ಸಾಂತ್ವನದ ಶಕ್ತಿ

7

ಸಾಂತ್ವನದ ಶಕ್ತಿ

ಗುರುರಾಜ ಕರ್ಜಗಿ
Published:
Updated:

ಇತ್ತೀಚೆಗೆ ನನ್ನ ಆತ್ಮೀಯ ಸ್ನೇಹಿತರೊಬ್ಬರ ಪತ್ನಿ ನಿಧನರಾದರು. ತುಂಬ ಆರೋಗ್ಯವಂತರಾಗಿದ್ದವರು, ಸದಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದವರು. ಸದಾ ನಗುನಗುತ್ತ ಇರುವವರು ಹಠಾತ್ತಾಗಿ ಕಣ್ಮರೆಯಾದಾಗ ಅವರ ಮನೆಯವರಿಗಾದ ಆಘಾತ ಕಲ್ಪನಾತೀತ. ಆ ಸುದ್ದಿಯನ್ನು ನನಗೆ ಮತ್ತೊಬ್ಬ ಗೆಳೆಯ ತಿಳಿಸಿದಾಗ ನಾನು ಮತ್ತೊಂದು ಊರಿನಲ್ಲಿ ಯಾವುದೋ ಕೆಲಸದಲ್ಲಿ ತೊಡಗಿಕೊಂಡಿದ್ದೆ. ನನ್ನ ಸ್ನೇಹಿತರ ಮನೆಗೆ ಹೋಗಿ ಸಾಂತ್ವನ ಹೇಳುವ ಅವಕಾಶವಾಗಲಿಲ್ಲ. ಖೇದವಾಯಿತು.ಒಮ್ಮೊಮ್ಮೆ ಮನಸ್ಸು ಚಿಂತಿಸುತ್ತದೆ. ಆಗಬಾರದ್ದು ಆಗಿ ಹೋಗಿದೆ. ಅಲ್ಲಿ ಹೋಗಿ ಸಾಂತ್ವನ ಹೇಳುವುದರಿಂದ ಆಗುವುದಾದರೂ  ಏನು?

ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದ ಘಟನೆ ಸ್ಮರಣೆಗೆ ಬಂದಿತು. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಅಧ್ಯಾಪಕರ ಒಂದು ವರ್ಷದ ಮಗು ಕಾಲವಾದ ಸುದ್ದಿ ಕಾಲೇಜಿಗೆ ಬಂತು. ತಕ್ಷಣ ಉಳಿದ ಅಧ್ಯಾಪಕರೆಲ್ಲ ಸೇರಿ ಅವರ ಮನೆಗೆ ನಡೆದೆವು. ಅವರ ಮನೆಯನ್ನು ಹುಡುಕುತ್ತಾ ಹೊರಟೆವು. ಅವರಿದ್ದ ಪ್ರದೇಶ ಗೊತ್ತಿತ್ತೇ ವಿನಾ ಮನೆಯನ್ನು ನಾವು ನೋಡಿರಲಿಲ್ಲ.  ಹೀಗೆ ಒಂದು ಬೀದಿಗೆ ತಿರುಗಿದಾಗ ಅಲ್ಲಿ ಒಂದು ಮನೆಯ ಮುಂದೆ ಹದಿನೈದು ಇಪ್ಪತ್ತು ಜನ ತುಂಬ ಗಂಭೀರವಾಗಿ ಮನೆಯ ಬಾಗಿಲಿನ ಕಡೆಗೆ ನೋಡುತ್ತ ನಿಂತದ್ದು ಕಂಡಿತು. ಹಾಗಾದರೆ ಅದೇ ಮನೆ ಎಂದು ತಿಳಿದು ಅಲ್ಲಿಗೆ ಹೋದೆವು. ಹೊರಗಡೆ ಚಪ್ಪಲಿಗಳನ್ನು ಬಿಟ್ಟು ಮನೆಯ ಒಳಕ್ಕೆ ಕಾಲಿಟ್ಟೆವು. ಅಲ್ಲಿದ್ದ ಸಣ್ಣ ಹಜಾರದಲ್ಲಿ ಆಗಲೇ ಇಪ್ಪತ್ತು -ಇಪ್ಪತ್ತೈದು ಜನ ನೆಲದ ಮೇಲೆ ಕುಳಿತಿದ್ದರು.ಅದರಲ್ಲಿ ಹತ್ತಾರು ಹೆಣ್ಣುಮಕ್ಕಳು ಒಬ್ಬರೊಬ್ಬರ ಭುಜಗಳು ತಗಲುವಂತೆ ಇಕ್ಕಟ್ಟಾಗಿ ಕುಳಿತಿದ್ದರು. ಪ್ರತಿಯೊಬ್ಬರ ಕಣ್ಣಲ್ಲಿ ನೀರು ಮಡುಗಟ್ಟಿ ನಿಂತಿದೆ. ನನಗೆ ಆ ದೃಶ್ಯವನ್ನು ತಡೆದುಕೊಳ್ಳುವುದೇ ಕಷ್ಟವಾಯಿತು. ಅದುವರೆಗೂ ನಾನು ಮಗುವನ್ನಾಗಲೀ ಅದರ ತಾುಯನ್ನಾಗಲೀ ಒಂದು ಬಾರಿಯೂ ನೋಡಿರದಿದ್ದರೂ ಆ ಪುಟ್ಟ ಮಗುವಿನ ಸಾವು ನನ್ನನ್ನು ಅಷ್ಟು ಗಾಢವಾಗಿ ತಟ್ಟಿತ್ತು. ಅಜ್ಜಿಯ ಮಡಿಲಲ್ಲಿ ಬಿಳೀ ಬಟ್ಟೆ ಸುತ್ತಿಕೊಂಡ ಮಗುನ ದೇಹ ವಿಶ್ರಮಿಸಿತ್ತು. ಪಕ್ಕದಲ್ಲೇ ಮಗುವಿನ ತಾಯಿ.ಆಕೆಯ ಗೋಳನ್ನು ನೋಡುವುದೇ ಅಸಾಧ್ಯ. ನನ್ನ ಪಕ್ಕದಲ್ಲಿದ್ದವರು ಮಗುವಿಗೆ ಅದೇನೋ ರೋಗ ಬಂದಿತ್ತೆಂದೂ ಅದರಿಂದಾಗಿ ಮಗು ಜೀವನಪರ್ಯಂತ ಪರಾವಲಂಬಿಯಾಗಿಯೇ ಬದುಕಬೇಕಾದ ಪರಿಸ್ಥಿತಿ ಬರುತ್ತಿದ್ದುದರಿಂದ ಹೀಗಾದದ್ದೇ ಮಗುವಿಗೂ, ಪಾಲಕರಿಗೂ ಒಳ್ಳೆಯದಾಯಿತೆಂದೂ ಪಿಸುಗುಟ್ಟಿದರು. ನನಗೆ ಅದಾವುದೂ ಮುಖ್ಯವೆನ್ನಿಸಲಿಲ್ಲ. ಸಾವು ಸಾವೇ, ಅದು ಕಹಿಗಳನ್ನು ಮರೆಸಿಬಿಡುತ್ತದೆ.ನಾವು ಅಲ್ಲಿಯೇ ಕುಳಿತು ಅವರೊಂದಿಗೇ ಒಂದಿಷ್ಟು ಕಣ್ಣೀರು ಸುರಿಸಿದೆವು. ಒಂದು ಸುಂದರವಾದ ವೃಕ್ಷವಾಗಬೇಕಾಗಿದ್ದ ಚೇತನ ಸಸಿಯಾಗಿದ್ದಾಗಲೇ ಕಮರಿ ಹೋದದ್ದು ಸಂಕಟವನ್ನು ತಂದಿತ್ತು. ನಾವಾರೂ ಮಾತನಾಡಲಿಲ್ಲ. ಅಲ್ಲಿ ಮಾತೂ ಅವಶ್ಯಕವಾಗಿರಲಿಲ್ಲ.ಕೆಲದಿನಗಳ ನಂತರ ಮನೆಯವರಿಗೆ ಸಾವಿನ ನೋವಿನ ತೀಕ್ಷ್ಣತೆ ಕಡಿಮೆಯಾಗುತ್ತಾ ಹೋಗುತ್ತದೆ. ಅದು ನಿಸರ್ಗದ ನಿಯಮ. ಕಾಲ ಎಂತಹ ಆಘಾತಗಳನ್ನೂ ಮರೆಸಿ ಬಿಡುತ್ತದೆ. ಮಗುವಿನ ತಾಯಿಗೂ ನಿಧಾನವಾಗಿಯಾದರೂ ಜೀವನ ಮರಳಿ ಬರುತ್ತದೆ. ಆಗ ಆಕೆಗೆ ಅಂದು ಯಾರು ಮನೆಗೆ ಬಂದಿದ್ದರು, ಯಾರು ಏನು ಮಾತನಾಡಿದರು ಎಂಬುದು ನೆನಪಿನಲ್ಲಿರುವುದು ಸಾಧ್ಯವಿಲ್ಲವಾದರೂ ಅಂದು ಮನೆತುಂಬ ಜನ ಬಂದಿದ್ದರೆಂಬುದು ನೆನಪಿನಲ್ಲಿರುತ್ತದೆ. ಹಾಗೆ ನೆನೆಸಿಕೊಳ್ಳುವಾಗ ತಾನೊಬ್ಬಳೇ ದುಃಖದಲ್ಲಿ ಅಳದೇ ತನ್ನೊಂದಿಗೆ ಅನೇಕ ಜನ ಅದನ್ನು ಹಂಚಿಕೊಂಡರೆಂದು ನೆನೆದಾಗ ಭಾರ ಕಡಿಮೆಯಾದಂತೆನಿಸುತ್ತದೆ.ಇದೇ ಹಂಚಿಕೊಳ್ಳುವುದರಲ್ಲಿರುವ ಶಕ್ತಿ, ಮತ್ತೊಬ್ಬರ ನೋವನ್ನು ಅನುಭವಿಸುವ ಮತ್ತು ಒಗ್ಗೂಡಿ, ಸಾರ್ವತ್ರಿಕವಾಗಿ ಅವರಿಗೆ ಶಕ್ತಿ ನೀಡುವ ಸಾಂತ್ವನ ಶಕ್ತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry