ಭಾನುವಾರ, ಅಕ್ಟೋಬರ್ 20, 2019
27 °C

ಸಾಧನೆಯ ಬೀಗದ ಕೈ ಮನಸ್ಸು

ಗುರುರಾಜ ಕರ್ಜಗಿ
Published:
Updated:

ಭರ್ತೃಹರಿ ಬೃಹತ್ ಸಾಮ್ರೋಜ್ಯದ ಚಕ್ರವರ್ತಿಯಾಗಿದ್ದವನು. ತನ್ನ ಹೆಂಡತಿ ತನಗೆ ಮೋಸ ಮಾಡಿದ್ದಾಳೆಂಬ ಅರಿವಾದೊಡನೆ ಸಿಂಹಾಸನವನ್ನು ಬಿಟ್ಟು ವೈರಾಗಿಯಾದವನು. ಮುಂದೆ ಶತಕ ತ್ರಯಗಳನ್ನು ಬರೆದು ಪ್ರಖ್ಯಾತನಾದವನು.ಮನೆಯನ್ನು ತೊರೆಯುವುದು ಸುಲಭ, ಅಧಿಕಾರವನ್ನು ತ್ಯಜಿಸುವುದು ಕಷ್ಟ, ಆದರೆ ಮನಸ್ಸನ್ನು ತೊರೆಯುವುದು ತುಂಬಾ ಕಷ್ಟದ ಕೆಲಸ. ರಾಜ್ಯ ತೊರೆದ ಮೇಲೆ ಒಂದು ದಿನ ಭರ್ತೃಹರಿ ಸಾಮಾನ್ಯನಂತೆ ಅಲೆಯುತ್ತ ಮಾರುಕಟ್ಟೆಗೆ ಬಂದ. ಅಲ್ಲೂ ಬಗೆಬಗೆಯ ಸಾಮಾನುಗಳು ಮಾರಾಟವಾಗುತ್ತಿದ್ದವು.ಒಂದು ಅಂಗಡಿಯ ಮುಂದೆ ಸಾಕಷ್ಟು ಜನ ನೆರೆದಿದ್ದರು. ಈತನೂ ಹೋಗಿ ನಿಂತುಕೊಂಡ. ಅದೊಂದು ಸಿಹಿತಿಂಡಿಗಳನ್ನು ತಯಾರು ಮಾಡಿ ಮಾರುವ ಅಂಗಡಿ.ತಿಂಡಿಗಳ ಪರಿಮಳ ಎಲ್ಲೆಡೆಗೆ ಹರಡಿತ್ತು. ಅಂಗಡಿಯಾತ ಆಗ ತಾನೇ ಸಿದ್ಧಪಡಿಸಿದ ತಿಂಡಿಗಳನ್ನು ಹೊರಗೆ ತಂದು ಕಟ್ಟೆಯ ಮೇಲೆ ಇಟ್ಟುಕೊಂಡ. ಅದನ್ನು ಕೊಳ್ಳಲು ಜನ ನುಗ್ಗಿದರು. ಅದನ್ನು ಪಡೆದುಕೊಂಡು ತಿಂದವರು ಅದರ ರುಚಿಯನ್ನು ಹೊಗಳುತ್ತಿದ್ದರು. ಭರ್ತೃಹರಿಗೂ ಆ ತಿಂಡಿಯನ್ನು ತಿನ್ನಲೇಬೇಕೆಂಬ ಆಸೆಯಾಯಿತು.ತನ್ನ ಪಾಳಿ ಬಂದಾಗ ಅಂಗಡಿಯವನಿಗೆ ತಿಂಡಿ ಕೊಡಲು ಹೇಳಿದ. ಅಂಗಡಿಯ ಮಾಲಿಕ ದುಡ್ಡು ಕೇಳಿದ. ಭರ್ತೃಹರಿ ಇಷ್ಟು ವರ್ಷ ಚಕ್ರವರ್ತಿಯಾಗಿದ್ದವನು, ಅವನಿಗೆ ದುಡ್ಡು ಕೊಟ್ಟು ಕೊಳ್ಳುವ ಪ್ರಸಂಗವೇ ಬಂದಿರಲಿಲ್ಲ. ಭರ್ತೃಹರಿ , `ನನ್ನ ಹತ್ತಿರ ದುಡ್ಡೇ ಇಲ್ಲ~ ಎಂದ.  `ಹಾಗಾದರೆ ತಿಂಡಿ ಸಿಗುವುದು ಸಾಧ್ಯವಿಲ್ಲ. ಮೊದಲು ದುಡ್ಡು ತೆಗೆದುಕೊಂಡು ಬಾ, ನಂತರ ತಿಂಡಿ ಕೊಡುತ್ತೇನೆ~ ಎಂದ ಅಂಗಡಿಯ ಮಾಲೀಕ.`ಹಣವನ್ನು ಯಾರು ಕೊಡುತ್ತಾರೆ? ಅದನ್ನು ಹೇಗೆ ಪಡೆಯುವುದು?~  ಕೇಳಿದ ಭರ್ತೃಹರಿ.

 `ಊರಹೊರಗೆ ಕೆರೆಯ ನಿರ್ಮಾಣವಾಗುತ್ತಿದೆ. ಅಲ್ಲಿ ಹೋಗಿ ಕೆಲಸಮಾಡು. ನಿನ್ನ ಕೆಲಸಕ್ಕೆ ಪ್ರತಿಯಾಗಿ ಅವರು ಹಣ ಕೊಡುತ್ತಾರೆ. ಅದನ್ನು ತೆಗೆದುಕೊಂಡು ಬಾ~ ಎಂದು ಸಲಹೆ ನೀಡಿದ ಅಂಗಡಿಯಾತ.ಭರ್ತೃಹರಿ  ಅಲ್ಲಿಗೆ ಓಡಿದ. ಅಲ್ಲಿ ನೂರಾರು ಜನರು ಕೆಲಸ ಮಾಡುತ್ತಿದ್ದರು. ಈತನಿಗೂ ಒಂದು ಹಾರೆ, ಸಲಿಕೆ ಕೊಟ್ಟರು. ಭರ್ತೃಹರಿ ಒಂದು ಕ್ಷಣವೂ ಬಿಡದೇ ಬೆವರುಸುರಿಸಿ ಕೆಲಸ ಮಾಡಿದ. ಈ ಕೆಲಸ ಅವನಿಗೆ ಅಭ್ಯಾಸವಿರಲಿಲ್ಲ. ಅಗೆದು, ತೆಗೆದು, ಮಣ್ಣನ್ನು ಹೊತ್ತು ಸಂಜೆಯ ವರೆಗೂ ದುಡಿದಾಗ ಸಂಜೆಗೆ ಅಧಿಕಾರಿ ಬಂದು ಅವನಿಗೆ ಒಂದಿಷ್ಟು ಹಣ ಕೊಟ್ಟ.ಅದನ್ನು ತೆಗೆದುಕೊಂಡು ಈತ ಮಿಠಾಯಿ ಅಂಗಡಿಗೆ ಹೋದ. ತನ್ನಲ್ಲಿದ್ದ ದುಡ್ಡಿಗೆ ತಕ್ಕಷ್ಟು ತಿಂಡಿಯನ್ನು ಪಡೆದುಕೊಂಡು ನದೀತೀರಕ್ಕೆ ಬಂದು, ನೀರಿನಲ್ಲಿ ಸ್ವಚ್ಛವಾಗಿ ಕೈ, ಮುಖ ತೊಳೆದುಕೊಂಡು ಕುಳಿತ. ಇನ್ನೇನು ತಿಂಡಿಯನ್ನು ತಿನ್ನಬೇಕು ಎನ್ನುವಾಗ ಭರ್ತೃಹರಿಯ ಬುದ್ಧಿ ಹೇಳಿತು.  `ಹುಚ್ಚಾ, ಎಲ್ಲದರಿಂದಲೂ ಮುಕ್ತನಾಗಬೇಕೆಂದು ಚಕ್ರವರ್ತಿಯ ಸಿಂಹಾಸನವನ್ನು ತೊರೆದೆ, ಅತುಳ ಐಶ್ವರ್ಯವನ್ನು ಬಿಟ್ಟೆ, ಸುಂದರಿಯಾದ ಹೆಂಡತಿ, ಅಪರಿಮಿತವಾದ ಅಧಿಕಾರವನ್ನು ಬಿಟ್ಟು ಬಂದೆ. ಆದರೆ ಮಿಠಾಯಿಯ ರುಚಿಯಲ್ಲಿ ಸಿಕ್ಕಿಬಿದ್ದೆಯಲ್ಲ? ಒಂದು ಹಿಡಿ ಮಿಠಾಯಿಯ ಆಸೆಗೆ ದೇಹವನ್ನು ಇಡೀ ದಿನ ದುಡಿಸಿ ಸೋತೆಯಲ್ಲ? ನೀನು ಬಿಟ್ಟದ್ದು ಏನನ್ನು? ನಿನ್ನ ಮನಸ್ಸು ನಿನ್ನ ಹಿಡಿತದಲ್ಲಿದೆಯೇ?~ಭರ್ತೃಹರಿಗೆ ನಾಚಿಕೆಯಾಯಿತು. ಒಂದೊಂದಾಗಿ ಮಿಠಾಯಿಗಳನ್ನು ನದಿಯ ನೀರಿಗೆ ಎಸೆಯತೊಡಗಿದ. ಕೊನೆಯ ಮಿಠಾಯಿ ಕೈಯಲ್ಲಿದ್ದಾಗ ಮನಸ್ಸು ಮತ್ತೆ ಕೇಳಿತು,  `ಇದೊಂದನ್ನಾದರೂ ನನಗೆ ಕೊಡು.~ ಭರ್ತೃಹರಿ ಮನಸ್ಸನ್ನು ಕಲ್ಲು ಮಾಡಿಕೊಂಡು ಅದನ್ನು ನೀರಿನಲ್ಲಿ ಎಸೆದು ಕುಳಿತ. ಅವನಿಗೆ ತನ್ನ ಮನಸ್ಸನ್ನು ನಿಗ್ರಹಿಸಿದ್ದಕ್ಕೆ ಸ್ವಲ್ಪ ಸಂತೋಷವಾಯಿತು.ಏನನ್ನಾದರೂ ಮಾಡಬಹುದು ಆದರೆ ಮನಸ್ಸನ್ನು ನಿಲ್ಲಿಸುವುದು ಬಲುಕಷ್ಟ. ಮನುಷ್ಯನ ಬಂಧನಕ್ಕೂ, ಬಿಡುಗಡೆಗೂ ಮನಸ್ಸೇ ಕಾರಣ. ಅದು ಬೀಗಕ್ಕೆ ಬೀಗದ ಕೈ ಇದ್ದ ಹಾಗೆ.

 

ಬೀಗ ಹಾಕುವುದಕ್ಕೂ, ತೆಗೆಯುವುದಕ್ಕೂ ಕೀಲಿಕೈ ಒಂದೇ ಅಲ್ಲವೇ? ಎಡಕ್ಕೆ ತಿರುಗಿಸಿದರೆ ಕೀಲಿ ಬಂದಾಗುತ್ತದೆ, ಅದನ್ನೇ ಬಲಕ್ಕೆ ತಿರುಗಿಸಿದರೆ ತೆಗೆದುಕೊಳ್ಳುತ್ತದೆ. ಹಾಗೆಯೇ ಮನಸ್ಸನ್ನು ನಿಗ್ರಹಿಸಲು ಸಾಧ್ಯವಾದರೆ ಸಾಧನೆ ಸಿದ್ಧವಾಗುತ್ತದೆ, ಅದನ್ನು ಸಡಿಲಬಿಟ್ಟರೆ ಮಾಡಿದ ಸಾಧನೆ ವ್ಯರ್ಥವಾಗುತ್ತದೆ. ಅದನ್ನು ಬಲು ಎಚ್ಚರದಿಂದ ನೋಡಬೇಕು.

Post Comments (+)