ಸಾವಿನಲ್ಲೂ ವ್ಯತ್ಯಾಸ; ಇಲ್ಲ ಎನ್ನುವುದು ಹೇಗೆ?

7

ಸಾವಿನಲ್ಲೂ ವ್ಯತ್ಯಾಸ; ಇಲ್ಲ ಎನ್ನುವುದು ಹೇಗೆ?

Published:
Updated:

ಸಾವೇ ಹಾಗೆ, ಅದು ನಿರ್ದಯಿ. ಅದಕ್ಕೆ ಹೆಣ್ಣು- ಗಂಡು, ಮಕ್ಕಳು-ಮುದುಕರು. ವಿಮಾನ-ಬಸ್ ಇಂಥ ಯಾವ ವ್ಯತ್ಯಾಸವೂ ಗೊತ್ತಿಲ್ಲ. ದುಬೈಗೆ ಬದುಕು ಅರಸಿ ಹೋದ 158 ಜನ ಸುಟ್ಟು ಕರಕಲಾದ ದಾರುಣ ಘಟನೆ ಮರೆತು ಹೋಗುವ ಮುನ್ನವೇ ಸುರಪುರ ಬಸ್‌ನಲ್ಲಿದ್ದ 30 ಜನ ಬಡವರೂ ಸುಟ್ಟು ಕರಕಲಾಗಿ ಹೋಗಿದ್ದಾರೆ. ವ್ಯತ್ಯಾಸ ಒಂದೇ ಎಂದರೆ, ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಸತ್ತವರು ದುಬೈನಲ್ಲಿ ಹೊಟ್ಟೆ ಪಾಡು ಅರಸಿ ಹೋದವರು. ಚಳ್ಳಕೆರೆ ಬಳಿ ಸತ್ತವರು ಬೆಂಗಳೂರಿನಲ್ಲಿ ಕೂಲಿ ನಾಲಿ ಮಾಡಿ ಹೊಟ್ಟೆ ತುಂಬಿಕೊಳ್ಳಲು ಬರುವವರು. ದುಬೈಗೆ ದುಡಿಯಲು ಹೋದವರು ಒಂದಿಷ್ಟು ದುಡ್ಡು ಕಾಸು, ಚಿನ್ನ ಮಾಡಿಕೊಂಡಿರಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ಚಿತ್ರವನ್ನೂ, ಶಕ್ತಿಯನ್ನೂ ಬದಲಿಸಿರಬಹುದು. ಸುರಪುರದ ಮಂದಿ ತಾವೂ ಉದ್ಧಾರವಾಗಲಿಲ್ಲ. ತಮ್ಮ ಮನೆಯನ್ನೂ ಉದ್ಧರಿಸಲಿಲ್ಲ. ತಲೆಮಾರಿನಿಂದ ಅವರು ಹೀಗೆಯೇ ಗುಳೆ ಬರುತ್ತಲೇ ಇದ್ದಾರೆ, ಮುಂದೆಯೂ ಹೋಗುತ್ತಲೇ ಇರುತ್ತಾರೆ.ಇದು ಬರೀ ಸುರಪುರದ ಸಮಸ್ಯೆಯಲ್ಲ. ಇಡೀ ಉತ್ತರ ಕರ್ನಾಟಕದ ಸಮಸ್ಯೆ. ಉತ್ತರ ಕರ್ನಾಟಕದಲ್ಲಿ ಗುಲ್ಬರ್ಗಾ ವಿಭಾಗದ ಎಲ್ಲ ಜಿಲ್ಲೆಗಳ ತಾಲ್ಲೂಕುಗಳ ಸಮಸ್ಯೆ. ಬೆಳಗಾವಿ ವಿಭಾಗದಲ್ಲಿ ವಿಜಾಪುರ, ಬಾಗಲಕೋಟೆ ಜಿಲ್ಲೆಗಳ ಸಮಸ್ಯೆ. ವ್ಯತ್ಯಾಸ ಎಂದರೆ ವಿಜಾಪುರ, ಬಾಗಲಕೋಟೆ ಜಿಲ್ಲೆಯ ಜನರು ಗೋವಾ, ಮುಂಬೈಗೆ ವಲಸೆ ಹೋದರೆ, ಗುಲ್ಬರ್ಗಾ ವಿಭಾಗದ ಜನರು ಬೆಂಗಳೂರು ಕಡೆ ಬರುತ್ತಾರೆ. ಬೆಂಗಳೂರಿನಲ್ಲಿ ಇಂಥ ವಲಸಿಗರ ಗುಲ್ಬರ್ಗಾ ಕಾಲೊನಿಯೇ ನಿರ್ಮಾಣವಾಗಿದೆ.

 
 

ಸುರಪುರ ಒಂದು ಕಾಲದಲ್ಲಿ ಬರಡು ತಾಲ್ಲೂಕಾಗಿತ್ತು. ನೀರಾವರಿ ಇರಲೇ ಇಲ್ಲ. ಈಗ ಅಲ್ಲಿ ಕೃಷ್ಣೆ ಹರಿಯುತ್ತಿದ್ದಾಳೆ. ಆರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಆಗಿದೆ. ಆದರೆ, ಭೂಮಿ ಕನ್ನಡಿಗರ ಕೈ ತಪ್ಪಿ ಹೋಗಿದೆ. ಪಕ್ಕದ ಆಂಧ್ರದ ಶ್ರೀಮಂತರು ಜಮೀನು ಖರೀದಿಸಿ ಭತ್ತ ಬೆಳೆಯುತ್ತಿದ್ದಾರೆ. ಸ್ಥಳೀಯರಿಗೆ ಒಂದು ಎಕರೆ, ಎರಡು ಎಕರೆ ಭೂಮಿ ಇದೆ. ಅಲ್ಲಿ ಸಾಗುವಳಿ ಮಾಡುವುದು ಲಾಭಕರವಲ್ಲ. ವರ್ಷಕ್ಕೊಂದು ಮಕ್ಕಳೂ ಹುಟ್ಟಿ ಸಂಸಾರ ಬೆಳೆಯುತ್ತದೆ. ಸ್ವಂತ ಜಮೀನಿನಲ್ಲಿ ಬೆಳೆ ಬೆಳೆಯುವುದೂ ಒಂದೇ, ಇನ್ನೊಬ್ಬರ ಜಮೀನಿಲ್ಲಿ ಹೋಗಿ ದುಡಿಯುವುದೂ ಒಂದೇ. ಹೊಟ್ಟೆ ಮಾತ್ರ ತುಂಬುವುದಿಲ್ಲ.ಬೆಂಗಳೂರು ಕಡೆಯ ದಾರಿಯೊಂದೇ ಬದುಕಿಗೆ ದಾರಿ. ಇವರಿಗೆ ವಲಸೆ ಆಯ್ಕೆಯಲ್ಲ. ಅನಿವಾರ್ಯವಾದುದು. ‘ಜೀವನ ಮಟ್ಟ ಸುಧಾರಿಸಿಕೊಳ್ಳಬೇಕು, ದುಡ್ಡು ಮಾಡಿ ಮನೆಗೂ ಕಳುಹಿಸಬೇಕು’ ಎಂದು ದುಬೈಗೆ ಹೋದವರಲ್ಲ ಇವರು. ಹೇಗಾದರೂ ಮಾಡಿ ಎರಡು ಹೊತ್ತು ಹೊಟ್ಟೆ ಹೊರೆದರೆ ಸಾಕು ಎಂದು ಹೊರಟವರು. ಇವರಿಗೆ ಬೆಂಗಳೂರಿನಲ್ಲಿ ಸಿಗುವ ಕೂಲಿಯಾದರೂ ಎಷ್ಟು? ದಿನಕ್ಕೆ 175 ರೂಪಾಯಿ. ಅಬ್ಬಬ್ಬಾ ಎಂದರೆ 200 ರೂಪಾಯಿ. ರಾತ್ರಿ ಹಗಲು ದುಡಿದರೆ ಇನ್ನೊಂದಿಷ್ಟು ಹೆಚ್ಚು ಸಿಕ್ಕೀತು. ಅಷ್ಟೆ. ದೇಹ ಶ್ರಮದ ಕಿಮ್ಮತ್ತು ಯಾವಾಗಲೂ ಕಡಿಮೆಯೆ.ಈ ಚಿಕ್ಕ ಆಸೆಯೇ ಅವರನ್ನು ಜವರಾಯನ ಮನೆಗೂ ಕಳುಹಿಸಿ ಬಿಡುತ್ತದೆ.ಗುಲ್ಬರ್ಗಾ ವಿಭಾಗದ ತಾಲ್ಲೂಕು ಕೇಂದ್ರಗಳಿಂದ ಪ್ರತಿ ಶನಿವಾರ ಹೆಚ್ಚುವರಿ ಬಸ್‌ಗಳು ಬೆಂಗಳೂರಿಗೆ ಹೊರಡುತ್ತವೆ. ಅನೇಕ ಸಾರಿ, ಒಂದೇ ಊರಿನಿಂದ ಎರಡು ಮೂರು ಬಸ್‌ಗಳನ್ನು ಹೆಚ್ಚುವರಿಯಾಗಿ ಬಿಡುತ್ತಾರೆ. ಆ ಬಸ್‌ಗಳಲ್ಲಿ ಪ್ರಯಾಣಿಸುವವರೆಲ್ಲ ಕೂಲಿ ಕೆಲಸಗಾರರೇ ಆಗಿರುತ್ತಾರೆ. ಭಾನುವಾರ ಅವರಿಗೆ ಬೆಂಗಳೂರಿನಲ್ಲಿ ಪಗಾರದ ದಿನ. ಮತ್ತೆ ಸೋಮವಾರದಿಂದ ಎಂದಿನಂತೆ ಕಲ್ಲು, ಸಿಮೆಂಟ್ ಹೊತ್ತು ಹೆರವರ ಬಂಗಲೆ ಕಟ್ಟುವ ಕೆಲಸಕ್ಕೆ ತಲೆ ಕೊಡಬೇಕು. ಊರಿನಲ್ಲಿ ಮದುವೆ, ಸಾವು ಮುಂತಾಗಿ ಏನಾದರೂ ಅನಿವಾರ್ಯ ಇದ್ದರೆ ಮಾತ್ರ ಊರಿಗೆ ಬರುವ ಕೂಲಿಕಾರರು ಮತ್ತೆ ಬೆಂಗಳೂರು ಕಡೆಯೇ ಮುಖ ಮಾಡುತ್ತಾರೆ.ಇವರು ಹೇಗೂ ಕೂಲಿ ಮಾಡಿಯೇ ಹೊಟ್ಟೆ ಹೊರೆಯಬೇಕು. ಹುಟ್ಟಿದ ಊರಿನಲ್ಲಿ ಕೆಲಸ ಸಿಕ್ಕರೆ ಅಲ್ಲಿಯೇ ಇರಬಹುದಿತ್ತು. ಬೆಂಗಳೂರಿನ ಹಂಗಿನ ಶೆಡ್ಡಿಗಿಂತ, ಹುಟ್ಟಿದೂರಿನ ಮಣ್ಣಿನ ಮನೆ ಎಷ್ಟೋ ವಾಸಿ. ವಯಸ್ಸಾದ ಅವ್ವ, ಅಪ್ಪನ ಜತೆಗೂ ಇರಬಹುದಿತ್ತು. ಮಕ್ಕಳನ್ನು ಶಾಲೆಗೆ ಕಳುಹಿಸಬಹುದಿತ್ತು. ತಂದೆಯಿಂದ ಬಂದ ಒಂದು ಅಥವಾ ಎರಡು ಎಕರೆ ಜಮೀನಿನಲ್ಲಿ ಕುಟುಂಬಕ್ಕೆ ಆಗುವಷ್ಟಾದರೂ ಬೆಳೆ ಬೆಳೆಯಬಹುದಿತ್ತು. ಊರಿನಲ್ಲಿ ಇದ್ದರೆ, ಉದ್ಯೋಗ ಖಾತರಿ ಯೋಜನೆಯಡಿ ಕನಿಷ್ಠ ನೂರು ದಿನಕ್ಕೆ ಆಗುವಷ್ಟು ಮಾತ್ರ ಕೆಲಸ ಸಿಗುತ್ತದೆ. ಉಳಿದ 265 ದಿನ ಹೊಟ್ಟೆ ಹೊರೆಯುವುದು ಹೇಗೆ? ಉದ್ಯೋಗ ಖಾತರಿ ಯೋಜನೆಯಡಿಯಾದರೂ ಕೆಲಸ ಸಿಗುತ್ತದೆ ಎಂಬ ಗ್ಯಾರಂಟಿಯೂ ಇಲ್ಲ. ಇದು ಈಗಾಗಲೇ ಉತ್ತರ ಕರ್ನಾಟಕದಲ್ಲಿ ಪೂರ್ಣ ವಿಫಲವಾದ ಯೋಜನೆ. ಅದಕ್ಕೂ ರಾಜಕಾರಣಿಗಳೇ ಕಾರಣ. ಊರಿನ ಮುಖಂಡರೇ ಹೊಣೆ. ಖೊಟ್ಟಿ ಹೆಸರುಗಳಲ್ಲಿ ಜಾಬ್ ಕಾರ್ಡ್ ಮಾಡಿ ಕೂಲಿ ಹಣವನ್ನೆಲ್ಲ ಅವರೇ ಹೊಡೆದುಕೊಳ್ಳುತ್ತಾರೆ. ಇವರ ಜತೆಗೆ, ಬ್ಯಾಂಕುಗಳು, ವ್ಯವಸಾಯ ಸೇವಾ ಸಂಸ್ಥೆಗಳೂ ಷಾಮೀಲು. ಅಂತಲೇ ಹಣ ಪಾವತಿ ರಸೀತಿಗಳ ಮೇಲೆ ಬರೀ ಹೆಬ್ಬೆಟ್ಟಿನ ಗುರುತೇ ಜಾಸ್ತಿ. ಯಾರು ಹೆಬ್ಬೆಟ್ಟು ಒತ್ತುತ್ತಾರೆ, ಯಾರು ಹಣ ತೆಗೆದುಕೊಳ್ಳುತ್ತಾರೆ ಎಂದು ಹೇಳುವುದು ದುಸ್ತರ. ಕರ್ನಾಟಕಕ್ಕೆ ಈ ಯೋಜನೆಯಡಿ ಕಳೆದ ವರ್ಷ 2,800 ಕೋಟಿ ರೂಪಾಯಿಗಳಷ್ಟು ಹಣ ಬಂದಿದೆ. ಅದೆಲ್ಲ ಹಳ್ಳಿಗರಿಗೆ ತಲುಪಿದ್ದರೆ ವಲಸೆಯ ಪ್ರಮಾಣ ಒಂದಿಷ್ಟಾದರೂ ಕಡಿಮೆ ಆಗುತ್ತಿತ್ತು; ಬೀದಿ ಹೆಣವಾಗುವುದೂ ತಪ್ಪುತ್ತಿತ್ತು.ಇದಕ್ಕೆಲ್ಲ ಯಾರನ್ನು ದೂರೋಣ? ಉತ್ತರ ಕರ್ನಾಟಕ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟ ಪ್ರದೇಶ. ಅದರಲ್ಲಿ ಇಬ್ಬರು ಗುಲ್ಬರ್ಗಾ ವಿಭಾಗದಿಂದಲೇ ಬಂದವರು. ಅವರನ್ನು ಬಿಟ್ಟರೂ ಆ ಭಾಗದಲ್ಲಿ ರಾಜಕೀಯ ಘಟಾನುಘಟಿಗಳಿಗೇನೂ ಲೆಕ್ಕವಿಲ್ಲ. ಅವರಿಗೆ ಈ ಭಾಗದ ಅಭಿವೃದ್ಧಿಯ ಕನಸೇ ಇರಲಿಲ್ಲವೇ? ಬಂದ ದುಡ್ಡಾದರೂ ಎಲ್ಲಿ ಹೋಯಿತು? ಇಷ್ಟು ವರ್ಷವಾದರೂ ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ದಿನಗೂಲಿ ಜನ (ಶೇ 40) ಈ ಭಾಗದಲ್ಲಿಯೇ ಇದ್ದಾರೆ. ಇವರ ಪ್ರಮಾಣ ರಾಜ್ಯದ ಇತರ ಭಾಗದಲ್ಲಿ ಕೇವಲ ಶೇ 27 ರಷ್ಟು. ಇಡೀ ಉತ್ತರ ಕರ್ನಾಟಕದಲ್ಲಿ ಶಾಲೆಗೆ ಸೇರದ ಮಕ್ಕಳ ಪ್ರಮಾಣ ಶೇ 67ಕ್ಕೂ ಹೆಚ್ಚು. ಆರಂಭದ ಶಿಕ್ಷಣವನ್ನೇ ಪಡೆಯದ ಈ ಮಕ್ಕಳು ಜೀವನವಿಡೀ ಕೂಲಿಕಾರರಾಗಿಯೇ ಬದುಕು ಸಾಗಿಸಬೇಕಾಗುತ್ತದೆ. ಅವರಿಗೂ ಅಪ್ಪ ಹಾಕಿದ ಆಲದ ಮರವೇ ಉರುಳು. ಅದು ಬೆಂಗಳೂರಿನ ಗಾರೆ ಕೆಲಸ! ಗೋವಾದಲ್ಲಿ ಬಂದರು ಕೆಲಸ.ಅನಕ್ಷರತೆ ಇರುವಲ್ಲಿ ಭ್ರಷ್ಟಾಚಾರ ಹೆಚ್ಚು. ಅಲ್ಲಿ ಜನ ಪ್ರತಿಭಟನೆಯ ದನಿಯನ್ನೇ ಕಳೆದುಕೊಂಡಿರುತ್ತಾರೆ. ಅಧಿಕಾರಿಗಳು, ರಾಜಕಾರಣಿಗಳು ಷಾಮೀಲಾಗಿ ಬಡವರ ಕೂಲಿಯ ದುಡ್ಡನ್ನು ಲೂಟಿ ಹೊಡೆಯು ತ್ತಿದ್ದರೂ ಒಬ್ಬರೂ ಚಕಾರ ಎತ್ತದೆ, ‘ಇದು ನಮ್ಮ ಹಣೆಬರಹ’ ಎಂದು ಗೋವಾ, ಮುಂಬೈ, ಬೆಂಗಳೂರು ಕಡೆಗೆ ಹೊರಟು ಬಿಡುತ್ತಾರೆ. ದುರಂತ ಎಂದರೆ ಚುನಾವಣೆ ಬಂದಾಗ ಇವರೇ ಬಂದು ದುಡ್ಡು ಕೊಟ್ಟವರಿಗೆ ಮತ ಒತ್ತಿ ಮತ್ತೆ ಬಂದ ನಗರದ ದಾರಿ ಹಿಡಿಯುತ್ತಾರೆ. ತಮ್ಮ ಇಡೀ ಜೀವನವನ್ನು ಕೆಲಸ ಕೊಡಿಸುವ ಕಂತ್ರಾಟುದಾರನಿಗೆ ಒತ್ತೆ ಇಟ್ಟು ಬಿಡುತ್ತಾರೆ.ಆಯ್ಕೆಯ ದುಬೈ ವಲಸೆ, ಅನಿವಾರ್ಯದ ಬೆಂಗಳೂರು ವಲಸೆಯ ನಡುವೆ ವ್ಯತ್ಯಾಸವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಜಾಣರು. ಉತ್ತರ ಕರ್ನಾಟಕದ ಜನ ದಡ್ಡರು. ದಕ್ಷಿಣ ಕನ್ನಡದ ಜನರೂ ದೊಡ್ಡ ಕೆಲಸಗಳಿಗೆ ವಲಸೆ ಹೋಗಲಿಕ್ಕಿಲ್ಲ. ಆದರೆ, ಅವರು ಕೊನೆಯ ಪಕ್ಷ ವಿಮಾನದಲ್ಲಿ ಹೋಗುತ್ತಾರೆ. ಉತ್ತರ ಕರ್ನಾಟಕದ ವಲಸಿಗರು ಕೆಂಪು, ಆರ್ಡಿನರಿ ಬಸ್ಸುಗಳಲ್ಲಿ ಪ್ರಯಾಣಿಸುತ್ತಾರೆ. ವಿಮಾನದಲ್ಲಿ ಸಾವು ಬಂದರೆ ಕನಿಷ್ಠ 72 ಲಕ್ಷ ಪರಿಹಾರ ಸಿಗುತ್ತದೆ. ಬಸ್ಸಿನಲ್ಲಿ ಸಾವು ಕಾದಿದ್ದರೆ ಎರಡು ಲಕ್ಷ ಪರಿಹಾರ ಸಿಗುತ್ತದೆ. ಬದುಕಿನಲ್ಲಿ ಮಾತ್ರವಲ್ಲ ಸಾವಿನಲ್ಲಿಯೂ ವ್ಯತ್ಯಾಸ ಇರುತ್ತದೆ. ಇಲ್ಲ ಎನ್ನುವುದು ಹೇಗೆ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry