ಬುಧವಾರ, ಜೂನ್ 23, 2021
22 °C

ಸಾಫ್ಟ್‌ವೇರ್ ತಂತ್ರಜ್ಞರಾಗುವುದಕ್ಕೆ ಎಂಜಿನಿಯರಿಂಗ್ ಬೇಡ!

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಸಾಫ್ಟ್‌ವೇರ್ ತಂತ್ರಜ್ಞರಾಗುವುದಕ್ಕೆ ಎಂಜಿನಿಯರಿಂಗ್ ಬೇಡ!

ಎಂಜಿನಿಯರಿಂಗ್ ಪದವಿಯ ಪ್ರವೇಶ ಪರೀಕ್ಷೆಗಳ ಕ್ಷಣಗಣನೆ ಆರಂಭವಾಗುತ್ತಿರುವ ಹೊತ್ತಿನಲ್ಲೇ ಬೃಹತ್ ತಂತ್ರಜ್ಞಾನ ಕಂಪೆನಿ ಎಚ್‌ಸಿಎಲ್ ಹೊಸತೊಂದು ಯೋಜನೆಯನ್ನು ಘೋಷಿಸಿದೆ. ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಈ ಯೋಜನೆಯಂತೆ ಕಂಪೆನಿ ಪದವಿ ಪೂರ್ವ ತರಗತಿ ಅಥವಾ ಹನ್ನೆರಡನೇ ತರಗತಿಯಲ್ಲಿ ಶೇಕಡಾ 85ರಷ್ಟು ಅಂಕ ಪಡೆದ 200 ವಿದ್ಯಾರ್ಥಿಗಳನ್ನು ನೇರವಾಗಿ ಕೆಲಸಕ್ಕೆ ನೇಮಿಸಿಕೊಳ್ಳಲಿದೆ. ಇವರು ಒಂಬತ್ತು ತಿಂಗಳ ಅವಧಿಯ ಶೈಕ್ಷಣಿಕ ತರಬೇತಿ ಮತ್ತು ಮೂರು ತಿಂಗಳ ಅವಧಿಯ ಪ್ರಾಯೋಗಿಕ ತರಬೇತಿಯ ನಂತರ ಕೆಲಸವಾರಂಭಿಸಲಿದ್ದಾರೆ. ಸಾಫ್ಟ್‌ವೇರ್ ಉದ್ಯಮದ ಆರಂಭಿಕ ಹಂತದ ಉದ್ಯೋಗಗಳಿಗೆ ಇವರನ್ನು ನೇಮಿಸಿಕೊಳ್ಳಲಾಗುವುದು. ಇವರು ವಾರ್ಷಿಕ ಸಂಬಳ ಕನಿಷ್ಠ 1.8 ಲಕ್ಷ ರೂಪಾಯಿಗಳಷ್ಟಿರುತ್ತದೆ ಎಂದು ಕಂಪೆನಿ ಹೇಳಿದೆ. ಒಂದು ವರ್ಷದ ಅವಧಿಯ ತರಬೇತಿಗೆ ಈ ವಿದ್ಯಾರ್ಥಿಗಳಿಗೆ ಶಿವನಾಡಾರ್ ವಿಶ್ವವಿದ್ಯಾಲಯದಿಂದ ಒಂದು ಪ್ರಮಾಣ ಪತ್ರ ದೊರೆಯಲಿದೆ. ಈ ವಿದ್ಯಾರ್ಥಿಗಳು ವಾರಾಂತ್ಯಗಳಲ್ಲಿ ಅಭ್ಯಾಸ ಮಾಡಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆಯುವುದಕ್ಕೂ ಸಂಸ್ಥೆ ಸಹಕರಿಸುತ್ತದೆಯಂತೆ.

ಎಚ್‌ಸಿಎಲ್‌ನ ಈ ನಿರ್ಧಾರದಲ್ಲಿ ಹೊಸತೇನೂ ಇಲ್ಲ. ಇದು ಬಹುಕಾಲದಿಂದ ಮತ್ತೊಂದು ಬಗೆಯಲ್ಲಿ ನಡೆಯುತ್ತಿತ್ತು. ಇದನ್ನು ಕ್ಯಾಂಪಸ್ ರಿಕ್ರ್ಯೂಟ್ಮೆಂಟ್ ಎಂಬ ಸುಂದರ ಹೆಸರಿನಲ್ಲಿ ಗುರುತಿಸಲಾಗುತ್ತದೆ. ಎಂಜಿನಿಯರಿಂಗ್ ಪದವಿಯ ಅಂತಿಮ ವರ್ಷದಲ್ಲಿದ್ದ ವಿದ್ಯಾರ್ಥಿಗಳನ್ನು ಸಂದರ್ಶಿಸಿ ಕೆಲಸಕ್ಕೆ ನೇಮಿಸಿಕೊಳ್ಳುವ ಆ ಪ್ರಕ್ರಿಯೆ ಈಗ ಪದವಿ ಪೂರ್ವ ಶಿಕ್ಷಣದ ಮಟ್ಟಕ್ಕೆ ಬಂದಿದೆ ಎಂಬುದು ಮಾತ್ರ ಎಚ್‌ಸಿಎಲ್‌ನ ವಿಶೇಷತೆ. ಕ್ಯಾಂಪಸ್‌ನಲ್ಲೇ ಪ್ರತಿಭೆಗಳ ಅನ್ವೇಷಣೆ ನಡೆಸುತ್ತಿದ್ದ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಆಯ್ಕೆ ಮಾಡಿಕೊಳ್ಳುತ್ತಾ ಇದ್ದದ್ದು ಕೇವಲ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳನ್ನೇನೂ ಅಲ್ಲ. ಯಾವ ಎಂಜಿನಿಯರಿಂಗ್ ಪದವಿಯಲ್ಲಿದ್ದರೂ ಆರಿಸಿಕೊಂಡು ಅವರಿಗೆ ಆರು ತಿಂಗಳ ತರಬೇತಿ ಕೊಟ್ಟು ‘ಸಾಫ್ಟ್‌ವೇರ್ ಎಂಜಿನಿಯರ್’ ಆಗಿಸುತ್ತಿದ್ದರು.ಎಚ್‌ಸಿಎಲ್ ಈ ಪ್ರಕ್ರಿಯೆಯನ್ನು ಇನ್ನೂ ಸ್ವಲ್ಪ ಕೆಳಕ್ಕೆ ಇಳಿಸಿ ಪದವಿ ಪೂರ್ವ ಮಟ್ಟದ ವಿದ್ಯಾರ್ಥಿಗಳನ್ನೇ ಆರಿಸಿಕೊಂಡು ‘ಸಾಫ್ಟ್‌ವೇರ್ ವೃತ್ತಿಪರ’ರನ್ನಾಗಿಸುತ್ತಿದೆ.

ಈ ಬೆಳಣಿಗೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಇನ್ನೊಂದಷ್ಟು ಬೆಳವಣಿಗೆಗಳನ್ನು ಪರಿಗಣಿಸಬೇಕಾಗುತ್ತದೆ. 2015–16ರ ಶೈಕ್ಷಣಿಕ ವರ್ಷದಲ್ಲಿ ಭಾರತದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಭರ್ತಿಯಾಗದೆ ಉಳಿದ ಸೀಟುಗಳ ಸಂಖ್ಯೆ 14.97 ಲಕ್ಷ. ಕಳೆದ ಶೈಕ್ಷಣಿಕ ವರ್ಷದ ಸಂಖ್ಯೆ ಇನ್ನೂ ಲಭ್ಯವಿಲ್ಲ. ಇದು ಇನ್ನಷ್ಟು ಕಡಿಮೆಯಾಗಿದೆ ಎಂಬುದನ್ನು ಈ ತನಕದ ಬೆಳವಣಿಗೆಗಳು ಹೇಳುತ್ತಿವೆ. ಈ ಅವಧಿಯಲ್ಲಿ ಕರ್ನಾಟಕದಲ್ಲಿರುವ 506 ಎಂಜಿನಿಯರಿಂಗ್ ಕಾಲೇಜುಗಳ ಒಟ್ಟು ಸೀಟುಗಳಲ್ಲಿ ಶೇಕಡ 33.24ರಷ್ಟು ಸೀಟುಗಳು ಭರ್ತಿಯಾಗಿರಲಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡುವ ಅಂಕಿ ಅಂಶಗಳು ಹೇಳುತ್ತವೆ.

ಕಳೆದ ವರ್ಷ ಜುಲೈ ತಿಂಗಳಿನಲ್ಲಿ ದೆಹಲಿ ಮೂಲದ ಆಸ್ಪೈರಿಂಗ್ ಮೈಂಡ್ಸ್ ಎಂಬ ಮಾನವ ಸಂಪನ್ಮೂಲ ಪೂರೈಕೆ ಸಂಸ್ಥೆ ದೇಶದ ಒಂದೂವರೆ ಲಕ್ಷ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಮೀಕ್ಷೆ ನಡೆಸಿತ್ತು. ಇದರ ಫಲಿತಾಂಶಗಳು ಹೇಳುವಂತೆ ಭಾರತದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪದವಿ ಪಡೆದವರಲ್ಲಿ ಶೇಕಡಾ 7ರಷ್ಟು ವಿದ್ಯಾರ್ಥಿಗಳು ಮಾತ್ರ ಅವರು ಕಲಿತ ಕ್ಷೇತ್ರದಲ್ಲಿ ಉದ್ಯೋಗ ಮಾಡಬಹುದಾದ ಕೌಶಲ ಮತ್ತು ಅರಿವನ್ನು ಹೊಂದಿದ್ದಾರೆ.

ಮೇಲಿನ ಎರಡೂ ವಿಚಾರಗಳ ಜೊತೆಗೆ ಈ ವರ್ಷದ ಆರಂಭದಿಂದಲೇ ಭಾರತೀಯ ಐ.ಟಿ. ಉದ್ಯಮದ ಪ್ರಮುಖರು ಆಟೋಮೇಶನ್ ಎಂಬ ಸವಾಲಿನ ಕುರಿತಂತೆ ಹೇಳುತ್ತಿದ್ದ ಮಾತುಗಳನ್ನೂ ಸೇರಿಸಿಕೊಂಡರೆ ಎಚ್‌ಸಿಎಲ್ ಘೋಷಿಸಿರುವ ಯೋಜನೆಯ ಮರ್ಮ ಅರ್ಥವಾಗುತ್ತದೆ. ಭಾರತೀಯ ಐಟಿ ಉದ್ಯಮ ಇಲ್ಲಿಯ ತನಕವೂ ಬಳಸಿಕೊಂಡದ್ದು ಅಭಿವೃದ್ಧಿ ಹೊಂದಿದ ದೇಶಗಳ ಮಟ್ಟಿಗೆ ಅಗ್ಗವೆಂದು ತೋರುವ ಆದರೆ ಭಾರತದ ಮಟ್ಟಿಗೆ ದೊಡ್ಡದೆಂಬಂತೆ ಕಾಣಿಸುವ ಸಂಬಳವನ್ನು. ಸರಳವಾಗಿ ಹೇಳುವುದಾದರೆ ಕಡಿಮೆ ಕೂಲಿಗೆ ಸಿಗುವ ಜನರನ್ನು ಬಳಸಿಕೊಂಡು ಹೆಚ್ಚು ಲಾಭಗಳಿಸುವ ತಂತ್ರ. ಆದರೆ ತಂತ್ರಜ್ಞಾನ ಮತ್ತೊಂದು ದಿಕ್ಕಿನಲ್ಲಿ ಸಾಗಿತು. ಮನುಷ್ಯ ಮಾಡಬೇಕಾದ ಕೆಲಸವನ್ನು ಯಂತ್ರದ ಮೂಲಕವೇ ಮಾಡಿಸಬಹುದಾದ ಸಾಧ್ಯತೆ ‘ಕೃತಕ ಬುದ್ಧಿಮತ್ತೆ’ಯಂಥ ತಂತ್ರಜ್ಞಾನದಿಂದ ಸಾಧ್ಯವಾಯಿತು. ‘ಭಾರತೀಯ ಎಂಜಿನಿಯರ್’ಗಳು ಮಾಡಬಹುದಾದ ಕೆಲಸವನ್ನು ಈಗ ಕಂಪ್ಯೂಟರ್ ಪ್ರೋಗ್ರಾಮ್‌ಗಳೇ ಸ್ವಯಂ ಚಾಲಿತವಾಗಿ ಮಾಡುವ ದಿನಗಳು ಬಂದವು. ಈ ಸವಾಲನ್ನು ಎದುರಿಸುವುದಕ್ಕೆ ಐಟಿ ಕಂಪೆನಿಗಳು ಈಗ ಎಂಜಿನಿಯರಿಂಗ್ ಪದವೀಧರರಿಗಿಂತ ಕಡಿಮೆ ಸಂಬಳಕ್ಕೆ ದೊರೆಯುವ ಕೆಲಸಗಾರರನ್ನು ಹುಡುಕಲು ಆರಂಭಿಸಿವೆ. ಎಚ್‌ಸಿಎಲ್‌ನ ನಿರ್ಧಾರದ ಹಿಂದೆಯೂ ಇದು ಕಾಣಿಸುತ್ತದೆ.

ಈ ಸಹಸ್ರಮಾನದ ಆರಂಭ ಮತ್ತು ಭಾರತೀಯ ಮಧ್ಯಮ ವರ್ಗದ ಐ.ಟಿ. ಕನಸುಗಳೆರಡೂ ಒಟ್ಟೊಟ್ಟಿಗೇ ಆರಂಭವಾದವು. ಈ ಕನಸನ್ನೇ ಬಂಡವಾಳವಾಗಿಸಿಕೊಂಡು ಭಾರತಾದ್ಯಂತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ತಲೆ ಎತ್ತಿದವು. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮತ್ತು ಪದವಿ ನೀಡುವ ವಿಶ್ವವಿದ್ಯಾನಿಲಯಗಳೆರಡೂ ನಮ್ಮ ಎಂಜಿನಿಯರಿಂಗ್ ಶಿಕ್ಷಣಕ್ಕೊಂದು ಸರಿಯಾದ ದಿಕ್ಕು ತೋರುವ ಕೆಲಸವನ್ನೂ ಮಾಡಲಿಲ್ಲ. ಮಧ್ಯಮ ವರ್ಗದ ಐಟಿ ಕನಸನ್ನೇ ಬಂಡವಾಳ ಮಾಡಿಕೊಂಡ ಎಂಜಿನಿಯರಿಂಗ್ ಕಾಲೇಜುಗಳ ಮಾಲೀಕರು ತಮ್ಮ ಜೇಬು ತುಂಬಿಸಿಕೊಂಡರು. ಈ ಸಂಪಾದನಾ ಪ್ರಕ್ರಿಯೆಯ ಮಧ್ಯೆಯೇ ಕೆಲಮಟ್ಟಿಗೆ ಶೈಕ್ಷಣಿಕ ಗುಣಮಟ್ಟಕ್ಕೂ ಮಹತ್ವ ನೀಡಿದ ಕೆಲ ಕಾಲೇಜುಗಳಿಗೆ ಈಗಲೂ ವಿದ್ಯಾರ್ಥಿಗಳಿದ್ದಾರೆ. ಇದರ ಹೊರತಾದ ಎಲ್ಲ ಕಾಲೇಜುಗಳೂ ಮುಚ್ಚಿ ಹೋಗುತ್ತಿವೆ. ಕಳೆದ ವರ್ಷ ಅಧಿಕೃತವಾಗಿ ಮುಚ್ಚಿಹೋದ ಕಾಲೇಜುಗಳ ಸಂಖ್ಯೆ 52. ಈ ಸಂಖ್ಯೆ ಈ ವರ್ಷ ಮತ್ತಷ್ಟು ಹೆಚ್ಚುವ ಸಾಧ್ಯತೆಗಳು ಗೋಚರಿಸುತ್ತಿವೆ.

ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಮಾನವಿಕ ಮತ್ತು ಮೂಲ ವಿಜ್ಞಾನಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಆಡುತ್ತಿದ್ದ ಮಾತುಗಳನ್ನೇ ಈಗ ತಾಂತ್ರಿಕ ಶಿಕ್ಷಣಕ್ಕೂ ಅನ್ವಯಿಸಿಕೊಂಡು ಮಾತನಾಡಬೇಕಾಗಿದೆ. ಮಾನವಿಕ ಮತ್ತು ಮೂಲ ವಿಜ್ಞಾನ ಕೋರ್ಸ್‌ಗಳನ್ನು ಕೊಂದದ್ದರಲ್ಲಿ ಮಧ್ಯಮ ವರ್ಗದ ಆಸೆಗಳಿವೆ. ‘ಇದನ್ನೆಲ್ಲಾ ಓದಿದರೆ ಕೆಲಸ ಸಿಗುವುದಿಲ್ಲ’ ಎಂಬ ಮಾತುಗಳು ವಿದ್ಯಾರ್ಥಿಗಳನ್ನು ನಿರುತ್ಸಾಹ ಪಡಿಸಿದವು. ಇದು ಶಿಕ್ಷಕರ ಮಟ್ಟಕ್ಕೂ ವಿಸ್ತರಿಸಿಕೊಂಡಿತು. ಎಂಜಿನಿಯರಿಂಗ್ ಶಿಕ್ಷಣದ ಮಟ್ಟಿಗೆ ಬಂದರೆ ಹೇಗಾದರೂ ಮಾಡಿ ಬಿ.ಇ. ಅಥವಾ ಬಿ.ಟೆಕ್ ಮಾಡಿಬಿಟ್ಟರೆ ಮೋಕ್ಷ ಎಂಬ ನಿಟ್ಟಿನಲ್ಲಿ ಇಡೀ ಸಮಾಜ ಸಾಗಿತು. ಪದವಿ ಪಡೆಯುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿ ಕಲಿಯಬೇಕಾಗಿದ್ದೇನು ಎಂಬುದನ್ನು ಎಲ್ಲರೂ ಮರೆತರು. ಇಂಥ ಜನ ಮರುಳೋ ಜಾತ್ರೆ ಮರುಳೋ ಸಂದರ್ಭಗಳಲ್ಲಿ ಸರ್ಕಾರಿ ನಿಯಂತ್ರಣ ಎಂಬುದು ಬಹುಮುಖ್ಯ ಪಾತ್ರವಹಿಸುತ್ತದೆ. ವಿಶ್ವವಿದ್ಯಾಲಯಗಳು ಮತ್ತು ತಾಂತ್ರಿಕ ಶಿಕ್ಷಣ ಮಂಡಳಿಗಳಂಥ ಸಂಸ್ಥೆಗಳು ಹೆಚ್ಚಿನ ಜವಾಬ್ದಾರಿಯಿಂದ ವರ್ತಿಸಬೇಕಾದುದು ಇಂಥ ಸಂದರ್ಭಗಳಲ್ಲಿ. ಆದರೆ ಅವೆರಡೂ ‘ಮಾರುಕಟ್ಟೆಯ ಅಗತ್ಯ’ ಎಂಬ ಕುರುಡು ವಾದಕ್ಕೆ ಬಲಿಬಿದ್ದವು.

ಕ್ಯಾಂಪಸ್ ರಿಕ್ರೂಟ್ಮೆಂಟ್ ಹೆಸರಿನಲ್ಲಿ ಯಾವ ಎಂಜಿನಿಯರಿಂಗ್ ಪದವಿಯಿದ್ದರೂ ಸರಿ ಸಾಫ್ಟ್‌ವೇರ್ ತಂತ್ರಜ್ಞರಾಗಿಸಲು ಸಾಧ್ಯ ಎಂಬ ಭಾವವನ್ನು ಐ.ಟಿ. ಕಂಪೆನಿಗಳು ಹುಟ್ಟು ಹಾಕಿದಾಗಲೇ ತಾಂತ್ರಿಕ ಶಿಕ್ಷಣದಲ್ಲಿ ಬದಲಾಗಬೇಕಾದ ಏನೋ ಇದೆ ಎಂಬುದು ನಮಗೆ ಅರ್ಥವಾಗಬೇಕಾಗಿತ್ತು. ಈಗ ಕಂಪೆನಿಗಳಿಗೂ, ಜನರಿಗೂ ಸರ್ಕಾರಕ್ಕೂ ಇದು ಅರ್ಥವಾಗುತ್ತಿದೆ. ಆದರೆ ಸಮಸ್ಯೆ ಮಾತ್ರ ಪರಹರಿಸಲಾಗದಷ್ಟು ಸಂಕೀರ್ಣವಾಗಿದೆ. ಒಂದು ವರ್ಷದ ಹಿಂದೆ ಎಂಜಿನಿಯರಿಂಗ್ ಕಾಲೇಜುಗಳ ಶಿಕ್ಷಣದ ಗುಣಮಟ್ಟ ಮಾತ್ರ ಸಮಸ್ಯೆಯಾಗಿ ಕಾಣಿಸುತ್ತಿತ್ತು. ಈಗ ಅದರ ಜೊತೆಗೆ ಭಾರತೀಯ ಐ.ಟಿ. ಕಂಪೆನಿಗಳ ಸೃಜನಶೀಲತೆಯ ಸಮಸ್ಯೆಯೂ ಅನಾವರಣಗೊಳ್ಳುತ್ತಿದೆ. ಇದು ಐ.ಟಿ.ಯ ಮಾಗಿಯ ಕಾಲ. ಹೊಸತು ಚಿಗುರುವುದಕ್ಕೆ ಹಳತು ಉದುರಲೇ ಬೇಕಲ್ಲವೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.