ಸಿನಿಮಾದೊಳಗೇ ಒಬ್ಬ ಅಣ್ಣಾ ಇದ್ದಾನಲ್ಲಾ

7

ಸಿನಿಮಾದೊಳಗೇ ಒಬ್ಬ ಅಣ್ಣಾ ಇದ್ದಾನಲ್ಲಾ

ಗಂಗಾಧರ ಮೊದಲಿಯಾರ್
Published:
Updated:
ಸಿನಿಮಾದೊಳಗೇ ಒಬ್ಬ ಅಣ್ಣಾ ಇದ್ದಾನಲ್ಲಾ

ಅಣ್ಣಾ ಹಜಾರೆ ಎತ್ತಿರುವ ಪ್ರಶ್ನೆಗೂ ಸಿನಿಮಾ ಜಗತ್ತಿಗೂ ಸಂಬಂಧವಿದೆಯೇ? ಹೀಗೊಂದು ಪ್ರಶ್ನೆಯನ್ನು ಕೇಳಬೇಕಾದ ಸಮಯ ಈಗ ಬಂದಿದೆ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಆರಂಭಿಸಿರುವ ನಿರಶನಕ್ಕೆ ಅಮಿತಾಬ್ ಬಚ್ಚನ್ ಅವರು ಮೊತ್ತಮೊದಲ ಬೆಂಬಲ ವ್ಯಕ್ತಪಡಿಸಿದರು. ಲಾಂಗು ಮಚ್ಚುಗಳನ್ನು ಹಿಡಿದು, ಭೂಗತ ಲೋಕದ ಡಾನ್ ಆಗಿ, ಯುವಕರು ಕತ್ತಿ, ಚಾಕು ಚೂರಿ ಹಿಡಿಯಲು ಪ್ರೇರಣೆಯಾಗುವ `ಜೋಗಯ್ಯ~ ಚಿತ್ರದ ಬಿಡುಗಡೆಗೆ ಎರಡು ದಿನ ಮುಂಚೆ ನಟ ಶಿವರಾಜ್‌ಕುಮಾರ್ ಅವರು ಬೆಂಗಳೂರಿನ ಸ್ವಾತಂತ್ರ್ಯಯೋಧರ ಉದ್ಯಾನವನದಲ್ಲಿ ನಡೆಯುತ್ತಿರುವ ನಿರಶನ ವೇದಿಕೆಯಲ್ಲಿ ಕಾಣಿಸಿಕೊಂಡರು. ಕನ್ನಡ ಸಿನಿಮಾ ಜಗತ್ತಿನ ಪರವಾಗಿ ಈ ಚಳವಳಿಗೆ ಏಕಾಂಗಿಯಾಗಿ ಧುಮುಕಿದ ಮೊದಲ ನಟ ಶಿವರಾಜ್‌ಕುಮಾರ್. ಆನಂತರದ ದಿನಗಳಲ್ಲಿ ನಟಿ ಭಾರತಿ ಕೂಡ ಅಲ್ಲಿಗೆ ಹೋಗಿ ಬೆಂಬಲ ಸೂಚಿಸಿದರು. ಮಂಗಳವಾರ ವಾಣಿಜ್ಯಮಂಡಳಿಯ ಅಧ್ಯಕ್ಷ ಬಸಂತಕುಮಾರ್ ಪಾಟೀಲ್, ಮಾಜಿ ಅಧ್ಯಕ್ಷೆ ಡಾ.ಜಯಮಾಲಾ, ಸಾ.ರಾ.ಗೋವಿಂದು ಅವರ ನೇತೃತ್ವದಲ್ಲಿ ಸಿನಿಮಾ, ನಟ ನಟಿಯರು ಗಾಂಧಿಟೋಪಿ ಹಾಕಿಕೊಂಡು ರಾಷ್ಟ್ರಧ್ವಜ ಹಿಡಿದು,ಮೆರವಣಿಗೆ ನಡೆಸಿದರು. ಯಾವುದೇ ರಾಜಕೀಯ ಸಿದ್ಧಾಂತಗಳೂ ಇಲ್ಲದ ರಜನೀಕಾಂತ್ ಕೂಡ ದೆಹಲಿಗೆ ತೆರಳಿ ಅಣ್ಣಾಗೆ ಬೆಂಬಲ ಸೂಚಿಸುವುದಾಗಿ ಹೇಳಿಕೆ ನೀಡಿದ್ದಾರೆ. ತಮಿಳುನಾಡಿನ ಚಿತ್ರರಂಗದ ಕಲಾವಿದರು ಸತ್ಯಾಗ್ರಹ ನಡೆಸಿದ್ದಾರೆ. ಅಲ್ಲಿಗೆ ಚಳವಳಿಗೆ ಚಿತ್ರರಂಗದ ಅಧಿಕೃತ ಪ್ರವೇಶವಾದಂತಾಯಿತು.ಸಿನಿಮಾ ನಟರು ಹೀಗೆ ದೇಶ ಸೇವೆಗೆ ಮುಂದಾಗುತ್ತಿರುವ ವೇಳೆಯಲ್ಲೇ ಕೆಲ ದಿನಗಳ ಹಿಂದೆ ನಡೆದ ಕೆಲವು ಘಟನೆಗಳನ್ನು ಸ್ವಲ್ಪ ಗಮನಿಸಿ.  ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆಯಿತು. ನಿರ್ಮಾಪಕ ಕೆ.ಮಂಜು ಅವರ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆಯಿತು. ಕಿರುತೆರೆ ನಟರೂ, ನಿರ್ಮಾಪಕರೂ, ನಿರ್ದೇಶಕರೂ ಆಗಿರುವ ಸಿಹಿಕಹಿ ಚಂದ್ರು, ರವಿಕಿರಣ್ ಅವರುಗಳ ಭವ್ಯ ಬಂಗಲೆಗಳನ್ನು ಜಾಲಾಡಲಾಯಿತು. ಕೆಲವು ನಟರು, ನಿರ್ದೇಶಕರು, ನಟಿಯರು ಟಿವಿ ಚಾನಲ್ ಕಚೇರಿಗೆ ನುಗ್ಗಿ, ದಾಂದಲೆ ಮಾಡಿ ಸುದ್ದಿ ಮಾಡಿದರು. ಅತ್ತ ಕೇರಳದಲ್ಲಿ ಸೂಪರ್‌ಸ್ಟಾರ್‌ಗಳೆಂದೇ ಅಭಿಮಾನಿಗಳು ಆರಾಧಿಸುವ ಮುಮ್ಮಟಿ, ಮೋಹನ್‌ಲಾಲ್ ಅವರುಗಳ ಮನೆಗಳ ಮೇಲೆ ಸತತ ಮೂರುದಿನ ಆದಾಯ ತೆರಿಗೆ ವಂಚನೆ ಶಂಕೆಯಿಂದ ದಾಳಿ ನಡೆಸಿದ ತನಿಖಾಧಿಕಾರಿಗಳು ತಲಾ 30 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ನಗದನ್ನು ವಶಪಡಿಸಿಕೊಂಡರು. ಇಂತಹ ಜನ ಇಂದು `ಜನಲೋಕಪಾಲ~ಕ್ಕೆ ಒತ್ತಾಯಿಸಿ, ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರ ತೊಲಗಿಸಲು ರಾಷ್ಟ್ರಧ್ವಜ ಹಿಡಿದು ಬೀದಿಗೆ ಬಂದಿರುವುದನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ.ರಾಷ್ಟ್ರದ ಜ್ವಲಂತ ಸಮಸ್ಯೆಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಇದುವರೆಗೆ ಸುಮ್ಮನೆ ರೀಲು ಸುತ್ತುತ್ತಿದ್ದ, ದುಡ್ಡು ಮಾಡುವುದರಲ್ಲೇ ನಿರತರಾಗಿರುತ್ತಿದ್ದ ಸಿನಿಮಾ ಜನ ಇಂದು ಭ್ರಷ್ಟಾಚಾರದ ವಿರುದ್ಧ ದಿಗ್ಗನೆ ಎದ್ದು ನಿಂತಿರುವುದು ಕೂಡ ಒಂದು ಪ್ರಹಸನದಂತೆ ಕಾಣುತ್ತಿದೆ.ಇಷ್ಟಕ್ಕೂ ಸಿನಿಮಾ ಮಂದಿ ಸಮಾಜಪರಿವರ್ತನೆಗೆ ಬೀದಿಗೆ ಏಕೆ ಬರಬೇಕು? ಅವರ ಕೈಯಲ್ಲೇ `ಸಿನಿಮಾ~ ಎಂಬ ಪರಿವರ್ತನಾ ಅಸ್ತ್ರವೇ ಇದೆಯಲ್ಲ?ಸಮಾಜವನ್ನು ಪರಿವರ್ತಿಸುವ, ಸಮಾಜದಲ್ಲಿ ತುಂಬಿ ತುಳುಕುತ್ತಿರುವ ಮೌಢ್ಯವನ್ನು ತೊಲಗಿಸುವ, ನೈತಿಕ ವಾತಾವರಣ ಸೃಷ್ಟಿಸುವ, ಭ್ರಷ್ಟಾಚಾರದ ವಿರುದ್ಧ ಜನರನ್ನು ಕೆರಳಿಸುವ ಪ್ರಬಲ ಹಾಗೂ ಪ್ರಖರ ಶಕ್ತಿ ಸಿನಿಮಾ ಮಾಧ್ಯಮಕ್ಕಿದೆ ಎನ್ನುವ ವಾಸ್ತವ ಸತ್ಯವೇ ನಮ್ಮ ಸಿನಿಮಾ ಜನಕ್ಕೆ ಗೊತ್ತಿಲ್ಲವಲ್ಲಾ ಎಂದು ಮರುಕವಾಗುತ್ತಿದೆ. ಭಾರತದಲ್ಲಿ ಪ್ರತಿಯೊಬ್ಬ ಸಿನಿಮಾ ನಿರ್ದೇಶಕನೂ ಅಣ್ಣಾ ಹಜಾರೆ ಆಗಬಹುದು ಎನ್ನುವ  ಮಾಧ್ಯಮಶಕ್ತಿಯನ್ನೇ ನಮ್ಮ ಸಿನಿಮಾ ಮಂದಿ ಮನವರಿಕೆ ಮಾಡಿಕೊಂಡಿಲ್ಲ.ಸಿನಿಮಾದ ಪ್ರಭಾವೀ ಆಯಸ್ಕಾಂತ ಶಕ್ತಿಯನ್ನು ಬಳಸಿಕೊಳ್ಳಲು ನಮ್ಮವರು ವಿಫಲರಾದರೆಂದೇ ಹೇಳಬೇಕು. ಸಿನಿಮಾ ಒಂದು ದೇಶವನ್ನೇ ಕಟ್ಟಲು ಏಣಿ ಆಗಬಹುದು ಎನ್ನುವುದನ್ನು ರಷ್ಯಾ ನೋಡಿ ಕಲಿಯಬೇಕು. ಬಡತನ, ಅನಕ್ಷರತೆ, ನಿರುದ್ಯೋಗ, ಮೌಢ್ಯ ಎಲ್ಲವೂ ತುಂಬಿತುಳುಕುತ್ತಿದ್ದ ಭಾರತ ದೇಶಕ್ಕೆ ಸಿನಿಮಾ ಪರಿವರ್ತನೆಯ ಹಾದಿಗಳನ್ನು ತೋರಬಹುದಿತ್ತು. ಭಾರತದಲ್ಲಿ ಸಿನಿಮಾ ತನ್ನ ಮೂಲ ಉದ್ದೇಶಕ್ಕೆ ವ್ಯತಿರಿಕ್ತ ದಾರಿಯಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದು.ಸಿನಿಮಾ ಆರಂಭದ ದಿನಗಳಲ್ಲಿ ಚಲನಚಿತ್ರ ಪ್ರದರ್ಶನ ಮುಗಿದಾಗ ರಾಷ್ಟ್ರಗೀತೆ ಕಡ್ಡಾಯವಾಗಿತ್ತು. ಜನರಲ್ಲಿ ರಾಷ್ಟ್ರಪ್ರೇಮ ಚಿಗುರಿಸುವುದು ಈ ಕ್ರಮದ ಹಿಂದಿನ ಉದ್ದೇಶ. ಚಲನಚಿತ್ರ ಪ್ರದರ್ಶನಕ್ಕೆ ಮುನ್ನ 20 ನಿಮಿಷಗಳ ಸಾಕ್ಷ್ಯಚಿತ್ರ ಪ್ರದರ್ಶನ ಕಡ್ಡಾಯವಾಗಿತ್ತು. ಭಾರತ ಸರ್ಕಾರದ ಫಿಲಂ ಡಿವಿಷನ್ ತಯಾರಿಸುತ್ತಿದ್ದ ಈ ಚಿತ್ರಗಳು ಜನರಿಗೆ ಭಾರತದ ಅಭಿವೃದ್ಧಿ, ಸಾಧನೆಗಳನ್ನು ಪರಿಚಯಿಸುತ್ತಿದ್ದವು. ಜವಾಹರಲಾಲ್ ನೆಹರು ಅವರು, ಈ ಸಾಕ್ಷ್ಯಚಿತ್ರಗಳ ಮೂಲಕ ತಮ್ಮನ್ನು ಬಿಂಬಿಸಿಕೊಂಡರು. ತಮ್ಮದೇ ವರ್ಚಸ್ಸನ್ನು ಜನರಿಗೆ ಬಿಂಬಿಸಿ, ಇತರ ನಾಯಕರನ್ನು ಕಡೆಗಣಿಸಿದರು ಎನ್ನುವ ಆಪಾದನೆಯೂ ಇದೆ. ಅಂದರೆ ಸಿನಿಮಾ ಮೂಲಕ ಜನರನ್ನು ತಲುಪಲು ಸಾಧ್ಯ ಎನ್ನುವ ಅಂಶ ನೆಹರೂ ಅವರಿಗೆ ತಿಳಿದಿತ್ತು. ಭಾರತಕ್ಕೆ ಈ ಮಾಧ್ಯಮದಿಂದಾಗುವ ಪ್ರಯೋಜನವೂ ತಿಳಿದಿತ್ತು.ಆರಂಭಕಾಲದ ಚಲನಚಿತ್ರಗಳಲ್ಲಿ ದೇಶಭಕ್ತಿ, ಬ್ರಿಟಿಷರ ದಬ್ಬಾಳಿಕೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶವನ್ನು ನಿರ್ಮಾಪಕ ನಿರ್ದೇಶಕರು ಹೊಂದಿದ್ದರು. 1919ರಲ್ಲಿ ಬಾಬೂರಾವ್ ಪೆಯಿಂಟರ್ ಕೆ.ಪಿ.ಖಾಡೀಲ್ಕರ್ ಅವರ ಜನಪ್ರಿಯ ನಾಟಕ `ಕೀಚಕ ವಧೆ~ ಆಧರಿಸಿ ಸಿನಿಮಾ ತಯಾರಿಸಿದರು. ಈ ನಾಟಕ ಅಂದಿನ ದಿನಗಳಲ್ಲಿ ರಾಜಕೀಯ ದನಿ ಇದ್ದ ಕಾರಣ ವಿವಾದ ಸೃಷ್ಟಿಸಿತ್ತು. ಲಾರ್ಡ್ ಕರ್ಜನ್ ಬಗ್ಗೆ ಟೀಕೆಗಳಿದ್ದ ಕಾರಣ ಬ್ರಿಟಿಷ್ ಸರ್ಕಾರ ನಾಟಕವನ್ನು ನಿಷೇಧಿಸಿತ್ತು. ಈ ನಾಟಕವನ್ನು ಆಧರಿಸಿ ಬಾಬುರಾವ್ ಪೆಯಿಂಟರ್, ನಾಟಕದ ಹೆಸರನ್ನು ಬದಲಿಸಿ `ಸೈರಂಧ್ರಿ~ ಎನ್ನುವ ಸಿನಿಮಾ ನಿರ್ಮಿಸಿದರು. ಚಿತ್ರಕ್ಕೆ ಅಷ್ಟು ಸುಲಭವಾಗಿ ಸೆನ್ಸಾರ್ ಅನುಮತಿ ಸಿಗಲಿಲ್ಲ. ಮುಂಬೈ, ಕೋಲ್ಕತ್ತಾ, ಮದ್ರಾಸ್, ರಂಗೂನ್‌ಗಳಲ್ಲಿನ ಸೆನ್ಸಾರ್ ಮಂಡಳಿಗಳು ಇದಕ್ಕೆ ಕತ್ತರಿ ಹಾಕಿದ್ದವು. ಸಿನಿಮಾ ಮಾಧ್ಯಮವನ್ನು ರಾಜಕೀಯ ಜಾಗೃತಿಗಾಗಿ ಬಳಸಿದ್ದನ್ನು ಮೆಚ್ಚಿದ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಬಾಬೂರಾವ್ ಪೆಯಿಂಟರ್ ಅವರಿಗೆ `ಸಿನಿಮಾ ಕೇಸರಿ~ ಎಂಬ ಬಿರುದು ನೀಡಿ ಗೌರವಿಸಿದರು. ಬ್ರಿಟೀಷ್ ಸರ್ಕಾರ ಆಕ್ಷೇಪಾರ್ಹ ಭಾಗಗಳಿದೆಯೆಂದು ಅದನ್ನು ನಿಷೇಧಿಸಿತು. ಅಂದಿನ ದಿನಗಳಲ್ಲಿ ನಮ್ಮದೇ ಪೌರಾಣಿಕ ಕತೆಯಿಟ್ಟುಕೊಂಡು ಬ್ರಿಟೀಷರ ವಿರುದ್ಧ ಜನ ದಂಗೆ ಏಳುವಂತೆ ಪ್ರೇರೇಪಿಸುವುದು ಗಾಂಧೀಜಿ ಅವರು ಆರಂಭಿಸಿದ್ದ ಚಳವಳಿಗೆ ಬೆಂಬಲ ಸೂಚಿಸುವುದೇ ಆಗಿತ್ತು. ಜನ ಮೆಚ್ಚಿ ಸಿನಿಮಾ ನೋಡುವ ಮೂಲಕ ಬ್ರಿಟೀಷರ ವಿರುದ್ಧ ಇದ್ದ ತಮ್ಮ ಕೋಪವನ್ನು ವ್ಯಕ್ತಪಡಿಸಿದರು.ಸ್ವಾತಂತ್ರ್ಯ ಸಿಗುವವರೆಗೆ ಪೌರಾಣಿಕ, ಭಕ್ತಿ ಪ್ರಧಾನ ಚಿತ್ರಗಳ ಕಥಾವಸ್ತುವಿಗೇ ಮೊರೆ ಹೋಗಿದ್ದ ನಮ್ಮ ಸಿನಿಮಾ ನಿರ್ಮಾಪಕರು ಬ್ರಿಟೀಷ್ ಸೆನ್ಸಾರ್ ನಿಯಮಗಳಿಗೆ ಹೆದರುತ್ತಿದ್ದರಾದರೂ, ಯಾವುದೇ ಒಂದು ರೀತಿಯಲ್ಲಿ ಬ್ರಿಟೀಷರ ದಬ್ಬಾಳಿಕೆ ವಿರುದ್ಧ ಸಂಭಾಷಣೆಗಳನ್ನು ಸೇರಿಸಿರುತ್ತಿದ್ದರು. ಆಗ ಸಿನಿಮಾ ಮಾಧ್ಯಮವೂ ಹೋರಾಟದ ಒಂದು ಅಸ್ತ್ರವಾಗಿ ಬಳಕೆಯಾಯಿತು. 1937ರಲ್ಲಿ ನಿರ್ಮಾಣವಾದ ಕನ್ನಡ ಚಿತ್ರ `ಚಿರಂಜೀವಿ~ ಪೌರಾಣಿಕ ಚಿತ್ರವಾದರೂ ಸ್ವಾತಂತ್ರ್ಯ ಹೋರಾಟದ ಸಮಕಾಲೀನತೆ ತರಲಾಗಿತ್ತು.`ಚರಕ~ವನ್ನು ಸೂಕ್ತವಾಗಿ ಬಳಸುವ ಮೂಲಕ ರಾಷ್ಟ್ರೀಯ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು. ಮಹಾತ್ಮ ಪಿಕ್ಚರ್ಸ್, ನೆಹರೂ ಪಿಕ್ಚರ್ಸ್, ಭಾರತಮಾತಾ ಪ್ರೊಡಕ್ಷನ್ಸ್... ಹೀಗೆ ನಾಯಕರ ಹೆಸರುಗಳಲ್ಲಿ, ದೇಶದ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆಗಳು ಉದಯಿಸಿದವು. ಹಿಂದೂ - ಮುಸ್ಲಿಂ ಭಾವೈಕ್ಯ ಬಿಂಬಿಸುವ ಕೆಲಸ ಆರಂಭವಾದವು. ಪಾಶ್ಚಾತ್ಯರ ಅನುಕರಣೆ ಮಾಡದೆ ಭಾರತೀಯ ನಾರಿಯರು ಆದರ್ಶ ಮಹಿಳೆಯರಾಗಬೇಕೆಂಬ ಸಂದೇಶ ಸಾರುವ ಚಿತ್ರಗಳು (ಭಾರತಿ - 1949) ಬರಲಾರಂಭಿಸಿದವು. ಬಿಗಿಯಾದ ಬ್ರಿಟಿಷ್ ಸೆನ್ಸಾರ್ ನಿಯಮಗಳಿಗೆ ಚಿತ್ರರಂಗ ಬೆದರಿತ್ತಾದರೂ ಅಲ್ಲೊಂದು ಇಲ್ಲೊಂದು ಸ್ಫೂರ್ತಿ ತರುವ ಕೆಲಸ ನಡೆದಿರುವುದನ್ನು ಗುರುತಿಸಬಹುದು.ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿ ನಿರ್ಮಿಸಿದ ಎಷ್ಟೋ ಚಿತ್ರಗಳು ನಿಷೇಧಕ್ಕೆ ಒಳಗಾಗಿವೆ. 1927ರಲ್ಲಿ ಕಲ್ಕತ್ತದ ಕೊಹಿನೂರ್ ಫಿಲಂ ಕಂಪೆನಿ ತಯಾರಿಸಿದ `ಭಕ್ತ ವಿದುರ~ ಚಿತ್ರದಲ್ಲಿ ವಿದುರನ ಪಾತ್ರ ಗಾಂಧೀಜಿಯನ್ನು ಹೋಲುತ್ತಿದೆ ಎನ್ನುವ ಕಾರಣಕ್ಕೆ ಅದನ್ನು ನಿಷೇಧಿಸಲಾಯಿತು. ರವೀಂದ್ರನಾಥ ಟ್ಯಾಗೋರರ ಕಥೆಯನ್ನಾಧರಿಸಿದ ಚಲನ ಚಿತ್ರಗಳೂ ಸೆನ್ಸಾರ್ ತಕರಾರಿಗೆ ಒಳಗಾದವು. ಸಿನಿಮಾದ ಇಂತಹ ಶಕ್ತಿಯ ಅರಿವು ಇಲ್ಲಾದರೂ ಮೂಡಬೇಕಾಗಿತ್ತು. ಆದರೆ ಪಶ್ಚಿಮ ಬಂಗಾಳ, ತಮಿಳುನಾಡು ಬಿಟ್ಟರೆ ಅಂತಹ ಅರಿವು ಬೇರೆ ರಾಜ್ಯಗಳಲ್ಲಿ ಮೂಡಲಿಲ್ಲ.ತಮಿಳುನಾಡಿನಲ್ಲಿ ವಿಚಾರಕ್ರಾಂತಿಯ ನಾಟಕಗಳನ್ನು ಬರೆಯುವ ಮೂಲಕ ಅಣ್ಣಾದೊರೈ ಜನರಲ್ಲಿ ವಿಚಾರ ತರಂಗಗಳನ್ನು ಎಬ್ಬಿಸುವಲ್ಲಿ ಸಫಲರಾದರು. ಮುಂದೆ ಕರುಣಾನಿಧಿ, ಪೆರಿಯಾರ್ ಇವರೆಲ್ಲಾ ಒಂದೇ ವಿಚಾರಧಾರೆಯ ಮೂಲಕ ಪಕ್ಷ ಕಟ್ಟಿದರು. ಪ್ರಾದೇಶಿಕ ಪಕ್ಷ ಕಟ್ಟಲು ಸಿನಿಮಾವನ್ನು ಸಮರ್ಥವಾಗಿ ಬಳಸಿಕೊಂಡರು. ಕವಿತೆ, ಕತೆ, ಕಾದಂಬರಿ ಎಲ್ಲವೂ ಪರದೆಯ ಮೂಲಕ ಜನರಿಗೆ ತಲುಪುವಂತಹ ವ್ಯವಸ್ಥೆಯೊಂದನ್ನು ಅಲ್ಲಿ ಹುಟ್ಟುಹಾಕಲಾಯಿತು. ಹೀಗಾಗಿ ಅಲ್ಲಿ ಸಿನಿಮಾ ಜನರು ಹಾಗೂ ಜನಪ್ರತಿನಿಧಿಗಳ ನಡುವೆ ಒಂದು ಸಂಭಾಷಣೆ ಸಾಧ್ಯವಾಯಿತು. ಸಿನಿಮಾದಲ್ಲಿ ಕಾಣುವುದು, ಜನಪ್ರತಿನಿಧಿ ಮಾಡುವುದು ಎರಡರಲ್ಲೂ ಜನರಿಗೆ ಏಕೀಭಾವ ಕಾಣಲಾರಂಭಿಸಿರುವುದರಿಂದ ಅಲ್ಲಿ ಪ್ರಾದೇಶಿಕ ಪಕ್ಷ ಬಲವಾಗಿದೆ. ಅಂತಹ ಒಂದು ಸಾಧ್ಯತೆ ಎಲ್ಲ ರಾಜ್ಯಗಳ ಚಿತ್ರರಂಗದಲ್ಲಿ ಆಗಬೇಕಿತ್ತು.ಆರಂಭದ ದಶಕಗಳಲ್ಲಿ ಸಿನಿಮಾದಲ್ಲಿ ಜಮೀನ್ದಾರಿ ಪದ್ಧತಿ, ಅಲ್ಲಿನ ಕ್ರೌರ್ಯ ರೀತಿ ನೀತಿಗಳನ್ನು ವಿಶ್ಲೇಷಿಸುವ ಚಿತ್ರಗಳನ್ನು ಕಾಣಬಹುದಿತ್ತು. ಸ್ವಾತಂತ್ರ್ಯಾ ನಂತರ ತಲೆದೋರಿದ ನಿರುದ್ಯೋಗ ಸಮಸ್ಯೆ, ವರದಕ್ಷಿಣೆ ಸಮಸ್ಯೆ, ಬಡತನ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮೊದಲಾದ ಸಮಸ್ಯೆಗಳ ಕಡೆ ಸಿನಿಮಾ ಮಂದಿ ಗಮನ ಹರಿಸಿದ್ದರು.

 

70ರ ದಶಕದ ನಂತರ ಸಿನಿಮಾಕ್ಕೆ ಯಾವುದೇ ಸ್ಪಷ್ಟ ನಿಲುವೇ ಇಲ್ಲದೆ, ಸಾಮಾಜಿಕಬದ್ಧತೆಯೇ ಇಲ್ಲದೆ ಜನರಿಗೆ ಮನರಂಜನೆ ಒದಗಿಸುವುದೊಂದೇ ಸಿನಿಮಾ ಉದ್ದೇಶ ಎನ್ನುವಂತಾಯಿತು. ಗಾಂಧೀಜಿ ಅವರನ್ನು ತೋರಿಸುವುದು, ಅವರ ಆದರ್ಶಗಳನ್ನು ಹೇಳುವುದು ಈಗ ಒಂದು ಫ್ಯಾಷನ್ ಆಗಿ ಪರಿವರ್ತನೆ ಆಗಿದೆ. `ಲಗೇ ರಹೋ ಮುನ್ನಾಬಾಯಿ~ ನೆನಪಿಸಿಕೊಳ್ಳಿ. ಗೂಂಡಾಗಿರಿ ಮಾಡುತ್ತಿದ್ದವನು ಗಾಂಧೀಗಿರಿ ಮಾಡಲಾರಂಭಿಸುವುದು ಗಾಂಧೀಜಿಯವರನ್ನು ವಿಡಂಬಿಸಿದಂತೆಯೇ ಅಲ್ಲವೇ? ನಮ್ಮ ಬಹುತೇಕ ಸಿನಿಮಾಗಳಲ್ಲಿ ಕೆಟ್ಟ ರಾಜಕಾರಣಿಗಳನ್ನು ತೋರಿಸುವುದು ಅವರ ಗಾಂಧೀ ಟೋಪಿ ಮೂಲಕವೇ! ಈಗ ಸಿನಿಮಾ ನಟರು ಗಾಂಧೀ ಟೋಪಿ ಹಾಕಿಕೊಂಡು ಬೀದಿಗಿಳಿದಿದ್ದಾರೆ!ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ನಮ್ಮಲ್ಲೇ ಹೆಚ್ಚು. ಸಿನಿಮಾ ಎನ್ನುವುದು ಭಾರತದಲ್ಲಿ ಸಮ್ಮೊಹನ ಅಸ್ತ್ರವಾಗಿಯೇ ಇದೆ. ಸಿನಿಮಾ ಪರದೆಯ ಮೂಲಕವೇ ಕ್ರಾಂತಿ ಎನ್ನುವುದು, ಬದಲಾವಣೆ ಎನ್ನುವುದು ಸಾಧ್ಯವಿದೆ. ಈ ಅಸ್ತ್ರವನ್ನು ಸಂವಹನ ಶಕ್ತಿಯನ್ನಾಗಿ ಬಳಸುವ ಎಲ್ಲ ಅವಕಾಶ ಸಿನಿಮಾ ರಂಗದವರ ಬಳಿ ಇದೆ. ತಮ್ಮಳಗೇ ಇರುವ `ಅಣ್ಣಾ ಹಜಾರೆ~ಯನ್ನು ಮರೆತು ಈ ಸಿನಿಮಾ ಮಂದಿ ಬೀದಿಗಿಳಿದಿದ್ದಾರಲ್ಲಾ, ಏನನ್ನೋಣ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry