ಸೋಮವಾರ, ಏಪ್ರಿಲ್ 19, 2021
32 °C

ಸಣ್ಣ ಹೂಡಿಕೆ: ಕುಸಿಯುತ್ತಿರುವ ವಿಶ್ವಾಸ

ಕೆ. ಜಿ. ಕೃಪಾಲ್ Updated:

ಅಕ್ಷರ ಗಾತ್ರ : | |

ಷೇರು ಪೇಟೆಯಲ್ಲಿನ ವಾತಾವರಣವು ಅತ್ಯಂತ ನೀರಸಮಯವಾಗಿದ್ದು, ನವೆಂಬರ್ 9 ರಂದು ಅಂತ್ಯಗೊಂಡ ವಾರದಲ್ಲಿ 10 ಪ್ರಮುಖ ಕಂಪೆನಿಗಳ ಬಂಡವಾಳ ಮೌಲ್ಯವು ಅರ್ಧದಷ್ಟು ಕುಸಿತ ಕಂಡಿವೆ.

`ಒಎನ್‌ಜಿಸಿ~ ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಟಿಸಿಎಸ್‌ಗಳು ಈ ಇಳಿತದ ರುಚಿ ಕಂಡಿವೆ. ಬಂಡವಾಳ ಹಿಂತೆಗೆದ ಪ್ರಯತ್ನದಲ್ಲಿ, ಷೇರುಗಳ ಮರುವಿತರಣೆಗೆ ಪ್ರಯತ್ನಿಸಿ `ಒಎನ್‌ಜಿಸಿ~ ಮತ್ತು ರಾಷ್ಟ್ರೀಯ ಇಷ್ಪತ್ ನಿಗಮಗಳ ಅರ್ಜಿಗಳನ್ನು ವಿತರಿಸಿ ನಂತರ ವಿತರಣೆ ರದ್ದುಗೊಳಿಸಿದ ಕ್ರಮವು ಹಾಗೂ ಚಿಲ್ಲರೆ ವಲಯದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಕಲ್ಪಿಸುವ ಕ್ರಮದ ಉಂಟಾಗುತ್ತಿರುವ ಅತಿಯಾದ ಗೊಂದಲ, 2-ಜಿ ಸ್ಪೆಕ್ಟ್ರಂ ವಿತರಣೆಯ ವಿಫಲತೆಗಳು ಈ ತಾತ್ಸಾರ ಭಾವನೆಯನ್ನು ಮತ್ತಷ್ಟು ಹೆಚ್ಚಿಸಿದೆ.ಈ ಎಲ್ಲಾ ಬೆಳವಣಿಗೆಗಳು ಹೂಡಿಕೆದಾರರು ವಿಶೇಷವಾಗಿ ಸಣ್ಣ ಹೂಡಿಕೆದಾರರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿವೆ. ಪೇಟೆ ನಿಯಂತ್ರಕರು ಸರ್ಕಾರ ಯಾವುದೇ ಸುಧಾರಣೆಗೆ ಮುಂದಾದರೂ ನಮ್ಮ ದೇಶದ ಅಪಾರ ಸಣ್ಣ ಹೂಡಿಕೆದಾರರ ಹಿತಾಸಕ್ತಿಯನ್ನು ಕೇಂದ್ರ ಬಿಂದುವಾಗಿಸಿಕೊಂಡು ಜಾರಿಗೊಳಿಸಿದಲ್ಲಿ ಮಾತ್ರ ಯಶಸ್ಸು ಕಾಣಲು ಸಾಧ್ಯ.

 

ಈ ಹಿಂದೆ ಮಾರುತಿ ಉದ್ಯೋಗ್, ಕೆನರಾ ಬ್ಯಾಂಕ್‌ಗಳು ಸಾರ್ವಜನಿಕ ವಿತರಣೆ ಮಾಡಿದ ರೀತಿ, ಬಂಡವಾಳ ಹಿಂತೆಗೆತದ ಕಂಪೆನಿಗಳೂ ಸಹ ಅನುಸರಿಸಿದರೆ ಕೇವಲ ವಿತರಣೆ ಮಾತ್ರವಲ್ಲ ಇಡೀ ಷೇರುಪೇಟೆಗಳೇ ಚುರುಕಾಗಿ ದೇಶದ ಆರ್ಥಿಕತೆ ವೃದ್ಧಿಗೆ ಉತ್ತಮ ಕೊಡುಗೆ ಯಾಗುವುದರಲ್ಲಿ ಸಂದೇಹವಿಲ್ಲ.ಹಿಂದಿನ ವಾರದಲ್ಲಿ ಮುಹೂರ್ತದ ವಹಿವಾಟಿನ ದಿನವೂ ಸೇರಿ ಎಲ್ಲಾ ದಿನಗಳಲ್ಲೂ ಸಂವೇದಿ ಸೂಚ್ಯಂಕವು ಹಾನಿ ಅನುಭವಿಸಿತು. ಇಳಿಕೆಯು ಸಹ ದಿನೇ ದಿನೇ ಹೆಚ್ಚುತ್ತಾ ಸೋಮವಾರದ 13 ರಿಂದ ಶುಕ್ರವಾರ 162 ಅಂಶಗಳಷ್ಟು ಹಾನಿ ಅನುಭವಿಸಿತು. ಮಧ್ಯಮಶ್ರೇಣಿ ಸೂಚ್ಯಂಕವು ಕೇವಲ 2 ಅಂಶಗಳಷ್ಟು ಹಾನಿ ಕಂಡರೆ ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 41 ಅಂಶಗಳಷ್ಟು ಏರಿಕೆಯಿಂದ ಅಚ್ಚರಿ ಮೂಡಿಸಿತು.ವಿದೇಶಿ ವಿತ್ತೀಯ ಸಂಸ್ಥೆಗಳು ರೂ767 ಕೋಟಿ ಹೂಡಿಕೆ ಮಾಡಿದರೆ ಸ್ಥಳೀಯ ಸಂಸ್ಥೆಗಳು ರೂ858 ಕೋಟಿ ಮಾರಾಟ ಮಾಡಿವೆ ಪೇಟೆಯ ಬಂಡವಾಳ ಮೌಲ್ಯವು ರೂ 64.93 ಲಕ್ಷ ಕೋಟಿಗಳಷ್ಟಾಗಿದೆ.ದೀಪಾವಳಿಯ ಮುಹೂರ್ತದ ಟ್ರೇಡಿಂಗ್‌ನಲ್ಲಿ ಸೆನ್ಸೆಕ್ಸ್ 51 ಅಂಶಗಳಷ್ಟು ಕುಸಿತ ಕಂಡರೂ ಮಿಡ್‌ಕ್ಯಾಪ್ ಹಾಗೂ ಸ್ಮಾಲ್ ಷೇರುಗಳು ಚುರುಕಾದ ಏರಿಕೆ ಕಂಡವು. ಯುನೈಟೆಡ್ ಬ್ರುವರೀಸ್ ಕಂಪೆನಿಯು ರೂ83ಕ್ಕೂ ಹೆಚ್ಚಿನ ಏರಿಕೆ ಪಡೆದರೆ ಎಲ್ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್ ರೂ11ಕ್ಕೂ ಹೆಚ್ಚು ಏರಿಕೆ ಕಂಡಿತು.

