ಸೀಗೂರು ಹಳ್ಳದ ದಂಡೆಯಲ್ಲಿ

7

ಸೀಗೂರು ಹಳ್ಳದ ದಂಡೆಯಲ್ಲಿ

Published:
Updated:
ಸೀಗೂರು ಹಳ್ಳದ ದಂಡೆಯಲ್ಲಿ

ದನಗಳು ನಿರಂತರವಾಗಿ ನಡೆದು ಸವೆದಿದ್ದ ಹಾದಿಯಲ್ಲಿ ಸಾಗಿದ್ದೆವು. ಆಗಿನ್ನೂ ಬೆಳಕು ಮೂಡಿರಲಿಲ್ಲ. ಧೂಳಿನ ಹಾಸಿಗೆಯಂತಿದ್ದ ರಸ್ತೆ ಮಂಜಿನಿಂದ ಒದ್ದೆಯಾಗಿ, ಪಾದಗಳಿಗೆ ಹಿತವೆನಿಸುತ್ತಿತ್ತು. ಆ ದಾರಿಯ ಪಕ್ಕದಲ್ಲೇ ಇದ್ದ ಆದಿವಾಸಿಗಳ ಹಾಡಿ, ಮಾಗಿಯ ಚಳಿಗೆ ಇನ್ನೂ ಹೊದ್ದು ಮಲಗಿತ್ತು.

ಅಲ್ಲಿಂದ ಕೇವಲ ಮುಕ್ಕಾಲು ಕಿ.ಮೀ. ದೂರದಲ್ಲಿ ತೊರೆಯೊಂದು ಹರಿಯುತ್ತಿತ್ತು. ಬೆಳಕು ಹರಿಯುವವರೆಗೆ ಅಲ್ಲೇ ಕಾಯ್ದು ನಂತರ ಮುಂದುವರಿಯಲು ನಿರ್ಧರಿಸಿ, ನೀರಿನ ಮಗ್ಗಲಲ್ಲೇ ಕುಳಿತುಕೊಂಡೆವು.

ಕಣ್ಣುಜ್ಜಿಕೊಂಡು ಎದ್ದ ಸೂರ್ಯನ ಮೊದಲ ಕಿರಣಗಳು ಗಿಡಮರಗಳ ಸಂದುಗಳಿಂದ ತೊರೆಯ ಮೇಲೆ ಇಣುಕಿದಾಗ, ಅಲ್ಲೊಂದು ಗಂಧರ್ವಲೋಕವೇ ಸೃಷ್ಟಿಯಾಯಿತು. ಇಬ್ಬನಿಯಿಂದ ತೊಯ್ದಿದ್ದ ಮರಗಿಡಗಳ ಎಲೆಗಳು, ಜೇಡರಬಲೆಗಳಲ್ಲಿ ಬಂಧಿಯಾಗಿದ್ದ ಸಾವಿರಾರು ಇಬ್ಬನಿಯ ಬಿಂದುಗಳೆಲ್ಲವೂ ಮಿನುಗುತ್ತಿದ್ದವು. ನೀರಿನ ಮೇಲೆ ಮಲಗಿದ್ದ ಮಂಜು ಹಬೆಯಾಗಿ ತೇಲಿತ್ತು. ಹಿಂಬದಿಯಲ್ಲಿ ವಿಹಂಗಮವಾಗಿ ಹರಡಿದ್ದ ನೀಲಗಿರಿ ಬೆಟ್ಟಗಳು ಈ ಅದ್ಭುತ ದೃಶ್ಯಕ್ಕೆ ಕಡು ನೀಲಿಯ ಕ್ಯಾನ್‌ವಾಸ್ ಒದಗಿಸಿದ್ದವು. ವಿಷಿಲಿಂಗ್ ತ್ರಷ್ ಹಕ್ಕಿಗಳು ಕೊಳಲು ನುಡಿಸಿದಂತೆ ಹಾಡುತ್ತಿದ್ದವು. ಒಟ್ಟಾರೆ, ನಾವಲ್ಲಿಗೆ ಬಂದಿದ್ದೇಕೆಂದು ಮರೆಸುವಂತಿತ್ತು ಆ ಮುಂಜಾನೆ.

ನಾವು ಕಾಡುನಾಯಿಗಳ ಅಧ್ಯಯನವನ್ನು ಬಂಡೀಪುರದ ಕಾಡಿನಲ್ಲಿ ನಡೆಸುತ್ತಿದ್ದರೂ ಕೂಡ, ಸುತ್ತಮುತ್ತಲಿನ ಎಲ್ಲ ಕಾಡುನಾಯಿಗಳ ಗುಂಪುಗಳನ್ನು ವಿವರವಾಗಿ ಪರಿಚಯ ಮಾಡಿಕೊಳ್ಳುವುದು ಅಗತ್ಯವಾಗಿತ್ತು. ಆ ಗುಂಪುಗಳಲ್ಲಿರುವ ನಾಯಿಗಳ ಸಂಖ್ಯೆ, ಗುಂಪಿನಲ್ಲಿ ಗಂಡು–ಹೆಣ್ಣುಗಳ ಅನುಪಾತ, ವಯಸ್ಸು, ಗುಂಪಿನಲ್ಲಿ ಅವುಗಳ ಸ್ಥಾನಮಾನ, ಅವುಗಳ ನಡುವಿನ ಸಂಬಂಧಗಳು, ಅವು ಅಧಿಕಾರ ಸ್ಥಾಪಿಸಿರುವ ಪ್ರದೇಶದ ವಿಸ್ತೀರ್ಣ, ಮರಿಮಾಡಲು ಅವುಗಳಿಗಿರುವ ಸೂಕ್ತ ಸ್ಥಳಗಳ ಪರಿಚಯ ಹಾಗೂ ನಮ್ಮ ಕಾಡುನಾಯಿಗಳ ಗುಂಪಿಗೆ ಹೋಲಿಸಿದರೆ ಅವುಗಳ ಸಾಮಾಜಿಕ ಸ್ಥಾನಮಾನವನ್ನೆಲ್ಲ ಅರಿತಿರಬೇಕಿತ್ತು. ನಾವು ಹಿಂಬಾಲಿಸುತ್ತಿದ್ದ ಗುಂಪುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳ ನಡೆಯನ್ನು ಅಂದಾಜಿಸಲು ಕನಿಷ್ಠ ಇಷ್ಟು ಮಾಹಿತಿಗಳು ನಮಗೆ ಅವಶ್ಯವಾಗಿತ್ತು.

ಈ ಹಿನ್ನೆಲೆಯಲ್ಲಿ ಪ್ರತಿ ಎರಡು ವಾರಕ್ಕೊಮ್ಮೆ ನೆರೆಯ ಕಾಡಿನಲ್ಲಿ ನೆಲೆಸಿರುವ ಕಾಡುನಾಯಿಗಳನ್ನು ಹುಡುಕಿ ಒಂದೆರಡು ದಿನ ಅಲೆಯುವುದು ನಮ್ಮ ವಾಡಿಕೆಯಾಗಿತ್ತು.

ನಾವು ಅಧ್ಯಯನ ನಡೆಸುತ್ತಿದ್ದ ಗುಂಪೊಂದರ ವಲಯದ ದಕ್ಷಿಣಕ್ಕೆ, ಒಂಬೈನೂರು ಅಡಿಗಳಷ್ಟು ಆಳದ ದುರ್ಗಮ ಕಣಿವೆಯೊಂದಿತ್ತು. ಅನೇಕ ಬಾರಿ, ಕಣಿವೆಯ ಆಚೆ ಬದಿಯಲ್ಲಿ ನೆಲೆಸಿದ್ದ ಕಾಡುನಾಯಿಗಳ ಗುಂಪು ಆ ಪ್ರಪಾತವನ್ನು ದಾಟಿ, ಬಂದು ಹೋಗುತ್ತಿದ್ದವು. ಆ ಗುಂಪಿನಿಂದ ಹೊರಬಂದ ಹದಿಹರೆಯದ ನಾಯಿಗಳು ಕೆಲವೊಮ್ಮೆ, ನಾವು ಅಧ್ಯಯನ ನಡೆಸುತ್ತಿದ್ದ ನಾಯಿಗಳ ನೆಲೆಯಲ್ಲಿ ಅಡ್ಡಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಆ ಗುಂಪಿನ ಚರಿತ್ರೆಯನ್ನು ತಿಳಿದಿರಬೇಕಾದ ಪರಿಸ್ಥಿತಿ ಉದ್ಭವಿಸಿತ್ತು.

ಮುದುಮಲೈ ಕಾಡಿಗೆ ಸೇರಿದ್ದ ಈ ಭಾಗ ಕುರುಚಲು ಗಿಡಗಳಿಂದ, ಪೊದೆಗಳಿಂದ, ಮುಳ್ಳುಗಿಡಗಳಿಂದ, ಮುಳ್ಳು ಬಳ್ಳಿಗಳಿಂದ ಆವೃತವಾಗಿತ್ತು. ಅಷ್ಟೇನೂ ಮಳೆಯಾಗದ ಈ ಭಾಗದಲ್ಲಿ ಅಸಂಖ್ಯಾತ ಜಾನುವಾರುಗಳು, ದನಗಾಹಿಗಳು ಸದಾ ಓಡಾಡುತ್ತಿದ್ದರಿಂದ, ಮೇಲ್ನೋಟಕ್ಕೆ ಇದು ಕುತೂಹಲ ಕೆರಳಿಸುವ ಕಾಡಾಗಿ ಕಾಣುತ್ತಿರಲಿಲ್ಲ. ಆದರೆ ಕಾಡಿನ ತೆರೆದ ಬಯಲುಗಳಲ್ಲಿ ಚಿಗುರುತ್ತಿದ್ದ ಹುಲ್ಲು ಮತ್ತು ನೀಲಗಿರಿ ಬೆಟ್ಟದಿಂದ ವರ್ಷವಿಡೀ ಇಳಿದು ಬರುತ್ತಿದ್ದ ಝರಿಗಳು ತೊರೆಗಳಾಗಿ ಇಲ್ಲಿ ಹರಿಯುತ್ತಿದ್ದುದರಿಂದ ಕಾಡುಪ್ರಾಣಿಗಳ ಬದುಕಿಗೆ ಈ ಕಾಡು ಹೇಳಿ ಮಾಡಿಸಿದಂತಿತ್ತು.

ಚಳಿಗಾಲ ಕಾಡುನಾಯಿಗಳು ಮರಿಮಾಡುವ ಸಮಯ. ಹಾಗಾಗಿ, ನಾವಂದು ಇಲ್ಲಿನ ಕಾಡುನಾಯಿಗಳೇನಾದರೂ ಮರಿ ಹಾಕಿವೆಯೇ, ಹಾಗಾದರೆ ಅವು ಮರಿಮಾಡಲು ಈ ಪ್ರದೇಶದಲ್ಲಿ ಆಯ್ದುಕೊಳ್ಳುವ ಜಾಗ ಎಂತಹದು, ಎಂದು ಪರಿಶೀಲಿಸಲು ಅಲ್ಲಿಗೆ ಬಂದಿದ್ದೆವು.

ಮುಂಜಾನೆಯ ಮಂಜು ಕರಗುತ್ತಿದ್ದಂತೆ, ನಾವು ಆ ನೀರಿನ ಹಳ್ಳವನ್ನು ದಾಟಿ, ಕಾಲುದಾರಿಯಲ್ಲಿ ಮೂಡಿದ್ದ ಪ್ರಾಣಿಗಳ ಜಾಡನ್ನು ಪರೀಕ್ಷಿಸುತ್ತಾ ನಡೆದೆವು. ಹಿಂದಿನ ಸಂಜೆ ದನಗಳು ಹಿಂದಿರುಗಿದ್ದ ಆ ದಾರಿಯಲ್ಲಿ ಮುಳ್ಳುಹಂದಿ, ಕಾಡುಹಂದಿ, ಕಡವೆ, ಜಿಂಕೆ, ಪುನುಗಿನ ಬೆಕ್ಕು, ಕಾಡುಬೆಕ್ಕು ಮತ್ತು ಚಿರತೆ ಓಡಾಡಿದ್ದವು. ಆ ಹೆಜ್ಜೆಗಳ ಮೇಲೆ ಮೂಡಿದ್ದ ಇಲಿ, ಇರುವೆ, ಹುಳು ಮತ್ತು ಹಕ್ಕಿಗಳ ಕುರುಹುಗಳು ಹಾಗೂ ಅವುಗಳ ಮೇಲೆ ಬಿದ್ದಿದ್ದ ಮಂಜಿನ ಪ್ರಮಾಣದಿಂದ ಪ್ರಾಣಿಗಳು ತಿರುಗಾಡಿದ್ದ ಹೊತ್ತನ್ನು ಅಂದಾಜು ಮಾಡುತ್ತಾ ಸಾಗಿದ್ದೆವು. ಆ ಎಲ್ಲಾ ಹೆಜ್ಜೆಗಳಲ್ಲಿ, ಎರಡು ಮುಳ್ಳುಹಂದಿಗಳ ಜಾಡು ಮಾತ್ರ ಹೊಸದಾಗಿದ್ದವು. ಅವು ಅಲ್ಲಿಂದ ಹೋಗಿ ಹೆಚ್ಚೆಂದರೆ ಒಂದು ತಾಸು ಮಾತ್ರ ಕಳೆದಿತ್ತು.

ಹೆಜ್ಜೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನೋಡುವುದು ನಮಗೆ ಅಭ್ಯಾಸವಾಗಿ ಹೋಗಿತ್ತು. ಕಾಡಿನ ಜಾಡುಗಳಲ್ಲಿ ಹೆಜ್ಜೆಗಳು ಕೇವಲ ಹೆಜ್ಜೆಗಳಾಗಿ ಉಳಿದಿರುವುದಿಲ್ಲ. ಆ ಹೆಜ್ಜೆಗಳಲ್ಲಿ ಆತುರ, ಭಯ, ಕಾತರ, ವಿಚಲತೆಗಳೆಲ್ಲ ದಾಖಲಾಗಿರುತ್ತವೆ.

ಎಷ್ಟೋ ಬಾರಿ ಈ ಗುರುತುಗಳನ್ನು ಹಿಂಬಾಲಿಸಿ ಸಾಗಿದಾಗ ಅದು ಕಾಡುನಾಯಿಗಳ ಗೂಡಿನ ಸುಳಿವು ನೀಡಿದ್ದ ಸಂದರ್ಭಗಳು ಇದ್ದವು. ಈ ಕಾರಣದಿಂದ, ಅಂದು ಮುಳ್ಳುಹಂದಿಗಳ ಜಾಡನ್ನು ಹಿಂಬಾಲಿಸಲು ತೀರ್ಮಾನಿಸಿದೆವು. ಎಲ್ಲರಿಗೂ ಸೂರ್ಯ ಮುಳುಗಿದಾಗ ಇವುಗಳಿಗೆ ಬೆಳಗಾಗುತ್ತದೆ. ಮತ್ತೆ ಸೂರ್ಯ ಹುಟ್ಟುವ ಮುನ್ನ ಸುರಕ್ಷಿತ ಪೊಟರೆಯನ್ನು ಹೊಕ್ಕು ನಿದ್ರಿಸುತ್ತವೆ. ಹಾಗಾಗಿ ಈ ಜಾಡು, ಮುಳ್ಳುಹಂದಿಗಳ ಪೊಟರೆಗೆ ನಮ್ಮನ್ನು ಕರೆದೊಯ್ಯಬಹುದೆಂದು ಊಹಿಸಿದೆವು. ಕಾಡುನಾಯಿಗಳು ಕೆಲವೊಮ್ಮೆ ಮುಳ್ಳುಹಂದಿಗಳು ಬಳಸಿ ಬಿಟ್ಟಿರುವ ಪೊಟರೆಗಳಲ್ಲಿ ಮರಿ ಹಾಕುತ್ತವೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಅವುಗಳನ್ನು ಓಡಿಸಿ ಗೂಡನ್ನು ವಶಕ್ಕೆ ಪಡೆಯುವುದೂ ಉಂಟು.

ಮುಳ್ಳುಹಂದಿಯ ಜಾಡನ್ನಾಧರಿಸಿ ಇನ್ನೂ ಅರ್ಧ ಕಿಲೋ ಮೀಟರ್ ಸಹ ನಡೆದಿರಲಿಲ್ಲ. ದೂರದಲ್ಲಿ ಏನೋ ಚಲಿಸಿದಂತಾಯಿತು. ದೃಷ್ಟಿಯನ್ನು ಅದೇ ಸ್ಥಳಕ್ಕೆ ಕೇಂದ್ರೀಕರಿಸಿ ಹಾಗೇ ನೋಡುತ್ತಿದ್ದೆವು. ಹುಲ್ಲೊಳಗೆ ತೆವಳಿದಂತೆ ಚಲಿಸುತ್ತಿದ್ದ ಅದು, ಒಮ್ಮೆ ನಿಂತು, ನಮ್ಮತ್ತ ತಿರುಗಿ ನೋಡಿ, ನಾವು ನೋಡುತ್ತಿದ್ದಂತೆಯೇ ಹುಲ್ಲಿನಲ್ಲೊಂದಾಗಿ ಅಂತರ್ಧಾನವಾಯಿತು. ಅದರ ಮೈಮೇಲೆ ಚುಕ್ಕೆಗಳಿದ್ದಂತಿತ್ತು, ಆದರದು ಜಿಂಕೆಯಂತೂ ಆಗಿರಲಿಲ್ಲ! ಮುಂಜಾನೆಯ ಮಂಜನ್ನು ಸೀಳಿಬರುತ್ತಿದ್ದ ಸೂರ್ಯಕಿರಣಗಳ ಹಿನ್ನಲೆಯಲ್ಲಿ, ಅಸ್ಪಷ್ಟವಾಗಿದ್ದ ಆ ದೃಶ್ಯ, ಕಾಲ್ಪನಿಕ ಪ್ರಾಣಿಯೊಂದನ್ನು ಸೃಷ್ಟಿಸಿತ್ತೋ ಏನೋ ತಿಳಿಯಲಿಲ್ಲ.

ಮುಳ್ಳುಹಂದಿಯ ಜಾಡು ಮರೆತು, ಚಲಿಸಿ ಮರೆಯಾದ ಆ ಚುಕ್ಕೆಗಳತ್ತ ನಮ್ಮ ಗಮನ ಹೊರಳಿತು. ಎಂದಿನಂತೆ ಆ ಕುತೂಹಲ ನಮ್ಮ ಉದ್ದೇಶವನ್ನು ಮರೆಸಿತ್ತು. ನಮ್ಮ ದಾರಿಯನ್ನು ತಪ್ಪಿಸಿತ್ತು.

