ಭಾನುವಾರ, ಮೇ 29, 2022
31 °C

ಸಣ್ಣ ಸಣ್ಣ ಘನ್ನ ನೆನಪುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಣ್ಣ ಸಣ್ಣ ಘನ್ನ ನೆನಪುಗಳು

ಅದು ಎಪ್ಪತ್ತರ ದಶಕ. ಶಿವಮೊಗ್ಗೆಯ ಡಾ. ಶ್ಯಾಮಪ್ರಸಾದ ಮುಖರ್ಜಿ ರಸ್ತೆಯಲ್ಲಿ ನಮ್ಮ ಮನೆಯಿತ್ತು. ಆಗ ಆ ರಸ್ತೆಯಲ್ಲಿದ್ದ ಹೆಚ್ಚಿನ ಮನೆಗಳೆಲ್ಲ ಈಗ ಬೇರೆಯವರದಾಗಿವೆ ಅಥವಾ ಬೇರೆಯೇ ರೂಪ ಪಡೆದಿವೆ.ಆಚೆಹೊಳೆ, ಈಚೆ ಮನೆ ಸಾಲು, ರಸ್ತೆ, ಅಡಕೆ ಹೊತ್ತ ಲಾರಿಗಳು, ಅಡಿಕೆ ಬೆಳೆಗಾರರು, ಅಡಿಕೆ ದಲ್ಲಾಳಿಗಳು, ತಮಿಳರು, ಅಡಿಕೆಮಂಡಿಗಳು, ಜೊತೆಗೆ ನನ್ನ ಮಾವನವರದೇ ಒಂದು ದೊಡ್ಡ ಅಂಗಡಿಮಳಿಗೆ- ಒಟ್ಟು, ವಾಸದ ಮನೆಗಳು ಮತ್ತು ಬಿರುಸಿನ ವ್ಯಾಪಾರ, ಓಡಾಡುವ ಜನರು ಎಲ್ಲವೂ ಏಕಕಾಲದಲ್ಲಿ ಇದ್ದು ಅತೀವ ಚಟುವಟಿಕೆಯಿಂದ ತುಂಬಿದ ರಸ್ತೆಯಾಗಿತ್ತು ಅದು. ಅಲ್ಲಿನ ವಾಸಿಗಳಾದ ನಾವೆಲ್ಲ ಒಂದು ಕುಟುಂಬದಂತೆಯೇ ಇದ್ದೆವು.ಒಬ್ಬರಿಗೊಬ್ಬರು ಪರಿಚಿತರಾಗಿ, ಪರಸ್ಪರ ಮನೆಗಳಿಗೆ ಹೊಕ್ಕು ಹೊರಡುವವರಾಗಿ. ಆಟ, ಹಾಡು ಹಸೆ, ಕಸೂತಿ ಇತ್ಯಾದಿಗಳಲ್ಲಿ, ಸುಖದುಃಖ ವಿನಿಮಯದಲ್ಲಿ, ಸ್ನೇಹಮಯ ವಾತಾವರಣದಲ್ಲಿ ಆ ಇಡೀ ಬೀದಿ ಜೀವಂತವಾಗಿತ್ತು. ಸಂಜೆಹೊತ್ತು ವ್ಯಾಪಾರದ ಭರಾಟೆ ಕಡಿಮೆಯಾದಾಗ ಅದು ಮನೆಯೆದುರಿನ ಅಂಗಳದಂತೆಯೇ ಇರುತ್ತಿತ್ತು.ರಸ್ತೆಯ ಆ ತುದಿಯಿಂದ ಹೊರಟರೆ ಈ ತುದಿಗೆ ತಲುಪುವುದರೊಳಗೆ ಎದುರು ಸಿಕ್ಕಿದ ಒಬ್ಬೊಬ್ಬರೊಡನೆ ಒಂದೊಂದು ಮಾತಾಡುತ್ತ ಸಾಗಿದರೂ ಬಹಳ ಹೊತ್ತು ಹಿಡಿಯುತ್ತಿತ್ತು.

 

ಅದೇ ರಸ್ತೆ ಸಾಲಿನಲ್ಲಿ ಶ್ರೀ ಹಸೂಡಿ ದತ್ತಾತ್ರಿಶಾಸ್ತ್ರಿಗಳ ಮನೆ. (ಶಿವಮೊಗ್ಗದ ಪ್ರಸಿದ್ಧ ಕರ್ನಾಟಕ ಸಂಘಕ್ಕಾಗಿ ಬಿ.ಎಚ್. ರಸ್ತೆಯಂಥಲ್ಲಿ ಒಂದು ಭವನವನ್ನೇ ಬಿಟ್ಟುಕೊಟ್ಟ ಹಸೂಡಿ ವೆಂಕಟಶಾಸ್ತ್ರಿಗಳ ಪುತ್ರ ಅವರು). ಅದರೆದುರು ಬರುವಾಗ ಒಮ್ಮಮ್ಮೆ ಗೇಟಿನಲ್ಲಿ ಶಾಸ್ತ್ರಿಗಳ ಪತ್ನಿ ಶ್ರೀಮತಿ ಭವಾನಿಯಮ್ಮ, ಒಮ್ಮೆ ಕಂಡರೆ ಮನದಲ್ಲಿ ಇದ್ದುಬಿಡುವ ಲಕ್ಷಣವಂತ ಮಹಿಳೆ, ನಿಂತಿರುವುದುಂಟು.ಅವರು ನಮ್ಮನ್ನು ಕಂಡರೆಂದರೆ ಕರೆದೇ ಕರೆವರು. ಅವರನ್ನು ಕಂಡೆವೆಂದರೆ ನಾವೂ ಬಳಿ ಸರಿದು ಕ್ಷಣಹೊತ್ತು ಮಾತಾಡುವೆವು. ಒಳಗೆ ಬಾರೇ ಎನ್ನದೆ ಇರರು ಅವರು. ಅತಿಥಿ ಸತ್ಕಾರದಲ್ಲಿ ಪಳಗಿದವರು, ಅದರಲ್ಲಿ ಸಂತೋಷ ಕಂಡವರು. ಸಮಯದ ಅನುಮತಿ ಇದ್ದರೆ ಒಳಗೆ ಹೋಗುವೆವು, ಇಲ್ಲವಾದರೆ, ಅಲ್ಲಿಂದಲೇ ಮುಂದರಿಯುವೆವು. ಇಂತು ಬೆಚ್ಚಗಿತ್ತು ಶಿವಮೊಗ್ಗದ ಅಂದಿನ ಆ ರಸ್ತೆ, ಆ ವಾತಾವರಣ.ಡಾ. ಶಿವರಾಮ ಕಾರಂತರು ಶಿವಮೊಗ್ಗಕ್ಕೆ ಬಂದರೆಂದರೆ ಉಳಿಯುತಿದ್ದುದು ಇಲ್ಲಿಯೇ; ದತ್ತಾತ್ರಿಶಾಸ್ತ್ರಿಗಳವರ ಮನೆಯಲ್ಲಿ. ಕಾರಂತರು ಬರುತ್ತಾರೆಂದರೆ ಶಾಸ್ತ್ರಿಗಳು ನಮಗೆಲ್ಲ ಹೇಳುತಿದ್ದರು. ಕಾರಂತರು ಇಂಥ ದಿವಸ ಬರುತ್ತಾರೆ ನೀವೂ ಎಲ್ಲ ಬನ್ನಿ, ಅವರನ್ನು ಭೇಟಿ ಮಾಡಿ ಎಂದು.ನಮ್ಮ ರಸ್ತೆಯವರನ್ನಷ್ಟೇ ಅಲ್ಲ ಊರಲ್ಲಿನ ತನ್ನ ಪರಿಚಿತರನ್ನೆಲ್ಲ, ಆಸಕ್ತರನ್ನೆಲ್ಲ, ನೋಡಬೇಕೆಂದು ಯಾರು ಬಯಸಿದರೂ ಅವರನ್ನೆಲ್ಲ ಆಹ್ವಾನಿಸುತ್ತಿದ್ದ ಮಹಾನುಭಾವ ಅವರು. ಅವರ ಮನೆ ಮೇಲಿನ ದೊಡ್ಡ ಹಾಲಿನಲ್ಲಿ ಊರ ಮಂದಿಯೆಲ್ಲ ಸೇರುತಿದ್ದೆವು.ಕಾರಂತರೊಡನೆ ಸಲ್ಲಾಪ, ಅವರ ಚುರುಕು ಹಾಸ್ಯ ಎಬ್ಬಿಸುವ ನಗೆ, ಪ್ರಶ್ನೆಗೇ ಪ್ರಶ್ನೆ ಹಾಕಿ ಕೇಳಿದವರು ತಡಬಡಾಯಿಸುವಂತೆ ಮಾಡಿ, ಕೊನೆಗೆ ತಾವೇ ಪ್ರಶ್ನೆಯನ್ನು ಸರಿಪಡಿಸಿ ಮೃದುವಾಗಿ ಶಾಂತವಾಗಿ ಉತ್ತರಿಸುವ ಪರಿ- ಹೀಗೆ ಒಂದು ಭಯ ಭಕ್ತಿ ಉಲ್ಲಾಸ ಮನತುಂಬಿದ ಸಂಜೆಗಳಾಗಿದ್ದುವು ಅವು.ನಾನೋ, ಕಾರಂತರು ನಮ್ಮೂರಿಗೆ ಹತ್ತಿರದಲ್ಲೇ ಇದ್ದರೂ ಅಲ್ಲೆವರೆಗೆ ಎಂದೂ ಅವರನ್ನು ಹತ್ತಿರದಿಂದ ಕಾಣದವಳು. ಮಾತಂತೂ ಆಡಿಯೇ ಇಲ್ಲದವಳು. ಈಗ ಸಡನ್ನಾಗಿ ಕಂಡೆನೆಂದರೆ ಮಾತು ಇಂಗಿಹೋಗುವವಳು. ಹಾಗೆಂತ ಕಂಡೇ ಇಲ್ಲವೆ, ಹಹ್ಞ, ಅದಲ್ಲ. ಅವರು ನಮ್ಮ `ಕಾಲೇಜು ಡೇ~ಗೆ ಬಂದಿದ್ದರು. ನಾನವರ ಕೈಯಾರೆ ಬಹುಮಾನ ಪಡೆದಿದ್ದೆ.ಆ ವರ್ಷ ನನಗೆ ಕತೆಗೂ ಮತ್ತು ಪ್ರಬಂಧಕ್ಕೂ ಸೇರಿ ಎರಡೆರಡು ಬಹುಮಾನ ಬೇರೆ. ಹಾಗಾಗಿ ಎರೆಡೆರಡು ಬಾರಿ ಸ್ಟೇಜು ಹತ್ತಿ ಅವರಿಂದ ಬಹುಮಾನ ಸ್ವೀಕರಿಸಿದ್ದೆ. ಮತ್ತೆ ನನ್ನ ಸಣ್ಣಂದಿನಲ್ಲಿ ಕುಂದಾಪುರದ ರಸ್ತೆಯಲ್ಲಿ ಅವರು ಹೋಗುತ್ತಿರುವುದನ್ನು ಕಂಡಿದ್ದೆ. ಆಗಿನ್ನೂ ಪ್ರಾಥಮಿಕ ಶಾಲೆಯಲ್ಲಿದ್ದ ನಾನು ನನ್ನ ಗೆಳತಿ ಆಚೆಯಿಂದ ಈಚೆ ಬರುತಿದ್ದೇವೆ.ಅವರು ಎದುರಿನಿಂದ ರಸ್ತೆಯ ಈಚೆಬದಿಯಿಂದ ಆಚೆಬದಿಗೆ ಹೋಗುತಿದ್ದಾರೆ. ಹಿಮ್ಮುಖ ಬಾಚಿದ ಉದ್ದಕೂದಲು, ಎಲ್ಲೋ ನೆಟ್ಟ ದೃಷ್ಟಿ. ಕೈಯಲ್ಲೊಂದು ಸಿಗರೇಟು ಇತ್ತೆಂದು ನೆನಪು. ಅದನ್ನು ನಡುನಡುವೆ ಸೇದುತ್ತ ಕೈಬೀಸುತ್ತ ಹೊಗೆಬಿಡುತ್ತ ನಮ್ಮನ್ನು ದಾಟಿಹೋದರೆಂದು ನೆನಪು. ಮಸುಕು ನೆನಪು ಅಷ್ಟೆ. ಜನವಿರಳ ರಸ್ತೆಯದು ಆಗ.ಚಿಂತಿಸುತ್ತಾ ಸಾವಧಾನವಾಗಿ ಕಾಲಾಡಿಕೊಂಡು ಸಾಗುವ ಕಾಲ. ಅವರೂ ಸಾವಧಾನದ ನಡಿಗೆಯಲ್ಲೇ ಇದ್ದರು. ನನ್ನ ಗೆಳತಿ `ಅವರು ಶಿವರಾಮ ಕಾರಂತರು, ಕಾದಂಬರಿಯೆಲ್ಲ ಬರೆಯುತ್ತಾರೆ~ ಅಂತ ಮೆಲ್ಲ ಪಿಸುಗುಟ್ಟಿದ್ದು, ಕೇಳಿ ನಾನು ಏನೋ ಭಕ್ತಿಯಿಂದ ಕಂಪಿಸಿದ್ದು ಎಲ್ಲವನ್ನೂ ಬೇರೆಡೆ ಹೇಳಿರುವೆನಷ್ಟೆ.

 

ಹೀಗಿದ್ದರೂ ನಾನವರನ್ನು ಒಂದೆಡೆ ಗಟ್ಟಿಯಾಗಿ ಕುಳಿತು ಬಂದವರೊಡನೆ ಮಾತುಕತೆಯಲ್ಲಿ ತೊಡಗಿ ವ್ಯಂಗ್ಯ ನಗೆ, ಸಿಡಿಕಿಡಿ ಮುಂತಾದ ನವರಸಗಳಲ್ಲಿ ಕಂಡದ್ದೇ ಇಲ್ಲಿ ಶಾಸ್ತ್ರಿಗಳ ಮನೆಯಲ್ಲಿ. ಯಾರೋ ಒಬ್ಬರು ಬಂದು ತನ್ನ ಪರಿಚಯ ಪ್ರವರ  ಹೇಳಿಕೊಳ್ಳುತಿದ್ದಾರೆ, ಕಾರಂತರು ಮಧ್ಯದಲ್ಲಿಯೇ ಕತ್ತರಿಸಿ- `ಸರಿ, ಅದಕ್ಕೇನೀಗ?~ ಎಂದು ಕುಳಿತ ಕುರ್ಚಿಯ ಕೈಮೇಲೆ ಪಿಟಿಪಿಟಿ ತಾಳ ಬಡಿಯುತ್ತ ಅತ್ತಇತ್ತ ನೋಡಿದ್ದಂತೂ ಕೆತ್ತಿ ಕುಳಿತಿದೆ.ಅವರು ಹಾಗೆನ್ನುವಾಗ ಸಭೆಯಲ್ಲಿ ನಗೆಯೊಂದು ಅಲೆಯಾಗಿ ಮಂದ್ರಸ್ಥಾಯಿಯಲ್ಲಿ ಸರಸರನೆ ಸಂಚರಿಸಿತು. ಆಗ ಕಾರಂತರೇ ಅವರ ಮಾತಿನ ಎಳೆಯೆತ್ತಿ ಅದರ ಇನ್ನೇನೋ ಸಂಬಂಧ, ತನಗೆ ತಿಳಿದ ಮತ್ತೇನೋ ವಿವರ ಹೇಳಿ ನಗೆಯಿಂದ ಆದ ಅವರ ಮುಜುಗರವನ್ನು ಕಡಿಮೆಗೊಳಿಸಿದ್ದರು.ಕಾರಂತರನ್ನು ಯಾರೂ ಬಂದು ನೋಡಬಹುದಾದ ಅಪೂರ್ವ ಅವಕಾಶ ಮಾಡಿಕೊಟ್ಟಿದ್ದರು ಶಾಸ್ತ್ರಿಗಳು. ಹಾಗಾಗಿ ಬರುವವರು ಸಭ್ಯರಷ್ಟೇ ಅಲ್ಲ. ಸಭ್ಯರಂತೆಯೇ ಇರುವ ಸುಳ್ಳರು ಕಳ್ಳರು ರಾಜಕಾರಣಿಗಳು ಅರಾಜಕಾರಣಿಗಳು ವಿವಿಧ ಅಹಂಕಾರದವರು, ಬೌದ್ಧಿಕ ಸೊಕ್ಕು ಶ್ರೀಮಂತಿಕೆಯ ಸೊಕ್ಕು ಹೀಗೆ ನಾನಾ ಸೊಕ್ಕಿನವರು ಎಲ್ಲರೂ ಇದ್ದರು.ಆದರೆ ಕಾರಂತರೆದುರು ಅವರೆಲ್ಲರೂ ಹೇಗೆ ತಲೆಬಾಗುತಿದ್ದರು, ಮಾತನಾಡುವಾಗ ತಡವರಿಸುತಿದ್ದರು, ಅವರನ್ನು ಕಂಡದ್ದೇ ತಾವು ಪುನೀತರಾದೆವೆಂಬಂತಿದ್ದರು. ಅವರ ಸೆಡವುಗಳು ಕಾರಂತರನ್ನು ಕಂಡೊಡನೆ ನಮ್ರವಾಗುತಿದ್ದವು.ಉಡುಪಿ ಸೇರಿದ ಮೇಲೊಮ್ಮೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳೂ ಕಾರಂತರು ಬಂದಾಗ ತಲೆಬಾಗಿ ಕೈಜೋಡಿಸಿ ಎದ್ದುನಿಂತದ್ದನ್ನು ಕಂಡೆ. ದುಡ್ಡಿನಿಂದಲ್ಲ, ಅಧಿಕಾರದಿಂದಲ್ಲ, ಅಕಾಡೆಮಿಕ್ ವಿದ್ಯೆಯ ಪಾರಮ್ಯದಿಂದಲ್ಲ, ಎಲ್ಲಿಯೂ ಅನಗತ್ಯ ರಾಜಿಯಿಲ್ಲದೆ ತನ್ನ ಸತ್ಯ ನಿಷ್ಠುರತೆಯಿಂದಲೇ, ನೈತಿಕತೆಯಿಂದಲೇ, ತಮ್ಮ ಕೃತಿ ಆಕೃತಿ ಮನಸ್ಸು ಚಿಂತನೆ ನಡವಳಿಕೆಗಳನ್ನು ಸಮ್ಮಿಲನಗೊಳಿಸಿಕೊಂಡೇ ಅವರದನ್ನು ಸಾಧಿಸಿದರಲ್ಲವೆ? ಅವರನ್ನು ಅರ್ಥಮಾಡಿಕೊಳ್ಳುವುದು, ಗೌರವಿಸುವುದು, ವಿಮರ್ಶೆ ವಿಶ್ಲೇಷಣೆ ಮಾಡುವುದು, ಎಲ್ಲಕ್ಕಿಂತ ಈ ರೀತಿಯ ಅನ್ಯಾದೃಶ ವ್ಯಕ್ತಿತ್ವ ಸಾಧನೆ ಎಷ್ಟು ಕಷ್ಟವೋ ದೇವರೆ.ಹೀಗೆ ಅವರು ಅಲ್ಲಿಗೆ ಬರುತ್ತಿರುವಾಗ ಒಮ್ಮೆ ಅವರೊಡನೆ ಮಾತಿಗೆ ಕುಳಿತೆ. ನನಗಾಗಿ ಶಾಸ್ತ್ರಿಗಳು ಒಂದು ಅವಧಿಯನ್ನೇ ವಿಶೇಷವಾಗಿ ಕೊಟ್ಟಿದ್ದರು. ಟೇಪು ಮಾಡಿಕೊಳ್ಳುವುದು ಇತ್ಯಾದಿ ಇನ್ನೂ ಸಾಮಾನ್ಯವಾಗಿರದ ಕಾಲವದು.ಮನೆಯಲ್ಲಿ ಟೇಪ್‌ರೆಕಾರ್ಡರ್ ಇದ್ದರೂ, ಸಂಕೋಚದಿಂದ ಬಿಟ್ಟು ಹೋಗಿದ್ದೆ. ಅದೆಲ್ಲಾದರೂ ಕೈಕೊಟ್ಟರೆ ಅಥವಾ ಗೊಂದಲದಲ್ಲಿ ರೆಕಾರ್ಡ್ ಆಗದೆ ಹೋದರೆ, ಕಾರಂತರು ಗದರಿಸಿದರೆ! ಎಳೆ ಮನಸಿನ ಹತ್ತುಹನ್ನೆರಡು ಆತಂಕಗಳು. ಒಟ್ಟು ಅರ್ಧಗಂಟೆಗೂ ಮಿಕ್ಕಿ ನಡೆದ ಆ ಪ್ರಶ್ನೋತ್ತರದಲ್ಲಿ ಸರೀ ನೆನಪಿರುವುದು ಒಂದೇ.ನಾನು: ಲೇಖಕಿಯರಿಗೆ ನಿಮ್ಮ ಸಂದೇಶವೇನು?

ಆಗಷ್ಟೇ ನಾನು ಬರೆಯಲಾರಂಭಿಸಿದ ಕಾಲ ಅದು. ಅಷ್ಟು ಬೇಗ ಈ ಪ್ರಶ್ನೆ ನನಗಾದರೂ ಏಕೆ ಹೊಳೆಯಿತೋ. ಪ್ರಶ್ನೋತ್ತರವೆಂಬಲ್ಲಿ ಆದಿಕಾಲದಿಂದಲೂ ತಂತಾನೇ ನುಗ್ಗಿ ಒಂದು ಜಾಗ ಮಾಡಿ ಭದ್ರ ಕುಳಿತುಕೊಂಡಿರುವ ಕೆಲ ಸ್ಥಾಪಿತ ಪ್ರಶ್ನೆಗಳಿರುತ್ತವೆ.

 

ನಾವು ಅಲ್ಲಲ್ಲಿಯೇ ಅವನ್ನು ಮೆಟ್ಟಿಕೊಳ್ಳದಿದ್ದರೆ ಅಭ್ಯಾಸಬಲದಲ್ಲಿ ಒಮ್ಮಮ್ಮೆ ನಮ್ಮನ್ನೇ ಕೇಳದೆ ಪರಕ್ಕನೆ ಹೊರಹಾರುತ್ತವೆ. ಗೊತ್ತಷ್ಟೆ? ಯಾಕೆ ಹೀಗೆಂದೆ ಅಂದರೆ ನಾನು ಈ ಪ್ರಶ್ನೆ ಕೇಳುತ್ತೇನೆಂದು ನನಗೇ ಗೊತ್ತಿರಲಿಲ್ಲ. ಕೇಳಿದ ಮೇಲೆ, ಅದು ವಿನಾಕಾರಣ ವಿಲಿಗುಡುವ ಕಾಲ, ಏನಾದರೂ ಪೆದಂಬು ಉತ್ತರ ಕೊಟ್ಟರೆ ಏನು ಮಾಡುವುದಪ್ಪ ಅಂತ. ಅದಕ್ಕೆ ಸರಿಯಾಗಿ ಅವರು ಒಮ್ಮೆ ನನ್ನನ್ನೇ ದಿಟ್ಟಿಸಿ ನೋಡಿದರು. ಛೆ, ಹೊರಬಿದ್ದ ಪ್ರಶ್ನೆಯನ್ನು ಒಳ ಸೆಳಕೊಳ್ಳುವಂತಿದ್ದರೆ...`ಉಪದೇಶ ಕೊಡಲು ನಾನು ಯಾರು?~

(ಮೌನ)

ಆಮೇಲೆ ಆಗಲೇ ಹೇಳಿದಂತೆ, ಮೃದುವಾಗಿ, (ಪ್ರಶ್ನೆ ಕೇಳಿದವಳ ಬಗ್ಗೆ ಕರುಣೆ ಬಂದಂತೆ, ಅಥವಾ ಕೇಳಿದ ಪ್ರಶ್ನೆ ಅಸಂಗತವೇನೂ ಅಲ್ಲವೆಂಬಂತೆ) `ಬರೆಯಿರಿ. ಬರೆಯಬೇಕೆಂದು ಕಂಡದ್ದು ಬರೆಯಿರಿ. ನಿಮ್ಮ ನಿಮ್ಮ ಅನುಭವಕ್ಕೆ ಸಂದದ್ದು ಬರೆಯಿರಿ. ಇದಕ್ಕೆ ಯಾವ ದೊಣ್ಣೆನಾಯಕನ ಉಪದೇಶವೂ ಬೇಕಾಗಿಲ್ಲ~.ಶಿವಮೊಗ್ಗೆ ಮಾತ್ರವಲ್ಲ, ಕರ್ನಾಟಕದ ಮೂಲೆಮೂಲೆಗೂ ಸಂಚರಿಸಿ ಜನರೊಡನೆ ಬೆರೆತವರು ಕಾರಂತರು. ಎಂತಲೇ `ನನ್ನೊಳಗಿನ ಕಾರಂತ~ ವಿಷಯವನ್ನು ಇಡೀ ನಾಡಿಗೆ ಕೊಟ್ಟು ನೋಡಿ, ಮಾತಾಡಲು ಹೀಗೆ ಇಡಿಯ ಕರ್ನಾಟಕವೇ ಎದ್ದು ಬರದಿದ್ದರೆ, ಮತ್ತೆ! 1978ನೇ ಇಸವಿ, ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭ. ಶಿವಮೊಗ್ಗೆಯಲ್ಲಿ ಅಭಿನಂದನಾ ಕಾರ್ಯಕ್ರಮಕ್ಕೆ ಬಂದ ಕಾರಂತರು ಆ ಮನೆಯಲ್ಲಿ ಉಳಕೊಂಡಿದ್ದರು. ಈ ಬಾರಿ ಅವರು ಪತ್ನಿಯೊಡಗೂಡಿ ಬಂದಿದ್ದರು. ನಾನು ಶ್ರೀಮತಿ ಲೀಲಾಕಾರಂತರನ್ನು ಸಂದರ್ಶಿಸಬೇಕೆಂದುಕೊಂಡೆ. ಮರುದಿನ ಬೆಳಿಗ್ಗೆ ತಾವು ಹೊರಡುವವರೆಂದೂ, ಬೆಳಿಗ್ಗೆ ಎಂಟು ಗಂಟೆಗೆ ಬಂದರೆ ಒಳಿತೆಂದೂ ನನಗೆ ಸಮಯ ಕೊಟ್ಟರು.

 

ಆಗಲೇ ಲೀಲಾಕಾರಂತರು ಪತಿಯೊಡನೆ ಕೂಡಿ ಮರಾಠಿಯಿಂದ ಮಾಡಿದ ಅನುವಾದ `ಯಾರು ಲಕ್ಷಿಸುವರು?~ ನನ್ನ ಮನಸ್ಸಿನಲ್ಲಿತ್ತು. ಅದರಲ್ಲಿನ ಗೋಪಾಲರಾಯ ಎಂಬ ಪಾತ್ರವೂ. ಆದರೆ ಆಮೇಲೆ ಅವರು ತಮ್ಮ ಬರವಣಿಗೆಯನ್ನು ಮುಂದರಿಸಲಿಲ್ಲ. ಏಕೆ? `ಜೀವನದಲ್ಲಿ ಕಷ್ಟದ ಮೇಲೆ ಕಷ್ಟ ಬಂದು ಅದು ಅತಿಗೆ ಹೋದಾಗ ಸೌಖ್ಯ ತಪ್ಪಿತು. ನಿಧಾನವಾಗಿ ಆ ಅಭ್ಯಾಸವೇ ಬಿಟ್ಟುಹೋಯಿತು. ಹಾಗೆ, ಮಗ ತೀರಿದಾಗ ನಾಲ್ಕು ಕವನಗಳನ್ನು ಬರೆದಿದ್ದೇನೆ~.ಕಾರಂತ ಪ್ರತಿಭೆಯೊಂದಿಗೆ, ಬಾಳಿನ ನಲಿವು ಕಷ್ಟನಷ್ಟ ನೋವುಗಳಿಗೆ ತಲೆಯೊಡ್ಡಿ ಜೊತೆಜೊತೆಯಾಗಿ ಸಾಗಿ ಬಂದ ಲೀಲಾ ಕಾರಂತರ ಶಕ್ತಿಯಾದರೂ ಎಂಥದಿರಬಹುದು? ತಪಸ್ಸಿನ ಹಿಂದಣ ಶಿಖರತಪಸ್ಸಿನಂತೆ ಇದ್ದರಲ್ಲವೆ ಅವರು. ತ್ಯಾಗ ಸಹನೆ ಏಕಾಕಿತನದಿಂದ ತನಗೆ ತಾನೇ ಗೆಳತಿಯಾಗಿ ಕಳೆದ ಸಮಾಧಾನಿಸಿದ ಅವರ ದಿನಗಳು ಹೇಗಿದ್ದವು? ಕೇಳಬೇಕು, ಆದರೆ ಹೇಗೆ ಎಂಬುದೇ ಆಗಿನ ನನ್ನ ಸಮಸ್ಯೆಯಾಗಿತ್ತು. ಮೆಲ್ಲ ಕೇಳಿದೆ; ಆ ಪ್ರಶ್ನೆ ಹಾಗೆ ಬರದೆ ಹೀಗೆ ಬಂತು- `ಅವರೊಡನೆಯ ಬದುಕು ನಿಮಗೆ ಸಾರ್ಥಕವೆನಿಸಿರಬೇಕಲ್ಲ?~ಹೌದೆಂದರು ಅವರು. ಅದರಲ್ಲಿ ಸಂಶಯವೇ ಇಲ್ಲ. ಮಾತ್ರವಲ್ಲ. ಅವರ ಬರವಣಿಗೆಯಲ್ಲಿನ ಸಾಧನೆ ತನಗೆ ಅತ್ಯಂತ ಮೆಚ್ಚಿನದು. ಆ ಮೆಚ್ಚುಗೆ ಈಗ ಇನ್ನಷ್ಟು ಗಾಢವಾಯ್ತು. ಇಷ್ಟಕ್ಕೂ ಪ್ರಶಸ್ತಿ ಬರಲಿ ಬಾರದಿರಲಿ ಕಾರಂತರು ಕೇರ್ ಮಾಡುವವರಲ್ಲ. ಅದರಿಂದ ಸ್ಫೂರ್ತಿ ಹೊಂದುವವರೂ ಅಲ್ಲ. ಸ್ಫೂರ್ತಿ ಎಂಬುದು ಅವರಿಗೆ ಹೊರಗಿಂದ ಬರಬೇಕಾಗಿರಲಿಲ್ಲ ಕಾರಣ, ಅವರೊಳಗಿಂದ ಎಂದೂ ಅದು ಮಾಯವಾಗಿದ್ದೇ ಇಲ್ಲ.ಕಾರಂತರು ಬರೆಯುವಾಗ ಲೀಲಾಕಾರಂತರು ಸುತ್ತ ನಿಶ್ಶಬ್ದವಿರುವಂತೆ ನೋಡಿಕೊಳ್ಳುತಿದ್ದರಂತೆ. ಮಕ್ಕಳನ್ನು ಮನೆಯ ಹಿಂದಿನಂಗಳದಲ್ಲಿ ಆಡಿಸಿಕೊಂಡಿರುತಿದ್ದರಂತೆ.ಸ್ವತಃ ತಾನೂ ಅವರೊಡನೆ ಮಾತಿಗೆ ನಿಲ್ಲುತ್ತಿರಲಿಲ್ಲವಂತೆ. ಗೆಳೆಯರು ಬಂದಾಗ? -ಗೆಳೆಯರೊಡನೆ ಮಾತಾಡಿ, ಮತ್ತೆ ಅವರು ಬರವಣಿಗೆಯಲ್ಲಿ ಮಗ್ನವಾಗುತ್ತಿದ್ದರು, ಎಷ್ಟೋ ಸಲ ತಾನು ಅವಜ್ಞೆಗೊಳಗಾದೆನೆ ಎಂದು ನೊಂದುಕೊಂಡದ್ದೂ ಇದೆ. ಇಲ್ಲವೆನ್ನುವುದಿಲ್ಲ. ಮನೆಯೆಂಬುದು ಬೇರೆಯೇ ಸಭೆಯೆಂಬುದು ಬೇರೆಯೇ...ಅಂದಹಾಗೆ ಕಾರಂತರು ಎಷ್ಟೆಲ್ಲ ಪ್ರವಾಸಕ್ಕೆ ಹೋದರು. ಆದರೆ ಲೀಲಾಕಾರಂತರು ಜೊತೆಗೆ ತಾನೂ ಬರುವೆ ಎನ್ನಲೇ ಇಲ್ಲ. ಯಾಕೆ?- ಯಾಕೆಂದರೆ ಅವರು ಹೋದದ್ದೇ (ಅದರಲ್ಲಿಯೂ ವಿದೇಶಕ್ಕೆ) ಸಾಲ ಮಾಡಿ.ತಾನೂ ಹೊರಟರೆ ಇನ್ನಷ್ಟು ಸಾಲ ಆಗದೆ? ತಿರುಗಿ ಬಂದಮೇಲೆ ಅದನ್ನು ತೀರಿಸಬೇಕಲ್ಲ? ಇಷ್ಟಕ್ಕೂ ಇಬ್ಬರೂ ಹೋದರೆ ಮನೆಯಲ್ಲಿ ಯಾರು? ಮಕ್ಕಳೊಡನೆ ಯಾರು? ಕಾರಂತರಾದರೂ ಹೇಗೆ ನಿಶ್ಚಿಂತೆಯಿಂದ ತಿರುಗಿಯಾರು? ಹಾಗೆಂತ ತಾನು ಪುಟ್ಟಪರ್ತಿಗೆ ಹೋಗಲು ಆಸೆಪಟ್ಟೆ. ಕಾರಂತರು ಅಡ್ಡ ಬರಲಿಲ್ಲ. ಬದಲು ಕಳಿಸಿಕೊಟ್ಟರು. ಅಲ್ಲಿ ಕೆಲದಿನಗಳ ಕಾಲ ಇದ್ದು ಬಂದೆಪತ್ನಿಯ ಸ್ವಾತಂತ್ರ್ಯಕ್ಕೆ ಎಂದೂ ಅಡ್ಡಬರದ ಕಾರಂತರು, ಪತಿಯ ದಾರಿಗೆ ವಿಘ್ನಗಳು ಬಾರದಂತೆ ಕಾಪಾಡಿದ ಲೀಲಾ. ಹದಿನೇಳು ವರ್ಷದ ತಾನು ಮೂವತ್ತನಾಲ್ಕು ವರ್ಷದ ಕಾರಂತರನ್ನು ಇಷ್ಟಪಟ್ಟು ವಿವಾಹವಾದ ಮಾತು, ದೇವರ ಮೇಲಿನ ನಂಬಿಗೆಯ ಮಾತು, ವಾಕ್ಯ ಸುರು ಮಾಡುವಾಗ ತಾಳ್ಮೆಗೆಟ್ಟು ಮುಗಿಸುವಾಗ ಶಾಂತವಾಗುವ ಕಾರಂತರ ಸಿಟ್ಟಿನ ವೈಖರಿಯ ಮಾತು, ಮಹಿಳಾ ವಿಮೋಚನೆ ಬಗ್ಗೆ ಕೇಳಿದರೆ  `ಏನು ವಿಮೋಚನೆ? ನಮ್ಮನ್ನು ಕಟ್ಟಿಹಾಕಿದವರು ಯಾರು? ನಮ್ಮನ್ನು ನಾವೇ ಕಟ್ಟಿ ಹಾಕಿಕೊಂಡಿದ್ದೇವೆ. ನಾವೇ ಬಿಡಿಸಿಕೊಳ್ಳಬೇಕು~ ಎಂದು ದೃಢವಾಗಿ ನುಡಿದು ಕುಳಿತಲ್ಲೆ ಮತ್ತೆ ಸ್ಥಿರಕುಳಿತ ಭಂಗಿ...ಇದಾಗಿ ಬಹಳ ಸಮಯದ ನಂತರ ಒಂದು ಕತ್ತಲೇರುತಿದ್ದ ಸಂಜೆ ನನ್ನ `ಗೋಲ~ ಕಥಾಸಂಕಲನವನ್ನು ಕೊಡಲೆಂದು ಸಾಲಿಗ್ರಾಮದ ಅವರ ಮನೆಗೆ ಹೋಗಿದ್ದೆ. ಬಾಗಿಲು ತಟ್ಟಿದರೆ `ದೂಡಿ, ಒಳಗೆ ಬನ್ನಿ~ ಲೀಲಾ ಕಾರಂತರ ಧ್ವನಿ. ಕಾರಂತರು ಇರಲಿಲ್ಲ.ಬಾಲವನದಲ್ಲಿ ಮಕ್ಕಳು, ಅವರ ಶಾಲೆಕಲಿಕೆ, ತಂಟೆ, ಅತಿಥಿಗಳು, ಅವರ ಆತಿಥ್ಯ ನಿಭಾವಣೆ ಮುಂತಾಗಿ ಸಾಗಿದ ನಿಬಿಡ ಬದುಕನ್ನು ನೆನಪಿನ ಕೋಣೆಯಲಿಟ್ಟು, ವೃದ್ಧಾಪ್ಯದಲ್ಲೆಗ ಕತ್ತಲ ಮುಂಚಿನ ನಸುಬೆಳಕಲ್ಲಿ ಹಗಲು ನಿಧಾನವಾಗಿ ನಂದುತ್ತಿರುವ ನಾಟಕವನ್ನೇ ಹಂತಹಂತವಾಗಿ ವೀಕ್ಷಿಸುತಿರುವಂತೆ, ಮೌನಕ್ಕೊರಗಿ ಒಬ್ಬರೇ ಕಮ್ಮಗೆ ಕುಳಿತಿದ್ದರು.

 

ನಾನು ಒಂದರ್ಧ ಗಂಟೆ ಮಾತಾಡುತ್ತ ಇದ್ದಷ್ಟೂ ಹೊತ್ತು ಆ ಲೋಕಾಭಿರಾಮದ ಮಾತುಗಳ ನಡುವೆಯೂ ಒಳಗೇ ಕಂತುತಿದ್ದ ಅವರ ಜೀವಶಕ್ತಿ, ತೀವ್ರ ಆಯಾಸ, ನಗೆ ಹಾರಿಹೋದ ಮುಖ ಎಲ್ಲವೂ ಹೇಗೆ ಮನಸ್ಸಿಗೇ ಬಂದು ತಟ್ಟುತಿತ್ತು. ಹೊರಟು ಹೊರಬರುವಾಗ ಏನೋ ಉಮ್ಮಳ... ಏನೋ, ಏನಂತ ಹೇಳಲಿ?ವ್ಯಕ್ತಿಗಳ ಭಾವಚಿತ್ರ ತೆಗೆವ ಪ್ರಿಯ ಹವ್ಯಾಸದ ಮತ್ತು ಅದರಲ್ಲಿ ನಿಷ್ಣಾತರಾದ ನಮ್ಮ ಎ.ಎನ್.ಮುಕುಂದ್ ಕಾರಂತರ ಫೋಟೋ ತೆಗೆಯಲು ಬಯಸಿ, ಅವರನ್ನು ಮಾತಾಡಿಸುತ್ತ ಇರಲು ಸಾಲಿಗ್ರಾಮಕ್ಕೆ ನನ್ನನ್ನೂ ಜೊತೆಗೆ ಕರಕೊಂಡು ಹೋದರು. ಅವತ್ತು ನಮ್ಮಿಬ್ಬರಿಗೂ ಕಾರಂತರು ಸ್ವತಃ ಟ್ರೇಯಲ್ಲಿ ಕಾಫಿ ತಂದ ರೀತಿ ನೋಡಬೇಕು. ಟ್ರೇ ಅಲ್ಲಾಡದಂತೆ ಜಾಗರೂಕತೆಯಿಂದ, ಮನೆಯ ಹಿರಿಯಾಕೆಯಂತೆ ನಿಧಾನ ನಡೆಯುತ್ತ ಬಂದರು ಅವರು.

 

ಆ ನಡಿಗೆ ಎಷ್ಟು ಗಂಡಿನದೋ ಅಷ್ಟೇ ಒಬ್ಬ ಸ್ಥೂಲಗಂಭೀರ ಮಹಿಳೆಯದೂ ಆಗಿತ್ತಲ್ಲವೆ? ಅದರಲ್ಲಿಯೂ ಒಬ್ಬ ಅಪ್ಪಟ ಸಾರಸ್ವತ ಮಹಿಳೆಯಂತೆ. `ಗಂಡು ಕೊರಳಿನ ಹೆಣ್ಣು ಹೆಣ್ಣು ಕರುಳಿನ ಗಂಡು~ನಂತೆ ಕಾಣುವ ನನಗೋ ಅವರು ಯಾವತ್ತೂ ಒಬ್ಬ ಲೇಖಕಿಯೇ.ಅಂದು ತೆಗೆದ ಫೋಟೊ ಕೊಡಲು ಮುಕುಂದ್ ಹೋದಾಗ ಫೋಟೋದಲ್ಲಿ ತನ್ನ ಅರೆತೆರೆದ ಬಾಯಿಯ ಕತ್ತಲ ಗವಿ ನೋಡಿ `ಓಹ್ ಬಾಯಲ್ಲಿ ಬಾವಲಿ ಹೊಗ್ಗಬಹುದು~ ಎಂದು ಛಕ್ಕೆಂತ ಕಮೆಂಟ್ ಹೊಡೆದು ಮುಗುಳುಮುಗುಳು ನಕ್ಕರಂತೆ. ನಮ್ಮನೆ ಗೋಡೆಯ ಮೇಲಿರುವ, ಮಿತ್ರ ಮುಕುಂದ್ ಕೊಟ್ಟ, ಆ ಫೋಟೋದ ಪ್ರತಿ ಈಗಲೂ ಅದನ್ನು ನೆನಪಿಸಿ ನಗೆ ಮೂಡಿಸುತ್ತದೆ.ಮೊನ್ನೆಯೊಮ್ಮೆ ಶಿವಮೊಗ್ಗೆಗೆ ಹೋದವಳು ನಸು ಇರುಳಲ್ಲಿ ಸುಮ್ಮನೆ ಆ ಬೀದಿಗೊಂದು ಸುತ್ತು ಬಂದೆ. ಆ ಇಡೀ ಬೀದಿಯೇ ಬದಲಾಗಿದೆ. ಈಗಲ್ಲಿ ನಮ್ಮನೆಯಿಲ್ಲ. ನಮ್ಮತ್ತೆ ಮಾವ ಇಲ್ಲ. ಶಾಸ್ತ್ರಿಗಳೂ ಇಲ್ಲ, ಭವಾನಿಯಮ್ಮನೂ ಇಲ್ಲ. ಆ ಮನೆಯೇ ಇಲ್ಲ. ಎಲ್ಲವೂ `ಮರಳಿ ಮಣ್ಣಿಗೆ~ ಸೇರಿಯಾಗಿದೆ. ನೋಡುತ್ತ ಉಮ್ಮಳವುಕ್ಕಿ ಉಕ್ಕಿ ಬಂತು. ಹೋಗಿ ಆ ಮನೆಯಡಿ ಜಾಗದೆದುರು ನಿಂತೆ. ನಿಂತವಳ ಮನದೆದುರು ಕಳೆದ ಎಲ್ಲವೂ ಹೇ ಶಿವನೆ, ಕಂಡಂತೆ ಕೇಳಬೇಕೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.