ಗುರುವಾರ , ನವೆಂಬರ್ 21, 2019
20 °C

ಸೂಕ್ಷ್ಮ ಹಾಗೂ ಅಪರಿಮಿತ

ಗುರುರಾಜ ಕರ್ಜಗಿ
Published:
Updated:

ಇದು ಖಲೀಲ್ ಗಿಬ್ರಾನನ ಮತ್ತೊಂದು ಸುಂದರ ಕಥೆ. ಮೇಲ್ನೋಟಕ್ಕೆ ತುಂಬ ಸರಳವಾದ ಕಥೆ ಎನ್ನಿಸಿದರೂ ಅದು ಒಂದು ದೊಡ್ಡ ಆಧ್ಯಾತ್ಮಿಕ ಸತ್ಯವನ್ನು ತಿಳಿಸುತ್ತದೆ.


ಪರ್ವತದ ಮೇಲಿನ ಹಳ್ಳಿಯಲ್ಲಿ ವಾಸವಾಗಿದ್ದಳು ಆಕೆ. ಆಕೆಗೊಬ್ಬ ಮಗ, ಆಕೆಯ ಏಕಮಾತ್ರ ಪುತ್ರ. ಒಂದು ದಿನ ಮಗುವಿಗೆ ತೀವ್ರ ಜ್ವರ ಬಂತು. ವೈದ್ಯರು ಬಂದರು, ಯಾವ ಪ್ರಯೋಜನವೂ ಆಗದೇ ಮಗುವಿನ ಪ್ರಾಣ ಹೋಯಿತು. ತಾಯಿ ಕುಸಿದು ಕುಳಿತಳು, ಎದೆಬಿರಿಯುವಂತೆ ಅತ್ತಳು. ವೈದ್ಯರ ಕಾಲು ಹಿಡಿದು ಕೇಳಿದಳು,  ಏನಾಯಿತು ನನ್ನ ಮಗನಿಗೆ? ಅಷ್ಟು ಆರೋಗ್ಯವಾಗಿ ಆಡುತ್ತಿದ್ದು, ಹಾಡುತ್ತಿದ್ದ ನನ್ನ ಮಗನ ಹಾಡು ಹೀಗೆ ತಕ್ಷಣ ನಿಂತದ್ದು ಯಾಕೆ? ಯಾರಿಂದ?ವೈದ್ಯ ತಲೆ ತಗ್ಗಿಸಿ ಹೇಳಿದ,  ನಿನ್ನ ಮಗ ಸತ್ತದ್ದು ಜ್ವರದಿಂದ .

ಜ್ವರವೇ? ಜ್ವರ ಎಂದರೇನು? ಅದು ಹೇಗಿರುತ್ತದೆ? ಕೇಳಿದಳು ಆತನ ತಾಯಿ.ಅದನ್ನು ನಾನು ವರ್ಣಿಸಲಾರೆ. ಅದೊಂದು ತೀರ ಕಣ್ಣಿಗೆ ಕಾಣಲಾರದಷ್ಟು ಪುಟ್ಟ ಕ್ರಿಮಿ. ಅದು ಮಗುವಿನ ಶರೀರದಲ್ಲಿ ಸೇರಿಕೊಂಡು ಪ್ರಾಣ ಹೀರಿತು .

ತಾಯಿ ಕನವರಿಸತೊಡಗಿದಳು ,  ತೀರ ಕಣ್ಣಿಗೆ ಕಾಣದಷ್ಟು ಸಣ್ಣದಾದ ವಸ್ತು ನನ್ನ ಮಗನ ಪ್ರಾಣ ಹರಣ ಮಾಡಿತು .ಸಂಜೆಯ ಹೊತ್ತಿಗೆ ಈಕೆಗೆ ಸಾಂತ್ವನ ಹೇಳಲು ಧರ್ಮಗುರುವೊಬ್ಬ ಬಂದ. ಆಕೆಗೆ ಮತ್ತೆ ದು:ಖ ಉಮ್ಮಳಿಸಿ ಬಂದು ಧರ್ಮಗುರುವಿನ ಕಾಲು ಹಿಡಿದುಕೊಂಡು ಕೇಳಿದಳು,  ಗುರುವೇ, ಯಾಕೆ ಹೀಗೆ ನಾನು ನನ್ನ ಒಬ್ಬನೇ ಮಗನನ್ನು ಕಳೆದುಕೊಂಡೆ. ಇದಕ್ಕೆ ಕಾರಣವೇನಾದರೂ ಇದೆಯೇ?ಕರುಣೆ ತುಂಬಿದ ಧರ್ಮಗುರು ಹೇಳಿದ,  ಮಗೂ, ಇದು ಭಗವಂತನ ಇಚ್ಛೆ, ಇದರ ವಿರುದ್ಧವಾಗಿ ನಾವು ಏನೂ ಮಾಡಲಾರೆವುದು:ಖಿ ತಾಯಿ ಬಿಕ್ಕಳಿಸಿ ಕೇಳಿದಳು,  ಗುರುವೇ ಯಾರು ಈ ಭಗವಂತ. ಆತ ಎಲ್ಲಿದ್ದಾನೆ. ನಾನು ಆತನನ್ನು ಯಾಕೆ ನನ್ನ ಮಗನನ್ನು ಕಿತ್ತುಕೊಂಡೆ ಎಂದು ಕೇಳುತ್ತೇನೆೆ. ಆತನ ಪಾದಗಳಲ್ಲಿ ಹೊರಳಾಡಿ, ನನ್ನ ರಕ್ತವನ್ನು ಹರಿಸಿ ಮಗನನ್ನು ಮರಳಿಕೊಡು ಎಂದು ಕೇಳುತ್ತೇನೆ . ಆಗ ಧರ್ಮಗುರು ಹೇಳಿದ,  ಮಗಳೇ ಭಗವಂತನನ್ನು ವರ್ಣಿಸುವುದು ಅಸಾಧ್ಯ. ಅವನು ವಿಶ್ವವ್ಯಾಪಿ, ಅಪರಿಮಿತ, ಅನಂತಆ ತಾಯಿ ಮತ್ತೆ ಕನವರಿಸಿದಳು, ಕಣ್ಣಿಗೆ ಕಾಣಲಾರದಷ್ಟು ಅತ್ಯಂತ ಸಣ್ಣದಾದ ಕ್ರಿಮಿಯೊಂದು ಅನಂತವಾದ ಶಕ್ತಿಯ ಇಚ್ಛೆಯಂತೆ ನನ್ನ ಮಗನ ಬಲಿ ತೆಗೆದುಕೊಂಡಿತು .ಆ ತಾಯಿಯ ತಾಯಿ ಅಲ್ಲಿಗೆ ಬಂದು ತನ್ನ ಮಗಳನ್ನು ಸಂತೈಸಲು ನೋಡಿದಳು. ಆಗ ಮಗುವಿನ ತಾಯಿ ತನ್ನ ತಾಯಿಯನ್ನು ಕೇಳಿದಳು,  ಅಮ್ಮ ಇದು ಏಕೆ ಹೀಗೆ ಅತ್ಯಂತ ಸಣ್ಣದಾದದ್ದು ಅತ್ಯಂತ ಅಪಾರವಾದದ್ದರ ಇಚ್ಛೆಯಂತೆ ಇಂಥ ಕೆಟ್ಟ ಕೆಲಸ ಮಾಡಬೇಕು? ಈ ತೀರ ಸಣ್ಣದಾವುದು, ತೀರ ದೊಡ್ಡದಾವುದು?ತಾಯಿ ಮಗಳ ಕಣ್ಣೊರೆಸಿ ಹೇಳಿದಳು,  ಮಗೂ, ಎರಡೂ ನಾವೇ. ಇಡೀ ವಿಶ್ವದಲ್ಲಿ ಕಣ್ಣಿಗೆ ಕಾಣದಷ್ಟು ಪುಟ್ಟ ವಸ್ತುವೂ ನಾವೇ, ಆ ಮಹಾನ್ ಚೈತನ್ಯದ ಅಂಶವೂ ನಾವೇ. ಅಷ್ಟೇ ಅಲ್ಲ ನಶ್ವರವಾದ ದೇಹ ಮತ್ತು ಅವಿನಾಶಿಯಾದ ಭಗವಂತನ ನಡುವಿನ ದಾರಿಯೂ ನಾವೇ .ಇದು ಖಲೀಲ್ ಗಿಬ್ರಾನ್‌ನ ವಿಶೇಷತೆ. ಅದ್ಭುತವಾದ, ಕೇವಲ ಅನುಭವಗಮ್ಯವಾದ ಆಧ್ಯಾತ್ಮಿಕ ಸತ್ಯವನ್ನು ಸರಳ ಕಥೆಗಳಲ್ಲಿ ತುಂಬಿ ಬಿಡುತ್ತಾನೆ. ದೈಹಿಕವಾಗಿ ನೋಡಿದರೆ ಈ ಮಹಾನ್ ವಿಶ್ವದಲ್ಲಿ ನಮ್ಮಂತಹ ಚಿಕ್ಕ ವಸ್ತು ಯಾವುದೂ ಇಲ್ಲ. ಆದರೆ ನಮ್ಮಲ್ಲಿ ಅಂತರ್ಗತವಾಗಿರುವ ಶಕ್ತಿ ಆ ಅಪರಿಮಿತವಾದ ಭಗವಂತನ ಒಂದಂಶ. ಅಂತೆಯೇ ನಾವು ಎರಡೂ ಹೌದು ಮತ್ತು ಎರಡರ ಮಧ್ಯದ ಪಥವೂ ಹೌದು.

ಪ್ರತಿಕ್ರಿಯಿಸಿ (+)