃತ್ತಿಪರರು. ಇವರಲ್ಲಿ ಹಲವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ ಕೆಲವರು ಸಾಂಪ್ರದಾಯಿಕ ಚಿಂತನೆಯವರೂ ಇದ್ದಿರಬಹುದು. ಎಲ್ಲರಿಗೂ ಭಾರತೀಯ ಸಮಾಜದ ವಾಸ್ತವದ ಅರಿವಿತ್ತು ಎನ್ನುವುದೂ ನಿಜ. ಆದರೆ ಇವರ ಮುಂದಿದ್ದ ಸಂವಿಧಾನದ ಮಾದರಿಗಳು ಇಂಗ್ಲೆಂಡ್, ಅಮೆರಿಕ, ಕೆನಡಾ ಇತ್ಯಾದಿ ಪಾಶ್ಚಿಮಾತ್ಯ ದೇಶಗಳಲ್ಲಿ ಅನುಷ್ಠಾನಗೊಂಡಿದ್ದ ಉದಾರವಾದಿ ತಾತ್ವಿಕ ಹಿನ್ನೆಲೆಯ ಸಂವಿಧಾನಗಳು. ಮೂಲಭೂತವಾಗಿ ಉದಾರವಾದಿ ಆಶಯಗಳೇ ಇರುತ್ತಿದ್ದ ಸಂವಿಧಾನವೊಂದನ್ನು ಕನಿಷ್ಠ ನಾಲ್ಕು ಸಾವಿರ ವರ್ಷಗಳ ನಾಗರಿಕತೆಯ ಇತಿಹಾಸವಿದ್ದ, ಅಪಾರವಾದ ಸಾಮಾಜಿಕ ಮತ್ತು ಧಾರ್ಮಿಕ ವೈವಿಧ್ಯವಿದ್ದ ದೇಶಕ್ಕೆ ಒದಗಿಸಬೇಕಿತ್ತು. ಅಲ್ಲಿನ ಜನರು ಉದಾರವಾದಿ ಮೌಲ್ಯಗಳನ್ನು ಒಪ್ಪುತ್ತಾರೆ, ಅದರ ಆಧಾರದ ಮೇಲೆ ರಚಿತವಾಗುವ ಕಾನೂನಿನ ಆಚರಣೆಗಳನ್ನು ಒಪ್ಪುತ್ತಾರೆ ಎನ್ನುವ ಯಾವ ಖಾತ್ರಿಯೂ ಇರಲಿಲ್ಲ. ಜೊತೆಗೆ ಈಗಾಗಲೇ ಇದ್ದ ವಸಾಹತುಶಾಹಿ ಪ್ರಭುತ್ವವು ಸ್ಥಾಪಿಸಿದ್ದ ಆಡಳಿತ ವ್ಯವಸ್ಥೆಯ ಮೇಲೆಯೇ ಹೊಸ ಸಂವಿಧಾನವು ಸೂಚಿಸುತ್ತಿದ್ದ ಆಡಳಿತ ವ್ಯವಸ್ಥೆಯನ್ನು ಕಟ್ಟಬೇಕಾಗಿತ್ತು.

ಆದರೆ ಗಮನಿಸಿ, ಭಾರತೀಯ ಸಂವಿಧಾನದ ಗುರಿಯು ಭಾರತೀಯರು ಮಾತ್ರ ಭಾಗವಹಿಸುವ ಆಡಳಿತ ವ್ಯವಸ್ಥೆಯನ್ನು ಕಟ್ಟುವುದು ಆಗಿರಲಿಲ್ಲ. ಈ ಹೊಸ ಸಂವಿಧಾನವು ಒಂದು ಕಾನೂನಿನ ದಾಖಲೆ ಮಾತ್ರವೂ ಆಗಿರಲಿಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ನಮ್ಮ ಸಂವಿಧಾನವು ಭಾರತೀಯ ಸಮಾಜವನ್ನು ಆಧುನಿಕ ಸಮಾಜವನ್ನಾಗಿ ಪರಿವರ್ತಿಸುವ ಗುರಿಯನ್ನು ಮುಖ್ಯವಾಗಿ ಹೊಂದಿತ್ತು. ಈ ಗುರಿಯು ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಎಲ್ಲರ ವೈಯಕ್ತಿಕ ಆಶಯಗಳನ್ನು ಮೀರಿದ್ದಾಗಿತ್ತು. ಗಮನಾರ್ಹ ವಿಚಾರವೆಂದರೆ ಇದು– ಪರಿವರ್ತನೆಯ ಪಥನಕ್ಷೆಯು ಸ್ವಾತಂತ್ರ್ಯಹೋರಾಟದ ಸಂದರ್ಭದಲ್ಲಿ ಹುಟ್ಟಿರಬಹುದು. ಆದರೆ ಅದರ ಬೌದ್ಧಿಕ ಮತ್ತು ಸಾಮಾಜಿಕ ಪ್ರೇರಣೆಗಳು ಸಂಪೂರ್ಣವಾಗಿ ಭಾರತೀಯ ಸಮಾಜ ಮತ್ತು ಚಿಂತನೆಗಳೊಳಗಿನಿಂದಲೇ ಬರಲಿಲ್ಲ. ಸಂವಿಧಾನವು ಜಾತಿ, ಧರ್ಮ ಮತ್ತು ಸಂಸ್ಕೃತಿಗಳ ಅಸ್ತಿತ್ವ- ಪ್ರಭಾವಗಳನ್ನು ನಿರಾಕರಿಸಲಿಲ್ಲ. ಆದರೆ ವ್ಯಕ್ತಿಗೆ ತನಗೆ ಸರಿಯೆನಿಸಿದ ಆಯ್ಕೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ದೊರಕಿತು.

ಹಾಗಾಗಿಯೇ ಇಂದಿಗೂ ಸಂವಿಧಾನದ ಬಗ್ಗೆ ಅಪಸ್ವರಗಳು ಆಗಾಗ ಕೇಳಿ ಬರುತ್ತವೆ. ಎರಡು ವಾರಗಳ ಹಿಂದೆ ಸುಪ್ರೀಂ ಕೋರ್ಟ್‌, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377 ಅನ್ನು ಪರಿಶೀಲನೆಗೆ ಮತ್ತೆ ತೆಗೆದುಕೊಳ್ಳುವುದಾಗಿ ಹೇಳಿತು. ಈ ಸೆಕ್ಷನ್ ಆಧಾರದಲ್ಲಿ 2013ರಲ್ಲಿ ಸಲಿಂಗ ಸಂಭೋಗವನ್ನು ಅಪರಾಧವೆಂದು ಪರಿಗಣಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ನ್ಯಾಯಾಲಯದ ಈಗಿನ ನಿಲುವಿನ ಬಗ್ಗೆ ಚರ್ಚೆ ಪ್ರಾರಂಭವಾದಾಗ, ಬಹಳ ಕುತೂಹಲಕರವಾದ ಪ್ರಮೇಯವೊಂದನ್ನು ಸಂಪ್ರದಾಯವಾದಿ ಬಲಪಂಥೀಯ ಕಾರ್ಯಕರ್ತರು ಮಂಡಿಸಿದರು. ಸಲಿಂಗ ಸಂಬಂಧವನ್ನು ಅಸ್ವಾಭಾವಿಕವೆಂದು ಪ್ರತಿಪಾದಿಸಿದ ಈ ಕಾರ್ಯಕರ್ತರು, ಒಂದು ವೇಳೆ ನ್ಯಾಯಾಲಯವು ತನ್ನ ನಿಲುವನ್ನು ಬದಲಿಸಿ ಸೆಕ್ಷನ್ 377 ಅನ್ನು ಸಲಿಂಗ ಸಂಬಂಧಿಗಳಿಗೆ ಅನ್ವಯಿಸಬಾರದು ಎಂದು ಹೇಳಿದರೂ ಅದನ್ನು ತಾವು ವಿರೋಧಿಸುವುದಾಗಿ ವಾದಿಸಿದರು. ಆ ಸಂದರ್ಭದಲ್ಲಿ ಅವರು ಮುಂದಿಟ್ಟ ಪ್ರಮೇಯವನ್ನು ಗಮನಿಸಿ: ‘ಸಂವಿಧಾನವು ಹೇಳುವ ನ್ಯಾಯತತ್ವಕ್ಕಿಂತ ಧರ್ಮ ಮುಖ್ಯವಾದುದು’.

ಧರ್ಮವು (ಅದರ ಪರಿಕಲ್ಪನೆ ಏನೇ ಇರಲಿ) ನ್ಯಾಯಕ್ಕಿಂತ (ಅಥವಾ ಜಸ್ಟೀಸ್) ಮುಖ್ಯ ಎನ್ನುವುದಾದರೆ ಅದನ್ನು ಯಾವ ನೆಲೆಯ ಮೇಲೆ ಸಮರ್ಥಿಸಿಕೊಳ್ಳಬಹುದು? ನಾನು ಗಮನಿಸಿದ ಹಾಗೆ ಬಲಪಂಥೀಯ ಚಿಂತಕರು ಮತ್ತು ಕಾರ್ಯಕರ್ತರು ಹೇಳುತ್ತಿರುವುದು ಇಷ್ಟು: ಧರ್ಮವು ನಮ್ಮ ನೆಲದ್ದು, ಅಪೌರುಷೇಯ ನೆಲೆಯದು. ನ್ಯಾಯ ಸಿದ್ಧಾಂತಗಳಿರುವ ಸಂವಿಧಾನ ಮಾನವ ನಿರ್ಮಿತವಾದುದು, ಅಲ್ಲದೆ ನೂರಕ್ಕೂ ಹೆಚ್ಚು ಬಾರಿ ಈಗಾಗಲೇ ತಿದ್ದುಪಡಿಗೊಂಡಿದೆ. ಹಾಗಾಗಿ ಅದು ಪ್ರತಿಪಾದಿಸುವ ಮೌಲ್ಯಗಳನ್ನು ನಾವೂ ಬದಲಾಯಿಸಬಹುದು, ಸಂವಿಧಾನಕ್ಕೆ ಬದಲಾವಣೆಯನ್ನೂ ಮಾಡಬಹುದು ಎನ್ನುವ ನಂಬಿಕೆಯೂ ಈಗ ಮನೆಮಾಡುತ್ತಿದೆ.

ಒಂದು ಪ್ರಕರಣದ ನಂತರ ಮತ್ತೊಂದರಲ್ಲಿ ಒಂದು ನಿರ್ದಿಷ್ಟ ವಿರೋಧಾಭಾಸವು ಎದ್ದುಕಾಣುತ್ತಿದೆ. ಅದೇನೆಂದರೆ ಅಪೌರುಷೇಯವೆಂದು ಅದರ ಸಮರ್ಥಕರು ಕರೆಯುತ್ತಿರುವ ಧರ್ಮದ ಆಚರಣೆಯಿಂದ ವ್ಯಕ್ತಿಯ ಮೂಲ ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗ, ಯಾವುದಕ್ಕೆ ಪ್ರಾಮುಖ್ಯ ದೊರಕಬೇಕು? ಉದಾಹರಣೆಗೆ ಲವ್ ಜಿಹಾದ್ ಎನ್ನಲಾಗುವ ಪ್ರಕರಣಗಳಲ್ಲಿ ಸ್ಪಷ್ಟವಾಗಿ ವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ. ತೋಳ್ಬಲ, ಗುಂಪುಬಲಗಳ ಬಳಕೆಯಿಂದ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಇದೇ ರೀತಿಯ ನಡವಳಿಕೆಯು ಕರ್ಣಿಸೇನಾದ ಕಾರ್ಯಕರ್ತರಿಂದಲೂ ನಡೆಯುತ್ತಿದೆ.

ಇಂತಹ ಸಂದರ್ಭಗಳಲ್ಲಿ ಪ್ರಜ್ಞಾವಂತ ಭಾರತೀಯ ಪ್ರಜೆಗಳ ನಡೆ ಏನಿರಬೇಕು?

ಸಂವಿಧಾನವನ್ನು ತಿದ್ದುಪಡಿ ಮಾಡಬಹುದು. ಆದರೆ ಅದರ ಮೂಲ ಸ್ವರೂಪವನ್ನು ಬದಲಾಯಿಸುವಂತಿಲ್ಲ ಎನ್ನುವ ಬಗ್ಗೆ ಸುಪ್ರೀಂ ಕೋರ್ಟ್‌ 1973ರ ಕೇಶವಾನಂದ ಭಾರತಿ ಪ್ರಕರಣದಲ್ಲಿ ಹೇಳಿದ್ದು ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಗೊಂಡಿದೆ. ಬದಲಾವಣೆಗೆ ಅವಕಾಶವಿರದ ಸಂವಿಧಾನದ ಮೂಲಸ್ವರೂಪದ ಕೇಂದ್ರದಲ್ಲಿ ವ್ಯಕ್ತಿಸ್ವಾತಂತ್ರ್ಯವು ಇದೆ. ಯಾವುದೇ ಸಂದರ್ಭದಲ್ಲಿಯೂ ನಮಗೆ ಬೇಕಾಗಿರುವ ವೃತ್ತಿಯನ್ನು ಅನುಸರಿಸುವ, ನಾವು ಇಷ್ಟಪಡುವವರೊಡನೆ ವಿವಾಹವಾಗುವ, ನಮ್ಮ ಆಯ್ಕೆಯ ಧರ್ಮವನ್ನು ಅನುಸರಿಸುವ ಹಕ್ಕನ್ನು ಯಾವ ವ್ಯಕ್ತಿಯೂ ಬೇರೆ ಯಾರಿಗೂ ಬಿಟ್ಟುಕೊಡಲು ಸಾಧ್ಯವಿಲ್ಲ. ಗಣತಂತ್ರ ದಿನಾಚರಣೆಯಂದು ಈ ಅಂಶವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದು ಅವಶ್ಯಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry