ಮಂಗಳವಾರ, ಮೇ 24, 2022
30 °C

ಸುಳ್ಳು ಹೇಳುವ ಕಷ್ಟ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಇತ್ತೀಚಿಗೆ ನನ್ನ ಸ್ನೇಹಿತ ಉಮೇಶ ಮಹಾಬಲಶೆಟ್ಟಿಯವರು ಹೇಳಿದ ಕಥೆ ಇದು.

ನಾಲ್ಕು ಜನ ಹುಡುಗರು ಹಳ್ಳಿಯಲ್ಲಿ ಶಾಲೆ ಮುಗಿಸಿ ಕಾಲೇಜು ಕಲಿಯಲೆಂದು ಪಟ್ಟಣಕ್ಕೆ ಬಂದರು. ಎಲ್ಲರೂ ಸೇರಿ ಒಂದು ದೊಡ್ಡ ಕೊಠಡಿಯನ್ನು ಹಿಡಿದು ವಾಸವಾಗಿದ್ದರು. ಹತ್ತಿರದ ಹೊಟೆಲ್ಲಿನಲ್ಲಿ ಊಟ. ವಾರಕ್ಕೊಂದು ದಿನ ಹಳ್ಳಿಯಿಂದ ಭರ್ಜರಿಯಾದ ಊಟ ಬರುತ್ತಿತ್ತು. ಸಣ್ಣ ಊರಿನಲ್ಲೇ ಹುಟ್ಟಿ ಬೆಳೆದ ಹುಡುಗರಿಗೆ ಪಟ್ಟಣ ಆಕರ್ಷಕವಾಗಿ ಕಾಣುವುದಿಲ್ಲವೇ? ತುಂಬ ಆಕರ್ಷಕವಾಗಿ ಕಂಡಿತು. ಮನಸ್ಸನ್ನು ಸೆಳೆಯಿತು.

ಕಾಲಕಾಲಕ್ಕೆ ಸರಿಯಾದ ಊಟ, ತಿಂಡಿ, ಮನರಂಜನೆಗೆ ಬೇಕಾದಷ್ಟು ಹಾದಿಗಳು ದೊರಕಿದ್ದಲ್ಲದೇ ಮತ್ತು ಮನೆಯಿಂದ ಕೇಳಿದಷ್ಟು ದುಡ್ಡು ಸಿಗುತ್ತಿತ್ತು. ತಮ್ಮ ಮಕ್ಕಳು ದೊಡ್ಡ ನಗರದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದೆಷ್ಟು ಕಷ್ಟಪಡುತ್ತಿದ್ದಾರೋ ಎಂದು ಕನಿಕರದಿಂದ ತಂದೆ ತಾಯಿಯರು ತಮ್ಮ ವೈಯಕ್ತಿಕ ಅಪೇಕ್ಷೆಗಳನ್ನು ಒತ್ತೆ ಇಟ್ಟು ಕೇಳಿದಷ್ಟು ಹಣ ಕಳುಹಿಸುತ್ತಿದ್ದರು. ಹುಡುಗರಿಗೆ ವ್ಯವಸ್ಥೆ ತುಂಬ ಆರಾಮವಾಗಿದ್ದರಿಂದ ಸಾಧ್ಯವಾದಾಗಲೊಮ್ಮೆ ಕಾಲೇಜಿಗೆ ಹೋಗಿ ಬರುತ್ತಿದ್ದರು. ಓದು ಬಹಳ ಹಿಂದೆಯೇ ಉಳಿಯಿತು.

ವರ್ಷ ಮುಗಿಯುತ್ತ ಬಂದಂತೆ ಹುಡುಗರಿಗೆ ಭಯ ಪ್ರಾರಂಭವಾಯಿತು. ಯಾಕೆಂದರೆ ವರ್ಷದ ಕೊನೆಗೆ ಪರೀಕ್ಷೆ ಬರುತ್ತದಲ್ಲ? ಓದಿದ್ದರೆ ತಾನೇ ಪರೀಕ್ಷೆಯಲ್ಲಿ ಬರೆಯುವ, ಪಾಸಾಗುವ ಚಿಂತೆ? ಈ ಪರೀಕ್ಷೆ ಕಾಲೇಜು ಮಟ್ಟದ ಪರೀಕ್ಷೆಯಾದರೂ ಪಾಸಾಗದಿದ್ದರೆ ಮನೆಯವರಿಗೆಲ್ಲ ಗೊತ್ತಾಗಿ ಅಪಮಾನವಾಗುತ್ತದೆ. ಅದರಲ್ಲೂ ಗಣಿತ ಪರೀಕ್ಷೆಯಲ್ಲಿ ಪಾಸಾಗುವುದು ಸಾಧ್ಯವಿಲ್ಲ. ಮತ್ತೆ ಮುಂದಿನ ವರ್ಷ ಪಾಲಕರು ಪಟ್ಟಣಕ್ಕೆ ಕಳುಹಿಸಲು ಒಪ್ಪಲಿಕ್ಕಿಲ್ಲ. ನಾಲ್ವರೂ ಕುಳಿತು ಈ ಸಮಸ್ಯೆಯಿಂದ ಪಾರಾಗುವ ಬಗ್ಗೆ ಚಿಂತಿಸಿದರು.

ಅವರಿಗೊಂದು ಸುಂದರ ಅಲೋಚನೆ ಬಂದಿತು. ಅದನ್ನೇ ಕಾರ್ಯರೂಪಕ್ಕೆ ತರಲು ನಿರ್ಧರಿಸಿದರು. ಗಣಿತ ವಿಷಯದ ಪರೀಕ್ಷೆ ಪ್ರಾರಂಭವಾಗುವ ದಿನ ಬೆಳಿಗ್ಗೆ ಎಲ್ಲರೂ ತಮ್ಮ ಕೈಗಳಿಗೆ, ಬಟ್ಟೆಗಳಿಗೆ, ಅಲ್ಲಲ್ಲಿ ಮುಖಕ್ಕೆ ಗ್ರೀಸ್ ಎಣ್ಣೆಯನ್ನು ಹಚ್ಚಿಕೊಂಡರು. ತಲೆ ಕೆದರಿಕೊಂಡು ತುಂಬ ಸುಸ್ತಾದವರಂತೆ ನಡೆದು ಪರೀಕ್ಷೆ ಮುಗಿದ ಮೇಲೆ ಹೋಗಿ ಕಾಲೇಜಿನ ಪ್ರಾಂಶುಪಾಲರನ್ನು ಕಂಡರು. ಇವರ ಅವತಾರವನ್ನು ನೋಡಿ ಪ್ರಾಂಶುಪಾಲರು.  `ಯಾಕ್ರೋ ಏನಾಯ್ತು ನಿಮಗೆ?~ ಎಂದು ಆತಂಕದಿಂದ ಕೇಳಿದರು. ಈ ನಾಲ್ವರಲ್ಲಿ ಒಬ್ಬ ಇಷ್ಟುದ್ದ ಮುಖ ಮಾಡಿಕೊಂಡು  `ಸರ್, ಬಹಳ ಫಜೀತಿಯಾಗಿ ಹೋಯ್ತು. ಪರೀಕ್ಷೆಗೆ ಬರಲೆಂದು ಊರಿನಿಂದ ಟ್ಯಾಕ್ಸಿ ಮಾಡಿಕೊಂಡು ಹೊರಟೆವು. ಮಧ್ಯರಸ್ತೆಯಲ್ಲಿ ಟೈರ್ ಢಬ್ ಎಂದು ಹರಿದುಹೋಯಿತು. ಬೇರೆ ಟೈರ್ ಹಾಕಿದರೆ ಅದರಲ್ಲಿ ಸಾಕಷ್ಟು ಗಾಳಿ ಇಲ್ಲ. ನಾವು ಮೂವರೂ ಆ ಟ್ಯಾಕ್ಸಿಯನ್ನು ಈ ಊರಿನವರೆಗೂ ತಳ್ಳಿಕೊಂಡು ಬಂದೆವು. ಟೈರ್ ಬದಲಾಯಿಸಿ ಸರಿದೂಡುವಾಗ ನಮ್ಮ ಬಟ್ಟೆಗಳೆಲ್ಲ ಕೊಳಕಾಗಿ ಹೋದವು. ಸರ್, ನಾವು ಈಗ ಪಟ್ಟಣ ಮುಟ್ಟಿದ್ದೇ ಹೆಚ್ಚು~ ಎಂದು ತಿರುಗಿ ಗೆಳೆಯರತ್ತ ನೋಡಿದ. ಅವರೂ `ಹೌದು~ `ಹೌದು~ ಎಂದು ತಲೆ ಅಲ್ಲಾಡಿಸಿದರು.

ಪ್ರಾಂಶುಪಾಲರು, `ಆಗಲಿ ಬಿಡ್ರಪ್ಪ, ನಾಳೆ ಒಂಬತ್ತು ಗಂಟೆಗೆ ಬನ್ನಿ. ಪರೀಕ್ಷೆ ಕೊಡುತ್ತೇನೆ~ ಎಂದರು. ಹುಡುಗರಿಗೆ ಖುಷಿಯಾಯಿತು. ಹೇಗಿದ್ದರೂ ಪರೀಕ್ಷೆ ಮುಗಿದಿದ್ದರಿಂದ ಎಲ್ಲ ಪ್ರಶ್ನೆಗಳೂ ತಿಳಿದಿದ್ದವು. ಮರುದಿನ ಹುಡುಗರು ತಯಾರಾಗಿ ಬಂದರು. ಪ್ರಾಂಶುಪಾಲರು ಹೇಳಿದರು. `ನಿಮ್ಮ ಪ್ರಶ್ನೆ ಪತ್ರಿಕೆ ಸಿದ್ಧವಿದೆ. ಆದರೆ ಒಂದು ಕರಾರು. ನೀವು ನಾಲ್ಕೂ ಜನ ನಾಲ್ಕು ಬೇರೆ ಬೇರೆ ಕೋಣೆಗಳಲ್ಲಿ ಕುಳಿತುಕೊಳ್ಳಲು ವ್ಯವಸ್ಥೆಯಾಗಿದೆ. ನೀವು ಉತ್ತರಿಸಬೇಕಾದದ್ದು ಕೇವಲ ಎರಡೇ ಪ್ರಶ್ನೆ~ ಹುಡುಗರು ಬೇರೆ ಕೋಣೆಗಳಿಗೆ ಹೋದರು. ಪ್ರಶ್ನೆ ಪತ್ರಿಕೆ ತೆಗೆದು ನೋಡಿದರು. ಇದ್ದದ್ದು ಎರಡೇ ಪ್ರಶ್ನೆ 1. ನೀವು ತಳ್ಳಿಕೊಂಡು ಬಂದ ಕಾರಿನ ನಂಬರು ಏನು? 2. ಕಾರಿನ ಯಾವ ಭಾಗದ ಟೈರು ಹರಿದುಹೋಯಿತು?

ಹುಡುಗರಿಗೆ ತಲೆಕಟ್ಟುಹೋಯಿತು. ತಮತಮಗೆ ತೋಚಿದ ಕಾರು ನಂಬರು ಬರೆದರು.

ಒಬ್ಬ ಹಿಂಬದಿಯ ಬಲಭಾಗದ ಟೈರು ಎಂದು ಬರೆದರೆ ಮತ್ತೊಬ್ಬ ಮುಂದಿನ ಎಡಭಾಗದಲ್ಲಿ ಎಂದು ಬರೆದ. ಸುಳ್ಳನ್ನು ಕಂಡರಿಸಿದಾಗ ಆಗುವುದು ಹೀಗೆಯೇ. ಘಟನೆ ಸತ್ಯವಾಗಿದ್ದರೆ ಎಲ್ಲರ ಉತ್ತರವೂ ಒಂದೇ ಆಗಿರುತ್ತಿತ್ತು. ಪ್ರಾಂಶುಪಾಲರಿಗೆ ಇವರು ಆಲಸಿಗಳು ಮಾತ್ರವಲ್ಲ, ಸುಳ್ಳುಗಾರರು ಎಂಬುದು ಖಾತ್ರಿಯಾಗಿ ಶಿಕ್ಷೆ ನೀಡಿ ಊರಿಗೆ ಕಳುಹಿಸಿಬಿಟ್ಟರು.

ಸತ್ಯ ಯಾವಾಗಲೂ ಸುಲಭ. ಒಂದು ಸುಳ್ಳನ್ನು ಮುಚ್ಚಿಕೊಳ್ಳಲು ಸಾಲು ಸಾಲು ಸುಳ್ಳು ಹೇಳಬೇಕಾಗುತ್ತದೆ. ಯಾರಿಗೆ ಯಾವ ಸುಳ್ಳು ಹೇಳಿದೆ ಎಂದು ನೆನಪಿಡಲು ಅಸಾಮಾನ್ಯ ನೆನಪಿನ ಶಕ್ತಿ ಬೇಕು. ಅದರೊಂದಿಗೆ ಸುಳ್ಳನ್ನು ಸತ್ಯದಂತೆ ಹೇಳಲು ತುಂಬ ತಯಾರಿ ಬೇಕು. ಆದರೆ ಸತ್ಯ ಹೇಳಲು ಇದಾವುದೂ ಬೇಡ, ಸ್ವಚ್ಛವಾದ, ಪ್ರಾಮಾಣಿಕವಾದ ಮನಸ್ಸು ಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.