ಎಂಪಿಎಸ್ ಲಿ., ಸ್ಟೀಲ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ದಾಖಲೆಯ ಮಟ್ಟ ತಲುಪಿದ್ದವು. ಗೇಟ್‌ವೇ ಡಿಸ್ಟ್ರಿಪಾರ್ಕ್, ಗುಜರಾತ್ ಮಿನರಲ್ ಡೆವೆಲಪ್‌ಮೆಂಟ್, ಇಂಡಿಯನ್ ಹೋಟೆಲ್ಸ್, ಕನ್ಸಾಯಿ ನೆರೊಲ್ಯಾಕ್, ಕೆಪಿಐಟಿ ಕಮ್ಮಿನ್ಸ್, ಮೈಂಡ್‌ಟ್ರೀ, ಮುತ್ತೋಟ್ ಫೈನಾನ್ಸ್ ಕಂಪೆನಿಗಳು ಗಮನಾರ್ಹ ಏರಿಕೆ ಕಂಡವು. ಸ್ಮಾಲ್‌ಕ್ಯಾಪ್ ಇಂಡೆ  ಕ್ಸ್‌ನ ಆಂಜನೇಯ ಲೈಫ್ ಸೈನ್ಸಸ್, ಅಕ್ಸಲ್ಯ ಕಾಳೆ, ಅಶೋಕ ಬ್ಯುಲ್ಡ್‌ಕಾನ್, ಆಟೋಮೊಟಿವ್ ಆಕ್ಸಲ್ಸ್, ಬೊರೊ ಸಿಲ್‌ಗ್ಲಾಸ್, ಡಿಶ್‌ಮನ್ ಫಾರ್ಮ, ಗ್ಯಾಬ್ರಿಲ್ ಇಂಡಿಯಾದಂತಹ ಕಂಪೆನಿಗಳು ಚುರುಕಾದ ಏರಿಕೆ ದಾಖಲಿಸಿದವು.ಯುನೈಟೆಡ್ ಸ್ಪಿರಿಟ್ಸ್ ಬೆಲೆಯಲ್ಲಿ ಸ್ಪೋಟಸೋಮವಾರದ ಚಟುವಟಿಕೆಯಲ್ಲಿ ಯನೈಟೆಡ್ ಸ್ಪಿರಿಟ್ಸ್ ಕಂಪೆನಿಯ ಷೇರಿನ ಬೆಲೆಯು ರೂ1,359 ರಿಂದ ರೂ1,834 ರವರೆಗೂ ಏರಿಳಿತ ಕಂಡು ಬೆರಗುಗೊಳಿಸಿದೆ. ಡಿಯಾಜಿಯೋ ಕಂಪೆನಿಯು ಶೇ 26ರ ಭಾಗಿತ್ವ ಪಡೆಯಲು ರೂ 1,440 ರಂತೆ ತೆರೆದ ಕರೆ ನೀಡಲಿರುವುದು, ಯಶಸ್ಸು ಕಾಣುವುದು ಸಂದೇಹವಾಗಿದೆ.

ವಿವಿಧ ಬ್ರೋಕಿಂಗ್ ಸಂಸ್ಥೆಗಳು ಪೇಟೆ ದರಕ್ಕೆ ಹೆಚ್ಚಿನ ಗುರಿ ನಿಗದಿಪಡಿಸಿರುವುದು ಈ ಏರಿಕೆಗೆ ಪೂರಕ ಅಂಶವಾಗಿದೆ. ಈಚಿನ ವರ್ಷಗಳಲ್ಲಿ ತೆರೆದ ಕರೆ ನೀಡಿದ ಕಂಪನಿಗಳಲ್ಲಿ ತೆರೆದ ಕರೆ ಬೆಲೆಗಿಂತ ಹೆಚ್ಚಿನ ಜಿಗಿತ ಕಂಡ ಕಂಪೆನಿಗಳಲ್ಲಿ ಇದು ಪ್ರಥಮ ಕಂಪೆನಿಯಾಗಿದೆ.

ಹಿಂದೆ ರಾನಬಕ್ಸಿ ಲ್ಯಾಬ್‌ನ ತೆರೆದ ಕರೆಯ ಸಂದರ್ಭದಲ್ಲೂ ಸಹ ಪೇಟೆಯ ದರವು ತೆರೆದ ಕರೆ ಬೆಲೆ ದಾಟದಾಯಿತು. ಒಟ್ಟಿನಲ್ಲಿ ಷೇರಿನ ದರವು ಒಂದೇ ವಾರದಲ್ಲಿ ರೂ1,375 ರಿಂದ ರೂ1,954 ರವರೆಗೂ ಜಿಗಿದು ರೂ1,791 ರಲ್ಲಿ ವಾರಾಂತ್ಯ ಕಂಡಿತು. ಒಂದು ತಿಂಗಳಲ್ಲಿ ರೂ990 ರಿಂದ ರೂ 1,954 ರವರೆಗೂ ಜಿಗಿತ ಕಂಡು ದ್ವಿಗುಣಗೊಳಿಸಿದ ದಾಖಲೆ ವಿಸ್ಮಯಕಾರಿಯಲ್ಲವೆ?ಲಾಭಾಂಶ ವಿಚಾರಬಿರ್ಲಾ ಕಾರ್ಫ್ ಶೇ 25 (ನಿ. ದಿ. 23-11-12), ಡಿಸಿಎಂ ಲಿ. ಶೇ 15 (ನಿ. ದಿ. 24-11-12), ಎಂಪಿಎಸ್ ಲಿ. ಶೇ 50 (ನಿ. ದಿ. 24-11-12), ಸೊನಾಟ ಸಾಫ್ಟ್‌ವೇರ್ ಶೇ 50 (ಮು. ಬೆ. ರೂ1), ವಿಧಿ ಡೈಸ್ಟಫ್ಸ್ ಮ್ಯಾನುಫ್ಯಾಕ್ಚರಿಂಗ್ ಶೇ 20 (ಮು. ಬೆ. ರೂ1), ಎ.ಪಿ.ಎಂ. ಇಂಡಸ್ಟ್ರೀಸ್ ಶೇ 30 (ಮು. ಬೆ. ರೂ 2) ಕ್ಯಾಪ್ಲಿನ್ ಪಾಯಿಂಟ್ ಶೇ 20 ಬಾಂಬಿನೋ ಶೇ 15.ಅಮಾನತು ತೆರವು* ನವೆಂಬರ್ 2002 ರಿಂದಲೂ ಅಮಾನತ್ತಿನಲ್ಲಿಡುವ ಶ್ರೀಕೃಷ್ಣ ಬಯೋಟೆಕ್ ಲಿ. ಕಂಪೆನಿಯು ಅಮಾನತು ತೆರವು ಗೊಳಿಸಿಕೊಂಡು 19 ರಿಂದ `ಟಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.* ಸೆಪ್ಟೆಂಬರ್ 2001 ರಲ್ಲಿ ವಿಧಿಸಿದ್ದ ಅಮಾನತು ತೆರವು ಗೊಳಿಸಿಕೊಂಡು 22 ರಿಂದ ಟಿ ಗುಂಪಿನಲ್ಲಿ, ಸುಭಾಶ್ ಸಿಲ್ಕ್ ಮಿಲ್ಸ್ ಲಿ. ವಹಿವಾಟಿಗೆ ಮರು ಬಿಡುಗಡೆಯಾಗಲಿದೆ.* ಮೇ 2009ರ ಅಮಾನತ್ತನ್ನು ತೆರವು ಗೊಳಿಸಿಕೊಂಡು 22 ರಿಂದ ವಹಿವಾಟಿಗೆ ಮೆಟ್ರೊಗ್ಲೊಬಲ್ ಲಿ. ಟಿ ಗುಂಪಿನಲ್ಲಿ ಬಿಡುಗಡೆಯಾಗಲಿದೆ.

ವಾರದ ಪ್ರಶ್ನೆ

ಈಗಿನ ಪೇಟೆಗಳಲ್ಲಿ `ಏರಿಳಿತ~ ಹೆಚ್ಚಾಗಿರಲು ಕಾರಣವೇನು? ದೀರ್ಘ ಕಾಲೀನ ಹೂಡಿಕೆಗೆ ಮಾನದಂಡವೇನು? ದಯವಿಟ್ಟು ತಿಳಿಸಿರಿ.ಉತ್ತರ: ಷೇರು ಪೇಟೆಗಳು ಜಾಗತೀಕರಣದ ನಂತರ ಎಲ್ಲಾ ರೀತಿಯ ಹೂಡಿಕೆದಾರರಿಗೂ ಅಂದರೆ ಅಲ್ಪ ಕಾಲೀನ, ದೀರ್ಘ ಕಾಲೀನ, ಅತ್ಯಲ್ಪ ಕಾಲೀನ, ದೈನಂದಿನ, ಮುಂತಾದ ಚಟುವಟಿಕೆಗಳಿಗೆ ಅವಕಾಶವಾಗಿ ಆ ತರಹದ ಹಣ ಹರಿದು ಬಂದು ವಹಿವಾಟಿನ ಗಾತ್ರಗಳ ಜೊತೆಗೆ ವಹಿವಾಟುದಾರರನ್ನು ವೃದ್ಧಿಸಿತು.

ಇದಕ್ಕೆ ತಕ್ಕಂತೆ ವೈವಿಧ್ಯಮಯ ವಿಶ್ಲೇಷಣೆಗಳು,  ವಿಭಿನ್ನ ರೀತಿಯ ಅಭಿಪ್ರಾಯ ವ್ಯಕ್ತಪಡಿಸಲು ಮಾಧ್ಯಮಗಳು ವಿಶೇಷವಾಗಿ ವಾಣಿಜ್ಯ ವಲಯದ ಮಾಧ್ಯಮಗಳು ಅವಕಾಶ ಮಾಡಿಕೊಟ್ಟವು.

ಹೂಡಿಕೆದಾರರಲ್ಲಿ ಹೆಚ್ಚಿನ ಲಾಭಗಳಿಸಬೇಕೆಂಬ ಆಸೆಯನ್ನು ಸಹ ಬಿತ್ತಿದವು. ಈ ಕಾರಣ ವಹಿವಟಿನಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಾಯಿತು. ವಿಶ್ಲೇಷಣೆಯ ಪರಿ ಬದಲಾಗಿ ಪಾರಿಭಾಷಿಕ ವಿಶ್ಲೇಷಣೆಗೆ ಹೆಚ್ಚಿನ ಮನ್ನಣೆ ದೊರೆತು ಏರಿಳಿತಗಳ ಸರಮಾಲೆ ಪ್ರದರ್ಶನಕ್ಕೆ ದಾರಿಯಾಯಿತು.ಇಂತಹ ಆಳವಾದ ಏರಿಳಿತಕ್ಕೆ ಮತ್ತೊಂದು ಪ್ರಮುಖವಾದ ಕಾರಣವೆಂದರೆ ಸರ್ಕಾರದ ಕ್ರಮಗಳು ಎನ್ನಬಹುದು. ಪಾರದರ್ಶಕತೆ ಜಾರಿಗೊಳಿಸುವ ಹುಮ್ಮಸ್ಸಿನಲ್ಲಿ ಹಣದುಬ್ಬರ ಅತ್ಯಲ್ಪ ಸಮಯದಲ್ಲಿ ಪ್ರಕಟಿಸಲು ಮುಂದಾಗಿ ಹಲವಾರು ಕೃತಕವಾದ ಕ್ರಮಗಳಿಂದ ಹತೋಟಿ, ಪ್ರಗತಿಗೆ ಮುಂದಾಗಬೇಕಾದ ಅನಿವಾರ್ಯತೆಯ ಕಾರಣ ಸ್ಥಿರತೆ ಅಭಾವವು ಉಂಟಾಗಿದೆ.

ಈ ರೀತಿಯ ಅಲ್ಪಾವಧಿ ದೃಷ್ಟಿಕೊನವು ಮುಂದಿನ ಪರಿಣಾಮದ ಬಗ್ಗೆ ಆದ್ಯತೆ ನೀಡದ ಕಾರಣ ಅನಪೇಕ್ಷಿತ ಏರಿಳಿತಗಳು ಉಂಟಾಗುವವು. ಹಲವಾರು ಭಾರಿ ಈ ಏರಿಳಿತಗಳು ಕಾರ್ಪೊರೇಟ್ ಬೆಳವಣಿಗೆಗಳಿಗೆ ಮಾರಕವೂ ಆಗುವವು. ಯುನೈಟೆಡ್ ಸ್ಪಿರಿಟ್ಸ್ ಕಂಪೆನಿಯ ಸ್ಪಿರಿಟೆಡ್ ಏರಿಕೆಯು ಇತ್ತೀಚಿನ ದಿನಗಳ ನೈಜ ಉದಾಹರಣೆಯಾಗಿದೆ.ಡಿಯಾಜಿಯೊ ಕಂಪೆನಿಯ ತೆರೆದ ಕರೆ ಯಶಸ್ವಿಯಾಗದೇ ಇರಬಹುದೆಂಬ ಸಂದೇಹವೂ ಮೂಡಿದೆ. ಕಂಪೆನಿಗಳಾದ ಜಿ.ಟಿ.ಎಲ್., ಕ್ರಾಂಪ್ಟನ್ ಗ್ರೀವ್ಸ್, ಪೆಂರಾಕ್ ಇಂಡಸ್ಟ್ರೀಸ್, ಝೈಲಾಗ್ ಸಿಸ್ಟಮ್ಸಗಳು ಮಾರಾಟಗಾರರ ಒತ್ತಡಕ್ಕೆ ಬಲಿಯಾಗಿ ಹೂಡಿಕೆದಾರರ ಹಣವನ್ನು ನಶಿಸಿ ಹೋಗುವಂತೆ ಮಾಡಿದ ಉದಾಹರಣೆಗಳಿವೆ.

ಹಾಗಾಗಿ ದೀರ್ಘ ಕಾಲೀನ, ಅಲ್ಪ ಕಾಲೀನವೆಂಬ ನೀತಿಗೆ ಅಂಟಿಕೊಳ್ಳುವುದು ಇಂದಿನ ದಿನಗಳಲ್ಲಿ ಸೂಕ್ತವಲ್ಲ. ಅಗ್ರಮಾನ್ಯ ಕಂಪೆನಿಗಳಾದ ಲಾರ್ಸನ್ ಅಂಡ್ ಟ್ಯೂಬ್ರೊ, ರಿಲಯನ್ಸ್ ಸಮೂಹ ಕಂಪೆನಿ, ಟಾಟಾಸ್ಟೀಲ್, ಸ್ಟರ್ಲೈಟ್, ಒ.ಎನ್.ಜಿ.ಸಿ.ಗಳು ಸಹ ಹೂಡಿಕೆದಾರರ ಹಣವನ್ನು ಕರಗಿಸಿವೆ.

ಆದ್ದರಿಂದ ಹೂಡಿಕೆ ಮಾಡುವಾಗ ದೀರ್ಘಕಾಲೀನವೆಂಬ ಉದ್ದೇಶದಿಂದ ಕೊಡುವ ಲಾಭವನ್ನು ನಗದೀಕರಿಸಿಕೊಂಡು ಅನುಭವಿಸುವುದೇ ಲೇಸು. ಕೇವಲ ಒಂದು ವಾರದಲ್ಲಿ ಎಲ್ ಅಂಡ್ ಫೈನಾನ್ಸ್ ಹೋಲ್ಡಿಂಗ್ಸ್ ಕಂಡ ಏರಿಕೆಯಾಗಲಿ, ಝೈಲಾಗ್ ಸಿಸ್ಟಮ್ಸನ ಇಳಿಕೆಗಾಗಲಿ, ಘಟಿಸಿದ ನಂತರ ಕಾರಣಗಳು ಸೃಷ್ಟಿಯಾಗುತ್ತವೆ.

ಅಷ್ಟರಲ್ಲಿ ನಾವು ನಮ್ಮ ಅವಕಾಶದ ಲಾಭಗಳಿಸುವ ಉದ್ದೇಶ ಸಾಫಲ್ಯತೆಗೆ ಆದ್ಯತೆ ನೀಡುವುದು ಉತ್ತಮ. ಅವಕಾಶಗಳು ಆಗಿಂದಾಗ್ಗೆ ಸೃಷ್ಟಿಯಾಗುತ್ತಿರುತ್ತವೆ.

ಮೊ: 98863-13380

 (ಮಧ್ಯಾಹ್ನ 4.30ರ ನಂತರ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.