ಒಂದು ಮರದ ಮರೆಯಿಂದ ಇನ್ನೊಂದು ಮರಕ್ಕೆ ಮೆಲ್ಲನೆ ಸರಿಯುತ್ತಾ, ದಿಕ್ಕು ಬದಲಿಸುತ್ತಾ ನಡೆಯುತ್ತಿದ್ದೆವು. ನಾವು ನೇರವಾಗಿ ತನ್ನೆಡೆಗೆ ಬರುತ್ತಿದ್ದಾರೆ ಎಂದು ಆ ಪ್ರಾಣಿಗೆ ಶಂಕೆ ಬಾರದಂತೆ ಅದನ್ನು ಸಮೀಪಿಸುವುದು ನಮ್ಮ ಉದ್ದೇಶವಾಗಿತ್ತು. ಒಂದು ಪಕ್ಷ, ಆ ಪ್ರಾಣಿ ಚಿರತೆಯಾಗಿದ್ದಲ್ಲಿ, ನಾವು ಅದನ್ನು ಗಮನಿಸಿಲ್ಲವೆಂದು ಅದಕ್ಕೆ ಮನವರಿಕೆಯಾದರೆ, ಅದು ಅಲ್ಲೇ ಯಾವುದಾದರು ಪೊದೆಗಳಡಿಯಲ್ಲಿ ಅಡಗಿ ಕುಳಿತು ನಮ್ಮನ್ನೇ ನೋಡುತ್ತಿರುತ್ತದೆ ಎಂದು ನಮಗೆ ಖಚಿತವಾಗಿ ತಿಳಿದಿತ್ತು.

ಆದರೆ, ಇನ್ನಷ್ಟು ಹತ್ತಿರ ಹೋದಾಗ ಸಹ ಏನೂ ಕಂಡುಬರಲಿಲ್ಲ. ಆಗ ಇದ್ದಕ್ಕಿದ್ದಂತೆ ಬೀಸಿದ ಗಾಳಿ ಖಚಿತವಾದ ಒಂದು ಸುದ್ದಿಯನ್ನು ತಂದಿತ್ತು. ಗಾಳಿಯಲ್ಲಿದ್ದ ಆ ಕಡು ವಾಸನೆ ನಿಸ್ಸಂದೇಹವಾಗಿ ಹತ್ತಿರದಲ್ಲೆಲ್ಲೋ ಚಿರತೆ ಸಿಂಪಡಿಸಿದ್ದ ಸೆಂಟಿನದಾಗಿತ್ತು. ನಾವು ಚಿಕ್ಕಮರವೊಂದರ ಮರೆಯಲ್ಲಿ ಅಲುಗದೆ ನಿಂತಿದ್ದೆವು. ಕತ್ತು ಕೂಡ ತಿರುಗಿಸದೆ ಸುತ್ತಲ ಪೊದೆಗಳಲ್ಲಿ ಆ ಪ್ರಾಣಿಯನ್ನು ಹುಡುಕುತ್ತಿದ್ದೆವು. ಆಗ ಒಮ್ಮಿಂದೊಮ್ಮೆಗೆ, ನಾವು ಅಡಗಿ ನಿಂತಿದ್ದ ಮರದ ಮೇಲೆ ಏನೋ ಜಾರಿದ ಸದ್ದಾಯಿತು. ನಾವಿಬ್ಬರೂ ಏಕಾಏಕಿ ತಲೆಯೆತ್ತಿ ನೋಡಿದೆವು. ಕೇವಲ ಮೂರು ಅಡಿ ದೂರದಿಂದ ಎರಡು ಕಣ್ಣುಗಳು ನಮ್ಮನ್ನೇ ನೋಡುತ್ತಿದ್ದವು.

ತಲೆಕೆಳಗಾಗಿದ್ದ ಮಂಗವೊಂದರ ಬುರುಡೆ ಮರದ ರೆಂಬೆಯ ಕವಲೊಂದರಲ್ಲಿ ಸಿಕ್ಕಿಕೊಂಡು ನಮ್ಮತ್ತಲೇ ನೋಡುತ್ತಿತ್ತು.

ಕಾಡಿನಲ್ಲಿ ಯಾವುದೋ ನಿರೀಕ್ಷೆಯಲ್ಲಿರುವಾಗ, ಇದ್ದಕ್ಕಿದ್ದಂತೆ ಸಂಭವಿಸುವ ಈ ಘಟನೆಗಳು ಕೆಲಕಾಲ ಮನಸ್ಸನ್ನು ಅತಂತ್ರವಾಗಿಸಿ ಮತ್ತೆ ‘ರೀಬೂಟ್’ ಮಾಡಿದಂತಾಗುತ್ತದೆ. ಹಾಗಾಗಿ ಅಲ್ಲೇನು ನಡೆದಿದೆ ಎಂದು ಗ್ರಹಿಸಲು ಬಹಳ ಸಮಯ ಹಿಡಿಯಿತು.

ನಂತರ ಸೂಕ್ಷ್ಮವಾಗಿ ಸುತ್ತಲೂ ಅವಲೋಕಿಸಿದೆವು.

ಒಂದೆಡೆ ಹುಲ್ಲು ನಲುಗಿ ಮುದುಡಿದ್ದವು. ಅಲ್ಲಿ ಸ್ವಲ್ಪ ಮಾತ್ರ ರಕ್ತದ ಕಲೆಗಳಿದ್ದವು. ಒದ್ದಾಡಿದ ಕುರುಹುಗಳಿರಲಿಲ್ಲ. ಅಂದರೆ ಬೇಟೆಗೆ ಸಾವು ಬಂದೆರಗಿದ್ದು ತಿಳಿದೇ ಇಲ್ಲ. ನೆಲದಲ್ಲಿದ್ದ ಮಂಗವನ್ನು ಚಿರತೆ ಹಿಂದಿನಿಂದೆರಗಿ ಹಿಡಿದಿತ್ತು. ಅಲ್ಲಿಂದ ಅದನ್ನು ಸುಮಾರು ನಲವತ್ತು ಮೀಟರ್ ಎಳೆದೊಯ್ದಿತ್ತು. ಒಣಗುತ್ತಿದ್ದ ಚಳಿಗಾಲದ ಹುಲ್ಲು ಮುರುಟಿದ್ದು ಮತ್ತೆ ಎದ್ದು ನಿಂತಿರಲಿಲ್ಲ. ನಂತರ ಮಂಗದ ಮೈಮೇಲಿನ ರೋಮಗಳನ್ನು ಕಿತ್ತು ಹಾಕಿ, ಮತ್ತೆ ಸ್ವಲ್ಪ ದೂರ ಎಳೆದೊಯ್ದು ಮುಕ್ಕಾಲು ಭಾಗವನ್ನು ತಿಂದಿದೆ. ಅಲ್ಲಿ ಚೆಲ್ಲಿದ್ದ ರಕ್ತ, ಕಥೆಯನ್ನು ಪೂರ್ಣಗೊಳಿಸಿತ್ತು. ನಂತರ ಉಳಿದ ಭಾಗವನ್ನು ಮರದ ಮೇಲೆ ತೆಗೆದುಕೊಂಡು ಹೋಗಿತ್ತು. ಆ ಪ್ರಯತ್ನದಲ್ಲಿ ಮರದ ಕಾಂಡದ ಮೇಲೆ ರಕ್ತದ ಕಲೆಗಳು ಮೂಡಿದ್ದವು.

ಸ್ವಲ್ಪ ಹೊತ್ತಿನಲ್ಲಿ ನವಿಲೊಂದು ತುಸು ದೂರದಲ್ಲಿ ಕೂಗುತ್ತಾ ಹಾರಿಹೋಯಿತು. ಕೆಲಕ್ಷಣಗಳ ನಂತರ, ಎರಡು ಅಡಿ ಎತ್ತರಕ್ಕೆ ಬೆಳೆದಿದ್ದ ಹುಲ್ಲಿನ ಹೂವುಗಳ ಮರೆಯಲ್ಲಿ ಸರಿದುಹೋದ ಚಿರತೆಯ ಕಿವಿ ಮತ್ತು ಬೆನ್ನಷ್ಟೆ ಕಾಣಿಸಿತು.

ಅಲ್ಲಿಂದ ಹೊರಟ ಬಳಿಕವೂ, ಕಂಡ ಘಟನೆಯ ವಿವರಗಳೆಲ್ಲ ಬಹಳ ಸಮಯ ತಲೆಯಲ್ಲಿ ಸುತ್ತುತ್ತಿದ್ದವು. ಒಂದೆರಡು ಕಿಲೋಮೀಟರ್ ಸಾಗಿದ ಬಳಿಕ ಮತ್ತೊಂದು ತೊರೆ ಎದುರಾಯಿತು. ಮಳೆಗಾಲದಲ್ಲಿ ಆರ್ಭಟಿಸಿ ಹರಿದಿದ್ದ ತೊರೆ ತಂದು ಬಿಸಾಡಿದ್ದ ಮರಳಿನ ಹಾಸುಗಳು ಅಲ್ಲಲ್ಲಿ ಹರಡಿದ್ದವು. ಇಕ್ಕೆಲಗಳಲ್ಲಿ ದೈತ್ಯಾಕಾರದ ಕಾಡು ಮಾವು ಮತ್ತು ಹೊಳೆ ಮತ್ತಿ ಮರಗಳು ಸಾಲು ಸಾಲಾಗಿದ್ದವು.

ಮರಳಿನಲ್ಲಿ ನಾಯಿಗಳ ಹೆಜ್ಜೆಗಳಿರಬಹುದೇ ಎಂದು ಕಣ್ಣು ಹಾಯಿಸುತ್ತಾ ಹೊಳೆಯ ಬದಿಯಲ್ಲಿ ಸಾಗಿದೆವು. ಬದಲಾಗಿ, ಅಲ್ಲಿ ನೀರು ನಾಯಿಗಳ ವಾಸ್ತವ್ಯವನ್ನು ಪ್ರಸ್ತುತಪಡಿಸುವ ಕುರುಹುಗಳಿದ್ದವು. ಅವು ತಿಂದು ಬಿಸಾಡಿದ್ದ ಮೀನಿನ ಮುಳ್ಳುಗಳು, ಏಡಿಗಳ ಕವಚಗಳು ಎಲ್ಲೆಡೆ ಚೆಲ್ಲಾಡಿದ್ದವು. ಬಳಿಕ ಅವುಗಳು ಆಗಷ್ಟೇ ಬಿಟ್ಟುಹೋಗಿದ್ದ ಹೊಸಹೆಜ್ಜೆಗಳನ್ನು ಕಂಡು ಸದ್ದು ಮಾಡದೆ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಾ ಮುಂದೆ ಸಾಗಿದೆವು. ಮುಂದಿನ ತಿರುವಿನಲ್ಲಿ, ದಂಡೆಯಲ್ಲಿದ್ದ ಪೊಟರೆಯೊಂದರ ಬಳಿ ಎರಡು ನೀರುನಾಯಿ ಮರಿಗಳು ಮಲಗಿದ್ದವು.

ಆ ಅದ್ಭುತ ಮುಂಜಾನೆಯ ಪ್ರತಿ ಕ್ಷಣಗಳನ್ನು ಆಸ್ವಾದಿಸುತ್ತಾ, ಹಳ್ಳದ ಬದಿಯಲ್ಲಿದ್ದ ನೂರಾರು ವರ್ಷಗಳಷ್ಟು ಹಳೆಯದಾದ ಭವ್ಯ ಮರಗಳ ಸೊಬಗನ್ನು ಕುತೂಹಲದಿಂದ ನೋಡುತ್ತಾ ನಿಂತಿದ್ದೆವು. ಆಗ ಹೊಳೆ ಮತ್ತಿ ಮರವೊಂದರ ನೆತ್ತಿಯಲ್ಲಿ ಎರಡು ರಣಹದ್ದುಗಳು ಕಂಡುಬಂದವು. ಬಹುಶಃ ಹತ್ತಿರದಲೆಲ್ಲೋ ಶಿಕಾರಿಯಾಗಿರಬಹುದು, ಹಾಗಾಗಿ ಅವು ಇಲ್ಲಿ ಕಾಯುತ್ತಾ ಕುಳಿತಿರಬಹುದೆಂದು ಊಹಿಸಿದೆವು. ಆದರೆ, ನಿಧಾನವಾಗಿ ಸುತ್ತಲೂ ಗಮನಿಸಿ ನೋಡಿದಾಗ ಜೀವ ಪರಿಸರದ ಅಮೂಲ್ಯ ನಿಕ್ಷೇಪವೊಂದನ್ನು ಆಕಸ್ಮಿಕವಾಗಿ ಕಂಡು ಹಿಡಿದಂತಾಗಿತ್ತು. ನಾವು, ರಣಹದ್ದುಗಳು ರಾತ್ರಿಕಳೆಯುವ ಹಾಗೂ ಗೂಡು ಮಾಡುವ ಸ್ಥಳದಲ್ಲಿದ್ದೆವು. ಅಲ್ಲಿ, ಒಟ್ಟು ಕನಿಷ್ಠ ಇಪ್ಪತ್ತು ಜೊತೆ ರಣಹದ್ದುಗಳಿದ್ದವು. ಆ ಸಮಯದಲ್ಲಿ ದೇಶದಾದ್ಯಂತ ರಣಹದ್ದುಗಳ ಸಂಖ್ಯೆ ವಿಪರೀತ ಇಳಿಮುಖವಾಗಿ ಪರಿಸರ ವಿಜ್ಞಾನಿಗಳಲ್ಲಿ ಆತಂಕ ಹುಟ್ಟಿಸಿತ್ತು. ನೀಲಗಿರಿ ಜೈವಿಕ ವಲಯದ ಕಾಡುಗಳಲ್ಲಿ ಕಾರ್ಯ ನಿರ್ವಹಿಸುವ ರಣಹದ್ದುಗಳನ್ನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೋಡಿದ್ದು ನಮಗೆ ಅತ್ಯಂತ ಸಂತೋಷದಾಯಕವಾಗಿತ್ತು.

ಸುತ್ತಲ ವಾತಾವರಣವೆಲ್ಲ ಬೆಚ್ಚಗಾಗಿ, ಆ ಪಕ್ಷಿಗಳೆಲ್ಲ ಹಾರಿಹೋಗುವವರೆಗೆ ನಾವು ಅಲ್ಲೇ ಕುಳಿತಿದ್ದೆವು. ಸುಮಾರು ಹತ್ತು ಗಂಟೆಗೆ, ದೂರದಲ್ಲಿ ದನಗಳು ಬರುತ್ತಿರುವ ಸದ್ದು ಕೇಳಿಬಂತು. ನಾವು ತೊರೆಯ ಪಕ್ಕದಲ್ಲೇ ನಡೆದು ದನಗಳು ಹೊಳೆಯನ್ನು ದಾಟುವ ಜಾಗಕ್ಕೆ ಬಂದು ಸೇರಿದೆವು.

ಕೆಲವೇ ಸಮಯದಲ್ಲಿ ಆದಿವಾಸಿಯೊಬ್ಬ ಬರುತ್ತಿರುವುದು ಕಾಣಿಸಿತು. ಆ ಕಾಡಿನಲ್ಲಿ, ದನಗಳ ಹಿಂಡಿನಿಂದ ಬಹಳ ಮುಂದೆ, ಸಂಚು ಹಾಕಿರುವ ಕಾಡುಪ್ರಾಣಿಗಳನ್ನು ಓಡಿಸಲು ಒಬ್ಬ ಕೂಗುತ್ತಾ ಗಲಾಟೆ ಮಾಡಿಕೊಂಡು ಹೋಗುವುದು ವಾಡಿಕೆ. ಯಾವುದೋ ಕಾಲದಲ್ಲಿ, ಹುಲಿ ಮತ್ತು ಮನುಷ್ಯನ ಬದುಕು ಜೊತೆ ಜೊತೆಯಾಗಿ ಸಾಗಿದ್ದಾಗ, ಹುಲಿಗಳು ಮನುಷ್ಯನನ್ನು ಮತ್ತು ಅವನ ಸಾಕುಪ್ರಾಣಿಗಳನ್ನು ಹಿಂಬಾಲಿಸುತ್ತಿದ್ದವೆನ್ನುವ ಮಾತುಗಳು ನಿಜವಿರಬಹುದು. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಈತ ಹಿಂದಿನವರು ಮಾಡುತ್ತಿದ್ದ ಕಸರತ್ತನ್ನು ಯಥಾವತ್ತಾಗಿ ಅನುಕರಿಸುತ್ತಿದ್ದಾನೆ ಮಾತ್ರ ಎಂಬುದು ನಮ್ಮ ಅನಿಸಿಕೆಯಾಗಿತ್ತು.

ಅಲ್ಲಿಗೆ ಬಂದ ಆದಿವಾಸಿ ಹುಡುಗನಿಗೆ ನಮ್ಮ ಪರಿಚಯವಿತ್ತು. ಕ್ಷೇಮ ಕುಶಲಗಳನ್ನು ಮಾತನಾಡುತ್ತಾ ಕಾಡುನಾಯಿಗಳ ಬಗ್ಗೆ ವಿಚಾರಿಸಿದೆವು. ನಗುವಿನೊಂದಿಗೆ ‘ಹುಲಿಯನ್ನು ಬೇಕಾದರೆ ತೋರಿಸುತ್ತೇನೆ, ಆದರೆ ಈ ಕಾಡುನಾಯಿಗಳ ಬಗ್ಗೆ ಮಾತ್ರ ಕೇಳಬೇಡಿ. ನಾನು ಅವುಗಳನ್ನು ನೋಡಿಯೇ ಒಂದೆರಡು ತಿಂಗಳಾಗಿರಬಹುದು’ ಎಂದ. ‘ನೀನು ಯಾವಾಗಲಾದರು ಅವುಗಳು ಮರಿ ಹಾಕುವ ಪೊಟರೆಯನ್ನು ನೋಡಿದ ನೆನಪಿದೆಯಾ’ ಎಂಬ ಪ್ರಶ್ನೆಗೆ, ‘ಅವು ಕಾಣಿಸುವುದೇ ಕಷ್ಟ. ಎಲ್ಲೋ ಒಂದು ಸಲ ಕಾಣಿಸಿಕೊಂಡ್ರೂ ಮತ್ತೆ ಕಾಣದೇ ಇಲ್ಲ. ಇನ್ನು ಎಲ್ಲಿ ಗೂಡು ಮಾಡುತ್ತವೆ ಅನ್ನದು ಆ ದೇವರಿಗೆ ಗೊತ್ತು. ನಾನಂತೂ ಈವರೆಗೂ ನೋಡಿಲ್ಲ’ ಎಂದ.

ಅಷ್ಟರಲ್ಲಿ ನೂರಾರು ದನಗಳು ದೂಳೆಬ್ಬಿಸುತ್ತಾ ಅವಸರದಿಂದ ನೀರಿನತ್ತ ಧಾವಿಸಿ ಬರುತ್ತಿದ್ದವು. ನಾವು ಬದಿಗೆ ಸರಿದು, ಹಳ್ಳದಲ್ಲಿ ಮೇಲ್ಮುಖವಾಗಿ ಸಾಗಿ ಮರಳಿನ ದಂಡೆಯ ಮೇಲೊಂದೆಡೆ ಕುಳಿತೆವು. ಈ ದನಗಳ ಗದ್ದಲ ಮುಗಿದು, ಕಾಡು ತನ್ನ ಸಹಜ ಸ್ಥಿತಿಗೆ ಮರಳುವವರೆಗೆ, ಅಲ್ಲಿ ವಿಶ್ರಮಿಸಿ ಮುಂದುವರೆಯುವುದೆಂದು ನಿಶ್ಚಯಿಸಿದೆವು.

ನಮಗೆ ದನಗಳು ನೀರಿನಲ್ಲಿದ್ದ ಸದ್ದು ಕ್ಷೀಣವಾಗಿ ಕೇಳುತ್ತಲೇ ಇತ್ತು. ತೆಳ್ಳಗೆ ಹರಿಯುತ್ತಿದ್ದ ತೊರೆಯ ನೀರಿನಲ್ಲಿ ಬ್ಯಾಬ್ಲರ್ ಹಕ್ಕಿಗಳು ಸ್ನಾನ ಮಾಡುತ್ತಾ ಗಲಾಟೆ ಎಬ್ಬಿಸಿದ್ದವು. ಸುತ್ತಲ ಮರಗಳ ಮೇಲೆ ಗುಟರ ಹಕ್ಕಿಗಳು ಯುಗಳಗೀತೆಗೆ ಸ್ವರ ಸೇರಿಸಲು ಹೆಣಗಾಡುತ್ತಿದ್ದವು.

