ಸೂಕ್ಷ್ಮ ಸುಳಿವಿನಿಂದ ಪತ್ತೆಯಾದ ಅಪರೂಪದ ಕೇಸು

7

ಸೂಕ್ಷ್ಮ ಸುಳಿವಿನಿಂದ ಪತ್ತೆಯಾದ ಅಪರೂಪದ ಕೇಸು

Published:
Updated:

ಕೇಸುಗಳ ಪತ್ತೆ, ಅದ್ಭುತವಾದ ತನಿಖೆಗೆ ಈ ಹಿಂದೆ ನಾನು ಕೆಲವು ಪ್ರಕರಣಗಳ ಉದಾಹರಣೆಗಳನ್ನು ಕೊಟ್ಟಿದ್ದೇನೆ. ಮೊನ್ನೆ ಇದೇ ವಿಷಯವಾಗಿ ಆಪ್ತರೊಡನೆ ಚರ್ಚಿಸುತ್ತಿರುವಾಗ ಇನ್ನೊಂದು ಪ್ರಕರಣ ನೆನಪಿಗೆ ಬಂದಿತು. ಅದು ಸಾಂದರ್ಭಿಕ ಸಾಕ್ಷಿಯ ಮಹತ್ವ ಕುರಿತ ಕೇಸು. ಪೊಲೀಸರು ನಿಷ್ಠೆಯಿಂದ ಕೇಸಿಗೆ ಅಗತ್ಯವಿರುವ ಸಾಕ್ಷಿಗಳನ್ನು ಕಲೆಹಾಕಿದ ಹೊರತಾಗಿಯೂ ನ್ಯಾಯಾಲಯದಲ್ಲಿ ಆರೋಪಿಗಳು ಖುಲಾಸೆ ಗೊಂಡಾಗ ನಿರಾಸೆಯಾಗುವುದು ಸಹಜ. ಖುಲಾಸೆಗೊಂಡವರಲ್ಲಿ ಅಪರಾಧಿಗಳಿದ್ದಾರೆ ಎಂಬುದು ತನಿಖೆ ನಡೆಸಿದ ಪೊಲೀಸರಿಗೆ ಸ್ಪಷ್ಟವಾಗಿ ಗೊತ್ತಿದ್ದೂ ಏನೂ ಮಾಡಲಾಗದ ಅನಿವಾರ್ಯತೆ ಇರುತ್ತದೆ.ಮೊನ್ನೆ ನೆನಪಿಗೆ ಬಂದ ಕೇಸು ತುಂಬಾ ಭಿನ್ನವಾದದ್ದು. ಎಷ್ಟೋ ಪೊಲೀಸರಿಗೆ ತನಿಖೆ ನಡೆಸಲು ಉಪಯುಕ್ತವಾದದ್ದು ಕೂಡ ಹೌದು.ಪಶ್ಚಿಮಬಂಗಾಳದ ಕೇಸು ಅದು. ಬಹಳ ವರ್ಷಗಳ ಹಿಂದೆ ನಡೆದ ಘಟನೆ. ಮಹಿಳೆಯ ಶವದ ಬಿಡಿಬಿಡಿ ಭಾಗಗಳು ಐದಾರು ಕಡೆ ಸಿಕ್ಕವು. ಮುಂಗೈ, ಕಾಲುಗಳು, ಕೈಯ ಒಂದು ತುಂಡು ಹೀಗೆ ಐದು ದಿನಗಳ ಅಂತರದಲ್ಲಿ ಅಂಗಾಂಗಗಳ ತುಂಡುಗಳು ಸಿಕ್ಕವು. ಎಲ್ಲಾ ಅಂಗಾಂಗಗಳೂ ಒಬ್ಬ ಮಹಿಳೆಯದ್ದೇ ಎಂಬುದು ಪೊಲೀಸರಿಗೆ ಸ್ಪಷ್ಟವಾಯಿತು.ಹೀಗೆ ಶವದ ಅಂಗಾಂಗಳು ಸಿಕ್ಕಾಗ ಯಾವುದಾದರೂ ಠಾಣೆಯಲ್ಲಿ ಕಾಣೆಯಾದವರ ಬಗ್ಗೆ ದೂರು ದಾಖಲಾಗಿದೆಯೇ ಎಂದು ಗಮನಿಸುವುದು ಸಹಜ. ಇಲ್ಲೂ ಪೊಲೀಸರು ಎಲ್ಲಾ ಠಾಣೆಗಳಿಗೂ ಫೋನ್ ಮಾಡಿ, ಕಾಣೆ ಯಾಗಿರುವವರ ಮಾಹಿತಿಯನ್ನೆಲ್ಲಾ ತರಿಸಿ ಕೊಂಡರು. ವಿಧಿ ವಿಜ್ಞಾನ ಪ್ರಯೋಗಾಲಯ ದವರು ಸಿಕ್ಕಿದ್ದ ದೇಹದ ಬಿಡಿ ಭಾಗಗಳನ್ನು ಪರೀಕ್ಷಿಸಿ ಕೊಲೆಯಾದ ಮಹಿಳೆಯ ವಯಸ್ಸನ್ನು ಅಂದಾಜು ಮಾಡಿದರು. ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಪರಿಶೀಲಿಸಿದಾಗ, ಒಂದು ಠಾಣೆಯಲ್ಲಿ ಕಾಣೆಯಾದ ಒಬ್ಬ ಮಹಿಳೆಯದ್ದೇ ದೇಹದ ಅಂಗಾಂಗಳನ್ನು ಸಿಕ್ಕ ಬಿಡಿ ಭಾಗಗಳು ಹೋಲುತ್ತಿದ್ದವು.ಕಾಣೆಯಾದ ಮಹಿಳೆ ಯಾರು ಎಂಬುದನ್ನು ಪತ್ತೆಹಚ್ಚಿ ಪೊಲೀಸರು ತನಿಖೆ ಪ್ರಾರಂಭಿಸಿದರು. ಕೊಲೆಯಾಗಿದ್ದ ಮಹಿಳೆಗೆ ಒಬ್ಬ ವೈದ್ಯನ ಜೊತೆ ಅನೈತಿಕ ಸಂಬಂಧವಿತ್ತೆಂಬ ಅನುಮಾನ ಆಪ್ತೇಷ್ಟರಿಂದ ವ್ಯಕ್ತವಾಯಿತು. ಆ ವೈದ್ಯ ಪ್ರತಿಷ್ಠಿತ. ಹಾಗಾಗಿ ಏಕಾಏಕಿ ಅವನ ಮನೆಗೆ ನುಗ್ಗಿ ಪ್ರಶ್ನಿಸುವುದು ಕಷ್ಟವಿತ್ತು. ತನಿಖೆ ನಡೆಸುತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ತುಂಬಾ ಚಾಣಾಕ್ಷರಾಗಿದ್ದರು. ಅವರು ಸರ್ಚ್ ವಾರೆಂಟ್ ಪಡೆದುಕೊಂಡು ಆ ವೈದ್ಯರ ಮನೆಗೆ ಪೊಲೀಸ್ ತಂಡದ ಸಮೇತ ಹೋದರು. ಮನೆಯನ್ನೆಲ್ಲಾ ಹುಡುಕಿಸಿದರು. ಕೇಸಿಗೆ ಅಗತ್ಯವಿದ್ದ ಯಾವ ಸಾಕ್ಷಿಯೂ ಸಿಗಲಿಲ್ಲ. ತಾವು ಮನೆಗೆ ಯಾವ ಸುದ್ದಿಪತ್ರಿಕೆ ತರಿಸುತ್ತೀರಿ ಎಂದು ಆ ವೈದ್ಯರನ್ನು ಪೊಲೀಸ್ ಅಧಿಕಾರಿ ಕೇಳಿದರು. `ಅಮೃತ್ ಬಜಾರ್~ ಪತ್ರಿಕೆ ಎಂಬ ಉತ್ತರ ವೈದ್ಯರಿಂದ ಬಂತು. ಹಳೆಯ ಪತ್ರಿಕೆಗಳನ್ನೆಲ್ಲಾ ಜೋಡಿಸಿಟ್ಟ ಜಾಗ ತೋರಿಸುವಂತೆ ಕೇಳಿಕೊಂಡರು.ವೈದ್ಯರು ತೋರಿಸಿದ್ದೇ ತಡ ಅಲ್ಲಿದ್ದ ಅಷ್ಟೂ ಪತ್ರಿಕೆಗಳನ್ನು ಮಹಜರು ಮಾಡಿ, ವಶಕ್ಕೆ ತೆಗೆದುಕೊಂಡರು. ಆ ಪತ್ರಿಕೆಗಳನ್ನೇ ಸಾಂದರ್ಭಿಕ ಸಾಕ್ಷಿ ಎಂದು ಪರಿಗಣಿಸಿದರು. ತಂಡದಲ್ಲಿದ್ದ ಇತರರಿಗೆ ಆಶ್ಚರ್ಯ. ಹಳೆಯ ಪತ್ರಿಕೆಗಳಲ್ಲಿ ಯಾವ ಸುಳಿವು ಸಿಕ್ಕಿದೆಯೋ ಎಂದು ಅನೇಕರು ಕಕ್ಕಾಬಿಕ್ಕಿಯಾದರು.ಮಹಿಳೆಯ ಶವದ ಅಂಗಾಂಗಗಳನ್ನು ಬಿಸಾಡುವ ಮೊದಲು ಅವನ್ನು ಒಂದು ದಿನಪತ್ರಿಕೆಯ ತುಂಡಿನಲ್ಲಿ ಸುತ್ತಿ, ಆಮೇಲೆ ಪ್ಲಾಸ್ಟಿಕ್ ಕವರ್‌ಗೆ ಹಾಕಲಾಗಿತ್ತು. ಅಂಗಾಂಗಗಳನ್ನು ವಶಪಡಿಸಿಕೊಂಡ ನಂತರ ಅದನ್ನು ಸುತ್ತಿದ್ದ ಪತ್ರಿಕೆಯ ತುಂಡುಗಳನ್ನೂ ತನಿಖಾಧಿಕಾರಿ ಜತನವಾಗಿ ಇಟ್ಟುಕೊಂಡಿದ್ದರು. ಮಹಜರು ಮಾಡಿದ ಹಳೆಯ ಪತ್ರಿಕೆಗಳ ಕಟ್ಟಿನಲ್ಲಿ ಯಾವ್ಯಾವ ಪತ್ರಿಕೆಗಳನ್ನು ಹರಿಯಲಾಗಿದೆ ಎಂಬುದನ್ನು ಗಮನಿಸಿದರು. ಅಲ್ಲಿ ಯಾವ್ಯಾವ ಪತ್ರಿಕೆಗಳನ್ನು ಹರಿಯಲಾಗಿತ್ತೋ ಅವನ್ನೆಲ್ಲಾ ಪ್ರತ್ಯೇಕವಾಗಿ ಇಟ್ಟರು.

 

ಹರಿದ ತುಂಡುಗಳೆಲ್ಲಾ ಶವದ ಅಂಗಾಂಗಗಳ ಮೇಲೆ ಸಿಕ್ಕಿದ್ದವು. ಈ ಮುಖ್ಯವಾದ ಸಾಕ್ಷ್ಯ ಹಾಗೂ ಇನ್ನಿತರ ಸಾಕ್ಷ್ಯಗಳಿಂದಾಗಿ ಆ ವೈದ್ಯನೇ ಕೊಲೆ ಮಾಡಿದ್ದಾನೆ ಎಂಬ ಅನುಮಾನ ಬಲವಾಯಿತು. ನ್ಯಾಯಾಲಯದ ಮುಂದೆ ಇದನ್ನೇ ಸಾಂದರ್ಭಿಕ ಸಾಕ್ಷಿಯಾಗಿ ತನಿಖಾಧಿಕಾರಿ ಇಟ್ಟರು. ಕೊಲೆ ಮಾಡಿದ್ದ ವೈದ್ಯರಿಗೆ ಜೀವಾವಧಿ ಶಿಕ್ಷೆಯಾಯಿತು.ತನಿಖೆಯ ಸೂಕ್ಷ್ಮಗಳನ್ನು ಕುರಿತು ನಾನು ಅಭ್ಯಾಸ ಮಾಡುವಾಗ ಈ ಕೇಸನ್ನು ಓದಿ ತಿಳಿದುಕೊಂಡಿದ್ದೆ. ಇದು ಬಹಳ ಹಳೆಯ ಪ್ರಕರಣ. ತನಿಖಾಧಿಕಾರಿ ಸೂಕ್ಷ್ಮಮತಿಯಾಗಿದ್ದರೆ ಹೇಗೆ ಕಷ್ಟದ ಕೇಸುಗಳಲ್ಲೂ ನ್ಯಾಯ ದಕ್ಕಿಸಿಕೊಡಬಹುದೆಂಬುದಕ್ಕೆ ಇದು ಉದಾಹರಣೆ. ಸರಳವೆಂಬಂತೆ ಕಂಡರೂ ಇಂಥ ಸಣ್ಣಸಣ್ಣ ಸೂಕ್ಷ್ಮಗಳನ್ನು ಸಾಕ್ಷಿ ಕಲೆಹಾಕುವಾಗ ಪೊಲೀಸರು ಗಮನಿಸಬೇಕಾಗುತ್ತದೆ.

