ಸಿನಿಮಾದಲ್ಲಿ ನುಸುಳುತ್ತಿರುವ ಸಮಕಾಲೀನ ಚರಿತ್ರೆ

7

ಸಿನಿಮಾದಲ್ಲಿ ನುಸುಳುತ್ತಿರುವ ಸಮಕಾಲೀನ ಚರಿತ್ರೆ

ಎಸ್.ಆರ್. ರಾಮಕೃಷ್ಣ
Published:
Updated:
ಸಿನಿಮಾದಲ್ಲಿ ನುಸುಳುತ್ತಿರುವ ಸಮಕಾಲೀನ ಚರಿತ್ರೆ

ಒಂದು ಕಾಲದಲ್ಲಿ ಮುಂಬೈ ಚಿತ್ರೋದ್ಯಮದಲ್ಲಿ ಯುದ್ಧದ ಸಿನಿಮಾ ತಯಾರಾದರೆ ಅದರಲ್ಲಿ ಶತ್ರು ದೇಶವನ್ನು ಹೆಸರಿಸುತ್ತಿರಲಿಲ್ಲ. ಆದರೆ ಈಚೆಗೆ ಬರುತ್ತಿರುವ ಚಿತ್ರಗಳಲ್ಲಿ ಆ ಥರ ಮೈಚಳಿ ಕಾಣುವುದಿಲ್ಲ. ನೈಜ ಘಟನೆಗಳ, ರಾಜಕೀಯ ಬೆಳವಣಿಗೆಗಳ ಆಧಾರದ ಮೇಲೆ ಚಿತ್ರ ಮಾಡುವುದು ಈಚಿನ ಒಂದೆರಡು ವರ್ಷದಲ್ಲಿ ಹೆಚ್ಚಾಗಿದೆ.

ಕಳೆದ ಕೆಲವು ತಿಂಗಳ ಚಿತ್ರಗಳನ್ನು ಗಮನಿಸಿದರೆ, ಅಣ್ಣಾ ಹಜಾರೆ, ದಾವೂದ್ ಇಬ್ರಾಹಿಂ, ರಾಜೀವ್ ಗಾಂಧಿ, ಪ್ರಭಾಕರನ್ ಮುಂತಾದವರ ಜೀವನದಿಂದ ಆಯ್ದ ಘಟನೆಗಳು ತೆರೆಯ ಮೇಲೆ ಕಂಡುಬರುತ್ತಿವೆ. ಕಾನೂನು, ಮಾನನಷ್ಟದ ತಕರಾರುಗಳನ್ನು ತಡೆಯುವ ಸಲುವಾಗಿ ಇಂಥ ಚಿತ್ರಗಳು ಯಾವುದೇ ವ್ಯಕ್ತಿ ಅಥವಾ ನಿಜ ಜೀವನದ ಘಟನೆಗೆ ಹೊಲಿಕೆಯಿದ್ದಲ್ಲಿ ಅದು ಆಕಸ್ಮಿಕ ಎಂದು ಘೋಷಿಸಿಕೊಳ್ಳುತ್ತವೆ.   ಕೆಲವಾರದ ಹಿಂದೆ ನಾನು ನೋಡಿದ ಹಿಂದಿ ಚಿತ್ರ ‘ಡಿ ಡೇ’. ಪಾಕಿಸ್ತಾನದಲ್ಲಿ ಅಡಗಿರುವ ಡಾನ್ ದಾವೂದ್ ಇಬ್ರಾಹಿಂ ಜೀವನದ ಸುತ್ತ ಹೆಣೆದ ಕಥೆ ಇದು. ಪೋಲಿಸ್ ಪೇದೆಯ ಮಗನಾದ ಈತ ಇಂದು ಭಾರತದ ಕಳ್ಳ ದಂಧೆಯಲ್ಲಿ ದೊಡ್ಡ ಕುಳ. ಹವಾಲ, ಮ್ಯಾಚ್ ಫಿಕ್ಸಿಂಗ್ ನಂಥ ದೊಡ್ಡ ಹಗರಣಗಳಲ್ಲಿ ಇವನ ಹೆಸರು ಕೇಳಿಬರುತ್ತದೆ. ೧೯೯೨ರಲ್ಲಿ ಜರುಗಿದ ಮುಂಬೈ ಸ್ಫೋಟಗಳ ಪ್ರಕರಣದಲ್ಲಿ ಆರೋಪಿ. ಆ ದುಷ್ಕೃತ್ಯಕ್ಕೆ ಹಣ ಒದಗಿಸಿದ ಆಪಾದನೆ ಹೊತ್ತಿದ್ದಾನೆ.ದಾವೂದ್ಗೆ ಪಾಕಿಸ್ತಾನದ ಬೆಂಬಲ ಇದೆ. ಅಲ್ಲಿಯ ಸರ್ಕಾರದ ನೆರವಿನೊಂದಿಗೆ ಜಗತ್ತಿನ ಕಣ್ತಪ್ಪಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ ಎಂದು ಬೇರೆ ಬೇರೆ ದೇಶದ ಸರ್ಕಾರಗಳು ಹೇಳುತ್ತಲೇ ಇರುತ್ತವೆ. ಈತ ಜಾವೇದ್ ಮಿಯಾಂದಾದ್ ಎಂಬ ಪಾಕಿಸ್ತಾನಿ ಕ್ರಿಕೆಟಿಗನ ಬೀಗ ಕೂಡ. ಅವನ ಮಫಿಯಾವನ್ನು ‘ಡಿ ಕಂಪನಿ’ ಎಂದು ಕರೆಯುವುದು ಸಾಮಾನ್ಯ. ಕೆಲವು ವರ್ಷಗಳ ಹಿಂದೆ ದಾವೂದ್ನನ್ನು ಹೋಟೆಲ್ ಒಂದರಲ್ಲಿ ಗುಂಡಿಟ್ಟು ಕೊಲ್ಲುವ ಪ್ರಯತ್ನ ನಡೆಯಿತೆಂದು ವರದಿಗಳು ಪ್ರಕಟವಾಗಿದ್ದವು.ಈ ಘಟನಾವಳಿಯಲ್ಲಿ ಭಾರತೀಯ ಬೇಹುಗಾರಿಕಾ ಸಂಸ್ಥೆಗಳ ಕೈವಾಡವಿತ್ತೆ? ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಭಾರತೀಯ ಗೂಢಚಾರರು ಇಂಥ ‘ರಾಕ್ಷಸ ವಧೆ’ಯಲ್ಲಿ ತೊಡಗಿದ್ದಾರೆಯೇ? (ಒಳ್ಳೆಯವರು ಹತ್ಯೆಯಾಗುತ್ತಾರೆ; ಕೆಟ್ಟವರು ವಧೆಯಾಗುತ್ತಾರೆ!). ಇರ್ಫಾನ್ ಖಾನ್, ಅರ್ಜುನ್ ರಾಂಪಾಲ್ ಮತ್ತು ಶ್ರುತಿ ಹಾಸನ್ ನಟಿಸಿರುವ ‘ಡಿ ಡೇ’ ಪಾಕಿಸ್ತಾನದ ನಗರಗಳ ಕೆಲವು ದೃಶ್ಯಗಳನ್ನು ಚೆನ್ನಾಗಿ ಕಟ್ಟಿಕೊಂಡಿದೆ. ಅದು ನೈಜ ಅಂಶಗಳುಳ್ಳ ಸ್ಪೈ ಥ್ರಿಲ್ಲರ್ ರೀತಿಯ ಚಿತ್ರ. ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿತ್ರ ಮದ್ರಾಸ್ ಕೆಫೆ. ಇದು ಶ್ರೀಲಂಕಾದ ತಮಿಳು ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾಗಿದೆ. ಇದರಲ್ಲೂ ನಮ್ಮ ಗೂಢಚಾರ ದಳದವರು, ಅಂದರೆ ‘ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್’ ನವರು, ಕೈಗೊಳ್ಳುವ ಗುಟ್ಟು ಕೆಲಸಗಳ ಕಥೆಯನ್ನು ನಿರ್ದೇಶಕ ಶೂಜಿತ್ ಸರ್ಕಾರ್ ಹೇಳುತ್ತಾರೆ. ಒಟ್ಟಾರೆ ಕಾಂಗ್ರೆಸ್ ಪರ ಎನಿಸುವ ಈ ಚಿತ್ರ ತುಂಬ ಗೊಂದಲಮಯವಾಗಿ ಮೂಡಿಬಂದಿದೆ.ಶ್ರೀಲಂಕಾದ ತಮಿಳು ಉಗ್ರಗಾಮಿಗಳನ್ನು ಬಗ್ಗುಬಡಿಯಲು ನಮ್ಮ ಸೈನ್ಯವನ್ನು ಕಳಿಸುವ ತೀರ್ಮಾನ ರಾಜೀವ್ ಗಾಂಧಿ ಮತ್ತು ಲಂಕೆಯ ತಮಿಳರ ಪಾಲಿಗೆ ಎಂಥ ದುರಂತದಲ್ಲಿ ಕೊನೆಯಾಯಿತು ಎಂದು ಎಲ್ಲರಿಗೂ ಗೊತ್ತು. ಚಿತ್ರ ರಾಜೀವ್ ಗಾಂಧಿಯವರನ್ನು ಉಳಿಸುವ ಸಲುವಾಗಿ ನಾಯಕ ಎಂಥ ಸಾಹಸ, ತ್ಯಾಗ ಮಾಡಿದ ಎಂದು ಹೇಳಲು ಹೊರಟು, ಇತ್ತೀಚಿನ ತಮಿಳರ ಹತ್ಯಾಕಾಂಡದ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ.

ಹಾಗಾಗಿ ಇದು ಅಪ್‌ಡೇಟ್ ಆಗದ ಹಳೆಯ ಕಥೆ ಎಂಬಂತೆ ಭಾಸವಾಗುತ್ತದೆ. ವಿವಾದ ಎದ್ದು ಜಾನ್ ಅಬ್ರಹಾಂ ನಟಿಸಿರುವ ‘ಮದ್ರಾಸ್ ಕೆಫೆ’ ತಮಿಳುನಾಡಿನಲ್ಲಿ ಇನ್ನೂ ಬಿಡುಗಡೆಯಾಗಿಲ್ಲ. ಕಮಲ ಹಾಸನ್ ತಯಾರಿಸಿದ ‘ವಿಶ್ವರೂಪಂ’ ಕೂಡ ಟೆರರಿಸಂ ವಸ್ತುವನ್ನು ಹೊಂದಿತ್ತು. ಪಾಕಿಸ್ತಾನದಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿರುವ ಭಯೋತ್ಪಾದಕ ಮುಲ್ಲಾ ಓಮರನ ಹೋಲುವ ಒಬ್ಬ ಜಿಹಾದಿ ಈ ಚಿತ್ರದ ಖಳನಾಯಕ. ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿನ  ಘರ್ಷಣೆ, ೯/೧೧ ದಾಳಿ ಈ ಚಿತ್ರಕ್ಕೆ ಹಿನ್ನೆಲೆಯನ್ನು ಒದಗಿಸುತ್ತದೆ.

  ‘ಏಕ್ ಥಾ ಟೈಗರ್’ ಎಂಬ ಮತ್ತೊಂದು ಬಾಲಿವುಡ್ ಚಿತ್ರ ಭರತೀಯ ಗೂಢಚಾರ ಪಾಕಿಸ್ತಾನಿ ಗೂಢಚಾರಿಯನ್ನು ಪ್ರೀತಿಸುವ ಕಥೆ ಹೊಂದಿದೆ. ಈ ಚಿತ್ರಗಳು ಚರಿತ್ರೆಯ ದಾಖಲೆ, ಸಮರದ ಬಗೆಗಿನ ಕಾಣ್ಕೆ ಒದಗಿಸುತ್ತವೆ ಎಂದು ಹೇಳಲಾಗುವುದಿಲ್ಲ. ಆದರೆ ‘ಚೆನ್ನೈ ಎಕ್ಸ್‌ಪ್ರೆಸ್‌’ನಂಥ ಮೈಂಡ್ಲೆಸ್ ಚಿತ್ರಗಳ ನಡುವೆ ಸಮಕಾಲೀನ ಚರಿತ್ರೆಯನ್ನು ಆಧರಿಸಿ ಚಿತ್ರಕಥೆ  ಬರೆಯುವ ಪ್ರಯತ್ನಗಳು  ನಡೆಯುತ್ತಿವೆ ಎನ್ನುವ ವಿಷಯವೇ ಚಿತ್ರರಸಿಕರಿಗೆ ಒಂದಷ್ಟು ಸಮಾಧಾನ ತರಬಹುದು.ಅ.ನ. ರಮೇಶ್ ನೆನಪಿಗೊಂದು ನಾಟಕ

ನಾಟಕಗಳಿಗೆ ಲೈಟಿಂಗ್ ಮಾಡುತ್ತಿದ್ದ ಅ.ನ. ರಮೇಶ್ ಅವರ ನೆನಪಿಗೆ ಪ್ರಸನ್ನ ಒಂದು ನಾಟಕವನ್ನು ಆಡಿಸುತ್ತಿದ್ದಾರೆ. ತೀರ ಪರಿಚಯವಿರದಿದ್ದರೂ ರಮೇಶರನ್ನು ನಾನು ಹಲವು ಬಾರಿ ಕಂಡಿದ್ದೆ. ಕ್ಯಾಬ್ ಡ್ರೈವರ್ ಒಬ್ಬ ಅವರ ಮೇಲೆ ಹಲ್ಲೆ ಮಾಡಿದ ಕಾರಣ ಒಂದು ವರ್ಷಕ್ಕೂ ಹೆಚ್ಚು ಕಾಲ ಕೊಮಾದಲ್ಲಿದ್ದರು. ಗುಣಮುಖರಾಗಲೇ ಇಲ್ಲ.ಪ್ರಸನ್ನರ ನಾಟಕ ಅಂದರೆ ಅಚ್ಚುಕಟ್ಟುತನ. ಮೆಕ್ಕಾ ದಾರಿ ಎಂಬ ಅವರ ಹೊಸ ನಾಟಕ ಬುಧವಾರ, ಅಂದರೆ ಸೆಪ್ಟೆಂಬರ್ ೪, ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನವಾಗುತ್ತದೆ. ಕೋಪಿಷ್ಠ ಎಂದು ಹಲವರು ದೂರುವ ಪ್ರಸನ್ನ ಈಚಿನ ವರ್ಷಗಳಲ್ಲಿ ಹೆಗ್ಗೋಡಿನಲ್ಲಿದ್ದುಕೊಂಡು ಗುಡಿ ಕೈಗಾರಿಕೆಯಲ್ಲಿ ತೊಡಗಿದ್ದಾರೆ.

‘ನನ್ನ ತಂಗಿಗೊಂದು ಗಂಡು ಕೊಡಿ’ ಎಂಬ ಲಂಕೇಶರ ನಾಟಕವನ್ನು ೧೫ ವರ್ಷಗಳ ಹಿಂದೆ ಪ್ರಸನ್ನ ಬೆಂಗಳೂರಿನಲ್ಲಿ ಆಡಿಸಿದ್ದರು. ಅದರಲ್ಲಿ ಅರುಂಧತಿ ನಾಗ್ ಮುಖ್ಯ ಪಾತ್ರ ವಹಿಸಿದ್ದರು. ನಾನು ಮ್ಯೂಸಿಕ್ ಕಂಪೋಸ್ ಮಾಡಿಕೊಟ್ಟಿದ್ದರಿಂದ ಪ್ರಸನ್ನ ಮತ್ತು ಅರುಂಧತಿ ಅವರ ಏಕಾಗ್ರತೆ ಮತ್ತು ಕಟ್ಟುನಿಟ್ಟನ್ನು ಹತ್ತಿರದಿಂದ ನೋಡುವ ಅವಕಾಶವಾಗಿತ್ತು.   ಈಗ ಪ್ರಸನ್ನ ಆಡಿಸುತ್ತಿರುವ ನಾಟಕ ಅಥೊಲ್ ಫುಗಾರ್ಡ್ ಎಂಬ ಸೌತ್ ಆಫ್ರಿಕನ್ ಬರಹಗಾರನ ಕೃತಿಯೊಂದನ್ನು ಆಧರಿಸಿದೆ. ಮುಖ್ಯ ಪಾತ್ರದಲ್ಲಿ ಕವಯತ್ರಿ ದು. ಸರಸ್ವತಿ ಇದ್ದಾರೆ. ಸರಸ್ವತಿ ಹಲವು ಚಳವಳಿಗಳಲ್ಲಿ ತೊಡಗಿಸಿಕೊಂಡವರು. ಆವರಣ ಎಂಬ ಸಂಸ್ಥೆ ನಾಟಕವನ್ನು ಪ್ರೆಸೆಂಟ್ ಮಾಡುತ್ತಿದೆ. ಕಚೇರಿಯಿಂದ ಬೇಗ ಬರಲು ಸಾಧ್ಯವಾದರೆ ಈ ನಾಟಕ ನೋಡಿ.ಶೇಕ್ಸ್ಪಿಯರ್ ನಾಟಕದ ಹಿನ್ನೆಲೆ

ನಾಟಕದ ಬಗ್ಗೆ ಮಾತಾಡುತ್ತಿರುವುದರಿಂದ ಮೊನ್ನೆ ಎರಡು ಪ್ರದರ್ಶನವಾದ ‘ಶೇಕ್ಸ್‌ಪಿಯರ್ ಮನೆಗೆ ಬಂದ’ ಎಂಬ ಪ್ರೊಡಕ್ಷನ್ ಬಗ್ಗೆಯೂ ಪ್ರಸ್ತಾಪ ಮಾಡಿಬಿಡುವೆ. ಗೆಳೆಯ ನಟರಾಜ್ ಹುಳಿಯಾರ್ ಬರೆದ ಮೊದಲ ನಾಟಕ ಇದು. ನಿರ್ದೇಶನ ಮಾಡಿದ್ದು ನಟರಾಜ್ ಹೊನ್ನವಳ್ಳಿ. ಹೊನ್ನವಳ್ಳಿ ಈಗ ಸಾಣೆಹಳ್ಳಿಯ ನಾಟಕ ಶಾಲೆಯಲ್ಲಿ ಮುಖ್ಯಸ್ಥರಾಗಿ ಕಲಿಸುತ್ತಿದ್ದಾರೆ, ಹೊಸ ಬಗೆಯ ರಂಗ ಪ್ರಯೋಗಗಳಿಗೆ ಹೆಸರಾಗಿದ್ದಾರೆ.ಈ ನಾಟಕದಲ್ಲಿ ನನಗೂ ಒಂದು ಹಿನ್ನೆಲೆಯ ಪಾತ್ರವಿತ್ತು. ಬರಹಗಾರ ನಿರ್ದೇಶಕ ಇಬ್ಬರ ಹೆಸರೂ ನಟರಾಜ್ ಆಗಿದ್ದರಿಂದ ನಾಟಕದ ಹೀರೊಯಿನ್ ಭವಾನಿ ಅವರಿಗೆ ಹುಳಿ ಮತ್ತು ಹೊನ್ನು ಎಂದು ಅಡ್ಡ ಹೆಸರಿಟ್ಟು ಕರೆಯುತ್ತಿದ್ದರು! ಗಾಂಭೀರ್ಯ ಮತ್ತು ಹಾಸ್ಯ ಎರಡನ್ನೂ ಇಷ್ಟ ಪಡುವ ಹುಳಿಯಾರ್‌ಗೆ ಉಭಯ ಸ್ವಭಾವದ ಪರಮ ಗುರು ಶೇಕ್ಸ್‌ಪಿಯರ್ ಅಚ್ಚುಮೆಚ್ಚಾಗಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.ಹದಿನಾರನೆಯ ಶತಮಾನದ ಮಹಾನ್ ಇಂಗ್ಲಿಷ್ ನಾಟಕಕಾರ ಶೇಕ್ಸ್‌ಪಿಯರನ  ಜೀವನ ಮತ್ತು ಬರಹದ ಸ್ವಾರಸ್ಯಕರ ಅಂಶಗಳನ್ನು ಒಟ್ಟುಗೂಡಿಸಿ ಹುಳಿಯಾರ್ ಬರೆದಿರುವ ಎರಡು ಗಂಟೆಯ ಸ್ಕ್ರಿಪ್ಟ್ ಸಾಹಿತ್ಯ ವಿಮರ್ಶೆಯ ಮಾಸ್ಟರ್ ಕ್ಲಾಸ್ ರೀತಿಯಲ್ಲಿ ಮೂಡಿಬಂದಿದೆ. ಮ್ಯಾಕ್‌ಬೆತ್ ನಾಟಕದಲ್ಲಿ ಬರುವ ಮಾಟಗಾತಿಯರು ನಾಯಕನ ಮನದ ಸುಪ್ತ ದುರುಳತೆಯ ಪ್ರತೀಕ. ಮ್ಯಾಜಿಕ್ ಅಂಶಗಳು ಸತ್ಯಗಳನ್ನು ಚಮತ್ಕಾರದಿಂದ ಬಿಂಬಿಸಿ, ಕಥೆಯನ್ನು ಮುಂದುವರೆಸುವ ಟ್ರಿಕ್ಸ್ ಆಗಿರುತ್ತವೆ.

‘ನಾನು’ ಎಂದು ಒಬ್ಬ ಲೇಖಕ ಫಸ್ಟ್ ಪರ್ಸನ್ ಧ್ವನಿಯಲ್ಲಿ ಬರೆದರೆ ಅದು ಅವನೇ ಆಗದೆ ಯಾರು ಬೇಕಾದರೂ ಆಗಬಹುದು. ಸಾಹಿತ್ಯ ಓದಲು ಬೇಕಾದ ಮೂಲ ತಿಳವಳಿಕೆಯನ್ನು ಶೇಕ್ಸ್‌ಪಿಯರ್ ಮನೆಗೆ ಬಂದ ಸ್ನೇಹಮಯ ರೀತಿಯಲ್ಲಿ ಕಲಿಸಿಕೊಡುತ್ತದೆ. ಮೊದಲ ದಿನ ತಾಂತ್ರಿಕ ತೊಡಕಿನ ಕಾರಣ ಸ್ವಲ್ಪ ಸಪ್ಪೆಯಾದ ನಾಟಕ ಎರಡನೆಯ ಪ್ರದರ್ಶನದ ಹೊತ್ತಿಗೆ ಮೈತುಂಬಿಕೊಂಡಿತ್ತು. ತುಂಬ ಶ್ರಮ, ತಾಳ್ಮೆಯಿಂದ ತಯಾರಾಗಿದ್ದ ನಟರ ತಂಡ ಪ್ರೇಕ್ಷಕರ ಸ್ಪಂದನದಿಂದ ಉತ್ಸಾಹಗೊಂಡಿತ್ತು.

ತಾಲೀಮಿನ ಸಮಯದಲ್ಲಿ ಮತ್ತು ರಂಗದ ಮೇಲೆ ನಾಟಕ ನೋಡಿದಾಗ ನನಗೆ ಅನ್ನಿಸಿದ್ದು: ಸಾಹಿತ್ಯ ವಿಮರ್ಶೆ ಕಲಿಸುವ ವೈಸ್ ಮ್ಯಾನ್ (ಸ್ವಲ್ಪ ಕೀ.ರಂ. ನಾಗರಜರಂತೆ ಕಾಣುತ್ತಿದ್ದ ನಟ ಗಣಪತಿ) ಒಳನೋಟದಿಂದ ಮಾತಾಡಿದರೂ ನಾಟಕದ ಅಂಚಿನಲ್ಲೇ ನಿಲ್ಲುತ್ತಾನೆ. ಆತನ ಬದುಕಿನಲ್ಲಿ ಯಾವುದೇ ಪರಿವರ್ತನೆ ಆಗುವುದಿಲ್ಲ.

ಕೊನೆಯ ದೃಶ್ಯದಲ್ಲಿ ನಾಟಕದ ಪ್ರೊಫೆಸರ್ ಧ್ವನಿಯ ಮಾತು ಹೆಚ್ಚಾಗಿ ಆಕ್ಷನ್ ಕ್ಷೀಣವಾಗುತ್ತದೆ. ‘ಟು ಬಿ ಆರ್ ನಾಟ್ ಟು ಬಿ’ ಎಂದು ಶುರುವಾಗುವ ಹ್ಯಾಮ್ಲೆಟ್ನ ಸ್ವಗತ ಶೇಕ್ಸ್‌ಪಿಯರ್‌ನ ತಾತ್ವಿಕ ಧ್ಯಾನಗಳಲ್ಲಿ ತುಂಬ ಶಕ್ತಿಶಾಲಿಯಾದದ್ದು. ಈ ನಾಟಕದಲ್ಲಿ ಅದು ಏಕೆ ಪೂರ್ಣವಾಗಿ ಬರಲಿಲ್ಲ ಎಂದು ನನಗಂತೂ ಅನಿಸುತ್ತಿತ್ತು.ಯು.ಆರ್. ಅನಂತಮೂರ್ತಿ, ಅರುಂಧತಿ ನಾಗ್ ಮೊದಲ್ಗೊಂಡು ಹಲವು ಸಾಹಿತಿಗಳು, ರಂಗ ದಿಗ್ಗಜರು ನಾಟಕವನ್ನು ನೋಡಿದರು. ಸಾಹಿತ್ಯದ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಥೀಯೇಟರ್ ತತ್ಕಾಲ್ ಎಂಬ ತಂಡ, ಹುಳಿ ಮತ್ತು ಹೊನ್ನು ಎಲ್ಲರೂ ಸೇರಿ ಈ ನಾಟಕವನ್ನು ಎಲ್ಲೆಲ್ಲಿಗೆ ಒಯ್ಯುತ್ತಾರೋ ನೋಡಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry