ಸಮಸ್ಯೆಗಳ ಸರಮಾಲೆ

7

ಸಮಸ್ಯೆಗಳ ಸರಮಾಲೆ

ದ್ವಾರಕೀಶ್
Published:
Updated:

ಭಾರ್ಗವ ನಿರ್ದೇಶನದಲ್ಲಿ ನಾನು ಸಿನಿಮಾಗಳನ್ನು ತೆಗೆಯತೊಡಗಿದ ಕಾಲದಲ್ಲಿ ಅವನು ಮದ್ರಾಸ್‌ನಲ್ಲಿದ್ದ. ನಾನು ಬೆಂಗಳೂರಿನಲ್ಲಿದ್ದೆ. ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೊ ಇದ್ದದ್ದು ಮದ್ರಾಸ್‌ನಲ್ಲಿ. ರೆಕಾರ್ಡಿಂಗ್, ರಿರೆಕಾರ್ಡಿಂಗ್, ಮಿಕ್ಸಿಂಗ್ ಕೆಲಸ ಮಾಡುತ್ತಿದ್ದದ್ದು ಅಲ್ಲಿಯೇ. ನನ್ನ ಯಾವುದೇ ಚಿತ್ರಕ್ಕೆ ಹೆಚ್ಚೆಂದರೆ ಎರಡು ದಿನ ರಿರೆಕಾರ್ಡಿಂಗ್ ಮಾಡುತ್ತಿದ್ದೆನಷ್ಟೆ.

 

ಮಿಕ್ಸಿಂಗ್ ಮಾಡಲೂ ಎರಡೇ ದಿನ ಸಾಕಾಗುತ್ತಿತ್ತು. ಚಿತ್ರೀಕರಣ ಪೂರ್ಣಗೊಂಡ ಏಳನೇ ದಿನಕ್ಕೆ ಮೊದಲ ಪ್ರತಿ ಸಿದ್ಧವಾಗುತ್ತಿತ್ತು. ಕೆಲಸದಲ್ಲಿ ನಾನು ಅಷ್ಟು ಪಕ್ಕಾ ರೀತಿಯಲ್ಲಿ ಪಳಗಿದ್ದೆನೋ ಏನೋ?ಆಗ ಶಿವಾಜಿ ಎಂಬ ಪ್ರೊಡಕ್ಷನ್ ಮ್ಯಾನೇಜರ್ ಒಬ್ಬನಿದ್ದ. ಅವನು ಹಳೆಯ ಮ್ಯಾನೇಜರ್. ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನೂ ಮಾಡುತ್ತಿದ್ದ. ನನಗೆ ಆಪ್ತ. ಅವನನ್ನೂ ಸಿಂಗಪೂರ್‌ಗೆ ಕರೆದುಕೊಂಡು ಹೋಗಿದ್ದೆ. ನನ್ನ ಪ್ರತಿ ಸಿನಿಮಾದ ಮಿಕ್ಸಿಂಗ್ ನಡೆಯುವ ಸಂದರ್ಭದಲ್ಲಿ ಅವನು ಮನೆಯಿಂದ ಬಿರಿಯಾನಿ ಮಾಡಿಸಿಕೊಂಡು ತರುತ್ತಿದ್ದ. ರಾಮನಾಥ್ ಎಂಬ ಎಂಜಿನಿಯರ್, ಪಾಂಡು ಎಂಬ ಸಹಾಯಕ ಎಂಜಿನಿಯರ್ ಕೂಡ ಅಲ್ಲಿದ್ದರು.ಅವರೆಲ್ಲಾ ನನ್ನ ಕುಟುಂಬದ ಸದಸ್ಯರಂತಾಗಿದ್ದರು. ರಾಜ್‌ಕುಮಾರ್ ಸಿನಿಮಾಗಳ ಬಹುತೇಕ ಹಾಡುಗಳು ಆಗ ರೆಕಾರ್ಡ್ ಆಗುತ್ತಿದ್ದುದು ಪ್ರಸಾದ್ ಸ್ಟುಡಿಯೋದಲ್ಲಿಯೇ. ಅಲ್ಲಿ ಚಿ.ಉದಯಶಂಕರ್ ನನಗೆ ಬೇಕಾದಷ್ಟು ಕಥೆಗಳನ್ನು ಹೇಳಿದ್ದಾನೆ. ಹಾಗಾಗಿ ಅದಕ್ಕೂ ನನಗೂ ಬಿಡಿಸಲಾಗದ ನಂಟು.ನೆಗೆಟಿವ್‌ಗಳನ್ನು ಹಾಕಿ, ಕಲರ್‌ಗೆ ಪ್ರಿಂಟ್ ಪರಿವರ್ತಿಸುವ `ಅನಲೈಸರ್~ ಬಳಸಲು ಆ ಕಾಲದಲ್ಲಿ ಬಹಳ ಮುಂಚೆಯೇ ಬುಕ್ ಮಾಡಬೇಕಿತ್ತು. ನಾನು ಎಷ್ಟೋ ಸಂದರ್ಭಗಳಲ್ಲಿ ಸಿನಿಮಾ ಮುಹೂರ್ತದ ದಿನವೇ `ಅನಲೈಸರ್~ ಬುಕ್ ಮಾಡುತ್ತಿದ್ದೆ. ಮೂರು ತಿಂಗಳು ಮುಂಚಿತವಾಗಿ ನಾನು ಬುಕ್ ಮಾಡಿರುತ್ತಿದ್ದುದನ್ನು ಕಂಡು ಅನೇಕರು ಚಕಿತರಾಗುತ್ತಿದ್ದರು.ತಮ್ಮ ಚಿತ್ರಗಳಿಗೆ ನಾನು ಬುಕ್ ಮಾಡಿದ ದಿನ ಅದನ್ನು ಬಳಸಬೇಕಾದಾಗ ನನ್ನ ಅನುಮತಿ ಕೇಳುತ್ತಿದ್ದರು. ಪ್ರಸಾದ್ ಸ್ಟುಡಿಯೋದ ರಮೇಶ್ ಪ್ರಸಾದ್ ನನಗೆ ಪರಮಾಪ್ತನಾಗಿದ್ದ. ಅವನು ನಮ್ಮ ಮನೆಗೆ ಪದೇಪದೇ ಬರುತ್ತಿದ್ದ. ಅವನಲ್ಲದೆ ರೋಜಾ ಮೂವೀಸ್‌ನ ಕುಮಾರ್ ಕೂಡ ಆಪ್ತರ ಪಟ್ಟಿಗೆ ಸೇರಿದವನು. ನಾವೆಲ್ಲಾ ನಿರಂತರವಾಗಿ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿದ್ದೆವು.

*

`ಪೆದ್ದ ಗೆದ್ದ~ ಚಿತ್ರದವರೆಗೆ ನನ್ನದೇ ಜಮಾನ. ಆಮೇಲೆ ನಾನು `ರಾಮಾಯಣಮುಲೋ ಪಿಡಕಲ ವೇಟ~ ಎಂಬ ಸಿನಿಮಾವನ್ನು ಮದ್ರಾಸ್‌ನಲ್ಲಿ ನೋಡಿದೆ. ರಾಜಾಚಂದ್ರ ನಿರ್ದೇಶಿಸಿದ ಚಿತ್ರವದು. ಅವನನ್ನು ಕರೆದುಕೊಂಡು ಬಂದು, `ಮನೆ ಮನೆ ಕಥೆ~ ಮಾಡಿಸಿದೆ.

ನಾನು ಜಯಚಿತ್ರಾ ಜೊತೆ ನಟಿಸಿದಾಗಿನಿಂದಲೂ ವಿಷ್ಣು ತನ್ನ ಒಂದು ಬಯಕೆಯನ್ನು ಹೇಳಿಕೊಳ್ಳುತ್ತಲೇ ಇದ್ದ. ಅವನಿಗೂ ಆ ನಟಿಯ ಜೊತೆ ಅಭಿನಯಿಸುವ ಆಸೆ. ಅವನ ಆಸೆ ಈಡೇರಿಸಲೆಂದೇ ಜಯಚಿತ್ರಾ ಅವರನ್ನು ಒಪ್ಪಿಸಿ `ಮನೆ ಮನೆ ಕಥೆ~ ಚಿತ್ರಕ್ಕೆ ಕರೆತಂದೆ. `ರಾಮಾಯಣಮುಲೋ ಪಿಡಕಲ ವೇಟ~ ಚಿತ್ರ `ಮನೆ ಮನೆ ಕಥೆ~ಯಾಗಿ ತೆರೆಗೆ ಬಂತು.ಒಂದು ಕಡೆ ನನ್ನ ಬೆಳವಣಿಗೆ. ವಿಷ್ಣು ಹಾಗೂ ನನ್ನ ಕಾಂಬಿನೇಷನ್ ಗೆಲುವು. ಇವನ್ನೆಲ್ಲಾ ನಮ್ಮ ಚಿತ್ರೋದ್ಯಮದವರೇ ಸಹಿಸಲಿಲ್ಲ. ಅನೇಕರು ಅಸೂಯೆ ಪಡಲಾರಂಭಿಸಿದರು.`ಗುರು ಶಿಷ್ಯರು~ ಚಿತ್ರೀಕರಣದ ಸಂದರ್ಭದಲ್ಲಿ ಕಂಠೀರವ ಸ್ಟುಡಿಯೋಗೆ ಬಂದು ಕೆಲವರು ಏನೇನೋ ಕೂಗಿ, ಸಹನೆ ಪರೀಕ್ಷೆ ಮಾಡಿದರು. ಸಿಕ್ಕಸಿಕ್ಕಲ್ಲಿ ಅಡ್ಡಗಟ್ಟಿ, `ಅವರಿಗೆ ಜೈ ಹೇಳಿ ಇವರಿಗೆ ಜೈ ಹೇಳಿ~ ಎಂದು ಕಿಚಾಯಿಸಿದರು. ನಾನು ಅದ್ಯಾವುದಕ್ಕೂ ಜಗ್ಗದೆ ನನ್ನ ಪಾಡಿಗೆ ನಾನು ಚಿತ್ರೀಕರಣದಲ್ಲಿ ತೊಡಗಿಕೊಂಡೆ.`ಗುರು ಶಿಷ್ಯರು~ ತೆರೆಗೆ ಬಂದು, ಯಶಸ್ವಿಯಾಯಿತು. ನೂರು ದಿನ ಓಡಿತು. ಬೆಂಗಳೂರಿನ `ಸಂಗಂ~ ಚಿತ್ರಮಂದಿರದಲ್ಲಿ ಆ ಚಿತ್ರ ನೂರು ದಿನ ಪೂರೈಸಿದ ಸಮಾರಂಭ ಏರ್ಪಡಿಸಿದೆವು. ಆಗ ಮುಖ್ಯಮಂತ್ರಿಯಾಗಿದ್ದ ಗುಂಡೂರಾಯರನ್ನು ಮುಖ್ಯ ಅತಿಥಿಯಾಗಿ ಕರೆದೆವು. ಅವರಿಗೆ ನಾನು, ವಿಷ್ಣುವರ್ಧನ್ ಎಂದರೆ ತುಂಬಾ ಪ್ರೀತಿ. ಒಪ್ಪಿಕೊಂಡು ಬಂದಿದ್ದರು. ಅಲ್ಲಿ ಜನವೋ ಜನ. ಎಂಟ್ಹತ್ತು ಪೊಲೀಸ್ ವ್ಯಾನ್‌ಗಳು ಬಂದಿದ್ದವು. ಜನ ಎಲ್ಲಿ ಗಲಾಟೆ ಮಾಡಿಯಾರೋ ಎಂಬ ಆತಂಕ. ನಾನು, ವಿಷ್ಣು ಖುದ್ದು ಓಲಗ ಊದಿ ಅವರನ್ನು ಸ್ವಾಗತಿಸಿದೆವು. ನಮಗದು ಸಂತೋಷ ನೀಡುವ, ಹಾಸ್ಯ ಬೆರೆತ ಸಂದರ್ಭವಾಗಿತ್ತಷ್ಟೇ. ಆದರೆ, ಕೆಲವರು ನಾವಿಬ್ಬರೂ ಮುಖ್ಯಮಂತ್ರಿಗಳಿಗೆ ಬೆಣ್ಣೆ ಹಚ್ಚುತ್ತಿದ್ದೇವೆ ಎಂಬಂತೆ ಮಾತನಾಡಿದರು. ಕೆಲವು ಮಾಧ್ಯಮದಲ್ಲಿ ಅಂಥ ವರದಿಗಳೂ ಪ್ರಕಟವಾದವು.ಆ ಸಮಾರಂಭ ನಡೆಯುವ ಜಾಗಕ್ಕೆ ಕಾರ್ತಿಕೇಯನ್ ದಿಢೀರನೆ ಬಂದರು. ರಾಜೀವ್‌ಗಾಂಧಿ ಹತ್ಯೆ ಪ್ರಕರಣ ಪತ್ತೆ ಮಾಡಿದ ತಂಡದಲ್ಲಿದ್ದ ಇಂಟೆಲಿಜೆನ್ಸ್ ಅಧಿಕಾರಿ ಅವರು. ಆಗ ಗುಂಡೂರಾಯರಿಗೆ ವಿಶೇಷ ಅಧಿಕಾರಿಯಾಗಿದ್ದರು. ಅವರು ಓಡೋಡಿ ಬಂದು, `ದ್ವಾರಕೀಶ್, ಸಮಾರಂಭವನ್ನು ನಿಲ್ಲಿಸಿ~ ಎಂದು ಆತಂಕದ ದನಿಯಲ್ಲಿ ಹೇಳಿದರು. `ಒಂದು ಫೋನ್ ಬಂದಿದೆ, ಯಾರೋ ಬಾಂಬ್ ಇಟ್ಟಿದ್ದಾರಂತೆ~ ಎಂದಾಗ ನನ್ನೆದೆಯ ಡವಡವ ಹೆಚ್ಚಾಯಿತು. ಗುಂಡೂರಾಯರಿಗೂ ವಿಷಯ ಮುಟ್ಟಿತು. ಅವರೆಲ್ಲಿ ಸಮಾರಂಭದಿಂದ ಹೊರನಡೆಯುತ್ತಾರೋ ಎಂದು ನಾನು ಆತಂಕಗೊಂಡೆ. ಆದರೆ, ಅವರು ನಿರ್ಭೀತರಾಗಿ ಮಾತನಾಡಿದರು. `ರಾಜಕೀಯದಲ್ಲಿ ಮಾತ್ರ ಕಾಲೆಳೆಯುವವರು ಇರುತ್ತಾರೆ ಎಂದುಕೊಂಡಿದ್ದೆ. ಸಿನಿಮಾರಂಗದಲ್ಲೂ ಅಂಥವರಿದ್ದಾರೆ ಎಂದಾಯಿತು. ಒಂದು ಸಿನಿಮಾ ನೂರು ದಿನ ಓಡಿದರೆ ಎಲ್ಲರೂ ಸಂತೋಷ ಪಡಬೇಕು. ಅದು ಬಿಟ್ಟು ಬಾಂಬ್ ಇಟ್ಟಿದ್ದೇವೆ ಎಂದು ಹೆದರಿಸುವುದು ಬೇಸರದ ಸಂಗತಿ. ಎದುರಿಗೆ ಬಂದು ಮಾತನಾಡುವವನು ಧೈರ್ಯಶಾಲಿ. ಅದು ಬಿಟ್ಟು, ಫೋನ್‌ನಲ್ಲಿ ಬೆದರಿಕೆ ಹಾಕುವುದು ಹೇಡಿಗಳ ಲಕ್ಷಣ. ನಾವೆಲ್ಲಾ ಹೆದರುವ ಅಗತ್ಯವಿಲ್ಲ. ಸತ್ತರೆ ಎಲ್ಲರೂ ಒಟ್ಟಾಗಿ ಸಾಯೋಣ~ ಎಂದು ಭಾಷಣ ಮಾಡಿದರು. ಆ ಸಂದರ್ಭ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ. ಅವರ ಮಾತುಗಳನ್ನು ಕೇಳಿ ನನ್ನ ಆತಂಕ ದೂರವಾಯಿತು.`ಮನೆ ಮನೆ ಕಥೆ~ ಮುಗಿದ ಮೇಲೆ ಮತ್ತೆ ಸಮಸ್ಯೆಗಳ ಸರಮಾಲೆ. ನನ್ನ ಮನೆಯ ಎದುರು ಕುರಿ, ಕೋಳಿ ಮಾಂಸ ತಂದುಹಾಕುತ್ತಿದ್ದರು. ಮೊಟ್ಟೆಗಳನ್ನು ಒಡೆಯುತ್ತಿದ್ದರು. ಮಾಟ ಮಾಡಿಸಿದ ಯಾವ್ಯಾವುದೋ ವಸ್ತುಗಳನ್ನು ತಂದು ಹಾಕುತ್ತಿದ್ದರು. ರಾತ್ರೋ ರಾತ್ರಿ ಫೋನ್ ಮಾಡಿ, ನನ್ನ ಮಕ್ಕಳನ್ನು ಅಪಹರಿಸುವುದಾಗಿ ಬೆದರಿಸುತ್ತಿದ್ದರು. ನೆಮ್ಮದಿಯಿಂದ ನಿದ್ದೆ ಮಾಡುವುದೂ ಕಷ್ಟ ಎಂಬ ವಾತಾವರಣ ಸೃಷ್ಟಿಸಿದರು. ನನ್ನ, ವಿಷ್ಣು ಜಾತಿಯನ್ನೇ ಹಿಡಿದು ಇಲ್ಲಸಲ್ಲದ ಆರೋಪಗಳನ್ನು ಮಾಡಿದರು. ಸಿನಿಮಾಗಳ ಮೂಲಕ ಸ್ಪರ್ಧೆ ಒಡ್ಡದೆ ಹೀಗೆ ಬೆನ್ನಹಿಂದೆ ಪಿತೂರಿ ಮಾಡುವ ದೊಡ್ಡ ವರ್ಗವೇ ಚಿತ್ರೋದ್ಯಮದಲ್ಲಿದೆ ಎಂಬುದು ನನಗೆ ಸ್ಪಷ್ಟವಾಯಿತು.ಅಷ್ಟಾದ ಮೇಲೂ ಸಿನಿಮಾ ಮಾಡುವುದನ್ನು ನಾನು ನಿಲ್ಲಿಸಲಿಲ್ಲ. ರಾಜಾಚಂದ್ರನನ್ನು ಮತ್ತೆ ಕರೆದುಕೊಂಡು ಬಂದೆ. `ಅದೃಷ್ಟವಂತ~ ಸಿನಿಮಾ ಮಾಡಿದೆ. ರಾಜ್‌ಕುಮಾರ್ ಜೊತೆ ನಟಿಸಿದ್ದ ಸುಲೋಚನ ಅವರನ್ನು ಆ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದೆ. ಆ ಸಿನಿಮಾ ಚಿತ್ರೀಕರಣ ಪ್ರಾರಂಭವಾದ ಮೇಲೆ ಕಾಟ ಕೊಡುವವರು ಬೀದಿಗಿಳಿದರು. ಕಾರಿನಲ್ಲಿ ಸಾಗುವಾಗ ಅಡ್ಡಗಟ್ಟಿ ನಿಲ್ಲಿಸಿ, ಕೆಳಗಿಳಿಯುವಂತೆ ಒತ್ತಡ ಹೇರುತ್ತಿದ್ದರು. ಕೆಳಗಿಳಿದರೆ, `ಅವರಿಗೆ ಜೈ ಎನ್ನಿ ಇವರಿಗೆ ಜೈ ಎನ್ನಿ~ ಎಂದು ಗೋಳುಹೊಯ್ದುಕೊಳ್ಳುತ್ತಿದ್ದರು. ನನಗಷ್ಟೇ ಅಲ್ಲ, ವಿಷ್ಣುವರ್ಧನ್‌ಗೂ ಇದೇ ಪರಿಸ್ಥಿತಿ ಎದುರಾಯಿತು. ಮೈಸೂರಿನಲ್ಲಿ ಚಿತ್ರೀಕರಣ ಮಾಡುವಾಗ ಪ್ರೀಮಿಯರ್ ಸ್ಟುಡಿಯೋಗಳಲ್ಲೂ ಗಲಾಟೆಗಳು ಪ್ರಾರಂಭವಾದವು. ಬೆಳಿಗ್ಗೆ ನಮ್ಮ ಬಳಿಗೆ ಅಭಿಮಾನಿಗಳಂತೆ ಬಂದು ವಿಚಿತ್ರವಾಗಿ ಮಾತನಾಡಿಸುತ್ತಿದ್ದ ಅನೇಕರು ರಾತ್ರಿ ಫೋನ್ ಮಾಡಿ, ಬಾಯಿಗೆ ಬಂದಂತೆ ಬೈಯುತ್ತಿದ್ದರು. ನಮ್ಮ ಪಾಡಿಗೆ ಸಿನಿಮಾ ಮಾಡಲು ಬಿಡದೆ ಹೀಗೆ ವಿನಾ ಕಾರಣ ತೊಂದರೆ ನೀಡುವವರ ಕಾಟ ಅತಿಯಾಯಿತು.ರಾತ್ರಿ ಹೊತ್ತು ಫೋನ್ ರಿಂಗ್ ಆದರೆ ಮನೆಯಲ್ಲಿರುವವರಿಗೆಲ್ಲಾ ಭಯವಾಗುತ್ತಿತ್ತು. ಇನ್ನು ಬೆಂಗಳೂರಿನಲ್ಲಿ ಇರುವುದು ಕಷ್ಟ ಎಂದು ನನ್ನ ಮನಸ್ಸು ಹೇಳತೊಡಗಿತು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry