ಶುಕ್ರವಾರ, ಆಗಸ್ಟ್ 7, 2020
23 °C

ಸಾಮುದಾಯಿಕ ಹೊಣೆ; ಸೌಹಾರ್ದಕ್ಕೆ ಮನ್ನಣೆ

ಡಾ.ಆರ್.ಬಾಲಸುಬ್ರಹ್ಮಣ್ಯಂ Updated:

ಅಕ್ಷರ ಗಾತ್ರ : | |

ಸಾಮುದಾಯಿಕ ಹೊಣೆ; ಸೌಹಾರ್ದಕ್ಕೆ ಮನ್ನಣೆ

ಕೆಲ ದಿನಗಳ ಹಿಂದೆ ಐಐಟಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದ ಒಂದು ಚರ್ಚೆಯನ್ನು ನಾನು ಟಿ.ವಿಯಲ್ಲಿ ವೀಕ್ಷಿಸುತ್ತಿದ್ದೆ. ಮುಂಬೈ ಐಐಟಿಯ ಪ್ರೊಫೆಸರ್ ಒಬ್ಬರು, ಲೋಹ ವಿಜ್ಞಾನ ವಿಭಾಗದ ತಮ್ಮ ಬಹುತೇಕ ವಿದ್ಯಾರ್ಥಿಗಳು, ಕಲಿತದ್ದನ್ನು ಬಿಟ್ಟು ಬೇರೆ ಉದ್ಯೋಗಗಳನ್ನು ಅವಲಂಬಿಸುತ್ತಿರುವ ಸಂಗತಿಯನ್ನು ಹೇಳಿಕೊಂಡು ವಿಷಾದಿಸುತ್ತಿದ್ದರು.

 

ಈ ವಿದ್ಯಾರ್ಥಿಗಳಲ್ಲಿ ಹಲವರು ಆಯ್ದುಕೊಂಡಿದ್ದುದು ಸಾಫ್ಟ್‌ವೇರ್‌ಗೆ ಸಂಬಂಧಿಸಿದ ನಿಸ್ತೇಜ ಉದ್ಯೋಗಗಳನ್ನು. ಇಂತಹ ಬೆಳವಣಿಗೆಗೆ, ಲೋಹ ವಿಜ್ಞಾನ ಕ್ಷೇತ್ರದಲ್ಲಿ ಸಿಗುವ ವೇತನಕ್ಕಿಂತ ಸಾಫ್ಟ್‌ವೇರ್ ಉದ್ಯೋಗ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಹಣ ನೀಡುತ್ತಿರುವುದೇ ಕಾರಣ ಎಂದು ಪ್ರೊಫೆಸರ್ ವಿವರಿಸುತ್ತಿದ್ದರು.ಇದನ್ನು ಕೇಳಿದಾಗ, ನಮ್ಮ ದೇಶದ ಬುದ್ಧಿವಂತ ಮಕ್ಕಳಿಗಾಗಿ ನಾವು ಇಷ್ಟೊಂದು ಸಮಯ, ಶಕ್ತಿ ಎಲ್ಲವನ್ನೂ ವ್ಯಯಿಸಿ  ತರಬೇತಿ ನೀಡುತ್ತಿರುವುದು ಅವರು ಅಧಿಕೃತವಾಗಿ ಏನನ್ನು ಕಲಿಯುತ್ತಾರೋ ಅದನ್ನು ಬಿಟ್ಟು ಅದಕ್ಕೆ ಸಂಬಂಧವೇ ಇಲ್ಲದ ಉದ್ಯೋಗಗಳನ್ನು ಅರಸಿಹೋಗುವ ಸಲುವಾಗಿಯೇ ಎಂದು ನನಗೆ ದಿಗ್ಭ್ರಮೆಯಾಯಿತು.

 

ಹಾಗಿದ್ದರೆ ನಮ್ಮ ಯುವಜನರ ನಿರ್ಧಾರಗಳು ಬೇರೆ ಏನನ್ನೂ ಗಣನೆಗೆ ತೆಗೆದುಕೊಳ್ಳದೆ ಬರೀ ಆರ್ಥಿಕ ಲಾಭಕ್ಕೇ ಹೆಚ್ಚು ಒತ್ತು ನೀಡುತ್ತಿರುವಂತೆ ಕಾಣುತ್ತಿರುವುದು ವಿಷಾದದ ಸಂಗತಿ. ನಮ್ಮ ಜೀವನದಲ್ಲಿ ಹಣ ಪ್ರಮುಖ ಪಾತ್ರ ವಹಿಸುವುದೇನೋ ಸರಿ. ಆದರೆ, ನಮ್ಮ ಬದುಕನ್ನು ಹೇಗೆ ಸಾಗಿಸಬೇಕು ಎಂಬುದನ್ನು ನಿರ್ಧರಿಸುವಲ್ಲಿ ಕೂಡ ಇದೇ ಏಕಮಾತ್ರ ನಿರ್ಧಾರಕ ಅಂಶವಾಗುತ್ತಿರುವುದು ನಮ್ಮೆಲ್ಲರನ್ನೂ ಚಿಂತೆಗೀಡುಮಾಡುವ ವಿಷಯವಾಗಬೇಕು.ಈ ಹೊಣೆಗಾರಿಕೆಯನ್ನು ನಾವು ನಮ್ಮ ಯುವಜನಾಂಗದ ಮೇಲಷ್ಟೇ ಹೊರಿಸಲು ಸಾಧ್ಯವಿಲ್ಲ. ಬಹುಸಂಖ್ಯಾತರ ಜೀವನಶೈಲಿಗಿಂತ ಭಿನ್ನವಾದ ಜೀವನಶೈಲಿಯನ್ನು ಪ್ರೇರೇಪಿಸಲು ಪ್ರಸ್ತುತ ಯಾವ ಬಗೆಯ ಆದರ್ಶ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ? ಇದನ್ನು ಪ್ರಭಾವಿಸುತ್ತಿರುವ ವಿವಿಧ ಸಾಮಾಜಿಕ ಅಂಶಗಳನ್ನು ಗ್ರಹಿಸುವ ಜತೆಗೆ, ಈಗಿನ ಮೌಢ್ಯ ತುಂಬಿದ ಗ್ರಾಹಕ ಸಂಸ್ಕೃತಿಗೆ ಬೇರೇನಾದರೂ ಕಾರ್ಯಸಾಧುವಾದ ಪರ್ಯಾಯಗಳು ಇವೆಯೇ ಎಂಬುದನ್ನು ಸಹ ಆವಿಷ್ಕರಿಸಬೇಕು.ಈ ಬಗ್ಗೆ ಯೋಚಿಸಿದಾಗ ನನಗೆ, ವಿವೇಚನಾಶೀಲನಾದ ಕಾಡುಕುರುಬ ಯಜಮಾನ ಕೆಂಪಯ್ಯ ಹಲವು ವರ್ಷಗಳ ಹಿಂದೆ ಹೇಳಿದ್ದ ಮಾತುಗಳು ನೆನಪಾದವು. ಒಂದು ಹಿತವಾದ ಸಂಜೆ ನಿರಾಳವಾಗಿ ಕುಳಿತಿದ್ದ ನಾವಿಬ್ಬರೂ, ಬುಡಕಟ್ಟು ಜನರ ಜೀವನಶೈಲಿ ಮತ್ತು ಅದರ ಮೇಲೆ ಇಂದಿನ ಆಧುನಿಕತೆಯ ಒತ್ತಡಗಳು ಯಾವ ರೀತಿ ಪರಿಣಾಮ ಬೀರುತ್ತಿವೆ ಎಂಬ ಬಗ್ಗೆ ಲೋಕಾಭಿರಾಮವಾಗಿ ಮಾತನಾಡಿಕೊಳ್ಳುತ್ತಿದ್ದೆವು.ಆಗ ತಾವು ಕೃಷಿ ಚಟುವಟಿಕೆ ನಡೆಸುತ್ತಿದ್ದ ಬಗೆ ಹೇಗೆ ಎಂಬುದನ್ನು ಕೆಂಪಯ್ಯ ವಿವರಿಸಿದ.ಆದಿವಾಸಿಗಳು ಯಾವಾಗಲೂ ಒಂದು ಸಮುದಾಯವಾಗಿ ಬದುಕುತ್ತಾ ಬಂದವರೇ ಹೊರತು ವೈಯಕ್ತಿಕ ಮಾಲೀಕತ್ವ ಎಂಬುದು ಅವರಲ್ಲಿ ಅಸ್ತಿತ್ವದಲ್ಲಿ ಇರಲೇ ಇಲ್ಲ. ಅವರ ಭೂಮಿಯ ಗಡಿಯನ್ನು ಸರ್ಕಾರದ ಕಂದಾಯ ಇಲಾಖೆ ಗುರುತಿಸುತ್ತಿರಲಿಲ್ಲ.ಸಮುದಾಯದ ಯಜಮಾನನೇ ಅದನ್ನು ಗುರುತಿಸುತ್ತಿದ್ದ ಮತ್ತು ಆ ಇಡೀ ಪಂಗಡ ಸಾಮುದಾಯಿಕವಾಗಿ ಅದರ ಮಾಲೀಕತ್ವ ಹೊಂದಿರುತ್ತಿತ್ತು. ಈ ರೀತಿಯ ಬೃಹತ್ ಭೂ ಒಡೆತನದ ಜೊತೆಗೆ ಪ್ರತಿ ಕುಟುಂಬವೂ ತನ್ನದೇ ಆದ ಒಂದು ಸಣ್ಣ ಭೂಮಿಯಲ್ಲಿ ಉಳುಮೆ ಮಾಡಬೇಕಾಗುತ್ತಿತ್ತು.ಅತ್ಯಂತ ಪ್ರಭಾವಶಾಲಿ ಆಗಿರುತ್ತಿದ್ದ ಯಜಮಾನ ಯಾವುದೇ ಹೆದರಿಕೆ ಇಲ್ಲದೆ ತಾರತಮ್ಯರಹಿತವಾಗಿ ಮತ್ತು ವಿವೇಚನೆಯಿಂದ ತನ್ನ ಅಧಿಕಾರವನ್ನು ಬಳಸುತ್ತಿದ್ದ. ಆಯಾಯ ಪ್ರಾಂತ್ಯದೊಳಗೆ ನಿಗದಿ ಮಾಡಿದ ಭೂಮಿಯಲ್ಲಿ ಯಾವ ಯಾವ ಕುಟುಂಬ ಏನೇನು ಬೆಳೆಯಬೇಕು ಎಂಬುದನ್ನು ಆತನೇ ತೀರ್ಮಾನಿಸುತ್ತಿದ್ದ.

 

ಮುಂಗಾರು ಪೂರ್ವ ಮಳೆ ಬೀಳುತ್ತಿದ್ದಂತೆಯೇ ವಿಧಿಬದ್ಧವಾದ ಸಮಾರಂಭದಲ್ಲಿ ಯಜಮಾನನೇ ಬಿತ್ತನೆ ಬೀಜ ವಿತರಣೆ ಮಾಡುತ್ತಿದ್ದ. ಅದಕ್ಕಾಗಿ ದೈವಗಳ ಆರಾಧನೆ ಮಾಡಲಾಗುತ್ತಿತ್ತು. ಮುಂದಿನ ಮುಂಗಾರಿನ ಸ್ಥಿತಿಗತಿಯನ್ನು ಅವುಗಳಿಂದ ಖಚಿತಪಡಿಸಿಕೊಳ್ಳಲಾಗುತ್ತಿತ್ತು. ಈ ದೈವಗಳು ನೀಡುವ ನಿರ್ದೇಶನವನ್ನು ಅನುಸರಿಸಿ, ಯಾವಾಗ ಕೃಷಿ ಚಟುವಟಿಕೆ ಆರಂಭಿಸಬೇಕು ಎಂಬುದನ್ನು ಯಜಮಾನನೇ ಪ್ರಕಟಿಸುತ್ತಿದ್ದ.ಬಳಿಕ ಆತ ವಿವಿಧ ಕುಟುಂಬಗಳಿಗೆ ವಿವಿಧ ಬಗೆಯ ಬೀಜಗಳನ್ನು ಹಂಚುತ್ತಿದ್ದ. ಒಬ್ಬರಿಗೆ ರಾಗಿ ಬೀಜ ಸಿಕ್ಕರೆ, ಮತ್ತೊಬ್ಬರಿಗೆ ಕಾಳುಗಳು, ಮಗದೊಬ್ಬರಿಗೆ ಬತ್ತ, ಒಂದು ಕುಟುಂಬಕ್ಕೆ ತರಕಾರಿ ಬೆಳೆಯುವ ಕೆಲಸವಾದರೆ ಮತ್ತೊಂದು ಕುಟುಂಬಕ್ಕೆ ಸಾಂಬಾರು ಪದಾರ್ಥ ಬೆಳೆಯುವ ಹೊಣೆ ಇರುತ್ತಿತ್ತು.ಪ್ರತಿಯೊಂದು ವಿಷಯವನ್ನೂ ತನ್ನ ಜನರ ಬೇಕು ಬೇಡಗಳ ಅಗತ್ಯಕ್ಕೆ ತಕ್ಕಂತೆ ಯಜಮಾನನೇ ನಿರ್ಧರಿಸುತ್ತಿದ್ದ. ತನ್ನ ಇಡೀ ಪ್ರಾಂತ್ಯದ  ಜನರ ವರ್ಷಪೂರ್ತಿಯ ಅವಶ್ಯಕತೆಗಳನ್ನು ಆತ ಅಂದಾಜು ಮಾಡಿರುತ್ತಿದ್ದ. ಇದನ್ನು ಆಧಾರವಾಗಿಟ್ಟು ಬೀಜ ವಿತರಣೆ ಮಾಡುತ್ತಿದ್ದ. ಈ ಎಲ್ಲ ಕಾರ್ಯವೂ ಅವರ ಬದುಕಿಗೆ ಎಷ್ಟು ಬೇಕು ಎಂಬುದನ್ನು ಆಧರಿಸಿರುತ್ತಿತ್ತು.ಯಾವ ಕುಟುಂಬ ಏನನ್ನು ಬೆಳೆಯಬೇಕು ಎಂಬುದು ಆ ಕುಟುಂಬ ಕಳೆದ ವರ್ಷ ಏನನ್ನು ಬೆಳೆದಿತ್ತು ಎಂಬುದನ್ನು ಅವಲಂಬಿಸಿರುತ್ತಿತ್ತು. ಒಂದು ಕುಟುಂಬ ಹಿಂದಿನ ವರ್ಷ ರಾಗಿ ಬೆಳೆದಿದ್ದರೆ ಈ ವರ್ಷ ಅದು ದ್ವಿದಳ ಧಾನ್ಯ ಅಥವಾ ಇತರ ಬೇರೆ ಬೆಳೆಯನ್ನು ಬೆಳೆಯಬೇಕಾಗುತ್ತಿತ್ತು.ಇದರಿಂದ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳುವುದು ಮಾತ್ರವಲ್ಲದೆ ಪ್ರತಿ ರೈತ ಮತ್ತು ಅವನ ಕುಟುಂಬಕ್ಕೆ ಎಲ್ಲ ಬೆಳೆಗಳ ಬಗ್ಗೆಯೂ ಜ್ಞಾನ ಲಭ್ಯವಾಗುವಂತೆ ಆಗುತ್ತಿತ್ತು. ಅಲ್ಲದೆ ಜ್ಞಾನ ಅಥವಾ ತಿಳಿವಳಿಕೆ ಯಾವುದೇ ಒಬ್ಬ ವ್ಯಕ್ತಿಯ ಅಥವಾ ಒಂದು ಕುಟುಂಬದ ನಿಯಂತ್ರಣದಲ್ಲಿ ಇರಲು ಅವಕಾಶ ಆಗುತ್ತಿರಲಿಲ್ಲ.

 

ಈ ವ್ಯವಸ್ಥೆಯ ಮೂಲಕ ಕಾಲಕ್ರಮೇಣ ಇಡೀ ಸಮುದಾಯ ಎಲ್ಲ ಬೆಳೆಗಳಲ್ಲೂ ಪರಿಣತಿ ಹೊಂದುತ್ತಿತ್ತು. ಆಗ ಯಾವ ವ್ಯಕ್ತಿಯೂ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ರಚನೆಯಿಂದ ಹೊರತಾಗಿ ಇರುತ್ತಿರಲಿಲ್ಲ. ಅಧಿಕಾರ ಮತ್ತು ಮಾಹಿತಿ ಸಹ ಸೌಹಾರ್ದಯುತವಾಗಿ ಹಂಚಿಕೆಯಾಗುತ್ತಿತ್ತಲ್ಲದೆ ಅಂತಿಮವಾಗಿ ಇವೆಲ್ಲವೂ ಸಮುದಾಯದ ಆಂತರಿಕ ಶಾಂತಿ ಮತ್ತು ಸೌಹಾರ್ದಕ್ಕೆ ಪೂರಕವಾಗಿ ತನ್ನದೇ ಆದ ಕಾಣಿಕೆ ಸಲ್ಲಿಸುತ್ತಿದ್ದವು.ಕೊನೆಗೆ ಬೆಳೆ ಬೆಳೆದು ನಿಂತು ಕೊಯಿಲಿಗೆ ಸಿದ್ಧವಾಗುತ್ತಿದ್ದಂತೆಯೇ ಮತ್ತೊಂದು ಸಮಾರಂಭ ಏರ್ಪಡಿಸಿ, ಎಲ್ಲವನ್ನೂ ಸುಸೂತ್ರವಾಗಿ ನಡೆಸಿಕೊಟ್ಟದ್ದಕ್ಕಾಗಿ ದೈವಗಳಿಗೆ ಕೃತಜ್ಞತೆ ಸಲ್ಲಿಸಲಾಗುತ್ತಿತ್ತು. ಬಳಿಕ ಹೀಗೆ ಬೆಳೆದ ಬೆಳೆಯನ್ನು ಯಜಮಾನ ಎಲ್ಲ ಸದಸ್ಯರಿಗೂ ಹಂಚಿಕೆ ಮಾಡುತ್ತಿದ್ದ.ಸಣ್ಣ ಕುಟುಂಬಗಳು ಕಡಿಮೆ ಪಾಲು ಪಡೆದರೆ, ದೊಡ್ಡ ಕುಟುಂಬಗಳು ಹೆಚ್ಚಿನ ಪಾಲು ಪಡೆದುಕೊಳ್ಳುತ್ತಿದ್ದವು. ಇಲ್ಲೂ ಈ ಹಂಚಿಕೆಯು ಆಯಾಯ ಕುಟುಂಬದ ನಿಜವಾದ ಅಗತ್ಯ ಮತ್ತು ಬಳಕೆಯನ್ನು ಅವಲಂಬಿಸಿರುತ್ತಿತ್ತೇ ಹೊರತು ಯಾವುದೇ ಒಂದು ಕುಟುಂಬದ ಕೂಲಿ ಅಥವಾ ಇತರ ಯಾವುದೇ ಮಾನದಂಡವನ್ನು ಆಧಾರವಾಗಿಟ್ಟುಕೊಂಡು ಅಲ್ಲ.ಹೀಗೆ ಹಂಚಿ ಮುಗಿದ ಮೇಲೂ ಉಳಿಯುತ್ತಿದ್ದ ದವಸ ಧಾನ್ಯಗಳನ್ನು ಸಾಮೂಹಿಕ ಬಳಕೆಗಾಗಿ ಶೇಖರಿಸಿ ಇಡಲಾಗುತ್ತಿತ್ತು.  ವೃದ್ಧರನ್ನು ಹೊಂದಿದ ಕುಟುಂಬಗಳು, ಸಾಮೂಹಿಕ ಸಮಾರಂಭಗಳಂತಹ ಸಂದರ್ಭಗಳಲ್ಲಿ ಈ ಹೆಚ್ಚುವರಿ ದವಸ ಧಾನ್ಯಗಳನ್ನು ಉಪಯೋಗಿಸಲಾಗುತ್ತಿತ್ತು. ಇಷ್ಟೇ ಅಲ್ಲದೆ ಮುಂದಿನ ವರ್ಷದ ಬಿತ್ತನೆ ಬೀಜಕ್ಕಾಗಿ ಒಂದು ಭಾಗವನ್ನು ತೆಗೆದಿರಿಸಲಾಗುತ್ತಿತ್ತು.ಇದನ್ನು ಸಂರಕ್ಷಿಸಿ ಇಡುವ ಹೊಣೆಯನ್ನು ಯಜಮಾನ ಹೊತ್ತುಕೊಳ್ಳುತ್ತಿದ್ದ. ಇಂತಹ ಸಮಾಜದಲ್ಲಿ ಯಾರೂ ನಿರ್ಗತಿಕರಾಗಿ ಇರುತ್ತಿರಲಿಲ್ಲ, ಯಾವ ವೃದ್ಧರೂ ಅಸಡ್ಡೆಗೆ ಒಳಗಾಗುತ್ತಿರಲಿಲ್ಲ, ಒಬ್ಬರಿಗಿಂತ ಒಬ್ಬರು ಉತ್ತಮರು ಅಥವಾ ಧನಿಕರು ಎಂಬುದನ್ನು ಸಾಬೀತುಪಡಿಸುವ ಯಾವ ಅನಾರೋಗ್ಯಕರ ಸ್ಪರ್ಧೆಗೂ ಇಲ್ಲಿ ಜಾಗ ಇರುತ್ತಿರಲಿಲ್ಲ.

 

ದವಸ ಧಾನ್ಯ ಸಂಗ್ರಹ ಸ್ವಯಂ ಬಳಕೆಯ ಉದ್ದೇಶಕ್ಕೆ ಮಾತ್ರವಾಗಿತ್ತಲ್ಲದೆ ವ್ಯಾಪಾರ ಅಥವಾ ಇತರ ಯಾವುದೇ ವ್ಯಾವಹಾರಿಕ ಕಾರಣ ಅದರ ಹಿಂದೆ ಇರುತ್ತಿರಲಿಲ್ಲ. ಈ ಪ್ರಕ್ರಿಯೆಯಲ್ಲಿ ಕೆಲ ಭೂಮಿಯನ್ನು ಉದ್ದೇಶಪೂರ್ವಕವಾಗಿ ಬೀಳು ಬಿಡುತ್ತಿದ್ದುದೂ ಉಂಟು. ಅಲ್ಲದೆ ಗೋಮಾಳಕ್ಕೂ ಒಂದು ಪಾಲು ಇರುತ್ತಿತ್ತು.ಸಣ್ಣ ಪುಟ್ಟ ವಿಷಯಗಳನ್ನೂ ಯಜಮಾನನೇ ನಿರ್ಧರಿಸುತ್ತಿದ್ದ ಮತ್ತು ಯಾವುದೇ ಅಡೆತಡೆ ಇಲ್ಲದೇ ಈ ವ್ಯವಸ್ಥೆ ನಡೆದುಕೊಂಡು ಬರುತ್ತಿತ್ತು.ಮನುಷ್ಯ ಮನುಷ್ಯರ ನಡುವೆ ಅಷ್ಟರಮಟ್ಟಿಗಿನ ಆಳವಾದ ಪರಸ್ಪರ ಅವಲಂಬನೆ ಮತ್ತು ಕೊಡುಕೊಳ್ಳುವಿಕೆ ಅಲ್ಲಿತ್ತು.ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡಿದರೆ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ ಎಂಬುದನ್ನು ಈ ಸಮುದಾಯಗಳು ಅರ್ಥ ಮಾಡಿಕೊಂಡಿದ್ದವು. ನಮ್ಮದೇ ನೆಲದ ಇಂತಹ ವಿವೇಚನಾಶೀಲ ಸಮುದಾಯಗಳಿಂದ ಈ ಬಗೆಯ ಸುಸ್ಥಿರ ಅಭಿವೃದ್ಧಿ ಸಾಧನೆಯ ಮಾರ್ಗವನ್ನೇ ನಾವೆಲ್ಲರೂ ಇಂದು ಕಲಿಯಬೇಕಾಗಿರುವುದು.ಸಾವಿರಾರು ವರ್ಷಗಳಿಂದ ನಮ್ಮ ಆದಿವಾಸಿಗಳ ಬದುಕಿನ ಮಾರ್ಗವೇ ಆಗಿಹೋಗಿದ್ದ ಇಂತಹ ಸರಳ ರಹಸ್ಯದ ಮಾರ್ಗಗಳನ್ನು ಕಂಡುಕೊಳ್ಳುವ ಸಲುವಾಗಿಯೇ, ರಯೊ ಡಿ ಜನೈರೊದಲ್ಲಿ ಇತ್ತೀಚೆಗೆ ನಡೆದ ವಿಶ್ವ ನಾಯಕರ ಶೃಂಗಸಭೆ ಲಕ್ಷಾಂತರ ಡಾಲರ್ ಹಣವನ್ನು ವ್ಯಯಿಸಿದೆ.ಭಾರತವೂ ಸೇರಿದಂತೆ ಸೂಕ್ಷ್ಮ ಪ್ರಜ್ಞೆ ಇಲ್ಲದ ಅಜ್ಞಾನಿ ಸರ್ಕಾರಗಳು ಇಂತಹ ಸಮುದಾಯಗಳಿಂದ ಕಲಿಯುವುದು ಬಿಟ್ಟು, ವೈಯಕ್ತಿಕ ಮಾಲೀಕತ್ವ ಹಾಗೂ ಮಾರುಕಟ್ಟೆ ಲೆಕ್ಕಾಚಾರಗಳ ಮೂಲಕ ರೂಢಿಗತ ಸಂಪ್ರದಾಯಗಳನ್ನು ನಾಶ ಮಾಡಲು ಹೊರಟಿವೆ.ಎಲ್ಲ ವೃತ್ತಿಪರರೂ ತಂಡಗಳಲ್ಲಿ ಒಟ್ಟಾಗಿ ಸೇರಿ ಕೆಲಸ ಮಾಡಿ ಅದರಿಂದ ದೊರೆಯುವ ಯಶಸ್ಸು ಮತ್ತು ಲಾಭವನ್ನು ಸಮನಾಗಿ ಹಂಚಿಕೊಂಡರೆ ಹೇಗಿರುತ್ತದೆ ಎಂದು ಒಮ್ಮೆ ಕಲ್ಪಿಸಿಕೊಳ್ಳಿ. ಆಗ ಒಬ್ಬ ವೈದ್ಯ ಅಥವಾ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಮತ್ತೊಬ್ಬ ನತದೃಷ್ಟ ಸಹವರ್ತಿಗಿಂತ ಐದರಿಂದ ಹತ್ತು ಪಟ್ಟು ಹೆಚ್ಚು ಹಣ ಗಳಿಸುವಂತಹ ಪರಿಸ್ಥಿತಿ ಬರುವುದಿಲ್ಲ.ಆಗ ಲಾಭ ನಷ್ಟದ ಲೆಕ್ಕಾಚಾರ ಹೊರತುಪಡಿಸಿ ಪ್ರತಿ ವೃತ್ತಿಗೂ ತಕ್ಕ ಮೌಲ್ಯಾಧಾರಿತ ಮನ್ನಣೆ ಸಿಗುತ್ತದೆ. ಧರ್ಮಸಮ್ಮತ, ತಾರತಮ್ಯರಹಿತ, ಪೂರ್ವಗ್ರಹವಿಲ್ಲದ ಮತ್ತು ಪಾರದರ್ಶಕ ತತ್ವಗಳನ್ನು ಒಳಗೊಂಡ ನಿಷ್ಪಕ್ಷಪಾತವಾದ ಸಮಾನತಾ ವ್ಯವಸ್ಥೆ ನಮ್ಮದಾಗುತ್ತದೆ.ಇದು ಕ್ಷಿಪ್ರ ಗತಿಯಲ್ಲಿ ಜಾಗತೀಕರಣ ಮತ್ತು ಖಾಸಗೀಕರಣಕ್ಕೆ ಒಳಗಾಗುತ್ತಿರುವ ಇಂದಿನ ಮಾರುಕಟ್ಟೆ ಆಧಾರಿತ ಜಗತ್ತಿನಲ್ಲಿ ಬರೀ ಕಲ್ಪನಾಯೋಗ್ಯವಾದ ಮತ್ತು ಇಂದಿನ ಜಾಯಮಾನಕ್ಕೆ ಒಗ್ಗದ ಮಾತಿನಂತೆಯೇ ಭಾಸವಾಗುತ್ತದೆ. ಅತ್ಯಂತ ಆದರ್ಶವಾದ ಮತ್ತು ಕಾರ್ಯರೂಪಕ್ಕೆ ತರಲಾಗದ ಅವಾಸ್ತವಿಕ ಸಂಗತಿಯಂತೆಯೂ ಕಾಣುತ್ತದೆ ಎಂಬುದು ನನಗೆ ಗೊತ್ತು.ಆದರೆ ನಮ್ಮದೇ ನೆಲದ ಸಮುದಾಯಗಳು ಇದೇ ತತ್ವದ ಆಧಾರದ ಮೇಲೇ ಸಾವಿರಾರು ವರ್ಷಗಳಿಂದ ಬದುಕುತ್ತಾ ಬಂದಿದ್ದವು ಎಂಬುದನ್ನು ನಾವು ಮರೆಯಬಾರದು. ಆದ್ದರಿಂದ ಈಗ ನಮಗೆ ಬೇಕಾಗಿರುವುದು ಅವರಿಂದ ಇದನ್ನೆಲ್ಲಾ ಕಲಿಯಲು ಬೇಕಾದ ವಿನಮ್ರತೆ ಮತ್ತು ಈ ಮೌಲ್ಯಗಳಿಗೆ ತಕ್ಕಂತೆ ನಮ್ಮನ್ನು ಪರಿವರ್ತಿಸಿಕೊಂಡು, ಅದರಂತೆ ಬದುಕಲು ಬೇಕಾದ ಧೈರ್ಯ.ಮಹಾತ್ಮನ ದೃಷ್ಟಿಕೋನದಂತೆ ನಮ್ಮ ಸಮಾಜ `ದುರಾಸೆ ಆಧಾರಿತ~ ವ್ಯವಸ್ಥೆಯಿಂದ `ಅವಶ್ಯಕತೆ ಆಧಾರಿತ~ ವ್ಯವಸ್ಥೆಯಾಗಿ ಬದಲಾದರೆ ಈ ಸಾಧನೆ ನಮ್ಮಿಂದ ಸಾಧ್ಯವಾಗುತ್ತದೆ.(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in) 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.