ಭಾನುವಾರ, ಮೇ 16, 2021
26 °C

ಸಿಕ್ಕಿಕೊಂಡ ವಿಷವೃತ್ತ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಮ್ಮ ರಕ್ಷಣೆಗೆ, ಸುಭದ್ರ ಸಮಾಜ ನಿರ್ವಹಣೆಗೆಂದೇ ರಚಿತವಾದ ವ್ಯವಸ್ಥೆ ತಾನೇ ಹೇಗೆ ರಾಕ್ಷಸವಾಗಬಲ್ಲದು, ಹಣವೊಂದಿದ್ದರೆ ಏನನ್ನಾದರೂ ಮಾಡಬಲ್ಲುದು ಎಂಬುದಕ್ಕೆ ಉದಾಹರಣೆಯಾಗಿ ಒಂದು ಘಟನೆ. ಅವರೊಬ್ಬ ಪ್ರಾಮಾಣಿಕ ನಿವೃತ್ತ ನ್ಯಾಯಾಧೀಶರು.

ಇವರು ಇನ್ನೂ ಕೆಲಸದಲ್ಲಿದ್ದಾಗ ಒಂದು ಬಾರಿ ಸಂಸಾರದೊಂದಿಗೆ ಪ್ರವಾಸಕ್ಕೆ ಹೋಗಿದ್ದರು. ಪ್ರಯಾಣ ಮುಗಿಸಿ ತಮ್ಮ ಊರಿಗೆ ಮರಳಿದಾಗ ಬೆಳಿಗ್ಗೆ ಐದು ಗಂಟೆ.

ಇನ್ನೂ ಬೆಳಕಾಗಿರಲಿಲ್ಲ. ತಮ್ಮ ಪರಿವಾರದೊಂದಿಗೆ, ಸಾಮಾನುಗಳನ್ನು ಕೆಳಗೆ ಇಳಿಸಿಕೊಂಡು ನಿಂತಿದ್ದಾಗ ಏನೋ ಗಡಿಬಿಡಿ ಕಂಡಂತಾಯಿತು. ತಮ್ಮ ಹಿಂದೆಯೇ ಬಸ್ಸಿನಿಂದಿಳಿದ ವ್ಯಕ್ತಿಯೊಬ್ಬ ಹೋ ಎಂದು ಕೂಗಿಕೊಂಡು ಓಡತೊಡಗಿದ. ಕೆಲವು ಜನ ಅವನಿಗಾಗಿಯೇ ಕಾದು ನಿಂತುಕೊಂಡಂತಿತ್ತು. ಅವರೂ ಅವನ ಹಿಂದೆ ಓಡಿದರು. ಅವರ ಕೈಯಲ್ಲಿ ಚಾಕು, ಮಚ್ಚುಗಳಿದ್ದವು.

ಮುಂದೆ ಓಡುತ್ತಿದ್ದವ ಪ್ರಾಣ ಉಳಿಸಿ ಎಂದು ಜೋರಾಗಿ ಅರಚುತ್ತಿದ್ದ. ಕ್ಷಣದಲ್ಲೆೀ ಅವನ ಹಿಂದಿದ್ದವರು ಅವನನ್ನು ಸಮೀಪಿಸಿ ಹಿಡಿದು ಕೊಚ್ಚಿ ಹಾಕಿದರು. ಕೊಂದವರ ನಾಯಕನಿಗೆ ಹೆದರಿಕೆ ಏನೂ ಇರಲಿಲ್ಲ. ಕೊಂದ ನಂತರ ಈ ಬಸ್ಸಿನ ಸುತ್ತಮುತ್ತ ಇದ್ದ ಜನರ ಹತ್ತಿರ ಬಂದು ಯಾರಾದರೂ ಈ ವಿಷಯವನ್ನು ಎಲ್ಲಿಯಾದರೂ ಉಸುರಿದರೆ ಅವರನ್ನು ಹೊಸಕಿಹಾಕುವುದಾಗಿ ಅಬ್ಬರಿಸಿ ಹೋದ. ಅಪರಾಧಿಗಳೆಲ್ಲ ಕಾರಿನಲ್ಲಿ ಹೋಗಿಬಿಟ್ಟರು. ಕ್ಷಣಮಾತ್ರದಲ್ಲಿ ಇದು ನಡೆದು ಹೋಯಿತು.ಹತ್ತು ನಿಮಿಷದ ಮೇಲೆ ಪೊಲೀಸರು ಬಂದರು. ಜನರನ್ನು ಕೇಳಿದರು. ಯಾರೂ ಬಾಯಿಬಿಡುವಂತೆ ಕಾಣಲಿಲ್ಲ. ಅಲ್ಲಿದ್ದ ನ್ಯಾಯಾಧೀಶರು ಪೊಲೀಸ್ ಅಧಿಕಾರಿಗೆ ಹೇಳಿ ತಾವು ಮಾತ್ರವಲ್ಲ ಇಲ್ಲಿದ್ದ ಅನೇಕರು ಈ ಕಾರ್ಯಕ್ಕೆ ಸಾಕ್ಷಿಯಾಗಿರುವುದಾಗಿಯೂ, ಅಪರಾಧಿಗಳನ್ನು ಕಂಡಿರುವುದಾಗಿಯೂ ಹೇಳಿ ತಕ್ಷಣ ಅಪರಾಧಿಗಳನ್ನು ಬಂಧಿಸಬೇಕೆಂದು ಹೇಳಿದರು.

ಪೊಲೀಸ್ ಅಧಿಕಾರಿ ಹೇಳಿದ,  `ನೀವು ಚಿಂತೆ ಮಾಡಬೇಡಿ ಸರ್. ಈ ಕೊಲೆಯ ಬಗ್ಗೆ ನಮಗೆ ಮೊದಲೇ ಸೂಚನೆ ಇತ್ತು. ಅದಕ್ಕೇ ನಾವು ಇಲ್ಲಿಗೆ ಬಂದೆವು. ಆದರೆ ಬಸ್ ಬೇಗ ಬಂದದ್ದರಿಂದ ಇದಾಗಿ ಹೋಯಿತು. ಕೊಲೆ ಮಾಡಿದ ವ್ಯಕ್ತಿ ಹಾಗೂ ಕಾರಣ ನಮಗೆ ಗೊತ್ತಿದೆ. ಅವನನ್ನು ಹಿಡಿದು ಕೋರ್ಟಿಗೆ ಒಪ್ಪಿಸುತ್ತೇವೆ. ನೀವು ಚಿಂತಿಸಬೇಡಿ'  ಎಂದರು.ಸಂಜೆಯ ಹೊತ್ತಿಗೆ ಪೊಲೀಸರು ಕೊಲೆಗಾರರನ್ನು ಹಿಡಿದು ತಂದು ಈ ನ್ಯಾಯಾಧೀಶರ ಮುಂದೆಯೇ ಒಪ್ಪಿಸಿದರು. ನ್ಯಾಯಾಧೀಶರ ಎದೆ ಒಡೆದುಹೋಯಿತು. ಈ ಅಪರಾಧಿಯೇ ಬೇರೆ. ಬೆಳಿಗ್ಗೆ ತಾವು ನೋಡಿದ ಕೊಲೆಗಾರ ಇವನಲ್ಲ! ಆದರೆ ಪೊಲೀಸರು ಒದಗಿಸಿದ ಸಾಕ್ಷ್ಯಾಧಾರ ಎಷ್ಟು ಬಲವಾಗಿತ್ತೆಂದರೆ ಎಲ್ಲವೂ ಈ ವ್ಯಕ್ತಿಯ ಕಡೆಗೇ ಬೆರಳು ಮಾಡುತ್ತಿದ್ದವು. ಆತ ಪಾಪ ಒಂದೇ ಸಮನೆ ಅಳುತ್ತಿದ್ದ, ನಾನು ಈ ಕೊಲೆ ಮಾಡಿಲ್ಲವೆಂತಲೂ, ಸತ್ತವನನ್ನು ಕಂಡೇ ಇರಲಿಲ್ಲವೆಂದು ಹೇಳುತ್ತಿದ್ದ.

ನ್ಯಾಯಾಧೀಶರಿಗೂ ಗೊತ್ತು ಈತ ಕೊಲೆಗಾರನಲ್ಲವೆಂದು. ಅವರು ಕೋರ್ಟಿನ ವ್ಯವಹಾರವನ್ನೂ ನಿಲ್ಲಿಸಿ ನಂತರ ಪೊಲೀಸ್ ಅಧಿಕಾರಿಯನ್ನು ತಮ್ಮ ಕೊಠಡಿಗೆ ಕರೆಸಿ ಮಾತನಾಡಿ ಈತನನ್ನೇಕೆ ಹಿಡಿದುಕೊಂಡು ಬಂದಿರಿ ಎಂದು ಕೇಳಿದರು. ಆತ ಹೇಳಿದ,  ಸಾರ್, ಈಗ ತಾವು ನ್ಯಾಯಾಧೀಶರಾಗಿ ಕೇಳಿಸಿಕೊಳ್ಳುವುದಿಲ್ಲ ಮತ್ತು ನಾನು ಪೊಲೀಸ್ ಅಧಿಕಾರಿಯಾಗಿ ಹೇಳುತ್ತಿಲ್ಲ ಎನ್ನುವುದಾದರೆ ಸತ್ಯ ಹೇಳುತ್ತೇನೆ.

ಇಲ್ಲವಾದರೆ ನಾವು ನೀಡಿದ ದಾಖಲೆಗಳ ಪ್ರಕಾರ ತೀರ್ಪು ಕೊಡಿ . ಇವರು ಒಪ್ಪಿದಾಗ ಆತ ತಿಳಿಸಿದ್ದೇನೆಂದರೆ ಕೊಲೆ ಮಾಡಿದವ ರಾಜಕೀಯವಾಗಿ ಬಲಿಷ್ಠ ವ್ಯಕ್ತಿ. ಅವನನ್ನು ಬಂಧಿಸುವುದು ಸಾಧ್ಯವಿಲ್ಲ. ಅವನ ಕಾಣದ ಕೈಗಳು ಬಹುದೊಡ್ಡವರನ್ನೇ ತಲುಪುತ್ತವೆ. ಆತನೇ ಈ ಬಲಿಪಶುವನ್ನು ತಂದು ಒಪ್ಪಿಸಿದ್ದಾನೆ.ನ್ಯಾಯಧೀಶರು ಚಿಂತೆಗೊಳಗಾದರು. ಈತನಿಗೆ ಶಿಕ್ಷೆ ನೀಡಿದರೆ ನಿರಪರಾಧಿಗೆ ಶಿಕ್ಷೆಯಾಗುತ್ತದೆ. ನಿಜವಾದ ಅಪರಾಧಿಯ ಬಗ್ಗೆ ಸಾಕ್ಷಿ ಹೇಳಲು ಯಾರೂ ಸಿದ್ಧರಿಲ್ಲ. ಅವರೊಂದು ತೀರ್ಮಾನ ತೆಗೆದುಕೊಂಡರು. ತಾವು ಹಿರಿಯ ನ್ಯಾಯಾಧೀಶರಿಗೆ ಪತ್ರ ಬರೆದು ನಿರಪರಾಧಿಗೆ ಶಿಕ್ಷೆ ತಪ್ಪಿಸಲು ತಾವು ಈ ಕತ್ಯಕ್ಕೆ ಸಾಕ್ಷಿಯಾಗುವುದಾಗಿಯೂ ಆದ್ದರಿಂದ ತಾವು ನ್ಯಾಯಾಧೀಶ ಸ್ಥಾನದಲ್ಲಿ ಕುಳಿತುಕೊಳ್ಳದೇ ಮತ್ತೊಬ್ಬರನ್ನು ನಿಯಮಿಸಲು ಕೇಳಿದರು.ಮತ್ತೊಬ್ಬರು ನ್ಯಾಯಾಲಯ ನಡೆಸಿದರು. ನಿಜವಾದ ಪಾತಕಿಯನ್ನು ಕೋರ್ಟಿಗೆ ಕರೆತಂದರು. ಅವರನ್ನು ಈ ನ್ಯಾಯಾಧೀಶರು ಸಾಕ್ಷಿಯಾಗಿ ಗುರುತಿಸಿದರು. ಆದರೆ ಸಮಸ್ಯೆಯಾಗಿದ್ದು ನಂತರ. ಈ ನ್ಯಾಯಾಧೀಶರ ಬದುಕೇ ದುರ್ಭರವಾಯಿತು. ಅಧಿಕಾರಿಗಳಿಂದ, ಮಂತ್ರಿಗಳಿಂದ ಒತ್ತಡ ಬಲವಾಯಿತು.

ನೀವು ಅಂದು ಕೊಲೆಗೆ ಸಾಕ್ಷಿಯಾಗಿದ್ದರೆ ಲಿಖಿತ ದಾಖಲೆ ಯಾಕೆ ನೀಡಲಿಲ್ಲ? ಬರೀ ಬಾಯಿಯಿಂದ ಪೊಲೀಸರಿಗೆ ಆದೇಶ ನೀಡಿದ್ದು ಏಕೆ? ಬಹುಶ: ನೀವೇ ಮತ್ತೊಬ್ಬರೊಂದಿಗೆ ಶಾಮೀಲಾಗಿ ಈ ದೊಡ್ಡ ಮನುಷ್ಯರ ವಿರುದ್ಧ ಆಪಾದನೆ ಮಾಡಿರಬಹುದಲ್ಲವೇ? ಒಂದೇ ಎರಡೇ? ದಿನಕ್ಕೊಂದು ತಕರಾರು, ದಿನಕ್ಕೊಂದು ಬೆದರಿಕೆ. ಇವರ ಮನೆಯ ಮಕ್ಕಳು, ಹೆಂಡತಿ ಹೊರಗೆ ಹೋಗುವುದೇ ಕಷ್ಟವಾಯಿತು. ಕೋರ್ಟು ಸಾಕ್ಷ್ಯಾಧಾರವಿಲ್ಲವೆಂದು ಅಪರಾಧಿಯನ್ನು ಬಿಡುಗಡೆ ಮಾಡಿತು. ಈ ಪ್ರ್ರಾಮಾಣಿಕ ನ್ಯಾಯಾಧೀಶರಿಗೆ ಕರ್ತವ್ಯಲೋಪದ ಕಾರಣ ವಾಗ್ದಂಡನೆ ನೀಡಲಾಯಿತು.ಬೇಲಿಯೇ ಎದ್ದು ಹೊಲ ಮೇಯ್ದರೆ ಏನು ಗತಿ ಎಂಬುದು ಹಳೆಯ ಮಾತು. ಈಗ ಬೇಲಿ ಇರುವುದೇ ಹೊಲ ಮೇಯುವುದಕ್ಕೆ ಎಂಬಂತಾಗಿದೆ. ಕೋರ್ಟು ಜಾಮೀನು ರಹಿತ ಬಂಧನದ ವಾರಂಟ್ ನೀಡಿದರೂ ವ್ಯವಹಾರ ಕುದುರಿಸಿಕೊಂಡು ಬಂಧಿಸದೇ ಇರುವ ಆರಕ್ಷಕ ವ್ಯವಸ್ಥೆ, ಅವರನ್ನು ಪೋಷಿಸುವ ಹಾಗೂ ಶೋಷಿಸುವ ರಾಜಕೀಯ ವ್ಯಕ್ತಿಗಳು, ಅವರನ್ನು ಆರಿಸಿ ಅಧಿಕಾರಕ್ಕೆ ತರುವ ನಾವು. ಈ ವರ್ತುಲದಲ್ಲಿ ಭಷ್ಟತೆ ಪ್ರಾರಂಭವಾದದ್ದೆಲ್ಲಿ? ಈ ವೃತ್ತದಿಂದ ಪಾರಾಗುವುದು ಹೇಗೆ, ಎಲ್ಲಿಂದ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.