ಮಂಗಳವಾರ, ಮೇ 18, 2021
22 °C

ಸಮೃದ್ಧ ಬಾಲ್ಯ;ಖುಷಿ ದಿನಗಳು

ಶಂಕರ ಬಿದರಿ Updated:

ಅಕ್ಷರ ಗಾತ್ರ : | |

ನ್ನ ಸ್ವಂತ ಊರು ಬನಹಟ್ಟಿ. ಇದು ಜಮಖಂಡಿ ತಾಲ್ಲೂಕಿನ ಒಂದು ಗ್ರಾಮ. ಮೊದಲು ವಿಜಾಪುರ ಜಿಲ್ಲೆಯಲ್ಲಿತ್ತು. ಈಗ ಬಾಗಲಕೋಟೆ ಜಿಲ್ಲೆಗೆ ಸೇರಿದೆ. ಮೊದಲಿನಿಂದಲೂ ಒಕ್ಕಲುತನ, ವ್ಯಾಪಾರ ಮಾಡುತ್ತಿದ್ದ ಕುಟುಂಬ ನಮ್ಮದು. ನೇಕಾರಿಕೆ ನಮ್ಮ ಊರಿನಲ್ಲಿ ದೊಡ್ಡ ಉದ್ಯೋಗ. ಎಲ್ಲಾ ಸಮಾಜದವರೂ ಸಾಮಾನ್ಯವಾಗಿ ನೇಕಾರಿಕೆಯನ್ನೇ ಅವಲಂಬಿಸಿದ್ದರು. ನಾವೂ ಅದನ್ನು ಐವತ್ತು ಅರವತ್ತು ವರ್ಷಗಳಿಂದ ಪ್ರಾರಂಭ ಮಾಡಿದ್ದೆವು. ಹನ್ನೆರಡು ಎಕರೆ ತೋಟ, ಹದಿನೆಂಟು ಎಕರೆ ಒಣ ಬೇಸಾಯದ ಜಮೀನು ಇತ್ತು.

ಭೂಸುಧಾರಣೆ ಕಾಯ್ದೆ ಬಂದಾಗ ಹೊಲ ಮಾಡಲು ಯಾರಿಗೆ ಕೊಟ್ಟಿದ್ದೆವೋ, ಒಣಭೂಮಿ ಅವರಿಗೇ ಹೋಯಿತು. ನಮ್ಮ ತಂದೆಯ ತಂದೆ ಅಂದರೆ ತಾತ ಮಹಾಲಿಂಗಪ್ಪ ಬಿದರಿ. ಅವರ ಅಣ್ಣ ಬಸಲಿಂಗಪ್ಪ ಬಿದರಿ. ಅವರು ಎರಡನೇ ಮಹಾಯುದ್ಧದ ಕಾಲದಲ್ಲಿ ಬಹಳ ಚೆನ್ನಾಗಿ ವ್ಯಾಪಾರ ಮಾಡಿ ಸಾಕಷ್ಟು ಆಸ್ತಿಪಾಸ್ತಿ ಮಾಡಿದ್ದರು. ಜೋಳ, ಬೆಲ್ಲ, ಸಕ್ಕರೆ ಮೊದಲಾದವನ್ನು ಮಾರುವ ಅಂಗಡಿ ಇಟ್ಟು ಆರ್ಥಿಕವಾಗಿ ಮೇಲೆ ಬಂದಿದ್ದರು. ದೊಡ್ಡ ಮನೆ ಕಟ್ಟಿಸಿದ್ದರು. ಕೆಲವು ಅಂಗಡಿಗಳನ್ನು ಖರೀದಿಸಿ, ಆ ಕಾಲದಲ್ಲಿ ವರ್ಷಕ್ಕೆ 120ರಿಂದ 200 ರೂಪಾಯಿಗೆ ಬಾಡಿಗೆಗೆ ಕೊಟ್ಟಿದ್ದರು.ತಾತನ ಕಾಲದಲ್ಲಿ ಇದ್ದದ್ದು ಮೂರೇ ತೋಟಗಳು. ತೋಟ ಅಂದರೆ ಕಪಿಲೆ ಬಾವಿ ಇರುತ್ತಿತ್ತು. ಗೌಡರದ್ದು ಒಂದು, ಜಮಖಂಡಿ ಮಹಾರಾಜರದ್ದು ಇನ್ನೊಂದು. ಅದು ಬಿಟ್ಟರೆ ಇದ್ದದ್ದು ನಮ್ಮ ತಾತನ ತೋಟ ಅಷ್ಟೆ. ಅದರ ನೀರನ್ನು ಒಂದೆರಡು ಎಕರೆಗೆ ಹಾಯಿಸಲು ಆಗುತ್ತಿರಲಿಲ್ಲ. ಯಾಕೆಂದರೆ, ಆ ಜಾಗ ಎತ್ತರದಲ್ಲಿತ್ತು. ಉಳಿದ ಹತ್ತು ಎಕರೆ ತೋಟಕ್ಕೆ ಆ ನೀರು ಹಾಯಿಸಲಾಗುತ್ತಿತ್ತು. ಘಟಪ್ರಭಾಗೆ ಹಿಡಕಲ್ ಅಣೆಕಟ್ಟು ಕಟ್ಟಿದ ನಂತರ ನಮ್ಮೂರಿನ ಶುಷ್ಕಭೂಮಿಗೆ ನೀರಾವರಿ ಬಂತೆನ್ನಿ.ಮನೆಗೆ ಬೇಕಾದ ಜೋಳ, ಗೋಧಿ, ಕಾಯಿಪಲ್ಲೆ, ಗೋವಿನ ಜೋಳ, ಕಡಲೆ ಎಲ್ಲವನ್ನೂ ತೋಟದಲ್ಲೇ ಬೆಳೆಯುತ್ತಿದ್ದೆವು. ಎಮ್ಮೆ, ಹಸುಗಳನ್ನು ಸಾಕಿದ್ದೆವು. ಅವು ಚೆನ್ನಾಗಿ ಹಾಲು ಕೊಡುತ್ತವೆ ಎಂದು ಬೆಳೆದಿದ್ದ ಗಜ್ಜರಿ, ಅವರೆಯನ್ನು ಅವುಗಳಿಗೆ ಹಾಕುತ್ತಿದ್ದರು. ಮನೆಗೆ ಅಗತ್ಯವಿದ್ದ ಹೀರೇಕಾಯಿ, ಪಡುವಲಕಾಯಿ, ಬದನೇಕಾಯಿ, ಕಡಲೇಕಾಳು ಎಲ್ಲ ತೋಟದಿಂದಲೇ ಬರುತ್ತಿದ್ದವು. ಕುಸುಮಿ (ಕುಸುಂಬೆ) ಹೂವನ್ನು ಬೆಳೆದು, ಅದರಿಂದ ವರ್ಷಕ್ಕೆ ಬೇಕಾಗುವಷ್ಟು ಎಣ್ಣೆ ತಯಾರಿಸಿ ಇಡುತ್ತಿದ್ದರು.ತಾತನ ಬಳಿ ಹರ್ಕ್ಯುಲಸ್ ಸೈಕಲ್ ಇತ್ತು. ಅದರ ಗೀಳು ಅವರಿಗೆ. ಎಲ್ಲಿ ಸೈಕಲ್ ರೇಸ್ ಇದ್ದರೂ ತಪ್ಪದೇ ಹೋಗುತ್ತಿದ್ದರು. ಗೆದ್ದರೆ ಬೆಳ್ಳಿ ಕಪ್ ಸಿಗುತ್ತಿತ್ತು. ಅಂಥ ಹಲವು ಬೆಳ್ಳಿ ಕಪ್‌ಗಳನ್ನು ಅವರು ಗೆದ್ದು ತಂದು ಮನೆಯಲ್ಲಿ ಜೋಡಿಸಿದ್ದರು. 1938ರಲ್ಲಿ ಅವರು ದೊಡ್ಡ ರೇಸ್‌ನಲ್ಲಿ ಗೆದ್ದು ಕೀರ್ತಿ ಗಳಿಸಿದ್ದರು.ನನ್ನ ತಂದೆ, ದೊಡ್ಡಪ್ಪ ತಾತನಂತೆ ಅಲ್ಲ. ಕೃಷಿಯಲ್ಲಿ ಹೆಚ್ಚು ಆಸಕ್ತಿ ವಹಿಸಲಿಲ್ಲ. 1955-56ರಲ್ಲಿ ಸೋಮನಾಥ ನೇಕಾರರ ಸಹಕಾರ ಸಂಘದಲ್ಲಿ ತಂದೆ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಆ ಕಾಲದಲ್ಲಿ 80 ರೂಪಾಯಿ ಪಗಾರ ಸಿಗುತ್ತಿತ್ತು. ತಾಯಿಗೆ ದೈವಭಕ್ತಿ. ನವಕಲ್ಯಾಣ ಮಠದ ಕುಮಾರಸ್ವಾಮಿಗಳು ಅಂತ ಆಗ ಇದ್ದರು. ಈಗ ಅವರು ಐಕ್ಯವಾಗಿದ್ದಾರೆ. ಅವರು ಪ್ರಾರ್ಥನಾ ಯೋಗ ಹೇಳಿಕೊಡುತ್ತಿದ್ದರು. ನಮ್ಮ ಊರಲ್ಲಿ ಆಗಾಗ ಅವರ ಪ್ರವಚನ ನಡೆಯುತ್ತಿತ್ತು. ನಾನೂ ತಾಯಿಯ ಜೊತೆ ಹೋಗಿ, ಅವರ ಪ್ರವಚನ ಕೇಳುತ್ತಿದ್ದೆ. ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯರು ಪ್ರತಿವರ್ಷ ನಮ್ಮ ಮನೆಗೆ ಬಂದು ಪೂಜೆ ಮಾಡುತ್ತಿದ್ದರು. ಬಹಳ ಚೆನ್ನಾಗಿರುತ್ತಿತ್ತು ಅವರ ಪೂಜೆ. ನಾವೆಲ್ಲಾ ಆಸಕ್ತಿಯಿಂದ ನೋಡುತ್ತಿದ್ದೆವು.

ಪೂಜೆ ಆದ ಮೇಲೆ ತೀರ್ಥ, ಪ್ರಸಾದ, ಸೊಗಸಾದ ಊಟ, ಆಶೀರ್ವಾದ ಸಿಗುತ್ತಿತ್ತು. ಬಾಳೆಹೊನ್ನೂರು ಮಠ, ರಂಭಾಪುರಿಯ ವೀರ ಗಂಗಾಧರ ಮಹಾಸ್ವಾಮಿ ಬರುತ್ತಿದ್ದರು. ನಮ್ಮೂರಿನ ಪ್ರತಿ ಮನೆಯಿಂದ ಎಂಟಾಣೆ, ಒಂದು ರೂಪಾಯಿ, ಎರಡು ರೂಪಾಯಿ ಪಾವಲಿ ಪಡೆದು ಪಟ್ಟಿ ಮಾಡಿ, ಕೃಷ್ಣಾ ನದಿ ದಂಡೆಯ ಮೇಲೆ ಪ್ರವಚನ ಮಾಡುತ್ತಿದ್ದರು. ಪ್ರವಚನ ಮುಗಿದ ಮೇಲೆ ಎಲ್ಲರಿಗೂ ಊಟ. ಶ್ರಾವಣ ತಿಂಗಳಲ್ಲಿ ದೇವಸ್ಥಾನದಲ್ಲಿ ಪುರಾಣ ಪಠಣ ನಡೆಯುತ್ತಿತ್ತು.ಧಾರ್ಮಿಕ ಪ್ರಜ್ಞೆ ಜೋರಾಗಿದ್ದ ಊರು ನನ್ನದು. ಅಲ್ಲಿ ಮಕ್ಕಳಿಗೆ ಹಾಲು, ಮಜ್ಜಿಗೆ ಕೊಡುತ್ತಿದ್ದರು. ಹುರುಳಿ ಅಂಬಲಿ ಇನ್ನೊಂದು ರುಚಿಕಟ್ಟಾದ ಪೇಯ. ಹುರುಳಿಯನ್ನು ಹುರಿದು, ಪುಡಿ ಮಾಡಿ, ಅದಕ್ಕೆ ಬೆಲ್ಲ ಸೇರಿಸಿ ಅದರಿಂದ ಎರಡು ಮೂರು ದಿನಗಳಿಗೊಮ್ಮೆ ಅಂಬಲಿ ಮಾಡಿ ಗಂಗಳದಲ್ಲಿ ಕೊಡುತ್ತಿದ್ದರು. ಅಂಬಲಿ ಅಭ್ಯಾಸ ಇರುವ ಆ ಊರಿನವರು ಯಾರಾದರೂ ಚಹಾ ಕುಡಿಯುವ ಚಟಕ್ಕೆ ಬಿದ್ದುದನ್ನು ಕಂಡರೆ ಸಣ್ಣ ದನಿಯಲ್ಲಿ, `ಅವರು ಚಾ ಕುಡೀತಾರೆ' ಎಂದು ವ್ಯಂಗ್ಯವಾಡುತ್ತಿದ್ದರು.ನನ್ನ ತಾಯಿಯ ತವರು ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮ. ಅಲ್ಲಿ ತಾಯಿಯ ತಂದೆ- ನನ್ನ ತಾತ- ಕೂಡ ಕೃಷಿಕರಾಗಿದ್ದರು. ಎರಡು ತಿಂಗಳು ಬೇಸಿಗೆ ರಜೆಯಲ್ಲಿ ನಾನು ಅಲ್ಲಿಗೆ ಹೋಗುತ್ತಿದ್ದೆ. ಕೃಷ್ಣಾ ದಂಡೆಯ ಊರು ಅದು. ನಾವು ತಾಮ್ರದ ಬಿಂದಿಗೆ ತೆಗೆದುಕೊಂಡು ನದಿಗೆ ಹೋಗುತ್ತಿದ್ದೆವು. ಅದನ್ನು ತಲೆಕೆಳಗಾಗಿ ಮಾಡಿ, ಆಧಾರಕ್ಕೆಂದು ಹಿಡಿದು ನೀರಿನಲ್ಲಿ ಈಜುತ್ತಿದ್ದೆವು. ಮನೆಗೆ ಮರಳುವಾಗ ಅದರಲ್ಲಿ ನೀರು ತುಂಬಿಕೊಂಡು ತರುತ್ತಿದ್ದೆವು. ನದಿ ದಂಡೆಯ ಮೇಲೆ ಬ್ರಾಹ್ಮಣರ ಬೀದಿ ಇತ್ತು. ಮನೆಗೆ ಮರಳುವಾಗ ಅಲ್ಲಿ ನಡೆಯುತ್ತಿದ್ದ ಸಂಸ್ಕೃತ ಪಠಣ ನನ್ನ ಕಿವಿಮೇಲೆ ಬೀಳುತ್ತಿತ್ತು. ನನ್ನ ಮೇಲೆ ಪ್ರಭಾವ ಬೀರಿದ ಸಂಗತಿಗಳಲ್ಲಿ ಅದೂ ಒಂದು. ಗಲಗಲಿಯಲ್ಲಿ ನನಗೆ ಒಳ್ಳೆಯ ಸ್ನೇಹಿತರು ಸಿಕ್ಕರು.ನನ್ನ ತಾಯಿಯ ತಂದೆ ವರ್ತಮಾನವನ್ನು ಬಹಳ ತಿಳಿದವರಾಗಿದ್ದರು. ನಿತ್ಯವೂ ತಪ್ಪದೆ `ಸಂಯುಕ್ತ ಕರ್ನಾಟಕ' ಪತ್ರಿಕೆ ಓದುತ್ತಿದ್ದರು. ನನಗೂ ಓದಲು ಹಚ್ಚುತ್ತಿದ್ದರು. ಧಾರ್ಮಿಕ ಸ್ವಭಾವದವರಾಗಿದ್ದ ತಾಯಿಗೆ ಅಪರಿಮಿತವಾದ ಸ್ವಂತಿಕೆ. ಕೃಷ್ಣಾ ನದಿಯ ಹೊಳೆಸಾಲಿನಲ್ಲಿ ವಾಸವಿದ್ದ ಜೈನರು, ಮರಾಠರು ಮೊದಲಾದ ಸಮುದಾಯಕ್ಕೆ ಸೇರಿದ ಹೆಣ್ಣುಮಕ್ಕಳಿಗೆ ಸ್ವಾವಲಂಬಿಗಳಾಗುವ ಕನಸಿತ್ತು. ತಾವೂ ಒಂದಿಷ್ಟು ಸಂಪಾದನೆ ಮಾಡಬೇಕೆಂಬ ಉತ್ಸಾಹ. ಆಗ 200 ರೂಪಾಯಿಗೆ ಒಂದು ಎಮ್ಮೆ ಕೊಳ್ಳಬಹುದಿತ್ತು.

ಅದಕ್ಕೆಂದೇ ಅವರಿಗೆ ನನ್ನ ತಾಯಿ ತಮ್ಮ `ಸ್ತ್ರೀಧನ'ದಿಂದ ಸಾಲ ಕೊಡುತ್ತಿದ್ದರು. ತಿಂಗಳಿಗೆ ಎರಡೋ ಮೂರೋ ರೂಪಾಯಿ ಬಡ್ಡಿ. ಅದನ್ನು ವಸೂಲು ಮಾಡಲು ನನ್ನನ್ನು ಕಳುಹಿಸುತ್ತಿದ್ದರು. ಎಲ್ಲಾ ಬಡ್ಡಿಯನ್ನು ವಸೂಲು ಮಾಡಿ ತಂದುಕೊಟ್ಟ ಮೇಲೆ ನನಗೆ ಎರಡಾಣೆಯನ್ನೋ, ನಾಲ್ಕಾಣೆಯನ್ನೋ ಕೊಡುತ್ತಿದ್ದರು. ನಾಲ್ಕಾಣೆ ಅರ್ಥಾತ್ 25 ಪೈಸೆಯ ಪಾವಲಿ ಬಂದಮೇಲೆ ನಾನು ಅಂಗಡಿಗೆ ಹೋಗಿ ಅದನ್ನು ಹತ್ತು ಪೈಸೆಯ ಎರಡು, ಐದು ಪೈಸೆಯ ಒಂದು ಬಿಲ್ಲೆಗಳಾಗಿ ಚಿಲ್ಲರೆ ಮಾಡಿಸಿಕೊಳ್ಳುತ್ತಿದ್ದೆ. ಬಡಾ ಸಾಬೂನು ಚೀಟಿ ಮೂರು ಪೈಸೆಗೆ ಸಿಗುತ್ತಿತ್ತು. ಅದನ್ನು ಕೊಂಡ ಮೇಲೆ ಉಳಿಯುತ್ತಿದ್ದ ಹಣದಲ್ಲಿ ಮನೆಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಸಣ್ಣ ಸಣ್ಣ ಖುಷಿಯ ದಿನಗಳು ಅವು.ಯಾರಾದರೂ ಸಾಧು ಸಂತರು ಹಿಮಾಲಯಕ್ಕೆ ತಪಸ್ಸಿಗೆಂದು ಹೊರಟರೆ ನನ್ನ ತಾಯಿ ಅವರಿಗೆ ಖರ್ಚಿಗೆ ಹಣ ಕೊಡುತ್ತಿದ್ದರು. ಶ್ರಾವಣ ಮಾಸದಲ್ಲಿ ತಪಸ್ಸಿಗೆ ಕುಳಿತವರಿಗೆಂದೇ ಹಾಲು, ಗೋಡಂಬಿ, ಉತ್ತತ್ತಿ ಎಲ್ಲವನ್ನೂ ಕಳುಹಿಸುತ್ತಿದ್ದರು. ಗೋಲು ಗುಂಡು, ಸ್ಟಾಪ್ ಎಂಬ ಅವಿತುಕೊಳ್ಳುವ ಆಟ ಸೇರಿದಂತೆ ನಾನು ಹಲವು ಆಟಗಳನ್ನು ಆಡುತ್ತಿದ್ದೆ. ಸೊಗಸಾದ ಬಾಲ್ಯ ನನ್ನದು.ಚುರುಕಾಗಿದ್ದ ನನ್ನನ್ನು ನಾಲ್ಕೇ ವರ್ಷಕ್ಕೆ ಶಾಲೆಗೆ ಸೇರಿಸಿದರು. ನಿಯಮದ ಪ್ರಕಾರ ಶಾಲೆ ಸೇರಲು ಐದು ವರ್ಷ ಹತ್ತು ತಿಂಗಳಾಗಬೇಕಿತ್ತು. ನಾನು ಆಗಸ್ಟ್ 27, 1954ರಲ್ಲಿ ಹುಟ್ಟಿದವನು. ಆದರೆ ಶಾಲಾ ಮಾಸ್ತರು ಜೂನ್ 1, 1952 ಎಂದು ಬರೆದರು. ನನ್ನ ತರಗತಿಯಲ್ಲಿ ಆಗ 40 ಮಂದಿ ಹುಡುಗರಿದ್ದರು. ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಅದು. ಬ್ರಾಹ್ಮಣ ಹುಡುಗ ಒಬ್ಬನನ್ನು ಬಿಟ್ಟು ಉಳಿದ ಎಲ್ಲರ ಹುಟ್ಟಿದ ದಿನ ದಾಖಲೆಗಳ ಪ್ರಕಾರ ಒಂದೇ ಆಗಿತ್ತು!

ಮುಂದಿನ ವಾರ: ಕಾಲೇಜು ದಿನಗಳು..

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.