* * *

ನಾನು 2005ರಲ್ಲಿ ಸಿಟಿ ಕ್ರೈಮ್ ಬ್ರ್ಯಾಂಚ್‌ನಲ್ಲಿ (ಸಿಸಿಬಿ) ಕೆಲಸ ಮಾಡುತ್ತಿದ್ದೆ. ಬಸವೇಶ್ವರ ನಗರದಲ್ಲಿ ಒಬ್ಬಾತ ಕಾಣೆಯಾಗಿದ್ದಾನೆಂದೂ ಆತ ಕೊಲೆಯಾಗಿರುವುದರಲ್ಲಿ ಅನುಮಾನವೇ ಇಲ್ಲವೆಂದೂ ಮಾಹಿತಿದಾರರೊಬ್ಬರು ತಿಳಿಸಿದರು. ಬಸವೇಶ್ವರನಗರ ಪೊಲೀಸ್ ಠಾಣೆಗೆ ಫೋನ್ ಮಾಡಿ, ಮಾಹಿತಿದಾರ ಹೇಳಿದ ವಯೋಮಾನದ ಯಾರಾದರೂ ಕಾಣೆಯಾಗಿದ್ದಾರೆಯೇ ಎಂದು ಕೇಳಿದೆ. ಆ ಹೋಲಿಕೆಯ ವ್ಯಕ್ತಿ ಕಾಣೆಯಾಗಿದ್ದಾರೆಂದು ಯಾರೂ ದೂರು ಕೊಟ್ಟಿರಲಿಲ್ಲ. ಆದರೆ, ಮಾಹಿತಿದಾರ ಆತ್ಮ ವಿಶ್ವಾಸದಿಂದ ಹೇಳಿದ್ದನ್ನು ನಿರಾಕರಿಸಿ ಸುಮ್ಮನಾಗುವಂತೆಯೂ ಇರಲಿಲ್ಲ. ಯಾಕೆಂದರೆ, ಕೆಲವು ಕೇಸುಗಳ ಬಗ್ಗೆ ದೂರು ದಾಖಲಾಗಿ ರುವುದಿಲ್ಲ. ಹಾಗಿದ್ದೂ ಅವನ್ನು ಪತ್ತೆ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಈ ಕೇಸು ಪತ್ತೆ ಕಾರ್ಯವನ್ನು ಕಮಿಷನರ್ ಬಸವೇಶ್ವರನಗರ ಪೊಲೀಸ್ ಠಾಣೆಯವರಿಗೆ ವಹಿಸಿದರು. ಅಲ್ಲಿನ ತಂಡ ಚುರುಕಾಗಿ ಕಾರ್ಯಾರಂಭ ಮಾಡಿತು.ಮಾಹಿತಿದಾರನ ಪ್ರಕಾರ- ಕಾಣೆಯಾದವನ ಹೆಂಡತಿಗೆ ಇನ್ನೊಬ್ಬ ವ್ಯಕ್ತಿಯ ಜೊತೆ ಸಂಬಂಧವಿದ್ದು, ಆ ವ್ಯಕ್ತಿಯಿಂದಲೇ ಕಾಣೆ ಯಾದವನು ಕೊಲೆಯಾಗಿದ್ದ. ಈ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಬಸವೇಶ್ವರನಗರ ಪೊಲೀಸರು ಕಾಣೆಯಾದವನ ಪತ್ನಿಯ ಪ್ರಿಯಕರನನ್ನು ಕರೆದು ವಿಚಾರಣೆ ಮಾಡತೊಡಗಿದರು. ಮೊದಲಿಗೆ ಅವನು ಬಾಯಿ ಬಿಡಲಿಲ್ಲ. ಸಾಕಷ್ಟು ಒತ್ತಡ ಹಾಕಿದ ನಂತರ ಅವನು ಕೊಲೆ ಮಾಡಿರುವ ವಿಷಯವನ್ನು ಬಾಯಿಬಿಟ್ಟ.ಗಣೇಶನ ಹಬ್ಬದ ಸಂದರ್ಭದಲ್ಲಿ ಪೂಜೆ ಮಾಡುವ ನೆಪದಲ್ಲಿ ಪ್ರಿಯತಮೆಯ ಗಂಡನನ್ನು ಕರೆದು, ಅವನಿಗೆ ಪ್ರಸಾದ ಕೊಡುವ ಸಂದರ್ಭದಲ್ಲಿ ಹೆಚ್ಚು ನಿದ್ರೆ ಮಾತ್ರೆ ಬೆರೆಸಿದ ಪಾನಕ ಕುಡಿಸಿ ಕೊಂದಿದ್ದ. ಗಂಡನ ಕೊಲೆಯ ಈ ಕೃತ್ಯಕ್ಕೆ ಹೆಂಡತಿಯೇ ಸಾಥ್ ನೀಡಿದ್ದು ಇನ್ನೊಂದು ಅಚ್ಚರಿ. ವ್ಯಕ್ತಿ ಕೊಲೆಯಾದ ಆ ರಾತ್ರಿ ಧೋ ಎಂದು ಮಳೆ ಸುರಿಯುತ್ತಿತ್ತು.ಶವವನ್ನು ಪ್ರಿಯತಮೆ-ಪ್ರಿಯಕರನೇ ತಮ್ಮ ಮಧ್ಯೆ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಹೋಗಿ, ವೃಷಭಾವತಿ ನದಿಯಲ್ಲಿ ಬಿಸಾಡಿ ಬಂದಿದ್ದರು. ಜ್ಞಾನಭಾರತಿಯಿಂದ ಹಿಡಿದು ಭೈರಸಂದ್ರದವರೆಗೆ ವೃಷಭಾವತಿ ನದಿ ಹರಿಯುತ್ತದೆ. ಭೈರಸಂದ್ರದಲ್ಲಿ ಸಣ್ಣ ಅಣೆಕಟ್ಟಿದ್ದು, ಅಲ್ಲಿಂದ ನದಿ ನೀರು ಅರ್ಕಾವತಿಗೆ ಹೋಗುತ್ತದೆ. ಮಳೆ ಸುರಿದ ದಿನವೇ ಶವವನ್ನು ನದಿಗೆ ಬಿಸಾಡಿದ್ದರಿಂದ ಅದು ಬಹಳ ದೂರಕ್ಕೆ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇತ್ತು. ಎಷ್ಟೇ ಹುಡುಕಿದರೂ ಶವ ಮಾತ್ರ ಸಿಗಲೇ ಇಲ್ಲ. ಹಾಗೆಂದು ಬಸವೇಶ್ವರನಗರ ಪೊಲೀಸರು ಕೇಸಿನ ಕುರಿತು ನಿರ್ಲಕ್ಷ್ಯ ತೋರದೆ ಸಾಂದರ್ಭಿಕ ಸಾಕ್ಷಿಗಳನ್ನು ಜಾಣತನದಿಂದ ಕಲೆ ಹಾಕಲಾರಂಭಿಸಿದರು.ಕೊಲೆಗಾರನು ನಿದ್ರೆ ಮಾತ್ರೆಗಳನ್ನು ಕೊಂಡು ತಂದು ಕೊಟ್ಟ ಮೆಡಿಕಲ್ ಸ್ಟೋರ್‌ಗೆ ಹೋಗಿ ಅದು ಯಾವ ಸ್ವರೂಪದ ಔಷಧ, ಅದು ಹೊಟ್ಟೆ ಸೇರಿದ ಎಷ್ಟು ಹೊತ್ತಿನ ನಂತರ ಸಾವು ಸಂಭವಿಸುತ್ತದೆ, ಆರೋಪಿ ಅದನ್ನು ಖರೀದಿಸಿದ್ದು ನಿಜವೇ- ಇಂಥ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರು. ಮೃತಪಟ್ಟವನ ಹೆಂಡತಿ ಹಾಗೂ ಕೊಲೆಗಾರನ ನಡುವೆ ಅನೈತಿಕ ಸಂಬಂಧವಿತ್ತು ಎಂಬುದನ್ನು ಅಕ್ಕ-ಪಕ್ಕದವರ ಅಭಿಪ್ರಾಯವೇ ಪುಷ್ಟೀಕರಿಸಿತು.ತನಿಖೆಯ ದಿಕ್ಕು ಸ್ಪಷ್ಟವಾಗಿ ಗೊತ್ತಿದ್ದರಿಂದ ಶ್ರದ್ಧೆಯಿಂದ ಪೊಲೀಸರು ಸಾಂದರ್ಭಿಕ ಸಾಕ್ಷಿಗಳನ್ನು ಪತ್ತೆಮಾಡಿ, ನ್ಯಾಯಾಲಯಕ್ಕೆ ಒದಗಿಸಿದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದ ನಂತರ ಮುಖ್ಯ ನ್ಯಾಯಮೂರ್ತಿ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿದರು. ಈ ಪ್ರಕರಣದ ತನಿಖೆ ಮಾಡಿದ ಪೊಲೀಸ್ ಇನ್ಸ್‌ಪೆಕ್ಟರ್ ಶಿವಲಿಂಗೇಗೌಡ ಹಾಗೂ ಅವರ ತಂಡದ ಯತ್ನಕ್ಕೆ ಫಲ ಸಿಕ್ಕಂತಾಯಿತು.ಒಂದು ವೇಳೆ ದೂರು ದಾಖಲಾಗಿಲ್ಲ ಎಂಬ ಕಾರಣಕ್ಕೆ ಮಾಹಿತಿದಾರ ನನಗೆ ತಿಳಿಸಿದ ಈ ಪ್ರಕರಣವನ್ನು ನಿರ್ಲಕ್ಷಿಸಿದ್ದರೆ ಕೊಲೆ ಕೇಸೊಂದು ಯಾರಿಗೂ ಗೊತ್ತಾಗದೆ ಮುಚ್ಚಿಹೋಗುತ್ತಿತ್ತು. ದೂರು ದಾಖಲಾದ ಪ್ರಕರಣಗಳಿಗೆ ಸಾಕ್ಷ್ಯಗಳನ್ನು ಹುಡುಕುವುದೇ ಕಷ್ಟ. ಅಂಥಾದ್ದರಲ್ಲಿ ಬಸವೇಶ್ವರನಗರ ಪೊಲೀಸರು ಆಗ ಸಾಕಷ್ಟು ಕಷ್ಟಪಟ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ವೃತ್ತಿಯಲ್ಲಿ ಈ ರೀತಿಯ ಬದ್ಧತೆ ಇದ್ದರಷ್ಟೆ ಜನಮನ್ನಣೆ ಗಳಿಸಬಲ್ಲ ಅನೇಕ ಕೇಸುಗಳನ್ನು ಪತ್ತೆಮಾಡುವುದು ಸಾಧ್ಯ. ಮಾಹಿತಿದಾರರ ಜಾಲ ಪೊಲೀಸರಿಗೆ ಎಷ್ಟು ಮುಖ್ಯ ಎಂಬುದಕ್ಕೂ ಈ ಕೊಲೆ ಪ್ರಕರಣ ಕನ್ನಡಿ ಹಿಡಿಯುತ್ತದೆ.

ಮುಂದಿನ ವಾರ: ಇನ್ನೊಂದು ಅಪಹರಣ ಪ್ರಕರಣ

ಶಿವರಾಂ ಅವರ ಮೊಬೈಲ್ ಸಂಖ್ಯೆ

94483 13066

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry