ಗುರುವಾರ , ಡಿಸೆಂಬರ್ 12, 2019
24 °C

ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

ಕೆ. ಜಿ. ಕೃಪಾಲ್
Published:
Updated:
ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

ಆಫರ್, ಡಿಸ್ಕೌಂಟ್, ಬೈ ಬ್ಯಾಕ್‌ನಂತಹ ಕೊಡುಗೆಗಳಿಲ್ಲದೆ  ವ್ಯವಹಾರವಿಲ್ಲ. ಷೇರುಪೇಟೆಯೂ ಇಂತಹುಗಳಿಂದ ಹೊರತಲ್ಲ ಎಂಬುದು ಈ ವಾರದಲ್ಲಿ ಪ್ರದರ್ಶಿತವಾದ ಏರಿಳಿತಗಳು ದೃಢೀಕರಿಸುತ್ತವೆ. ಸೀಮಿತ ಅವಧಿಯ ಡಿಸ್ಕೌಂಟ್ ಸೇಲ್‌ ಅನ್ನೂ ಪೇಟೆ ಪ್ರದರ್ಶಿಸಿದೆ.

ಷೇರುಪೇಟೆಯಲ್ಲಿ ಹೂಡಿಕೆದಾರರಿಗೆ ಅತಿಯಾದ ನಿರೀಕ್ಷೆಗಳು, ಆಕಾಂಕ್ಷೆಗಳು ಇರುತ್ತವೆ. ಆದರೆ, ಸರಿಯಾಗಿ ಆರು ವರ್ಷಗಳ ಹಿಂದೆ ಅಂದರೆ 10–02–2012  ರಂದು ಮುಂಬೈ ಷೇರು ವಿನಿಮಯ ಕೇಂದ್ರದ ಹೆಗ್ಗುರುತಾದ ಸಂವೇದಿ ಸೂಚ್ಯಂಕವು 17,748 ರಲ್ಲಿದ್ದು ಅಂದು ಷೇರುಪೇಟೆಯ ಬಂಡವಾಳ ಮೌಲ್ಯವು ₹ 63.23 ಲಕ್ಷ ಕೋಟಿಯಷ್ಟಿತ್ತು. ಅದು ಈಗ ಅಂದರೆ 02–09–2018 ರಂದು 34,005 ರಲ್ಲಿದ್ದು ಬಂಡವಾಳ ಮೌಲ್ಯವು ₹147.46 ಲಕ್ಷ ಕೋಟಿಗೆ ಏರಿಕೆ ಕಂಡಿರುವ ಅಂಶವನ್ನು ಗಮನಿಸ

ಬೇಕಾದುದು ಅತಿ ಮುಖ್ಯ.

ಒಂದು ವಾರದಲ್ಲಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಪ್ರದರ್ಶಿಸಿದ ಭರ್ಜರಿ ಏರಿಳಿತಗಳು ಷೇರುಪೇಟೆಯ ಚಟುವಟಿಕೆಯು ಜೂಜಾಟ ಎಂಬ ಕಲ್ಪನೆ ತಪ್ಪು ಎಂಬುದನ್ನು ಸಾಬೀತುಪಡಿಸಿದೆ. ಕಾರಣ ಜೂಜಾಟದಲ್ಲಿ ಕರಗಿದ ಹಣ ಮರಳಿ ಬರುವುದು ಸಾಧ್ಯವಿಲ್ಲ. ಆದರೆ ಷೇರುಪೇಟೆಯಲ್ಲಿ ಮಂಗಳವಾರ ಸುಮಾರು ಎರಡೂವರೆ ಸಾವಿರ ಅಂಶಗಳ ಏರಿಳಿತ ಪ್ರದರ್ಶಿಸಿ, ಭಾರಿ ಕುಸಿತ ಕಂಡಂತಹ ಷೇರುಗಳ ಬೆಲೆ ಪುಟಿದೆದ್ದಿವೆ.

ಒಂದು ತಿಂಗಳಲ್ಲಿ ಸಂವೇದಿ ಸೂಚ್ಯಂಕವು ಸುಮಾರು ಎರಡು ಸಾವಿರ ಅಂಶಗಳ ಏರಿಕೆ ಕಂಡು ಜನವರಿ 26 ರಂದು 36,443 ರ ಸಾರ್ವಕಾಲಿಕ ಗರಿಷ್ಠ ತಲುಪಿ ನಂತರ ಮಂಗಳವಾರ 9 ರಂದು 33,482 ಅಂಶಗಳಿಗೆ ಕುಸಿದು, ಚೇತರಿಕೆ ಕಂಡಿದೆ. 34,005 ರಲ್ಲಿ ವಾರಾಂತ್ಯ ಕಂಡಿದೆ. ಇದು ಪೇಟೆಯು ಗರಿಷ್ಠದಲ್ಲಿದೆ ಎಂಬುದು ಬಿಂಬಿತವಾಗಿದೆ.

ಒಂದು ವಾರದಲ್ಲಿ ವಕ್ರಾಂಗಿ ಕಂಪನಿ ಷೇರಿನ ಬೆಲೆ ₹236 ರ ಸಮೀಪದಿಂದ ₹182 ಕ್ಕೆ ಕುಸಿದು ಅಲ್ಲಿಂದ ₹201 ಕ್ಕೆ ಪುಟಿದೆದ್ದಿತು. ಇಳಿಕೆಯ ವೇಗದಲ್ಲಿ ಮಾರಾಟ ಮಾಡಲಾಗಲಿ, ಏರಿಕೆಯತ್ತ ತಿರುಗಿದಾಗ ಖರೀದಿ ಮಾಡಲಾಗಲಿ ಅವಕಾಶವನ್ನೇ ನೀಡದೇ ಇರುವುದು ಸೋಜಿಗದ ಸಂಗತಿಯಾಗಿದೆ.

ಶುಕ್ರವಾರ ಆರೋಗ್ಯ ವಲಯದ ಫೋರ್ಟಿಸ್ ಹೆಲ್ತ್ ಕೇರ್ ಕಂಪನಿಯು ₹123 ರಿಂದ ₹157 ರವರೆಗೂ ಏರಿಕೆ ಕಂಡು ₹148 ರ ಸಮೀಪ ಕೊನೆಗೊಂಡಿದೆ.

ಕಂಪನಿಯ ಪ್ರವರ್ತಕರು ₹473 ಕೋಟಿ ಹಣವನ್ನು ಕಂಪನಿಗೆ ಹಿಂದಿರುಗಿಸಲಿದ್ದಾರೆ ಎಂಬ ಸಮಜಾಯಿಷಿ ಮತ್ತು ಮಣಿಪಾಲ್ ಹಾಸ್ಪಿಟಲ್‌ನಲ್ಲಿ ಈ ಕಂಪನಿಯ ವಿಲೀನದ ಮಾತುಕತೆಯು ನಡೆಯುತ್ತಿದೆ ಎಂಬ ಸುದ್ದಿಯು ಷೇರಿನ ಬೆಲೆಯನ್ನು ಗಗನಕ್ಕೇರಿಸಿತು.

ಷೇರುಪೇಟೆಯಲ್ಲುಂಟಾದ ಉಬ್ಬರವಿಳಿತಗಳಿಗೆ ಕೇವಲ ಕೇಂದ್ರ ಬಜೆಟ್‌ನಲ್ಲಿ ವಿಧಿಸಿದ ಬಂಡವಾಳ ಗಳಿಕೆ ತೆರಿಗೆ ಮಾತ್ರ ಕಾರಣವಲ್ಲ. ಅದು ನೆಪಮಾತ್ರ.

ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳ ಅಂದರೆ ಅಮೆರಿಕದ ಡೊಜೋನ್ಸ್, ಯೂರೋಪಿನ ಎಫ್‌ಟಿಎಸ್–ಇ, ಜಪಾನಿನ ನಿಕೈ, ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಮುಂತಾದ ಸೂಚ್ಯಂಕಗಳಲ್ಲಿ ಉಂಟಾದ ಭಾರಿ ಗಾತ್ರದ, ದಾಖಲೆಯ ಕುಸಿತ ಇಲ್ಲಿಯೂ ಆಗಿದೆ. ಈ ಹಿಂದಿನ ದಿನಗಳಲ್ಲಿ

ಕಂಪನಿಗಳಲ್ಲಿನ ಆಂತರಿಕ ಸಂಗತಿಗಳ, ಸಾಧನೆಗಳ  ಹೊರತಾಗಿ ಉಂಟಾಗಿದ್ದ ಏರಿಕೆಯಂತೆ, ಕಂಪನಿಗಳಿಗೆ ಸಂಬಂಧವಿಲ್ಲದಂತಹ ರೀತಿಯಲ್ಲಿ ಇಳಿಕೆಯು ಆಗುತ್ತಿದೆ. ಇದರ ಪರಿಣಾಮವಾಗಿ  ಕೇವಲ ನಾಲ್ಕೇ ದಿನಗಳಲ್ಲಿ ಪೇಟೆಯ ಬಂಡವಾಳ ಮೌಲ್ಯವು ₹ 8 ಲಕ್ಷ ಕೋಟಿಯಷ್ಟು ಕರಗಿದೆ. ಆದರೂ ಭಯಪಡುವ ಅಗತ್ಯವಿಲ್ಲ.

ಹೂಡಿಕೆಗೆ ಪರ್ಯಾಯ ವಿಧವಿಲ್ಲದೆ ಇರುವ ಕಾರಣ ಸ್ಥಳೀಯರ ಉಳಿತಾಯ ಹಣ ಪೇಟೆಯತ್ತ ಹರಿಯಲೇಬೇಕು. ಇದರೊಂದಿಗೆ ಸುಲಭವಾಗಿ ಇಲ್ಲಿ ಹಣ ಮಾಡಬಹುದೆಂಬ ರುಚಿ ಕಂಡಿರುವ ವಿದೇಶಿ ವಿತ್ತೀಯ ಸಂಸ್ಥೆಗಳು ಅವಕಾಶಗಳನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಸಣ್ಣ ಹೂಡಿಕೆದಾರರು ಈ ಎರಡು ರೀತಿಯ ವಿತ್ತೀಯ ಸಂಸ್ಥೆಗಳ ಕಣ್ಣಾಮುಚ್ಚಾಲೆ ಆಟದಲ್ಲಿ ಅವಕಾಶದ ಲಾಭ ಪಡೆದುಕೊಳ್ಳಬೇಕು.

ಹೊಸ ಷೇರು: ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಲಿಮಿಟೆಡ್ ಕಂಪನಿಯು ಪ್ರತಿ ಷೇರಿಗೆ ₹180 ರಿಂದ ₹190 ರ ಅಂತರದಲ್ಲಿ ಈ ತಿಂಗಳ 12 ರಿಂದ 15 ರವರೆಗೂ ಆರಂಭಿಕ ಷೇರು ವಿತರಣೆಯನ್ನು ಮಾಡಲಿದೆ. ಅರ್ಜಿಯನ್ನು 78 ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದು.

ಬೋನಸ್ ಷೇರು: ಲಾ ಒಪಾಲ ಆರ್ ಜಿ ಕಂಪನಿ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ಆಯಿಲ್ ಇಂಡಿಯಾ ಕಂಪನಿ .1:2 ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ಕೆಲ್ಟಾನ್‌ ಟೆಕ್ ಸಲ್ಯೂಷನ್ಸ್ ಲಿಮಿಟೆಡ್ ಕಂಪನಿ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ಗೇಲ್ ಇಂಡಿಯಾ 14 ರಂದು ಬೋನಸ್  ಷೇರು ವಿತರಣೆ ಪರಿಶೀಲಿಸಲಿದೆ.

ಮುಖಬೆಲೆ ಸೀಳಿಕೆ: ಫುಡ್ಸ್ ಆ್ಯಂಡ್‌ ಇನ್ಸ್‌  ಕಂಪನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲು ನಿರ್ಧರಿಸಿದೆ.

ಸಿಟರ್ಜಿಯಾ ಬಯೊ ಕೆಮಿಕಲ್ಸ್ ಕಂಪನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಈ ತಿಂಗಳ 16 ನಿಗದಿತ ದಿನ.

ದೇಶಿ, ಜಾಗತಿಕ ಅಂಶಗಳ ಪ್ರಭಾವ

ಈ ವಾರದ ದೇಶದ ಷೇರುಪೇಟೆಯ ಮೇಲೆ ಜಾಗತಿಕ ಮತ್ತು ದೇಶಿ ವಿದ್ಯಮಾನಗಳು ಪ್ರಭಾವ ಬೀರಲಿವೆ.

ಮಹಾಶಿವರಾತ್ರಿ ಪ್ರಯುಕ್ತ ಮಂಗಳವಾರ ಷೇರುಪೇಟೆ ವಹಿವಾಟು ನಡೆಯುವುದಿಲ್ಲ. ಹೀಗಾಗಿ ನಾಲ್ಕು ದಿನಗಳ ವಹಿವಾಟಿನಲ್ಲಿ ಜನವರಿ ತಿಂಗಳ ಚಿಲ್ಲರೆ, ಸಗಟು ಹಣದುಬ್ಬರದ ಅಂಕಿ–ಅಂಶಗಳು ಹಾಗೂ ಡಿಸೆಂಬರ್‌ನ ಕೈಗಾರಿಕಾ ಪ್ರಗತಿ ಸೂಚ್ಯಂಕ ವಹಿವಾಟಿನ ದಿಕ್ಕನ್ನು ನಿರ್ಧರಿಸಲಿವೆ.

ಸದ್ಯದ ಮಟ್ಟಿಗೆ ಷೇರುಪೇಟೆಗಳು ಜಾಗತಿಕ ವಿದ್ಯಮಾನಗಳ ಪ್ರಭಾವದಲ್ಲಿವೆ. ಮುಂದಿನ ದಿನಗಳಲ್ಲಿಯೂ ಇದೇ ಪರಿಸ್ಥಿತಿ ಕಂಡು ಬರಲಿದೆ.

(ಮೊ: 9886313380, ಸಂಜೆ 4.30 ರನಂತರ)

ಪ್ರತಿಕ್ರಿಯಿಸಿ (+)