ಭಾನುವಾರ, ಡಿಸೆಂಬರ್ 15, 2019
24 °C

ಸಭ್ಯ ಉಡುಪು ಧರಿಸುತ್ತಾ... ಲಾವ್ ಲಾವ್‌ ಎನ್ನುತ್ತಾ

ಜಿಎಮ್ಮಾರ್ Updated:

ಅಕ್ಷರ ಗಾತ್ರ : | |

ಸಭ್ಯ ಉಡುಪು ಧರಿಸುತ್ತಾ... ಲಾವ್ ಲಾವ್‌ ಎನ್ನುತ್ತಾ

ಎಂದಿನಂತೆ ಪೆಕರ ಸರ್ಕಾರಿ ಕಚೇರಿಗೆ ರೌಂಡ್ಸ್ ಹೊರಟ. ಯಾಕೋ ಕಚೇರಿ ಎಂದಿನಂತೆ ಇರಲಿಲ್ಲ. ಸರ್ಕಾರಿ ಕಚೇರಿಗಳು ಸ್ಮಶಾನ ಮೌನದಿಂದಿವೆ ಎಂದರೆ ಏನರ್ಥ? ಸರ್ಕಾರಿ ನೌಕರರು ತಮ್ಮ ತಮ್ಮ ಮನೆಗಳಲ್ಲಿಯೂ ಅಷ್ಟೊಂದು ಚುರುಕಾ­ಗಿರು­ತ್ತಾರೋ ಇಲ್ಲವೋ ಗೊತ್ತಿಲ್ಲ. ಕಚೇರಿಗೆ ಬರುತ್ತಿದ್ದಂತೆಯೇ ಸರ್ಕಾರಿ ನೌಕರರ ಮೈಯಲ್ಲಿ ಆಮ್ಲಜನಕ ಅತಿಹೆಚ್ಚಾಗಿ ಪ್ರವಹಿಸುತ್ತದೆ.ಮನೆ, ಮಠ, ಮಾರುಗಳನ್ನು ಮರೆಯುತ್ತಾರೆ. ಏನು ಬಟ್ಟೆ ಹಾಕಿಕೊಂಡಿದ್ದೇನೆ ಎಂಬುದನ್ನು ಮರೆಯುತ್ತಾರೆ. ಜನ‘ಶೇವೆ’ಯೇ ಅವರ ಪರಮ ಗುರಿಯಾಗುತ್ತದೆ. ಮನೆಗೆ ಹಿಂತಿರು­ಗುವುದ­ರೊಳಗಾಗಿ ಆದಷ್ಟೂ  ‘ಗಿಂಜಿ’ಕೊಳ್ಳುವ ಸ್ಪರ್ಧೆ ಇಲ್ಲಿ ಒಲಿಂಪಿಕ್ಸ್ ಪಂದ್ಯಗಳಿಗಿಂತಲೂ ವೇಗವಾಗಿ ನಡೆ­ಯುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಉಂಡ­ವನೇ ಜಾಣ ಪಾಲಿಸಿ ಚಾಲ್ತಿಯಲ್ಲಿದೆ. ಆದರೆ...

ಷೇರುಪೇಟೆಯ ಗದ್ದಲದ ವಾತಾವರಣದಂತೆ ಇರಬೇಕಾದ ಸರ್ಕಾರಿ ಕಚೇರಿ ಏಕೆ ಈ ರೀತಿ ಇದೆ ಎಂದು ಪೆಕರನಿಗೆ ಗೊತ್ತಾಗಲಿಲ್ಲ.ಕಚೇರಿ ಒಳಗೆ ಪ್ರವೇಶಿಸಿದರೆ ನೌಕರರೆಲ್ಲಾ ಮುಖ ಇಳಿಬಿಟ್ಟುಕೊಂಡು ಕುಳಿತಿದ್ದರು. ಮತ್ತೆ ಕೆಲವರು ತಲೆಮೇಲೆ ಕೈ ಇಟ್ಟುಕೊಂಡು ಚಿಂತಾಕ್ರಾಂತ ರಾಗಿದ್ದರು. ಬಹುಶಃ ಒಂದು ವಾರದಿಂದ ಅಯ್ಯ ಅವರು ಚೀನಾ ಪ್ರವಾಸದಲ್ಲಿರುವುದರಿಂದ ಸರ್ಕಾರಿ ನೌಕರರು ಡಲ್ಲಾಗಿರಬಹುದು ಎಂದು ತನಗೆ ತಾನೇ ಸ್ವಗತ ಮಾಡಿಕೊಂಡ ಪೆಕರ, ಹರಳೆಣ್ಣೆ ಕುಡಿದವನಂತೆ ಕುಳಿತಿದ್ದವರೊಬ್ಬರನ್ನು ಪ್ರಶ್ನಿಸಿಯೇಬಿಟ್ಟ: ‘ಯಾಕ್‌ ಸ್ವಾಮಿ, ಎಲ್ಲಾ ಒಂಥರಾ ಡಲ್ಲಾಗಿದ್ದೀರಾ? ಯಾರಾದ್ರೂ ಸತ್ತೋದ್ರಾ? ರಾಷ್ಟ್ರೀಯ ಶೋಕನಾ?’‘ಏನ್‌ ಈ ತರಾ ಕೇಳ್ತಾ ಇದೀರಾ? ನಿಮಗೆ ವಿಷಯ ಗೊತ್ತಾಗಿಲ್ವಾ? ಸರ್ಕಾರಿ ಸಿಬ್ಬಂದಿಗೂ ವಸ್ತ್ರಸಂಹಿತೆ ಜಾರಿಗೆ ತಂದಿದ್ದಾರೆ. ನಮ್ಮ ಕರ್ತವ್ಯದ ಅವಧಿಯಲ್ಲಿ ಸರ್ಕಾರದ ಘನತೆಗೆ ಧಕ್ಕೆ ತಾರದಂತಹ ಸಭ್ಯ ಉಡುಪುಗಳನ್ನು ಮಾತ್ರ ಧರಿಸಬೇಕು ಎನ್ನುವ ಸುತ್ತೋಲೆ ಬಂದುಬಿಟ್ಟಿದೆ. ನಾವು ಹೇಗಿದ್ರೆ ಏನ್‌ ಸಾರ್‌, ನಾವು ಕೆಲ್ಸಾ ತಾನೇ ಮಾಡ್ಬೇಕು. ಡ್ರೆಸ್‌ಗೂ ಕೆಲಸಕ್ಕೂ ಏನ್‌ ಸಂಬಂಧಾ? ಏನ್‌ ಸರ್ಕಾರಾನೋ? ಏನ್‌ ಅಧಿಕಾರಿಗಳೋ’ಪೆಕರನಿಗೆ ಈಗ ಅರ್ಥವಾಯಿತು. ಯೂನಿ­ಫಾರಂ ಹಾಕಿಕೊಂಡು ಶಾಲೆಗೆ ಹೋಗಲು ಯಾವ ವಿದ್ಯಾರ್ಥಿಯೂ ಇಷ್ಟ­ಪಡು­ವುದಿಲ್ಲ. ಇನ್ನು ಸರ್ಕಾರಿ ನೌಕರಿಗೆ, ನೀಟಾಗಿ ಪ್ಯಾಂಟು ಷರ್ಟನ್ನೋ, ಪೈಜಾಮ–ಕುರ್ತಾ­ವನ್ನೋ ಹಾಕಿ­ಕೊಂಡು ಬನ್ನಿ ಅಂದರೆ ಕೇಳು­ತ್ತಾರೆಯೇ? ಆದರೂ ಪೆಕರ  ನೌಕರರ ಪರವಾಗಿಯೇ ನಿಂತ.‘ಇದು ವಸ್ತ್ರ ಸ್ವಾತಂತ್ರ್ಯದ ಹರಣ. ಸರ್ಕಾರಿ ಕಚೇರಿ ನೌಕರರೆಲ್ಲಾ ಈಗ ಡ್ರೆಸ್‌ ಹಾಕಿಕೊಂಡೇ ಬರುತ್ತಿದ್ದಾರೆ. ಯಾರೂ ಅರೆಬರೆಯಾಗಿ ಬರುತ್ತಿಲ್ಲ. ಆಗಾಗ ‘ತಬರ’ನಂತಹವರು ಸಿಕ್ಕರೆ ಅಂತಹ ಬಡಪಾಯಿಗಳನ್ನು ಬೆತ್ತಲು ಮಾಡಿ ಕಳುಹಿಸುತ್ತಾರೆ ಅಷ್ಟೇ. ಅಂತಹದರಲ್ಲಿ ಇದ್ದಕ್ಕಿ­ದ್ದಂತೆ ಸರ್ಕಾರಿ ನೌಕರರ ಡ್ರೆಸ್‌ ಮೇಲೆ ಸರ್ಕಾರ­ಕ್ಕೇಕೆ ಕಣ್ಣು ಬಿತ್ತು?’ ಎಂದು ಪೆಕರ ಚಿಂತಾಕ್ರಾಂತ­ರಾಗಿದ್ದ ನೌಕರ­ರನ್ನು ಸಮಾಧಾನಿಸಲು ಹೊರಟ.‘ಜೀನ್ಸ್ ಪ್ಯಾಂಟ್‌, ಟೀಷರ್ಟ್ ಹಾಕ್ಕೊಂಡು ಬರಬಾರದಂತೆ, ಹೆಣ್ಮಕ್ಕಳು ಟೈಟ್ಸ್ ನಲ್ಲಿ ಬರಲೇ ಬಾರ್‍ದಂತೆ,  ಸೀರೆ, ಇಲ್ಲವೇ ಚೂಡೀದಾರ್‌. ಇದೇನ್ಸಾರ್‌ ನ್ಯಾಯ? ಡ್ರೆಸ್ಸು ಅನ್ನೋದು ನಮ್ಮ ಜನ್ಮಸಿದ್ಧ ಹಕ್ಕು’ ಯುವ ನೌಕರನೊಬ್ಬ ಬಿಕ್ಕಿದ.‘ಸಮಾಧಾನ ಮಾಡ್ಕೊಳ್ಳಿ. ನಿಮ್ಮ ಸ್ವಾತಂತ್ರ್ಯ­ಹರಣ ವಿರೋಧಿಸಿ ಅಯ್ಯ ಅವರ ಆಸ್ಥಾನ ಸಾಹಿತಿ­ಗಳು ಪ್ರತಿಭಟನೆ ಮಾಡಿದ್ರೂ ಮಾಡ­ಬಹುದು. ಅಯ್ಯ ಅವರ ಸರ್ಕಾರ ಇದ್ದಿದ್ರಿಂದ ನೀವೆಲ್ಲಾ ಬಚಾವಾದ್ರಿ.  ಬಿಜೆಪಿ ಸರ್ಕಾರ ವೇನಾದ್ರೂ ಇದ್ದಿದ್ರೆ ದೇವರ ಕೆಲಸ ಮಾಡು­ವವರೆಲ್ಲಾ ಪೂಜಾರಿಗಳ ತರಹ ಇರಬೇಕು ಅಂತ ಸುತ್ತೋಲೆ ಹೊರಡಿಸಿ­ಬಿಡ್ತಿದ್ರು. ಆಗ ಕಚ್ಚೆ, ಪಂಚೆ, ಅಂಗವಸ್ತ್ರ ಹಾಕಿ­ಕೊಂಡೇ ಸರ್ಕಾರಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡ­ಬೇಕಿತ್ತು. ವಿಧಾನಸೌಧದ ಒಳಗೆ ಹೋಗುವವರು ದೇವರ ಕೆಲಸಕ್ಕೆ ಹೋಗುವ­ವರಾ­ದ್ದರಿಂದ ಚಪ್ಪಲಿಯನ್ನು ವಿಧಾನಸೌಧದ ಮುಂದೆಯೇ ಬಿಟ್ಟು ಒಳಗೆ ಹೋಗಬೇಕಾ­ಗು­ತ್ತಿತ್ತು. ಬದುಕಿಕೊಂಡ್ರಿ ಬಿಡಿ’ ಎಂದು ಹೇಳುತ್ತಲೇ ಪೆಕರ ಜನಾಭಿಪ್ರಾಯ ಸಂಗ್ರಹಿಸಲು ಹೊರಟ.‘ಸ್ವಾಮಿ, ಸರ್ಕಾರಿ ನೌಕರರಿಗೆ ವಸ್ತ್ರ ಸಂಹಿತೆ ಬೇಕಾ? ನೀವೇನಂತೀರಿ?’

‘ಹೌದು ಸ್ವಾಮಿ ಬಹಳ ಅಗತ್ಯ. ಮೊನ್ನೆ ನಾನು ಸಬ್‌ರಿಜಿಸ್ಟ್ರಾರ್‌ ಕಚೇರಿಗೆ ಹೋಗಿದ್ದೆ. ಅಲ್ಲಿ ನೌಕರರು ಯಾರು, ಹೊರಗಿನವರು ಯಾರು ಎಂಬುದೇ ಗೊತ್ತಾಗಲಿಲ್ಲ. ಯಾರನ್ನು ಮಾತ­ನಾಡಿ­ಸಿದರೂ, ರೌಡಿಗಳ ತರಹ ಉತ್ತರ ಕೊಡು­ತ್ತಾರೆ. ರಿಯಲ್‌ ಎಸ್ಟೇಟ್‌ನವರೆಲ್ಲಾ ಕಚೇರಿ ತುಂಬಾ ತುಂಬಿರುತ್ತಾರೆ. ನೌಕರರ ಗುರುತು ಹಿಡಿ­ಯೋದು ಹೇಗೆ? ಒಳ್ಳೆ ಕಲರ್‌ ಯೂನಿಫಾರಂ ಕೊಡಲಿ ಚೆನ್ನಾಗಿರುತ್ತೆ’

  ‘ಈ ಅಭಿಪ್ರಾಯ ಕೇಳಿದರೆ ಸರ್ಕಾರಿ ನೌಕರರು ನಿಮಗೆ ಮಂಗಳಾರತಿ ಮಾಡ್ತಾರೆ ಬಿಡಿ’ ಎಂದು ಹೇಳುತ್ತಾ ಮುಂದೆ ತೆರಳಿದ ಪೆಕರ ಶ್ರೀಮಾನ್‌ ಶ್ರೀಸಾಮಾನ್ಯರೊಬ್ಬರಿಗೆ ಅದೇ ಪ್ರಶ್ನೆ ಕೇಳಿದ.‘ಒಳ್ಳೆ ಕೆಲಸ ಸ್ವಾಮಿ, ಸರ್ಕಾರಿ ನೌಕರರು ಕಚೇರಿಗೆ ಬಂದವರಿಗೆಲ್ಲಾ ಉಂಡೆನಾಮ ತಿಕ್ಕಿ ಕಳುಹಿಸ್ತಾರೆ. ಅದಕ್ಕೆ ಅವರಿಗೆ ಸಮವಸ್ತ್ರ ಕೊಡಬೇಕು. ವಸ್ತ್ರಸಂಹಿತೆ ಜಾರಿಗೆ ಬರಬೇಕು. ನೌಕರರು ಪ್ಯಾಂಟು ಷರ್ಟು, ಕುರ್ತಾ, ಪೈಜಾಮ ಏನನ್ನಾದರೂ ಧರಿಸಲಿ ಅದಕ್ಕೆ ಚೀಲದಂತಹ ಜೇಬು ಇಟ್ಟರೆ ಚೆನ್ನಾಗಿರುತ್ತಲ್ವೇ?’ ಎಂದು ಶ್ರೀಮಾನ್‌ ಶ್ರೀಸಾಮಾನ್ಯರು ಕುಹಕವಾಡಿದರು.‘ಜೇಬಿದ್ದರೆ ಇನ್ನೂ ಒಳ್ಳೆಯದೇ ಆಯಿತಲ್ವೇ? ಸರ್ಕಾರಿ ನೌಕರರಿಗೆ ಜೇಬಿಲ್ಲದ ಷರಟು, ಪ್ಯಾಂಟು ಕಡ್ಡಾಯ ಮಾಡಿದರೆ ಹೇಗೆ?’ ಎಂದು ಪೆಕರ ಪ್ರಶ್ನಿಸಿದ.‘ಹೌದು ಸ್ವಾಮಿ, ಜಾಬು ಕೊಡುವಾಗಲೇ ಜೇಬಿನ ಮೇಲೆ ನಿಷೇಧ ವಿಧಿಸಬೇಕು. ಅದಕ್ಕೇ ಅಲ್ಲವೇ ಗಾಂಧೀಜಿ, ಷರಟು ಹಾಕ್ತಾನೇ ಇರ್ಲಿಲ್ಲ. ಕಚ್ಚೆಗೆ ಜೇಬೇ ಇರಲ್ಲ. ನಮ್ಮ ಸರ್ಕಾರಿ ನೌಕರರೇ ಗಾಂಧೀಜಿ ಪಾಲಿಸಿ ಪಾಲಿಸಲ್ಲ ಎಂದ ಮೇಲೆ ಬೇರೆ ಯಾರು ಪಾಲಿಸ್ತಾರೆ. ನಮ್ಮ ಅಯ್ಯ ಅವರು ನೋಡಿ ಎಷ್ಟು ಸಿಂಪಲ್‌! ಜುಬ್ಬ, ಪಂಚೆಯಲ್ಲೇ ಇರುತ್ತಾರೆ. ನಮ್ಮ ಅಯ್ಯ ಅವರ ಆದರ್ಶವೇ ಆದರ್ಶ, ಇದೂ ಒಂಥರಾ ‘ಆದರ್ಶ ಭಾಗ್ಯ’ ಎಂದು ಶ್ರೀಸಾಮಾನ್ಯರು ಅಯ್ಯ ಅವರನ್ನು ಕೊಂಡಾಡಲಾರಂಭಿಸಿದರು.‘ಆದರೆ ಅಯ್ಯ ಅವರ ಪುತ್ರನ ಷರಟು, ಪ್ಯಾಂಟಿಗೆ ಬಹಳ ಜೇಬು ಇದೆಯಂತಲ್ಲಾ ಸ್ವಾಮಿ? ಚೀನಾದವರೆಗೂ ಪುತ್ರ ಪ್ರವಾಸ ನಡೆ­ಯಿ­ತಂತಲ್ಲ. ಜನ ಎಲ್ಲಾ ಹರಹರ  ‘ಮಹಾದೇವ’ ಎನ್ನಲಾರಂಭಿಸಿದ್ದಾರಂತಲ್ಲಾ’ ಎಂದು ಪೆಕರ ಕೆಣಕಿದ. ‘ಅದೆಲ್ಲಾ ನನಗೆ ಗೊತ್ತಿಲ್ಲ ಬಿಡ್ರಿ’ ಎಂದು ಶ್ರೀಸಾಮಾನ್ಯ ಗಾಯಬ್‌ ಆದ.ಗಾಂಧೀ­ವಾದಿಯೊಬ್ಬರನ್ನು ಪೆಕರ ಸಂದರ್ಶಿಸಿದ. ಸರ್ಕಾರಿ ನೌಕರರಿಗೆ ವಸ್ತ್ರಸಂಹಿತೆ ಬಗ್ಗೆ ಅಭಿಪ್ರಾಯ ಏನು ಎಂದು ಪ್ರಶ್ನಿಸಿದ.  ‘ಬಹಳಷ್ಟು ಸಂಹಿತೆಗಳು ಬರಬೇಕಾಗಿದೆ. ರಾಜ­ಕಾರಣಿ­ಗಳಿಗೆ ಮೊದಲು ಇದು ಅನ್ವಯ­ವಾಗ­ಬೇಕು. ವಿಧಾನ­ಸೌಧದಲ್ಲಿ ಬ್ಲೂಫಿಲಂ ನೋಡು­ವುದನ್ನು ನಿಷೇಧಿ­ಸ­ಬೇಕು. ಶಾಸಕರು, ಸಚಿವರು, ಸಚಿವಾಲಯದ ಸಿಬ್ಬಂದಿ ಕೈಗೆ ಕೆಂಪುದಾರ ಸುತ್ತಿಕೊಂಡು ಬರುವುದನ್ನು ನಿಷೇಧಿಸಬೇಕು. ದೊಡ್ಡಗೌಡರು ನಿಂಬೆಹಣ್ಣು ಹಿಡಿದುಕೊಂಡು ಓಡಾಡುವುದನ್ನು ಬ್ಯಾನ್‌ ಮಾಡೇಕು. ಹಂಬರೀಷ್‌ ದಿನಾ ‘ಶೇವ್‌’ ಮಾಡ್ಕೊಂಡು ಬರಬೇಕು...’‘ಸಾರ್‌, ಇದೆಲ್ಲಾ ಈ ಜಮಾನದಲ್ಲಿ ಚೇಂಜ್‌ ಮಾಡಕ್ಕಾಗಲ್ಲ ಬಿಡಿ ಸಾರ್‌, ಸರ್ಕಾರಿ ನೌಕರರು ಸಭ್ಯ ಉಡುಪು ಧರಿಸಿಕೊಂಡು ಬಂದರೆ, ಟೇಬಲ್‌ ಕೆಳಗಡೆಯಿಂದ ಲಾವ್‌ ಲಾವ್‌ ಎಂದು ಕೇಳುವುದು ತಪ್ಪುತ್ತದಾ ಸಾರ್‌?’ ಎಂದು ಪೆಕರ ನೈಜ ಪ್ರಶ್ನೆಯೊಂದನ್ನು ಮುಂದಿಟ್ಟ. ‘ಗಾಂಧೀವಾದಿಗಳು ಸುದೀರ್ಘ ನಿಟ್ಟುಸಿರು­ಬಿಟ್ಟರು. ಸಬ್‌ಕೋಸನ್ಮತಿ ದೇ ಭಗವಾನ್‌...’ ಎಂದರು. ಭಜನೆ ಆರಂಭವಾಯಿತು ಎಂದು ಭಯಭೀತನಾದ ಪೆಕರ ಆಫೀಸಿನ ಕಡೆ ಕಂಬಿಕಿತ್ತ.

ಜಿಎಮ್ಮಾರ್

ಪ್ರತಿಕ್ರಿಯಿಸಿ (+)