ಸರ್ಕಾರದ ಮೇಲೆ ಸಿನಿಮಾದವರ ಸವಾರಿ ಏಕೆ?

7

ಸರ್ಕಾರದ ಮೇಲೆ ಸಿನಿಮಾದವರ ಸವಾರಿ ಏಕೆ?

ಗಂಗಾಧರ ಮೊದಲಿಯಾರ್
Published:
Updated:
ಸರ್ಕಾರದ ಮೇಲೆ ಸಿನಿಮಾದವರ ಸವಾರಿ ಏಕೆ?

ಇತ್ತೀಚೆಗೆ ಚಿತ್ರರಂಗಕ್ಕೆ ಸಂಬಂಧಪಟ್ಟ ಒಂದು ಬೆಳವಣಿಗೆಯನ್ನು ಒಳ್ಳೆಯ ಬೆಳವಣಿಗೆ ಎಂದು ಹೇಳುವುದು ಕಷ್ಟ. 75 ವರ್ಷಗಳ ನಡೆಯನ್ನು ಕಂಡ ಕನ್ನಡ ಚಿತ್ರರಂಗದ ಅಮೃತಮಹೋತ್ಸವ ಸಮಾರಂಭ ಎರಡು ವರ್ಷಗಳ ಹಿಂದೆ ನಡೆದದ್ದು ನಿಮಗೆಲ್ಲಾ ಗೊತ್ತಿದೆ.

 

ಆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಿತ್ರರಂಗದ ಈ ಸಾಧನೆಯನ್ನು ಸ್ಮರಣೀಯವಾಗಿಸುವ ಸಲುವಾಗಿ ಚಲನಚಿತ್ರ ಅಮೃತಮಹೋತ್ಸವ ಭವನವೊಂದನ್ನು ನಿರ್ಮಿಸುವ ಘೋಷಣೆ ಮಾಡಿದರು. ಈ ಭವನಕ್ಕಾಗಿ ಐದು ಕೋಟಿ ರೂಪಾಯಿಗಳನ್ನು ನೀಡುವುದಾಗಿ ಪ್ರಕಟಿಸಿದರು.ಚಿತ್ರರಂಗದ ಮಟ್ಟಿಗೆ ಇದೊಂದು ಐತಿಹಾಸಿಕ ಘೋಷಣೆ. ಇದುವರೆಗೆ ಬೇರೆ ಬೇರೆ ಸರ್ಕಾರಗಳು, ಚಿತ್ರರಂಗಕ್ಕೆ ಬೇರೆ ಬೇರೆ ರೀತಿಯ ನೆರವನ್ನು ನೀಡಿವೆ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ, ಖಚಿತವಾದ ನಿಲುವಿನ ಯೋಜನೆಯನ್ನು ಇದುವರೆಗೆ ಯಾವ ಸರ್ಕಾರವೂ ನೀಡಿರಲಿಲ್ಲ. ಸರ್ಕಾರದ ಈ ಘೋಷಣೆಯನ್ನು ಚಿತ್ರರಂಗದ ಜನ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ.ಚಿತ್ರರಂಗದ ಜನರಿಗೆ ಈ ಯೋಜನೆಯ ಬಗ್ಗೆ ಸರಿಯಾದ ಕಲ್ಪನೆಯಿದ್ದಿದ್ದರೆ ಜುಲೈ 8ರಂದು ಕಂಠೀರವ ಸ್ಟುಡಿಯೋ ಹಿಂಭಾಗದ ರಸ್ತೆಯಲ್ಲಿ ಚಲನಚಿತ್ರ ಅಮೃತಮಹೋತ್ಸವ ಭವನದ ಉದ್ಘಾಟನೆ ನಡೆದೇ ಹೋಗುತ್ತಿತ್ತು.

 

ಆದರೆ, ಅಲ್ಲಿರುವ ಎರಡೂವರೆ ಎಕರೆ ಜಾಗವೂ ಚಿತ್ರರಂಗಕ್ಕೇ ಸೇರಬೇಕು, ಈ ಭವನವನ್ನು ಚಲನಚಿತ್ರ ವಾಣಿಜ್ಯಮಂಡಳಿಗೇ ವಹಿಸಬೇಕು ಮತ್ತು ಈ ಜಾಗದಲ್ಲಿ ಮಾಧ್ಯಮ ಭವನ ಇರಕೂಡದು ಎನ್ನುವ ಷರತ್ತುಗಳನ್ನು ಹಾಕಿ ಚಿತ್ರರಂಗದ ಕೆಲವರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಕಾರ್ಯಕ್ರಮ ನಡೆಸಿದರೆ, ಬಹಿಷ್ಕಾರ ಹಾಕುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ಕಾರ್ಯಕ್ರಮ ರದ್ದಾಗುವಂತೆ ಮಾಡಿ ಕೃತಾರ್ಥರಾದರು.ಚಲನಚಿತ್ರ ಅಮೃತಮಹೋತ್ಸವ ಭವನವನ್ನು ನಿರ್ಮಿಸುವ ಸರ್ಕಾರದ ಉದ್ದೇಶವನ್ನೇ ಸರಿಯಾಗಿ ಅರ್ಥಮಾಡಿಕೊಳ್ಳದ ಚಿತ್ರರಂಗದ ಜನರಿಗೆ ಇದರಿಂದ ಯಾವ ರೀತಿಯ ಸಾಧನೆ ಆಯಿತು ಎನ್ನುವ ಅರಿವಿಲ್ಲ. ಇದರಿಂದ ಅವರು ಸಾಧಿಸಿದ್ದಾದರೂ ಏನು? ಅಮೃತಮಹೋತ್ಸವ ಆಚರಣೆಯನ್ನು ವಾಣಿಜ್ಯಮಂಡಳಿ ಅದ್ದೂರಿಯಾಗಿ ಆಚರಿಸಿತು.ಇದೇ ಸಂದರ್ಭದಲ್ಲಿ  ಚಿತ್ರರಂಗದ ಏಳಿಗೆಗೆ ಶ್ರಮಿಸಿದ 75 ಗಣ್ಯ ವ್ಯಕ್ತಿಗಳ ಪರಿಚಯಾತ್ಮಕ ಪುಸ್ತಕಗಳನ್ನೂ ಪ್ರಕಟಿಸಿತು. ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ಸಂಪಾದಕತ್ವದಲ್ಲಿ ಪ್ರಕಟವಾದ  ಅಷ್ಟೂ ಪುಸ್ತಕಗಳು ಚಿತ್ರರಂಗದ ಇತಿಹಾಸವನ್ನು ದಾಖಲಿಸುವ, ಮಹತ್ವದ ಪುಸ್ತಕಗಳೆಂದೇ ಗುರುತಿಸಲ್ಪಟ್ಟಿವೆ.

 

ಅರಮನೆ ಮೈದಾನದಲ್ಲಿ ವಿಚಾರ ಸಂಕಿರಣಗಳನ್ನೂ, ರಸಮಂಜರಿಯನ್ನೂ, ಚಿತ್ರ ಮೇಳವನ್ನೂ ಸಂಘಟಿಸಿ, ಸಮಾರಂಭವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.ಕೆಲವರ ಅಸಮಾಧಾನದ ನಡುವೆಯೂ ಸಮಾರಂಭವೊಂದನ್ನು ಸ್ಮರಣೀಯಗೊಳಿಸಲು ವಾಣಿಜ್ಯ ಮಂಡಳಿಯ ಅಂದಿನ ಅಧ್ಯಕ್ಷೆ ಡಾ.ಜಯಮಾಲಾ ಶ್ರಮಿಸಿದ್ದರು. ಇದೇ ಸಂದರ್ಭದಲ್ಲಿಯೇ ಅಂದಿನ ಮುಖ್ಯಮಂತ್ರಿ ಚಲನಚಿತ್ರ ಅಮೃತಮಹೋತ್ಸವ ಭವನ ನಿರ್ಮಾಣದ ಯೋಜನೆ ಪ್ರಕಟಿಸಿದ್ದರು.ಈ ಅಮೃತಮಹೋತ್ಸವ ಭವನವನ್ನೂ ತನ್ನದೇ ಸ್ವತ್ತು ಎಂದು ಭಾವಿಸಿರುವ ವಾಣಿಜ್ಯಮಂಡಳಿ ಹಾಗೂ ಚಲನಚಿತ್ರರಂಗದ ಕೆಲವು ಗಣ್ಯರು ಈ ಭವನವನ್ನೂ, ತಮ್ಮ ಸುಪರ್ದಿಗೆ ಕೊಡಬೇಕು ಹಾಗೂ ಅದರ ನಿರ್ಮಾಣಕ್ಕೆ ನೀಡಲಿರುವ ಐದು ಕೋಟಿ ರೂಪಾಯಿಗಳನ್ನು ತಮಗೇ ಕೊಡಬೇಕೆಂದು ಹೇಳಿಕೆಗಳನ್ನು ನೀಡಲಾರಂಭಿಸಿದರು.ವಾಸ್ತವವಾಗಿ ಇಂದಿನ ಕನ್ನಡ ಚಿತ್ರರಂಗ ಭದ್ರವಾಗಿ ನಿಂತಿರುವುದೇ ಸರ್ಕಾರದ ನೆರವಿನಿಂದ. 1966ರಲ್ಲಿ ಸರ್ಕಾರ ಮೈಸೂರು ರಾಜ್ಯದಲ್ಲಿ ತಯಾರಾದ ಎಲ್ಲ ಕನ್ನಡ ಚಿತ್ರಗಳಿಗೂ ಸಹಾಯಧನ ನೀಡುವ ಯೋಜನೆ ಪ್ರಕಟಿಸಿತು.

 

ರಾಜ್ಯ ಪುನರ್‌ರಚನೆಯಾಗಿ ಹತ್ತುವರ್ಷಗಳು ಕಳೆದರೂ ಚಿತ್ರರಂಗ ಉದ್ದಾರವಾಗದ್ದನ್ನು ಕಂಡು ಸರ್ಕಾರ ಚಿತ್ರರಂಗದ ಕೈ ಹಿಡಿಯಿತು. ಆನಂತರ ಪ್ರಶಸ್ತಿ ಯೋಜನೆ ಆರಂಭಿಸಿತು, ಮನರಂಜನಾ ತೆರಿಗೆ, ರಿಯಾಯಿತಿಗಳನ್ನು ನೀಡಲಾರಂಭಿಸಿತು.ಗುಣಾತ್ಮಕ ಚಿತ್ರಗಳಿಗೆ ಪ್ರಶಸ್ತಿ ಘೋಷಿಸಿತು. ಇಷ್ಟೆಲ್ಲಾ ಇದ್ದರೂ ಒಂದು ಒಳ್ಳೆಯ ಚಿತ್ರ ನೋಡಬೇಕಾದರೆ ಪ್ರೇಕ್ಷಕರು ಕಷ್ಟಪಡಬೇಕಾಗಿದೆ. ಆದರೂ ಸರ್ಕಾರದ ಮೇಲೆ ಸವಾರಿ ಮಾಡಲು ಸಿನಿಮಾದವರು ಸದಾ ಹವಣಿಸುತ್ತಿರುತ್ತಾರೆ. ಅಮೃತಮಹೋತ್ಸವ ಭವನದ ಕಟ್ಟಡಕ್ಕೆ ಶಂಕುಸ್ಥಾಪನೆ ಮುಂದೂಡಿರುವುದು ಇದಕ್ಕೆ ಒಂದು ಉದಾಹರಣೆಯಂತಿದೆ.ಸರ್ಕಾರ ಕಂಠೀರವ ಸ್ಟುಡಿಯೋ ಹಿಂಭಾಗದಲ್ಲಿರುವ ಎರಡೂವರೆ ಎಕರೆ ಜಾಗವನ್ನು ಬಿಡಿಎಯಿಂದ ಖರೀದಿಸಿದೆ. ವಾರ್ತಾ ಇಲಾಖೆ ಈ ಜಾಗವನ್ನು ಹುಡುಕಲು, ಖರೀದಿಸಲು ನೆರವಾಗಿದೆ. ಕಂಠೀರವ ಸ್ಟುಡಿಯೋ ಹಿಂಭಾಗದಲ್ಲೇ ಇರುವುದು ಈ ಸ್ಥಳದ ಮತ್ತೊಂದು ಆಕರ್ಷಣೆ.ಕಂಠೀರವ ಸ್ಟುಡಿಯೋದ ಮತ್ತೊಂದು ಕಡೆ ರಾಜಕುಮಾರ್ ಅವರ ಸಮಾಧಿಸ್ಥಳವನ್ನು ಅಭಿವೃದ್ಧಿಪಡಿಸಿರುವುದರಿಂದ, ಅದು ಜನರಿಗೆ ವೀಕ್ಷಣೆಯ ಕೇಂದ್ರವಾಗಿರುವುದರಿಂದ ಎಲ್ಲ ಚಲನಚಿತ್ರ ಚಟುವಟಿಕೆಯ ಕೇಂದ್ರ ಒಂದೆಡೆ ಕೇಂದ್ರೀಕೃತವಾಗುವುದು ಇದರ ಉದ್ದೇಶವಾಗಿದೆ.ಅಲ್ಲದೆ, ಕಂಠೀರವ ಸ್ಟುಡಿಯೋದಲ್ಲಿ ಈಗ ಮತ್ತೊಂದು ಫ್ಲೋರ್ ಕಟ್ಟುತ್ತಿರುವುದು ಕೂಡ ಮುಂದಿನ ದಿನಗಳಲ್ಲಿ ಇಲ್ಲಿ ಚಿತ್ರೀಕರಣ ಚಟುವಟಿಕೆ ತೀವ್ರಗತಿಯಲ್ಲಿ ಬೆಳೆಯುವ ಸೂಚನೆಯೂ ಆಗಿದೆ. ಇನ್ನುಮುಂದೆ ಯಾವುದೇ ಕನ್ನಡ ಚಿತ್ರ ಸಬ್ಸಿಡಿ ಪಡೆಯಬೇಕಾದರೆ, ಕಂಠೀರವ ಸ್ಟುಡಿಯೋದಲ್ಲಿ ಕೆಲವು ಭಾಗವಾದರೂ ಚಿತ್ರೀಕರಣ ಮಾಡಿಯೇ ಇರಬೇಕು ಎಂಬ ನಿಯಮ ಜಾರಿಗೆ ಬಂದಿರುವುದರಿಂದ ಕನ್ನಡ ಚಲನಚಿತ್ರ ಚಟುವಟಿಕೆಗಳು ಕಂಠೀರವದ ಸುತ್ತ ಬರಲೇಬೇಕು ಎನ್ನುವಂತಾಗಿದೆ.ಅಮೃತಮಹೋತ್ಸವ ಭವನದ ಕಲ್ಪನೆ ಕೂಡಾ ಚೆನ್ನಾಗಿದೆ. ಇಲ್ಲಿ ಅತಿದೊಡ್ಡ ಸಮಾರಂಭ ಸಭಾಂಗಣ ಇರಲಿದೆ. ಚಲನಚಿತ್ರರಂಗಕ್ಕೆ ಸಂಬಂಧಪಟ್ಟ ಎಲ್ಲ ಚಟುವಟಿಕೆಗಳು ಇ್ಲ್ಲಲಿ ನಡೆಯಬಹುದು. ಚಲನಚಿತ್ರಗಳ ಶತದಿನೋತ್ಸವ ಸಮಾರಂಭಗಳು, ಸಿಡಿ ಬಿಡುಗಡೆ, ಸನ್ಮಾನ, ಚಿತ್ರರಂಗಕ್ಕೆ ಸಂಬಂಧಪಟ್ಟ ವಿಚಾರಸಂಕಿರಣಗಳು ಮೊದಲಾದ ಎಲ್ಲ ಕಾರ್ಯಕ್ರಮಗಳಿಗೆ ಈ ಭವನ ಆಸ್ಪದ ನೀಡಲಿದೆ.

 

ಅಲ್ಲದೆ, ಸಣ್ಣ ಚಿತ್ರಮಂದಿರವೊಂದು ಇರಲಿದೆ. ಚಿತ್ರರಂಗಕ್ಕೆ ಸಂಬಂಧಪಟ್ಟ ಗ್ರಂಥಾಲಯವೊಂದು ತಲೆ ಎತ್ತಲಿದೆ. ಚಲನಚಿತ್ರ ಅಕಾಡೆಮಿಯೂ ಇಲ್ಲೇ ಬೀಡು ಬಿಡಲಿದೆ. ಚಿತ್ರರಂಗಕ್ಕೆ ಸಂಬಂಧಪಟ್ಟ ಎಲ್ಲ ಇಲಾಖೆಯೂ ಇಲ್ಲಿಗೆ ಬರಲಿದೆ. ಚಿತ್ರರಂಗದವರು ಒಂದುಕಡೆ ಸೇರಲು, ಚರ್ಚಿಸಲು ಎಲ್ಲ ಅವಕಾಶವನ್ನು ಈ ಅಮೃತಮಹೋತ್ಸವ ಭವನ ಒದಗಿಸುವ ಉದ್ದೇಶ ಹೊಂದಿದೆ.

 

ರವೀಂದ್ರ ಕಲಾಕ್ಷೇತ್ರ, ಕನ್ನಡ ಭವನ ಹೀಗೆ ಹಲವಾರು ಭವನಗಳು ಈಗಾಗಲೇ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವೆಲ್ಲಾ ಆಯಾ ಇಲಾಖೆಯ ಹಿಡಿತದಲ್ಲೇ ಇದೆ. ಅದೇ ರೀತಿಯಲ್ಲಿ ಚಲನಚಿತ್ರ ಅಮೃತಮಹೋತ್ಸವ ಭವನ ಕೂಡಾ. ಈ ಭವನ ಕೂಡಾ ವಾರ್ತಾ ಇಲಾಖೆಯ ಉಸ್ತುವಾರಿಯಲ್ಲೇ ಬರಬೇಕು.

 

ಚಿತ್ರರಂಗಕ್ಕೇ ಸಂಬಂಧಪಟ್ಟ ಎಲ್ಲವೂ ವಾಣಿಜ್ಯಮಂಡಳಿಯ ಕೈಯಲ್ಲೇ ಇರಬೇಕು ಎನ್ನುವುದು ದುರಾಸೆಯಾಗುತ್ತದೆ. ಅಮೃತಮಹೋತ್ಸವ ಭವನ ವಾರ್ತಾ ಇಲಾಖೆಯ ಸುಪರ್ದಿನಲ್ಲಿ ಇರುವುದೇ ಸೂಕ್ತ. ಯಾವುದೇ ಕಾರಣಕ್ಕೂ ಅದು ಚಿತ್ರರಂಗದವರ ಹಿಡಿತಕ್ಕೆ ಹೋಗಬಾರದು.ಕಂಠೀರವ ಸ್ಟುಡಿಯೋ ಹಿಂಭಾಗದಲ್ಲಿ ಈಗ ಗುರುತಿಸಿರುವ ಎರಡೂವರೆ ಎಕರೆ ಜಾಗವನ್ನು ಸಂಪೂರ್ಣವಾಗಿ ಅಮೃತಮಹೋತ್ಸವ ಭವನಕ್ಕೇ ನೀಡಬೇಕು, ಈ ಜಾಗದಲ್ಲಿ ಮತ್ತಿನ್ನಾವ ಕಟ್ಟಡಗಳು ಬರಬಾರದು ಎಂದು ಹೇಳುವುದು ಸ್ವಾರ್ಥ. ಮಾಧ್ಯಮ ಭವನ ಇಲ್ಲಿ ಬರಬಾರದು ಎಂದು ಸಿನಿಮಾದವರು ಆಗ್ರಹಿಸುತ್ತಿದ್ದಾರೆ.ಇದರ ಅರ್ಥ ಪತ್ರಕರ್ತರನ್ನು ದೂರ ಇಡಿ ಎಂದು ಹೇಳುವುದೇ ಆಗಿದೆ. ಚಿತ್ರರಂಗದವರು ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಜಗತ್ತಿನಲ್ಲಿ ಸಿನಿಮಾ ಹುಟ್ಟುವುದಕ್ಕೆ ಮುನ್ನವೇ ಪತ್ರಿಕೋದ್ಯಮ ನೆಲೆ ಊರಿತ್ತು. ಸಿನಿಮಾ ಆವಿಷ್ಕಾರವಾದಾಗ, ಇಂತಹ ಒಂದು ಆವಿಷ್ಕಾರ ಆಗಿದೆ ಎನ್ನುವುದನ್ನು ಪತ್ರಿಕೆಗಳ ಮೂಲಕ ಜಗಜ್ಜಾಹೀರು ಮಾಡಲಾಗಿತ್ತು.

 

ಮೊದಲು ಸಿನಿಮಾ ನೋಡಬನ್ನಿ ಎನ್ನುವ ಜಾಹೀರಾತುಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಆನಂತರದ ದಿನಗಳಲ್ಲಿ ಪತ್ರಕರ್ತರು, ಸಿನಿಮಾ ಪುರವಣಿಗಳು ಎಲ್ಲವೂ ಒಂದಕ್ಕೊಂದು ಪೂರಕ ಎನ್ನುವಂತೆ ಕೈಕೈ ಹಿಡಿದು ನಡೆದುಕೊಂಡು ಬಂದಿವೆ.ಸಿನಿಮಾ ಉದ್ಯಮದ ನೆರವಿಗೆ ಪೂರಕವಾಗಿ, ಇದೊಂದು ಸಂಸ್ಕೃತಿಯ ಬೆಳವಣಿಗೆ ಎನ್ನುವಂತೆ ಮಾಧ್ಯಮ ಮಿತ್ರರು ಸಿನಿಮಾದೊಂದಿಗೆ ಹೊಂದಿಕೊಂಡು ಬಂದಿದ್ದಾರೆ. ಇಂತಹ ಹಿನ್ನೆಲೆಯನ್ನು ಮರೆತು, ಅಮೃತಮಹೋತ್ಸವ ಭವನದ ಸುತ್ತಮುತ್ತ ಮಾಧ್ಯಮ ಭವನ ಇರಕೂಡದು ಎನ್ನುವ ಷರತ್ತನ್ನು ಸಿನಿಮಾ ಮಂದಿ ಇಂದು ಫರ್ಮಾನಿನ ರೀತಿ ಹೊರಡಿಸಿರುವುದು ಅರ್ಥವಾಗದ ಸಂಗತಿ.                                                                                                                                                  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry