ಗುರುವಾರ , ಮೇ 6, 2021
30 °C

ಸರ್ಕಾರದ ಮೂಗಿಗೆ ದುರ್ನಾತ ಬಡಿಯದೆ?

ಎಂ ನಾಗರಾಜ್ Updated:

ಅಕ್ಷರ ಗಾತ್ರ : | |

ಸರ್ಕಾರದ ಮೂಗಿಗೆ ದುರ್ನಾತ ಬಡಿಯದೆ?

ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯವಾಗಿ ರಾಜ್ಯ ಸರ್ಕಾರ ವಹಿಸಿದ ದಿವ್ಯ ನಿರ್ಲಕ್ಷ್ಯಕ್ಕೆ ಈ ಭಾಗದಲ್ಲಿ ಹೆಜ್ಜೆಗೊಂದು ನಿದರ್ಶನ ಸಿಗುತ್ತದೆ. ಲಕ್ಷಾಂತರ ಭಕ್ತರು ಸೇರುವ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಅವಗಣನೆ ಸಹ ಅವುಗಳಲ್ಲಿ ಒಂದಾಗಿದೆ. ಯಲ್ಲಮ್ಮನ ಗುಡ್ಡದಲ್ಲಿ ‘ದೇವಾಲಯ ಪ್ರವಾಸೋದ್ಯಮ’ವನ್ನು ಬೆಳೆಸಲು ವಿಪುಲವಾದ ಅವಕಾಶಗಳಿವೆ. ಆದರೆ, ತನ್ನ ಸುಪರ್ದಿಯಲ್ಲಿ ಇರುವ ಈ ದೇವಸ್ಥಾನವನ್ನು ರಾಜ್ಯ ಸರ್ಕಾರ (ಮುಜರಾಯಿ ಇಲಾಖೆ) ಸಂಪೂರ್ಣವಾಗಿ ಕಡೆಗಣಿಸಿದೆ.ಪಕ್ಕದ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ‘ದೇವಾಲಯ ಪ್ರವಾಸೋದ್ಯಮ’ಕ್ಕೆ ಸಾಕಷ್ಟು ಉತ್ತೇಜನ ನೀಡುತ್ತಿವೆ. ರಾಜ್ಯ ಮಾತ್ರ ಈ ವಿಷಯದಲ್ಲಿ ಹಿಂದೆ ಬಿದ್ದಿದೆ. ದೇವಸ್ಥಾನಗಳಿಗೆ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಸಮರ್ಪಕವಾದ ಸಾರಿಗೆ ವ್ಯವಸ್ಥೆ, ನೈರ್ಮಲ್ಯದ ವಾತಾವರಣ, ಉತ್ತಮ ವಸತಿ ಸೌಲಭ್ಯ ಕನಿಷ್ಠ ಅಗತ್ಯಗಳಾಗಿವೆ. ಯಲ್ಲಮ್ಮನ ಗುಡ್ಡದಲ್ಲಿ ಅವುಗಳದ್ದೇ ದೊಡ್ಡ ಕೊರತೆ. ಮೌಢ್ಯಗಳ ಪೊರೆಯಿಂದ ಕ್ರಮೇಣವಾಗಿ ಕಳಚಿಕೊಳ್ಳುತ್ತಿದ್ದರೂ ಮಲಿನ ವಾತಾವರಣದ ಜಾಡ್ಯದಿಂದ ಅದಕ್ಕೆ ಇನ್ನೂ ಮುಕ್ತಿ ಸಿಗುವ ಲಕ್ಷಣ ಕಾಣುತ್ತಿಲ್ಲ.ಕಾಶ್ಮೀರ ಕಣಿವೆಯ ವೈಷ್ಣೋದೇವಿ ದೇವಸ್ಥಾನಕ್ಕೋ, ಕಾಶಿ ವಿಶ್ವನಾಥ ಮಂದಿರಕ್ಕೋ ವಿಮಾನದಲ್ಲಿ ಹೋಗಿ ಬರುವ ನಮ್ಮ ರಾಜಕಾರಣಿಗಳಿಗೆ ಚಕ್ಕಡಿಯಲ್ಲಿ ಯಲ್ಲಮ್ಮನ ಜಾತ್ರೆಗೆ ಬರುವ ಬಡ ಭಕ್ತರ ಕಷ್ಟ ಅರ್ಥವಾಗುವುದಿಲ್ಲ.ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಜನರಿಗೆ ಶಕ್ತಿ ದೇವತೆ ಯಲ್ಲಮ್ಮನನ್ನು ಕಂಡರೆ ಎಲ್ಲಿಲ್ಲದ ಭಯ–ಭಕ್ತಿ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಈ ಭಾಗದ ವಿವಿಧ ಜಿಲ್ಲೆಗಳ ಭಕ್ತರು ದೇವಾಲಯಕ್ಕೆ ದಾಂಗುಡಿ ಇಡುತ್ತಾರೆ. ಆದರೆ ಅದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿಸಿ, ಭಕ್ತರಿಗೆ ಒಂದಿಷ್ಟು ಸೌಲಭ್ಯ ಕಲ್ಪಿಸುವ ಕೆಲಸವನ್ನು ಸರ್ಕಾರ ಇದುವರೆಗೂ ಮಾಡಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲ ರಾಜಕೀಯ ಪಕ್ಷಗಳ ನೇತೃತ್ವದ ಸರ್ಕಾರಗಳೂ ಉತ್ತರ ಕರ್ನಾಟಕದ ಜತೆ, ಜತೆಗೆ ಈ ದೇವಾಲಯವನ್ನೂ ಕಡೆಗಣಿಸಿವೆ. ದೇವಸ್ಥಾನದ ಸುತ್ತಮುತ್ತಲಿನ ಜಾಗದಲ್ಲಿ ಅಡ್ಡಾಡಿದರೆ ಎಂತಹವರಿಗೂ ಕಸಿವಿಸಿಯಾಗುತ್ತದೆ.ಧರ್ಮಸ್ಥಳದ ಮಂಜುನಾಥ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ, ಹೊರನಾಡಿನ ಅನ್ನಪೂರ್ಣೆ, ಮೈಸೂರಿನ ಚಾಮುಂಡೇಶ್ವರಿ, ಚಾಮರಾಜನಗರದ ಮಲೆಮಹದೇಶ್ವರ ದೇವಸ್ಥಾನಗಳಿಗೆ ಹೋದವರು ಯಲ್ಲಮ್ಮನ ದರ್ಶನಕ್ಕೆ ಬಂದಾಗ ಕಸಿವಿಸಿ ಅನುಭವಿಸದೆ ವಿಧಿಯಿಲ್ಲ. ದೇವಾಲಯದ ಸಮೀಪದ ದ್ವಾರದ ಬಳಿಯೇ ದುರ್ನಾತ ಬೀರುತ್ತದೆ. ಕೈಗಳು ತಂತಾನೆ ಮೂಗು ಮುಚ್ಚಿಕೊಳ್ಳುತ್ತವೆ. ರಾಜ್ಯದ ವಿವಿಧೆಡೆ ಇರುವ ಮುಜರಾಯಿ ದೇವಾಲಯಗಳ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದು, ಈ ದೇವಾಲಯದ ಪರಿಸರ ಮಾತ್ರ ಇಷ್ಟೊಂದು ಕೊಳಕಾಗಿರಲು ಏನು ಕಾರಣ? ಸರ್ಕಾರ ಈ ದೇವಾಲಯದ ಅಭಿವೃದ್ಧಿಗೆ ಇಷ್ಟು ವರ್ಷಗಳಾದರೂ ಗಂಭೀರವಾದ ಪ್ರಯತ್ನವನ್ನು ಏಕೆ ಮಾಡಿಲ್ಲ? ತಳ ಸಮುದಾಯ ಜನ ಹಾಗೂ ಬಡವರೇ ಹೆಚ್ಚಾಗಿ ಈ ಗುಡ್ಡದ ಯಾತ್ರೆ ಕೈಗೊಳ್ಳುವುದು ಈ ನಿರ್ಲಕ್ಷ್ಯಕ್ಕೆ ಕಾರಣ ಇರಬಹುದೇ?ದೇವಿಯ ಸನ್ನಿಧಿಯಲ್ಲಿ ಭಕ್ತಿಯ ಪರಾಕಾಷ್ಠೆಯಲ್ಲಿ ಭಂಡಾರ ತೂರಿ ಮೈಮರೆಯುವ ಭಕ್ತರಿಗೂ ಈ ಪರಿಸರದ ಸ್ವಚ್ಛತೆ ಕಾಪಾಡಬೇಕು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲ. ಪವಿತ್ರ ಸ್ಥಳ ಎಂಬುದನ್ನು ಮರೆತು ದೇವಾಲಯದ ಸಮೀಪವೇ ಗಲೀಜು ಮಾಡುತ್ತಾರೆ. ಹಾಗಾಗಿಯೇ ಮುಖ್ಯ ದ್ವಾರದ ಬಳಿಯೇ ದುರ್ನಾತ! ವಾಹನ ನಿಲುಗಡೆ ಸ್ಥಳದಲ್ಲಿ ಸ್ವಲ್ಪ ಮರೆಯಾದರೆ ಸಾಕು ಅಲ್ಲಿಯೇ ಜನ ಮಲ–ಮೂತ್ರ ವಿಸರ್ಜನೆ ಮಾಡುತ್ತಾರೆ. ಗಲೀಜು ಮಾಡುವವರನ್ನು ಕಂಡರೆ ಯಾರೂ ಚಕಾರವೆತ್ತುವುದಿಲ್ಲ. ಅವರಿಗೆ ಅರಿವು ಮೂಡಿಸುವ ಕೆಲಸವೂ ಆಗುವುದಿಲ್ಲ. ಗಲೀಜು ಮಾಡಬೇಡಿ ಎಂದು ಅಲ್ಲಲ್ಲಿ ಬೋರ್ಡ್‌ಗಳನ್ನು ಹಾಕಲಾಗಿದೆ. ಅದರಿಂದ ಪ್ರಯೋಜನವಾಗಿಲ್ಲ. ಆದರೂ ಶಕ್ತಿ ದೇವತೆ ಇವೆಲ್ಲವನ್ನೂ ಸಹಿಸಿಕೊಂಡಿದ್ದಾಳೆ.ಇನ್ನು ಭಾರತ ಹುಣ್ಣಿಮೆ, ನೂಲು ಹುಣ್ಣಿಮೆ ದಿನಗಳಲ್ಲಂತೂ ಇಲ್ಲಿ ಸೇರುವ ಭಕ್ತರ ಸಂಖ್ಯೆ ಹಲವು ಲಕ್ಷಗಳಾಗುತ್ತದೆ. ದೂರದ ಊರುಗಳಿಂದ ಚಕ್ಕಡಿಗಳನ್ನು ಕಟ್ಟಿಕೊಂಡು ಹರಕೆ ತೀರಿಸಲು ಬರುವ ಭಕ್ತರು ಜಾಗ ಸಿಕ್ಕ ಕಡೆಗೆ ಚಕ್ಕಡಿ ನಿಲ್ಲಿಸಿ, ಅಲ್ಲಿಯೇ ಮೂರು ಕಲ್ಲಿಟ್ಟು ಒಲೆಗುಂಡು ಹೂಡುತ್ತಾರೆ. ಅಲ್ಲಿಯೇ ಅಡುಗೆ ಮಾಡಿ, ಎಡೆ (ನೈವೇದ್ಯ) ಇಟ್ಟು, ತಾವೂ ಉಂಡು ನಂತರ ಒಂದು, ಎರಡು, ಮೂರು ಎಲ್ಲವನ್ನೂ ಅಲ್ಲಿಯೇ ಮುಗಿಸಿ ಚಕ್ಕಡಿ ಕಟ್ಟಿಕೊಂಡು ತಮ್ಮೂರಿಗೆ ತೆರಳುತ್ತಾರೆ. ಯಾವ ಕೆಲಸ, ಎಲ್ಲಿ ಮಾಡಬೇಕು ಎನ್ನುವ ಸ್ಥಳಭೇದ ಅವರಿಗೆ ಬೇಕಿಲ್ಲ. ಆ ಸಂದರ್ಭದಲ್ಲಿ ಇಡೀ ಯಲ್ಲಮ್ಮನ ಗುಡ್ಡದಲ್ಲಿ ಎಲ್ಲಿಯೂ ಕಾಲಿಡಲಾಗದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ದೇವಾಲಯದ ಪ್ರದೇಶದಲ್ಲಿ ಈ ರೀತಿ ಎಲ್ಲೆಂದರಲ್ಲಿ ಹೇಸಿಗೆ ಮಾಡಿ, ಕೊಳಕು ನಿರ್ಮಿಸಿ ಹೋದರೆ ದೇವಿಯ ಅನುಗ್ರಹ ದೊರೆಯುತ್ತದೆಯೇ?ಇದನ್ನೆಲ್ಲಾ ಕಂಡ ಜನಪ್ರತಿನಿಧಿಗಳು, ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕಿತ್ತು. ಇಂತಹ ಕೆಲಸಗಳು ನಡೆದಿಲ್ಲ ಎಂಬುದಕ್ಕೆ ಗಲೀಜು ಸಾಕ್ಷಿಯಾಗಿದೆ.

ದೇವಿ ದರ್ಶನಕ್ಕೆ ಬಂದವರಿಗೆ ಉಳಿದುಕೊಳ್ಳಲು ಸೂರು, ಅಡುಗೆ ಮಾಡಿಕೊಳ್ಳಲು ಪ್ರತ್ಯೇಕ ಸ್ಥಳ ಕಲ್ಪಿಸಿ, ಸ್ನಾನ ಮತ್ತು ಶೌಚಾಲಯಕ್ಕೆ ಸ್ಥಳ ನಿಗದಿಪಡಿಸಿ ಆ ಪ್ರಕಾರ ನಡೆದುಕೊಳ್ಳುವಂತೆ ಮಾಡಿದ್ದರೆ ಯಲ್ಲಮ್ಮನ ಗುಡ್ಡಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹರಿದುಬರುತ್ತಿದ್ದರೇನೋ?ದೇಶದ ಇತರೆ ಕೆಲವು ಪ್ರಖ್ಯಾತ ದೇವಾಲಯಗಳಂತೆಯೇ ಯಲ್ಲಮ್ಮ ಕೂಡ ಭಕ್ತರನ್ನು ಆಕರ್ಷಿಸುತ್ತಿದ್ದಾಳೆ. ವರಮಾನವೂ ಚೆನ್ನಾಗಿದೆ. ಕಳೆದ ವರ್ಷ ಸುಮಾರು ₨11 ಕೋಟಿ ಬಂದಿದೆ ! ಇದು ವಿವಿಧ ರೂಪದಲ್ಲಿ ಭಕ್ತರಿಂದ ಬಂದಿರುವ ದುಡ್ಡು. ಭಕ್ತರಿಂದ ಬರುವ ಹಣದಲ್ಲೇ ಪ್ರತಿ ವರ್ಷವೂ ನಿಗದಿತ ಪ್ರಮಾಣದಲ್ಲಿ ಸೌಕರ್ಯಗಳನ್ನು ಕಲ್ಪಿಸಿದ್ದರೆ ಈ ವೇಳೆಗೆ ಯಲ್ಲಮ್ಮನ ಗುಡ್ಡದ ಚಿತ್ರಣವೇ ಬದಲಾಗುತ್ತಿತ್ತು. ಆ ನಿಟ್ಟಿನಲ್ಲಿ ಆಲೋಚಿಸಲು ನಮ್ಮ ನೀತಿ ನಿರೂಪಕರಿಗೆ ಸಮಯ ಇರಬೇಕಲ್ಲ? ಜತೆಗೆ ಮುಜರಾಯಿ ದೇವಾಲಯದ ಬಗ್ಗೆ ಸರ್ಕಾರಕ್ಕೆ ಏಕೆ ಇಷ್ಟೊಂದು ನಿರ್ಲಕ್ಷ್ಯ ಎಂಬುದು ಅರ್ಥವಾಗದು.ಯಲ್ಲಮ್ಮನ ಆಶೀರ್ವಾದ ಪಡೆಯಲು ರಾಜ್ಯದ ಯಾವ್ಯಾವುದೋ ಮೂಲೆಗಳಿಂದ ದೇವಾಲಯದವರೆಗೂ ಕಾರಿನಲ್ಲಿ ಬರುವ ರಾಜಕಾರಣಿಗಳು ದೇವಿಯ ದರ್ಶನ ಪಡೆದು ಅರ್ಧ ಗಳಿಗೆಯಲ್ಲಿಯೇ ಅಲ್ಲಿಂದ ನಿರ್ಗಮಿಸುತ್ತಾರೆ. ದಿನಗಟ್ಟಲೇ ಅಲ್ಲಿ ಉಳಿಯದ ಕಾರಣ ಅವರಿಗೆ ಈ ಪ್ರದೇಶದ ಗಲೀಜು ಕಾಣದಿರಬಹುದು. ಹಾಗಾಗಿ ಇಲ್ಲಿನ ಪರಿಸರವನ್ನು ಉತ್ತಮ ಸ್ಥಿತಿಯಲ್ಲಿಡಬೇಕು ಎಂಬ ಭಾವನೆ ಮೂಡಿಲ್ಲದಿರಬಹುದು. ಸಾಮಾಜಿಕ ನ್ಯಾಯದ ಮಾತನಾಡುವ ನಾಯಕರಿಗೂ ಯಲ್ಲಮ್ಮನ ಗುಡ್ಡದಲ್ಲಿ ಕೆಳಸ್ತರದ ಜನರು ಪಡುವ ಬವಣೆ ಕಾಣಿಸಿಲ್ಲ. ಅಥವಾ ದೇವಾಲಯಕ್ಕೆ ಹೊಂದಿಕೊಂಡಂತೆಯೇ ಇದ್ದ ಒತ್ತುವರಿಯನ್ನು ತೆರವುಗೊಳಿಸಿ, ಸಿಮೆಂಟ್‌ ರಸ್ತೆ ಮಾಡಿಸಿರುವುದನ್ನೇ ದೊಡ್ಡ ಸಾಧನೆ ಎಂದು ಸರ್ಕಾರ ಮೈಮರೆತಿರಬೇಕು.ಹರಕೆ ಹೊತ್ತವರು ಹರಕೆ ತೀರಿಸಲು ಜೋಗುಳ ಬಾವಿಗೆ ಸ್ನಾನಕ್ಕೆ ಬರುತ್ತಾರೆ. ಅಲ್ಲಿ ಸ್ನಾನ ಮಾಡುವುದಿರಲಿ, ನೀರನ್ನು ಮುಟ್ಟುವುದಕ್ಕೇ ಅಸಹ್ಯವಾಗುತ್ತದೆ. ಆ ಸ್ಥಿತಿಯಲ್ಲಿದೆ ಅಲ್ಲಿನ ನೀರು. ಈ ಜಾಗದ ನೀರನ್ನು ತೆಗೆಯಿಸಿ, ಸ್ನಾನಕ್ಕೆ ಸ್ವಚ್ಛ ನೀರು ದೊರೆಯುವಂತೆ ಮಾಡಬೇಕಿದೆ. ಇದು ಭಕ್ತರ ಆರೋಗ್ಯ, ಅವರ ಧಾರ್ಮಿಕ ಭಾವನೆಗಳ ದೃಷ್ಟಿಯಿಂದ ಮುಖ್ಯವಾದುದು.ಸುಮಾರು ಎರಡು ತಿಂಗಳ ಹಿಂದೆ ಯಲ್ಲಮ್ಮನ ಗುಡ್ಡದ ಅಭಿವೃದ್ಧಿ ವಿಚಾರ ವಿಧಾನಪರಿಷತ್ತಿನಲ್ಲಿ ಪ್ರಸ್ತಾಪವಾಗಿ, ಬೆಳಗಾವಿ ಜಿಲ್ಲೆಯವರೇ ಆದ ಮುಜರಾಯಿ ಸಚಿವ ಪ್ರಕಾಶ ಹುಕ್ಕೇರಿ ಅವರು ತಿರುಮಲ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ. ಆದರೆ ಭರವಸೆ ನೀಡಿ ಎರಡು ತಿಂಗಳಾದರೂ ಇನ್ನೂ ಕಾಯಕಲ್ಪವಾಗಿಲ್ಲ.

ಹಿಂದೆಯೂ ಈ ದೇವಾಲಯದ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ಸಿದ್ಧವಾಗಿತ್ತು.ಆದರೆ ಜಾರಿಯಾಗಲಿಲ್ಲ. ಈಗ ಯಲ್ಲಮ್ಮನ ಗುಡ್ಡಕ್ಕೆ ಸುಸಜ್ಜಿತ ರಸ್ತೆ ನಿರ್ಮಾಣವಾಗಿದೆ. ರಸ್ತೆ ನಿರ್ಮಾಣವೊಂದೇ ಅಭಿವೃದ್ಧಿಯಲ್ಲ. ಜತೆಗೆ ಜನರ ಧಾರ್ಮಿಕ ಭಾವನೆಗಳನ್ನು ಸರ್ಕಾರ ಗೌರವಿಸಬೇಕು. ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿಯನ್ನು ಬದಲಿಸಿ ಸ್ವಚ್ಛ, ನಿರ್ಮಲ ವಾತಾವರಣ ಮೂಡಿಸುವ ಕೆಲಸವಾಗಬೇಕು. ಅದಕ್ಕೆ ಒಂದಿಷ್ಟು ಶೌಚಾಲಯಗಳ ನಿರ್ಮಾಣ ಜರೂರಾಗಿ ಆಗಬೇಕು. ಸಹಸ್ರಾರು ಸಂಖ್ಯೆಯಲ್ಲಿ ಬರುವ ಭಕ್ತರಿಗೆ ತಂಗಲು ಸೂಕ್ತ ವ್ಯವಸ್ಥೆ ಆಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಡಾರ್ಮಿಟರಿಗಳನ್ನು ಕಟ್ಟಬೇಕು. ಅವುಗಳಲ್ಲಿಯೇ ಸ್ನಾನಗೃಹ, ಶೌಚಾಲಯ ಸೌಕರ್ಯಗಳನ್ನು ಒದಗಿಸಬೇಕು.ನೀರಿನ ಪೂರೈಕೆಗೂ ಗಮನಕೊಡಬೇಕು. ಹುಣ್ಣಿಮೆ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಭಕ್ತರಿಗೆ ಅಡುಗೆ ಮಾಡಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಚಕ್ಕಡಿಗಳಲ್ಲಿಯೇ ಕಲ್ಲುಗಳನ್ನೂ ಭಕ್ತರು ತರುತ್ತಾರೆ. ಬರುವಾಗ ಇರುವ ಅದರ ಅಗತ್ಯ ಹೋಗುವಾಗ ಇರುವುದಿಲ್ಲ. ಅವನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಎಲ್ಲಿ ನೋಡಿದರೆ ಅಲ್ಲಿ ಕಲ್ಲುಗಳು ಬಿದ್ದಿರುತ್ತವೆ. ಇವನ್ನು ಸ್ವಚ್ಛ ಮಾಡಲು ತಿಂಗಳುಗಟ್ಟಲೆ ಬೇಕಾಗುತ್ತದೆ. ಇದೆಲ್ಲಾ ಅಧಿಕಾರಿಗಳ ಅರಿವಿಗೆ ಬಂದಿಲ್ಲವೇ? ಕನಿಷ್ಠ ಸೌಲಭ್ಯ ಕಲ್ಪಿಸಿಕೊಡಲೂ ಏಕಿಷ್ಟು ಮೀನಮೇಷವನ್ನು ಎಣಿಸುತ್ತಿದ್ದಾರೆ?ಈ ಭಾಗದ ಚುನಾಯಿತ ಪ್ರತಿನಿಧಿಗಳಲ್ಲೂ ದೂರದೃಷ್ಟಿತ್ವದ ಕೊರತೆ ಬಹಳ ಹೆಚ್ಚು. ಬದ್ಧತೆ ಎಂಬುದು ಕಾಣುವುದಿಲ್ಲ. ಹೇಗಾದರೂ ಆಗಲಿ ಅಧಿಕಾರದಲ್ಲಿ ಮಾತ್ರ ಇರಬೇಕು ಎಂಬುದಷ್ಟೇ ಅವರ ಆದ್ಯತೆ. ಈ ಭಾಗದ ಏಳಿಗೆಗೆ ಇವು ಪ್ರಮುಖ ಅಡ್ಡಿ–ಅಡಚಣೆಗಳು. ಹಾಗಾಗಿ ಈ ಭಾಗದಲ್ಲಿ ನಾನಾ ಕೊರತೆಗಳು ಢಾಳಾಗಿ ಎದ್ದು ಕಾಣುತ್ತಿವೆ. ಅದರ ಪರಿವೇ ರಾಜಕಾರಣಿಗಳಿಗೆ ಇರುವುದಿಲ್ಲ.ಪ್ರಥಮ ಬಾರಿಗೆ ಬೆಳಗಾವಿ ಜಿಲ್ಲೆಯವರಿಗೇ ಮುಜರಾಯಿ ಖಾತೆ ಸಿಕ್ಕಿದೆ. ಈಗಲಾದರೂ ಶಕ್ತಿ ದೇವತೆ ಯಲ್ಲಮ್ಮನ ದೇವಾಲಯದ ಪರಿಸರ ಅಭಿವೃದ್ಧಿಯಾಗಲಿ ಎಂಬ ನಿರೀಕ್ಷೆ ಈ ಭಾಗದ ಜನರದ್ದು. ಹುಕ್ಕೇರಿಯವರು ಗಟ್ಟಿ ಮನಸ್ಸು ಮಾಡಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.