ಈ ಎಲ್ಲಾ ಸದ್ದುಗಳ ನಡುವೆ ಕೂಗೊಂದು ಕೇಳಿದಂತಾಯಿತು. ತೀರಾ ಕೆಳಸ್ಥರದಿಂದ ಮೂಡಿಬಂದ ಆ ಕೂಗು ಏನೆಂದು ತಿಳಿಯಲಿಲ್ಲ. ಅರ್ಧ ನಿಮಿಷದಲ್ಲಿ ಆ ಕೂಗು ಮತ್ತೆ ಕೇಳಿಬಂತು. ನಂತರ ಅದು ಸ್ಪಷ್ಟವಾಗಿ ಕೇಳಿತು. ದನ ಮೇಯಿಸುವವರ ಕೇಕೆಗೆ, ಗಲಾಟೆಗೆ ಹುಲಿಯೊಂದು ಎದ್ದು ಹೊರಟಿತ್ತು. ಬಹುಶಃ, ಹೊಳೆಮತ್ತಿ ಮರವೊಂದರ ಕೆಳಗೆ, ಹಳ್ಳದ ನೀರಿನಲ್ಲಿ ತಣ್ಣಗೆ ವಿಶ್ರಮಿಸಿದ್ದ ಹುಲಿ, ಒಲ್ಲದ ಮನಸ್ಸಿನಿಂದ ಎದ್ದು ಸಾಗಿತ್ತು. ತನ್ನ ಅಸಹನೆ ವ್ಯಕ್ತಪಡಿಸಲು ಗುರುಗುಟ್ಟಿತ್ತು.

ಛಿದ್ರಗೊಂಡಿರುವ ಆ ಕಾಡಿನಲ್ಲಿ ದನ–ಜನಗಳ ನಡುವೆ ಬೆಳಗಿನ ಹನ್ನೊಂದು ಗಂಟೆಯ ಪ್ರಖರ ಬೆಳಕಿನಲ್ಲಿ ಹುಲಿ ಗರ್ಜಿಸುತ್ತಾ ಹೊರಟಿತ್ತು. ಈ ಕುರುಚಲು ಕಾಡಿನಲ್ಲಿ ಹರಿಯುವ ಹಳ್ಳಗಳು ಎಂತಹ ಅಪೂರ್ವ ಜೀವಸೆಲೆಗಳು... ನಮಗೆ ನಂಬಲಾಗಲಿಲ್ಲ.

ಸುಡುತ್ತಿದ್ದ ಬಿಸಿಲಿನಿಂದಾಗಿ ತೊರೆಯನ್ನು ಬಿಟ್ಟು ಹೊರಬರಲು ನಮಗೂ ಮನಸ್ಸಿರಲಿಲ್ಲ. ಆದರೆ ನಾವು ಅರಸಿ ಬಂದ ಕೆಲಸ ಮುಗಿದಿರಲಿಲ್ಲ.

ದಿನವಿಡೀ ಅಲೆದಾಡುತ್ತಾ, ಕಾಡುನಾಯಿಗಳು ಮರಿಮಾಡಲು ಸೂಕ್ತವೆನಿಸುವ ಸ್ಥಳಗಳನ್ನು ಶೋಧಿಸುತ್ತಾ ಸಾಗಿದೆವು. ಆ ಸಂಜೆ ಹಿಂದಿರುಗಿ ಹೊರಡುವ ವೇಳೆಗೆ ನಾವು ಹಸಿದಿದ್ದೆವು. ದಣಿದು ಸುಣ್ಣವಾಗಿದ್ದೆವು.

ಕತ್ತಲಾಗುತ್ತಾ ಬಂದಂತೆ, ಅಲ್ಲಿಯವರೆಗೆ ರಮ್ಯವಾಗಿ ಕಾಣುತ್ತಿದ್ದ ಕಾಡು, ಭಯ ಹುಟ್ಟಿಸುವ ನಿಗೂಢ ಜಗತ್ತಿನಂತಾಗತೊಡಗಿತು. ಮುಸ್ಸಂಜೆಯ ಬೆಳಕು ಮಾಸುವ ಮುನ್ನ ಹಾಡಿಯ ಬಳಿಯಿದ್ದ ನೀರಿನ ಹಳ್ಳವನ್ನು ತಲುಪಲೆಂದು ಬಿರುಸಾಗಿ ಸಾಗಿದ್ದೆವು. ನಾವು ಅಲ್ಲಿಗೆ ತಲುಪವಷ್ಟರಲ್ಲಿ ಕತ್ತಲು ಅಲ್ಲಿ ಕಾಲಿಟ್ಟಿತ್ತು. ಆಗಲೇ ಹಾಡಿಗೆ ತಲುಪಿದ್ದ ದನಕರುಗಳ ಸದ್ದು ಸಣ್ಣಗೆ ಕೇಳಿಬರುತ್ತಿತು. ಆ ಹಳ್ಳವನ್ನು ಸಮೀಪಿಸುತ್ತಿದ್ದಂತೆ ಸುರಕ್ಷಿತವಲಯಕ್ಕೆ ಬಂದ ಭಾವನೆಯಲ್ಲಿ ನಿರುಮ್ಮಳವಾದೆವು. ಆದರೆ ಇದೇ ಸಮಯದಲ್ಲಿ ಚಟುವಟಿಕೆ ಆರಂಭಿಸುವ ಹಲವಾರು ಕಾಡುಪ್ರಾಣಿಗಳು, ಮೊದಲಿಗೆ ನೀರು ಕುಡಿಯಲು ಬರುತ್ತವಾದ್ದರಿಂದ, ಎಚ್ಚರಿಕೆಯಿಂದ ನಿಧಾನವಾಗಿ ಅತ್ತಿತ್ತ ಕಣ್ಣಾಯಿಸುತ್ತಾ ತೊರೆಯ ಬಳಿಸಾರಿದೆವು.

ದೂರದಿಂದ ಟಿಟ್ಟಿಭ ಹಕ್ಕಿಯ ಎಚ್ಚರಿಕೆಯ ಕರೆ ತೂರಿಬಂದಾಗ, ಎಲ್ಲೋ ನೆರಳಿನಲ್ಲಿ ನಿದ್ರಿಸಿದ್ದ ಬೇಟೆಗಾರ ಪ್ರಾಣಿಯೊಂದು ಹೊರಬಂದು ಮೈಮುರಿಯುತ್ತಿರಬಹುದೆನಿಸಿತು. ಇದೆಲ್ಲ ನಮಗೆ ಗೊತ್ತಿದ್ದರು ಕೂಡ, ಕತ್ತಲು ಕವಿಯುತ್ತಿದ್ದಂತೆ ಕಾಡು ಮನಸ್ಸಿನ ಆಲೋಚನೆಗಳೊಂದಿಗೆ ಚಕ್ಕಂದವಾಡತೊಡಗುತ್ತದೆ.

ಆಗ, ಒಮ್ಮೆಲೆ ಹಳ್ಳದ ಬಳಿ, ಮರದ ಪಕ್ಕದಲ್ಲಿ ಏನೋ ಇರುವಂತೆ ಭಾಸವಾಯಿತು.

ಮುಂದಿನ ಕ್ಷಣದಲ್ಲಿ, ನಮಗೆ ತೀರಾ ಸನಿಹದಲ್ಲಿ ಇದ್ದಕ್ಕಿದ್ದಂತೆ ಕತ್ತಲಲ್ಲಿ ಕರಗಿಹೋದಂತಿದ್ದ ಆ ಆಕೃತಿ ಮಾತನಾಡಿತು.

‘ದಾರಿಯಲ್ಲಿ ಒಂದು ಕರಿಯ ದನ ಕಂಡ್ರಾ?’ ಎಂಬ ಹೆಣ್ಣಿನ ದನಿ ಕೇಳಿಬಂತು.

ಯುವತಿಯೊಬ್ಬಳು ಒಬ್ಬೊಂಟಿಯಾಗಿ, ಆ ಕಾಡಿನ ತೊರೆಯ ಬಳಿ ಕತ್ತಲಿನಲ್ಲಿ ನಿಂತಿದ್ದಳು.

ತನ್ನ ಪತಿ ಹಸುವನ್ನು ಹುಡುಕಿಕೊಂಡು ಹೋಗಿರುವುದಾಗಿ, ಹಾಗಾಗಿ ತಾನು ಅಲ್ಲಿ ಕಾಯುತ್ತಿರುವುದಾಗಿ ಆಕೆ ತಿಳಿಸಿದಳು. ಚಂದದ ಕಾಡಿನಿಂದ ವಾಸ್ತವಕ್ಕೆ ಏಕಾಏಕಿ ಮರಳಿದ್ದೆವು. ಆದರೆ ಆ ವಾಸ್ತವತೆ ಅಷ್ಟೇನು ರಮ್ಯವಾಗಿರಲಿಲ್ಲ.

ನಿಜಕ್ಕೂ ಆ ಆದಿವಾಸಿ ಹುಡುಗಿ ಗಟ್ಟಿಗಿತ್ತಿ ಇರಲೇಬೇಕು.

ಮರುದಿನ ಮುಂಜಾನೆ, ಸೂರ್ಯ ಬೆಳಗುವ ಮುನ್ನವೇ ನಾವು ಮತ್ತೆ ಕಾಡುನಾಯಿಗಳ ಜಾಡು ಹಿಡಿದು ಅಲ್ಲಿಗೆ ಹಿಂದಿರುಗಿದ್ದೆವು. ನೀರಿನ ಹಳ್ಳದ ಬಳಿ ಕತ್ತಲು ಕರಗಲು ತುಸು ಹೊತ್ತು ಕಾದು ನಿಂತೆವು. ನಂತರ ಎಂದಿನ ಚಾಳಿಯಂತೆ ಪ್ರಾಣಿಗಳ ಜಾಡಿನತ್ತ ಕಣ್ಣಾಡಿಸಿದೆವು.

ಹಿಂದಿನ ಸಂಜೆ, ಕತ್ತಲಾದ ಮೇಲೆ ಹುಲಿಯೊಂದು ಅದೇ ದಾರಿಯಲ್ಲಿ ನಡೆದುಬಂದಿತ್ತು. ದನಗಳ ಕಾಲ್ತುಳಿತಕ್ಕೆ ಸಿಕ್ಕು ನುಣುಪಾದ ದೂಳಿನ ಕಾಲುದಾರಿಯಲ್ಲಿ ಹುಲಿಯ ಹೆಜ್ಜೆ ಸ್ಪಷ್ಟವಾಗಿ ಮೂಡಿತ್ತು. ನೆನ್ನೆ ಆ ಹುಡುಗಿ ಕತ್ತಲಲ್ಲಿ ನಿಂತಿದ್ದ ಜಾಗದ ಬಳಿಯೇ ನೀರಿಗಿಳಿದಿತ್ತು.

ಹುಲಿಯ ಹೆಜ್ಜೆಗಳು ತೊರೆಯನ್ನು ದಾಟಿ ಹಳ್ಳಿಯ ಕಡೆಗೆ ಮುಂದುವರೆದಿತ್ತು... ಆದರೆ ಹಿಂದಿರುಗಿ ಬಂದಿರಲಿಲ್ಲ.

ಹಳ್ಳಿಗೆ ಹೋಗಿ ವಿಚಾರಣೆ ಮಾಡಲು ನಮಗೆ ಧೈರ್ಯ ಸಾಕಾಗಲಿಲ್ಲ. ನಿತ್ಯ ಬರುವ ಆದಿವಾಸಿ ದನಗಾಹಿ ಹುಡುಗನಿಗಾಗಿ ಕಾಡಿನಲ್ಲಿ ಕಾದುಕುಳಿತೆವು.

ಹುಡುಗ ಆ ವಿಷಯವಾಗಿ ಏನನ್ನೂ ಮಾತನಾಡಲಿಲ್ಲ. ಸ್ವಲ್ಪ ನೆಮ್ಮದಿಯಾಯಿತು. ಆದರೆ, ತುಸು ಹೊತ್ತಿನ ಬಳಿಕ ಮುಂದುವರೆದ ಆತ – ‘ಹುಲಿ ಆಗೊಮ್ಮೆ ಈಗೊಮ್ಮೆ, ಒಂದು ದನ ಕೊಂಡೊಯ್ದರೆ ತೊಂದರೆ ಏನಿಲ್ಲ’ ಎಂದು ಹೇಳಿದ. ಕಾರಣವಿಲ್ಲದೆ ಹಾಗೇಕೆ ಹೇಳಿದ ಎಂದು ನಮಗೆ ಸ್ಪಷ್ಟವಾಗಲಿಲ್ಲ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry