ಸಾಮಾಜಿಕ ಬದಲಾವಣೆ ತರುವ ಸಮಾಜ ಸೇವೆ

7

ಸಾಮಾಜಿಕ ಬದಲಾವಣೆ ತರುವ ಸಮಾಜ ಸೇವೆ

ರಾಮಚಂದ್ರ ಗುಹಾ
Published:
Updated:

ವಿದ್ಯಾರ್ಥಿಗಳು ತಾವು ಕಲಿತ ಶಿಕ್ಷಣವನ್ನು ರಾಷ್ಟ್ರದ ಸೇವೆಗೆ ಬಳಸಬೇಕು ಎಂದು ನೂರು ವರ್ಷಗಳಿಗೂ ಹಿಂದೆ, ಮದ್ರಾಸಿನಲ್ಲಿ ಕಾಲೇಜು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಗೋಪಾಲಕೃಷ್ಣ ಗೋಖಲೆಯವರು ಕರೆ ನೀಡಿದ್ದರು.ಆಧುನಿಕ ಪ್ರಪಂಚದೊಂದಿಗೆ ಭಾರತ ಮಿಳಿತಗೊಳ್ಳುತ್ತಿದ್ದಂತೆಯೇ,`ಅಜ್ಞಾನ, ಮೂಢನಂಬಿಕೆಗಳಲ್ಲಿ ಮುಳುಗಿದ ಜನರನ್ನು ಎಚ್ಚರಿಸುವ ಕೆಲಸವಾಗಬೇಕಿದೆ. ನಂತರ ಮಹಿಳೆಯರ ಸ್ಥಾನಮಾನ ಸುಧಾರಣೆಯ ಕೆಲಸವಾಗಬೇಕಿದೆ. ಇಡೀ ಮಹಿಳಾ ಜಗತ್ತು ಮುಖ್ಯವಾಹಿನಿಯ ಬೌದ್ಧಿಕ ಜಗತ್ತಿನಿಂದ ದೂರವಿದೆ.ಇಂತಹದು ಯಾವ ದೇಶಕ್ಕೂ ಒಳ್ಳೆಯದಲ್ಲ. ಧರ್ಮದ ವಿಚಾರದಲ್ಲಿ ಹಳೆಯ ಸಾಂಸ್ಥಿಕ ಸ್ವರೂಪಗಳು ಹೆಸರಿಗೆ ಉಳಿದಿವೆ.ಅವುಗಳೊಳಗಿನ ಚೈತನ್ಯ ಮರೆಯಾಗಿವೆ..ಅಷ್ಟೇ ಅಲ್ಲ, ಇಡೀ ರಾಷ್ಟ್ರ, ರಾಜಕೀಯ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಕೆಳಮಟ್ಟದಲ್ಲಿದೆ. ಹೀಗಾಗಿ ಆ ವಿಚಾರಕ್ಕೆ ಸಂಬಂಧಿಸಿದಂತೆ ಆಸಕ್ತಿ ವಹಿಸುವವರಿಗೆ ಅದು ಬಹು ದೊಡ್ಡ ಕೆಲಸ.ಕಡೆಯದಾಗಿ, ರಾಷ್ಟ್ರದ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ತುರ್ತು ಗಮನ ನೀಡಬೇಕಿದೆ. ಈ ಎಲ್ಲಾ ದಿಕ್ಕುಗಳಲ್ಲಿ ಕೆಲಸಗಳಾಗಬೇಕಿವೆ.. ಕಾಲೇಜು ಶಿಕ್ಷಣ ಮುಗಿಸಿ ಬದುಕು ಆರಂಭಿಸುವಾಗ ಈ ಎಲ್ಲಾ ವಿಚಾರಗಳನ್ನು ಅರಿತು ಕರ್ತವ್ಯದ ಕರೆಗೆ ಓಗೊಡಬೇಕು~ ಎಂದು ಗೋಖಲೆಯವರು ಹೇಳಿದ್ದರು. 1905ರಲ್ಲಿ ಗೋಖಲೆಯವರು `ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ~ ಸ್ಥಾಪಿಸಿದರು. ಈ ಸಮಾಜದ ಸದಸ್ಯರು ರಾಷ್ಟ್ರ ನಿರ್ಮಾಣದ ಕಾರ್ಯಗಳಿಗೆ ತಮ್ಮನ್ನೇ ಅರ್ಪಿಸಿಕೊಂಡರು. ಈ `ಭಾರತ ಸೇವಕರು~ ಜಾತಿ ಅಥವಾ ಧರ್ಮಗಳ ಭೇದವಿಲ್ಲದೆ ಎಲ್ಲರ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಿತ್ತು.

 

ಬಹುಶಃ ಯಾವುದೇ ಧರ್ಮಪ್ರಚಾರದ ಉದ್ದೇಶಗಳಿಲ್ಲದೆ, ಭಾರತದಲ್ಲಿ ಕೈಗೊಂಡಿದ್ದ ಮೊದಲ ಸಮಾಜ ಸೇವಾ ಉಪಕ್ರಮ ಇದು ಎಂದು ಹೇಳಬಹುದು. ಕ್ರೈಸ್ತರು, ಮುಸ್ಲಿಮರು, ಹಿಂದೂಗಳು  ಎಲ್ಲರೂ ಈ ಹಿಂದೆ ತಂತಮ್ಮ ಸಮುದಾಯಗಳ ಅಭಿವೃದ್ಧಿಗಾಗಿ ಶಾಲೆ, ಕಾಲೇಜುಗಳನ್ನು ಆರಂಭಿಸಿದ್ದರು. ಆದರೆ ಗೋಖಲೆಯವರ `ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ~ ಸಮಸ್ತರನ್ನೂ ಒಳಗೊಳ್ಳುವಂತಹದಾಗಿತ್ತು. ಧರ್ಮ, ಜಾತಿ ಇತ್ಯಾದಿ ಭೇದಗಳನ್ನೆಂದೂ ಅದು ಮಾಡಲಿಲ್ಲ.ಗೋಖಲೆಯವರನ್ನು ತಮ್ಮ `ಗುರುಗಳು~ ಎಂದು ಮಹಾತ್ಮ ಗಾಂಧಿ ಕರೆದಿದ್ದರು. ಈ ಪುಣೆ ದೇಶಭಕ್ತನಿಂದ ಎರಡು ರೀತಿಯಲ್ಲಿ ಅವರು ಪ್ರಭಾವಕ್ಕೊಳಗಾಗಿದ್ದರು. ಒಂದು ಜಾತಿ, ಲಿಂಗ, ಧರ್ಮ, ಭಾಷಾ ಗುಂಪಿನ ಭೇದಭಾವಗಳನ್ನು ಮರೆತು ಭಾರತೀಯರಿಗೆ ನೆರವಾಗುವುದು; ಮತ್ತೊಂದು ರಾಜಕೀಯ ವಿಮೋಚನೆಯಷ್ಟೇ ಸಾಮಾಜಿಕ ಸುಧಾರಣೆಯೂ ಮುಖ್ಯ ಎಂದು ಒತ್ತಿ ಹೇಳುವಂತಹದ್ದು.ಹೀಗಾಗಿಯೇ ಅಸ್ಪೃಶ್ಯತೆಯ ನಿವಾರಣೆ, ಮಹಿಳೆಯರಿಗೆ ಸಮಾನ ಹಕ್ಕುಗಳು, ಗ್ರಾಮ ಆರ್ಥಿಕತೆ ಹಾಗೂ ಕುಶಲಕರ್ಮಿಗಳ ಉತ್ಪನ್ನಗಳ ಪುನರುಜ್ಜೀವನಕ್ಕೆ ಗಾಂಧಿ ಒತ್ತು ನೀಡಿದ್ದರು. ಗಾಂಧಿಯವರಿಗೆ ನಿರ್ಮಾಣದ ಕಾರ್ಯ ಸತ್ಯಾಗ್ರಹದಷ್ಟೇ ಮುಖ್ಯವಾದುದಾಗಿತ್ತು.ಗೋಖಲೆಯವರು ಬಳಸಿದ್ದ `ಸರ್ವೆಂಟ್ಸ್ ಆಫ್ ಇಂಡಿಯಾ~ ಪದಕ್ಕೆ ಬದಲಾಗಿ `ಸರ್ವೋದಯ~ ಎಂಬಂತಹ ಪದದ ಬಳಕೆಯನ್ನು ಗಾಂಧಿ ಶುರುಮಾಡಿದರು. ದುರದೃಷ್ಟವಶಾತ್, ಗಾಂಧಿಯವರ ಸಾವಿನ ನಂತರ, ಸಮಾಜವನ್ನು ಮರುರೂಪಿಸುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಹ ಕ್ರಿಯೆಗಳಿಗಿಂತ, ವೈಯಕ್ತಿಕ ಬದುಕಿನ ಆಯ್ಕೆಗಳ ಬಗ್ಗೆ ಆಶ್ರಮದ ನಿಯಮಗಳನ್ನು (ತಂಬಾಕು, ಮದ್ಯ ನಿಷೇಧ, ದಿನನಿತ್ಯದ ಪ್ರಾರ್ಥನಾ ಸಭೆ ಮುಂತಾದವು) ಕಟ್ಟುನಿಟ್ಟಾಗಿ ಪಾಲಿಸುವಂತಹ ಕೆಲವೊಂದು ಆಚರಣೆಗಳಿಗಷ್ಟೇ `ಸರ್ವೋದಯ~ ಚಳವಳಿ ಸೀಮಿತವಾಯಿತು.1950 ಹಾಗೂ 1960ರ ದಶಕದ ಗಾಂಧಿ ಚಳವಳಿಗೆ ಮತ್ತೊಂದು ದೌರ್ಬಲ್ಯವೂ ಇತ್ತು. ನಾಯಕತ್ವದ ಪಾತ್ರಗಳಲ್ಲಿ ಮಹಿಳೆಯರಿಗೆ ಅವಕಾಶವೇ ಇರಲಿಲ್ಲ. ಬದಲಾವಣೆಯ ಹರಿಕಾರರಾಗಿಯೂ ಮಹಿಳೆಯರು ಪಾಲು ಪಡೆಯಲಿಲ್ಲ.  ಗಾಂಧಿಯವರನ್ನು ವೈಯಕ್ತಿಕವಾಗಿ ತಿಳಿದಿರದಿದ್ದ ಇಬ್ಬರು ವಿಶಿಷ್ಟ ಭಾರತೀಯರು 1970ರ ದಶಕದಲ್ಲಿ ಗಾಂಧಿಯವರ ಪರಂಪರೆಗೆ ಮರುಜೀವ ನೀಡಿದರು. ಗಾಂಧಿ ಚಳವಳಿಯೊಳಗೆ ಆವರಿಸಿಕೊಳ್ಳಲಾರಂಭಿಸಿದ್ದ ಯಾಂತ್ರಿಕತೆ, ಆಚರಣೆಗಳ ವರ್ತುಲದಿಂದ ಅದನ್ನು ಬಿಡಿಸಿ ಸ್ವತಂತ್ರ ಭಾರತಕ್ಕೆ ಮತ್ತೆ ಪ್ರಸ್ತುತವಾಗುವಂತೆ  ಮಾಡುವಲ್ಲಿ ಈ ಇಬ್ಬರ ಪಾತ್ರ ಮಹತ್ವದ್ದು. ಕಾಕತಾಳೀಯವೆಂದರೆ ಇಬ್ಬರ ಹೆಸರೂ ಭಟ್.ಒಬ್ಬರು ಗಢ್ವಾಲ್‌ನ ರೈತಾಪಿ ಕುಟುಂಬದ ಚಂಡೀ ಪ್ರಸಾದ್ ಭಟ್. ಮತ್ತೊಬ್ಬರು ಮಧ್ಯಮ ವರ್ಗದ ಹಿನ್ನೆಲೆಯ, ವಕೀಲರೂ ಆಗಿರುವ ಇಳಾ ಭಟ್. ನನ್ನ ಹಿಂದಿನ ಅಂಕಣದಲ್ಲಿ ಚಂಡೀ ಪ್ರಸಾದ್ ಭಟ್ ಬಗ್ಗೆ ಬರೆದ ನಂತರ ನಾನಿಲ್ಲಿ ಇಳಾ ಭಟ್ ಪರಂಪರೆ ಕುರಿತು ಬರೆಯುತ್ತೇನೆ. ಮೂಲತಃ ಅಹಮದಾಬಾದ್‌ನವರಾದ ಇಳಾ ಭಟ್ ಗಾಂಧಿಯವರ ಸ್ಫೂರ್ತಿಯಿಂದ ಸ್ಥಾಪಿಸಲಾದಂತಹ ಕಾರ್ಮಿಕ ಸಂಘವೊಂದರಲ್ಲಿ ಸಕ್ರಿಯರಾಗಿದ್ದರು.ಅಹಮದಾಬಾದ್‌ನ ಜವಳಿ ಕಾರ್ಮಿಕರ ಸಂಘವಾಗಿತ್ತು ಇದು. ಈ ಸಂಘದ ನಾಯಕತ್ವ ಪುರುಷರದಾಗಿತ್ತು. ಸಂಪ್ರದಾಯಶೀಲವಾಗಿತ್ತು. 1970ರ ದಶಕದ ಆರಂಭದಲ್ಲಿ  ಈ ಸಂಸ್ಥೆಯನ್ನು ಸುಧಾರಿಸುವ ಯಾವ ಮಾರ್ಗವೂ ಕಾಣದೆ ತನ್ನದೇ ಒಂದು ಸಂಘ ಆರಂಭಿಸಲು ಇಳಾ ಭಟ್ ನಿರ್ಧರಿಸಿದರು. ಅದು ಸ್ವಯಂ ಉದ್ಯೋಗಿ ಮಹಿಳೆಯರ ಸಂಘ (ಸೆಲ್ಫ್ ಎಂಪ್ಲಾಯ್ಡ ವಿಮೆನ್ಸ್ ಅಸೋಸಿಯೇಷನ್) ಅಥವಾ ಸಂಕ್ಷಿಪ್ತವಾಗಿ ಹೇಳುವುದಾದರೆ `ಸೇವಾ~.ವ್ಯಾಪಕವಾದ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಗಳಿಗೆ ಮಧ್ಯವರ್ತಿಗಳನ್ನು ನಿವಾರಿಸಿ ತನ್ನ ಸದಸ್ಯರಿಗೆ ಸ್ಥಿರವಾದ ಹಾಗೂ ನಿಯಮಿತವಾದ ಆದಾಯವನ್ನು ತರಬಲ್ಲಂತಹ ಸಹಕಾರಿಗಳ ಸಂಘಟನೆ ಇದು. ಕಳೆದು ಹೋದ ದಶಕಗಳಲ್ಲಿ `ಸೇವಾ~ ಅಹಮದಾಬಾದ್‌ನಿಂದಾಚೆ ಗುಜರಾತ್‌ನ ಇತರ ಭಾಗಗಳಲ್ಲೂ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡಿದೆ. ಇದರಲ್ಲಿ ಸುಮಾರು 12 ಲಕ್ಷ ಸದಸ್ಯರಿದ್ದಾರೆ. ಎಲ್ಲರೂ ಮಹಿಳೆಯರೇ.

ಬಹುತೇಕ ಎಲ್ಲರೂ ದುಡಿಯುವ ವರ್ಗ ಅಥವಾ ರೈತಾಪಿ ಹಿನ್ನೆಲೆಗೆ ಸೇರಿದವರು. ಬಹಳಷ್ಟು ಜನರು ಕೆಳಜಾತಿ ಅಥವಾ ಅಲ್ಪಸಂಖ್ಯಾತ ಹಿನ್ನೆಲೆಯವರು. ಕಳೆದ ಹಲವು ವರ್ಷಗಳಿಂದ ನಾನು `ಸೇವಾ~ ಬಗ್ಗೆ ಕೇಳಿದ್ದೇನೆ, ಓದಿದ್ದೇನೆ. `ಸೇವಾ~ ಸಂಸ್ಥಾಪಕಿಯ ಜೊತೆ ಹಲವು ಸಭೆಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳೂ ಸಿಕ್ಕಿದ್ದವು. ಆದರೆ ಅಹಮದಾಬಾದ್‌ಗೆ ಕಳೆದ ಬಾರಿ ನಾನು ಭೇಟಿ ನೀಡಿದಾಗ, ಅವರ ಕಾರ್ಯಕ್ಷೇತ್ರವನ್ನು ಪ್ರತ್ಯಕ್ಷವಾಗಿ ದರ್ಶಿಸುವ ಅವಕಾಶ ಮೊದಲ ಬಾರಿಗೆ ಸಿಕ್ಕಿತು. ನನ್ನ ಜೊತೆಗೆ ಆಗಮಿಸಿ ನನಗೆ ಮಾರ್ಗದರ್ಶಿಯೂ ಆಗಿದ್ದ ವ್ಯಕ್ತಿ ಹಾರ್ವರ್ಡ್ ವಿಶ್ವವಿದ್ಯಾಲಯದ ಪದವೀಧರೆ.ಗೋಖಲೆ ನುಡಿಯಂತೆ, ಬಹುಶಃ ಇಪ್ಪತ್ತು ಅಥವಾ ಅದಕ್ಕೂ ಹೆಚ್ಚು ವರ್ಷಗಳ ಹಿಂದೆ, ಕರ್ತವ್ಯದ ಕರೆಗೆ ಓಗೊಟ್ಟು ಸಾಂಪ್ರದಾಯಿಕವಾದ ಆರಾಮವಾದ ಕೆರಿಯರ್ ತೊರೆದು `ಸೇವಾ~ದಲ್ಲಿ ನ ಸೇವೆಯ ಬದುಕಿಗೆ ತಮ್ಮನ್ನು ಸಮರ್ಪಿಸಿಕೊಂಡ್ದ್ದಿದರು ಅವರು.

ಅಹಮದಾಬಾದ್‌ನಲ್ಲಿ ಆ ದಿನ ಸುದೀರ್ಘವಾದುದಾಗಿತ್ತು, ತೀವ್ರವಾದುದಾಗಿತ್ತು ಹಾಗೂ ಅದರೊಳಗೇ ಲೀನವಾಗುವಂತಹದ್ದಾಗಿತ್ತು.

 

`ಸೇವಾ~ದ ವಿಮಾ ಘಟಕ, ಅದರ ಬ್ಯಾಂಕ್ ಹಾಗೂ ಅದರ ಮೀನುಗಾರರ ಸಹಕಾರಿ ಸೇರಿದಂತೆ ಹಲವು ಚಟುವಟಿಕೆಗಳ ಘಟಕಗಳನ್ನು ನಾನು ಕಂಡೆ. ಬಾಲವಾಡಿ (ಬಹುಪಾಲು ಮುಸ್ಲಿಮರೇ ಹೆಚ್ಚಿರುವ ಬಡಾವಣೆಯಲ್ಲಿ) ಹಾಗೂ 2002ರ ಗಲಭೆಗಳ ನಂತರ ಸ್ಥಾಪಿಸಲಾದ `ಸಮುದಾಯ ಕೇಂದ್ರ~ಕ್ಕೂ ಭೇಟಿ ನೀಡಿದ್ದೆ.

 

ಕೃಷಿ ಕೂಲಿ ಕಾರ್ಮಿಕರಾಗ್ದ್ದಿದ್ದವರು ಆರೋಗ್ಯ ಕಾರ್ಯಕರ್ತೆಯಾಗಿ ನಂತರ `ವಿಶ್ವ ಆರೋಗ್ಯ ಸಂಘಟನೆ~ಯಲ್ಲಿ (ಡಬ್ಲ್ಯುಎಚ್‌ಓ) ಭಾಷಣ ಮಾಡಿದ್ದಂತಹ ವ್ಯಕ್ತಿ, ಕೂಲಿಯಾಗಿದ್ದವರು ಈಗ ವಿಡಿಯೊಗ್ರಾಫರ್ ಆಗಿರುವವರು, `ಸೇವಾ~ ಸದಸ್ಯರಿಗೆ ತರಬೇತಿ ಕೇಂದ್ರ ನಡೆಸುತ್ತಿರುವ ಬೀಡಿ ಕಾರ್ಮಿಕರು - ಹೀಗೆ ಅನೇಕ ಜನರನ್ನು ನಾನು ಭೇಟಿಯಾದೆ.ನಾನು ಭೇಟಿ ಮಾಡಿದ ಮಹಿಳೆಯರಲ್ಲಿ ಅನೇಕ ಮಂದಿ `ಸೇವಾ~ ಸದಸ್ಯರ ಮಕ್ಕಳು ಮತ್ತು ಮೊಮ್ಮಕ್ಕಳೂ ಇದ್ದರು. ಮೊದಲ ಪೀಳಿಗೆ ಇರಲಿ ಅಥವಾ ಮೂರನೇ ಪೀಳಿಗೆಯ ಸದಸ್ಯರೇ ಇರಲಿ, ಅವರೆಲ್ಲಾ  ತುಂಬಿದ ಆತ್ಮವಿಶ್ವಾಸ, ಘನತೆ, ದೃಢವಾದ ಹಾಗೂ ಬಲವಾದ ಏಕತೆಯನ್ನು ಪ್ರದರ್ಶಿಸುವಂತಹವರಾಗಿದ್ದರು.

 

`ಸೇವಾ~ದ ಸಂಸ್ಥಾಪಕಿ, ಈಗ ಆ ಸಂಸ್ಥೆಗೆ ಒಂದು ರೀತಿ ಅಪ್ರಸ್ತುತರು ಎಂಬಂತಹ ಭಾವ ನನ್ನನ್ನಾವರಿಸಿತು. ಇದು ನಿಜವಾಗಿಯೂ ಇಳಾ ಭಟ್‌ರ ಮಹತ್ವದ ಸಾಧನೆ. `ಸೇವಾ~ದಲ್ಲಿ ಅವರಿಲ್ಲದಿದ್ದರೂ ಕೆಲಸವಂತೂ ಹಿಂದಿನಷ್ಟೇ ಚೈತನ್ಯದಿಂದ ಮುಂದುವರಿಯುತ್ತಲೇ ಇರುತ್ತದೆ. ಸಮಕಾಲೀನ ಭಾರತದಲ್ಲಿ ಇದೇ ಮಾತನ್ನು, ಸಂಸ್ಥಾಪಕರು  ಅಥವಾ ಅದನ್ನು ನಡೆಸುವ ವ್ಯಕ್ತಿಗಳಿಂದಲೇ ಅತಿಯಾಗಿ ಗುರುತಿಸಲ್ಪಡುವಂತಹ ಇತರ ಎನ್‌ಜಿಓ ಗಳಿಗೆ ನಾವು ಹೇಳುವುದು ಸಾಧ್ಯವೇ ಇಲ್ಲ. ಎಲ್ಲರನ್ನೂ ಒಳಗೊಳ್ಳುವಂತಹ ಸಮಷ್ಠಿ ಸ್ವರೂಪ ಹಾಗೂ ಮಹಿಳೆಯರನ್ನು ಬದಲಾವಣೆಯ ಪ್ರತಿನಿಧಿಗಳಾಗಿ ಹಾಗೂ ಸಮುದಾಯ ನಾಯಕರಾಗಿ ಗುರುತಿಸುವ ಕಾರಣದಿಂದಾಗಿ ಧಾರ್ಮಿಕ ಮೂಲಭೂತವಾದಿಗಳು ಹಾಗೂ ಭಿನ್ನ ಪಂಥಗಳ ರಾಜಕಾರಣಿಗಳ ವಿರೋಧವನ್ನು `ಸೇವಾ~ ಕಟ್ಟಿಕೊಂಡಿದೆ. `ಸೇವಾ~ ಕಾರ್ಯಕರ್ತರುಗಳಿಗೆ ಕಿರುಕುಳ ನೀಡಿ ಅದಕ್ಕೆ ಬರುವಂತಹ ಧನಸಹಾಯಗಳನ್ನು ನಿಲ್ಲಿಸಲೂ ರಾಜ್ಯ ಸರ್ಕಾರಗಳು ಯತ್ನಿಸಿವೆ.

 

ಆದರೂ `ಸೇವಾ~  ತನ್ನ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿದೆ. `ಸೇವಾ~ ನಿಜವಾಗಿಯೂ ಪರಿಣಾಮಕಾರಿಯಾಗಿರುವುದು ಗುಜರಾತ್‌ನಲ್ಲಿ - ಒಂದೇ ರಾಜ್ಯದಲ್ಲಿ ಮಾತ್ರ ಎಂದು ಹೇಳುವವರೂ ಇದ್ದಾರೆ. ಆದರೆ ಇದು ತಪ್ಪು ಗ್ರಹಿಕೆಯ ಟೀಕೆ ಎಂದೆನಿಸುತ್ತದೆ. ಸಂಸ್ಥೆಯೊಂದನ್ನು ಬೆಳೆಸುವುದು ಎಂದರೆ ಅದಕ್ಕೆ ವರ್ಷ ವರ್ಷಗಳು, ಕೆಲವೊಮ್ಮೆ ದಶಕಗಳ ಕಾಲ ಮಾಧ್ಯಮಗಳ ಕಣ್ಣುಗಳಿಂದ ದೂರವಾಗಿ ಕೆಲಸ ಮಾಡುವ ತಾಳ್ಮೆಯ ಅಗತ್ಯವಿರುತ್ತದೆ.

 

ಅನೇಕ ಎನ್‌ಜಿಓಗಳು ತಮ್ಮ ಸಾಮರ್ಥ್ಯಗಳನ್ನು ಅರಿತುಕೊಂಡಿರುವುದಿಲ್ಲ. ಏಕೆಂದರೆ ಅವುಗಳ ಸಂಸ್ಥಾಪಕರು ತಮ್ಮದೇ ಊರಲ್ಲಿ ಸಂಘಟನೆಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಮೊದಲೇ ಅಖಿಲಭಾರತ ಮಟ್ಟದ ಪಾತ್ರಕ್ಕಾಗಿ ಹಾತೊರೆಯುತ್ತಿರುತ್ತಾರೆ.ಇಳಾ ಭಟ್ ರೀತಿಯ ನಿಸ್ವಾರ್ಥ ಬದ್ಧತೆ ಸಾಮಾಜಿಕ ಕಾರ್ಯಕರ್ತರುಗಳಲ್ಲಿ ಇದ್ದಿದ್ದಲ್ಲಿ ಅವರೂ `ಸೇವಾ~ದಂತಹ ಸಂಸ್ಥೆಗಳನ್ನು ರೂಪಿಸಿರಬಹುದಿತ್ತು. ಪ್ರತಿ ರಾಜ್ಯದಲ್ಲೂ ಈ ಬಗೆಯ ಗುಣಮಟ್ಟ ಹಾಗೂ ಸ್ವರೂಪದ ಸಾಮಾಜಿಕ ಕಾರ್ಯ ಸಂಘಟನೆ ಇದ್ದಿದ್ದಲ್ಲಿ, ಭಾರತದಲ್ಲಿ ಬಹುಶಃ ಇಂದು ಅತೃಪ್ತಿ ಎಂಬುದೇ ಇರುತ್ತಿರಲಿಲ್ಲ.

 

ನೂರು ಅಥವಾ ಅದಕ್ಕೂ ಹೆಚ್ಚು ವರ್ಷಗಳ ಹಿಂದೆ ಗೋಪಾಲಕೃಷ್ಣ ಗೋಖಲೆ ಅವರು ಮದ್ರಾಸ್‌ನಲ್ಲಿ ಹೀಗೆ ನುಡಿದಿದ್ದರು: `ಸಾರ್ವಜನಿಕರ ಕಣ್ಣುಗಳಲ್ಲಿ ದೊಡ್ಡದಾಗಿ ಕಾಣಿಸುವವರು ಮಾತ್ರ ನಿಜಕ್ಕೂ ಉಪಯುಕ್ತ ಜೀವನ ನಡೆಸುವಂತಹವರು ಎಂಬುದಾಗಿ ನಮ್ಮಲ್ಲಿ ಅನೇಕರು ಭಾವಿಸಿಕೊಳ್ಳುವ ಸಂದರ್ಭವಿದೆ.ಎಲ್ಲೋ ಒಬ್ಬಿಬ್ಬರು ನಿಜಕ್ಕೂ ಉಪಯುಕ್ತ ಕೆಲಸ ಮಾಡುತ್ತಿದ್ದು ಉಳಿದವರು ಸುಮ್ಮನೆ ಬದುಕುತ್ತಿದ್ದಾರಷ್ಟೆ ಎಂದು ನಾವು ಕೆಲವೊಮ್ಮೆ ಮಾತನಾಡುವುದು ಹಾಗೂ ಬರೆಯುವುದೂ ಉಂಟು. ಹೀಗಿದ್ದೂ ಹಾಗೆ ಯೋಚಿಸುವುದು ತಪ್ಪು. ರಾಷ್ಟ್ರದ ನಿಜವಾದ ಮಹತ್ವ ಅದರ ಸರಾಸರಿ ಪುರುಷ ಹಾಗೂ ಮಹಿಳೆಯನ್ನೇ ಅವಲಂಬಿಸಿದೆ.~ ಈ ಮಾತುಗಳು ಸಾರ್ವಕಾಲಿಕ. ಅಷ್ಟೇ ಅಲ್ಲ, ಈಗಲೂ ತುಂಬಾ ಪ್ರಸ್ತುತ. ನಾಗರಿಕ ಸಮಾಜದ ಕೆಲವು ಸ್ವಯಂಘೋಷಿತ ಪ್ರತಿನಿಧಿಗಳು ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಸ್ಥಾಪಿತಗೊಂಡಿದ್ದಾರೆ. ತಕ್ಷಣಕ್ಕೆ, ಟೆಲಿವಿಷನ್ ಸ್ಟುಡಿಯೊಗಳಲ್ಲಿ ಅವರ ನಿಯಮಿತ ಹಾಜರಿಗಳಿಂದಾಗಿ ಸಾರ್ವಜನಿಕರ ಕಣ್ಣಲ್ಲಿ ಅವರು ದೊಡ್ಡದಾಗಿ ಕಾಣಿಸುತ್ತಾರೆ.ಆದರೆ ಅವರ ಕೆಲಸದ ದೀರ್ಘಾವಧಿ ಪರಿಣಾಮಗಳ ಬಗ್ಗೆ ಹೆಚ್ಚು ಆಶಾವಾದಿಗಳಾಗಿರುವುದು ಸಾಧ್ಯವಿಲ್ಲ. ಇಳಾ ಭಟ್ ಹಾಗೂ `ಸೇವಾ~ದ ಉದಾಹರಣೆಯನ್ನೇ ನೋಡಿದಲ್ಲಿ, ಸ್ಥಿರ, ಸುಸ್ಥಿರ ಸಾಮಾಜಿಕ ಬದಲಾವಣೆ ಬಯಸುವವರಿಗೆ, ಸಾಮಾನ್ಯ ಪುರುಷ ಹಾಗೂ ಮಹಿಳೆಯಲ್ಲಿ ಔನ್ನತ್ಯದ ಕಿಡಿ ಹೊತ್ತಿಸಲು ಬಯಸುವವರಿಗೆ ಮಾಧ್ಯಮದ ಗಮನ ದೊಡ್ಡ ಅಡ್ಡಿ, ನಿಜಕ್ಕೂ ಸಮಯ ಹಾಳುಮಾಡುವಂತಹದ್ದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry