ಸೂಕ್ಷ್ಮಲೋಕದ ಕಹಿಗನಸು ಮತ್ತು ಹೊಂಗನಸು

ಬುಧವಾರ, ಜೂಲೈ 17, 2019
26 °C

ಸೂಕ್ಷ್ಮಲೋಕದ ಕಹಿಗನಸು ಮತ್ತು ಹೊಂಗನಸು

ನಾಗೇಶ್ ಹೆಗಡೆ
Published:
Updated:

ಪಾಶ್ಚಿಮಾತ್ಯ ಜಗತ್ತಿನಲ್ಲಿ ಕಳೆದ ಎರಡು ವಾರಗಳಿಂದ ಎರಡು ಏಕಾಣುಜೀವಿಗಳು (ಬ್ಯಾಕ್ಟೀರಿಯಾ) ತುಮುಲ ಎಬ್ಬಿಸುತ್ತಿವೆ. ಒಂದು, ಮನುಷ್ಯನ ಕರುಳಿನಲ್ಲಿ ವಾಸಿಸುವ `ಇ-ಕೊಲೈ~ ಎಂಬ ಏಕಾಣುಜೀವಿ. ಅದು ಯುರೋಪ್ ಮತ್ತು ಆಸುಪಾಸಿನ 27 ದೇಶಗಳ ಜನತೆಯನ್ನು ಭಯಗಡಲಲ್ಲಿ ಮುಳುಗಿಸಿ ಎತ್ತಿದೆ. ಇನ್ನೊಂದು, ಸಯಾನೊ ಬ್ಯಾಕ್ಟೀರಿಯಾ. ಮಾಲಿನ್ಯವನ್ನು ನುಂಗುತ್ತಲೇ ಡೀಸೆಲ್ ಉತ್ಪಾದಿಸಬಲ್ಲ ಇದು ಇಡೀ ಭೂಮಂಡಲಕ್ಕೇ ಹೊಸ ಆರ್ಥಿಕತೆಯ ಹೊಂಗನಸನ್ನು ಹರಡುತ್ತಿದೆ.ಮೊದಲು ಕರುಳ ಹಿಂಡುವ ಕತೆಯನ್ನು ನೋಡೋಣ. ಎಲ್ಲ ಮನುಷ್ಯರ ಹಾಗೂ ಸ್ತನಿಗಳ ಕರುಳಿನಲ್ಲೂ ವಾಸಿಸುವ ಇ.ಕೊಲೈ (ಎಶರೀಕಿಯಾ ಕೊಲೈ) ಬ್ಯಾಕ್ಟೀರಿಯಾ ಅಂಥ ಅಪಾಯಕಾರಿ ಜೀವಿಯೇನಲ್ಲ. ಶೌಚಾಲಯ ಶುದ್ಧವಿರಬೇಕಷ್ಟೆ. ಬೆಂಗಳೂರಿನ ಅರ್ಧಕ್ಕಿಂತ ಹೆಚ್ಚು ಕೊಳವೆಬಾವಿಗಳ ನೀರಲ್ಲಿ ಅದು ಪತ್ತೆಯಾಗಿದೆ. ನೆಲದಾಳದ ಶಿಲಾ ಪದರಕ್ಕೂ ಕಕ್ಕಸು ನೀರು ಸೇರುತ್ತಿದೆ ಎಂಬುದನ್ನಷ್ಟೇ ಅದು ಸೂಚಿಸುತ್ತದೆ ವಿನಾ ಅದರಿಂದ ಮಹಾ ಸಾಂಕ್ರಾಮಿಕವೇನೂ ಹಬ್ಬಿಲ್ಲ. ಆದರೆ, ಅದರ ಕೆಲವು ಅಪರಾವತಾರಗಳು ಕೆಲವೊಮ್ಮೆ ತೀರ ಕ್ರೂರಿಯಾಗಿಬಿಡುತ್ತವೆ. `ಶಿಗಾಟಾಕ್ಸಿನ್~ ಎಂಬ ನಂಜುರಸವನ್ನು ಸುತ್ತ ಕಕ್ಕುತ್ತ ಅವು ಸೊಪ್ಪು ತರಕಾರಿಯಲ್ಲೊ, ಮಾಂಸದಲ್ಲೊ ಸೇರಿ ನಮ್ಮ ಹೊಟ್ಟೆಗೆ ಹೋದರೆ ರಕ್ತಭೇದಿ, ಮೈಕೈ ನಡುಕ, ನರಸೆಟೆತಕ್ಕೆ ಕಾರಣವಾಗಿ, ಕೊನೆಗೆ ಮೂತ್ರಪಿಂಡದ ಕೆಲಸವನ್ನೂ ಠಪ್ ಮಾಡುತ್ತವೆ.ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಜೂನ್ ಆರಂಭದಲ್ಲಿ ಒಂದೂವರೆ ಸಾವಿರ ಜನರಿಗೆ ತೀವ್ರ ರಕ್ತಭೇದಿ ಕಾಣಿಸಿಕೊಂಡಿತು. ತುರ್ತು ತನಿಖೆ ನಡೆದಾಗಲೇ ಸಾವು ಸಂಭವಿಸತೊಡಗಿತು. ಅತಿಸಾರಕ್ಕೆ ಇ.ಕೊಲೈ ಏಕಾಣುಜೀವಿಯೇ ಕಾರಣವೆಂದೂ ಅದು ಸ್ಪೇನ್ ದೇಶದಿಂದ ಬಂದ ಸಾವಯವ ಸೌತೆಕಾಯಿಗಳಲ್ಲಿ ಅವಿತಿದೆ ಎಂದೂ ವಿಜ್ಞಾನಿಗಳು ಹೇಳಿದರು. ಜತೆಗೆ ಹಸಿಹಸಿ ತಿನ್ನಬಹುದಾದ ಪಾಲಕ್, ಲೆಟಿಸ್, ಟೊಮ್ಯಾಟೊ ಕೂಡ ಅಪಾಯಕಾರಿ ಎಂದು ತಜ್ಞರು ಹೆದರಿಸಿದ್ದರಿಂದ ತರಕಾರಿ ಡೀಲರ್‌ಗಳು ತತ್ತರಿಸಿದರು. ಕಂಡಲ್ಲಿ ಗುಂಡಿ ತೋಡಿ ಸೊಪ್ಪು ತರಕಾರಿಗಳ ದಫನ ಕಾರ್ಯ ನಡೆಯಿತು. ಸ್ಪೇನ್‌ನ ತರಕಾರಿಗಳಿಗೆ ಯುರೋಪ್‌ನ ಎಲ್ಲ ದೇಶಗಳೂ ಅದರಾಚಿನ ರಷ್ಯ, ಆಸ್ಟ್ರೇಲಿಯಾ, ಜಪಾನ್‌ನಲ್ಲೂ ನಿಷೇಧ ಬಂತು. ಲಕ್ಷೋಪಲಕ್ಷ ಪ್ಲಾಸ್ಟಿಕ್ ಬಿಸಿಮನೆಗಳಲ್ಲಿ ತರಕಾರಿ ಬೆಳೆದು ಜಗತ್ತಿಗೆಲ್ಲ ವಿತರಿಸುತ್ತಿದ್ದ ಸ್ಪೇನಿನ ಅಲ್ಮೆರಿಯಾ ಪ್ರಾಂತ್ಯ ತತ್ತರಿಸಿತು. ಇತ್ತ ಸತ್ತವರ ಸಂಖ್ಯೆ ಹದಿನೈದು ದಾಟಿತು. ಹೆಚ್ಚಿನವರೆಲ್ಲ ಮಹಿಳೆಯರೇ ಆಗಿದ್ದರು. ಜರ್ಮನಿಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಯಿತು. ಅಷ್ಟರಲ್ಲಿ, ಕೊಲೆಗಡುಕ ಇ.ಕೊಲೈ ಸೌತೆಕಾಯಿಂದ ಅಲ್ಲ, ಮೊಳಕೆ ಬರಿಸಿದ ಅವರೆ ಕಾಳಿನಿಂದ ಬಂದಿದ್ದು; ಅದೂ ಸ್ಪೇನ್‌ನಿಂದಲ್ಲ, ಜರ್ಮನಿಯದೇ ತೋಟವೊಂದರಿಂದ ಬಂದಿದ್ದು ಎಂಬುದು ಖಚಿತವಾಯಿತು.ಮೊಳಕೆಯಲ್ಲೇ ಚಿವುಟಬಹುದಾಗಿದ್ದ ಸಮಸ್ಯೆ ನೋಡನೋಡುತ್ತ ಹೆಮ್ಮರವಾಯಿತು. ರೋಗಿಗಳ ಸಂಖ್ಯೆ ಮೂರು ಸಾವಿರ ದಾಟಿತು. ಮೂತ್ರಪಿಂಡ ವಿಫಲವಾಗಿ ಆಸ್ಪತ್ರೆ ಸೇರಿದವರ ಸಂಖ್ಯೆ 800 ಮುಟ್ಟಿತು. ಸತ್ತವರ ಸಂಖ್ಯೆ 37ಕ್ಕೇರಿತು. ಆರೋಗ್ಯದ ಬಿಕ್ಕಟ್ಟು, ಆರ್ಥಿಕ ಬಿಕ್ಕಟ್ಟಿನ ಜತೆಗೆ ಈಗ ರಾಜಕೀಯ ಬಿಕ್ಕಟ್ಟೂ ಸೇರಿಕೊಂಡಿತು. ಅಕ್ಕಪಕ್ಕದ ಸ್ಪೇನ್, ಇಟಲಿ, ಫ್ರಾನ್ಸ್ ದೇಶಗಳು ಕುಪಿತಗೊಂಡವು. ತಮಗೆ ಪರಿಹಾರ ಬೇಕೆಂದು ಅಲ್ಲಿನ ರೈತರು ಒತ್ತಾಯಿಸಿದರು.ಪಾಶ್ಚಿಮಾತ್ಯ ಜಗತ್ತಿನಲ್ಲಿ ಇ.ಕೊಲೈ ಆಗಾಗ ಉಗ್ರ ಅವತಾರ ಎತ್ತಿ ಚಿಕ್ಕ ದೊಡ್ಡ ಹಾವಳಿ ಎಬ್ಬಿಸುತ್ತಲೇ ಇರುತ್ತವೆ. ನಂಜನ್ನು  ಕಕ್ಕುವ ಈ ಸೂಕ್ಷ್ಮಜೀವಿ ಆಹಾರ ಸರಪಳಿಗೆ ಸೇರಿದರೆ ಅದರ ನಿವಾರಣೆ ಬಲು ಕಷ್ಟ. ತರಕಾರಿ, ಅಣಬೆ, ಮಾಂಸ ಪದಾರ್ಥಗಳನ್ನು ಪ್ಯಾಕ್ ಮಾಡಿ ಶೀತಲಗೊಳಿಸಿ ದೂರ ಸಾಗಿಸಿ ಎಷ್ಟೊ ದಿನಗಳ ನಂತರ ಬಿಸಿ ಮಾಡಿ ತಿಂದಾಗ ರೋಗದ ಮೂಲ ಹುಡುಕುವುದೇ ಕಷ್ಟ.ಯುರೋಪ್‌ನಲ್ಲಿ ಈಚೆಗೆ ತಾಜಾ ಮೊಳಕೆ, ತಾಜಾ ಸೊಪ್ಪು ತಿನ್ನುವ ಸಾವಯವ ಭಂಜಕರ ಸಂಖ್ಯೆ ಹೆಚ್ಚುತ್ತಿದೆ. ಸಾವಯವ ಸೊಪ್ಪು ತರಕಾರಿ ಬೆಳೆಯುವವರು ಸೆಗಣಿ, ಚರಂಡಿ ರೊಚ್ಚೆಯ ಕಾಂಪೋಸ್ಟ್ ಬಳಸುತ್ತಾರೆ. ಈ ಬಾರಿ ಅವರೆ (ಹುರುಳಿ ಕಾಳು ಅಥವಾ ರಾಜ್‌ಮಾ) ಮೊಳಕೆಯಲ್ಲಿ ಕಾಣಿಸಿಕೊಂಡ `0157:ಎಚ್7~ ತಳಿಯ ಇ.ಕೊಲೈ ಇಂಥ ಸಾವಯವ ಕೃಷಿಯಿಂದಾಗಿಯೇ ಬಂದಿದೆ ಎಂಬುದು ಗೊತ್ತಾಗಿದೆ.ಐರೋಪ್ಯ ಮಾಧ್ಯಮಗಳಲ್ಲಿ ಸಾವಯವ ಎಂದರೆ `ತಿಂದು ಸಾಯುವವ~ ಎಂಬಂಥ ಟೀಕೆ ಬರುತ್ತಿದೆ. ತಮಾಷೆ ಏನೆಂದರೆ, ಇದೇ ಹ್ಯಾಂಬರ್ಗ್ ನಗರದಲ್ಲಿ ಹಸಿಸೊಪ್ಪು ತರಕಾರಿ ಮತ್ತು ಬೆಂದ ಮಾಂಸವನ್ನು ಬ್ರೆಡ್ ಮಧ್ಯೆ ಸೇರಿಸಿ ತಯಾರಿಸುವ ತಿಂಡಿಯೊಂದು `ಹ್ಯಾಂಬರ್ಗರ್~ ಹೆಸರಿನಿಂದ ಜಗತ್ತಿಗೆಲ್ಲ ಪರಿಚಿತವಾಗಿದೆ.ಸೆಗಣಿ, ಸಾವಯವ ಪರಂಪರೆಯೇ ಈ ರೋಗಕ್ಕೆ ಕಾರಣವಾಗಿದ್ದರೆ ನಮ್ಮಲ್ಲಿ ಇದರ ಹಾವಳಿ ಇನ್ನೂ ಜಾಸ್ತಿ ಇರಬೇಕಿತ್ತು. ಏಕಿಲ್ಲ ಎಂಬುದಕ್ಕೆ ಒಂದು ಸ್ವಾರಸ್ಯದ ವಿವರಣೆ ಇದೆ: ಹಾಗೆ ನೋಡಿದರೆ ಮನುಷ್ಯರ ಕರುಳಿನಲ್ಲಿ ವಾಸಿಸುವ ಇ.ಕೊಲೈಗಿಂತ ದನಗಳ ಕರುಳಿನಲ್ಲಿ ವಾಸಿಸುವುದೇ ಹೆಚ್ಚು ಬಲಿಷ್ಠವಾಗಿರುತ್ತದೆ. ಶತಮಾನಗಳಿಂದ ನಮ್ಮ ಜನರು ಸೆಗಣಿ ಬೆರಣಿ ಜತೆ ಸರಸವಾಡುತ್ತ ಬಂದಿದ್ದರಿಂದ `ಭಾರತೀಯರ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಅಷ್ಟೇ ಬಲಿಷ್ಠವಾಗಿದೆ~ ಎನ್ನುತ್ತಾರೆ, ಜರ್ಮನಿಯ ಫ್ರೆಯ್ ವಿವಿಯ ವಿಜ್ಞಾನಿ ಡಾ. ರೋಥಾರ್ ವೀಯ್ಲರ್. ಹಾಗೆಂದು ನಾವು ನಿರಾಳ ಇರುವಂತಿಲ್ಲ. ನಮ್ಮ ನಗರವಾಸಿಗಳ ರೋಗನಿರೋಧಕ ಶಕ್ತಿ ಕುಗ್ಗುತ್ತಿದೆ. ಒಂದೇ ಕಂಪೆನಿ ಇಡೀ ನಗರಕ್ಕೆಲ್ಲ ಸೊಪ್ಪು ತರಕಾರಿ ಪೂರೈಸುವ ವ್ಯವಸ್ಥೆಯೂ ಜನಪ್ರಿಯವಾಗುತ್ತಿದೆ. ರಸ್ತೆ ಬದಿಯ ತರಕಾರಿಯನ್ನು ಆಯಾ ದಿನವೇ ಖರೀದಿಸುವ ಬದಲು ಮಾಲ್‌ಗಳಿಂದ ರಾಶಿರಾಶಿ ಖರೀದಿಸಿ ಫ್ರಿಜ್ ತುಂಬಿಸಿ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ (70 ಡಿಗ್ರಿ ಸೆಲ್ಸಿಯಸ್‌ಗೆ ಬಿಸಿ ಮಾಡಿದರೆ ಇ.ಕೊಲೈ ಸಾಯುತ್ತದೆ. ಸೌತೆಕಾಯಿಯನ್ನು ಬೇಯಿಸುತ್ತಾರೆಯೆ? ಗಿಣ್ಣವನ್ನು ಫ್ರಿಜ್‌ನಿಂದ ತೆಗೆದು ಗಡಿಬಿಡಿಯಲ್ಲಿ ಬೇಯಿಸಿದರೆ ಆಳದಲ್ಲಿ ಕೂತಿದ್ದ ಇ.ಕೊಲೈ ಸಾಯುವುದಿಲ್ಲ). ಚಿಕ್ಕಪುಟ್ಟ ಕಾಯಿಲೆಗೂ ಆಂಟಿ ಬಯಾಟಿಕ್ ಔಷಧ ಸೇವಿಸುತ್ತ, ಸೂಕ್ಷ್ಮಾಣುಗಳ ಬಲವರ್ಧನೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಪಾಶ್ಚಿಮಾತ್ಯ ಜೀವನಶೈಲಿಯೇ ಪರಮೋಚ್ಚ ಶೈಲಿಯೆಂದು ನಂಬಿದವರು ಇಂಥ ಅಪಾಯಗಳಿಗೆ ಸಿದ್ಧರಿರಬೇಕಾಗುತ್ತದೆ.ಈಗ ಸುವಾರ್ತೆಗೆ ಬರೋಣ: ಡೀಸೆಲ್ ಉತ್ಪಾದಿಸಿ ಮನುಕುಲವನ್ನು ಇಂಧನ ಸಂಕಟದಿಂದ ಪಾರು ಮಾಡಬಲ್ಲ ಒಂದು ಸೂಕ್ಷ್ಮಜೀವಿಯ ಕತೆ ಇದು:

ಇಡೀ ಜಗತ್ತೇ ಪೆಟ್ರೋಲಿಯಂ ಇಂಧನದ ಬಲದಿಂದ ಚಲಿಸುತ್ತಿರುವಾಗ, ಅದರಿಂದಾಗಿಯೇ ವಾತಾವರಣಕ್ಕೆ ಅತಿದೊಡ್ಡ ಪ್ರಮಾಣದ ಇಂಗಾಲದ ಭಸ್ಮ ಸೇರುತ್ತಿರುವಾಗ, ಅದರಿಂದಾಗಿಯೇ ಭೂ ತಾಪ ಹೆಚ್ಚುತ್ತ, ಹಿಮಶಿಖರಗಳು ಕರಗುತ್ತ ಬಿಸಿ ಪ್ರಳಯದ ಆರಂಭ ಆಗಿರುವಾಗ, ಸಹಜವಾಗಿ ಬದಲೀ ಇಂಧನಕ್ಕೆ ತೀವ್ರ ಹುಡುಕಾಟ ನಡೆದಿದೆ. ಸೋಯಾ, ಜೋಳ, ಕಬ್ಬು, ತಾಳೆಎಣ್ಣೆಯಂಥ ಆಹಾರದ್ರವ್ಯಗಳಿಂದ ಜೈವಿಕ ಇಂಧನ (ಬಯೊ ಡೀಸೆಲ್) ಉತ್ಪಾದಿಸುವ ಕೆಲಸ ಭರದಿಂದ ನಡೆದಿದೆ. ಆದರೆ ಆಹಾರವನ್ನೇ ಇಂಧನವನ್ನಾಗಿ ಉರಿಸುವುದರಿಂದಲೇ ಎಲ್ಲ ದೇಶಗಳಲ್ಲಿ ಆಹಾರದ ಬೆಲೆ ತೀವ್ರ ಏರುತ್ತಿದೆ. `ಬಯೊಡೀಸೆಲ್ ಉತ್ಪಾದನೆ ನಿಲ್ಲಿಸಿ~ ಎಂದು ಮೊನ್ನೆ ಇಪ್ಪತ್ತು ರಾಷ್ಟ್ರಗಳು ಒಕ್ಕೊರಲಿನ ಕೂಗೆಬ್ಬಿಸಿವೆ. ಹಾಗಾಗಿ ಬದಲೀ ಇಂಧನಕ್ಕೆ ಬದಲಿಯಾಗಿ ಇನ್ನೊಂದು ಬಗೆಯ ಇಂಧನದ ಹುಡುಕಾಟ ನಡೆದಿದೆ. ಬಿಸಿಲಶಕ್ತಿ, ಗಾಳಿಶಕ್ತಿ, ಅಲೆಶಕ್ತಿ, ಭೂ ಶಕ್ತಿಗಳಿಂದ ವಿದ್ಯುತ್ ಉತ್ಪಾದನೆ ನಡೆದಿದೆಯಾದರೂ ಮೋಟಾರು ವಾಹನಗಳಿಗೆ ದ್ರವರೂಪಿ ಬಯೊ ಡೀಸೆಲ್ ಅಥವಾ ಬಯೊ ಪೆಟ್ರೋಲ್ ಬೇಕೇಬೇಕು. ಅದರ ಕುರಿತು ಸಂಶೋಧನೆಗೆ ಪೈಪೋಟಿಯಲ್ಲಿ ನಡೆಯುತ್ತಿದೆ.ನೀರಲ್ಲಿ ಬೆಳೆಯುವ ಹಸಿರುನೀಲಿ ಪಾಚಿಯಿಂದಲೂ ಡೀಸೆಲ್ ಉತ್ಪಾದನೆ ಸಾಧ್ಯವೆಂದು ಹದಿನೈದು ವರ್ಷಗಳ ಹಿಂದೆಯೇ ಗೊತ್ತಾಗಿತ್ತು. ಆದಷ್ಟು ಕಡಿಮೆ ನೀರಿನಲ್ಲಿ ಆದಷ್ಟು ಜಾಸ್ತಿ ಪಾಚಿಯನ್ನು ಬೆಳೆಯಲೆಂದು ನಾನಾ ಬಗೆಯ ತಾಂತ್ರಿಕ ಸರ್ಕಸ್‌ಗಳು ನಡೆದವು. ಉದಾಹರಣೆಗೆ, ಏನೂ ಬೆಳೆಯದ ಮರುಭೂಮಿಯಲ್ಲಿ ಮೈಲುದ್ದದ ಸಾವಿರಾರು ಪಾರದರ್ಶಕ ಟ್ಯೂಬ್‌ಗಳನ್ನು ಹಾಸಬೇಕು. ಅವುಗಳ ಒಳಗೆ ಪಾಚಿಯನ್ನೂ ನೀರನ್ನೂ ಒತ್ತಡದಿಂದ ತಳ್ಳುತ್ತಿದ್ದರೆ, ಪಾಚಿ ಬಿಸಿಲನ್ನು ಹೀರುತ್ತಲೇ ಚಲಿಸುತ್ತ ಕೊಳವೆಯ ಕೊನೆಯಲ್ಲಿ ರಾಶಿರಾಶಿ ಬೀಳುತ್ತಿರುತ್ತದೆ. ಅಲ್ಲಿ ಅದನ್ನು ಹಿಂಡಿ ತೈಲ ತೆಗೆಯಬಹುದು. ವಿಧವಿಧ ವಿಧಾನಗಳಲ್ಲಿ ಇದನ್ನು ಉತ್ಪಾದಿಸಿ, ರೇಸ್ ಕಾರಿನಲ್ಲಿ, ಜೆಟ್ ವಿಮಾನದಲ್ಲಿ ತುಂಬಿಸಿ ಬಳಸಿ ನೋಡಿದ್ದೂ ಆಗಿದೆ. ತೀರ ದುಬಾರಿಯೆಂದು ಸದ್ಯ ಪಕ್ಕಕ್ಕಿಟ್ಟಿದ್ದೂ ಆಗಿದೆ.ಇತ್ತ ಇವೆಲ್ಲ ನಡೆಯುತ್ತಿದ್ದಾಗ, ಸಯಾನೊ ಬ್ಯಾಕ್ಟೀರಿಯಾ ಎಂಬ ಪುರಾತನ ಏಕಾಣುಜೀವಿಯತ್ತ ಕೆಲವರ ದೃಷ್ಟಿ ಹರಿಯಿತು. ಈ ಬಡಜೀವಿ 350 ಕೋಟಿ ವರ್ಷಗಳ ಹಿಂದೆ ವಾಯುಮಂಡಲದ ತುಂಬೆಲ್ಲ ಇಂಗಾಲದ ಡೈಆಕ್ಸೈಡ್ (ಸಿಓಟು) ತುಂಬಿದ್ದಾಗ ಅದನ್ನು ಹೀರಲೆಂದೇ ಅವತರಿಸಿತ್ತು. ಪಾಚಿಗಿಂತ ಚಿಕ್ಕದಾಗಿ, ಸೂಕ್ಷ್ಮದರ್ಶಕದಲ್ಲಿ ಹಸುರು ಮಣಿಮಾಲೆಯಂತೆ ಕಾಣುವ ಇದು ಸಿಓಟುವನ್ನು ಹೀರುತ್ತಲೇ ತುಸು ಎಣ್ಣೆಯನ್ನು ಉತ್ಪಾದಿಸುತ್ತ, ವಾಯುಮಂಡಲಕ್ಕೆ ಆಮ್ಲಜನಕವನ್ನು ಸೇರಿಸುತ್ತದೆ.ಪುರಾತನ ಕಾಲದಲ್ಲಿ ಸಕಲ ಸಮುದ್ರಗಳನ್ನೂ ಆವರಿಸಿದ್ದ ಇದು, ವಾಯುಮಂಡಲದ ಇಂಗಾಲವನ್ನು ಹೀರುತ್ತ ಸಾಗರತಳಕ್ಕೆ ಸೇರಿ ಪೆಟ್ರೋಲಿಯಂ ದ್ರವವಾಗಿ ಭೂಗರ್ಭದಲ್ಲಿ, ಕಾಲಗರ್ಭದಲ್ಲಿ ಅಡಗಿಸಿ ಇಟ್ಟಿತ್ತು. ಆಧುನಿಕ ಮಾನವ ಅದನ್ನೆಲ್ಲ ಹೊರಕ್ಕೆ ತೆಗೆದು ಉರಿಸಿ ಮತ್ತೆ ಇಂಗಾಲವನ್ನು ವಾಯುಮಂಡಲಕ್ಕೆ ಸೇರಿಸುತ್ತಿದ್ದಾಗ ಈ ಪುರಾತನ ಜೀವಿ ಅದನ್ನೆಲ್ಲ ತೆಪ್ಪಗೆ ನೋಡುತ್ತ, ತನ್ನ ಪೂರ್ವಜರ ಕೆಲಸವೆಲ್ಲ ನೀರಲ್ಲಿ ಹೋಮ ಮಾಡಿದಂತಾಯಿತೆಂದು ವ್ಯಥಿಸುತ್ತ ಕೂತಿದ್ದುವೇನೊ.ಈಗ ಅತ್ಯಾಧುನಿಕ ಮಾನವ ಬಂದ. ಸಯಾನೊ ಬ್ಯಾಕ್ಟೀರಿಯಾದ ವಂಶವಾಹಿ ಡಿಎನ್‌ಎಯನ್ನು ಬಿಚ್ಚಿ ನೋಡಿದ. ಅದರಲ್ಲಿ ಎಣ್ಣೆ ಉತ್ಪಾದನೆಯನ್ನು ಪ್ರಚೋದಿಸಬಲ್ಲ ಗುಣಾನು (ಜೀನ್) ಯಾವುದೆಂದು ನೋಡಿದ. ಅದನ್ನೇ ನಕಲು ಮಾಡಿ ಅದರದ್ದೇ ಡಿಎನ್‌ಎಗೆ ಸೇರಿಸುತ್ತ ಹೋದ. ಮೂಲ ತಳಿಗಿಂತ ಮೂರು ಪಟ್ಟು ಹೆಚ್ಚು ತೈಲವನ್ನು ಸ್ರವಿಸಬಲ್ಲ ಹೊಸ ತಳಿಯನ್ನು ಸೃಷ್ಟಿಸಿದ.ಸೋಯಾ ಅಥವಾ ಜೋಳದ ಕಾಳುಗಳು ಸೂರ್ಯನ ಶಕ್ತಿಯ ಕೇವಲ ಶೇ.1ರಷ್ಟನ್ನು ಇಂಧನ ತೈಲವನ್ನಾಗಿ ಪರಿವರ್ತಿಸುತ್ತವೆ. ನೀಲಿಹಸಿರು ಪಾಚಿಗಳು ಶೇಕಡಾ 5ರಷ್ಟು; ಸಯಾನೊ ಬ್ಯಾಕ್ಟೀರಿಯಾ ಶೇ. 10ರಷ್ಟು ಬಿಸಿಲನ್ನು ತೈಲರೂಪಕ್ಕೆ ತರುತ್ತವೆ.ಸಯಾನೊ ತೈಲದ  ಉತ್ಪಾದನೆಯೂ ಸುಲಭ. ಬಿಸಿಲು ಬೀಳುವಲ್ಲಿ ದೊಡ್ಡ ಟ್ಯಾಂಕ್ ಕಟ್ಟಿಸಿ, ನೀರು ತುಂಬಿಸಿ ಈ ಜೀವಿಯ ಬೀಜಾಣುವನ್ನು ಬಿತ್ತನೆ ಮಾಡಿ. ಪಕ್ಕದಲ್ಲಿ ಇಂಗಾಲದ ಡೈಆಕ್ಸೈಡನ್ನು ಹೊರಹಾಕುವ ಕಾರ್ಖಾನೆ ಇದ್ದರಂತೂ ಇನ್ನೂ ಒಳ್ಳೆಯದು. ಅಲ್ಲಿನ ಹೊಗೆ ಕೊಳವೆಯನ್ನು ಈ ಟ್ಯಾಂಕ್‌ನೊಳಗೆ ನುಗ್ಗಿಸಿ. ಅನೇಕ ಕೆಲಸಗಳು ಏಕಕಾಲಕ್ಕೆ ಆಗುತ್ತವೆ; ಕಾರ್ಖಾನೆಗಳ ವಾಯುಮಾಲಿನ್ಯ ತಗ್ಗುತ್ತದೆ.ಸಿಓಟು ಬದಲಿಗೆ ಆಮ್ಲಜನಕ ಸಿಗುತ್ತದೆ. ಈಗಿನ ಶೇ. 20ರಷ್ಟು ಅಲ್ಪ ವೆಚ್ಚದಲ್ಲಿ ಡೀಸೆಲ್ ಸಿಗುತ್ತದೆ. ಬಿಸಿಲು ಚೆನ್ನಾಗಿದ್ದರೆ ಎಕರೆಗೆ ಸುಮಾರು 50 ಸಾವಿರ ಲೀಟರ್ ಡೀಸೆಲ್ ಉತ್ಪಾದಿಸಬಹುದು.ನಿಲ್ಲಿ. ಟ್ಯಾಂಕ್ ಕಟ್ಟಿಸಲು ಈಗಲೇ ಧಾವಿಸಬೇಡಿ. ಸಯಾನೊ ಜೀವಿಯ ಪೇಟೆಂಟ್ ಎಲ್ಲ ಪೆಟ್ರೊದೊರೆಗಳ ಮುಷ್ಟಿಯಲ್ಲೇ ಇದೆ. ನಾಳೆ ಅವರೇ ನಮ್ಮ ಬಿಸಿಲನಾಡಿಗೆ, ರೈತರ ಭೂಮಿಗೆ ಲಗ್ಗೆ ಇಡುತ್ತಾರೆ. ಡೀಸೆಲ್ ಉತ್ಪಾದನೆಯ ನೆಪದಲ್ಲಿ ಜಾಸ್ತಿ ಕೊಳೆ ಕಕ್ಕುವ ಕಾರ್ಖಾನೆಗಳನ್ನೂ ಬೇಕಿದ್ದರೆ ಆಮದು ಮಾಡಿಕೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry