ಸೋಮವಾರ, ಡಿಸೆಂಬರ್ 9, 2019
17 °C

ಸರ್ಕಾರಿ ಪ್ರಶಸ್ತಿಗಳನ್ನು ಏಕೆ ನಿಷೇಧಿಸಬಾರದು?

ನಾರಾಯಣ ಎ
Published:
Updated:
ಸರ್ಕಾರಿ ಪ್ರಶಸ್ತಿಗಳನ್ನು ಏಕೆ ನಿಷೇಧಿಸಬಾರದು?

ಮತ್ತೊಂದು ಗಣರಾಜ್ಯೋತ್ಸವ (ಜನವರಿ 26) ಬರುತ್ತಿದೆ. ದೆಹಲಿಯಲ್ಲಿ ರಾಷ್ಟ್ರ ಪ್ರಶಸ್ತಿಗಳಿಗೆ ನಡೆಯುವ ಲಾಬಿ ಮತ್ತೊಮ್ಮೆ ತಾರಕಕ್ಕೇರಿದೆ ಎನ್ನುವ ವರದಿಗಳು ಬರುತ್ತಿವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರವೊಂದು ಪ್ರಶಸ್ತಿ– ಪಾರಿತೋಷಕಗಳನ್ನು ನೀಡುವುದೇ ಒಂದು ಅಸಂಗತತೆಯಾದರೆ ಅದನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡುತ್ತಿರುವುದು ಅದಕ್ಕಿಂತ ದೊಡ್ಡ ಅಸಂಗತತೆ.ಗಣರಾಜ್ಯ ದಿನ ಸಂಕೇತಿಸುವುದು ಭಾರತ ಅರಸೊತ್ತಿಗೆಯ ಬಾಹುಗಳಿಂದ ಸರ್ವವಿಧದಲ್ಲೂ ಕಳಚಿಕೊಂಡದ್ದನ್ನು. ಗಣರಾಜ್ಯದ ಸಂದರ್ಭದಲ್ಲಿ ಚುನಾಯಿತ ಸರ್ಕಾರಗಳು ನೀಡುವ ಪದವಿ, ಪುರಸ್ಕಾರಗಳು ಪ್ರತಿನಿಧಿಸುವುದು ಅರಸೊತ್ತಿಗೆಯ ಕಾಲದ ಆಚರಣೆಯ ಪಳೆಯುಳಿಕೆಗಳನ್ನು.ಐವತ್ತರ ದಶಕದಲ್ಲಿ ಈ ಪ್ರಶಸ್ತಿಗಳನ್ನು ಸಂಸ್ಥಾಪಿಸಿದ ಸ್ವಾತಂತ್ರ್ಯ ನಂತರದ ಮೊದಲನೆಯ ತಲೆಮಾರಿನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಗಣರಾಜ್ಯ ಘೋಷಣೆಯಾದ ಆರೂವರೆ  ದಶಕಗಳ ನಂತರ ಪ್ರವರ್ಧಮಾನಕ್ಕೆ ಬಂದಿರುವ ಇಂದಿನ ತಲೆಮಾರಿಗೂ ಸರ್ಕಾರದಿಂದ ಬರುವ ಪ್ರಶಸ್ತಿಗಳ ಮೇಲೆ ಆಕರ್ಷಣೆ ಕಡಿಮೆಯಾಗಿಲ್ಲ. ಸರ್ಕಾರವನ್ನೂ, ರಾಜಕಾರಣವನ್ನೂ, ರಾಜಕಾರಣಿಗಳನ್ನೂ ಜುಗುಪ್ಸೆಯಿಂದ ನೋಡುತ್ತಲೇ ಇವು ಮೂರೂ ಮೇಳೈಸಿದ ವ್ಯವಸ್ಥೆ ನೀಡುವ ಬಿರುದು–ಬಾವಲಿಗಳಿಗೆ ಭಾರತದ ಜನ ಇನ್ನಿಲ್ಲದಂತೆ ಪರವಶರಾಗಿರುವ ಸ್ಥಿತಿ ಆಧುನಿಕ ಪ್ರಜಾತಂತ್ರದ ವೈಚಿತ್ರ್ಯಗಳಲ್ಲಿ ಒಂದು.ಬಹುಶಃ ಭಾರತದಲ್ಲಿದ್ದಷ್ಟು ಸರ್ಕಾರೀ ಪ್ರಶಸ್ತಿಗಳು ಇನ್ಯಾವ ದೇಶದಲ್ಲೂ ಇಲ್ಲ. ಈ ಪ್ರಶಸ್ತಿಗಳದ್ದು ಮತ್ತು ಅವುಗಳಿಗಾಗಿ ನಡೆಯುವ ಲಾಬಿಗಳದ್ದೇ ಒಂದು ಉದ್ಯಮ.ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಗಳಿಂದ ಹಿಡಿದು, ಜಿಲ್ಲಾ-ತಾಲ್ಲೂಕು ಮಟ್ಟದವರೆಗಿನ ಎಲ್ಲಾ ಪ್ರಶಸ್ತಿಗಳ ಕತೆಯೂ ಒಂದು ರೀತಿಯಲ್ಲಿ ಭಾರತದ ಕರೆನ್ಸಿ ನೋಟುಗಳ ಕತೆ. ಈ ಪ್ರಶಸ್ತಿಗಳನ್ನು  ಪಡೆದವರಲ್ಲಿ ಎಷ್ಟು ಮಂದಿ ಸಾಚಾ ಮತ್ತು ಎಷ್ಟು ಮಂದಿ ಕೋಟಾ (ಅಂದರೆ ಲಾಬಿ ಮಾಡಿ, ಒತ್ತಡ ತಂದು ಪಡೆದುಕೊಂಡವರು) ಎಂದು ಪ್ರತ್ಯೇಕಿಸಲಾಗದ ಸ್ಥಿತಿ. ಒಂದು ಪ್ರಶ್ನೆ ಮೂಡುತ್ತದೆ. ನೋಟುಗಳ ಪೈಕಿ ಯಾವುದು ಅಸಲಿ, ಯಾವುದು ಖೋಟಾ, ಯಾವುದು ಕಪ್ಪು, ಯಾವುದು ಬಿಳಿ ಎಂದು ತಿಳಿಯದಾದಾಗ ಅಂತಹ ನೋಟುಗಳನ್ನೇ ರದ್ದುಪಡಿಸಿದ ಹಾಗೆ ಪ್ರಶಸ್ತಿ ಪಡೆದವರ ಮಧ್ಯೆ ಯಾರು ಸಾಚಾ, ಯಾರು ಖೋಟಾ ಎಂದು ತಿಳಿಯದ ಸ್ಥಿತಿಯಲ್ಲಿ ಈ ಎಲ್ಲಾ ಪ್ರಶಸ್ತಿಗಳನ್ನು ರದ್ದು ಮಾಡಿದರೆ ಹೇಗೆ? ಮೇಲ್ನೋಟಕ್ಕೆ ಈ ಪ್ರಶ್ನೆ ತಲೆಹರಟೆಯ ಹಾಗೆ ಕೇಳಿಸಬಹುದು. ಆದರೆ ಹಲವು ಕಾರಣಗಳಿಗಾಗಿ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.ಮೊದಲನೆಯದಾಗಿ ಪ್ರಶಸ್ತಿಗಳನ್ನು ನೀಡುವುದು ಸರ್ಕಾರದ ಕೆಲಸವಲ್ಲ ಮತ್ತು ಅದು ಸರ್ಕಾರದ ಕೆಲಸ ಆಗಬಾರದು ಕೂಡ. ಹೀಗೆ ಹೇಳಲು ಕಾರಣಗಳಿವೆ. ರಾಜಕೀಯ ತತ್ವಶಾಸ್ತ್ರದಲ್ಲಿ ಒಪ್ಪಿತವಾದ ಹಾಗೆ ಸರ್ಕಾರ ಎನ್ನುವ ವ್ಯವಸ್ಥೆ ತಾನು ಯಾವ ಕೆಲಸವನ್ನು ಅನಿವಾರ್ಯವಾಗಿ ಮಾಡಬೇಕೋ ಅದನ್ನು ಮಾತ್ರ ಮಾಡಬೇಕು. ಅಂದರೆ, ಒಂದು ಕೆಲಸ ಸಮಾಜದ ಸ್ವಾಸ್ಥ್ಯಕ್ಕೆ ತೀರಾ ಅಗತ್ಯವಿದ್ದು ಅದನ್ನು ಬೇರೆ ಯಾರೂ ಮಾಡುವ ಸಾಧ್ಯತೆ ಇಲ್ಲ ಎಂದಾದರೆ ಅದು ಸರ್ಕಾರದ ಕೆಲಸ ಆಗುತ್ತದೆ.ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕೆಲವು ಕೆಲಸಗಳು ಎಲ್ಲರಿಗೂ ಅಗತ್ಯವಿರುತ್ತವೆ, ಆದರೆ ಯಾರೂ ಅವುಗಳನ್ನು ಮಾಡಲು ಸಿದ್ಧವಿರುವುದಿಲ್ಲ. ಅಂತಹ ಕೆಲಸಗಳನ್ನು ಮಾಡುವುದು ಮಾತ್ರ ಸರ್ಕಾರದ ಮೂಲಭೂತ ಜವಾಬ್ದಾರಿ. ಯಾವ  ಕೆಲಸವನ್ನು ಮಾಡುವುದು ಸರ್ಕಾರಕ್ಕೆ ಅನಿವಾರ್ಯ ಅಲ್ಲವೋ ಅಂತಹ ಕೆಲಸದ ಉಸಾಬರಿಗೆ ಸರ್ಕಾರ ಹೋಗಬಾರದು. ಪ್ರಶಸ್ತಿಗಳನ್ನು ನೀಡುವುದು ಯಾವ ದೃಷ್ಟಿಯಿಂದ ನೋಡಿದರೂ ಸರ್ಕಾರವೊಂದು ಮಾಡಲೇಬೇಕಾದ ಅನಿವಾರ್ಯ ಕೆಲಸ ಅಲ್ಲ.ಪ್ರಶಸ್ತಿಗಳನ್ನು ನೀಡುವುದು ಸರ್ಕಾರ ಮಾಡಬೇಕಾದ ಕೆಲಸ ಎಂದು ತರ್ಕಕ್ಕೋಸ್ಕರ ಒಪ್ಪಿಕೊಂಡರೂ  ಇದು ಸರ್ಕಾರ ಮಾಡಲಾಗದ ಮತ್ತು ಮಾಡಬಾರದ ಕೆಲಸ.ಯಾಕೆಂದರೆ, ಇಲ್ಲಿ ಪ್ರಾಯೋಗಿಕವಾಗಿ ಹಾಗೂ ಸಾಂವಿಧಾನಿಕವಾಗಿ ಸಾಧುವಲ್ಲದ ಹಲವು ಅಂಶಗಳಿವೆ.ಸರ್ಕಾರ ಪ್ರಶಸ್ತಿಗಳನ್ನು ನೀಡುವಾಗ ವಿವಿಧ ರಂಗಗಳ ಸಾಧಕರಿಗೆ ತಾನು ಪ್ರಶಸ್ತಿ ನೀಡುತ್ತೇನೆ ಎನ್ನುತ್ತದೆ. ವಿವಿಧ ಎಂದರೆ ಎಷ್ಟು ರಂಗಗಳು?  ಎಷ್ಟೇ ಪ್ರಯತ್ನಿಸಿದರೂ ಕೆಲ ಕ್ಷೇತ್ರಗಳು ಸರ್ಕಾರದ ಪ್ರಶಸ್ತಿಯ ವ್ಯಾಪ್ತಿಯ ಹೊರಗೆ ಉಳಿದೇ ಉಳಿಯುತ್ತವೆ. ಹಾಗಾದರೆ, ಸರ್ಕಾರ ಗುರುತಿಸಿ ಪ್ರಶಸ್ತಿ ನೀಡುವ ರಂಗಗಳು ಮಾತ್ರ ಈ ದೇಶಕ್ಕೆ, ಈ ಸಮಾಜಕ್ಕೆ ಕೊಡುಗೆ ನೀಡುವ ರಂಗಗಳೇ, ಉಳಿದ ರಂಗಗಳು ನೀಡುವ ಕೊಡುಗೆಗಳು ಕನಿಷ್ಠವೇ?ಕೆಲವು ಕ್ಷೇತ್ರಗಳು ರಾಷ್ಟ್ರ ಮಟ್ಟದ ಮನ್ನಣೆಗೆ ಯೋಗ್ಯ, ಇನ್ನು ಕೆಲ ರಂಗಗಳು ರಾಜ್ಯ ಮಟ್ಟಕ್ಕೆ ಸೀಮಿತ ಹಾಗೂ ಉಳಿದವುಗಳು ಹೆಚ್ಚೆಂದರೆ ಸ್ಥಳೀಯ ಮಟ್ಟದ ಪ್ರಶಸ್ತಿಗಷ್ಟೇ ಅರ್ಹ ಎಂದು ಪರಿಗಣಿಸುವುದು ಪಕ್ಕಾ ಪಕ್ಷಪಾತ ನೀತಿ.ವಿಜ್ಞಾನಿಯೊಬ್ಬನ ಜ್ಞಾನ ಶ್ರೇಷ್ಠ ಪ್ರಶಸ್ತಿಗೆ ಅರ್ಹ, ಕೃಷಿಕನ, ಬಡಗಿಯ, ಕುಂಬಾರನ ಜ್ಞಾನ ಪ್ರಶಸ್ತಿಗೆ ಅರ್ಹವಲ್ಲ ಅಥವಾ ಅರ್ಹವಾಗಿದ್ದರೂ ಅದು ಸ್ಥಳೀಯ ಮಟ್ಟದ ಪ್ರಶಸ್ತಿಗೆ ಮಾತ್ರ ಯೋಗ್ಯ ಎ೦ದು ನಿರ್ಧರಿಸಲು ಸರ್ಕಾರಕ್ಕೆ ಏನು ಹಕ್ಕಿದೆ? ಸಿನಿಮಾ, ಸಾಹಿತ್ಯ ಇತ್ಯಾದಿಗಳನ್ನು ಶ್ರೇಷ್ಠ, ಕನಿಷ್ಠ ಎಂದು ವಿಭಾಗಿಸುವ ಕೆಲಸ ಸರ್ಕಾರವೇಕೆ ವಹಿಸಿಕೊಳ್ಳಬೇಕು? ಇನ್ನು ‘ಮೇಲ್ಮಟ್ಟದ’ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದವರನ್ನು ಬೇರೆಯೇ ವರ್ಗದ ಪ್ರಜೆಗಳು ಎಂದು ನೋಡುವ ಪರಿಪಾಠವೂ ಬೆಳೆದುಬಂದಿದೆ.ಇಂತಹ ಪ್ರಶಸ್ತಿ ಪಡೆದವರಿಗೆ ಸೈಟು ಪಡೆಯುವಾಗ ಅಷ್ಟು ಪ್ರಾಶಸ್ತ್ಯ, ಇನ್ನೇನೋ ಪಡೆಯುವಾಗ ಇಷ್ಟು ಪ್ರಾಶಸ್ತ್ಯ ಅಂತ ನಿರ್ಧರಿಸುವುದು ಎಂದರೆ ಸಾಂವಿಧಾನಿಕ ಸಮಾನತೆಯ ಆಶಯಗಳನ್ನು ಅಲ್ಲಗಳೆದಂತೆ.  ಈಗಾಗಲೇ ಹಲವು ರೀತಿಯ ಮೇಲು, ಕೀಳು ವ್ಯವಸ್ಥೆಗಳು ಗಟ್ಟಿಯಾಗಿರುವ ಭಾರತೀಯ ಸಮಾಜದಲ್ಲಿ ಪ್ರಶಸ್ತಿಗಳು ಇನ್ನೊಂದು ರೀತಿ ವರ್ಣಾಶ್ರಮ ವ್ಯವಸ್ಥೆಯನ್ನು ಹುಟ್ಟುಹಾಕುತ್ತಿವೆ.ಒಂದೆರಡು ವರ್ಷಗಳ ಹಿಂದೆ ಕೆಲ ಪ್ರಶಸ್ತಿ ವಿಜೇತರು ಪ್ರಶಸ್ತಿಗಳನ್ನು ಹಿಂದಿರುಗಿಸುವ ಮೂಲಕ ಸರ್ಕಾರದ ಧೋರಣೆ ವಿರುದ್ಧ ಪ್ರತಿಭಟಿಸಿದರು. ಈ ಪ್ರತಿಭಟನೆಗೆ ಹಲವು ಕಾರಣಗಳಿದ್ದವು. ಆ ಕಾರಣಗಳಲ್ಲಿ ಒಂದು ಕೇಂದ್ರದ ಬಿಜೆಪಿ ಸರ್ಕಾರ ದೇಶದಲ್ಲಿ ಅಸಹಿಷ್ಣುತೆ ಪೋಷಿಸುತ್ತದೆ ಎನ್ನುವ ಆಪಾದನೆಯಾಗಿತ್ತು. ಪ್ರತಿಭಟನಾಕಾರರು ಈ ಕಾರಣ ನೀಡಿದಾಗ ಬಲಪಂಥೀಯ ವಕ್ತಾರರೆಲ್ಲಾ ಪ್ರಶಸ್ತಿ ಹಿಂದಿರುಗಿಸಿದವರ ಮೇಲೆ ಮುಗಿಬಿದ್ದರು. ಇತರರು ಇದೊಂದು ದೊಡ್ಡ ಪ್ರತಿಭಟನಾ ಅಸ್ತ್ರ ಎಂದರು.ಈ ಪರ-ವಿರೋಧ ತಾಕಲಾಟಗಳ ಮಧ್ಯೆ ಒಂದು ಪ್ರಮುಖ  ವಿಚಾರ ಪ್ರಸ್ತಾಪವಾಗದೆ ಹೋಯಿತು. ಅದು ಏನು ಎಂದರೆ ಒಮ್ಮೆ ಪ್ರಶಸ್ತಿ ಸ್ವೀಕರಿಸಿದ ಯಾರೇ ಆದರೂ ಅದನ್ನು ಹಿಂದಿರುಗಿಸಿ ಪ್ರತಿಭಟಿಸುವ ನೈತಿಕಶಕ್ತಿ ಕಳೆದುಕೊಂಡಿರುತ್ತಾರೆ. ಅಷ್ಟರಮಟ್ಟಿಗೆ ಪ್ರಶಸ್ತಿ ಹಿಂದಿರುಗಿಸಿದವರ ಮೇಲೆ ಬಲಪಂಥೀಯರು ಮಾಡಿದ ಟೀಕೆ ಒಪ್ಪಿಕೊಳ್ಳುವಂತಹದ್ದು.ಸರ್ಕಾರವನ್ನು ಸದಾ ಎಚ್ಚರದಲ್ಲಿರುವಂತೆ ಮಾಡುವ ನೈತಿಕ ಹೊಣೆಗಾರಿಕೆ ತಮ್ಮ ಮೇಲೆ ಇದೆ ಎನ್ನುವುದನ್ನು ಒಪ್ಪಿಕೊಂಡ ಯಾರೂ ಕೂಡಾ ಸರ್ಕಾರ ನೀಡುವ ಪ್ರಶಸ್ತಿಯನ್ನು ಸ್ವೀಕರಿಸಲೇಬಾರದು. ಸರ್ಕಾರ ಪ್ರಶಸ್ತಿ ನೀಡುವುದು ಒಂದು ಪ್ರಜಾಸತ್ತಾ-ವಿರೋಧಿ ಕ್ರಮ. ಇಂತಹ ಒಂದು ವಿಧದ ಪ್ರಜಾತಂತ್ರ ವಿರೋಧಿ ಕ್ರಮದಲ್ಲಿ ಭಾಗಿಯಾದ ನಂತರ ಸರ್ಕಾರ ಮಾಡುವ ಅಂತಹ ಇನ್ನೊಂದು ಕೆಲಸವನ್ನು ವಿರೋಧಿಸಿ ಪ್ರಶಸ್ತಿ ಹಿ೦ದಿರುಗಿಸುವುದು ಎಂದರೆ ತಮಗಿಲ್ಲದ ನೈತಿಕ ಶಕ್ತಿಯನ್ನು ಪ್ರದರ್ಶಿಸಲು ಹೊರಟಂತೆ.ಸರ್ಕಾರ ಎಂಬುದು ಜನ ಸದಾ ಗುಮಾನಿಯಿಂದ ಗಮನಿಸುತ್ತಿರಬೇಕಾದ ಒಂದು ಸಂಸ್ಥೆ. ಕೆಲ ವೃತ್ತಿಗಳನ್ನು ವಹಿಸಿಕೊಂಡವರು ಈ ಕೆಲಸವನ್ನು ನಿರಂತರವಾಗಿ ಮಾಡುತ್ತಿರಬೇಕು. ಮುಖ್ಯವಾಗಿ ಸಾಹಿತಿಗಳು, ಪತ್ರಕರ್ತರು, ಸಮಾಜ ಸುಧಾರಕರು, ಹೋರಾಟಗಾರರು ಸರ್ಕಾರದ ಪ್ರಶಸ್ತಿಗಳನ್ನು ಪಡೆಯುವುದು ಎಂದರೆ ಅವರಿಗಿರುವ ಮೂಲಭೂತವಾದ ಈ ಜವಾಬ್ದಾರಿಯಿಂದ ಹೊರಹೋಗುವುದೆಂದೇ ಭಾವಿಸಬೇಕಾಗುತ್ತದೆ. ಆದುದರಿಂದ ಪ್ರಶಸ್ತಿಯನ್ನು ಹಿಂದಿರುಗಿಸುವುದು ಪ್ರತಿಭಟನೆಯಾಗುವುದಿಲ್ಲ. ಪ್ರಶಸ್ತಿಯ ನಿರಾಕರಣೆ ಮಾತ್ರ ಪ್ರಶಸ್ತಿಗಳ ಮೂಲಕ ಮಾಡಬಹುದಾದ ಪ್ರತಿಭಟನೆ.ಫ್ರೆಂಚ್ ಬರಹಗಾರ ಮತ್ತು  ತತ್ವಶಾಸ್ತ್ರಜ್ಞ ಜೀನ್ ಪಾಲ್ ಸಾರ್ತ್ರ್ ಅವರು 1964ರ  ಸಾಹಿತ್ಯದ ನೊಬೆಲ್ ಪ್ರಶಸ್ತಿಗೆ ಆಯ್ಕೆ ಆಗಿದ್ದರು. ಅದನ್ನು ಸ್ವೀಕರಿಸಲು ಅವರು ನಿರಾಕರಿಸಿದರು. ಆ ಸಂದರ್ಭದಲ್ಲಿ ಅವರು ನೊಬೆಲ್ ಆಯ್ಕೆ ಸಮಿತಿಗೆ ಬರೆದ ಪತ್ರದಲ್ಲಿ  ಪ್ರಶಸ್ತಿ ನಿರಾಕರಿಸಿದ್ದಕ್ಕೆ ನೀಡುವ ಒಂದು ಕಾರಣ ಹೀಗಿದೆ: ‘ಸಾರ್ತ್ರ್, ಫ್ರೆಂಚ್ ಬರಹಗಾರ ಎಂದು ದಾಖಲಾಗುವ ನನ್ನ ಸಹಿ ಯಾವತ್ತೂ ಸಾರ್ತ್ರ್, ನೊಬೆಲ್ ಪ್ರಶಸ್ತಿ ವಿಜೇತ ಫ್ರೆಂಚ್ ಬರಹಗಾರ ಎಂದು ದಾಖಲಾಗುವ ನನ್ನ ಸಹಿಗಿಂತ ಹೆಚ್ಚು ಪ್ರಬಲವಾಗಿರುತ್ತದೆ. ಅದನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ’. ನೊಬೆಲ್ ಪ್ರಶಸ್ತಿಯನ್ನು ಸರ್ಕಾರೇತರ ಸಂಸ್ಥೆ ನೀಡುತ್ತದೆ. ಸರ್ಕಾರ ನೀಡುವ ಪ್ರಶಸ್ತಿಗಳ ವಿಚಾರದಲ್ಲಿ ಸಾರ್ತ್ರ್ ಹೇಳಿದ್ದು ಇನ್ನೂ ಹೆಚ್ಚು ಸತ್ಯವಾಗಿರುತ್ತದೆ.ಪ್ರಶಸ್ತಿಯೊಂದು ಪ್ರಶಸ್ತಿ ಅಂತ ಅನಿಸುವುದು ಅದರ ಆಯ್ಕೆ ನಿಷ್ಪಕ್ಷಪಾತವಾಗಿ ನಡೆದಾಗ. ಭಾರತದಂತಹ  ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಿಷ್ಪಕ್ಷಪಾತ ಆಯ್ಕೆ ಸಾಧ್ಯವೇ ಇಲ್ಲ. ನಮ್ಮ ಪ್ರಜಾಸತ್ತೆ ಇನ್ನೂ ಅಷ್ಟೊಂದು ಪ್ರಬುದ್ಧತೆ ಹೊಂದಿಲ್ಲ. ಎಲ್ಲಾ ಜಾತಿಗಳಿಗೆ, ಎಲ್ಲಾ ಧರ್ಮಗಳಿಗೆ, ಎಲ್ಲಾ ಪ್ರಾಂತ್ಯಗಳಿಗೆ, ಎಲ್ಲಾ ತತ್ವಗಳಿಗೆ ಹೊಂದಿಸಿ ಸರ್ಕಾರಗಳು ನೀಡುವ ಪ್ರಶಸ್ತಿಗಳನ್ನು ಯಾರೂ ಪ್ರಶಸ್ತಿ ಎಂದು ಕರೆಯಲು ಸಾಧ್ಯವೇ ಇಲ್ಲ. ಅದು ಸರ್ಕಾರ ನೀಡುವ ಉಡುಗೊರೆ.ಪ್ರಶಸ್ತಿ ಪಡೆದವರಲ್ಲಿ ಕೆಲವು ಮಂದಿ ಅದಕ್ಕೆ ಸಂಪೂರ್ಣ ಅರ್ಹರಿರಬಹುದು ಮತ್ತು  ಯಾವುದೇ ಲಾಬಿ ನಡೆಸದೆ ಅವರಿಗೆ ಪ್ರಶಸ್ತಿ ಬಂದಿರಬಹುದು. ಆದರೆ ಅಂತಹ ಅರ್ಹರ ಬಗ್ಗೆ ಪ್ರಶಸ್ತಿ ಬರುವ ಮೊದಲೇ ಸಮಾಜಕ್ಕೆ ತಿಳಿದಿರುತ್ತದೆ. ಪ್ರಶಸ್ತಿ ಬರುವುದರಿಂದ ಅವರಿಗೆ ಏನೂ ಆಗಬೇಕಿಲ್ಲ. ಬದಲಿಗೆ, ಪ್ರಶಸ್ತಿ ಪಡೆದ ಅನರ್ಹರ ಜತೆ ಅವರ ಹೆಸರಿನ ಸಮೀಕರಣವಾಗಿ ಕೆಲವೊಮ್ಮೆ ಅವರ ಗೌರವ ಕಡಿಮೆ ಆದರೂ ಆದೀತು.  ಇನ್ನು, ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸರ್ಕಾರ ಗೌರವಿಸುವುದರಿಂದ ಅಂತಹವರಿಗೆ ತಮ್ಮ ಕೆಲಸ ಮುಂದುವರಿಸಲು ಪ್ರೇರಣೆ  ನೀಡಿದಂತಾಗುತ್ತದೆ ಮತ್ತು ಬೇರೆಯವರು ನಿಸ್ವಾರ್ಥ ಸೇವೆಯಲ್ಲಿ ತೊಡಗಲು ಸ್ಫೂರ್ತಿಯಾಗುತ್ತದೆ ಎನ್ನುವ ವಾದವಿದೆ. ಇದು ವಿತಂಡವಾದ. ನಿಸ್ವಾರ್ಥ ಸೇವೆಯಲ್ಲಿ ತೊಡಗಿದವರು ಪ್ರಶಸ್ತಿಯಿಂದ ಪ್ರೇರಣೆ ಪಡೆಯುತ್ತಾರೆ ಎಂದಾದರೆ ಅವರ ನಿಸ್ವಾರ್ಥತೆಯನ್ನೇ ಅವಮಾನಿಸಿದಂತೆ.ಪ್ರಶಸ್ತಿ ಇದೆ ಎನ್ನುವ ಕಾರಣಕ್ಕೆ ಮುಂದೆ ಯಾರಾದರೂ ನಿಸ್ವಾರ್ಥ ಸೇವೆಯಲ್ಲಿ ತೊಡಗಬಹುದು ಎಂದರೆ ಪ್ರಶಸ್ತಿ ಆಸೆಗೆ ಅವರು ಹಾಗೆ ಮಾಡಬಹುದು ಎಂದ ಹಾಗಾಯಿತು. ನಿಸ್ವಾರ್ಥ ಸೇವೆ ಮಾಡುವವರು ಹಾಗೆ ಮಾಡುವುದು ಆ೦ತರಿಕ ಪ್ರೇರಣೆಯಿಂದ. ತಮ್ಮ ಆತ್ಮದ ಹಸಿವಿನ ಕಾರಣಕ್ಕೆ. ನಿಸ್ವಾರ್ಥ ಸೇವೆ  ಬೆಲೆ ಕಟ್ಟಲಾಗದ್ದು. ಅದಕ್ಕೆ ಪ್ರಶಸ್ತಿ ನೀಡುವುದು ಎಂದರೆ ಅದರ ಬೆಲೆ ತಗ್ಗಿಸುವುದು ಎಂದರ್ಥ.ದೆಹಲಿಯಲ್ಲಿ ಈಗ ರಾಷ್ಟ್ರ ಪ್ರಶಸ್ತಿಗಳಿಗಾಗಿ ನಡೆಯುತ್ತಿರುವ ಲಾಬಿಗಳ ವಿಚಾರ ಪ್ರಸ್ತಾಪಿಸಿ ಹಿಂದಿನ ಕೇಂದ್ರ ಮಂತ್ರಿ ಜೈರಾಮ್ ರಮೇಶ್ ಬರೆದ ಲೇಖನದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎನ್. ಹಕ್ಸರ್ ಪದ್ಮ ಪ್ರಶಸ್ತಿ ನಿರಾಕರಿಸಿದ ಬಗ್ಗೆ ಪ್ರಸ್ತಾಪಿಸಿದ್ದರು. 1970ರ ದಶಕದಲ್ಲಿ ಅಂದಿನ ಕೇಂದ್ರ ಸರ್ಕಾರದ ಎಲ್ಲಾ ಯಶಸ್ವೀ ನಿರ್ಧಾರಗಳ ಹಿಂದಿನ ಬೌದ್ಧಿಕ ಶಕ್ತಿಯಾಗಿದ್ದ ಹಕ್ಸರ್‌್ ಪ್ರಶಸ್ತಿ ನಿರಾಕರಿಸುವಾಗ ಹೇಳಿದ್ದರಂತೆ: ‘ಸಂಬಳ ಪಡೆದು ಕೆಲಸ ಮಾಡಿದ್ದೇನೆ. ಅದಕ್ಕಾಗಿ ಪ್ರಶಸ್ತಿ ಸ್ವೀಕರಿಸುವುದನ್ನು ನನ್ನ ಆತ್ಮ ಸಾಕ್ಷಿ ಒಪ್ಪುವುದಿಲ್ಲ’.ಈ ಮಧ್ಯೆ ಉಡುಪಿಯ ಜಿ. ರಾಜಶೇಖರ್ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡಬಯಸಿದ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಅವರಿಗೆ ಅಭಿನಂದನೆ. ಗಣರಾಜ್ಯ ದಿನಕ್ಕೊಂದು ಅರ್ಥ ಬರಬೇಕಾದರೆ ಅಂದು ನಾವು ಪ್ರಶಸ್ತಿಗಳನ್ನು ನಿರಾಕರಿಸಿದವರನ್ನು ನೆನಪಿಸಿಕೊಳ್ಳಬೇಕು; ಪ್ರಶಸ್ತಿ ಸ್ವೀಕರಿಸಿದವರನ್ನಲ್ಲ. ಪ್ರಶಸ್ತಿ ಪಡೆದವರು ತಮ್ಮ ಹೆಸರಿನ ಮುಂದೆ ಪ್ರಶಸ್ತಿಯ ಹೆಸರು ಸೇರಿಸುವುದು ಸಮಾನತೆಯ ಆಶಯಕ್ಕೆ ಧಕ್ಕೆ ತರುತ್ತದೆ ಎನ್ನುವ ಕಾರಣಕ್ಕೆ ಹಾಗೆ ಮಾಡುವುದನ್ನು ಸಂವಿಧಾನ ನಿಷೇಧಿಸಿದೆ. ಸುಪ್ರೀಂ ಕೋರ್ಟ್ ಮತ್ತೆ ಮತ್ತೆ ಅದನ್ನೇ ಒತ್ತಿ ಹೇಳಿದೆ. ಆದರೂ ತಮ್ಮ ಹೆಸರಿನ ಮುಂದೆ ಪದ್ಮಭೂಷಣ, ಪದ್ಮವಿಭೂಷಣ ಎಂದೆಲ್ಲ ಸೇರಿಸುವವರು ಇಡೀ ಗಣತಂತ್ರದ ಪರಿಕಲ್ಪನೆಯನ್ನೇ ಅಣಕಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)