ಗುರುವಾರ , ಡಿಸೆಂಬರ್ 12, 2019
17 °C

ಸಮಕಾಲೀನ ಭಾರತದ ಉದ್ಯೋಗಪರ್ವ

ನಾರಾಯಣ ಎ
Published:
Updated:
ಸಮಕಾಲೀನ ಭಾರತದ ಉದ್ಯೋಗಪರ್ವ

ಸದ್ಯ ದೇಶಕ್ಕೆ ದೇಶವೇ ಅರ್ಥ ವಿಚಾರಗಳ ಬಗ್ಗೆ ವ್ಯಾಕುಲಗೊಂಡು ಚರ್ಚಿಸುತ್ತಿರುವುದರಿಂದ ಮತ್ತೊಮ್ಮೆ ಅದರ ಬಗ್ಗೆಯೇ ಬರೆಯಬೇಕಿದೆ. ಆರ್ಥಿಕ ಕುಸಿತ ಮತ್ತು ಅದರ ವಿವಿಧ ಪರಿಣಾಮಗಳನ್ನು ಹೇಗೋ ಸಮರ್ಥಿಸುವ ಭರಾಟೆಯಲ್ಲಿ ಮೊನ್ನೆ ಕೇಂದ್ರದ ಸಚಿವರೊಬ್ಬರು ದೇಶವನ್ನು ತಣ್ಣನೆ ಕೊರೆಯುತ್ತಿರುವ ಉದ್ಯೋಗ ಕಡಿತದ ಬಗ್ಗೆ ಹೇಳಿದ್ದು ವಿಚಿತ್ರವಾಗಿತ್ತು.

ದೇಶದ ದೊಡ್ಡ ದೊಡ್ಡ ಕಂಪೆನಿಗಳು ಉದ್ಯೋಗ ಕಡಿತಗೊಳಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು. ಹೀಗಾಗುವುದರಿಂದ ದೇಶದಲ್ಲಿ ಉದ್ಯಮಶೀಲತೆ ಹೆಚ್ಚುತ್ತದೆ ಎಂದರು. ಕೆಲಸವಿಲ್ಲದವರು ತಾವೇ ಉದ್ಯಮಗಳನ್ನುಪ್ರಾರಂಭಿಸಬಹುದು ಎಂದರು.

ಇದ್ದ ಉದ್ದಿಮೆಗಳಿಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗದ ಆರ್ಥಿಕ ಸನ್ನಿವೇಶದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಅಥವಾ ಉದ್ಯೋಗ ಲಭಿಸದವರಿಗೆ ಹೊಸ ಉದ್ಯಮಗಳನ್ನು ತೆರೆಯಲಾದೀತೇ? ಅರ್ಥಶಾಸ್ತ್ರಜ್ಞರೇ ಈ ಪ್ರಶ್ನೆಗೆ ಉತ್ತರಿಸಬೇಕು. ಏನೇ ಇರಲಿ. ಒಂದು ವೇಳೆ ಹಾಗೊಂದು ಸಾಧ್ಯತೆ ಇದೆ ಅಂದುಕೊಂಡರೂ ಕೆಲವೊಂದು ಸತ್ಯಗಳನ್ನು, ಕೆಲವೊಂದು ಕಾಲದಲ್ಲಿ ರಾಜಕೀಯದಲ್ಲಿ ಇರುವವರು ಹೇಳಬಾರದು.

ದೇಶದಲ್ಲಿ ಹಳೆಯ ಉದ್ಯೋಗಗಳು ಸಾಯುತ್ತಿವೆ, ಹೊಸ ಉದ್ಯೋಗಗಳು ಹುಟ್ಟುತ್ತಿಲ್ಲ ಎನ್ನುವ ಪರಿಸ್ಥಿತಿ ಇರುವಾಗ ಸಚಿವರೊಬ್ಬರು ‘ಉದ್ಯೋಗವಿಲ್ಲದವರು ಉದ್ಯಮಿಗಳಾಗಬಹುದು’ ಎಂದು ಹೇಳಿದ್ದು ಒಂಥರಾ ಹಿಂದೆ ಫ್ರಾನ್ಸಿನ ರಾಣಿಯೊಬ್ಬಳು ‘ಬ್ರೆಡ್ ಇಲ್ಲದಿದ್ದರೇನಂತೆ, ಕೇಕ್ ತಿನ್ನಿ’ ಎಂದು ಹಸಿದ ಜನರನ್ನು ಅಣಕಿಸಿದ ರೀತಿಯಲ್ಲೇ ಕೇಳಿಸಿತು.

ಪಾಪ ಆ ರಾಣಿ ಹಾಗೆ ಹೇಳಿಯೇ ಇಲ್ಲ ಎಂದು ಮುಂದೆ ಚರಿತ್ರಕಾರರು ಸತ್ಯ ಹೇಳಿದರು. ಆದರೆ ಅಷ್ಟೊತ್ತಿಗೆ ಹಸಿದ ಜನರ ಕೋಪದ ತಾಪದಲ್ಲಿ ರಾಣಿಯ ರುಂಡ ಉರುಳಿತ್ತು. ಅದು ಆ ರಾಣಿಯ ಕತೆ. ಈ ಸಚಿವರ ಕತೆ ಹಾಗಲ್ಲ. ಸಚಿವರು ಹಾಗೆ ಹೇಳಿದ್ದಾರೆ ಎನ್ನುವುದು ಸತ್ಯ. ಹಾಗೆ ಹೇಳಿ ದಕ್ಕಿಸಿಕೊಂಡಿದ್ದಾರೆ ಎಂಬುದೂ ಈವರೆಗಿನ ಸತ್ಯ.

ಇದು ಸಾಲದು ಎಂಬಂತೆ ಇನ್ನೊಂದು ದಿನ, ಇನ್ನೊಂದು ಕಡೆ, ಇನ್ನೊಬ್ಬ ಕೇಂದ್ರ ಸಚಿವರು ಇನ್ನೂ ಒಂದು ಹೆಜ್ಜೆ ಮುಂದೆ ಹೋದರು ಅಥವಾ ಹಿಂದೆ ಬಂದರು. ಕರ್ನಾಟಕ ಮೂಲದ ಈ ಸಚಿವರ ಪ್ರಕಾರ ‘ನಿರುದ್ಯೋಗ’ ಅಂತ ಕರೆಯಬಹುದಾದದ್ದು ದೇಶದಲ್ಲಿ ಇಲ್ಲವೇ ಇಲ್ಲ.

ಮಾತ್ರವಲ್ಲ, ಯಾರನ್ನೂ ನಿರುದ್ಯೋಗಿಗಳು ಅಂತ ಕರೆಯಲೇ ಬಾರದು. ಈ ದೇಶದಲ್ಲಿ ಹೆಚ್ಚೆಂದರೆ ‘ಉದ್ಯೋಗಾಕಾಂಕ್ಷಿಗಳಿದ್ದಾರೆ, ನಿರುದ್ಯೋಗಿಗಳು ಇಲ್ಲ’ ಅಂತ ಅವರು ಗಟ್ಟಿಯಾಗಿ ಹೇಳಿದ್ದಾರೆ... ಇದೂ ಒಂದು ಆಡಳಿತ ಸೂತ್ರ ಇರಬೇಕು. ಸಮಸ್ಯೆಯನ್ನು ಪರಿಹರಿಸಲಾಗದಿದ್ದ ಕಾಲದಲ್ಲಿ ಇರುವ ಒಂದೇ ಒಂದು ಪರಿಹಾರ ಅಂದರೆ ಸಮಸ್ಯೆಯ ಹೆಸರು ಬದಲಾಯಿಸುವುದು.

ದೇಶದಲ್ಲಿ ರೋಗಿಗಳಿಲ್ಲ, ಉತ್ತಮ ಆರೋಗ್ಯದ ಆಕಾಂಕ್ಷಿಗಳಿದ್ದಾರೆ; ದೇಶದಲ್ಲಿ ವೃದ್ಧರಿಲ್ಲ, ಮಾಜಿ ಯುವಕರಿದ್ದಾರೆ; ದೇಶದಲ್ಲಿ ಬಡವರಿಲ್ಲ, ಭವಿಷ್ಯದ ಶ್ರೀಮಂತರಿದ್ದಾರೆ… ಹೀಗೆ ಸಮಸ್ಯೆಗಳನ್ನೆಲ್ಲಾ ಮರು ವ್ಯಾಖ್ಯಾನಿಸಿದರೆ ಆಡಳಿತ ಎಂಬುದು ಒಂದು ಸರಳ ಸಹಜ ಯೋಗ ಆಗಿಬಿಡುತ್ತದೆ. ಒಂಥರಾ ‘ಆಹಾ...’ ಅನುಭವ ಸೃಷ್ಟಿಸುತ್ತದೆ. ಎಲ್ಲಾ ದಿನಗಳು ಒಳ್ಳೆಯ ದಿನಗಳೇ ಆಗುತ್ತವೆ.

ಉದ್ಯೋಗ ಮತ್ತು ನಿರುದ್ಯೋಗದ ಬಗ್ಗೆ ಹೇಳುವಾಗ ಒಂದು ವಿಚಾರವನ್ನು ಒಪ್ಪಿಕೊಳ್ಳಬೇಕು. ಯಾವ ಕಾಲದಲ್ಲೂ, ಯಾವುದೇ ಪಕ್ಷದ ಆಡಳಿತದ ಕಾಲದಲ್ಲೂ ದೇಶದಲ್ಲಿ ನಿರುದ್ಯೋಗ ಇರಲಿಲ್ಲ ಎನ್ನುವ ಪರಿಸ್ಥಿತಿಯಂತೂ ಇರಲಿಲ್ಲ. ನಿರುದ್ಯೋಗ ಏರುವುದು– ಇಳಿಯುವುದು ಎಲ್ಲ ಕಾಲದಲ್ಲೂ ಆಗಿದೆ. ಹಾಗಾದರೆ ಈಗ ಯಾಕೆ ಈ ಹಾಹಾಕಾರ? ಬಹುಶಃ ಬಿಜೆಪಿಗೀಗ ‘ಆಡದೆಲೇ ಮಾಡುವನು ರೂಢಿಯೊಳಗುತ್ತಮನು’ ಎನ್ನುವ ಸರ್ವಜ್ಞ ವಚನ ಚೆನ್ನಾಗಿ ಮನದಟ್ಟಾಗುತ್ತಿರಬೇಕು. ಬಿಜೆಪಿಯ 2014ರ ಚುನಾವಣಾ ಪ್ರಣಾಳಿಕೆಯನ್ನೊಮ್ಮೆ ಓದಬೇಕು.

ಅದು ಹೇಳುತ್ತದೆ: ‘ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ಉದ್ಯೋಗ ರಹಿತ ಬೆಳವಣಿಗೆ ದೇಶವನ್ನು ಕಂಗೆಡಿಸಿದೆ. ಬಿಜೆಪಿಯ ಮೊದಲ ಆದ್ಯತೆ ಸಮಗ್ರ ಆರ್ಥಿಕ ಪುನರುಜ್ಜೀವನ ಮತ್ತು ಅದರ ಅಂಗವಾಗಿ ನಿರುದ್ಯೋಗ ಕಡಿತಗೊಳಿಸುವುದು. ಅಷ್ಟೇ ಆದ್ಯತೆಯನ್ನು ಬಿಜೆಪಿ ಉದ್ಯಮಶೀಲತೆಯ ವಿಕಸನಕ್ಕೆ ಪೂರಕವಾದ ಪರಿಸರ ನಿರ್ಮಾಣಕ್ಕೂ ನೀಡಲಿದೆ’. ಇದಕ್ಕೆ ಪೂರಕವಾಗಿ ಬಿಜೆಪಿಯ ಅತ್ಯುನ್ನತ ನಾಯಕರು ಹೋದಲ್ಲಿ ಬಂದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ‘ಅಧಿಕಾರಕ್ಕೆ ಬಂದರೆ ಒಂದು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ’ ಎಂದರು.

ಹಾಗೆ ನಿರುದ್ಯೋಗ ಕಡಿತಗೊಳಿಸಲು ಹೊರಟ ಪಕ್ಷದ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ನಿರುದ್ಯೋಗದ ಕಡಿತವಾಗಿಲ್ಲ; ಉದ್ಯೋಗದ ಕಡಿತವಾಗಿದೆ. ಹಾಗಂತ ಉದ್ಯೋಗ ಹೆಚ್ಚಿಸಲು ಕೇಂದ್ರ ಸರ್ಕಾರ ಏನೂ ಮಾಡಿಲ್ಲ ಅಂತ ಅಲ್ಲ. ಅದು ಏನೇನೋ ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಆದರೂ ಉದ್ಯೋಗ ಪ್ರಮಾಣ ಏರುತ್ತಿಲ್ಲ, ನಿರುದ್ಯೋಗ ಪ್ರಮಾಣ ಇಳಿಯುತ್ತಿಲ್ಲ.

ಕೇಂದ್ರ ಸರ್ಕಾರ ಲೋಕ ಸಭೆಯಲ್ಲಿ ಮಂಡಿಸಿದ ಮಾಹಿತಿಯ ಪ್ರಕಾರ (2017ರ ಫೆ. 6) ನಿರುದ್ಯೋಗದ ಪ್ರಮಾಣ 2013-14 ರಲ್ಲಿ ಶೇಕಡ 3.4 ರಷ್ಟು ಇದ್ದದ್ದು 2015-16ರ ವೇಳೆಗೆ ಶೇ 3.7 ಕ್ಕೆ ಏರಿದೆ. ಇದು ಸಾಲದು ಎಂಬಂತೆ 2016-17ರ ಆರ್ಥಿಕ ಸಮೀಕ್ಷೆ ಇನ್ನೊಂದು ವಿಷಯ ಹೇಳಿತು: ದೇಶದಲ್ಲಿ ಕಾಯಂ ಉದ್ಯೋಗ ಎನ್ನುವ ಪರಿಕಲ್ಪನೆ ದಿನೇ ದಿನೇ ಕಣ್ಮರೆಯಾಗುತ್ತಿದೆ.

ಇನ್ನೇನಿದ್ದರೂ ಗುತ್ತಿಗೆ ಆಧಾರಿತ ಅಥವಾ ಸಾಂದರ್ಭಿಕ ಉದ್ಯೋಗಗಳ ಕಾಲ. ಉದ್ಯೋಗಿಗಳಿಗೆ ಕಾರ್ಮಿಕ ಕಾನೂನಿನ್ವಯ ನೀಡಲೇಬೇಕಾದ ಕನಿಷ್ಠ ಸವಲತ್ತುಗಳಿಂದ ತಪ್ಪಿಸಿಕೊಳ್ಳಲು ಹೆಚ್ಚು ಸಂಖ್ಯೆಯಲ್ಲಿ ಸಾಂದರ್ಭಿಕ ಉದ್ಯೋಗಿಗಳನ್ನು ನೇಮಿಸಲಾಗುತ್ತಿದೆ ಎಂದೂ ಸಮೀಕ್ಷೆ ಹೇಳಿತು. ಆ ನಂತರ ಬಂದ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ವರದಿಯೊಂದು ಪರಿಸ್ಥಿತಿ ಮುಂದಿನ ವರ್ಷವೂ ಸುಧಾರಿಸುವ ಲಕ್ಷಣ ಇಲ್ಲ ಎಂದಿತು.

ಸರ್ಕಾರಿ ಉದ್ಯೋಗಗಳು ಸೇರಿದಂತೆ ಸಂಘಟಿತ ವಲಯದಲ್ಲಿರುವ ಅಲ್ಪ ಸಂಖ್ಯೆಯ ಉದ್ಯೋಗಗಳನ್ನು ಬಿಟ್ಟರೆ ಉಳಿದಂತೆ ಉದ್ಯೋಗ-ನಿರುದ್ಯೋಗದ ಕತೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಅದು ಅನುಭವಿಸಿ ಮಾತ್ರ ತಿಳಿದುಕೊಳ್ಳಬೇಕಾದ ಸತ್ಯ. ಸರ್ಕಾರ ಸಾಮಾನ್ಯವಾಗಿ ನಿರುದ್ಯೋಗಿಗಳ ಲೆಕ್ಕಾಚಾರಕ್ಕೆ ಬಳಸಿಕೊಳ್ಳುವ ಮಾನದಂಡ ಪ್ರಕಾರ ವರ್ಷಕ್ಕೆ ಮೂವತ್ತು ದಿನ ದುಡಿದವರೆಲ್ಲರೂ ಉದ್ಯೋಗಿಗಳಂತೆ! ಹಾಗಾದರೆ ಯಾರು ಉದ್ಯೋಗಿಗಳು? ಯಾರು ನಿರುದ್ಯೋಗಿಗಳು?

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ವಾಹನ ನಿಲ್ಲಿಸಿದವರ ಹತ್ತಿರ ಬಂದು ಹಣ್ಣುಗಳನ್ನೋ, ಪೆನ್ನುಗಳನ್ನೋ, ಆಟಿಕೆ ಗನ್ನುಗಳನ್ನೋ ಮಾರಲು ಯತ್ನಿಸಿ ವಿಫಲನಾಗುವ ವ್ಯಕ್ತಿ ಉದ್ಯೋಗಿಯೋ ಅಥವಾ ನಿರುದ್ಯೋಗಿಯೋ? ಮನೆಯ ಬಾಗಿಲು ತಟ್ಟಿ ‘ಫಿನಾಯಿಲ್ ಬಾಟಲಿಗಳೋ, ಕಾಶ್ಮೀರಿ ರಗ್ಗುಗಳೋ ಬೇಕಾ ಮೇಡಂ’ ಅಂತ ಕೇಳಿ ಬೈಸಿಕೊಳ್ಳುವ ವ್ಯಕ್ತಿ ಉದ್ಯೋಗಿಯೋ ಅಥವಾ ನಿರುದ್ಯೋಗಿಯೋ?

ದೂರದ ಬಿಹಾರದಿಂದ ಇನ್ನೂ ಮುಖದ ಮೇಲೆ ಮೀಸೆ ಮೂಡುವ ಮೊದಲೇ ಬೆಂಗಳೂರಿಗೆ ಬಂದು ಬೀದಿ ಬೀದಿಗಳಲ್ಲಿ ಪಾನಿಪುರಿ ವ್ಯಾಪಾರ ಕುದುರಿಸಲು ಯತ್ನಿಸುವ ಯುವಕ ಉದ್ಯೋಗಿಯೋ ಅಥವಾ ನಿರುದ್ಯೋಗಿಯೋ?

ಊರು, ಮನೆ, ಹೊಲ ಬಿಟ್ಟು ಇನ್ನೂ ಹಾಲು ನಿಲ್ಲಿಸದ ಮಕ್ಕಳನ್ನು ಬಗಲಿಗೆ ಕಟ್ಟಿಕೊಂಡು ಬಂದು ರಾಜಧಾನಿಗಳಲ್ಲಿ ಏಳುವ ‘ಅಭಿವೃದ್ಧಿ ಸೌಧ’ಗಳಿಗೆ ಬೆವರು ಸುರಿಸುವ ಅನಾಮಧೇಯರು ಉದ್ಯೋಗಿಗಳೋ ಅಥವಾ ನಿರುದ್ಯೋಗಿಗಳೋ?

ರಾಜಕೀಯ ಪಕ್ಷವೊಂದು ಅಧಿಕಾರಕ್ಕೆ ಬರುವ ಭರಾಟೆಯಲ್ಲಿ ‘ನಾವು ಅಧಿಕಾರಕ್ಕೆ ಬಂದರೆ ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ’ ಎಂದು ಹೇಳಿದಾಗ ಮೇಲೆ ಪಟ್ಟಿ ಮಾಡಿದ, ಅತ್ತ ಉದ್ಯೋಗಿಗಳೂ ಅಲ್ಲದ ಇತ್ತ ನಿರುದ್ಯೋಗಿಗಳೂ ಅಲ್ಲದ ಮಂದಿಯ ಕಣ್ಣಲ್ಲಿ ಆಸೆಯ ಹೊಳಪು ಮೂಡುತ್ತದೆ. ಅವರೆಲ್ಲಾ ಒಂದಲ್ಲಾ ಒಂದು ದಿನ ಒಂದಷ್ಟು ಹೆಚ್ಚು ನೆಮ್ಮದಿಯ, ಒಂದಷ್ಟು ಹೆಚ್ಚು ಭದ್ರತೆಯ, ಒಂದಷ್ಟು ಹೆಚ್ಚು ಹೆಚ್ಚು ವರಮಾನ ತರುವ ಕೆಲಸ ದೊರೆಯಬಹುದು ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿರುವವರು. ಪ್ರತಿ ಸಲವೂ ಆಸೆ ಕೈಗೂಡುವುದಿಲ್ಲ ಮಾತ್ರವಲ್ಲ, ಹಿಂದೆ ಇದ್ದ ಭದ್ರತೆಯೂ

ಈಗ ಇಲ್ಲ ಎಂದು ಅವರಿಗೆ ಅನ್ನಿಸಲಾರಂಭಿಸಿದಾಗ ಉಂಟಾಗುವ ನಿರಾಸೆಯನ್ನೂ, ಅಸಹಾಯಕತೆಯನ್ನೂ ಅರ್ಥಶಾಸ್ತ್ರದ ಯಾವ ಮಾದರಿಯೂ ಲೆಕ್ಕ ಹಾಕುವುದಿಲ್ಲ.

ಪ್ರಾಯೋಗಿಕ ಅರ್ಥಶಾಸ್ತ್ರದಲ್ಲಿ ಸುಲಭವಾಗಿ ಯಾರಿಗೂನಿಲುಕದ ವಿಷಯಗಳ ಪೈಕಿ ಉದ್ಯೋಗ ಸೃಷ್ಟಿಯೂ ಒಂದು. ಯಾವುದೇ ಅರ್ಥವ್ಯವಸ್ಥೆಯಲ್ಲಿ ಉದ್ಯೋಗಗಳ ಸೃಷ್ಟಿ ತನ್ನಿಂದ ತಾನೇ ಆಗುತ್ತದೆ. ಅದಕ್ಕೆ ಪೂರಕವಾಗುವ ರೀತಿಯಲ್ಲಿ ಸರ್ಕಾರ ತನ್ನ ಆರ್ಥಿಕ ನೀತಿಗಳನ್ನು ರೂಪಿಸಬೇಕಾಗುತ್ತದೆ. ಕೆಲವೊಮ್ಮೆ ಸರ್ಕಾರ ಸ್ವತಃ ಉದ್ಯೋಗ ಸೃಷ್ಟಿಸುವ ಕಾಯಕಕ್ಕೆ ಮುಂದಾಗಬೇಕಾಗುತ್ತದೆ.

ಇಷ್ಟು ಹೇಳುವುದು ಸುಲಭ. ಆದರೆ ಉದ್ಯೋಗ ಸೃಷ್ಟಿಗೆ ಪೂರಕವಾಗುವ ಪರಿಸರ ಸೃಷ್ಟಿ ಹೇಗೆ, ಎಷ್ಟು, ಏನು ಎನ್ನುವುದಕ್ಕೆ ಸರ್ಕಾರದ ಬಳಿಯಾಗಲೀ, ಅದು ಅವಲಂಬಿಸುವ ತಜ್ಞರ ಬಳಿಯಾಗಲೀ ಸಮರ್ಪಕ ಉತ್ತರ ಅಂತ ಇರುವುದಿಲ್ಲ. ‘ಅವರಿಗೆ ಮಾಡಲಾಗದ್ದನ್ನು ನಾವು ಅಧಿಕಾರಕ್ಕೆ ಬಂದ ಕೂಡಲೇ ಮಾಡಿಬಿಡುತ್ತೇವೆ’ ಎಂದು ಕಾಂಗ್ರೆಸ್ ಆಡಳಿತ ಇದ್ದಾಗ ಬಿಜೆಪಿ ಹೇಳುವುದು, ಬಿಜೆಪಿ ಆಡಳಿತ ಇದ್ದಾಗ ಕಾಂಗ್ರೆಸ್ ಅಥವಾ ಇನ್ಯಾರೋ ಹೇಳುವುದು ಇತ್ಯಾದಿಗಳೆಲ್ಲಾ ಸುಳ್ಳು ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಆದರೂ ಯಾವ ಭರವಸೆಯೂ ಇಲ್ಲದವರಿಗೆ ಸುಳ್ಳುಗಳು ಕೂಡಾ ಒಂದು ರೀತಿಯ ಭರವಸೆಯಾಗಿಬಿಡುತ್ತವೆ.

ಹುಟ್ಟು-ಮರುಹುಟ್ಟುಗಳ ಶೃಂಖಲೆಯಲ್ಲಿ ನಂಬಿಕೆ ಇಟ್ಟುಕೊಂಡಿರುವ ಭಾರತೀಯ ಮನಸ್ಸುಗಳಿಗೆ ಐದು ವರ್ಷಗಳಿಗೊಮ್ಮೆ ಆಸೆಗಳು ಮತ್ತು ಭರವಸೆಗಳು ಹುಟ್ಟು-ಮರುಹುಟ್ಟು ಪಡೆದುಕೊಳ್ಳುವುದರಲ್ಲಿ ಅಸಹಜವೆಂದೇನೂ ಅನ್ನಿಸುವುದಿಲ್ಲ. ಹೋದ ಚುನಾವಣೆಯ ವೇಳೆಗೆ ಹೊಸ ನಾಯಕತ್ವ, ಹೊಸ ಶೈಲಿಯಲ್ಲಿ ಹಳೆಯ ಭರವಸೆ ನೀಡಿದಾಗ ಜನ ಈ ಭರವಸೆ-ನಿರಾಶೆಗಳ ಶೃಂಖಲೆಯಿಂದ ಶಾಶ್ವತ ಮೋಕ್ಷಕಾಣುವ ದಿನ ಬಂದೇ ಬಿಟ್ಟಿತು ಎನ್ನುವಷ್ಟು ಆನಂದತುಂದಿಲರಾಗಿ ಬಿಟ್ಟರು. ಭರವಸೆ ಇಲ್ಲದಲ್ಲಿ ನಿರಾಸೆ ಇರುವುದಿಲ್ಲ.

ಹೆಚ್ಚು ಭರವಸೆ ಇದ್ದಲ್ಲಿ ಹೆಚ್ಚು ನಿರಾಸೆ ಹುಟ್ಟುತ್ತದೆ. ಅದನ್ನೀಗ ನಾವು ನೋಡುತ್ತಿದ್ದೇವೆ. ಜನ ಉದ್ಯೋಗ ಕೊಡಿ ಅಂತ ಕೇಳುತ್ತಿದ್ದಾರೆ. ಕೊಟ್ಟ ಉದ್ಯೋಗದ ಲೆಕ್ಕ ಕೊಡಿ ಅಂತಲೂ ಕೇಳುತ್ತಿದ್ದಾರೆ. ಮಹಾಭಾರತದ ಉದ್ಯೋಗ ಪರ್ವದಲ್ಲಿ ವನವಾಸ ಮುಗಿಸಿದ ಪಾಂಡವರು ‘ರಾಜ್ಯ ಕೊಡಿ ಇಲ್ಲವೇ ಯುದ್ಧಕ್ಕೆ ಸಿದ್ಧರಾಗಿ’ ಎಂದಂತೆ. ಇವೆಲ್ಲಾ ರಾಜಕೀಯಪ್ರೇರಿತ ಇರಬಹುದು. ರಾಜಕೀಯದಲ್ಲಿದ್ದವರು ರಾಜಕೀಯವಾದ ಎಲ್ಲವನ್ನೂ ಎದುರಿಸಬೇಕು ತಾನೆ.

ಅರ್ಥವ್ಯವಸ್ಥೆ ಎನ್ನುವುದು ಮಹಾನ್ ಸಾಗರವಿದ್ದಂತೆ. ಅದರ ಆಳ-ಅಗಲ, ಅದರ ಸುಳಿ-ಒಳಸುಳಿ ಅರ್ಥ ಮಾಡಿಕೊಳ್ಳದೆ ‘ಅಷ್ಟು ಉದ್ಯೋಗ ಸೃಷ್ಟಿಸುತ್ತೇವೆ, ಇಷ್ಟು ಉದ್ಯೋಗ ಸೃಷ್ಟಿಸುತ್ತೇವೆ’ ಎಂದೆಲ್ಲಾ ಭರವಸೆ ನೀಡುವ ಚಾಳಿಗೆ ಇನ್ನಾದರೂ ಕಡಿವಾಣ ಬಿದ್ದರೆ ಒಳ್ಳೆಯದು. ಅದರ ಬದಲಿಗೆ, ಎಷ್ಟು ಸಾಧ್ಯವೋ ಅಷ್ಟನ್ನೇ ಹೇಳುವ, ಹೇಳಿದನ್ನು ಮಾಡುವ, ಸಾಧ್ಯವಾದರೆ ಹೇಳಿದಕ್ಕಿಂತ ಸ್ವಲ್ಪ ಹೆಚ್ಚು ಮಾಡಿ ತೋರಿಸುವ ರಾಜಕೀಯ ಸಂಸ್ಕೃತಿಯೊಂದರ ಅಗತ್ಯವಿದೆ.

ಉದಾಹರಣೆಗೆ ಇಷ್ಟು ಉದ್ಯೋಗ ಸೃಷ್ಟಿಸುತ್ತೇವೆ ಎನ್ನುವ ಕಾಲ್ಪನಿಕ ಅಂಕಿ ಅಂಶಗಳನ್ನು ನೀಡುವ ಬದಲು ಉದ್ಯೋಗ ಸೃಷ್ಟಿಗಾಗಿ ಇಂತಿಂತಹ ಕ್ರಮಗಳನ್ನು ಗ್ರಾಮ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದ ತನಕ ಕೈಗೊಳ್ಳುತ್ತೇವೆ ಎನ್ನುವ ಸ್ಪಷ್ಟ ಯೋಚನೆ, ಯೋಜನೆ ಮುಂದಿಟ್ಟು ಹೇಳಿದಷ್ಟನ್ನು ಪ್ರಾಮಾಣಿಕವಾಗಿ ಮಾಡಿದರೆ ಆಳುವ ಸರ್ಕಾರಗಳು ಮುಜುಗರ ಅನುಭವಿಸುವುದು ತಪ್ಪುತ್ತದೆ.

ಮಾತ್ರವಲ್ಲ ಅಂತಹ ಯೋಜನೆಗಳ ಒಳಿತು-ಕೆಡುಕು, ಸಾಧ್ಯತೆ-ಬಾಧ್ಯತೆಗಳ ಬಗ್ಗೆ ಚುನಾವಣಾ ಸಂದರ್ಭದಲ್ಲಿ ಆರೋಗ್ಯಪೂರ್ಣ ಚರ್ಚೆ ನಡೆಯಲು ಸಾಧ್ಯವಿದೆ. ಒಂದು ವೇಳೆ ಈಗಿನ ಭರವಸೆ-ನಿರಾಸೆಗಳ ಸಂಕಲೆಯೇ ಮುಂದುವರಿದರೆ ಅದು ಸೃಷ್ಟಿಸುವ ಹತಾಶೆ ಒಂದು ದಿನ ಸ್ಫೋಟವಾಗಬಹುದು.

ನಿರುದ್ಯೋಗ ಹಳೆಯ ಸಮಸ್ಯೆ ಇರಬಹುದು. ಆ ಸಮಸ್ಯೆ ಇರುವುದು ಹೊಸ ಭಾರತದಲ್ಲಿ ಎನ್ನುವುದನ್ನು ಮರೆಯಬಾರದು. ಭಾರತದಲ್ಲಿ ಈಗ ಅತೀ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುವ ಪ್ರಾಯದ ಯುವಕರಿದ್ದಾರೆ. ಉದ್ಯೋಗವೂ ಇಲ್ಲದೆ, ಭರವಸೆಯೂ ಇಲ್ಲದೆ ಹೋದರೆ ಈ ಪ್ರಾಯದ ಜನವರ್ಗ ಎಂಥೆಂಥ ಅಪಾಯಗಳನ್ನು ಸೃಷ್ಟಿಸಬಹುದು ಎಂದು ಯೋಚಿಸುವುದು ಕಷ್ಟವೇನಲ್ಲ. ಈ ಅಪಾಯದ ಮುನ್ಸೂಚನೆಗಳು ಈಗಾಗಲೇ ಸ್ಪಷ್ಟವಾಗಿ ಕಾಣಿಸುತ್ತಲೂ ಇವೆ.

ಪ್ರತಿಕ್ರಿಯಿಸಿ (+)